ಶನಿವಾರ, ಜೂನ್ 6, 2020
27 °C
‘‘ಜಗತ್ತು ತಿಳಿದುಕೊಂಡದ್ದಕ್ಕಿಂತ ಹೆಚ್ಚು ಸುಖ ನಮ್ಮದು...

ಪತ್ನಿ ಸತ್ಯಭಾಮಾರ ಕಣ್ಣಲ್ಲಿ ಚಂದ್ರಶೇಖರ ಕಂಬಾರರು

ಎಂ.ಎಸ್‌. ಆಶಾದೇವಿ Updated:

ಅಕ್ಷರ ಗಾತ್ರ : | |

ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯ ಲೋಕದ ತಾರಾವರ್ಚಸ್ಸಿನ ಕವಿ. ಆದರೆ, ಪ್ರತಿಯೊಬ್ಬ ಪ್ರಸಿದ್ಧರಿಗೂ ಒಂದು ಖಾಸಗಿ ಮುಖ ಇರುತ್ತದಷ್ಟೆ. ಅದು ಅವರ ಸಂಗಾತಿಗಷ್ಟೇ ಪರಿಚಿತವಾದ ಮುಖ. ಕಂಬಾರರ ಪತ್ನಿ ಸತ್ಯಭಾಮಾ ಅವರ ಈ ಸಂದರ್ಶನ, ಕವಿಯ ಜೊತೆಗೆ ಕವಿಪತ್ನಿಯ ವ್ಯಕ್ತಿತ್ವದ ಅನನ್ಯತೆಯನ್ನೂ ಕಾಣಿಸುವಂತಿದೆ. ‘ಸುಧಾ’ಕ್ಕಾಗಿ ಈ ವಿಶೇಷ ಸಂದರ್ಶನ ನಡೆಸಿಕೊಟ್ಟಿದ್ದಾರೆ ಕನ್ನಡದ ಖ್ಯಾತ ವಿಮರ್ಶಕಿ ಎಂ.ಎಸ್‌. ಆಶಾದೇವಿ.

---

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣಿನ ಪಾತ್ರ ಇರುತ್ತದೆ ಎನ್ನುವುದೊಂದು ಕ್ಲೀಷೆ ಮಾತ್ರವಲ್ಲ, ಹೆಣ್ಣನ್ನು ಕುರಿತ ಮೆಚ್ಚುಗೆ, ಕೃತಜ್ಞತೆ ಮಾತ್ರವಲ್ಲ, ಅದು ಅವಳನ್ನು ನಿಯಂತ್ರಿಸುವ ಸುಂದರವಾದ ಅಸ್ತ್ರವೂ ಹೌದು. ಎಲ್ಲೋ ಕೆಲವು ದಾಂಪತ್ಯಗಳು ಮಾತ್ರ ಇವುಗಳನ್ನು ಮೀರಿಕೊಂಡು ‘ಕೊಡುವುದೇನು ಕೊಂಬುದೇನು, ಒಲವು, ಸ್ನೇಹ , ಪ್ರೀತಿ’ ಎನ್ನುವ ನೆಲೆಯನ್ನು ಸಾಧಿಸುತ್ತವೆ.

ಕನ್ನಡದ ಮಹತ್ವದ ಲೇಖಕ, ನಾಟಕಕಾರ, ಕಾದಂಬರಿಕಾರ ಚಂದ್ರಶೇಖರ ಕಂಬಾರ ಮತ್ತು ಸತ್ಯಭಾಮಾ ಅವರ ದಾಂಪತ್ಯ ಇಂಥ ಅಪರೂಪದ ದಾಂಪತ್ಯ. ಪ್ರಖ್ಯಾತ ಲೇಖಕರ ಪತ್ನಿಯಾಗಿ ಅವರ ನಿಡುಗಾಲದ ಪಯಣದ ಏರಿಳಿತಗಳನ್ನು ಈ ಮಾತುಕತೆಯಲ್ಲಿ ಕಾಣಿಸಿದ್ದಾರೆ.

ತನ್ನ ತ್ಯಾಗದಿಂದ, ಸಹಕಾರದಿಂದ ಕಂಬಾರರು ಇಷ್ಟೆಲ್ಲವನ್ನು ಸಾಧಿಸಲು ಸಾಧ್ಯವಾಯಿತು ಎನ್ನುವ ವಾಡಿಕೆಯ ನಿಲುವು ಇಲ್ಲಿಲ್ಲ. ಬದಲಿಗೆ ಇದು ಇಬ್ಬರೂ ಕೂಡಿ ನಡೆದ ಪಯಣ ಎನ್ನುವ ದೃಷ್ಟಿಕೋನ ಸತ್ಯಭಾಮ ಅವರ ಆತ್ಮಗೌರವವನ್ನೂ, ಇಡಿಗಾಳಿನಂತೆ ಕೂಡಿ ಬಾಳಿದ ದಾಂಪತ್ಯದ ಸಫಲತೆಯನ್ನೂ ಹೇಳುತ್ತದೆ. ಸುಪ್ರಸಿದ್ಧ ಬರಹಗಾರನ ಹಿಂದೆ ನಿಂತ ಹೆಣ್ಣಿನ ಚಿತ್ರಕ್ಕೆ ಬದಲಾಗಿ ಜೊತೆಗೆ ನಿಂತ ಆತ್ಮಘನತೆಯ ಹೆಣ್ಣಿನ ನಿರೂಪಣೆ ಇದು.

* ನೀವು ಮೇಷ್ಟ್ರನ್ನ ಮದುವೆಯಾಗುವ ಹೊತ್ತಿಗಾಗಲೇ ಅವರ ಬರವಣಿಗೆ ಆರಂಭವಾಗಿತ್ತೆ? ಯಾವ ವಯಸ್ಸಿನಲ್ಲಿ ನಿಮ್ಮ ಮದುವೆಯಾಗಿದ್ದು?

ಹೌದೌದು... ಆಗಲೇ ನಮ್ಮೂರಲ್ಲೆಲ್ಲ ಇವನು ಬರೀತಾನಂತೆ ಅಂತ ಹೆಸರಾಗಿದ್ರು. ಇದನ್ನೆಲ್ಲ ಕೇಳಿ ಬಹಳ ಸಂತೋಷ ಆಗ್ತಿತ್ತು. ನನಗೆ ಮದುವೆ ನಿಶ್ಚಯ ಆದಾಗ ನಾನು ಏಳನೇ ಕ್ಲಾಸ್ ಓದ್ತಾ ಇದ್ದೆ. 1958ರಲ್ಲಿ ನಿಶ್ಚಯವಾಗಿದ್ದು. 1964ರಲ್ಲಿ ನಮ್ಮ ಮದುವೆ ಆದದ್ದು.

* ಓ... ಆ ಆರು ವರ್ಷಗಳ ಕಾಯುವಿಕೆ ಹೇಗಿತ್ತು?

ಇವರು ಊರಿಗೆ ಬಂದ್ರೆ ಬಹಳ ಸಂತೋಷ ಆಗ್ತಿತ್ತು. ಆದರೆ ಮಾತಾಡೋಕೆ ಅವಕಾಶ ಇರ್ತಾ ಇರಲಿಲ್ಲ. ಕೂಡು ಕುಟುಂಬ. ಅದರ ಜೊತೆಗೆ ಅವರ ಅಕ್ಕಂದಿರಿಗೆ ಇವರು ನನ್ನನ್ನ ನೋಡಿ ಮಾತಾಡಿದರೆ, ಅವರ ವಿದ್ಯಾಭ್ಯಾಸ ಹಾಳಾಗುತ್ತೆ ಅನ್ನೋ ಭಯ ಬೇರೆ ಇತ್ತು. ಹೀಗಾಗಿ ನನ್ನನ್ನ ಅಡಗಿಸಿ ಇಡ್ತಾ ಇದ್ರು ನೋಡಿ. (ನಗು) ಆದರೂ ಇವರು ಊರಿಗೆ ಹೋಗೋ ದಿನ ಸ್ಕೂಲು ತಪ್ಪಿಸಿ ಬಸ್ ಸ್ಟ್ಯಾಂಡ್ ಗೆ ಹೋಗ್ತಿದ್ದೆ. ‘ಮಾಮಾ, ಹೋಗಿ ಬರ್ತೀರಿ’ ಅಂತ ಬೀಳ್ಕೊಡ್ತಾ ಇದ್ದೆ (ಆಗ ಅವರನ್ನ ನಾನು ಮಾಮಾ ಅಂತಾನೆ ಕರೀತಿದ್ದೆ).

* ಓ... ಬಹಳ ರೊಮ್ಯಾಂಟಿಕ್ ನೀವು ಹಾಗಿದ್ರೆ...

(ನಗು) ಆದರೆ ಇವರು ಮಾತ್ರ ಬಹಳ ಗಂಭೀರ. ಹೂಂ ಉಹೂಂ... ಇಷ್ಟೇ ಮಾತಾಡ್ತಾ ಇದ್ದದ್ದು. ಇವರ ಅಕ್ಕಂದಿರಿಗೆ ಈ ಮದುವೆಯೂ ಅಷ್ಟು ಇಷ್ಟ ಇರಲಿಲ್ಲ. ಕೊನೆಗೆ ಭೂಸನೂರುಮಠರು ಒಮ್ಮೆ ನನ್ನನ್ನು ನೋಡಬೇಕಂತ ಅಪೇಕ್ಷೆ ಪಟ್ಟು. ನನ್ನನ್ನ ಕರೆಸಿಕೊಂಡು ನೋಡಿ, ‘ಈ ಹುಡುಗೀನ್ನ ಮದುವೆ ಮಾಡ್ಕೋ’ ಅಂತಾ ಹೇಳಿದ್ರು. ಇವರು ಮಾತ್ರ, ಬಹಳ ಗಟ್ಟಿಯಾಗಿ ನಿಂತಿದ್ರು, ಈ ವಿಷಯದಲ್ಲಿ. ‘ನಿನ್ನನ್ನೇ ನಾನು ಮದುವೆಯಾಗೋದು. ಬೇಕಾದ್ರೆ, ರಿಜಿಸ್ಟರ್ ಮದುವೆ ಮಾಡ್ಕೋತೀನಿ, ನಿಮ್ಮ ಮನೆಯಾಗೆ ಒಪ್ತಾರೇನು’ ಅಂತ ಹೇಳಿದ್ರು.

* ಒಂದು ರೀತೀಲಿ ನಿಮ್ಮದು ‘ಪ್ರೇಮ ವಿವಾಹವೇ’ ಹಾಗಿದ್ರೆ. ಎಷ್ಟು ದಿನದ ಮದುವೆ ನಿಮ್ಮದು? ಏನೆಲ್ಲ ನೆನಪುಗಳು?

ನಮ್ಮ ಮದುವೆ ಕಷ್ಟದಲ್ಲೇ ಆದದ್ದು. ಒಂದು ದೇವಸ್ಥಾನದಲ್ಲಿ ಸರಳವಾಗಿ ನಮ್ಮ ಮದುವೆ ಆಯ್ತು.

* ಮದುವೆ ಆದ ಮೇಲೆ ಓದಬೇಕು ಅಂತ ನಿಮಗೆ ಅನ್ನಿಸಲಿಲ್ವಾ?

ಕೇಳಿದೆ. ಬ್ಯಾಡ ಅಂದ್ರು ನೋಡ್ರಿ. ಆದರೂ ಇವರಿಗೆ ತಿಳಿದಾಂಗ ನಾನು ಹಿಂದಿ ವಿಶಾರದ ಪರೀಕ್ಷೆ ಪಾಸು ಮಾಡಿಕೊಂಡಿದ್ದೆ (ನಗು). ಅಕ್ಕಂದಿರಿಗೆ, ನಮ್ಮ ಮನೆಯವರಿಗೆ ಇಕೀನ್ನ ಮುಂದ ಓದಿಸೋದು ಬ್ಯಾಡ ಅಂತ ಹೇಳಿದ್ರು. ಇವರಿಗೆ ಬಹಳ ಆತಂಕ ಇತ್ತು, ನಾನು ಹೊರಗ ಹೋಗೋದರ ಬಗೆಗೆ.

* ಭಾರ್ಯಾ ರೂಪವತೀ ಶತ್ರು...

(ನಗು...)

* ಸಂಸಾರದ ಆರಂಭದ ದಿನಗಳು? ಸಾಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕಾಲೇಜಿನಲ್ಲಿ ಮೇಷ್ಟ್ರು ಕೆಲಸಕ್ಕೆ ಸೇರಿಕೊಂಡದ್ದು, ಉತ್ತರ ಕರ್ನಾಟಕದಿಂದ ಮಲೆನಾಡಿನ ಆ ಅನುಭವಗಳು ಹೇಗಿದ್ದವು?

ಮೊದಮೊದಲು ಮನೇಲಿ ಒಬ್ಬಳೇ ಅಂತ ಆಗಿ ಬೇಸರವಾಗ್ತಿತ್ತು. ಇವರು ತಡ ಮಾಡಿ ಬಂದಾಗ ಕೆಲವೊಮ್ಮೆ ಅಳ್ತಿದ್ದೆ. ಆಮೇಲೆ ಅಡಿಗರ ಹೆಂಡತಿ ಲಲಿತಾ ಅವರ ಪರಿಚಯವಾಯ್ತು. ಅಲ್ಲಿರುವವರೆಲ್ಲ ಬಹಳ ಚೆನ್ನಾಗಿ ನನ್ನನ್ನ ನೋಡಿಕೊಂಡರು. ಅಲ್ಲಿರುವಷ್ಟು ಕಾಲ ಬಹಳ ಸಂತೋಷವಾಗಿಯೇ ಇದ್ದೆವು.

* ದಾಂಪತ್ಯದಲ್ಲಿ ನಿರಾಸೆ, ಸವಾಲುಗಳು ಇದ್ದೇ ಇರುತ್ತವೆ. ಆರಂಭದಲ್ಲಂತೂ ಹೊಂದಾಣಿಕೆ ಸಾಧ್ಯವಾಗುವ ತನಕ ಇವು ಇನ್ನೂ ಸಹಜ. ಅಂಥ ಪ್ರಸಂಗಗಳು?

ನಿಜ ಹೇಳ್ಲಾ ಆಶಾದೇವಿ... ಜಗತ್ತು ತಿಳಿದುಕೊಂಡದ್ದಕ್ಕಿಂತ ಹೆಚ್ಚು ಸುಖ ನಮ್ಮದು, ಹಾಗೇನೇ ಲೋಕಕ್ಕೆ ಅರ್ಥವೇ ಆಗದಂಥ ದುಃಖವೂ ನಮ್ಮ ಪಾಲಿಗೆ ಬಂದಿತ್ತು. ಆದರೆ, ಯಾವ ಹೊತ್ತಿಗೂ ನಾವು ಒಬ್ಬರನ್ನೊಬ್ಬರು ಬಿಟ್ಟುಕೊಡಲಿಲ್ಲ. ಹಂಗಾಗೇ ನಾವು ಇಲ್ಲಿ ತನಕ ಚೆಂದಾಗಿ ಬಾಳಿಕೊಂಡು ಬಂದಿದೇವಿ.

* ಮನಸ್ತಾಪಗಳನ್ನ ಹೇಗೆ ಬಗೆಹರಿಸಿಕೊಳ್ತೀರಿ?

ನೋಡ್ರೀ, ಜಗಳ ಇದ್ದೇ ಇರ್ತಾವು. ಆದ್ರ, ನಾನು ಯಾವ ಕಾರಣಕ್ಕರ ಜಗಳಾಡ್ಲಿ, ಅದನ್ನ ಮುಂದುವರೆಸೋದಿಲ್ಲ. ನನ್ನ ಸೊಸೆ, ಮಕ್ಕಳಿಗೂ ನಾನು ಹೇಳೋದು ಅದು... ಮುಚ್ಚಿಟ್ಟುಕೋಬ್ಯಾಡ್ರಿ, ಆದರ ಅದನ್ನ ಸಾಧಿಸೋಕ್ಕು ಹೋಗಬ್ಯಾಡ್ರಿ, ಅದನ್ನ ಅಲ್ಲಲ್ಲೆ ತೊರೀತಾ ಮುಂದು ಸಾಗಬೇಕು, ಅಂದ್ರ ಸಂಸಾರ ಉಳೀತದ, ಬೆಳೀತದ.

* ಮೇಷ್ಟ್ರು ಅವರ ಬರವಣಿಗೇಲಿ ಮುಳುಗಿರ್ತಾ ಸಂಸಾರದ ಜವಾಬ್ದಾರಿ ಎಲ್ಲ ನಿಮ್ಮ ಮೇಲೆ ಇತ್ತು ಅಲ್ವಾ?

ಹಾಂಗೇನಿಲ್ರಿ. ಎಲ್ಲ ಜವಾಬ್ದಾರಿ ಅವರ ಹೊರತಿದ್ರು. ಪಾತ್ರೆಪಗಡಿಯಿಂದ ಹಿಡಿದು ಎಲ್ಲಾ ಅವರ ತರತಿದ್ರು. ಮಕ್ಕಳ ಶಾಲೆ ಫೀಸಿಂದ ಹಿಡಿದು ಎಲ್ಲಾ ಅವರ ಕಟ್ಟತಿದ್ರು.

* ಬೆಂಗಳೂರು ಯುನಿವರ್ಸಿಟೀಲಿ ಕೆಲಸ ಸಿಗುವ ತನಕ ತಿರುಗಾಟದ ಬದುಕು. ಹಣಕಾಸಿನ ಸಮಸ್ಯೆ ಇದ್ದಿರಬೇಕು...

ಇತ್ತವಾ. ಆದರ ಒಂದು ಹೇಳ್ತೀನಿ. ಎಂದೂ ಇವರು ನನಗ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ. ಎಂಥಾ ಚಲೋ ಚಲೋ ಸೀರಿ ತರತಿದ್ರು. ಸಾಕು ಬಿಡ್ರಿ ಅಂತ ನಾನ ಹೇಳ್ತಿದ್ದೆ.

* ಮಕ್ಕಳ ಓದಿನ ಬಗ್ಗೆ...

ಪಾಠ ನಾನ ಹೇಳಿಕೊಡ್ತಿದ್ದೆ. ಆದರ ಸಂಜಿ ಮುಂದ ಮಕ್ಕಳನ್ನು ಕೂಡಿಸಿಕೊಂಡು ಆಟಾ ಆಡ್ತಿದ್ರು, ಕತಿ ಹೇಳ್ತಿದ್ರು. ರಿಂಗ್, ಕೇರಂ , ಚೆಸ್ ಆಡ್ತಿದ್ವಿ. ಸಂತೋಷವಾಗಿ ಕಾಲ ಕಳಿತಿದ್ವಿ.

* ನೀವು ಬಹಳ ಓದ್ತೀರಿ. ಕನ್ನಡದ ಎಲ್ಲ ಮುಖ್ಯ ಲೇಖಕ ಲೇಖಕಿಯರನ್ನೂ ಓದ್ತೀರಿ. ಓದುವ ಅಭ್ಯಾಸ ಮುಂಚಿಂದನೂ ಇತ್ತಾ?

ಶಾಲೆಗೆ ಹೋಗುವಾಗಿಂದಲೂ ಓದ್ತಿದ್ದೆ. ಅದೇ ಮುಂದುವರಕೊಂಡು ಬಂದದ. ಬೇಂದ್ರೆಯಿಂದ ಹಿಡಿದು ಎಲ್ಲರನ್ನೂ ಓದ್ತಾ ಇರ್ತೀನಿ.

* ನಿಮಗೆ ಇಷ್ಟವಾದ ಲೇಖಕರು? ಲೇಖಕಿಯರು?

ಅನಂತಮೂರ್ತಿ, ತೇಜಸ್ವಿ, ಕುವೆಂಪು , ಬೇಂದ್ರೆ, ಅನುಪಮಾ ನಿರಂಜನ, ವೀಣಾ ಶಾಂತೇಶ್ವರ. ವೀಣಾ ಅವರ ‘ಮುಳ್ಳುಗಳು’ ಅಂತೂ ನನಗೆ ಬಹಳ ಇಷ್ಟವಾದ ಬರವಣಿಗೆ.

* ಕಂಬಾರರ ಬರವಣಿಗೆಯ ಮೊದಲ ಓದುಗರು ನೀವು. ನಿಷ್ಠುರ ವಿಮರ್ಶೆ ಮಾಡೋಕಾಗುತ್ತಾ? ಸಂಕೋಚ, ಅಭಿಮಾನ ಅಡ್ಡ ಬರುತ್ತಾ?

ಏ ಇಲ್ರಿ... ನಾ ಹೇಳ್ತೀನಿ. ನಾನು ವಿಮರ್ಶಕಿನೂ ಹೌದು ಅಂತ. ಏನನ್ನಸ್ತದ ಅದನ್ನ ಸಂಕೋಚ ಇಲ್ಲದೆ ಹೇಳ್ತೀನಿ.

* ಒಂದು ಕೃತೀನ ಮೆಚ್ಚಿಕೊಳ್ಳೋದಿಕ್ಕೆ ಅದರಲ್ಲಿ ಮುಖ್ಯವಾಗಿ ಏನಿರಬೇಕು ಅನ್ನಿಸುತ್ತೆ ನಿಮಗೆ?

ನಾ ಇವರಿಗೂ ಹೇಳ್ತಿರತೀನಿ, ಒಂದು ಪುಸ್ತಕ ಹಿಂಡಿದರೆ ಒಂದಿಷ್ಟರ ರಸ ಬರಬೇಕು ಅಂತ. ಹಂಗಿದ್ರ ಅದು ಒಳ್ಳೆ ಪುಸ್ತಕ.

* ಕಂಬಾರರ ಕೃತಿಗಳಲ್ಲಿ ನಿಮಗೆ ತುಂಬಾ ಇಷ್ಟವಾದ ಪುಸ್ತಕ ಯಾವುದು?

ಒಂದೊಂದು ಒಂದೊಂದು ಕಾರಣಕ್ಕ ನನಗ ಸೇರ್ತದ. ಆದ್ರ, ‘ಶಿವನ ಡಂಗುರ’ ನನಗ ಬಹಳ ಸೇರಿತು.

* ಮೇಷ್ಟ್ರ ಜೊತೆ ಸೆಮಿನಾರ್‌ಗಳಿಗೆಲ್ಲಾ ಹೋಗ್ತಿರ್ತೀರಾ?

ಮೊದಲು ಎಲ್ಲೂ ಹೋಗ್ತಿರಲಿಲ್ಲ. ಈಗ ಎಲ್ಲ ಕಡೆ ಹೋಗ್ತೀನಿ. ಬಹಳ ಖುಷಿ ಆಗ್ತದ. ಎಷ್ಟೊಂದು ಹೊಸ ವಿಚಾರಗಳು ತಿಳೀತವ. ಶಾಂತಾದೇವಿ ಕಣವಿ, ರುದ್ರಾಣಮ್ಮ, ಪದ್ಮಾ, ಲಲಿತಾ ಅಡಿಗ, ಇಂದಿರಾ ಲಂಕೇಶ್ ಇವರೆಲ್ಲಾ ನನಗೆ ಒಳ್ಳೆ ಗೆಳತಿಯರಾದ್ರು.

* ಇವರ ನಾಟಕಗಳ ಪ್ರಯೋಗಗಳನ್ನೆಲ್ಲಾ ನೋಡಿದ್ದೀರಾ?

ಬಹುತೇಕ. ಆದರ ನಾಟಕಗಳನ್ನೂ ನಾನು ಆಮೇಲಾಮೇಲೆ ನೋಡೋಕೆ ಶುರು ಮಾಡಿದ್ದು. ಮಕ್ಕಳು ಸಣ್ಣವರಿದ್ದಾಗ ನೋಡೋಕೆ ಆಗ್ತಿರಲಿಲ್ಲ.

* ಮೇಷ್ಟ್ರು ಸಿನಿಮಾ ರಂಗಕ್ಕೆ ಹೋದಾಗ ಆತಂಕ ಆಯ್ತೇನು?

ಹಾಂಗೇನಿಲ್ರಿ. ಸ್ವಲ್ಪ ತಡವಾಗಿ ಬರ್ತಿದ್ರು ಅನ್ನೋದು ಬಿಟ್ರೆ, ಇನ್ನೇನಿರಲಿಲ್ಲ. ಆವಾಗಲೂ ಯಾರಾದರೂ ಗೆಳೆಯರು ಮನೆತನಕ ಬಂದು ತಡವಾಯ್ತು ಅಂತ ಹೇಳಿ ಬಿಟ್ಟುಹೋಗ್ತಿದ್ರು. ಯಾವಾಗಲಾದರೊಮ್ಮೆ ನನ್ನನ್ನೂ ಶೂಟಿಂಗ್‌ಗೆ ಕರ್ಕೊಂಡು ಹೋಗ್ತಿದ್ರು. ಒಮ್ಮೆ ಡಬ್ಬಿಂಗ್‌ಗೆ ಹೋಗಿದ್ದೂ ನೆನಪಿನಲ್ಲಿದೆ.

* ಭಾರತದ ಎಲ್ಲ ಮಹತ್ವದ ಪ್ರಶಸ್ತಿಗಳೂ ಕಂಬಾರರಿಗೆ ಸಿಕ್ಕಿವೆ...

ಆಶಾದೇವಿ, ನಾನು ನನ್ನ ನಾಲ್ಕನೇ ವಯಸ್ಸಿನಿಂದ ಇವರನ್ನ ನೋಡಿದವಳು, ಇಷ್ಟಪಟ್ಟೋಳು. ನಾನು ಶಾಲೆಗೆ ಹೋಗೋವಾಗಲೂ, ದೊಡ್ಡ ದೊಡ್ಡ ಲೇಖಕರ ಪುಸ್ತಕಗಳನ್ನ ನೋಡ್ತಾ ಇದ್ದಾಗ, ಇವರೂ ಹೀಗೇ ದೊಡ್ಡ ಲೇಖಕರಾಗಬೇಕು ಅಂತ ಕನಸು ಕಂಡಿದ್ದೆ. ಇವರು ಇಷ್ಟು ದೊಡ್ಡ ಲೇಖಕರು ಅನ್ನುವ ಹೆಗ್ಗಳಿಕೆ ಪಡೆದದ್ದು ನೋಡಿದಾಗಲೆಲ್ಲ ನನಗೆ, ನನ್ನ ಕನಸೇ ನನಸಾಗಿದೆ ಅನ್ನುವಷ್ಟು ಸಂತೋಷ. ನಿಜ ಅಂದ್ರ ಅವರಿಗಾಗೋದಕ್ಕಿಂತ ಹೆಚ್ಚಿನ ಸಂತೋಷ ನನಗಾಗ್ತದ.

* ನಿಡುಗಾಲದ ಈ ದಾಂಪತ್ಯದಲ್ಲಿ ನಿಮಗೆ ಸಂತೋಷ ಕೊಡುವ ವಿಷಯ ಯಾವುದು?

ಇದೇ ಅಂತ ಹೇಳಲಾರೆ. ಆದರೆ ನಾವು ಒಬ್ಬರನ್ನೊಬ್ಬರು ಎಷ್ಟು ಅವಲಂಬಿಸಿದ್ದೀವಿ, ಎಷ್ಟು ಒಬ್ಬರೊಳಗೊಬ್ಬರು ಬೆರೆತು ಹೋಗೇವಿ ಅನ್ನೋದನ್ನ ಹೇಳೋದು ನನಗ ಕಷ್ಟ. ಈಗಲೂ ಅವರನ್ನ ನೋಡೋದು, ಮಾತುಕತೆ, ಜಗಳ ಇದೆಲ್ಲಾ ನನಗೆ ಬಹಳ ಸೇರ್ತದ. ಇವರು ಎಲ್ಲಿಗಾದರೂ ಹೋದರ, ಯಾವಾಗ ಬರ್ತಾರೋ ಅಂತ ಕಾಯ್ತೀನಿ. ಇವರನ್ನ ನೋಡಿದ ಕೂಡಲೇ ಅದೆಷ್ಟು ಆನಂದ ಆಗ್ತದ ನನಗ... ಇವರೂ ಅಷ್ಟ. ಅದೆಷ್ಟು ಕಾಳಜಿ ನನ್ನ ಮ್ಯಾಲ. ನನಗ ಆರಾಮಿಲ್ಲ ಅಂದ್ರ ಒದ್ದ್ಯಾಡಿ ಹೋಗ್ತಾರ. ಈ ಕಕ್ಕುಲಾತಿ, ನಿರ್ಮಲ ಪ್ರೇಮ ಇವ ನನ್ನ ಸಂಪತ್ತು ಅಂತ ನಾನು ತಿಳದೇನಿ.

* ಅಲ್ಲಾ, ನಿಮ್ಮ ಸೀರೀನೂ ಅವರ ಆರಿಸೋದು ಯಾಕೆ? ನಿಮಗೆ ನಿಮ್ಮದೇ ಆಯ್ಕೆ ಇರುತ್ತಲ್ವಾ?

ಅದಕ್ಕ ಅವರಂತಾರ, ಅಲ್ಲಾ ಮತ್ತ ನೋಡಿ ಮೆಚ್ಚಬೇಕಾದಂವ ನಾನು, ಅದಕ್ಕ ನನಗ ಚಲೋ ಕಾಣಿಸೋ ಸೀರಿ ತರ್ತೀನಿ. ನೀ ನನಗ ಚೆಂದ ಕಂಡ್ರ ಆಯ್ತಲ್ವಾ...

* ಸರಿ, ಆದರ ನಮಗೂ ನಮ್ಮದ ಇಷ್ಟ, ಆಯ್ಕೆ ಇರ್ತಾವಲ್ಲ...

ಕೆಲವೊಮ್ಮೆ ಇವರು, ಮಕ್ಕಳು, ಕರ್ಕೊಂಡು ಹೋಗಿ ‘ನೀನ ಆರಿಸು’ ಅಂದ್ರ ನನಗ ಬಹಳ ತ್ರಾಸಾಗ್ತದ. ನಾನ ಆರಿಸಿಕೊಂಡ ಬಂದ ಸೀರಿ ನನಗ ಇಷ್ಟ ಆಗದ ಒಮ್ಮೆ ಇಂದಿರಾ ಲಂಕೇಶ್ ಅವರ ಜೋಡಿ ಹೋಗಿ ಮತ್ತ ಬದಲಾಯಿಸಿಕೊಂಡು ಬಂದಿದ್ದೆ.

* ಯಾವುದಾದರೂ ಪ್ರಸಂಗ ನಿಮಗ ಬಹಳ ಸಂತೋಷ ಕೊಡೋ ಅಂಥದ್ದು...

ಇವರು ಯಾವಾಗಲೂ ಹೇಳ್ತಿರ್ತಾರ, ನಾನು ಹುಟ್ಟಿದಾಗ ಇವರು ನನ್ನನ್ನ ನೋಡೋಕ ಬಂದಿದ್ರಂತ. ಮಲಗಿದ್ದ ಮುದ್ದಾದ ಮಗು ನೋಡಿ ಅನ್ಕೊಂಡ್ರಂತ, ‘ಮದುವ್ಯಾದರ ಇಂಥ ಚೆಂದನ್ನ ಚೆಲುವಿನಾ ಆಗಬೇಕು’ ಅಂತ. ನೀ ಹುಟ್ಟಿದಾಗಿಂದ ನಿನ್ನ ಪ್ರೀತಿ ಮಾಡೇನಿ ನಾನು ಅಂತ ರೇಗಿಸ್ತಿರ್ತಾರ. ಅದೇ ಖರೆ ಅಂತ ನಾ ತಿಳಿದೇನಿ. ಒಬ್ಬರನ್ನೊಬ್ಬರು ಜೋಪಾನ ಮಾಡಿಕೊಂಡು ಸಾಗಿಸ್ತಾ ಇದ್ದೇವಿ. ನನಗನ್ನಿಸ್ತದ, ನಮ್ಮ ಸಂಬಂಧ ಯಾವಾಗಿಂದನೂ ಇರೋದ... ಇದನ್ನ ಬಿಟ್ಟು ಯೋಚನೆ ಮಾಡೋದೇ ನನಗ ಸಾಧ್ಯ ಇಲ್ಲ. ಒಮ್ಮೆ ಇವರೆಲ್ಲೋ ಹೋಗಿದ್ದಾಗ ನನ್ನನ್ನ ಆಸ್ಪತ್ರೆಗೆ ಸೇರಿಸೋ ಪ್ರಸಂಗ ಬಂದಿತ್ತು. ಮನಿಗೆ ಬಂದವರೆ ಇದನ್ನ ಕೇಳಿ, ವರಾಂಡದೊಳಗೇ ಕೂತುಬಿಟ್ಟಿದ್ರು. ನಾ ಹೇಳ್ತೇನಲ್ಲ, ಇದೊಂದು ಬಿಟ್ಟಿರಲಾಗದ ಪ್ರೀತಿ. ಈ ವಯಸ್ಸಿನಾಗೂ ಉಳದದ ಅಂದ್ರ ಅದೊಂದು ಪುಣ್ಯ.

***


ಆಶಾದೇವಿ ಜೊತೆ ಕಂಬಾರ ಸತ್ಯಭಾಮಾ

‘ನಮ್ಮತ್ತೆ ಸೊಸೆಯ ಪರ...

ಈ ಸಂದರ್ಶನ ಮಾಡುವಾಗ ಸತ್ಯಭಾಮಾ ಮತ್ತು ಕಂಬಾರರ ಮಗಳು ಜಯಶ್ರೀ ಕಂಬಾರ ಮತ್ತು ಸೊಸೆ ರೇಖಾ ಕೂಡ ಇದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಅವರ ಸೊಸೆ ರೇಖಾ ಒಂದು ಮುಖ್ಯವಾದ ಅಂಶ ಹೇಳಿದರು. ‘ಸಾಮಾನ್ಯವಾಗಿ ಅತ್ತೆಯರು ಹೆಣ್ಣುಮಕ್ಕಳ ಪರವಾಗಿ ಇರ್ತಾರೆ, ಆದರೆ ನಮ್ಮತ್ತೆ ಸೊಸೆಯ ಪರ. ಇದೊಂದು ಬಹಳ ದೊಡ್ಡ ಪ್ರಿವಿಲೇಜ್ ಅನ್ನಿಸುತ್ತೆ ನನಗೆ. ಇವರು ಒಂದು ಶಕ್ತಿ, ಈ ಕುಟುಂಬದ ಆಧಾರಸ್ತಂಭ ಅನ್ನೋದು ಉತ್ಪ್ರೇಕ್ಷೆಯಲ್ಲ, ಬಾಯಿಮಾತಲ್ಲ, ಅದು ನಮ್ಮ ಮನೇಲಿ ಮತ್ತೆ ಮತ್ತೆ ನಾವು ಕಂಡುಕೊಳ್ಳುವ ಸತ್ಯ’. ಸತ್ಯಭಾಮ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಇದು ಅನ್ನಿಸಿತು ನನಗೆ.

**

ಕಂಬಾರ, ಸತ್ಯಭಾಮಾರ ಪ್ರೀತಿ ರಾಗ

* ಒಂದು ಪುಸ್ತಕ ಹಿಂಡಿದರೆ ಒಂದಿಷ್ಟರ ರಸ ಬರಬೇಕು ಅಂತ. ಹಂಗಿದ್ರ ಅದು ಒಳ್ಳೆ ಪುಸ್ತಕ.

* ನಾನು ಹುಟ್ಟಿದಾಗ ಇವರು ನನ್ನನ್ನ ನೋಡೋಕ ಬಂದಿದ್ರಂತ. ಮಲಗಿದ್ದ ಮುದ್ದಾದ ಮಗು ನೋಡಿ ಅನ್ಕೊಂಡ್ರಂತ, ‘ಮದುವ್ಯಾದರ ಇಂಥ ಚೆಂದನ್ನ ಚೆಲುವಿನಾ ಆಗಬೇಕು’ ಅಂತ.

* ನನಗ ಆರಾಮಿಲ್ಲ ಅಂದ್ರ ಒದ್ದ್ಯಾಡಿ ಹೋಗ್ತಾರ. ಈ ಕಕ್ಕುಲಾತಿ, ನಿರ್ಮಲ ಪ್ರೇಮ ಇವ ನನ್ನ ಸಂಪತ್ತು ಅಂತ ನಾನು ತಿಳದೇನಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು