ಬುಧವಾರ, ಜೂನ್ 16, 2021
23 °C
ಮೂರೂ ಮತ್ತೊಂದು ದಿನಗಳ ಮುಟ್ಟೂ, ಹದಿಮೂರೂವರೆ ದಿನಗಳ ಕೋವಿಡ್ಡೂ...

ಕ್ವಾರಂಟೈನ್‌ ನಮೋನಮಃ!

ಪೂರ್ಣಿಮಾ ಭಟ್ಟ - ಸಣ್ಣಕೇರಿ Updated:

ಅಕ್ಷರ ಗಾತ್ರ : | |

Prajavani

ಸುಮಾರು ಇಪ್ಪತ್ತು ವರ್ಷದ ಹಿಂದಿನ ಕತೆ. ಅವು ಕಾಲೇಜು ದಿನಗಳು. ನಮ್ಮ ಹಳ್ಳಿ ಮನೆಯಿಂದ ಕಾಲೇಜಿಗೆ ಓಡಾಡುತ್ತಿದ್ದೆ. ಹೊತ್ತಿಲ್ಲದೇ ಗೊತ್ತಿಲ್ಲದೇ ಎರಗುವ ಕೆಟ್ಟ ಅತಿಥಿಯಂತೆ ಬರುತ್ತಿತ್ತಲ್ಲ ತಿಂಗಳಿಗೊಮ್ಮೆ ಮುಟ್ಟು! ಅದು ಬಂತೆಂದರೆ ಸಾಕು, ಕೆಟ್ಟ ಅಲವರಿಕೆ. ಬೇರೆಲ್ಲವನ್ನೂ ಹೇಗೋ ಹೆಣಗಿಬಿಟ್ಟೇನು. ಆದರೆ ಮನೆಯಲ್ಲಿ ಆಯಿಯ ಕಟ್ಟಪ್ಪಣೆ, ಆ ಮೂರು ದಿನ ಮಾತ್ರ ಹೊರಗೇ ಕೂಡ್ರಬೇಕು ಎಂದು. ಅಜ್ಜ-ಅಜ್ಜಿ ಇರುವ ಮನೆ, ಮೂಲ ದೇವರಿರುವ ಮನೆ, ಪೂಜೆ ಪುನಸ್ಕಾರದ ಮನೆ. ಮುಟ್ಟು ಮೈಲಿಗೆ ಇಲ್ಲದೇ ಇಡೀ ಮನೆ ಓಡಾಡಬೇಡ ಎಂದು ಅವಳ ತಾಕೀತು. 

ಅಜ್ಜಿಮನೆಯಲ್ಲಿ ಹೈಸ್ಕೂಲು ಮುಗಿಸಿದ್ದ ನಾನು, ಅಜ್ಜಿಗೆ ಟೋಪಿ ಹಾಕಿಯೇ ಮುಟ್ಟಿನ ದಿನಗಳನ್ನು ಏಮಾರಿಸಿಬಿಡುತ್ತಿದ್ದೆ. ಆದರೆ ನಂತರದ ವರ್ಷಗಳಲ್ಲಿ ನಮ್ಮ ಅಮ್ಮನಿಗೆ ಆ ಟೋಪಿಯ ಸೈಜ್ ಸರಿಯಾಗಲೇ ಇಲ್ಲ. ನೂರೆಂಟು ಕಾರಣ ಕೊಟ್ಟು, ಆಣೆ ಭಾಷೆಗಳನ್ನು ಹಾಕಿ ಅಂತೂ ಹಾಸಿಗೆ ಬೇರೆ ಕೊಟ್ಟೇ ಬಿಡುತ್ತಿದ್ದರು ಆಯಿ. ಅದು ನನಗೆ ಪರಮ ಹಿಂಸೆ. ಇನ್ಯಾರೂ ಹುಡುಗಿಯರಿಲ್ಲದ ಮನೆ ಬೇರೆ. ತಿಂಗಳು ಪೂರ್ತಿ ಅಣ್ಣಂದಿರ ಮೇಲೆ ರುಬಾಬು ಹೊಡೆಯುತ್ತ, ಅಪ್ಪ - ಅಜ್ಜನನ್ನು ಹೆದರಿಸುತ್ತ ಇರುವ ನಾನು, ಈ ಮೂರು ದಿನ ಮೆತ್ತಿನ ಮೇಲಿರುವ ಮೂಲೆಯೊಂದಲ್ಲಿ ಕಟ್ಟಿಹಾಕಿದ ಕುನ್ನಿಮರಿಯಂತೆ ಕೂತು ಕಳೆಯಬೇಕಲ್ಲ ಎಂಬ ಆಲೋಚನೆಯೇ ನನಗೆ ದೊಡ್ಡ ಗುಮ್ಮನಾಗಿತ್ತು. ಊಟ-ತಿಂಡಿಗೆ ಮಾತ್ರ ಕೆಳಗೆ ಬುಲಾವು. ಬಂದರೂ ಪಂಕ್ತಿಯಿಂದ ದೂರ. ಹಂಡೆ ನೀರು ಮುಟ್ಟುವಂತಿಲ್ಲ, ಕುಡಿಯಲು ನೀರು ಕೇಳಬೇಕು, ಅಡುಗೆಗೆ ಸಹಾಯ ಮಾಡುವಂತಿಲ್ಲ, ಜಗಲಿಯಲ್ಲಿ ಪಟ್ಟಾಂಗ ಹೊಡೆಯುತ್ತ ಕೂಡ್ರುವಂತಿಲ್ಲ -ಅಂತೂ ಇಲ್ಲಗಳ ಪಟ್ಟಿ.

ಕಾಲೇಜು ಇರುವ ದಿನವಾದರೆ ತೊಂದರೆ ಇಲ್ಲ. ಮನೆ ಮರೆಯಾಗುವವರೆಗೆ ಹಿಂದೆ ಹಿಂದೆ ಇದ್ದು, ನಂತರ ಅಣ್ಣಂದಿರೊಡನೆ ಓಡು ನಡಿಗೆಯಲ್ಲಿ ಬಸ್ ಸ್ಟಾಪ್, ಕಾಲೇಜು ಸೇರಿ ಏನೇನೂ ಆಗಿಲ್ಲವೆಂಬಂತೆ ಇರುತ್ತಿದ್ದೆ. ಹೇಗೋ ಮೂರು-ಮತ್ತೊಂದು ದಿನ ದೂಡುತ್ತಿದ್ದೆ. ಆದರೆ ನನ್ನ ದೇಹವೂ ಸರಿ. ಹಬ್ಬ-ಹರಿದಿನ, ದಸರಾ ರಜೆ, ಬೇಸಿಗೆ ರಜಾ ದಿನಗಳು ಶುರುವಾಗುವುದೇ ಕಾಯ್ದು ಕೂಡ್ರುತ್ತಿತ್ತು ಈ ಮುಟ್ಟು. ಮಾರನೇ ದಿನದ ಗೌರಿ ಹಬ್ಬಕ್ಕೆ ಆಯಿ ಅರಳು ಉಂಡೆಗೆ ತಯಾರಿ ನಡೆಸುತ್ತಿದ್ದಾಳೆ... ನನಗಿಲ್ಲಿ ಈ ಕಡೆ ಶುರು. ಬೇಸಿಗೆ ರಜೆಯ ಆರಂಭ. ಮನೆಗೆ ಚಿಕ್ಕಮ್ಮ - ಅವರ ಮಕ್ಕಳೆಲ್ಲ ಬಂದಿದ್ದಾರೆ. ಹತ್ತಿರದ ಮದುವೆಗೆ ಹೋಗುವ ತಯಾರಿ ಬೇರೆ... ಅಷ್ಟರಲ್ಲಿ ನನ್ನ ಬಿಡಾರ ಬೇರೆ! 

ಮೊದಲು ಕೆಲ ವರ್ಷಗಳ ಇರುಸುಮುರುಸು, ನಂತರದ ಅಸಹನೆ, ವ್ಯರ್ಥಮಾಡಿದ ಒಂದಷ್ಟು ಕೋಪ-ತಾಪ-ಮಹಿಳಾವಾದದಂಥ ಮೊಂಡಾಟ ಇದರಲ್ಲೇ ಕಾಲೇಜು, ಹಾಸ್ಟೆಲು, ಯೂನಿವರ್ಸಿಟಿ, ಮದುವೆ ಮನೆಕಾಲ ಎಲ್ಲ ಮುಗಿದೇಹೋಯಿತು. ಆಗ ಹಾಗೆಲ್ಲ ಕಳೆದ ದಿನಗಳನ್ನು ಸಿಲ್ಲಿ ಎಂದು ನಾನು ಕೊಡವಿಯೂ ಆಗಿತ್ತು. ಮೊನ್ನೆ ಮೊನ್ನಿನವರೆಗೂ ಆ ನೆನಪುಗಳು ಛೂ ಮಂತ್ರಕಾಳಿಯಾಗಿದ್ದವು.

ಆದರೆ, ನನಗೂ ಕೋವಿಡ್ಡು ಬಂದು ಅಟಕಾಯಿಸಿಕೊಂಡಿತಲ್ಲ! ಐದು ರಾತ್ರಿ-ಐದು ಹಗಲು ಮೈಮೇಲೆ ಎಚ್ಚರವಿಲ್ಲದವರಂತೆ ಮಲಗಿದ್ದೆ. ಜೋಲಿ ಹೊಡೆಯುವುದು ನಿಂತಾಗೊಮ್ಮೆ ಎದ್ದು ಬಾಗಿಲವರೆಗೆ ಹೋಗಿ ಸ್ಟೂಲ್ ಮೇಲಿದ್ದ ಪೇಪರ್ ಪ್ಲೇಟಿನಲ್ಲಿ ಇಟ್ಟ ಊಟವನ್ನು ಬ್ಯಾಲೆನ್ಸ್ ಮೇಲೆಯೇ ತಂದು ಅರ್ಧ ತಿಂದು ಅರ್ಧ ಕಮೋಡಿಗೆ ಹಾಕುತ್ತಿದ್ದೆ. ಮಾತ್ರೆಗಳನ್ನು ಮಾತ್ರ ಪರಾಂಬರಿಸಿ ನೋಡಿ-ನುಂಗುತ್ತಿದ್ದೆ. ಜ್ವರದ ಕಾವಿಗೋ, ಅನ್ನ ತಿಂದ ಸೊಕ್ಕಿಗೋ, ಕೋವಿಡ್ಡಿನ ಮೇಲಿನ ಕೋಪಕ್ಕೋ ಗೊತ್ತಿಲ್ಲ, ರೂಮಿನ ಬಾಗಿಲು ಜಡಿದಿದ್ದರೂ ಬಾಗಿಲಿನಿಂದಾಚೆ ಇರುವ ಗಂಡನನ್ನ - ಮಕ್ಕಳನ್ನ ವಿನಾಕಾರಣ ಒಂದಷ್ಟು ಬೈದು ಮತ್ತೆ ಮುಸುಕೆಳೆದು ಮಲಗುತ್ತಿದ್ದೆ. ಅರೆ ಎಚ್ಚರವಿದ್ದಷ್ಟು ಹೊತ್ತೂ ಮೊಬೈಲು, ಪುಸ್ತಕ, ಕಂಪ್ಯೂಟರ್ ಎಲ್ಲವನ್ನೂ ಎತ್ತಿ ಕಿಟಕಿಯಿಂದ ಆಚೆ ಎಸೆಯುವಷ್ಟು ರೊಚ್ಚು. ನಾಲ್ಕು ವರ್ಷದ ಮಗ ಬಾಗಿಲಿಗೆ ಬಂದು ನನ್ನ ಕರೆದರೆ, ನನಗೆ ಓ ಅನ್ನಲೂ ಆಗದಷ್ಟು ಅಲ್ಲಿಗೆ ಹತ್ತಿರ - ಇಲ್ಲಿಗೆ ದೂರ! 

ಆರನೇ ದಿನ ಕಳೆದ ನಂತರ ಜ್ವರದ ಪಾರಮಾರ್ಥಿಕ ಸ್ವಲ್ಪ ಹರಿದು ಇಲ್ಲಿಯ ಪ್ರಪಂಚಕ್ಕೆ ಕಣ್ಣು ಬಿಡತೊಡಗಿದೆ. ಹೊರಗಡೆ ಮಕ್ಕಳು ಪಾತ್ರೆ ಬಿಸಾಡಿ, ಆಟಿಕೆ ಎಳೆದಾಡಿ ಮಾಡುತ್ತಿದ್ದ ಶಬ್ದಗಳೆಲ್ಲ ರೂಮಿನಲ್ಲಿ ಕೂತ ನನಗೆ ಗೆಜ್ಜೆಯ ಕಿಂಕಿಣಿಯಂತೆ ಕೇಳತೊಡಗಿದವು. ಮಕ್ಕಳೊಡನೆ ತಮಾಷೆ ಮಾಡಿ ಗಂಡ ನಕ್ಕರೆ, ನನಗೆ ಇಲ್ಲಿ ಎದೆಯ ಮೇಲೆ ನಿಗಿ ನಿಗಿ ನಕ್ಷತ್ರ ಸುರಿದಂತೆ ಒಂಥರ ಹೇಳಲಾಗದ ಅನುಭವಿಸಲಂತೂ ಸಾಧ್ಯವೇ ಇಲ್ಲದ ಹಿತವಾದ ಹಳಹಳಿಕೆ. ಮಕ್ಕಳು ಪ್ರತೀ ಬಾರಿ ಅವರಪ್ಪನನ್ನು ದೊಡ್ಡ ದನಿಯಲ್ಲಿ ಕರೆದಾಗಲೂ ನನ್ನ ಹೊಟ್ಟೆಯಲ್ಲಿ ಸೂಜಿ ಮೆಣಸು ಕುಟ್ಟಿದ ಘಾಟು! 

ಎರಡು ದಿನ ಹಾಗೂ ಹೀಗೂ ಕಾಲ ಹಾಕಿದ ನನಗೆ ನಂತರ ತಡೆಯಲಾಗಲಿಲ್ಲ. ವಿಡಿಯೊ ಕಾಲ್ ಮಾಡಿ ತಲೆ ತಿನ್ನತೊಡಗಿದೆ. ಸೂಪರ್ ಮಾರ್ಕೆಟ್ಟಿನಿಂದ ಮೊಸರು ತರಿಸಲಾ? ಮಕ್ಕಳಿಗೆ ಆರ್ಡರ್ ಮಾಡಿದ್ದ ಆ್ಯಕ್ಟಿವಿಟಿ ಬುಕ್ ಬಂದಿದೆಯಾ? ಅದನ್ನು ಮಾಡಿಸಲು ಟೈಮು ಇದೆಯಾ? ಕಿಚನ್ನಿನ ಕಟ್ಟೆ ಕ್ಲೀನೇ ಆಗಿಲ್ಲ... ಇದೆಲ್ಲ ಅನವಶ್ಯಕ ಸಾಲು ಪ್ರಶ್ನೆಗಳು ಗಂಡನಿಗೆ. 

ಪುಸ್ತಕದ ಕಪಾಟಿನ ಬಾಗಿಲು ಮುಚ್ಚಿದೆಯಾ? ಕೀಬೋರ್ಡಿನ ಕ್ಲಾಸಿಗೆ ನಾಲ್ಕೂ ಐವತ್ತೈದಕ್ಕೇ ಜಾಯಿನ್ ಆದೆಯಾ? ಅರ್ಧ ಪೇಜು ಕನ್ನಡ ಬರೆದೆಯಾ? ಪೈಜಾಮ ಹಿಂದೆ ಮುಂದಾಗಿದೆಯಾ? ಸ್ಸು ಸ್ಸೂ ಮಾಡಿದೆಯಾ? ಇಂಥದ್ದೆಲ್ಲ ಬೇಕಾರ್ ಸವಾಲುಗಳು ಮಕ್ಕಳಿಗೆ. ಊಹ್ಞೂಂ.. ಯಾವ ಪ್ರಶ್ನೆಯನ್ನು ಎಷ್ಟೇ ಹಿಂದು-ಮುಂದು ಮಾಡಿ ಕೇಳಿದರೂ ಬಾಗಿಲು ತೆಗೆದು ‘ನೀನು ಹೊರಗೆ ಬಾ... ನಮ್ಮೊಂದಿಗೆ ಇರು’ ಎನ್ನುತ್ತಿಲ್ಲ ಯಾರೊಬ್ಬರೂ. ನನಗೆ ಮತ್ತೆ ಇಪ್ಪತ್ತು ವರ್ಷ ಹಿಂದಕ್ಕೆ, ಕೈ ಹಿಡಿದುಕೊಂಡು ದರದರನೆ ಎಳೆದುಕೊಂಡು ಹೋದ ಅನುಭವ!

ಈ ಕೋವಿಡ್ಡಿನ ಸಂಕಟದಲ್ಲಿ ಬಾಣಂತನವನ್ನು ನೆನೆಯದೇ ಇರಲು ಹೇಗಾದೀತು...? ಇಬ್ಬರು ಮಕ್ಕಳನ್ನು ಹೆತ್ತು ಮಹಾತಾಯಿಯಾದಾಗಲೂ ನಾನು ಬಾಣಂತಿ ಆರೈಕೆ ಮಾಡಿಕೊಂಡಿದ್ದು ಮಾತ್ರ ಅಷ್ಟಕ್ಕಷ್ಟೇ. ಮೊದಲನೆಯದು ಲಂಡನ್ನಿನಲ್ಲಿ. ಅಲ್ಲಿ ಎರಡನೇ ದಿನಕ್ಕೇ ಆಸ್ಪತ್ರೆಯಿಂದ ಮನೆಗೆ ಬಂದು, ಮೂರನೇ ದಿನದಿಂದ ಪಾತ್ರೆಯನ್ನೂ ತೊಳೆದಿದ್ದೆ. ಬಾಣಂತನ ಮಾಡಲು ಬಂದ ನಮ್ಮಮ್ಮ ನನ್ನ ಧಿಗು-ಧಿಗು ನೋಡಿ ಹೆದರಿದರೂ ಅಲ್ಲಿನ ವ್ಯವಸ್ಥೆಗಳೇ ಹಾಗಂದಮೇಲೆ ಸುಮ್ಮನಾಗಿ ಹೋದರು. ಇನ್ನು ಎರಡನೆಯದಂತೂ ನಮ್ಮ ಬೆಂಗಳೂರಿನಲ್ಲಿ. ಮೊದಲ ಬಾಣಂತನವನ್ನು ಸಲೀಸಾಗಿ ಮುಗಿಸಿ ಸೊಂಟಗಟ್ಟಿ ಮಾಡಿಕೊಂಡ ಅನುಭವ ನನ್ನನ್ನು ಇನ್ನಷ್ಟು ಒಡ್ಡಿಯನ್ನಾಗಿ ಮಾಡಿತ್ತು. ಎರಡನೆಯ ಮಗುವಿನ ಎಲ್ಲಾ ಕೆಲಸ ಮಾಡಿಕೊಂಡೇ ಮೊದಲನೆಯವನಿಗೂ ಇನ್ನಷ್ಟು ಅಂಟಿಕೊಂಡೆ. ಒಳ್ಳೆಯ ಸಮಯ ಸಾಧಕ ನರಿಯಂತೆ ಬೆಳಗಿಂಜಾವ, ಸರಿರಾತ್ರಿ ಮಕ್ಕಳ ಎಲ್ಲ ಕೆಲಸ ಮುಗಿಸುತ್ತಿದ್ದೆ. ಮೂಡು ಸರಿಯಾಗಿ ಇಲ್ಲದಾಗ ಒಮ್ಮೊಮ್ಮೆ ಗುಟುರು ಹಾಕಿದರೂ ಅಲ್ಲೇ ಮರೆಯುತ್ತಿದ್ದೆ. ಸಂಸಾರ ಮಕ್ಕಳು ನಾನಿಲ್ಲದೇ ಬದುಕಬಹುದಾ ಎಂಬುದು ನನಗೆ ಪ್ರಶ್ನೆಯೇ ಆಗಿರಲಿಲ್ಲ. ಖಂಡಿತ ಸಾಧ್ಯವಿಲ್ಲದ ಮಾತು ಅದು ಎಂದು ಯಾವತ್ತೋ ನಾನು ತೀರ್ಮಾನ ಮಾಡಿಯಾಗಿತ್ತು.

ಆದರೆ ಈ ಕೋವಿಡ್ಡಿನಿಂದ ಹಾಸಿಗೆ ಹಿಡಿದದ್ದು ಮಾತ್ರ ಈ ಲೋಕದ ಅನುಭವಕ್ಕೆ ನಿಲುಕದ್ದು. ಮುಚ್ಚಿದ ಬಾಗಿಲ ಹಿಂದೆ ಆಗುವ ಪ್ರತೀ ಶಬ್ದವೂ ಒಮ್ಮೊಮ್ಮೆ ಆರ್ತವೇ. ಮಕ್ಕಳ ಒಂದೊಂದು ಬಿಕ್ಕೂ ನನ್ನನ್ನು ಹನಿಗಣ್ಣಾಗಿಸುತ್ತಿತ್ತು. ಒಮ್ಮೆ ಅವು ಕೆಮ್ಮಿದರೆ ಸಾಕು - ಹೊಟ್ಟೆಯಲ್ಲಿ ಇದ್ದುದು ಎಲ್ಲಾ ಹೊರಬಂದು ರಾತ್ರಿ ಪೂರ್ತಿ ಉಪವಾಸ ಮಲಗಿಬಿಟ್ಟರೆ ಎಂಬಷ್ಟು ದೂರಾಲೋಚನೆ! ದಿನಗಳೆದಂತೆ ಮಕ್ಕಳು ನನ್ನ ಸ್ಪರ್ಶವನ್ನೇ ಪೂರಾ ಮರೆತುಬಿಟ್ಟವಾ ಎಂಬ ಘಾತ. ವಿಡಿಯೊ ಕಾಲ್ ಮಾಡುವಾಗಲೊಮ್ಮೆ ಅವರ ಕಣ್ಣ ಮಿಂಚು ನೋಡಿ ನನ್ನ ಎದೆಯಲ್ಲಿ ಢವ. ಎಲ್ಲವೂ ಮತ್ತೆ ಸರಿ ಹೋದೀತು ಎಂಬ ಗಟ್ಟಿಭಾವ.

ಅಂತೂ ಇಂತೂ ಹದಿಮೂರೂವರೆ ದಿನಗಳನ್ನು ನರಳುತ್ತ ಮುಗಿಸಿದ್ದೇನೆ. ಮೊದಲಷ್ಟು ದಿನ ಮೈಕೈ ಹಿಂಡಿ ಹಾಕಿದ ಜ್ವರ ಮೇಲೋ, ದಿನಗಳೆದಂತೆ ಎದೆಯ ಮೂಲೆಯಲ್ಲಿ ಗುಡ್ಡವಾಗುತ್ತ ನಡೆದ ಅಸಹಾಯಕತೆ, ಕಹಿ ಅನುಭವ ಮೇಲೋ ಎಂಬುದನ್ನು ನಿರ್ಧಾರ ಮಾಡಲು ಅಸಾಧ್ಯ ಎಂಬಷ್ಟು ಬಳಲಿದ್ದೇನೆ. ಅಮ್ಮ ಹೊರಬಂದ ಮಾರನೆಯದಿನ ಮಾವಿನ ಕಸ್ಟರ್ಡ್, ನಂತರ ಒಂದಿನ ಈರುಳ್ಳಿ ದೋಸೆ, ಶನಿವಾರ ಬೆಳಗ್ಗೆ ಹತ್ತಕ್ಕೆ ಒಥೆಲ್ಲೋ ಬೋರ್ಡ್ ಗೇಮ್ ಅನ್ನುತ್ತ ಲೆಕ್ಕಾಚಾರ ಹಾಕುವ ಮಕ್ಕಳ ದನಿಗೆ ರೂಮಿನಲ್ಲಿ ಶತಪಥ ಹಾಕುತ್ತ ಬೆರಗಾಗುತ್ತೇನೆ. ನಾಳೆ ಹದಿನಾಲ್ಕು ದಿನ ಮುಗಿದಮೇಲೆ, ಗಂಟೆ ಶಂಖ ಜಾಗಟೆಗಳ ಸಮೇತ ವೈಕುಂಠದ ಬಾಗಿಲುಗಳು ಒಂದಾದ ನಂತರ ಇನ್ನೊಂದು ತೆರೆಯುವ ಸಂಭ್ರಮವನ್ನು ನೆನೆದು ಪುಳಕಿತಗೊಳ್ಳುತ್ತ ಆಕಾಶ ನೋಡುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು