ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಯು ಆರ್ ಗ್ರೇಟ್...

Last Updated 15 ಜೂನ್ 2019, 13:32 IST
ಅಕ್ಷರ ಗಾತ್ರ

ಮಹಿಳೆಯರು ಗರ್ಭ ಧರಿಸಿದ ಮೊದಲ ದಿನದಿಂದ ಹೆರಿಗೆಯ ದಿನದವರೆಗೂ ಪ್ರತಿದಿನ ಗರ್ಭದಲ್ಲಿರುವ ತನ್ನ ಮಗುವಿನ ಮೊಗವನ್ನು ಕನಸಲ್ಲಿ ಕಾಣುವುದು ಸಾಮಾನ್ಯ. ಅಮ್ಮ ತನ್ನ ಶಿಶುವನ್ನು ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿದರೆ, ಅಪ್ಪ ಶಿಶುವನ್ನು ಹೊತ್ತ ಹೆಂಡತಿಯನ್ನು ಮತ್ತು ಮಗುವನ್ನೂ ಪೊರೆಯುತ್ತಾನೆ. ಪ್ರತಿ ಪುರುಷರಿಗೆ ತನ್ನ ಹೆಂಡತಿ ಗರ್ಭ ಧರಿಸಿದ್ದಾಳೆ ಎಂಬ ಸಿಹಿಸುದ್ದಿ ಕಿವಿಗೆ ಬಿದ್ದ ಕ್ಷಣದಿಂದ ‘ಅಪ್ಪ’ ಎನ್ನುವ ಜವಾಬ್ದಾರಿಯುತ ಸಂಬಂಧ ಆತನನ್ನು ಪೂರ್ಣವಾಗಿ ಆವರಿಸಿ ಬಿಡುತ್ತದೆ. ಅಂದಿನಿಂದಲೇ ಮಗುವಿನ ಭವಿಷ್ಯದ ಬಗ್ಗೆ ಅಪ್ಪ ನೂರೆಂಟು ಕನಸುಗಳನ್ನು ಹೊಸೆಯುತ್ತಾನೆ.

ಮಕ್ಕಳ ಮನೋವಿಜ್ಞಾನದ ಪ್ರವರ್ತಕರಾದ ಎರಿಕ್ ಎರಿಕ್ಸನ್, ‘ತಂದೆಯ ಪ್ರೀತಿ ಮತ್ತು ತಾಯಿಯ ಪ್ರೀತಿ ಗುಣಾತ್ಮಕವಾಗಿ ಭಿನ್ನವಾಗಿದೆ. ತಂದೆ ಹೆಚ್ಚು ಅಪಾಯಕಾರಿಯಾಗಿ ಪ್ರೀತಿಸುತ್ತಾರೆ. ಏಕೆಂದರೆ ತಂದೆಯ ಪ್ರೀತಿಯು ತಾಯಿಯ ಪ್ರೀತಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಹಾಗೂ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪಿತೃತ್ವ ಸಂಬಂಧ ವಿಶಿಷ್ಟ ಪರಿಣಾಮ ಬೀರುತ್ತದೆ’ ಎಂದು ಪ್ರತಿಪಾದಿಸುತ್ತಾರೆ.

ಮಕ್ಕಳು ತಮ್ಮ ಭವಿಷ್ಯವನ್ನು ಕನಸುಗಳಲ್ಲಿ ಕಂಡರೇ ಅಪ್ಪನಾದವನು ಮಕ್ಕಳ ಕನಸುಗಳನ್ನು ಜವಾಬ್ದಾರಿಯುತವಾಗಿ ತನ್ನ ಹೆಗಲ ಮೇಲೆ ಹೊತ್ತು ಆ ಕನಸುಗಳನ್ನು ನನಸು ಮಾಡಲು ಪ್ರತಿನಿತ್ಯ ಕಷ್ಟಪಡುತ್ತಾನೆ. ಪ್ರತಿಕ್ಷಣವೂ ತ್ಯಾಗಮಯಿಯಾಗಿರುತ್ತಾನೆ. ದುಡಿಮೆಗಾಗಿ ಪ್ರತಿನಿತ್ಯ ಬೆಳಿಗ್ಗೆ ಮಕ್ಕಳು ನಿದ್ರೆಯಿಂದ ಎದ್ದೇಳುವ ಮೊದಲೇ ಮನೆ ಬಿಡುವವ, ಮರಳಿ ಮನೆ ಸೇರುವುದು ಮಕ್ಕಳು ಮಲಗಿದಾಗಲೇ. ಸಂಸಾರದಲ್ಲಿ ಬಡತನವಿದ್ದರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವವನು ತಂದೆ. ತನ್ನ ಖುಷಿಯನ್ನು ಮಕ್ಕಳ ಉತ್ತಮವಾದ ಭವಿಷ್ಯದಲ್ಲಿ ಕಾಣಲು ಬಯಸುತ್ತಾನೆ.

ಭಾವನೆಗಳಿಲ್ಲದ ಮನುಷ್ಯ-ಮನುಷ್ಯನೇ ಅಲ್ಲ ಎನ್ನುತ್ತೇವೆ. ಆದರೇ ಅಪ್ಪ ತನ್ನೊಳಗಿನ ಭಾವನೆಗಳನ್ನು ಯಾವಾಗಲೂ ಮುಚ್ಚಿಟ್ಟು ಕೊಂಡಿರುತ್ತಾನೆ. ಮುಖದಲ್ಲಿ ತೋರಿಸದಿದ್ದರೂ ಅತಿಯಾದ ಕಾಳಜಿ ಆತನ ಮನಸಲ್ಲಿ ಸದಾ ಹಸಿರಾಗಿರುತ್ತದೆ. ಮಕ್ಕಳು ಜೀವನದಲ್ಲಿ ತಪ್ಪು ದಾರಿ ತುಳಿದಾಗ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾಗ ಮತ್ತು ಸುತ್ತಲಿನ ಸಮಾಜಕ್ಕೆ ಒಳ್ಳೆಯ ಮಕ್ಕಳಾಗದಿದ್ದಾಗ, ತಪ್ಪುಗಳನ್ನು ತಿದ್ದಿ ಸಮಾಜದಲ್ಲಿ ಒಳ್ಳೆಯ ಗೌರವನ್ವಿತ ವ್ಯಕ್ತಿಗಳನ್ನಾಗಿ ಮಾಡುವವನು ತಂದೆ ಮಾತ್ರ. ಅಪ್ಪ ಉಡುವ ಬಟ್ಟೆಗಳು ಹೆಚ್ಚೆಂದರೇ ನಾಲ್ಕು ಜೊತೆ ಇರುತ್ತವೆ. ಅವರ ಬನಿಯನ್‌ನಲ್ಲಿ ಜೇನಿನ ಗೂಡಿನಂತೆ ತೂತುಗಳು ಹೆಚ್ಚಾದರೂ ಯಾವಾಗಲೂ ನಮಗೆ ಬೇಡ ಮಕ್ಕಳಿಗೆ ತೆಗೆದುಕೊಳ್ಳೋಣ ಎನ್ನುವ ಶ್ರೀಮಂತ ಮನಸ್ಸು ಧಾರಾಳವಾಗಿರುತ್ತದೆ.

ಮೊದಲೆಲ್ಲ ಅಪ್ಪ ಎಂದರೇ ಕೋಪಿಷ್ಟ, ಸಿಡುಕ, ಶಿಸ್ತಿನಿಂದ ಜೀವನದ ಪಾಠ ಕಲಿಸುವವ ಎಂದಾಗಿತ್ತು. ಆದರೇ ಈಗ ಹಾಗಿಲ್ಲ; ಮನೆಯ ಅಣ್ಣ, ಅಪ್ಪ, ಅಜ್ಜಿ, ಅಜ್ಜ, ಅಮ್ಮರಂತೆ ಮಕ್ಕಳಿಗೆ ರೆಡಿ ಮಾಡಿ ಶಾಲೆಗೆ ಕಳುಹಿಸುವುದರ ಜೊತೆಗೆ ಮನೆಯವರೆಲ್ಲರಿಗೂ ಅಡುಗೆ ಮಾಡಿ ಬಡಿಸುವವರೆಗೂ ಅಪ್ಪ ಬದಲಾಗಿದ್ದಾನೆ. ತಂದೆಯಂದಿರು ಕೆಲಸದ ನಿಮಿತ್ತ ಯಾವಾಗಲು ಮನೆಯಿಂದ ಹೊರಗಡೆ ಹೋಗುತ್ತಾರೆ.ತನಗೆ ಹಸಿವಿದ್ದರು ತಾನು ತಿನ್ನದೇ ಸಿಕ್ಕ ಹಣ್ಣು-ಸಿಹಿತಿನಿಸುಗಳನ್ನು ಮಕ್ಕಳಿಗಾಗಿ, ಮನೆಗೆ ಎಲ್ಲವನ್ನು ಕೊಂಡು ಬರುತ್ತಾನೆ. ಸುಖ ಸಂಸಾರಕ್ಕಾಗಿ ಹಬ್ಬ-ಆಚರಣೆಗಳಲ್ಲಿ ಪಾಲ್ಗೊಳ್ಳದೇ ಪ್ರತಿದಿನ ದುಡಿಯುತ್ತಾನೆ.

ಅಪ್ಪ ಕೇವಲ ಅಪ್ಪನಾಗಿರದೇ ಮಕ್ಕಳಿಗೆ ಒಳ್ಳೆಯ ಗೆಳೆಯನಾಗಿ, ಗುರಿಮುಟ್ಟಲು ಉತ್ಸುಹಕನಾಗಿ, ದಾರಿದೀಪವಾಗಿ, ಭವಿಷ್ಯ ಬೆಳಗಿಸುವ ದೇವರಾಗಿ ಮತ್ತು ಕೊನೆಗೆ ವೃದ್ಧಾಪ್ಯದಲ್ಲಿ ತನ್ನ ಮಕ್ಕಳಿಗೆ ತಾನೇ ಮಗುವಾಗಿ ಬಿಡುತ್ತಾನೆ. ಮಕ್ಕಳ ಬಗ್ಗೆ ತನ್ನ ಹೃದಯದಲ್ಲಿ ಅಪಾರವಾದ ಆಸೆ ಆಕಾಂಕ್ಷೆಗಳನ್ನು ಬೆಟ್ಟದಷ್ಟು ಇಟ್ಟುಕೊಂಡು ತನ್ನ ನೋವು, ಸಂಕಷ್ಟಗಳನ್ನು ಮಕ್ಕಳ ಮುಂದೆ ಹೇಳದೆ ಎಲ್ಲ ನೋವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಹೊರಗಡೆ ನಗುತ್ತಾನೆ. ಮಕ್ಕಳ ಭವಿಷ್ಯದ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತ ನೋವಿನ ಸಮಯ, ಆಳ ನಮಗೆ ತಿಳಿಯುವುದೇ ಇಲ್ಲ. ಅಪ್ಪ ಯು ಆರ್ ಗ್ರೇಟ್...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT