ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ?

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ? ಹೋಗಲಿ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಕಾಗದದ ಕೊರತೆಯಿಂದ ಪರೀಕ್ಷೆ ರದ್ದಾಗಿರುವ ಮಜಕೂರವಾದರೂ ತಿಳಿದಿದೆಯೇ?

***

ಸುದ್ದಿಗಳನ್ನು ಹೊತ್ತು ತರುವ ಪೇಪರ್‌ಗಳೇ ಇದೀಗ ಸುದ್ದಿಯಲ್ಲಿವೆ. ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಕೆಲದಿನಗಳ ಹಿಂದೆ ಉತ್ತರ ಪತ್ರಿಕೆಗಳನ್ನು ಮುದ್ರಿಸಲು ಕಾಗದವಿಲ್ಲದೆ ಪರೀಕ್ಷೆಗಳನ್ನೇ ರದ್ದುಪಡಿಸಿದ್ದು ಸುದ್ದಿಯಾಗಿತ್ತು. ತದನಂತರ ಪಾಕಿಸ್ತಾನದಲ್ಲೂ ಇಂತಹುದೇ ಪರಿಸ್ಥಿತಿ ಉದ್ಭವವಾಗಿ ಪರೀಕ್ಷೆಗಳ ರದ್ದತಿಯ ಜೊತೆಗೆ ಕೆಲವು ಸುದ್ದಿ ಪತ್ರಿಕೆಗಳೂ ತಮ್ಮ ಮುದ್ರಣವನ್ನು ಸ್ಥಗಿತಗೊಳಿಸಿರುವ ಮಾಹಿತಿ ಬಂತು. ರಷ್ಯಾ–ಉಕ್ರೇನ್ ಯುದ್ಧದಿಂದ ಕಾಗದದ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ಭಾರತವೂ ಇದರಿಂದ ಪ್ರತಿಕೂಲ ಪರಿಣಾಮ ಎದುರಿಸುವ ಸಾಧ್ಯತೆ ಇದೆ.

ನಮ್ಮಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ವರ್ಷಕ್ಕೆ ಸುಮಾರು 120 ಲಕ್ಷ ಟನ್ ಕಾಗದ ನಮ್ಮಲ್ಲಿ ಉತ್ಪಾದನೆ ಆಗುತ್ತದೆ. ಕಾಗದದ ಜನ್ಮಸ್ಥಳ ಚೀನಾ. ಅದು ಕಾಗದದ ಉತ್ಪಾದನೆಯಲ್ಲಿ ಈಗಲೂ ಮುಂಚೂಣಿಯಲ್ಲಿದ್ದು, ರಷ್ಯಾ, ಅಮೆರಿಕ ಮತ್ತು ಇಂಡೋನೇಷ್ಯಾ ನಂತರದ ಸ್ಥಾನಗಳಲ್ಲಿವೆ. ಭಾರತದಲ್ಲಿ ಕಾಗದ ತಯಾರಿಕೆಗೆ ಮುಖ್ಯವಾಗಿ ಬಿದಿರು, ರದ್ದಿ ಪೇಪರ್, ಒಣ ಹುಲ್ಲು ಮತ್ತು ಭತ್ತದ ತೌಡಿನಂತಹ ಕೃಷಿತ್ಯಾಜ್ಯಗಳನ್ನು ಕಚ್ಚಾವಸ್ತುಗಳನ್ನಾಗಿ ಬಳಸಲಾಗುತ್ತದೆ. ಗುಜರಾತ್‌, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಹೆಚ್ಚಿನ ಪ್ರಮಾಣದ ಕಾಗದವನ್ನು ಉತ್ಪಾದನೆ ಮಾಡುತ್ತವೆ.

ಕೋವಿಡ್ ಸಮಯದಲ್ಲಿ ಉಂಟಾದ ಓದುಗರ ನಿರ್ವಾತವನ್ನು ತಡೆಯಲಾರದೆ ನಮ್ಮಲ್ಲಿನ ಅನೇಕ ಪತ್ರಿಕೆಗಳು ಕಣ್ಮುಚ್ಚಿದವು. ಪತ್ರಿಕೋದ್ಯಮದ ಅಖಾಡದ ಘಟಾನುಘಟಿ ಸಂಸ್ಥೆಗಳು ಸಹ ಪ್ರಸಾರದಲ್ಲಿ ಗಣನೀಯ ಕಡಿತವನ್ನು ಅನುಭವಿಸಿದವು. ಇದೇ ಸಮಯದಲ್ಲಿ ಆನ್‌ಲೈನ್‌ ಓದುಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಎರಡು ವರ್ಷಗಳಲ್ಲಿ ಶಾಲಾ ಕಾಲೇಜುಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದ ಕಾರಣ ಕಾಗದದ ಬಳಕೆಯಲ್ಲಿ ಒಂದಿಷ್ಟು ಕುಸಿತವೂ ಆಯಿತು.

ನ್ಯೂಸ್ ಪ್ರಿಂಟ್ (ಖಾಲಿ ಕಾಗದ) ವಿಚಾರಕ್ಕೆ ಬಂದರೆ ಭಾರತದ ವಾರ್ಷಿಕ ಬಳಕೆ 220 ಲಕ್ಷ ಟನ್ನುಗಳು. ಇದರಲ್ಲಿ 150 ಲಕ್ಷ ಟನ್ ಹೊರದೇಶದಿಂದ ಆಮದಾಗುತ್ತದೆ. ಈ ಆಮದಿನಲ್ಲಿ ಹೆಚ್ಚಿನ ಪಾಲು ರಷ್ಯಾದ್ದು. ನಂತರದ ಸ್ಥಾನ ಕೆನಡಾದ್ದು. ಪೇಪರ್ ತಯಾರಿಕೆಗೆ ಬೇಕಾಗಿರುವ ಅತಿಅಗತ್ಯ ವಸ್ತುಗಳಾದ ಪೇಪರ್ ಪಲ್ಪ್, ಕಲ್ಲಿದ್ದಲು, ನೀರು ಮತ್ತು ವಿದ್ಯುತ್ತಿನಲ್ಲಿ ಮೊದಲೆರಡು ವಸ್ತುಗಳ ಧಾರಣೆ ಸಿಕ್ಕಾಪಟ್ಟೆ ಏರಿರುವ ಪರಿಣಾಮ ನ್ಯೂಸ್ ಪ್ರಿಂಟ್ ಬೆಲೆ ಕೆಲವೇ ತಿಂಗಳುಗಳಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಕಳೆದ ವರ್ಷದಲ್ಲಿ ಸುಯೇಜ್ ಕಾಲುವೆಯಲ್ಲಿ ಕಂಟೇನರ್ ಸಿಕ್ಕಿಹಾಕಿಕೊಂಡ ಪ್ರಸಂಗ, ಪ್ರಸಕ್ತ ವರ್ಷದಾರಂಭಕ್ಕೆ ಕೆನಡಾದಲ್ಲಾದ ಲಾರಿ ಮುಷ್ಕರ, ಇನ್ನೂ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧ ಹೀಗೆ ಈ ಎಲ್ಲ ಅಂತರರಾಷ್ಟ್ರೀಯ ವಿದ್ಯಮಾನಗಳು ನ್ಯೂಸ್ ಪ್ರಿಂಟ್ ಪೂರೈಕೆಯ ಜಾಲವನ್ನು ಬಹುವಾಗಿ ಕಾಡಿದೆ.

ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ತಮ್ಮ ನ್ಯೂಸ್ ಪ್ರಿಂಟ್ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಪರಿಸ್ಥಿತಿಯಲ್ಲೂ ಭಾರತೀಯ ಕಾಗದದ ತಯಾರಕರು ಇಲ್ಲ. ಏಕೆಂದರೆ ಇದಕ್ಕೆ ಬೇಕಾದ ಕಚ್ಚಾ ಪದಾರ್ಥವಾದ ರದ್ದಿ ಪೇಪರ್ ಸಂಗ್ರಹಿಸುವ ವ್ಯವಸ್ಥಿತ ಜಾಲ ನಮ್ಮಲ್ಲಿಲ್ಲ. ಇನ್ನು ಪೇಪರ್ ಪಲ್ಪ್ ಆಮದು ಮಾಡಿಕೊಂಡು ತಯಾರಿಸಿದರೆ ಅದು ಆಮದು ಕಾಗದದ ದರದ ಹತ್ತಿರವೇ ಇರಲಿದೆ. ಆದರೂ ದೇಸಿ ಮತ್ತು ವಿದೇಶಿ ಮೂಲಗಳನ್ನು ಸಂಭಾಳಿಸಿಕೊಂಡು ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ಭಾರತೀಯ ಕಾಗದ ತಯಾರಕರು ಮತ್ತು ಪ್ರಕಾಶಕರು ತೋರಿಸಿದ್ದಾರೆ. ಇಷ್ಟಾದರೂ ಪ್ಯಾಕಿಂಗ್ ಕಾಗದದ ಬೇಡಿಕೆ ಏರುತ್ತ ಹೋಗಿ ನ್ಯೂಸ್ ಪ್ರಿಂಟ್ ತಯಾರಿಕೆಯನ್ನು ಸಂಪೂರ್ಣವಾಗಿ ನುಂಗಿಹಾಕುವ ಸಾಧ್ಯತೆ ಕಾಡುತ್ತಿರುವುದು ಖರೆ.

ಕೈಯಿಂದಲೇ ರೂಪಿಸಲಾದ ಸಂವಿಧಾನ ಪುಸ್ತಕದ ಮುಖಪುಟ
ಕೈಯಿಂದಲೇ ರೂಪಿಸಲಾದ ಸಂವಿಧಾನ ಪುಸ್ತಕದ ಮುಖಪುಟ

ಹೆಚ್ಚಿನ ಪಕ್ಷ ಅರಣ್ಯೋತ್ಪನ್ನಗಳನ್ನೇ ಕಚ್ಚಾ ಪದಾರ್ಥವಾಗಿ ಬಳಸುವುದರಿಂದ ಪೇಪರ್ ತಯಾರಿಕೆಯೆಂದರೆ ಮರಗಳ, ಹಸಿರಿನ ನಾಶವೆಂಬ ಅಭಿಪ್ರಾಯ ನಮ್ಮಲ್ಲಿದೆ. ಆದರೆ ಇದಕ್ಕೂ ಅಪವಾದವಿರುವುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಭಾರತದಲ್ಲಿ ಈ ಅಪ್ಪಟ ದೇಸಿ ತಂತ್ರಜ್ಞಾನವನ್ನು ಪರಿಚಯಿಸಿ ಬೆಳೆಸಿದ ಖ್ಯಾತಿ ಪುಣೆ ವಿಜ್ಞಾನಿ ಕೆ.ಬಿ. ಜೋಶಿಯವರದ್ದು. ಬಟ್ಟೆಮಿಲ್ಲುಗಳಲ್ಲಿ ತ್ಯಾಜ್ಯವಾಗಿ ಎಸೆಯಲ್ಪಡುವ ಹತ್ತಿಹಾಸುಗಳ ಜೊತೆಗೆ ಔಷಧೀಯ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಹತ್ತಿಯ ತ್ಯಾಜ್ಯವನ್ನೂ ಬಳಸಿ ತಯಾರಿಸುವ ಈ ಕಾಗದದ ತಯಾರಿಕೆಯ ಹಿಂದೆ ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚಿದೆ.

ಅದು 1930ರ ಸಮಯ. ಮಹಾತ್ಮ ಗಾಂಧಿಯವರು ಕರೆಕೊಟ್ಟ ಸ್ವದೇಶಿ ಆಂದೋಲನದ ಕರೆಯಿಂದ ಸ್ಫೂರ್ತಿಗೊಂಡ ಡಾ. ಜೋಶಿಯವರು ಸ್ಥಳೀಯ ಮಾನವ ಸಂಪನ್ಮೂಲವನ್ನೇ ಬಳಸಿ ಹತ್ತಿಯ ತ್ಯಾಜ್ಯದಿಂದ ಕಾಗದವನ್ನು ತಯಾರಿಸುವತ್ತ ಸಂಶೋಧನೆಯನ್ನು ನಡೆಸಿ ಅದರ ಕೆಲವು ಮಾದರಿಗಳನ್ನು ಗಾಂಧೀಜಿಯವರಿಗೆ ತೋರಿಸಿ ಒಪ್ಪಿಗೆ ಪಡೆದರು. ಇದರ ಪರಿಣಾಮ 1940ರ ಆಗಸ್ಟ್ 1ರಂದು ಪುಣೆಯ ಶಿವಾಜಿನಗರದ ಕೃಷಿ ಕಾಲೇಜಿನ ಆವರಣದಲ್ಲಿ ಹ್ಯಾಂಡ್ ಮೇಡ್ ಪೇಪರ್ ಇನ್‌ಸ್ಟಿಟ್ಯೂಟ್ ಅಸ್ತಿತ್ವಕ್ಕೆ ಬಂತು.

ಯಾವುದೇ ಯಂತ್ರಗಳಿಲ್ಲದೇ ಪರಿಸರ ಪೂರಕ ತಂತ್ರಜ್ಞಾನವನ್ನು ಉಪಯೋಗಿಸಿ ಹತ್ತಿಯ ತ್ಯಾಜ್ಯವನ್ನು ಬಳಸಿ ಕಾಗದ ತಯಾರಿಸುವ ತಂತ್ರಜ್ಞಾನದ ಭಾರತದ ಪ್ರಪ್ರಥಮ ಕಾಗದದ ಕಾರ್ಖಾನೆಯಿದು. 82 ವಸಂತಗಳನ್ನು ಪೂರೈಸುತ್ತಿರುವ ಈ ಕಾರ್ಖಾನೆ ಅಂದಿನಿಂದ ಇಂದಿನವರೆಗೂ ಹತ್ತಿಯ ತ್ಯಾಜ್ಯವನ್ನಷ್ಟೇ ಬಳಸಿ ಕಾಗದ ತಯಾರಿಸುತ್ತ ಬಂದಿದೆ. ಇಷ್ಟು ದೂರದ ಪಯಣದಲ್ಲಿ ಕಾಗದ ತಯಾರಿಕೆಯ ಕೊನೆಯ ಹಂತದಲ್ಲಿ ಬಳಸುವ ಪ್ರೆಸ್ಸಿಂಗ್‌ನಂತಹ ಒಂದೆರಡು ಕಾರ್ಯದಲ್ಲಿ ಮಾತ್ರ ಯಂತ್ರಗಳನ್ನು ಅಳವಡಿಸಿಕೊಂಡು ಮೂಲ ಆಶಯದಂತೆ ಇಂದಿಗೂ ನಡೆಯುತ್ತಾ ಬಂದಿರುವುದು ವಿಶೇಷ.

ಹ್ಯಾಂಡ್ ಮೇಡ್ ಪೇಪರ್ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುವ ಕಾಗದ ಹವಾಮಾನದ ಪರಿಣಾಮದಿಂದ ಅದರ ಬಿಳಿಯ ಬಣ್ಣ ಮಾಸಿದರೂ ಸಾಂಪ್ರದಾಯಿಕ ಕಾಗದಕ್ಕಿಂತಲೂ ಹೆಚ್ಚು ಅಂದರೆ ಸುಮಾರು ನೂರು ವರ್ಷಗಳಷ್ಟು ಕಾಲ ಬಾಳ್ವಿಕೆ ಬರುವುದೆಂದು ತಯಾರಕರು ಹೇಳುತ್ತಾರೆ. ಆದರೆ ಹೆಚ್ಚಿನ ಮಾನವ ಸಂಪನ್ಮೂಲ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಬೆಲೆ ಮಾತ್ರ ಮಾರುಕಟ್ಟೆಯಲ್ಲಿ ಸಿಗುವ ಕಾಗದಕ್ಕಿಂತ ಮೂರು ಪಟ್ಟು ಹೆಚ್ಚು. ಕಾಗದದ ಲ್ಯಾಂಟೀನು, ಲೆಟರ್ ಹೆಡ್, ಗ್ರೀಟಿಂಗ್ ಕಾರ್ಡಿನಂತಹ ವಸ್ತುಗಳನ್ನು ಈ ಕಾಗದದಿಂದ ತಯಾರಿಸಿ ಮಾರುಕಟ್ಟೆಗೆ ನೀಡಲಾಗುತ್ತಿದೆ.

ಪ್ರಯೋಗಾಲಯಗಳಲ್ಲಿ ಬಳಸಲಾಗುವ ಹರ್ಬೇರಿಯಮ್ ಕಾಗದವನ್ನೂ ಇದೇ ಸಂಸ್ಥೆ ತಯಾರಿಸುತ್ತದೆ. ಅಂದಹಾಗೆ ಭಾರತದಲ್ಲಿ ಹರ್ಬೇರಿಯಮ್ ಕಾಗದವನ್ನು ತಯಾರಿಸುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಕೂಡ ಈ ಕಂಪನಿಯದ್ದು. ಅಷ್ಟೇ ಏಕೆ, ಭಾರತದ ಸಂವಿಧಾನದ ಮೂಲಪ್ರತಿಯನ್ನು ಬರೆದದ್ದು ಕೂಡ ಹ್ಯಾಂಡ್ ಮೇಡ್ ಪೇಪರ್ ಫ್ಯಾಕ್ಟರಿ ಆಫ್ ಇಂಡಿಯಾದ ಕುಶಲಕರ್ಮಿಗಳು ತಮ್ಮ ಕೈಯಾರೇ ತಯಾರಿಸಿಕೊಟ್ಟ ಕಾಗದದಲ್ಲೇ. ಆ ಮೂಲಪ್ರತಿ ಇದೀಗ ದೆಹಲಿಯ ಪಾರ್ಲಿಮೆಂಟ್ ಲೈಬ್ರರಿಯಲ್ಲಿ ಭದ್ರವಾಗಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಶವಂತರಾವ್ ಚೌಹಾಣ್ ತಮ್ಮ ಲೆಟರ್ ಹೆಡ್ ಆಗಿ ಇಲ್ಲಿನ ಕಾಗದವನ್ನೇ ಬಳಸುತ್ತಿದ್ದರು. ಈ ಸಂಸ್ಥೆಯ ಹಿರಿಮೆಯನ್ನು ಅರಿತಿದ್ದ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಆವರು ತಮ್ಮ ಪುತ್ರ ರಾಜೀವ್‌ ಮತ್ತು ಸೋನಿಯಾರ ಮದುವೆ ಆರತಕ್ಷತೆಯ ಆಮಂತ್ರಣ ಪತ್ರಿಕೆಗೂ ಈ ಕಾಗದವನ್ನೇ ಬಳಸಿದ್ದರು. ಸ್ವದೇಶಿ ಆಂದೋಲನದ ನೆನಪಿನ ಪಳೆಯುಳಿಕೆಯಂತಿರುವ ಈ ಸಂಸ್ಥೆಯ ಸ್ಥಾಪಕರ ನೆನಪಿಗೆ ಸರ್ಕಾರವು ಕಂಪನಿಯು ಸ್ಥಿತವಾಗಿರುವ ಪುಣೆಯ ಶಿವಾಜಿನಗರದ ಆ ರಸ್ತೆಗೆ ಕೆ.ಬಿ. ಜೋಶಿ ರಸ್ತೆಯೆಂದು ನಾಮಕರಣ ಮಾಡಿದೆ. ವಿಪರ್ಯಾಸವೆಂದರೆ ಆ ರಸ್ತೆಯಲ್ಲಿ ನಿತ್ಯವೂ ಓಡಾಡುವ ಬಹಳಷ್ಟು ಜನರಿಗೆ ಅವರ ಬಗ್ಗೆ ಗೊತ್ತಿಲ್ಲ. ಹೇಳಿ ಕೇಳಿ ಸ್ವದೇಶಿಯಲ್ವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT