ಗುರುವಾರ , ನವೆಂಬರ್ 14, 2019
22 °C

ಹೋದರೂ ಪಾಟೀಚೀಲ ಜೋಪಾನವಾಗಿವೆ ಕನಸು

Published:
Updated:
Prajavani

‘ಕೇಳ್ರಪೋ ಕೇಳ್ರಿ... ನಮ್ಮೂರಿಗೆ ಹೊಳಿ ಬರತೈತಂತ’ ಎಂದು ನಮ್ಮ ಮನಿ ಹತ್ರ ಡಂಗುರ ಹಾಕಿದ್ರು. ಆಗ ನಾನು ಕನ್ನಡ ವಿಷಯದ ‘ಗೆಳೆತನ’ ಎಂಬ ಪದ್ಯ ಓದುತ್ತಾ ಕುಳಿತಿದ್ದೆ. ಆ ಡಂಗುರ ಕೇಳಿ ನನಗ ಆಶ್ಚರ್ಯವಾತು.

ನಮ್ಮವ್ವ ಮನಿ ಮುಂದ ಮನ್ಯಾಗಿನ ಪಾತ್ರಿದು ಮುಸರಿ ತೊಳಿಯಾಕ ಹತ್ತಿದ್ಲು. ನಮ್ಮವ್ವನ ಜೋಡಿ ಮಾತಡಕೊಂತ ನಮ್ಮಪ್ಪ ಎಮ್ಮಿಗೆ ಮೇವು ಹಾಕತಿದ್ದ. ನಾನು ನಮ್ಮಪ್ಪನ ಹತ‍್ರ ಹೋಗಿ, ‘ಎಪ್ಪ... ನಮ್ಮೂರಿಗೆ ಮಳೀ ಬರದ ನಮ್ಮ ಹೊಲದಾಗ ಬಿತ್ತಿದ ಬೀಜಕ್ಕ ನೀರಿಲ್ಲದ ನಾವು ಚಿಂತಿ ಮಾಡಕಾಹತ್ತಿದ್ದೀವಿ; ಹೊಳಿ ಬರತೈತಿ ಅಂತಾರಲ್ಲ. ನಮ್ಮೂರಿಗೆ ಮಳಿ ಆಗಿಲ್ಲ- ಬಿಟ್ಟಿಲ್ಲ ಹ್ಯಾಂಗ ಹೊಳಿ ಬರತೈತಿ’ ಎಂದು ಕೇಳ್ದೆ.

‘ಮ್ಯಾಲಿಂದ ನೀರ್ ಬಿಟ್ಟಾರಂತವಾ... ಮನಿ ಎಲ್ಲಾ ಖಾಲಿ ಮಾಡಬೇಕು’ ಎಂದ. ಡಂಗುರ ಹಾಕ್ಯಾರಂತ ಮನಿ ಸಾಮಾನು ಖಾಲಿ ಮಾಡಾಕಹತ್ತಿದ್ದೀವಿ. ಒಮ್ಮೇಕ್ಲೆ ನೀರು ಬರಾಕಹತ್ಯು. ಮನ್ಯಾನ ಎಮ್ಮಿ, ಆಕಳ ಹಿಡ್ಕೊಂಡು ಶಡ್ನ್ಯಾಗಿನ ನಮ್ಮತ್ತಿ ಮನಿಗೆ ಹೋದ್ವಿ.

ಮೂರು ದಿನ ಜಳಕ, ಸರಿಯಾಗಿ ಊಟ ಇರಲಾರದ ಅಡ್ಯಾಡಾಕಹತ್ವಿ. ನಮ್ಮವ್ವ, ನಮ್ಮಪ್ಪ ‘ಎಂತ ಗತಿ ಬಂತಪ್ಪಾ ದೇವ್ರ. ನಿನಗೆ ಕರುಣೆ ಇಲ್ಲವೇ ನಮ್ಮನ್ನ ಬೀದಿಪಾಲ ಮಾಡದ್ಯಾ’ ಅಂತ ಅಳೂದು ನೋಡಿ ನಾನೂ ಬಿಕ್ಕಿ ಬಿಕ್ಕಿ ಅತ್ತೆ. ನಮ್ಮವ್ವ ‘ಅಳಬ್ಯಾಡ ದೇವರ ತಂದದ್ದು ಯಾರು ಏನ ಮಾಡಬೇಕು. ಸಮಾಧಾನ ಆಗು ಓದಕೊಂಡ ಕುಂದರು’ ಅಂದರು.

ಆಗಾವ ನನಗ ನನ್ನ ಪಾಟಿಚೀಲದ ನೆಪ್ಪಾತು. ಎಪ್ಪಾ ನನ್ನ ಪಾಟಿಚೀಲ ಮನ್ಯಾಗ ಮಾಡದಾಗೈತಿ ತೊಗೊಂಡ ಬಾ ಅಳಾಕಹತ್ತಿದ್ಯಾ. ಅಪ್ಪ ಮನಿಗೆ ಹೋದ್ರ ಎದಿತನಕಾ ನೀರು ಬಂದು ಮನಿ ತುಂಬಾ ನೀರು ಹೊಕ್ಕಿತ್ತು.

‘ಪಾಟಿಚೀಲ ತರಾಕ ದಾರೀನ ಇಲ್ಲವ. ಎಲ್ಲಾ ಹೊಳಿ ನೀರಿನ್ಯಾಗ ಹರಕೊಂಡು ಹೋದುವಂತ’ ಎಂದು ನಮ್ಮಪ್ಪ ಹೇಳಿದಾಗ, ಅಯ್ಯೋ ಇನ್ನೇನ ಮಾಡೂದು ನನ್ನ ಬದುಕಿನ ಭವಿಷ್ಯ ಕಟ್ಟುವ ಎಲ್ಲ ಪುಸ್ತಕಗಳು ಹೊಳಿ ಪಾಲಾದುವು. ಇನ್ನೇನ ಮಾಡಬೇಕು ಎಂದು ದಿಗಿಲು ಉಂಟಾಯಿತು.

ನನ್ನ ಪಾಟಿಚೀಲ ಇರಬಹುದು ಎಂದು ತಿಳಿದಿದ್ದೆ. ಮೂರು ದಿನ ಬಿಟ್ಟು ಹೊಳಿ ಇಳದ ಮ್ಯಾಗ ಮನಿಗೆ ಹೋದರ ಮನ್ಯಾಗ ಬರೀ ರಾಡಿ ತುಂಬಿತ್ತು. ಒಳಗ ಕಾಲ ಇಡಾಕ ಜಾಗಾ ಇದ್ದಿಲ್ಲ. ಬಗ್ಗಿ ಕಿಡಕಿಯಿಂದ ಪುಸ್ತಕ ಇಟ್ಟ ಮಾಡದಾಗ ನೋಡಿದ್ಯಾ ಪಾಟಿಚೀಲ ಇದ್ದಿಲ್ಲ. ನೀರಾಗ ಹರಕೊಂಡು ಹೋಗಿತ್ತು.

ಅಯ್ಯೋ! ಪುಸ್ತಕ ಇರಲೀಕಂದ್ರ ನಮ್ಮ ಸರ್‌ ಸಾಲ್ಯಾಗ ಬಯ್ಯತಾರ ಏನ ಮಾಡೂದು ಅಂತ ಉಪಾಸ, ಪುಸ್ತಕದ ಚಿಂತಿ ಮಾಡಕೋಂತ ಮಲಗಿದ್ಯಾ. ಆದರ ನಿದ್ದೀನ ಬರಲಿಲ್ಲ. ಕನಸಿನ್ಯಾಗ ಹೊಳಿ ನೀರು ಬಂದು ಮನ್ಯಾಗ ಹೊಕ್ಕು ಪುಸ್ತಕ ತೇಲಿಕೊಂತ ಹೋದಂಗಾತು. ಎದಿಉದ್ದ ನೀರಾಗ ಹಿಡಿಯಾಕ ಹೋದ್ಯಾ ಆದರ ಸಿಗಲಿಲ್ಲ. ಪಕ್ಕನ ಎಚ್ಚರಾತು ನಾನು, ನಮ್ಮತ್ತಿ ಮನ್ಯಾಗ ಮಲಗಿದ್ಯಾ.

‘ಸರ್ ಸಾಲ್ಯಾಗ ಹೇಳಿದ್ದು, ಎಲ್ಲಾ ಬರಕೊಂಡಿದ್ಯಾ ಪುಸ್ತಕ ಹೋದದ್ದು ನೆಪ್ಪ ಆದರ ಅಳು ಬಂದಾಗ ಆಕ್ಕೈತಿ. ಆದರೆ, ಏನು ಮಾಡೂದು. ನದಿ ದಂಡಿ ಮ್ಯಾಲೆ ಇದ್ದ ಎಲ್ಲಾ ಹಳ್ಳಿಯ ಸಾಲಿ ಹುಡುಗುರ ಪುಸ್ತಕ ಹೋಗ್ಯಾವ’ ಎಂದು ನಮ್ಮಪ್ಪ, ನಮ್ಮವ್ವ ನನಗ ಸಮಾಧಾನ ಮಾಡಿದರು.

ಸಾಲಿಗೆ ಹೋದ ಮ್ಯಾಲೆ ಸಾಲ್ಯಾಗ ಶಿಕ್ಷಕರು ಮತ್ತ ಪುಸ್ತಕ ಕೊಡತಾರ ಅಂದಾಗ ನನಗ ಖುಷಿ ಆತು. ಈಗ ಮತ್ತ ಸಾಲ್ಯಾಗ ಪುಸ್ತಕ ಕೊಟ್ಟಾರ. ಆದರ ಮೊದಲಿನ ಪುಸ್ತಕ ನೆನಪು ಇನ್ನೂ ಮನಿಸಿನ್ಯಾಗ ಹಸಿ ಹಸಿಯಾಗಿ ಉಳದೈತಿ. ಮೊದಲಿನ ಪುಸ್ತಕ ಹೆಂಗ ಮರೆಯಲಿ ಮರಿಯಾಕ ಆಗೂದಿಲ್ಲ.

ಪ್ರತಿಕ್ರಿಯಿಸಿ (+)