ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ: ಹಳ್ಳಿಯೂರ ಹಮ್ಮೀರ ಕವಿ ಧರಣೇಂದ್ರ ಕುರಕುರಿ

Last Updated 24 ಸೆಪ್ಟೆಂಬರ್ 2022, 23:45 IST
ಅಕ್ಷರ ಗಾತ್ರ

ಮುರುಕು ಬದುಕನ್ನು ಸಂಕೇತಿಸುವ ‘ಹರಕು ಪುಸ್ತಕ’ ಬರೆದ ಧರಣೇಂದ್ರ ಕುರಕುರಿ ಅವರು ಗ್ರಾಮ್ಯ ಜೀವನದ ಆಗುಹೋಗುಗಳನ್ನು ಶುದ್ಧ ಜಾನಪದ ಸತ್ವದ ಭಿತ್ತಿಯಲ್ಲಿ ಚಿತ್ರಿಸಿ ಹಳ್ಳಿಯೂರಿನ ಹಮ್ಮೀರ ಕವಿ ಎಂದು ಕರೆಯಿಸಿಕೊಂಡವರು. ಕನ್ನಡ–ಹಿಂದಿ ಸೇತುವಾಗಿ ಗುರ್ತಿಸಿಕೊಂಡವರು. ಅವರಿಗೀಗ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ

ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2021ರ ಹಿಂದಿ ಅನುವಾದ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ. ಧರಣೇಂದ್ರ ಕುರಕುರಿಯವರದ್ದು ಗತಿಶೀಲ ಬದುಕು, ಚಲನಶೀಲ ಬರಹ. ಧಾರವಾಡದ ಮಲೆನಾಡ ಸೆರಗಿನ ಗೊಂಡೆಯಂತಿರುವ ಮುಗದ ಗ್ರಾಮದಲ್ಲಿ ಹುಟ್ಟಿ, ಉದ್ಯೋಗ ನಿಮಿತ್ತ ಅಲ್ಲಲ್ಲಿ ಸಂಚರಿಸುತ್ತ, ಮತ್ತೊಂದು ದಟ್ಟ ಮಲೆನಾಡಿನ ಮಡಿಲು ಶಿರಸಿಯಲ್ಲಿ ನೆಲೆ ನಿಂತದ್ದೊಂದು ವಿಶೇಷವೇ ಸರಿ.

ಒಂದು ರೀತಿಯಲ್ಲಿ ಅವರು ಮುಗದದಲ್ಲಿ ‘ಬೇಡ್ತಿ’ ನದಿಯಾಗಿ ಹುಟ್ಟಿ ಕರಾವಳಿಯಲ್ಲಿ ಗಂಗಾವಳಿಯಾಗಿ ಸಾಹಿತ್ಯ ಸಮುದ್ರ ಸೇರಿದವರು. 1973ರ ತಮ್ಮ ಪ್ರಥಮ ಕವನ ಸಂಕಲನ ‘ಹರಕು ಪುಸ್ತಕ’ದ ಮೂಲಕ ಪ್ರಾರಂಭಿಸಿದ ಸಾಹಿತ್ಯಯಾತ್ರೆಯನ್ನು ಈ ದಿನದವರೆಗೂ ಮುಂದುವರೆಸಿಕೊಂಡು ಹೋಗುತ್ತಿರುವುದು ಮತ್ತೊಂದು ವಿಶೇಷ. ಹಿರಿಯರು- ಓರಗೆಯವರಲ್ಲದೇ ಕಿರಿಯರೊಂದಿಗೂ ಗೌರವಪೂರ್ವಕವಾಗಿ ನಡೆದುಕೊಳ್ಳುವ ಪ್ರೊಫೆಸರದ್ದು ಸದಾ ಸ್ನೇಹಮಯ ವ್ಯಕ್ತಿತ್ವ, ಹಾಗಾಗಿ ನಾಡಿನ ಒಳಗೆ ಮತ್ತು ಹೊರಗೆ ಅದರ ಆಪ್ತವಲಯ ಚಾಚಿಕೊಂಡಿದೆ.

ಮುರುಕು ಬದುಕನ್ನು ಸಂಕೇತಿಸುವ ‘ಹರಕು ಪುಸ್ತಕ’ಕ್ಕೆ ಮುನ್ನುಡಿ ಬರೆಯುತ್ತ ಶಂಕರ ಮೊಕಾಶಿ ಪುಣೇಕರರು ನವ್ಯದ ಪ್ರಭಾವದ ನಡುವೆಯೂ ದೇಸಿ ಸೊಗಡನ್ನು ಉಳಿಸಿಕೊಂಡ ಕವಿ ಎಂದಿದ್ದಾರೆ. ಅಂದಿನ ಮುನ್ನೆಲೆಯ ಸಾಹಿತಿಗಳೊಂದಿಗೆ ಕುರಕುರಿಯವರನ್ನು ನಿಲ್ಲಿಸಿ ಭವಿಷ್ಯದಲ್ಲಿ ಅವರು ಏರಬಹುದಾದ ಎತ್ತರವನ್ನು ಅಳೆದು ಕವಿಪಟ್ಟ ನೀಡಿದ್ದಾರೆ. ಆದರೆ, ಅರಂಭದಲ್ಲಿ ಸಿಕ್ಕ ಮನ್ನಣೆಯಿಂದ ಉಬ್ಬಿ ಹೋಗದೇ ಬೆಳಕು ಕಂಡಲೆಲ್ಲ ಚಿಗಿತು ದಟ್ಟ ಮರವಾಗಿ ಬೆಳೆದು ನಿಂತಿದ್ದಾರೆ ಕುರಕುರಿಯವರು. ಅಂತೆಯೇ ಅವರ ಬರಹ ವೃಕ್ಷಕ್ಕೆ ಹಲವು ಶಾಖೆಗಳು.

ಕಾವ್ಯ, ಅಂಕಣ ಬರಹ, ಬಿಡಿ ಲೇಖನಗಳಲ್ಲದೇ ಬಹು ಮುಖ್ಯವಾಗಿ ಅವರು ಅನುವಾದದಲ್ಲಿ ಮಾಡಿದ ಕೃಷಿ ಭಾಷೆಗಳಲ್ಲದೇ ವಿವಿಧ ಸಂಸ್ಕೃತಿಗಳಿಗೂ ನೀಡಿದ ಕೊಡುಗೆಯಾಗಿದೆ. ಕುರಕುರಿಯವರು ಕಾವ್ಯ ಮತ್ತು ಅನುವಾದ ಎರಡರಲ್ಲೂ ಸಾಧಿಸಿದ ಹಿಡಿತವನ್ನು ನೋಡಿದರೆ, ಯಾವುದು ಹೆಚ್ಚು, ಯಾವುದು ಕಡಿಮೆಯೆಂದು ಹೇಳುವುದು ಬಹುಶಃ ಅವರಿಗೇ ಸಾಧ್ಯವಾಗಲಿಕ್ಕಿಲ್ಲ.

‘ಹರಕು ಪುಸ್ತಕ’, ‘ನೀರಾಗ ಕುಂತೇನ ನೆನಕೊಂತ’, ‘ಹೊಸಾಕಾಲ ಬರತಾವ’, ‘ನಾ ಕವಿ ಅಲ್ಲ’, ‘ಶಬ್ದವಾಯಿತು ನಕ್ಷತ್ರ’, ‘ಕುಂಚ ಮತ್ತು ಬಣ್ಣ’ ಮುಂತಾದ ಕಾವ್ಯ ಕೃತಿಗಳನ್ನು ನೀಡಿದ್ದಾರೆ. ಅವರ ಆಯ್ದ ಕವನಗಳ ಸಂಕಲನವೂ ಪ್ರಕಟವಾಗಿದೆ.

1997ರಲ್ಲಿ ಸಮಾಜ ಪುಸ್ತಕಾಲಯದಿಂದ ಪ್ರಕಟವಾದ ಈ ಕೃತಿಯು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ವರ್ಗಗಳಿಗೆ ಪಠ್ಯ ಪುಸ್ತಕವಾಗಿದೆ.

ಹೊಲದ ಮ್ಯಾರ‍್ಯಾಗ/ ಮೈತುಂಬ ಮುಳ್ಳ ಹೊತ್ತ/ ನಿಂತಂಥ/
ಜಾಲೀಗಿಡ/ ಸರಳ ಹತ್ತಾಕ ಬರಂಗಿಲ್ಲ ಹತ್ತಿದರ/ ಇಳಿಯಾಕ ಬರಂಗಿಲ್ಲ...... (ಹೆಣ್ಣು)
ಗ್ವಾಡಿ ತುಂಬ ಗುದ್ದ ತೋಡಿ/ ಹೆಗ್ಗಣಾಗಿ ಹೊಕ್ಕಾರಪ್ಪ/
ಹಾಳಗೆಡವಿ ಹೋಗತಾರೋ ಮನಿ-ಮಾರಾ/
ಹೆಗ್ಣಣ್ಹತ್ತಿದ ಮನಿಯೊಳಗ/ ಜಗದಂಬಿ ಅವತಾರ/
ದರಬಾರ, ಕಾರಭಾರ, ಬಲು ಜೋರಾ...... (ಹೆಗ್ಗಣಾಗಿ ಹೊಕ್ಕಾರಪ್ಪಾ)

ಜನಸಾಮಾನ್ಯರ ಬದುಕನ್ನು ಅಸಹನೀಯಗೊಳಿಸಿದ ಶಕ್ತಿಗಳನ್ನು ತಮ್ಮ ಉಗ್ರಮಾತುಗಳಲ್ಲಿ ಖಂಡಿಸುತ್ತ ಬಂದರೂ ‘ಹೊಸ ಕಾಲ ಬರತಾವ’ ಎಂಬ ಆಶಾಭಾವನೆಯನ್ನು ಮೊಳೆಯಿಸಲು ಅವರು ಮರೆಯಲಿಲ್ಲ. ಗ್ರಾಮ್ಯ ಜೀವನದ ಆಗುಹೋಗುಗಳನ್ನು ಶುದ್ಧ ಜಾನಪದ ಸತ್ವದ ಭಿತ್ತಿಯಲ್ಲಿ ಚಿತ್ರಿಸುವ ಅವರು ‘ಹಳ್ಳಿಯೂರ ಹಮ್ಮೀರ ಕವಿ’ ಎಂದು ಕರೆಸಿಕೊಂಡಿದ್ದಾರೆ. ಜಡ ಸಂಸ್ಕೃತಿ ವಿರುದ್ಧ ಬಂಡೇಳುವ ಅವರ ಸಂವೇದನೆ ಪ್ರತಿಮೆ, ಸಂಕೇತಗಳ ಮೂಲಕ ಅಭಿವ್ಯಕ್ತಿ ಪಡೆಯುವುದು ಅವರ ಕಾವ್ಯಲಕ್ಷಣ.

ಕೆಂಪಾದ ಕನಸೆಲ್ಲಾ ಕಡಿಯಾಗಿ ಸಿಡಿದಾವೋ
ಬೆಂಕಿ ಇಟ್ಟವರೆಲ್ಲ ಬೇರ‍್ಯಾರೋ| ಬೆಳಕಾಗಿ
ಹೊಸಾ ದಿನಾ ಬರತಾವೊ ನಾಡಾಗ|
ಗುದ್ದಿನಾಗ ಮದ್ದ ಇಟ್ಟು
ಹೆಗ್ಗಣಾ ಎಲ್ಲಾ ಹೆಣಾ ಮಾಡಿ
ಗಟ್ಟಿ ಮಾಡಿಕೊಳ್ಳಬೇಕು ಮನಿ-ಗ್ವಾಡಿ|

ಎನ್ನುವಲ್ಲಿ ಪ್ರತಿರೋಧದ ನೆಲೆ ಜಾನಪದ ದರ್ಶನ ಬೆಡಗಿನ ಛಾಯೆಗಳೆಲ್ಲವೂ ಕಾಣಸಿಗುತ್ತವೆ.

ಎಲ್ಲಕ್ಕಿಂತ ಹೆಚ್ಚಾಗಿ ಕುರಕುರಿಯವರ ಅನುವಾದದ ಕೈಂಕರ್ಯವನ್ನು ಗಮನಿಸಿದರೆ ಆನಂದ ಆಶ್ಚರ್ಯಗಳೆರೆಡೂ ಉಂಟಾಗುತ್ತವೆ. ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ಹಿಂದಿಗೆ ತಮ್ಮ ಭಾಷಾಂತರದ ಮೂಲಕ ಎಡತಾಕುತ್ತಲೇ ಇದ್ದಾರೆ.

ನಾವು ಮೆಚ್ಚಿದ ಹಿಂದಿ ಕತೆಗಳು, (ಕಥಾ ಸಂಕಲನ), ಪ್ರಿಯ ಶಬನಂ, ಕಲಿಕತೆ ವ್ಹಾಯಾ ಬೈಪಾಸ್, ಮೋಹನದಾಸ, ಜಾನಕಿದಾಸ ತೇಜಪಾ ಮ್ಯಾನ್ಶನ್ (ಕಾದಂಬರಿಗಳು), ನಿರಾಲಾ (ಜೀವನ ಚರಿತ್ರೆ), ಜೈನಧರ್ಮ ಏನು ಹೇಳುತ್ತದೆ? (ಪ್ರವಚನಗಳು) ಕೃತಿಗಳು ಹಿಂದಿಯಿಂದ ಕನ್ನಡಕ್ಕೆ ಬಂದರೆ, ಕನ್ನಡದಿಂದ ಹಿಂದಿಗೆ ಹೋದ ಪುಸ್ತಕಗಳ ದೊಡ್ಡ ಪಟ್ಟಿಯೇ ಇದೆ.

ಪರ್ಯಟನ, ಅಂತ, ಕಠಪುತಲಿ ಕಾ ವಿದ್ರೋಹ, ಆಜಕಿ ಕನ್ನಡ ಕವಿತಾಯೆಂ, ಚಾವುಂಡರಾಯ ವೈಭವ, ಅಂಗಾರಕಿ ಚೋಟಿ ಪರ, ಪತ್ಥರ ಪಿಘಲನೆ ಕಿ ಘಡಿ, ಓಂ ಣಮೊ, ಜುರ್ಮಾನಾ, ದೃಷ್ಟಿ, ಸೀತಾಯನ, ಶೇರ ಬಾಜಾರಮೆಂ ಗಂಗಾ, ಉದ್ಧಾರ ಏವಂ ಬಾಜಾರ್‌, ಅಮೀನಪುರ ಕಾ ಬಾಜಾರ್‌, ಆಕರ್ಷಣ ಹೀಗೆ 15 ಕನ್ನಡ ಕೃತಿಗಳನ್ನು ಹಿಂದಿಗೆ ತರ್ಜುಮೆ ಮಾಡಿದ್ದಾರೆ. ಕಥೆ, ಕವಿತೆ, ಕಾದಂಬರಿ, ನಾಟಕ ಸಾಹಿತ್ಯವನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ. ಇಂತಹ ಶ್ರಮವಹಿಸಿ ಮಾಡಿದ ದುಡಿಮೆಗೆ ಸಿಕ್ಕ ಮಾನ-ಸನ್ಮಾನಗಳು ಹತ್ತು ಹಲವು.

‘ಆಜ ಕಿ ಕನ್ನಡ ಕವಿತಾಯೆಂ’ ಕೃತಿಗೆ ಕೆಂದ್ರೀಯ ಹಿಂದಿ ನಿರ್ದೇಶನಾಲಯದ ರಾಷ್ಟ್ರೀಯ ಪ್ರಶಸ್ತಿ ದೊರೆತರೆ, ‘ಕಲಿ-ಕತೆ: ವ್ಹಾಯಾ ಬೈಪಾಸ್’ ಎನ್ನುವ ಅನುವಾದಿತ ಕಾದಂಬರಿಗೆ ಶಿವಮೊಗ್ಗ ಕರ್ನಾಟಕ ಸಂಘದ ಬಹುಮಾನ ಸಿಕ್ಕಿದೆ. ಅವರಿಗೆ ಸಿಕ್ಕ ಇತರ ಪುರಸ್ಕಾರಗಳು ಹಲವು. ಶಿಕ್ಷಕರಾಗಿ ಮತ್ತು ಸಂಘಟಕರಾಗಿಯೂ ಕೆಲಸ ಮಾಡಿರುವ ಧರಣೇಂದ್ರವರಿಗೆ ‘ಕದಂಬ ಸೇವಾ ರತ್ನ ಪ್ರಶಸ್ತಿ’ ಕೂಡ ಲಭಿಸಿದೆ. ಈಗ ಅವರ ಸಾಹಿತ್ಯ ಸಾಧನೆಯ ಮುಕುಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಯ ಗರಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT