ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಹಬ್ಬದ ಡಿಸ್ಕೌಂಟ್‌!

Last Updated 25 ಅಕ್ಟೋಬರ್ 2019, 14:02 IST
ಅಕ್ಷರ ಗಾತ್ರ

ಆರ್ಥಿಕ ಹಿಂಜರಿತದ ಬಿಸಿ ಮತ್ತು ಸುರಿಯುತ್ತಲೇ ಇರುವ ಮಳೆಯ ನಡುವೆಅಂಗಡಿಗಳ ಮುಂದೆ ದೀಪಾವಳಿಯ ಬಣ್ಣದ ಆಕಾಶಬುಟ್ಟಿಗಳುನೇತಾಡುತ್ತಿವೆ. ನಗರದ ಮಾಲ್‌ಗಳು ಎಲ್‌ಇಡಿ ಮತ್ತು ವಿದ್ಯುತ್‌ ದೀಪಗಳ ಅಲಂಕಾರದೊಂದಿಗೆ ಜನರನ್ನು ಸೆಳೆಯುತ್ತಿವೆ. ಎಲ್ಲೆಲ್ಲೂ ಹಬ್ಬದ ಡಿಸ್ಕೌಂಟ್‌ ಸೇಲ್‌.

ಇ–ಕಾಮರ್ಸ್‌ ತಾಣಗಳ ವಹಿವಾಟು ಕಮ್ಮಿ ಏನಿಲ್ಲ.ಫ್ಲಿಪ್‌ಕಾರ್ಟ್‌ನ ಬಿಗ್‌ ದಿವಾಲಿ ಸೇಲ್‌ ಮತ್ತು ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಡಿಸ್ಕೌಂಟ್‌ ಸೇಲ್‌ಗಳಿಗೆ ಗ್ರಾಹಕರು ಸ್ಪಂದಿಸಿದ್ದಾರೆ.ಮಿಂತ್ರಾ, ಸ್ನಾಪ್‌ಡೀಲ್‌ ಕೂಡ ಹಿಂದೆ ಬಿದ್ದಿಲ್ಲ. ಮೊಬೈಲ್‌ ಫೋನ್‌, ಟಿ.ವಿ, ವಾಷಿಂಗ್‌ ಮಷಿನ್‌, ಲ್ಯಾಪ್‌ಟಾಪ್, ಸ್ಮಾರ್ಟ್‌ ವಾಚ್‌, ಸನ್‌ಗ್ಲಾಸ್‌, ಹೆಡ್‌ಫೋನ್‌ ಬ್ಯಾಗ್‌, ಶೂ, ಕ್ಯಾಮರಾ, ಸಿದ್ಧ ಉಡುಪು, ಜುವೆಲರಿ, ಪೀಠೋಪಕರಣ, ಗೃಹೋಪಯೋಗಿ ವಸ್ತು ಮತ್ತು ಪ್ರಸಾದನ ಸಾಮಗ್ರಿಗಳ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿವೆ.

ಆನ್‌ಲೈನ್‌ನಲ್ಲೇ ಪಟಾಕಿ, ಹಣತೆ
ಪಟಾಕಿ, ಹಣತೆ, ರಂಗೋಲಿ, ಆಕಾಶಬುಟ್ಟಿ, ಸಿಹಿ ತಿಂಡಿಗಳು ಆನ್‌ಲೈನ್‌ನಲ್ಲಿಯೇ ಸಿಗುತ್ತಿವೆ. ಕೆಲವು ಸಂಸ್ಥೆಗಳು ಪರಿಸರಸ್ನೇಹಿ ಪಟಾಕಿ ಮತ್ತು ಸಾವಯವ ರಂಗೋಲಿ ಮಾರಾಟ ಮಾಡುತ್ತಿವೆ. ಮಾರುಕಟ್ಟೆಗೆ ಹೋಗಲು ಪುರಸೊತ್ತು ಇಲ್ಲದ ಗ್ರಾಹಕರು ಆನ್‌ಲೈನ್‌ ಆಶ್ರಯಿಸಿದ್ದಾರೆ. ಆದರೆ, ಪರಿಸರ ಪ್ರಜ್ಞೆ ಮತ್ತು ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟಾಕಿ ಮಾರಾಟ ಮಂದಗತಿಯಲ್ಲಿದೆ.

ಆಭರಣ ಅಂಗಡಿಗಳು ಚಿನ್ನಾಭರಣ ಮತ್ತು ವಜ್ರಾಭರಣಗಳ ಮೇಲೆ ಭಾರಿ ರಿಯಾಯ್ತಿ ಘೋಷಿಸಿವೆ. ದೊಡ್ಡ ಮೊತ್ತದ ಚಿನ್ನ ಮತ್ತು ವಜ್ರಾಭರಣ ಖರೀದಿ ಮೇಲೆ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಬ್ಯಾಂಕ್‌ಗಳು ಕೂಡ ‘ನಾಣ್ಯ ಮೇಳ’ ನಡೆಸುತ್ತಿದ್ದು, ಬ್ಯಾಂಕ್‌ ಮುಂದೆ ಗ್ರಾಹಕರ ಉದ್ದನೆಯ ಸಾಲು ಕಾಣುತ್ತಿವೆ.

ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಗಳ ನಡುವೆ ಪೈಪೋಟಿ ಇದೆ. ಯುಗಾದಿ, ದೀಪಾವಳಿಯಂತಹ ಹಬ್ಬಗಳಲ್ಲಿ ಆಫ್‌ಲೈನ್ ಮಾರುಕಟ್ಟೆ ಭರಾಟೆ ಮಾಮೂಲು. ಈ ಬಾರಿ ಆಫ್‌ಲೈನ್‌ ಮಾರುಕಟ್ಟೆ ವಹಿವಾಟು ಮಂದಗತಿಯಲ್ಲಿದೆ. ನಗದು ವಹಿವಾಟು ನಡೆಸುತ್ತಿದ್ದ ಗ್ರಾಹಕರು ಡಿಜಿಟಲ್‌ ವಹಿವಾಟಿನತ್ತ ವಾಲುತ್ತಿರುವುದು ಇದಕ್ಕೆ ಕಾರಣ.

ಇದರ ನೇರ ಪರಿಣಾಮ ಸಾಂಪ್ರದಾಯಿಕ (ಆಫ್‌ಲೈನ್‌) ವರ್ತಕರು ಮತ್ತು ಬೀದಿ ಬದಿಯ ವ್ಯಾಪಾರಿಗಳ ಮೇಲಾಗಿದೆ.

ರೆಸ್ಟೋರೆಂಟ್, ಹೋಟೆಲ್‌ಗಳು ಹಬ್ಬಕ್ಕಾಗಿ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿವೆ. ಹಬ್ಬದ ಉಡುಗೊರೆಗೆ ಸಿಹಿ ತಿನಿಸುಗಳಿರುವ ವಿಶೇಷ ಪ್ಯಾಕ್‌ಗಳನ್ನುಸ್ವೀಟ್‌ ಸ್ಟಾಲ್‌ಗಳು ಸಿದ್ಧಪಡಿಸಿವೆ.

ಬಸ್‌ ಬಿಟ್ಟು ವಿಮಾನ ಹತ್ತಿದ ಪ್ರಯಾಣಿಕರು
ಜನರು ದೀಪಾವಳಿ ಆಚರಿಸಲು ಸ್ವಂತ ಊರುಗಳಿಗೆ ತೆರಳುತ್ತಿರುವುದರಿಂದ ಬಸ್‌, ರೈಲುಗಳಿಗೆ ತುಂಬ ಡಿಮ್ಯಾಂಡ್‌. ಖಾಸಗಿ ಬಸ್‌ಗಳ ಮಾಲೀಕರು ಪ್ರಯಾಣದರ ಏರಿಸಿದ್ದಾರೆ. ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದ್ದರೂ ಎಲ್ಲ ಬಸ್‌ಗಳೂ ಫುಲ್‌. ಸೀಟು ಖಾಲಿ ಇಲ್ಲ. ರೆಡ್‌ ಬಸ್‌ ಡಾಟ್‌ ಕಾಮ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದರೆ ಶೇ20 ರಿಯಾಯ್ತಿ ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ ಇದೆ.

‘ಖಾಸಗಿ ಬಸ್‌ಗಳು ಟಿಕೆಟ್‌ ದರ ಏರಿಸಿವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದು ಸೀಟ್‌ಗೆ ₹1,800 ಹೇಳುತ್ತಿದ್ದಾರೆ. ಮೂರ‍್ನಾಲ್ಕು ಪಟ್ಟು ಹೆಚ್ಚಳ ಮಾಡಿದರೂ ಕೇಳುವವರಿಲ್ಲ. ಏಕಿಷ್ಟು ದುಬಾರಿ ಎಂದು ಪ್ರಶ್ನಿಸಿದರೆ, ‘ಬೇಕಾದರೆ ಬನ್ನಿ, ಇಲ್ಲವಾದರೆ ಬಿಡಿ’ ಎಂದು ಸಿಬ್ಬಂದಿ ಉಡಾಫೆಯಿಂದ ಉತ್ತರಿಸುತ್ತಾರೆ. ₹2,200 ಕೊಟ್ಟರೆ ತಾಸಿನಲ್ಲಿ ವಿಮಾನದಲ್ಲಿ ಹುಬ್ಬಳ್ಳಿ ಮುಟ್ಟುಬಹುದು’ ಎನ್ನುತ್ತಾರೆಎಚ್.ಎಂ. ಶಮಂತ್.

ಬಸ್‌, ರೈಲು ಟಿಕೆಟ್‌ ಸಿಗದ ಜನರು ಅಗ್ಗದ ದರದ ವಿಮಾನಗಳ ಮೊರೆ ಹೋಗುತ್ತಿದ್ದಾರೆ. ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್‌ ದರಗಳಲ್ಲಿ ರಿಯಾಯ್ತಿ ಘೋಷಿಸಿವೆ.

ಷೋ ರೂಂನಿಂದ ಕದಲದ ಹೊಸ ವಾಹನ
ಯುಗಾದಿ ಮತ್ತು ದೀಪಾವಳಿ ಸಂದರ್ಭದಲ್ಲಿ ವಾಹನ ಮತ್ತು ಮೊಬೈಲ್‌ಗಳ ಮಾರಾಟ ಭರ್ಜರಿಯಾಗಿರುತ್ತಿತ್ತು. ಆರ್ಥಿಕ ಹಿಂಜರಿತದ ಪರಿಣಾಮ ವಾಹನ ಮಾರಾಟ ಇಳಿಮುಖವಾಗಿದೆ.‘ಪ್ರತಿ ದೀಪಾವಳಿ ಸಂದರ್ಭದಲ್ಲಿ ವಾಹನ ಮಾರಾಟ ಏರುಗತಿಯಲ್ಲಿ ಇರುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಹಿವಾಟು ಮಂದಗತಿಯಲ್ಲಿದೆ’ ಎನ್ನುತ್ತಾರೆ ವಾಹನ ಮಾರಾಟ ಸಂಸ್ಥೆಯೊಂದರ ಸಿಬ್ಬಂದಿ ದಿನೇಶ್‌ ದೇವಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT