ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟಿನಲ್ಲಿ ಅರಳುವ ಮನುಷ್ಯತ್ವ

Last Updated 22 ಮೇ 2021, 19:30 IST
ಅಕ್ಷರ ಗಾತ್ರ

ನಮ್ಮ ಬದುಕು ಉಳಿದರೆ ಸಾಕು, ನಮ್ಮ ನೋವಷ್ಟೇ ದೊಡ್ಡದು ಎಂದು ತಳಮಳಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಮಹತ್ವದ ಸಾಹಿತ್ಯ ಕೃತಿಗಳ ಮರುಚಿಂತನೆಯು ಮನುಷ್ಯತ್ವದ ಚಿಲುಮೆಯೊಂದು ಮತ್ತೆ ಪುಟಿದೆದ್ದು ನಿಲ್ಲುವಂತೆ ಮಾಡುತ್ತದೆ. ಸಮಾಜದ ಹುಳುಕುಗಳನ್ನು ವಿಪತ್ತುಗಳು ಮುಖಕ್ಕೆ ರಾಚಿದಂತೆ ಹೊರಹಾಕುತ್ತಿರುವಾಗ ಡಾ.ರಿಯು, ತಾಹು ಅವರಂತಹ ಪಾತ್ರಗಳು ಮಾನವೀಯತೆಯ ದೀವಟಿಗೆಯನ್ನು ಹಿಡಿದುಹೊರಟ ಸಂತರಂತೆ ಗೋಚರಿಸುತ್ತವೆ...

ಮಹತ್ವದ ಸಾಹಿತ್ಯ ಕೃತಿಗಳಲ್ಲಿ ಕೆಲವು ಸನ್ನಿವೇಶಗಳು ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ; ಬಾಳಿನ ಬೇರೆಬೇರೆ ಘಟ್ಟಗಳಲ್ಲಿ ನೆನಪಾಗಿ ನುಗ್ಗಿ ಸಂವೇದನೆಯನ್ನು ಹರಿತಗೊಳಿಸುತ್ತವೆ. ಉದಾ: ಟಾಲ್‍ಸ್ಟಾಯನ ‘ಒಬ್ಬನಿಗೆ ಎಷ್ಟು ನೆಲ ಬೇಕು?’ ಕತೆಯ ಕೊನೆಯ ಸನ್ನಿವೇಶ, ಮಹಾಭಾರತದಲ್ಲಿ ಉಪಪಾಂಡವರ ಹತ್ಯೆಯ ಹೊತ್ತಿನ ದ್ರೌಪದಿ ಅಳಲು, ಪಂಪನ ‘ಆದಿಪುರಾಣ’ದಲ್ಲಿ ವೃಷಭನಾಥನು ದಿಗ್ವಿಜಯ ದಾಖಲಿಸಲು ವೃಷಭಾಚಲಕ್ಕೆ ಹೋದಾಗ ಸಂಭವಿಸುವ ಗರ್ವಭಂಗ, ‘ಒಡಲಾಳ’ದಲ್ಲಿ ಸಾಕವ್ವ ಮೊಮ್ಮಗನಿಗೆ ಕತೆ ಹೇಳುವ ಪ್ರಸಂಗ, ‘ಮ್ಯಾಕ್‌ಬೆತ್’ನಲ್ಲಿ ನಿದ್ರಾಹೀನತೆಯಿಂದ ನರಳುವ ಲೇಡಿ ಮ್ಯಾಕ್‍ಬೆತಳ ಆಕ್ರಂದನ, ‘ಮಲೆಗಳಲ್ಲಿ ಮದುಮಗಳು’ವಿನಲ್ಲಿ ದೊಡ್ಡಸೇಸಿ ತನ್ನ ಮಗನನ್ನು ‘ಹೊನ್ನಾಳಿ ಹೊಡ್ತ’ದಿಂದ ಉಳಿಸುವುದು- ಇತ್ಯಾದಿ.

ಈ ಸನ್ನಿವೇಶಗಳು ಆಯಾ ಕೃತಿಯ ಭಾಗಗಳಾಗಿ ಅರ್ಥ ನೀಡುವಂತೆ, ಸ್ವತಂತ್ರ ಪ್ರಸಂಗಗಳಾಗಿಯೂ ಉಳಿದು ನಿಷ್ಠುರವಾದ ಲೋಕಸತ್ಯಗಳನ್ನು ನಿರೂಪಿಸುತ್ತವೆ; ನಮ್ಮ ಸದ್ಯದ ಅವಸ್ಥೆಯನ್ನು ಕಂಡು ಇದೀಗ ಬರೆದಿದ್ದು ಎಂಬಂತೆ ವಾಸ್ತವವನ್ನು ಮುಖಕ್ಕೆ ಹಿಡಿಯುತ್ತವೆ. ಬಗೆದಷ್ಟೂ ಅರ್ಥ ಕೊಡುತ್ತ ಗಹನವಾದ ಜೀವನದರ್ಶನ ಹೊಮ್ಮಿಸುತ್ತವೆ; ನಾವು ಕಟ್ಟಿಕೊಂಡಿರುವ ವ್ಯಕ್ತಿತ್ವ, ಕುಟುಂಬ, ಸಮಾಜ, ಧರ್ಮ, ಪಂಥ, ಸಿದ್ಧಾಂತಗಳು, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ; ಜಗತ್ತಿನ ಶ್ರೇಷ್ಠ ನಾಟಕ ಮತ್ತು ಸಿನಿಮಾಗಳಲ್ಲೂ ಹೀಗೆ ಕಾಡುವ ಪ್ರಸಂಗಗಳಿವೆ.

ಫ್ರೆಂಚ್ ಲೇಖಕ ಆಲ್ಬರ್ಟ್ ಕಮೂನ ‘ಪ್ಲೇಗ್’ ಕಾದಂಬರಿಯಲ್ಲೂ (ಅನು:ಎಚ್.ಎಸ್.ರಾಘವೇಂದ್ರ ರಾವ್) ಇಂತಹ ಎದೆಕಲಕುವ ಅದೆಷ್ಟೊ ದೃಶ್ಯಗಳಿವೆ. ಅವುಗಳಲ್ಲಿ ಚರಿತ್ರೆಕಾರ ತಾಹುವಿನ ಚಿಂತನಾ ಪ್ರಸಂಗವೂ ಒಂದು. ಒಂದು ಸಂಜೆ ಮನೆಯ ಮಾಳಿಗೆಯ ಮೇಲೆ ಕೂತಿರುವಾಗ, ಪ್ಲೇಗ್ ರೋಗಿಗಳ ಆರೈಕೆಯನ್ನು ತಪಸ್ಸಿನಂತೆ ಮಾಡುತ್ತಿರುವ ಮಿತ್ರನಾದ ಡಾ. ರಿಯೂನ ಜತೆ, ತಾಹು ಆತ್ಮಕಥೆಯ ರೂಪದಲ್ಲಿ ಚಿಂತನೆ ಹಂಚಿಕೊಳ್ಳುತ್ತಾನೆ. ವ್ಯಕ್ತಿಗಳ ಒಳತೋಟಿಗಳನ್ನು ಮತ್ತು ರೋಗಗ್ರಸ್ತ ಊರಿನ ವರ್ಣನೆಯನ್ನು ಸುದೀರ್ಘವಾಗಿ ಮಾಡುತ್ತ, ತನ್ನ ಜಿಜ್ಞಾಸಾ ಶೈಲಿಯಿಂದ ಕೆಲವೊಮ್ಮೆ ದಣಿವುಂಟು ಮಾಡುವ ಈ ಕಾದಂಬರಿಯಲ್ಲಿ, ತಾಹುವಿನ ಜಿಜ್ಞಾಸಾ ಪ್ರಸಂಗವು, ಬೆಳಗುವ ಕನ್ನಡಿಯಂತಿದೆ.

ತಾಹು, ಒಬ್ಬ ಪ್ರತಿಷ್ಠಿತ ಸರ್ಕಾರಿ ವಕೀಲನ ಮಗ. ಅವನಪ್ಪನಿಗೆ ಒಂದು ವಿಚಿತ್ರ ಹವ್ಯಾಸವಿರುತ್ತದೆ. ಅದೆಂದರೆ, ಯುರೋಪಿನಲ್ಲಿ ಟ್ರೈನುಗಳು, ಎಲ್ಲಿಂದ, ಎಲ್ಲಿಗೆ, ಯಾವ ಹೊತ್ತಿಗೆ ಹೊರಡುತ್ತವೆ ಮತ್ತು ತಲುಪುತ್ತವೆ ಎಂಬ ತಿಳಿವಳಿಕೆ. ಅವನು ರೈಲ್ವೆ ವೇಳಾಪಟ್ಟಿಯನ್ನು ಧರ್ಮಗ್ರಂಥದಂತೆ ನಿತ್ಯವೂ ಪಠಿಸುತ್ತಿರುತ್ತಾನೆ. ವೃತ್ತಿಬದುಕಿನ ಯಶಸ್ಸಿನ ಬೆನ್ನುಹತ್ತಿದ್ದ ಆತನಿಗೆ, ಹೆಂಡತಿಯ ಜತೆ ಕ್ಷಣಕಾಲ ಕೂತು ಆಪ್ತವಾಗಿ ಪ್ರೀತಿಯ ಮಾತಾಡುವುದಕ್ಕೂ ಸಾಧ್ಯವಾಗಿರುವುದಿಲ್ಲ. ತಾಹು ಹೇಳುವಂತೆ, ಅವನ ತಾಯಿ ಒಬ್ಬಳು ಅಸಹಾಯಕ ಹೆಂಗಸು; ‘ಎಲ್ಲ ಆಸೆ, ಭರವಸೆಯನ್ನು ಕಳೆದುಕೊಂಡು ಸನ್ಯಾಸಿನಿಯಂತೆ ಬದುಕಿದ್ದವಳು.’

ಹೀಗಿರುತ್ತ ತಾಹೂನ ಅಪ್ಪ ಒಂದು ದಿನ, ತನ್ನ ಹದಿಹರೆಯದ ಮಗನನ್ನು ಕೋರ್ಟ್‌ಕಲಾಪ ತೋರಿಸಲೆಂದು ಕರೆದೊಯ್ಯುತ್ತಾನೆ. ತನ್ನ ವಾದವೈಖರಿಯಿಂದಲೂ ಕಾನೂನು ಪಾಂಡಿತ್ಯದಿಂದಲೂ ಮಗನನ್ನು ಬೆರಗುಗೊಳಿಸುವುದು, ಸಾಧ್ಯವಾದರೆ ಮಗನೂ ವಕೀಲಿ ವೃತ್ತಿ ಕೈಗೊಳ್ಳುವಂತೆ ಪ್ರೇರೇಪಿಸುವುದು ಅವನ ಇರಾದೆ. ಸದರಿ ದಿನ, ಆತ ಕೋರ್ಟಿನಲ್ಲಿ ಈಗಾಗಲೇ ತಪ್ಪೊಪ್ಪಿಗೆ ಮಾಡಿಕೊಂಡಿರುವ ಒಬ್ಬ ಬಡಪಾಯಿ ಆರೋಪಿಗೆ ಮರಣದಂಡನೆಯೇ ಆಗತಕ್ಕದ್ದು ಎಂದು ಹಟ ಹಿಡಿದು ವಾದಿಸುತ್ತಾನೆ. ತಾಹು ಪ್ರಕಾರ ಆಗ ‘ಅವನ ಒಳ್ಳೇತನ ಎಲ್ಲೋ ಹೊರಟುಹೋಗಿತ್ತು. ಬಾಯಿಂದ ದೊಡ್ಡದೊಡ್ಡ ಮಾತು ಹಾವುಗಳಂತೆ ಹೊರಬರುತ್ತಿದ್ದವು.’ ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದನ್ನು ಖುದ್ದಾಗಿ ಪರಿಶೀಲಿಸಲು ಬೆಳಗಿನ ಜಾವವೇ ಎದ್ದು ಶ್ರದ್ಧೆಯಿಂದ ಜೈಲಿಗೆ ಹೋಗುವ ಅಭ್ಯಾಸವೂ ಅವನಿಗೆ ಇರುತ್ತದೆ.

ಕೋರ್ಟಿನಿಂದ ಮರಳಿದ ಬಳಿಕ ತಾಹುವಿಗೆ ಅಪ್ಪನ ವೃತ್ತಿ, ಹವ್ಯಾಸ ಮತ್ತು ಜೀವನದೃಷ್ಟಿಗಳ ಬಗ್ಗೆ ಜುಗುಪ್ಸೆ ಹುಟ್ಟುತ್ತದೆ; ಕಟಕಟೆಯಲ್ಲಿ ನಿಂತಿದ್ದ ಅಸಹಾಯಕ ವ್ಯಕ್ತಿಯ ಮುಖ ಇನ್ನಿಲ್ಲದಂತೆ ಕಾಡಿಸುತ್ತದೆ. ತನ್ನನ್ನು ಪ್ರೀತಿಸುವ, ಆದರೆ ಮತ್ತೊಬ್ಬರ ಸಂಕಟವನ್ನು ಆಸ್ವಾದಿಸುವ ಅಪ್ಪನ ವ್ಯಕ್ತಿತ್ವ, ಅವನ ಬಾಳಗತಿಯನ್ನೇ ಬದಲಿಸುತ್ತದೆ. ಅವನು ಮನೆಯನ್ನು ತೊರೆದು, ಸ್ವತಂತ್ರವಾದ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಅವನ ಪ್ರಕಾರ ‘ಅನ್ಯರಿಗೆ ತೊಂದರೆ ಕೊಡ್ತಾ ಬದುಕೋದೇ ಪ್ಲೇಗಿನ ಲಕ್ಷಣ’. ಇಂತಹ ರೋಗಗ್ರಸ್ತರು ತಮ್ಮನ್ನು ಸಭ್ಯ ನಾಗರಿಕರು ಎಂದು ಪರಿಭಾವಿಸಿರುತ್ತಾರೆ. ತಮ್ಮ ನೆಮ್ಮದಿಯ ಬದುಕಿಗೆ ಮತ್ತೊಬ್ಬರ ಕೊಲೆಯನ್ನು ಸಮರ್ಥಿಸುತ್ತಾರೆ. ತಾಹು ವಿವರಿಸುವಂತೆ ಸಮಾಜದಲ್ಲಿ ಮೂರು ಮಾದರಿಯ ಜನರಿದ್ದಾರೆ. 1. ತಮ್ಮ ನಂಬಿಕೆ ಮತ್ತು ವರ್ತನೆಗಳು ಸ್ವತಃ ರೋಗವೆಂದೇ ಅರಿಯದವರು. ಆ ರೋಗಗಳನ್ನೇ ಸಂತೋಷದಿಂದ ಅನುಭವಿಸುವವರು. ಅವನ್ನು ಮತ್ತೊಬ್ಬರಿಗೆ ಹರಡುತ್ತ ಜೀವಿಸುವವರು-ಅವನ ಅಪ್ಪನಂತೆ. 2. ಯಾವುದು ರೋಗವೆಂದು ಗೊತ್ತಿರುವವರು. ಆದರೆ ಪ್ರತಿರೋಧಿಸಲು ಆಗದವರು- ಅವನ ಅಮ್ಮನಂತೆ. 3. ಯಾವುದು ರೋಗವೆಂದು ಸ್ಪಷ್ಟ ಗೊತ್ತಿರುವವರು; ಅವುಗಳಿಂದ ಬಿಡುಗಡೆಗೊಳ್ಳಲು ಕೂಡ ಸೆಣಸುವವರು. ತಾಹು ಹೇಳುತ್ತಾನೆ: `ಈ ಲೋಕದಲ್ಲಿ ಪಿಡುಗುಗಳೂ ಇವೆ, ಬಲಿಪಶುಗಳೂ ಇದ್ದಾರೆ. ನಾನು ಬಲಿಪಶುಗಳ ಜತೆಗೆ ಇರುವುದನ್ನು ಆಯ್ಕೆ ಮಾಡಿಕೊಂಡೆ.’

ಬೆಂಗಳೂರಿನಲ್ಲಿ ಕೋವಿಡ್‌ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಉಪನ್ಯಾಸಕಿ ಎಸ್ತರ್‌ ಮೇರಿ ಮತ್ತು ವಿದ್ಯಾರ್ಥಿನಿ ಅಕ್ಷಯಾ. ತಾಹು ಪ್ರತಿಪಾದನೆಯ ‘ಯಾವುದು ರೋಗವೆಂದು ಸ್ಪಷ್ಟ ಗೊತ್ತಿರುವ, ಅವುಗಳಿಂದ ಬಿಡುಗಡೆಗೊಳ್ಳಲು ಕೂಡ ಸೆಣಸುವ’ ಮೂರನೇ ವರ್ಗಕ್ಕೆ ಸೇರಿದ ಇಂಥವರ ಸದ್ದಿಲ್ಲದ ಸೇವೆಯಲ್ಲಿ ಮನುಷ್ಯತ್ವ ಅರಳಿ ನಿಲ್ಲುತ್ತದೆ...
ಬೆಂಗಳೂರಿನಲ್ಲಿ ಕೋವಿಡ್‌ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಉಪನ್ಯಾಸಕಿ ಎಸ್ತರ್‌ ಮೇರಿ ಮತ್ತು ವಿದ್ಯಾರ್ಥಿನಿ ಅಕ್ಷಯಾ. ತಾಹು ಪ್ರತಿಪಾದನೆಯ ‘ಯಾವುದು ರೋಗವೆಂದು ಸ್ಪಷ್ಟ ಗೊತ್ತಿರುವ, ಅವುಗಳಿಂದ ಬಿಡುಗಡೆಗೊಳ್ಳಲು ಕೂಡ ಸೆಣಸುವ’ ಮೂರನೇ ವರ್ಗಕ್ಕೆ ಸೇರಿದ ಇಂಥವರ ಸದ್ದಿಲ್ಲದ ಸೇವೆಯಲ್ಲಿ ಮನುಷ್ಯತ್ವ ಅರಳಿ ನಿಲ್ಲುತ್ತದೆ...

ತಾಹು ತನ್ನ ಚಿಂತನೆಯ ಸಾಕಾರರೂಪವನ್ನು ಡಾ. ರಿಯೂನಲ್ಲಿ ಕಾಣುತ್ತಾನೆ. ಯಾಕೆಂದರೆ, ರಿಯೂ, ಮಡದಿಯ ಮರಣವಾರ್ತೆ ಬಂದಾಗಲೂ, ಅದನ್ನು ಪಕ್ಕಕ್ಕಿಟ್ಟು ಜನರ ನೋವಿಗೆ ಮಿಡಿಯುವವನು; ಅವರ ದುಮ್ಮಾನ ಆಲಿಸುವವನು. ಈ ಗುಣವು ವೈದ್ಯನಾಗಿ ಅವನ ವೃತ್ತಿಪರತೆಯನ್ನು ಮಾತ್ರವಲ್ಲ, ಅವನೊಳಗಿನ ಧೀಮಂತ ಮನುಷ್ಯತ್ವದ ಭಾಗವೂ ಆಗಿದೆ. ತಾವಷ್ಟೇ ಬದುಕುಳಿಯಬೇಕು ಎಂದು ಆಲೋಚಿಸುವ, ತಮ್ಮ ದುಃಖವೇ ದೊಡ್ಡದು ಎಂದು ತಳಮಳಿಸುವ ಅನೇಕರು, ರಿಯೂನ ಚುಂಬಕ ಪ್ರಭಾವಕ್ಕೆ ಒಳಗಾಗುತ್ತಾ ಹೋಗುತ್ತಾರೆ.

ತನ್ನ ಎಳೆಮಗನ ದಾರುಣ ಸಾವಿನಿಂದ ಕಂಗೆಡುವ ನ್ಯಾಯಾಧೀಶ ಓಥಾನ್, ದುಗುಡವನ್ನು ಮರೆಯಲು ರೋಗಿಗಳ ಆರೈಕೆಯಲ್ಲಿ ತೊಡಗುತ್ತಾನೆ ಮತ್ತು ಸೋಂಕು ತಗುಲಿ ಜೀವತ್ಯಾಗ ಮಾಡುತ್ತಾನೆ; ಅಗಲಿದ ಪ್ರಿಯತಮೆಯನ್ನು ಕೂಡುವುದಕ್ಕಾಗಿ, ಲಾಕ್‍ಡೌನ್ ಆಗಿರುವ ಶಹರದಿಂದ ಹೇಗಾದರೂ ತಪ್ಪಿಸಿಕೊಂಡು ಹೋಗಲು ಹರಸಾಹಸ ಪಡುವ ಪತ್ರಕರ್ತ ರೋಂಬೆ, ಹಾಗೆ ಹೋಗುವ ಗಳಿಗೆ ಕೂಡಿಬಂದಾಗ, ಅದನ್ನು ಕೈಬಿಟ್ಟು ರೋಗಿಗಳ ಶುಶ್ರೂಷೆಗೆ ನಿಲ್ಲುತ್ತಾನೆ. ಜೀವನ್ಮರಣ ಸಂಘರ್ಷದಲ್ಲಿ ಜನ ತೊಳಲಾಡುತ್ತಿರುವಾಗ, ತಾನು ಪ್ರಿಯತಮೆಯನ್ನು ರಮಿಸುವುದು ಭೀಕರರೋಗವೆಂದು ಅವನಿಗೆ ಅನಿಸಿಬಿಡುತ್ತದೆ.

ಕಮೂ ‘ಪ್ಲೇಗ್’ ಬರೆವ ಕಾಲಕ್ಕೆ (1947) ನಾಜಿಗಳು ಜರ್ಮನಿಯಲ್ಲಿ ಮಾಡಿದ ಯಹೂದಿ ಹತ್ಯಾಕಾಂಡ ಮತ್ತು ಎರಡನೇ ಮಹಾಯುದ್ಧಗಳು ಮುಗಿದಿರುತ್ತವೆ. ಯುರೋಪಿನ ದೇಶಗಳು ಸತ್ತವರ ಮತ್ತು ಉಧ್ವಸ್ತಗೊಂಡ ಕುಟುಂಬಗಳ ವಿಷಾದಕರ ಎಣಿಕೆಯಲ್ಲಿ ಮುಳುಗಿರುತ್ತವೆ.ಅದೊಂದು ತರಹ ಕುರುಕ್ಷೇತ್ರದಲ್ಲಿ ವೃದ್ಧ ತಂದೆ-ತಾಯಿ, ಮಕ್ಕಳು ಹಾಗೂ ಮಹಿಳೆಯರು, ತಮ್ಮ ಆಪ್ತರ ಕಳೇಬರಗಳನ್ನು ಹುಡುಕಾಡುವ ಸನ್ನಿವೇಶ. ಅಂತಹ ಹೊತ್ತಲ್ಲಿ ‘ನನ್ನ ಅಪ್ಪನಂತಹ ಸಂವೇದನಾಶೂನ್ಯ ವ್ಯಕ್ತಿ ಕುಟುಂಬದಲ್ಲಿದ್ದರೆ ಆ ಕುಟುಂಬಕ್ಕಷ್ಟೆ ಹಾನಿಯಾಗುತ್ತದೆ. ಆದರೆ ಈ ಸಂವೇದನಾಶೂನ್ಯತೆ ಸಮಾಜದ ಅಥವಾ ಪ್ರಭುತ್ವದ ಸಹಜ ಸ್ವಭಾವವಾಗಿಬಿಟ್ಟರೆ ದೊಡ್ಡ ದುರಂತವಾಗುತ್ತದೆ’ ಎಂದು ತಾಹು ಸೂಚಿಸುತ್ತಾನೆ. ಕೆಲವು ಕಾಲ ಜನಪರ ಚಳವಳಿಗಳಲ್ಲಿದ್ದ ಆತ, ದುರ್ಬಲರ ಪರವಾಗಿ ನಿಲ್ಲುವ ಉದ್ದೇಶದಲ್ಲಿ ಚಳವಳಿಗಳು ಮಾಡುವ ಕೊಲೆಯೂ ಸ್ವೀಕಾರಾರ್ಹವಲ್ಲ ಎಂದೂ ಪ್ರತಿಪಾದಿಸುತ್ತಾನೆ.

ಒಂದು ದೇಶವನ್ನು ಅದರಿಚ್ಛೆಗೆ ವಿರುದ್ಧವಾಗಿ ಆಕ್ರಮಿಸಿಕೊಳ್ಳುವ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ವ್ಯವಸ್ಥೆಗಳು ಕೂಡ ರೋಗಗಳೇ (‘ಪ್ಲೇಗ್’ ಕಥೆ ನಡೆಯುವುದು ಫ್ರಾನ್ಸಿನ ವಸಾಹತುವಾಗಿದ್ದ ಅಲ್ಜೀರಿಯಾದ ಓರಾನ್ ಪಟ್ಟಣದಲ್ಲಿ); ಲಾಭವೇ ಪರಮಮೌಲ್ಯವಾದ ಬಂಡವಾಳವಾದ, ಮತ್ತೊಬ್ಬರನ್ನು ದ್ವೇಷಿಸುವ ಮೂಲಕವೇ ದೇಶಕಟ್ಟುವ ರಾಷ್ಟ್ರವಾದ, ತನ್ನ ಧರ್ಮ ಜನಾಂಗ ಜಾತಿಗಳೇ ಶ್ರೇಷ್ಠವೆಂಬ ಸಿದ್ಧಾಂತಗಳು, ಕಪ್ಪುಜನರು ಕೀಳೆಂಬ ವರ್ಣಭೇದನೀತಿ, ನಾನು ಹೆಣ್ಣಿಗಿಂತ ಮೇಲೆ ಗಂಡುವಾದ-ಎಲ್ಲವೂ ಬೇರೆಬೇರೆ ನಮೂನೆಯ ರೋಗಗಳೇ. ಯಾರಾದರೂ ‘ನಾವು ಉಳಿದವರಿಗಿಂತ ಶ್ರೇಷ್ಠರು’ ಎಂದು ಭಾವಿಸಿದೊಡನೆ ಕ್ರೌರ್ಯಕ್ಕೆ ಬೇಕಾದ ಮನಃಸ್ಥಿತಿ ಮೊಳೆಯುತ್ತದೆ. ತಾವು ಮೌಲ್ಯಾದರ್ಶ ಎಂದು ಭಾವಿಸಿರುವುದು ಮತ್ತೊಬ್ಬರ ದೃಷ್ಟಿಯಲ್ಲಿ ರೋಗವಾಗಿದೆಯೆಂದು ಅವರಿಗೆ ಅರ್ಥವೇ ಆಗುವುದಿಲ್ಲ. ಹೀಗಾಗಿ ಶತಮಾನಕ್ಕೊಮ್ಮೆ ಬಂದುಹೋಗುವ ಕಾಯಿಲೆಗಳ ವಿರುದ್ಧ ಹೋರಾಡಿ ಜಯಿಸುವುದು ಸುಲಭ. ಸಂಸ್ಕೃತಿ, ಧರ್ಮರಕ್ಷಣೆ, ದೇಶಭಕ್ತಿ, ಶೌರ್ಯ, ಆದರ್ಶಗಳ ಕವಚಗಳಲ್ಲಿ ಅಡಗಿಕೊಂಡು, ನಮ್ಮ ಜತೆಯಲ್ಲೇ ಇರುವ ಸಾಮಾಜಿಕ ರಾಜಕೀಯ ಧಾರ್ಮಿಕ ರೋಗಗಳು ಹೆಚ್ಚು ಘಾತಕವಾದವು ಎಂದೆಲ್ಲ ತಾಹುವಿನ ಚಿಂತನೆ ಹೊಳೆಸುತ್ತದೆ.

ಹಿಂದೊಮ್ಮೆ ಬಂಗಾಳ ಕೊಲ್ಲಿಯಲ್ಲೆದ್ದ ಚಂಡಮಾರುತವು, ಆಂಧ್ರದ ಕರಾವಳಿಯ ಊರುಗಳನ್ನು ಧ್ವಂಸಗೈದಿತು. ಆಗ ನಗರ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಒಂದು ಮರಗುದುರೆಗೆ ಏನೂ ಆಗಿರಲಿಲ್ಲವಂತೆ. (ಓರಾನ್ ನಗರದ ವರ್ಣನೆಯೂ ಎರಡು ಕಂಚಿನ ಸಿಂಹಪ್ರತಿಮೆಗಳಿಂದ ಶುರುವಾಗುತ್ತದೆ.) ಆ ಮರಗುದುರೆಯನ್ನು ಜನರ ನೋವಿಗೆ ಸ್ಪಂದಿಸದ ಅಧಿಕಾರ ವ್ಯವಸ್ಥೆಯ ರೂಪಕವನ್ನಾಗಿ ಪರಿಭಾವಿಸಿದ ನಗ್ನಮುನಿ, ‘ಕೊಯ್ಯಂ ಗುರ್‍ರಂ’ ಖಂಡಕಾವ್ಯ ರಚಿಸಿದರು. ಚಂಡಮಾರುತ, ಪ್ರವಾಹ, ಭೂಕಂಪ, ಸಾಂಕ್ರಾಮಿಕ ರೋಗಗಳಂತಹ ವಿಕೋಪಗಳು ಮತ್ತು ನಾಡನಾಳುವ ಮಂದಿ ಹುಟ್ಟುಹಾಕುವ ಯುದ್ಧಗಳು, ಸಮಾಜದಲ್ಲಿ ವಿಚಿತ್ರ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತವೆ. ಈ ಬಿಕ್ಕಟ್ಟುಗಳು ಮನುಷ್ಯರ ಆಂತರ್ಯದಲ್ಲಿ ಸುಪ್ತವಾಗಿರುವ ಪ್ರೀತಿ, ವಿಶ್ವಾಸ, ಕರುಣೆ, ಮಾನವತೆಗಳನ್ನು ಉದ್ದೀಪಿಸುತ್ತವೆ; ಜತೆಗೆ ಅವರೊಳಗಿನ ಸಣ್ಣತನ, ದ್ವೇಷ, ದುಷ್ಟತನ, ಹಿಂಸಾಪ್ರವೃತ್ತಿಗಳನ್ನೂ ಹೊರಚೆಲ್ಲುತ್ತವೆ.

ನೈಸರ್ಗಿಕ ವಿಕೋಪ ಮತ್ತು ಸಾಂಕ್ರಾಮಿಕ ಬೇನೆಗಳು, ಕೆಲವೊಮ್ಮೆ ಮನುಷ್ಯರ ಹಿಡಿತದಾಚೆಗಿನವು, ದಿಟ. ನಾವು ಅವನ್ನು ಮಾತ್ರ ದೂಷಿಸುತ್ತಿರುತ್ತೇವೆ. ಅವು ಎರಗಿದಾಗ ಅವನ್ನು ಎದುರಿಸುವ ವ್ಯವಸ್ಥೆ ಮತ್ತು ಮಿಡಿವ ಸಮಾಜ ಇದ್ದಿದ್ದರೆ ಪರಿಣಾಮ ದಾರುಣವಾಗುತ್ತಿರಲಿಲ್ಲ ಎಂಬುದನ್ನು ಮರೆಯುತ್ತೇವೆ. ವ್ಯಕ್ತಿಯ ಅಥವಾ ವ್ಯವಸ್ಥೆಯ ಇತಿಮಿತಿಗಳು ಶಾಂತಿಕಾಲದಲ್ಲಿ ಅಲ್ಲ, ತುರ್ತು ಸನ್ನಿವೇಶಗಳಲ್ಲಿ ಹೆಚ್ಚು ನಿಚ್ಚಳವಾಗಿ ಪ್ರಕಟವಾಗುತ್ತವೆ. ಹೀಗಾಗಿ, ವಿಪತ್ತುಗಳು ಸಮಾಜದ ದೋಷಗಳನ್ನು ಕಾಣಿಸುವ ಕನ್ನಡಿಗಳೂ ಚರಿತ್ರೆ ಕಲಿಸುವ ಪಾಠಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ತಾಹು-ರಿಯೂ ಮಾತುಕತೆಯು, ದುರಂತ ಸನ್ನಿವೇಶದಲ್ಲಿ ಅರಳುವ ಮನುಷ್ಯತ್ವದ ಪ್ರತೀಕದಂತೆ ತೋರುತ್ತದೆ.

ಆಲ್ಬರ್ಟ್‌ ಕಮೂ
ಆಲ್ಬರ್ಟ್‌ ಕಮೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT