ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಳುಗಾಡಿನ ಹಡಗು’ಗಳ ಪುಷ್ಕರ ಮೇಳ

Last Updated 24 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ದೀ ಪಾವಳಿ ಆಗಮಿಸುತ್ತಿದ್ದಂತೆ ಆವರೆಗೆ ದಟ್ಟ ಮೋಡಗಳ ಮುಸುಕಿನಿಂದ ಮಂಕಾಗಿದ್ದ ಆಕಾಶರಾಜ ಶುಭ್ರಗೊಂಡು ತನ್ನ ಮೆಚ್ಚಿನ ನೀಲವರ್ಣದಿಂದ ಕಂಗೊಳಿಸಲಾರಂಭಿಸುತ್ತಾನೆ. ಚಳಿ, ಮಳೆಯೊಂದಿಗೆ ಕೃಷಿ ಕಾಯಕದಲ್ಲಿ ಬಳಲಿದ ರೈತರು ಸೊಂಪಾದ ಬೆಳೆಗಳನ್ನು ನೋಡುತ್ತಾ ಉತ್ಸಾಹಭರಿತರಾಗುತ್ತಾರೆ. ಕಾರ್ತಿಕ ಮಾಸ ಬರುತ್ತಿದ್ದಂತೆ ಹಬ್ಬ, ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ. ಜಾತ್ರೆಗಳಿಗೆ ರೈತರು ಒಂದೋ ದೇವರಿಗೆ ಹೊತ್ತಿದ್ದ ಹರಕೆಗಳನ್ನು ತೀರಿಸಲು ಇಲ್ಲವೇ ತಮ್ಮ ಜಾನುವಾರುಗಳ ವ್ಯಾಪಾರಕ್ಕೆ ಹೋಗುತ್ತಾರೆ.
ಛಾಯಾಗ್ರಹಣ ನನ್ನ ವೃತ್ತಿಯಾಗಿದ್ದರೂ ನನಗೆ ಅದೊಂದು ಉತ್ಸಾಹಭರಿತ ಹವ್ಯಾಸವಾಗಿದೆ. ಗ್ರಾಮೀಣ ಬದುಕು, ಸಂಸ್ಕೃತಿ, ಪರಂಪರೆಗಳ ಬಗ್ಗೆ ನನಗೆ ಹೆಚ್ಚು ಒಲವಿರುವುದರಿಂದ ಆ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಛಾಯಾಚಿತ್ರಗಳನ್ನು ತೆಗೆಯುತ್ತಿರುತ್ತೇನೆ. ಗ್ರಾಮಗಳಲ್ಲಿ ನಡೆಯುವ ಹಬ್ಬ, ಜಾತ್ರೆಗಳಲ್ಲಿ ತೆಗೆದ ಛಾಯಾಚಿತ್ರಗಳು ನನಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಟ್ಟಿವೆ.

ನಮ್ಮ ರಾಜ್ಯದಲ್ಲಿ ಜರುಗುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ ಜಾತ್ರೆ, ಶಿವಗಂಗೆ ಜಾತ್ರೆ, ಮೈಸೂರು ಜಿಲ್ಲೆಯ ಎಡತೊರೆ ಜಾತ್ರೆ, ಕೆ.ಆರ್‌.ನಗರದ ಚುಂಚನಕಟ್ಟೆ ಜಾತ್ರೆ, ಮಾಗಡಿ ರಂಗನಾಥನ ಜಾತ್ರೆ, ವಿಜಯಪುರದ ಸಿದ್ಧೇಶ್ವರ ಜಾತ್ರೆ, ಹಾಸನಾಂಬಾ ಜಾತ್ರೆಯಲ್ಲಿ ಸುತ್ತಿದ್ದೇನೆ. ವಿಶ್ವಪ್ರಸಿದ್ಧ ದಸರಾ ಉತ್ಸವ, ಪ್ರಮುಖವಾದ ಬಾದಾಮಿ, ಕೊಪ್ಪಳ, ಸವದತ್ತಿ ಜಾತ್ರೆಗಳಲ್ಲದೆ, ಮಹಾರಾಷ್ಟ್ರದ ಪಟ್ಟಣ ಕೊಡಲಿಯಲ್ಲಿ ನಡೆಯುವ ‘ಹಳದಿ ಹಬ್ಬ’, ತಮಿಳುನಾಡಿನ ಕುಲಶೇಖರಪಟ್ಣಂನ ‘ಮುತ್ತುರಾಮನ್‌ ದೇವಾಲಯ’ದಲ್ಲಿ ನಡೆಯುವ ದಸರಾ ಉತ್ಸವಗಳಲ್ಲಿ ಕೂಡಾ ಛಾಯಾಚಿತ್ರಗಳನ್ನು ತೆಗೆಯುವ ಭಾಗ್ಯ ನನ್ನದಾಗಿದೆ. ರಾಜಸ್ಥಾನದ ಪುಷ್ಕರದಲ್ಲಿ ನಡೆಯುವ ವಿಶ್ವಪ್ರಸಿದ್ಧ ‘ಒಂಟೆಗಳ ಜಾತ್ರೆ’ಯಲ್ಲಿಯೂ ಛಾಯಾಚಿತ್ರ ತೆಗೆಯಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಅದಕ್ಕೂ ಕಾಲ ಕೂಡಿಬಂದಿತು.

ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜಸ್ಥಾನದ ಐತಿಹಾಸಿಕ ನಗರ ಪುಷ್ಕರದಲ್ಲಿ, ಬೆಟ್ಟಗಳಿಂದ ಆವೃತವಾಗಿರುವ ವಿಶಾಲವಾದ ಬಯಲು ಪ್ರದೇಶದಲ್ಲಿ ಕಣ್ಣಿಗೆ ಕಾಣುವವರೆಗೂ ಬೀಡುಬಿಡುವ ಸಾವಿರಾರು ಒಂಟೆಗಳನ್ನು ನೋಡುವುದೇ ಒಂದು ರೋಚಕ ಅನುಭವ. ಸಾವಿರಾರು ಸಂಖ್ಯೆಯಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರವಾಸಿಗರನ್ನು ಈ ವರ್ಣರಂಜಿತ ಮೇಳವು ತನ್ನತ್ತ ಸೆಳೆಯುತ್ತದೆ.

ಹಲವಾರು ವರ್ಷಗಳ ಹಿಂದೆ ‘ರಾಜಸ್ಥಾನ ಪತ್ರಿಕಾ’ ದಿನಪತ್ರಿಕೆಯಲ್ಲಿ ಒಂಟೆಗಳ ಜಾತ್ರೆ ಪುಷ್ಕರ ಮೇಳದ ಬಗ್ಗೆ ಪ್ರಕಟವಾಗಿದ್ದ ಚಿತ್ರಲೇಖನ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಆ ವಿಶ್ವವಿಖ್ಯಾತ ಒಂಟೆಗಳ ವರ್ಣಮಯ ಜಾತ್ರೆಯಲ್ಲಿ ಛಾಯಾಚಿತ್ರ ತೆಗೆಯಬೇಕೆಂಬ ಅದಮ್ಯ ಬಯಕೆ ನನ್ನಲ್ಲಿ ಉಂಟಾಯಿತು. ನನ್ನ ಹಾಗೆ ಆಸಕ್ತಿ ಹೊಂದಿರುವ ಪ್ರವಾಸಿ ಛಾಯಾಗ್ರಾಹಕ ಮಿತ್ರರೊಂದಿಗೆ ‘ಪುಷ್ಕರ ಮೇಳ’ಕ್ಕೆ ಹೋಗಿಬರುವ ಪ್ರಸ್ತಾಪದೊಂದಿಗೆ ಚರ್ಚಿಸಿದೆ, ಅವರನ್ನು ಪುಸಲಾಯಿಸಿದೆ. ಆದರೆ ಯಾವೊಬ್ಬ ಛಾಯಾಗ್ರಾಹಕ ಮಿತ್ರರೂ ಆಸಕ್ತಿ ತೋರಿಸಲಿಲ್ಲ. ಆದರೆ ನನ್ನ ಮೈಮನಸ್ಸುಗಳಲ್ಲೆಲ್ಲಾ ‘ಪುಷ್ಕರ ಮೇಳ’ವೇ ತುಂಬಿಕೊಂಡಿತ್ತು. ಆದರೂ, ಸರಿಯಾಗಿ ಅಲ್ಲಿನ ಭಾಷೆ ತಿಳಿಯದ ಆ ಅಪರಿಚಿತ ಊರಿಗೆ, ಬೆಲೆಬಾಳುವ ಕ್ಯಾಮೆರಾದೊಂದಿಗೆ ಒಬ್ಬನೇ ಹೋಗಲು ಭಯವಾಯಿತು.

ಆಕಸ್ಮಿಕವಾಗಿ ನನ್ನ ಕಾರ್ ಗ್ಯಾರೇಜಿನ ಮಾಲೀಕ ಭರತ್ ಸಿಂಗ್ ರಾಜಸ್ಥಾನದವರೆಂದು ತಿಳಿದ ಕೂಡಲೇ ಅವರನ್ನು ‘ಪುಷ್ಕರ ಮೇಳ’ದ ಬಗ್ಗೆ ಕೇಳಿದೆ. ‘ನಾನು ಪುಷ್ಕರ್ ಸಮೀಪದ ಹಳ್ಳಿಯವನು’ ಎಂದು ಅವರು ಹೇಳಿದ್ದನ್ನು ಕೇಳಿ ನನಗೆ ಸ್ವರ್ಗವೇ ಕೈಗೆಟುಕಿದಷ್ಟು ಸಂತಸವಾಯಿತು. ತಕ್ಷಣವೇ, ‘ನಾನು ಪುಷ್ಕರ ಮೇಳಕ್ಕೆ ಛಾಯಾಚಿತ್ರ ತೆಗೆಯಲು ಹೋಗಬೇಕು. ನನಗೆ ಅಲ್ಲಿನ ಒಂದು ಒಳ್ಳೆಯ ಹೋಟೆಲಿನಲ್ಲಿ ಕೊಠಡಿ ಕಾಯ್ದಿರಿಸಬೇಕು’ ಎಂದು ಕೇಳಿಕೊಂಡೆ. ಅದಕ್ಕೆ ಅವರು, ‘ಅದಕ್ಕೇನಂತೆ ಸಾರ್! ನೀವು ಪುಷ್ಕರದಲ್ಲಿ ಎಷ್ಟು ದಿನ ಉಳಿದುಕೊಳ್ಳುತ್ತೀರಿ ಹೇಳಿ? ನಮ್ಮ ಹುಡುಗನದೇ ಒಂದು ಹೋಟೆಲ್ ಇದೆ. ನಿಮಗೆ ಅಲ್ಲಿ ಕೊಠಡಿ ಕಾಯ್ದಿರಿಸುವ ಜವಾಬ್ದಾರಿ ನನ್ನದು’ ಎಂದು ಭರವಸೆ ನೀಡಿದರು. ಅದನ್ನು ಕೇಳಿ ನನಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತನಿಸಿತು. ಅವರ ಆ ಮಾತು ನನ್ನಲ್ಲಿ ಮತ್ತಷ್ಟು ಉತ್ಸಾಹ ಮತ್ತು ಧೈರ್ಯವನ್ನು ತುಂಬಿತು.

ಇಂಟರ್ನೆಟ್‌ನಲ್ಲಿದ್ದ ‘ಪುಷ್ಕರ ಮೇಳ’ದ ಬಗೆಗಿನ ಮಾಹಿತಿ ಪ್ರಕಾರ, ಕಾರ್ತಿಕ ಮಾಸದ ಮೊದಲ ದಿನದಿಂದಲೇ ಪ್ರಾರಂಭವಾಗಿ, ಪೂರ್ಣಿಮೆಯಂದು ಸಮಾಪ್ತಿಯಾಗುವುದೆಂದು ತಿಳಿಯಿತು. ಸುಮಾರು ಎಂಟು ದಿನಗಳ ಕಾಲ ನಡೆಯುವ ಈ ಜಾತ್ರೆಯ ಮೊದಲ ಎರಡು ಹಾಗೂ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ, ಮಧ್ಯದ ನಾಲ್ಕು ದಿನಗಳಲ್ಲಿ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ, ಛಾಯಾಗ್ರಾಹಕರಿಗೆ ಮಧ್ಯದ ನಾಲ್ಕು ದಿನಗಳೇ ಪ್ರಶಸ್ತವಾದ ದಿನಗಳೆಂದು ತಿಳಿದುಬಂತು. ಮನೆಯವರು ಓಕೆ ಎನ್ನದೇ, ನಾನು ಎಲ್ಲಿಯೂ ಹೋಗಲು ಸಾಧ್ಯವಿರಲಿಲ್ಲ. ಸೂಕ್ತ ಸಮಯವನ್ನು ನೋಡಿ, ಮಡದಿ-ಮಕ್ಕಳ ಮುಂದೆ ನನ್ನ ಬಯಕೆಯನ್ನು ವಿನಯದಿಂದ ಬಿಚ್ಚಿಟ್ಟೆ. ನನ್ನ ಅದೃಷ್ಟ ಚೆನ್ನಾಗಿತ್ತು, ಅವರು ಒಪ್ಪಿದರು. ಅಂತಿಮವಾಗಿ, ‘ನೀವು ವಿಮಾನದಲ್ಲಿ ಜೈಪುರಕ್ಕೆ ಹೋಗಿ, ಅಲ್ಲಿಂದ ಅಜ್ಮೀರ್ ತನಕ ರೈಲಿನಲ್ಲಿ ಪ್ರಯಾಣಿಸಿ’ ಎಂದು ಸಲಹೆ ನೀಡಿದರಲ್ಲದೆ, ನನ್ನ ಪ್ರವಾಸದ ಮಾಹಿತಿ ಪಡೆದು, ವಿಮಾನ ಮತ್ತು ರೈಲಿನಲ್ಲಿ ಹೋಗಿ ಬರಲು ಟಿಕೆಟ್ ಕೂಡ ಕಾಯ್ದಿರಿಸಿದರು!

ನಿಗದಿಯಾದ ದಿನದಂದು ಬೆಂಗಳೂರಿನಿಂದ ವಿಮಾನ ಏರಿ, ಜೈಪುರದಲ್ಲಿ ಇಳಿದು, ಅಲ್ಲಿಂದ ಅಜ್ಮೀರಕ್ಕೆ ರೈಲಿನಲ್ಲಿ ಪ್ರಯಾಣಿಸಿ, ಮತ್ತೆ ಅಲ್ಲಿಂದ ಸ್ಥಳೀಯ ಬಸ್ಸಿನಲ್ಲಿ ನನ್ನ ಕನಸಿನ ಪುಷ್ಕರವನ್ನು ತಲುಪಿಯೇ ಬಿಟ್ಟೆ! ಕಾಯ್ದಿರಿಸಲಾಗಿದ್ದ ಲಾಡ್ಜಿನಲ್ಲಿ ಸಾಮಾನುಗಳನ್ನು ಇಟ್ಟು, ಫ್ರೆಷಪ್‌ ಆಗಿ, ಕ್ಯಾಮೆರಾ ಬ್ಯಾಗನ್ನು ಬೆನ್ನಿಗೇರಿಸಿಕೊಂಡು, ಜಾತ್ರೆಯ ಕಡೆಗೆ ಹೆಜ್ಜೆ ಹಾಕಿದೆ. ತುಸು ಆತಂಕದಿಂದಲೇ ಬೆಂಗಳೂರಿನಲ್ಲಿ ವಿಮಾನ ಹತ್ತಿದ ನನಗೆ, ನಿರಾಯಾಸವಾಗಿ ಪುಷ್ಕರವನ್ನು ತಲುಪಿದ್ದು ಎಲ್ಲಿಲ್ಲದ ಖುಷಿ ತಂದಿತ್ತು. ಎಲ್ಲಿ ಪುಷ್ಕರಕ್ಕೆ ತಡವಾಗಿ ತಲುಪಿ, ಛಾಯಾಚಿತ್ರ ತೆಗೆಯಲಾಗದೆ, ಒಂದು ದಿನ ಸಂಜೆ ವ್ಯರ್ಥವಾಗುವುದೋ ಎಂಬ ಆತಂಕದಿಂದ ಜಾತ್ರೆ ತಲುಪಿದ ನಾನು, ರವಿಯ ಹೊಂಬಣ್ಣದ ಬೆಳಕಿನಿಂದ ಮಿಂದೆದ್ದ ಜಾತ್ರೆಯ ವರ್ಣವೈಭವ ಕಂಡು ಪುಳಕಿತನಾದೆ! ಅಷ್ಟರಲ್ಲಾಗಲೇ ದೇಶ–ವಿದೇಶಗಳ ಹಲವಾರು ಛಾಯಾಗ್ರಾಹಕರು ಪೈಪೋಟಿಯಿಂದ ತಮಗಿಷ್ಟವಾದ ದೃಶ್ಯಗಳನ್ನು ಕ್ಲಿಕ್ಕಿಸುತ್ತಿದ್ದರು. ನನ್ನ ಪರಿಕಲ್ಪನೆಗಳಿಗೆ ಸರಿ ಕಂಡ ದೃಶ್ಯಗಳನ್ನು ನಾನೂ ಕ್ಲಿಕ್ಕಿಸತೊಡಗಿದೆ.

ವರ್ಣರಂಜಿತ ಉಡುಗೆ ಮತ್ತು ಆಭರಣಗಳಿಂದ ಅಲಂಕೃತಗೊಂಡ, ಸುಂದರವಾದ ಮತ್ತು ಬಲಿಷ್ಠ ಒಂಟೆಗಳು ಸೌಂದರ್ಯ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದವು. ವಿಶೇಷವಾಗಿ ಸಿಂಗರಿಸಿಕೊಂಡು ಅಲಂಕೃತವಾದ ಒಂಟೆಗಳ ಮೇಲೆ ಹಾಗೂ ಒಂಟೆ ಗಾಡಿಗಳಲ್ಲಿ ಕುಳಿತ ಪ್ರವಾಸಿಗರು ಜಾತ್ರೆಯನ್ನು ವೀಕ್ಷಿಸುತ್ತಾ ಆನಂದಿಸುತ್ತಿದ್ದರು. ರಾಜಸ್ಥಾನದ ಜನಪದ ನೃತ್ಯ ಕಲಾವಿದರು, ಸಂಗೀತಗಾರರು ಹಾಗೂ ದೊಂಬರಾಟದವರು ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ಪ್ರವಾಸಿಗರನ್ನು ರಂಜಿಸುತ್ತಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಒಂಟೆಗಳು ಇಲ್ಲಿ ಒಟ್ಟುಗೂಡುತ್ತವೆ. ಒಂಟೆಗಳಷ್ಟೇ ಅಲ್ಲದೆ, ರಾಜಸ್ಥಾನದ ವಿಶೇಷ ತಳಿಯ ಕುದುರೆಗಳು ಹಾಗೂ ಕೋಣಗಳು ಸಹ ಈ ಜಾತ್ರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಬರುತ್ತವೆ. ಅತಿ ಹೆಚ್ಚಿನ ಬೆಲೆಯ ಕುದುರೆಗಳನ್ನು ಹವಾನಿಯಂತ್ರಿತ ಟೆಂಟುಗಳಲ್ಲಿ ಇಡುತ್ತಾರೆ.

‘ಮರುಭೂಮಿಯ ಹಡಗು’ ಎಂದೇ ಖ್ಯಾತಿ ಹೊಂದಿದ ಒಂಟೆಯು ನಮಗೆ ಅಪರೂಪದ ಪ್ರಾಣಿಯಾಗಿದೆ; ರಾಜಸ್ಥಾನೀಯರಿಗೆ ಜೀವನದ ಆಧಾರವೇ ಆಗಿದೆ. ಆದ್ದರಿಂದಲೇ ಅವರು ಅವನ್ನು ವಿಶೇಷ ಪ್ರೀತಿಯಿಂದ ಸಾಕುತ್ತಾರೆ; ಬಹು ಬಗೆಯಾಗಿ ಅಲಂಕರಿಸಿ ಖುಷಿ ಪಡುತ್ತಾರೆ, ಪ್ರವಾಸಿಗರಿಗೂ ಆನಂದವಾಗುವಂತೆ ಮಾಡುತ್ತಾರೆ. ವಿದೇಶಿ ಮಹಿಳಾ ಪ್ರವಾಸಿಗಳಿಗಂತೂ ಒಂಟೆ ಸವಾರಿ ಬಹು ಚೇತೋಹಾರಿ ಮುದ ನೀಡುತ್ತದೆ. ಒಂಟೆ ಮಾಲೀಕರು ಕೆಲವರಿಗೆ ಒಂದಿಷ್ಟು ಹಣ ಗಳಿಕೆಗೂ ದಾರಿಯಾಗುತ್ತದೆ. ಸಂಗೀತ ವಾದ್ಯಗಳ ತಾಳ ನಾದ ಗತ್ತಿಗೆ ತಕ್ಕಂತೆ ಮಾಲೀಕ ನಡೆಸುವ ಒಂಟೆ ನೃತ್ಯಗಳಂತೂ ಅದ್ಭುತ ಮನರಂಜನೆ ನೀಡುತ್ತವೆ. ಆ ಫೋಟೊಗಳನ್ನು ತೆಗೆಯುವುದಕ್ಕೂ ಮುಗಿಬೀಳುತ್ತಾರೆ. ಹಳ್ಳಿಗಳಿಂದ ತಮ್ಮ ಒಂಟೆ ಮಂದೆಗಳೊಂದಿಗೆ ಸಂಜೆ-ಮುಸ್ಸಂಜೆ ಹೊಂಬಿಸಿಲಲ್ಲಿ ದೂಳೆಬ್ಬಿಸುತ್ತಾ ಬರುವ, ಹೋಗುವ ರೈತಾಪಿಗಳ ನೋಟಗಳನ್ನು ಕಲಾತ್ಮಕವಾಗಿ ಸೆರೆ ಹಿಡಿಯಲು ಪೈಪೋಟಿಯೇ ನಡೆಯುತ್ತಿರುತ್ತದೆ. ನಾನೂ ಕಾದು ನಿಂತು ಅಥವಾ ಇತರರು ಗಮನಿಸದ ದೃಶ್ಯಗಳನ್ನು ಹುಡುಕಿ ಹಲವು ಚಿತ್ರಗಳನ್ನು ಕ್ಲಿಕ್ಕಿಸಿ ಖುಷಿಗೊಂಡೆ. ಹಾಗೆ ನಾನು ಅಲ್ಲಿ ಸೆರೆ ಹಿಡಿದ ಕೆಲವು ವರ್ಣ ಛಾಯಾಚಿತ್ರಗಳು ಗ್ರೀಕ್, ಸೆರ್ಬಿಯಾ, ಧನುಬೇ, ಬ್ರಿಟನ್ ಮೊದಲಾದೆಡೆ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಸಂಪಾದಿಸಿವೆ. ಮತ್ತೆ ಬರುತ್ತಿರುವ ಪುಷ್ಕರ ಮೇಳದ ನೆನಪಿಗಾಗಿ ಆ ಹಿಗ್ಗನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ.

ಇಲ್ಲಿನ ಬ್ರಹ್ಮ ದೇವಾಲಯ ಹಾಗೂ ಸರೋವರದಿಂದ ಹೆಚ್ಚು ಪ್ರಸಿದ್ಧಿ ಪಡೆದಿರುವ ಪುಷ್ಕರ ನಗರವು ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲೊಂದಾಗಿದೆ. ಮಹಾಕವಿ ಕಾಳಿದಾಸನ ಅತ್ಯುತ್ಕೃಷ್ಟವೂ, ಶ್ರೇಷ್ಠವೂ ಆದ ಕಾವ್ಯ, ‘ಅಭಿಜ್ಞಾನ ಶಾಕುಂತಲ’ದಲ್ಲಿ ಪುಷ್ಕರ ಪಟ್ಟಣವನ್ನು ಹೊಗಳಿದ್ದಾನೆ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಅರಾವಳಿ ವಲಯದ ಮಧ್ಯದಲ್ಲಿರುವ ಹಾಗೂ ಮರುಭೂಮಿಯ ಅಂಚಿನಲ್ಲಿರುವ ಈ ಪುಟ್ಟ ಪಟ್ಟಣವು ಸುಂದರವಾದ ಪುಷ್ಕರ ಸರೋವರದ ದಂಡೆಯ ಮೇಲಿದೆ. ಈ ಪಟ್ಟಣವನ್ನು ಹೆಚ್ಚಾಗಿ ತೀರ್ಥ ರಾಜ್ -ಯಾತ್ರಾಸ್ಥಳಗಳ ರಾಜ ಎಂದು ಕರೆಯುತ್ತಾರೆ.

ಹಿಂದೂಗಳ ಐದು ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಪುಷ್ಕರದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ ಬ್ರಹ್ಮನ ದೇವಾಲಯವು ದೇಶದಲ್ಲಿ ಬ್ರಹ್ಮನಿಗಾಗಿ ಮೀಸಲಾದ ಪ್ರಸಿದ್ಧ ದೇವಾಲಯವಾಗಿದೆ. 52 ಘಾಟ್‌ಗಳನ್ನು ಹೊಂದಿರುವ ಈ ವಿಶಾಲ ಸರೋವರದ ದಂಡೆಯ ಮೇಲಿನ ದೇವಾಲಯಗಳಲ್ಲಿ ಪಠಿಸುವ ಸ್ತೋತ್ರಗಳು ಈ ಸರೋವರದಲ್ಲಿ ಪ್ರತಿಧ್ವನಿಸುತ್ತವೆ.

ಐತಿಹಾಸಿಕ ಮಹತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಈ ‘ಪುಷ್ಕರ ಮೇಳ’ವು ಪ್ರವಾಸಿಗರಿಗೆ ರಾಜಸ್ಥಾನದ ಜನರ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಜೀವನಶೈಲಿಯನ್ನು ಪರಿಚಯಿಸುವುದರೊಂದಿಗೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ.

ಜಿಲ್ಲಾಕೇಂದ್ರ ಅಜ್ಮೇರ್‌ದಿಂದ 11 ಕಿಲೊಮೀಟರ್ ದೂರದಲ್ಲಿರುವ ಪುಷ್ಕರ ಪಟ್ಟಣಕ್ಕೆ ಎಲ್ಲಾ ಕಡೆಗಳಿಂದಲೂ ಬಸ್ಸುಗಳ ವ್ಯವಸ್ಥೆಯಿದೆ. ದೆಹಲಿ, ಜೈಪುರಗಳಿಂದ ಜೋಧಪುರದ ಮೂಲಕ ಮರಳುಗಾಡಿನ ಜೈಸಲ್ಮೇರ್ ನಗರಕ್ಕೆ ಹೋಗುವ ಎಲ್ಲಾ ರೈಲುಗಳೂ ಅಜ್ಮೇರ್ ಮೂಲಕವೇ ಸಂಚರಿಸುತ್ತವೆ. ಪುಷ್ಕರದಿಂದ 150 ಕಿಲೊಮೀಟರ್ ದೂರವಿರುವ ಜೈಪುರ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಜೈಪುರದಿಂದಲೂ ಪುಷ್ಕರಕ್ಕೆ ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT