ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಂಧ | ದೆವ್ವವೆಂಬ ಭ್ರಮೆ

Last Updated 12 ಏಪ್ರಿಲ್ 2020, 4:16 IST
ಅಕ್ಷರ ಗಾತ್ರ

‘ನಿಮ್ಮ ಅಪ್ಪಯ್ಯ ಇಲ್ಲದಿದ್ದರೇನು? ತೋಟವನ್ನಂತೂ ಕಾಯ್ತಾನೇ ಇರ್ತಾರೆ. ದಿನಾ ಬೆಳಿಗ್ಗೆ ಎದ್ದು ನಾನು ನಮ್ಮ ಮನೆಯ ಟೆರೇಸಿನ ಮೇಲೆ ವಾಕಿಂಗ್ ಮಾಡುವಾಗ ನೋಡಿದ್ರೆ ಇಲ್ಲೇ ಬಿಳಿಬಟ್ಟೆ ಹಾಕಿಕೊಂಡು ಓಡಾಡ್ತಾ ಇರ್ತಾರೆ. ನಂಗಂತೂ ತುಂಬಾ ಭಯವಾಗುತ್ತದೆ. ಕೆಲವೊಮ್ಮೆ ರಾತ್ರಿ ಸಹ ಒಬ್ಬಳೇ ಇರಬೇಕಾಗುತ್ತದೆ. ಈ ಗಂಡಸರಿಗೆ ಹೇಳಿದರೆ ಇವೆಲ್ಲಾ ಎಲ್ಲಿ ಅರ್ಥ ಆಗುತ್ತದೆ? ನಿನಗೇನೋ ಭ್ರಮೆ ಎನ್ನುತ್ತಾರೆ. ನೀವು ಬರಲಿ, ಹೇಳೋಣ ಅಂತ ಕಾಯ್ತಿದ್ದೆ. ನಿಮ್ಮ ಪುರೋಹಿತರ್ಯಾರನ್ನಾದರೂ ಕೇಳಿ ಏನಾದರೂ ಶಾಂತಿಗೀಂತಿ ಮಾಡಿಸಿ. ಇಲ್ಲಾ ಅಂದ್ರೆ ನಮಗಿಲ್ಲಿ ಇರೊದೇ ಕಷ್ಟ...’

–ಊರಿನಲ್ಲಿರುವ ನಮ್ಮ ಪಕ್ಕದ ಮನೆಯಾಕೆ ಹೀಗೊಂದು ವಿಷಯ ಹೇಳಿದಾಗ ಕಕ್ಕಾಬಿಕ್ಕಿಯಾಗುವ ಸರದಿ ನನ್ನದಾಗಿತ್ತು. ಹಳ್ಳಿಯಲ್ಲಿ ಒಂಟಿಯಾಗಿ ವೃದ್ಧಾಪ್ಯ ಕಳೆಯಲು ಸಾಧ್ಯವಾಗದೆ ತನ್ನ ತೋಟ ಮಾರಿದ ಅಪ್ಪ ಪೇಟೆಯಲ್ಲಿ ತನಗೆ ಹೊತ್ತು ಹೋಗದೆಂದು ಪೇಟೆಯಂಚಿನಲ್ಲಿರುವ ಈ ಊರಿನಲ್ಲಿ ಮನೆ ಹಾಗೂ ಪುಟ್ಟ ಜಾಗವೊಂದನ್ನು ಖರೀದಿಸಿ ವಾಸವಾಗಿದ್ದರು. ಇರುವ ಪುಟ್ಟ ಜಾಗದಲ್ಲಿಯೇ ಬಗೆಬಗೆಯ ಹಣ್ಣುಹಂಪಲುಗಳ ಗಿಡಗಳನ್ನು ಬೆಳೆಸಿ ಎಲ್ಲರಿಗೂ ಹಂಚುತ್ತಿದ್ದರು.

ಆಕಸ್ಮಿಕವಾಗಿ ಅವರು ಮರಣಿಸಿದ್ದರಿಂದ ಮನೆ, ತೋಟ ಎಲ್ಲವೂ ಖಾಲಿಯಾಗಿ ಉಳಿದಿದ್ದವು. ವಾರಕ್ಕೊಮ್ಮೆ ನಮ್ಮಲ್ಲೇ ಯಾರಾದರೊಬ್ಬರು ಹೋಗಿ ತೋಟದ ದೇಖರೇಖಿ ನೋಡಿಕೊಂಡು ಮರಳುತ್ತಿದ್ದೆವು. ಈ ಸಲ ನಾನು ಹೋದಾಗ ತೋಟದಲ್ಲಿ ಹಣ್ಣು, ತರಕಾರಿ, ಫಲಗಳು ತುಂಬಿ ತುಳುಕಾಡುತ್ತಿದ್ದರೂ ಯಾವುದೊಂದೂ ಕಳುವಾಗಿಲ್ಲದ್ದನ್ನು ಗಮನಿಸಿದ್ದೆ. ಪಕ್ಕದ ಮನೆಯವರ ಮಾತು ಕೇಳಿಸಿಕೊಂಡ ಮೇಲೆ ಕಳುವಾಗದಿರುವುದಕ್ಕೆ ಕಾರಣ ತಿಳಿಯಿತು. ಅಪ್ಪಯ್ಯನ ಭೂತ ಅಲ್ಲೇ ಓಡಾಡುತ್ತಿದೆ ಎಂ ಮೇಲೆ ತೋಟಕ್ಕೆ ಕಾಲಿಡುವ ಧೈರ್ಯವನ್ನು ಯಾರು ಮಾಡಲು ಸಾಧ್ಯ?

ವೈಯಕ್ತಿಕವಾಗಿ ನನಗೆ ದೆವ್ವ, ಭೂತಗಳ ಬಗ್ಗೆ ನಂಬಿಕೆಯೇನೂ ಇರಲಿಲ್ಲ. ಪಕ್ಕದ ಮನೆಯಾಕೆ ಪ್ರಸ್ತಾಪಿಸಿದ ವಿಷಯ ನನ್ನನ್ನು ನೇರವಾಗಿ ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಯಿತು. ನಮ್ಮೂರಿನಲ್ಲಿ ಮೊದಲಿನಿಂದಲೂ ಹಾಗೆ. ದೆವ್ವ, ಭೂತಗಳ ಬಗ್ಗೆ ವಿಶೇಷವಾದ ನಂಬುಗೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಸಾಕು. ದೆವ್ವ ಬಿಡಿಸುವವರನ್ನು ಕರೆತರುತ್ತಿದ್ದರು. ಸಾಮಾನ್ಯವಾಗಿ ದೆವ್ವ ಬಿಡಿಸುವ ಕ್ರಿಯೆಯಲ್ಲಿ ಇಬ್ಬರು ವ್ಯಕ್ತಿಗಳು ಭಾಗವಹಿಸುತ್ತಿದ್ದರು. ಒಬ್ಬರು ಕವಡೆಯನ್ನು ಹಾಕಿ ನೋಟ ನೋಡುತ್ತಾ ಯಾವ ದೆವ್ವ? ಎಲ್ಲಿಂದ ತಪ್ಪಿಸಿಕೊಂಡು ಬಂದಿದೆ? ಎಂಬೆಲ್ಲ ವಿವರಗಳನ್ನು ಹೇಳುವವರಾದರೆ, ಇನ್ನೊಬ್ಬರು ಮೈಮೇಲೆ ದೆವ್ವವನ್ನು ಕರೆದುಕೊಳ್ಳುವವರು.

ಕವಡೆಯನ್ನಾಡಿಸಿ ದೆವ್ವದ ವಿಳಾಸ ಪತ್ತೆಯಾದ ಮೇಲೆ ದೆವ್ವ ಕರೆದುಕೊಳ್ಳುವ ವ್ಯಕ್ತಿ ತನ್ನೆದುರು ಒಂದು ಕಟ್ಟಿಗೆಯ ಕೊರಡನ್ನು ಇಟ್ಟುಕೊಂಡು ಅದರ ಮೇಲೆ ಬಾಳೆಲೆಯ ನಡುವೆ ಇರುವ ದಿಂಡನ್ನು ಇಟ್ಟು, ಬಾಯಲ್ಲಿ ಜೋರಾಗಿ ದೆವ್ವವನ್ನು ಕರೆಯುತ್ತಾ ಚಾಕುವಿನಿಂದ ಅದನ್ನು ಸಮ ಅಂತರದ ತುಂಡುಗಳನ್ನಾಗಿ ಮಾಡುತ್ತಿದ್ದ.

ಹಾಗೆ ಆವಾಹನೆ ಮಾಡುವ ಮೊದಲು ತನ್ನ ಕುಟುಂಬದ ದೈವಗಳನ್ನು ತನ್ನ ಬೆಂಬಲಕ್ಕೆ ಕರೆದುಕೊಳ್ಳುತ್ತಿದ್ದ. ಅವನು ನಂಬಿದ ದೈವಗಳು ಅವನಿಗೆ ಅಭಯ ನೀಡಿದ ಮೇಲೆ ಗುಂಪಿನಿಂದ ತಪ್ಪಿಸಿಕೊಂಡು ಬಂದ ಈ ಕೀಟಲೆ ದೆವ್ವವನ್ನು ತನ್ನ ಮೇಲೆ ಆವಾಹಿಸಿಕೊಂಡು ಅದರ ಹೆಡೆಮುರಿ ಕಟ್ಟಿ ಅದರ ಸ್ಥಾನಕ್ಕೆ ಸೇರಿಸುತ್ತಿದ್ದ. ಅದು ತನ್ನ ಸ್ಥಾನವನ್ನು ಸೇರಿದೆಯೋ ಇಲ್ಲವೋ ಎಂಬುದನ್ನು ಮತ್ತೆ ಕವಡೆಯಾಡಿಸುವ ಮೂಲಕ ನೋಟಗಾರ ಪತ್ತೆ ಮಾಡಿ ಹೇಳುತ್ತಿದ್ದ.

ಅಷ್ಟರಲ್ಲಿ ಇದೆಲ್ಲವನ್ನು ಒಳಕೋಣೆಯಿಂದಲೇ ನೋಡುತ್ತಿದ್ದ ರೋಗಿಯ ಮೈ ಬೆವರಿ ಜ್ವರವೆಲ್ಲ ತಾತ್ಕಾಲಿಕವಾಗಿ ಇಳಿಯುತ್ತಿತ್ತು. ಮತ್ತೆ ಎಲ್ಲರಿಗೂ ಬಿಸಿ, ಬಿಸಿ ಚಹಾದ ಸಮಾರಾಧನೆ. ಅದರೊಂದಿಗೆ ಅವಲಕ್ಕಿ ಜಗಿಯುತ್ತಲೇ ಒಂದಿಷ್ಟು ಹಳೆಯ ದೆವ್ವಗಳ ಕಥೆಗಳ ವಿನಿಮಯ. ತಮ್ಮ ಮನೆದೈವಕ್ಕಿಂತ ಬಲಿಷ್ಠವಾದ ದೆವ್ವವನ್ನು ಮೈಮೇಲೆ ಕರೆದುಕೊಂಡು ತಮ್ಮ ಸಾಯದ ದೆವ್ವವನ್ನೇ (ಮನುಷ್ಯನೊಳಗಿನ ಅಂತಃಶಕ್ತಿ) ಕಳೆದುಕೊಂಡು ಹುಚ್ಚರಾದವರ ಕಥೆಯನ್ನೆಲ್ಲ ಸೇರಿದವರೆದುರು ರಂಜನೀಯವಾಗಿ ಹೇಳುತ್ತಿದ್ದರು. ಹೊರಡುವಾಗ ಅವರಿಬ್ಬರಿಗೂ ಮನೆಯಲ್ಲಿ ಬೆಳೆದ ಅಕ್ಕಿ ಮತ್ತು ತೆಂಗಿನಕಾಯಿಯನ್ನು ಸಂಭಾವನೆಯಾಗಿ ಕೊಟ್ಟರೆ ದೆವ್ವ ಬಿಡಿಸುವ ಕಾರ್ಯಕ್ರಮ ಮುಗಿದಂತೆ. ಒಳ್ಳೆಯ ಥ್ರಿಲ್ಲರ್ ಸಿನಿಮಾದ ಕಥೆಯಂತೆ ಕಾಣುವ ಇವೆಲ್ಲವು ಬಾಲ್ಯದಲ್ಲಿ ನಮ್ಮ ಎದುರೇ ನಡೆಯುತ್ತಿದ್ದವು.

ಸತ್ತವರೆಲ್ಲ ದೆವ್ವವಾಗಿ ನಮ್ಮೊಂದಿಗೆ ಬದುಕುವುದು ಮತ್ತು ಅವುಗಳೇನಾದರೂ ತುಡುಗು ಮಾಡಿದರೆ ತುಡುಗು ದನಗಳನ್ನು ಹಟ್ಟಿಗೆ ಕಟ್ಟುವಂತೆಯೇ ಅವುಗಳನ್ನು ನಮ್ಮೂರ ದೆವ್ವ ಕಟ್ಟುವ ಸ್ಥಳವಾದ ನಾಕಸ್ಥಳದಲ್ಲಿ ಮಂತ್ರಗಳ ಮೂಲಕ ಬಂಧಿಸಿಡುವುದು ಮತ್ತು ಅವುಗಳಿಗೆ ಆಹಾರವೆಂಬಂತೆ ವರ್ಷಕ್ಕೊಮ್ಮೆ ಕೋಳಿ, ಕುರಿ ಬಲಿ ನೀಡುವುದು ಎಲ್ಲವೂ ವರ್ಷಂಪ್ರತಿ ನಡೆದೇ ಇರುತ್ತಿತ್ತು.

ಇದಕ್ಕಿಂತ ಕುತೂಹಲದ ವಿಷಯವೆಂದರೆ ಸತ್ತ ವ್ಯಕ್ತಿಯೊಬ್ಬ ದೆವ್ವವಾಗಿ ರೂಪಾಂತರ ಹೊಂದುವ ಕ್ರಿಯೆ. ನಮ್ಮೂರಲ್ಲಿ ಯಾರೇ ಸತ್ತರೂ ಹನ್ನೆರಡನೆಯ ದಿನ ಅವರ ಕಾರ್ಯ ಮಾಡಿ, ಊರಿನವರಿಗೆ ನೆಂಟರಿಷ್ಟರಿಗೆ ಊಟ ಹಾಕಿ, ಸಂಜೆಯಾಗುವಾಗ ಸತ್ತ ವ್ಯಕ್ತಿಯನ್ನು ಆ ಮನೆಗೆ ದೆವ್ವವಾಗಿ ಕರೆಯುತ್ತಿದ್ದರು. ಅದಕ್ಕೆ ‘ಕೊಲೆ ಕರೆಯುವುದು’ ಎಂಬ ಹೆಸರಿತ್ತು. ತನಗೆ ಇಷ್ಟವಿರುವ ಮಕ್ಕಳ ಮೈಮೇಲೆ ಸತ್ತವರ ಕೊಲೆ ಬರುತ್ತಿತ್ತು. ಕೆಲವೊಮ್ಮೆ ತೀರ ಹತ್ತಿರದ ಸಂಬಂಧಿಕರ ಮೇಲೆಯೂ ಬರುವುದಿತ್ತು. ಹೀಗೆ ಬಂದ ಹಿರಿಯರು ಮನೆಯಲ್ಲಿ ಮಾಡಿದ ಕಾರ್ಯಗಳೆಲ್ಲವೂ ತನಗೆ ಸಮಾಧಾನ ತಂದಿದೆಯೆಂದೂ, ತಾನಿನ್ನು ಹಿರಿಯರ ಸ್ಥಾನದಲ್ಲಿ ನಿಂತು ಮನೆ ಮಂದಿಯನ್ನೆಲ್ಲ ರಕ್ಷಣೆ ಮಾಡುವೆನೆಂದೂ ಭರವಸೆ ನೀಡುತ್ತಿತ್ತು.

ಹಾಗೆಯೇ ಮನೆಯಲ್ಲಿ ಯಾರಿಗಾದರೂ ಮದುವೆಯಾಗದಿದ್ದರೆ ಅಥವಾ ದೈಹಿಕವಾಗಿ ದುರ್ಬಲರಿದ್ದರೆ ಅಂಥವರನ್ನೆಲ್ಲ ಸರಿಯಾಗಿ ನೋಡಿಕೊಳ್ಳುವಂತೆ ತಾಕೀತು ಕೂಡ ಮಾಡುತ್ತಿತ್ತು. ಎಲ್ಲರೂ ಅದರ ಮಾತಿಗೆ ಅಸ್ತು ಎಂದು ಹೇಳಿ ಪ್ರಸಾದ ಸ್ವೀಕರಿಸಿದ ನಂತರ ದೆವ್ವವು ತನ್ನ ಸ್ಥಾನವನ್ನು ಸೇರಿಕೊಳ್ಳುತ್ತಿತ್ತು.

ನಮ್ಮ ಪಕ್ಕದ ಮನೆಯಲ್ಲೇ ಇರುವ ನಾಗಪ್ಪಜ್ಜ ವಯೋಸಹಜವಾದ ಕಾಯಿಲೆಯಿಂದ ನರಳುತ್ತಿದ್ದ. ಅದ್ಯಾಕೋ ಮಲಗಿದಲ್ಲೇ ಆಗಿ ವರ್ಷಗಳು ಕಳೆದರೂ ಸಾವೆಂಬುದು ಅವನ ಬಳಿಗೆ ಸುಳಿಯಲಿಲ್ಲ. ಮೈಮೇಲೆಲ್ಲಾ ಹಾಸಿಗೆ ಹುಣ್ಣುಗಳಾಗಿ, ಕೀವು ಸೋರಿ ವಾಸನೆ ಶುರುವಾದ್ದರಿಂದ ಅವನನ್ನು ತೋಟದಲ್ಲಿ ಒಂದು ಚಪ್ಪರ ಮಾಡಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆಗೆಲ್ಲ ಆಸ್ಪತ್ರೆಗೆ ಸೇರಿಸುವ ಪರಿಪಾಟವಿನ್ನೂ ಬಂದಿರದ್ದರಿಂದ ಸಾವಿನಂಚಿನಲ್ಲಿರುವವರನ್ನು ನೋಡಿಕೊಳ್ಳಲಾಗದ ಸ್ಥಿತಿಯಲ್ಲಿ ಇಂತಹ ಏರ್ಪಾಡುಗಳನ್ನು ಮಾಡುತ್ತಿದ್ದರು. ಆದರೂ ಬೆಳೆದು ನಿಂತ ಐದು ಮಕ್ಕಳಿರುವ ನಾಗಪ್ಪಜ್ಜನನ್ನು ಹೀಗೆ ತೋಟದಲ್ಲಿಟ್ಟದ್ದು ಊರಿನವರ ಕೆಂಗಣ್ಣಿಗೆ ಗುರಿಯಾಗಿತ್ತು.

ಹೀಗೆ ತನ್ನ ಕೊನೆಯ ದಿನವನ್ನು ಮುಗಿಸಿ ಹೊರಟ ನಾಗಪ್ಪಜ್ಜ ಯಾರ ಮೈಮೇಲೆ ಬರುತ್ತಾನೆ ನೋಡಬೇಕೆಂಬ ಕುತೂಹಲ ಮಕ್ಕಳಾದ ನಮ್ಮನ್ನು ಕೂಡ ಆವರಿಸಿತ್ತು. ಅವನ ಕೊಲೆ ಕರೆಯುವ ದಿನ ಸ್ವಲ್ಪ ಹೆಚ್ಚೇ ಜನರು ಅಂಗಳದಲ್ಲಿ ಸೇರಿದ್ದರು. ನಾನೊಲ್ಲೆ, ನಾನೊಲ್ಲೆ ಎನ್ನುತ್ತಲೇ ಅವನ ಕೊನೆಯ ಮಗ ಅಂತೂ ಕೊಲೆಯನ್ನು ತನ್ನ ಮೇಲೆ ಕರೆದುಕೊಳ್ಳಲು ಒಪ್ಪಿದ. ಎಷ್ಟೇ ಹೇಳಿಕೆ ಮಾಡಿಕೊಂಡರೂ ನಾಗಪ್ಪಜ್ಜ ಮಾತ್ರ ಅವನ ಮೈಮೇಲೆ ಬರಲಿಲ್ಲ. ‘ಇದ್ದಾಗ ಮನೆಯ ಹೊರಗಿಟ್ಟು ಈಗ ಕರೆದರೆ ಬಂದಾರೆ ಹಿರಿಯರು?’ ಎಂದು ಬಂದವರೆಲ್ಲ ಆಡಿಕೊಂಡಿದ್ದರು.

ಮನೆಯಲ್ಲಿ ಅಮ್ಮನಿಗೆ ಈ ವಿಷಯ ತಿಳಿಸಿದಾಗ ಕೊಂಚ ವಿಚಾರವಾದಿಯಾಗಿದ್ದ ಅಮ್ಮ ಹಳ್ಳಿಯವರ ನಂಬಿಕೆಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸಿ ಹೇಳಿದ್ದಳು. ಅಪ್ಪನೋ, ಅಮ್ಮನೋ ಸತ್ತ ದುಃಖದಲ್ಲಿರುವವರಿಗೆ ಎಲ್ಲರೂ ಸುತ್ತ ಕುಳಿತು ಕೊಲೆ ಕರೆಯುವಾಗ ಮೈಮೇಲೆ ಆವೇಶ ಬರುವುದು ಸಹಜ. ಸತ್ತೋದ್ರೆ ಸಾಕು ಅನ್ನುವಂತಾದವರು ಸತ್ತರೆ ಯಾವ ದುಃಖ, ಆವೇಶಗಳೂ ಇಲ್ಲದಿರುವುದರಿಂದ ಮೈಮೇಲೆ ಬರುವುದೂ ಇಲ್ಲ; ಎಂಥದ್ದೂ ಇಲ್ಲ ಎಂದು. ಕೆಲವೊಮ್ಮೆ ನಮ್ಮ ಭ್ರಮೆಗಳು ದೆವ್ವವನ್ನು ಸೃಷ್ಟಿಸುತ್ತವೆ ಎಂದು ತನ್ನ ಅನುಭವವೊಂದನ್ನು ಹೇಳಿದಳು.

ನಮ್ಮ ತೋಟದ ಅಂಚಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬೆಳ್ಳಜ್ಜಿ ಅಮ್ಮನಿಗೆ ತೀರ ಆತ್ಮೀಯಳಾಗಿದ್ದಳು. ಯಕ್ಷಗಾನವೆಂದು ಊರೂರು ತಿರುಗುತ್ತಿದ್ದ ಅಪ್ಪ ಮನೆಯಲ್ಲಿಲ್ಲದಿದ್ದಾಗಲೆಲ್ಲ ಬೆಳ್ಳಜ್ಜಿ ನಮ್ಮ ಮನೆಯಲ್ಲಿಯೇ ಬಂದು ಮಲಗುತ್ತಿದ್ದಳಂತೆ. ಹೀಗಿರುವ ಬೆಳ್ಳಜ್ಜಿ ಅವಳಿಗಿರುವ ದಮ್ಮಿನ ಕಾಯಿಲೆ ಉಲ್ಬಣಿಸಿ, ಒಂದು ಚಳಿಗಾಲದಲ್ಲಿ ಸಾವನ್ನಪ್ಪಿದಳು. ಸುತ್ತಮುತ್ತಲಿನ ಮನೆಯವರು ಅವಳ ಶವಸಂಸ್ಕಾರವನ್ನು ಮುಗಿಸಿದರಾದರೂ ಸಂಬಂಧಿಕರು ಇರಲಿಲ್ಲವಾಗಿ ಯಾವ ಕಾರ್ಯವನ್ನೂ ಮಾಡಿರಲಿಲ್ಲ. ಎಲ್ಲರೂ ಅಮ್ಮನಿಗೆ, ‘ನೋಡಿ, ಬೆಳ್ಳಜ್ಜಿ ಅಲ್ಲೇ ಗುಡಿಸಲಿನಲ್ಲೇ ಇರುತ್ತಾಳೆ. ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೆಳ್ಳಜ್ಜಿ ಕೊಲೆ ನಿಮ್ಮ ಮೇಲೆಯೇ ಬರೋದು’ ಎಂದು ಹೆದರಿಸುತ್ತಿದ್ದರು. ಇದಕ್ಕೆಲ್ಲಾ ಸೊಪ್ಪು ಹಾಕದ ಅಮ್ಮ, ‘ಬಂದರೆ ಬರಲಿ. ನನ್ನೊಂದಿಗೆ ಅವಳನ್ನು ಇಟ್ಟುಕೊಂಡುಬಿಡುವೆ’ ಎಂದು ನಗುತ್ತಿದ್ದಳಂತೆ.

ಒಂದು ದಿನ ಬೆಳಗಿನ ಜಾವ ಅಮ್ಮ ಬಾವಿಯ ಬಳಿ ನೀರು ಸೇದುತ್ತಿರುವಾಗ ಬೆಳ್ಳಜ್ಜಿಯ ಗುಡಿಸಲಿನಿಂದ ಗೊಸ್ ಗೊಸ್‌... ಎಂಬ ಶಬ್ದ ಕೇಳಿಬರತೊಡಗಿತು. ಆ ಕ್ಷಣಕ್ಕೆ ಅಮ್ಮನಿಗೆ ಒಂದು ಬಗೆಯ ಭ್ರಮೆಯಾಗತೊಡಗಿತು. ಮತ್ತೊಮ್ಮೆ ಆಲಿಸಿದರೂ ದಮ್ಮಿನ ಕಾಯಿಲೆಯ ಬೆಳ್ಳಜ್ಜಿಯೇ ಉಸಿರಾಡಿದಂತೆ ಕೇಳತೊಡಗಿತು. ಆದರೂ, ಸತ್ಯವನ್ನು ಪರಿಶೀಲಿಸಿಯೇ ನೋಡೋಣವೆಂದು ಧೈರ್ಯ ಮಾಡಿ ಲಾಟೀನು ಹಿಡಿದು ಗುಡಿಸಲಿನ ಬಾಗಿಲು ದೂಡಿದರೆ ಮರಿಹಾಕಿದ ನಾಯಿಯೊಂದು ಅಲ್ಲಿ ಮಲಗಿತ್ತಂತೆ. ಮರಿಗಳು ಕೂಗುವ ಸದ್ದು ಅಮ್ಮನಿಗೆ ಬೆಳ್ಳಜ್ಜಿಯ ಉಸಿರಾಟದ ಸದ್ದಿನಂತೆ ಕೇಳಿತ್ತು. ತಾನು ಒಂದು ವೇಳೆ ಧೈರ್ಯ ಮಾಡಿ ಹೋಗಿ ನೋಡದಿದ್ದರೆ ಬೆಳ್ಳಜ್ಜಿಯ ದೆವ್ವವೇ ಇದೆಯೆಂಬ ಭ್ರಮೆಯಾಗುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದಳು.

ಈಗ ಪಕ್ಕದ ಮನೆಯಾಕೆ ಅಪ್ಪನ ಭೂತವನ್ನು ತಾನು ಸ್ವತಃ ನೋಡಿರುವುದಾಗಿಯೂ, ಅದಕ್ಕೇನಾದರೂ ಪರಿಹಾರ ಮಾಡುವಂತೆಯೂ ಕೇಳಿಕೊಂಡಾಗ ಇವೆಲ್ಲ ಕಥೆಗಳು ಮನಸ್ಸಿನಲ್ಲಿ ಹಾದುಹೋದವು. ಅಮ್ಮ ಹೇಳಿದಂತೆಯೇ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕೆಂದು ಬೆಳಗಿನ ಜಾವವೇ ಎದ್ದು ಅವರ ಮನೆಯ ಟೆರೇಸಿನ ಮೇಲೇರಿ ನಿಂತೆ. ಮಸುಕು ಬೆಳಕಿನಲ್ಲಿ ನಮ್ಮ ಮನೆಯ ತೋಟದಲ್ಲಿ ದೆವ್ವವೇನೂ ಕಾಣಿಸಲಿಲ್ಲ. ಅವರು ಹೇಳಿದಂತೆಯೇ ಟೆರೇಸಿನ ಮೇಲೆ ಶತಪಥ ಸುತ್ತತೊಡಗಿದೆ. ಇದ್ದಕ್ಕಿದ್ದಂತೆ ತೋಟದಲ್ಲಿ ಏನೋ ಬಿಳಿಯ ಆಕೃತಿ ಚಲಿಸಿದಂತೆ ಭಾಸವಾಗತೊಡಗಿತು. ಇನ್ನೂ ಜೋರಾಗಿ ಸುತ್ತಿದಂತೆ ಅದು ಚಲಿಸುವ ವೇಗವು ಹೆಚ್ಚಾಯಿತು. ಆಶ್ಚರ್ಯದಿಂದ ಹತ್ತಿರ ಬಂದು ಪರಿಶೀಲಿಸಿದಾಗ ಸತ್ಯದ ಅರಿವಾಯಿತು. ತೋಟದ ತುಂಬೆಲ್ಲಾ ಬೆಳೆದು ನಿಂತ ಬಾಳೆಗೊನೆಗಳು ಬಿಸಿಲಿನ ಝಳಕ್ಕೆ ಒಡೆದು ಹಾಳಾಗುತ್ತಿರುವುದರಿಂದ ಕಳೆದ ವಾರ ಬಂದ ಇವರು ಎಲ್ಲ ಗೊನೆಗಳಿಗೂ ಬಿಳಿಯ ಬಟ್ಟೆಗಳನ್ನು ಹೊದಿಸಿ ಹೋಗಿದ್ದರು. ಟೆರೇಸಿನ ಮೇಲೆ ವೇಗವಾಗಿ ನಡೆಯುತ್ತಾ ತೋಟದ ಕಡೆಗೆ ನೋಡಿದಾಗ ಬಿಳಿಯ ಹೊದಿಕೆಗಳೆಲ್ಲಾ ಚಲಿಸುವಂತೆ ಭಾಸವಾಗುತ್ತಿದ್ದವು. ದೆವ್ವದ ಭ್ರಮೆಯಲ್ಲಿರುವ ಅವರಿಗೆ ಬಿಳಿಬಟ್ಟೆ ಧರಿಸಿದ ಅಪ್ಪ ತೋಟದ ಸುತ್ತೆಲ್ಲ ಚಲಿಸುವಂತೆ ಕಂಡಿತ್ತು.

ಕಾರಣ ತಿಳಿದ ಮೇಲೆ ಪರಿಹಾರವೂ ಸುಲಭವಿತ್ತು. ಹಾಗಾಗಿ ಆ ದಿನ ಮಾಡಿದ ಮೊದಲ ಕೆಲಸವೆಂದರೆ ಬಾಳೆ ಗೊನೆಗಳಿಗೆ ಸುತ್ತಿದ್ದ ಬಿಳಿಯ ಬಟ್ಟೆಗಳನ್ನು ತೆಗೆದುಹಾಕಿದ್ದು. ಮನೆಯಿಂದ ಹೊರಡುವಾಗ ಅವರಿಗೆ ಧೈರ್ಯ ಬರಲೆಂದು ಹೇಳಿದೆ, ‘ನೀವು ಹೇಳಿದಂತೆ ಅದಕ್ಕೆಲ್ಲ ಪರಿಹಾರ ಮಾಡಿಸುತ್ತೇವೆ. ಇನ್ನು ಮುಂದೆ ಅಪ್ಪಯ್ಯನ ಭೂತ ನಿಮಗೆ ಕಾಣಿಸದು. ನೀವು ನಿರ್ಭೀತಿಯಿಂದ ಬೆಳಗಿನ ನಡಿಗೆಯನ್ನು ಪ್ರಾರಂಭಿಸಬಹುದು’. ಪಕ್ಕದ ಮನೆಯಾಕೆ ಖುಷಿಯಿಂದ ತಲೆಯಲ್ಲಾಡಿಸಿದಳು. ನಾನು ಅಲ್ಲಿಂದ ಮರಳಿದ ನಾಲ್ಕು ದಿನಗಳ ನಂತರ ನನಗೆ ಕರೆ ಮಾಡಿ ಅಪ್ಪಯ್ಯನ ಭೂತೋಚ್ಛಾಟನೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT