ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಪ್ರೀತಿಯ ಈ ಸೋಜಿಗ...

Last Updated 10 ಜನವರಿ 2019, 19:45 IST
ಅಕ್ಷರ ಗಾತ್ರ

₹ 10 ಕೋಟಿ ಮೌಲ್ಯದ ಟಿಬೆಟನ್ ಮ್ಯಾಸ್ಟಿಫ್, ₹ 8 ಕೋಟಿಯ ಅಲಸ್ಕನ್‌ ಮ್ಯಾಲಮ್ಯೂಟ್‌, ನಿಯೋಪೋಲಿಯನ್ ಮ್ಯಾಸ್ಟಿಫ್‌ನಂತಹ ಅಪೂರ್ವ ನಾಯಿಗಳನ್ನು ಕಾಣಲು ಇದೇ 12ರಿಂದ 14ರವರೆಗೆ ಪದ್ಮನಾಭನಗರದ ಕಾರ್ಮೆಲ್‌ ಶಾಲಾ ಮೈದಾನದಲ್ಲಿ ನಡೆಯಲಿರುವ ‘ಸಂಕ್ರಾಂತಿ ಉತ್ಸವ’ದತ್ತ ಹೆಜ್ಜೆ ಹಾಕಿ...

ಕೊರಿಯನ್ಮ್ಯಾಸ್ಟಿಫ್, ಅಲಸ್ಕನ್‌ ಮ್ಯಾಲಮ್ಯೂಟ್‌, ಟಿಬೆಟನ್ ಮ್ಯಾಸ್ಟಿಫ್, ನಿಯೋಪೋಲಿಯನ್ ಮ್ಯಾಸ್ಟಿಫ್... ಹೆಸರು ಕೇಳಿದರೆ ಸಾಕು, ಹೃದಯ ಢವಗುಟ್ಟುವ, ಎಂಥವರನ್ನೂ ಬೆಚ್ಚಿ ಬೀಳಿಸುವ, ಹತ್ತಿರ ಹೋದರೆ ಪ್ರಾಣ ಗೆಳೆಯನಂತೆ ಆಪ್ತವಾಗುವ ಅಪರೂಪದ ಜಾತಿಯ ಶ್ವಾನಗಳಿವು.

ನೋಟ, ಮಾಟ, ಆಟ, ಘರ್ಜನೆಗಳಿಂದಷ್ಟೇ ಅಲ್ಲ, ತಮ್ಮ ಅದ್ಧೂರಿ ಜೀವನಶೈಲಿ, ರಾಜಮರ್ಯಾದೆ, ದುಬಾರಿ ಬೆಲೆಯ ಕಾರಣಗಳಿಂದಲೂ ವಿಶ್ವದೆಲ್ಲೆಡೆ ಹೆಸರುವಾಸಿ. ಇದೇ 12, 13 ಮತ್ತು 14ರಂದು ಪದ್ಮನಾಭನಗರದ ಕಾರ್ಮೆಲ್‌ ಶಾಲಾ ಮೈದಾನದಲ್ಲಿ ನಡೆಯಲಿರುವ ಪದ್ಮನಾಭನಗರ ಸಂಕ್ರಾಂತಿ ಉತ್ಸವದಲ್ಲಿ ಇವುಗಳ ಪ್ರದರ್ಶನವಿದೆ.

ನಾಯಿಯಾಗಿ ಹುಟ್ಟಿಯೂ, ಅರಸನಾಗಿ ಮೆರೆಯುವಂಥ ಈ ಅತಿವಿರಳ ನಾಯಿಗಳೊಡನೆ ಒಡನಾಡುವುದೇ ಒಂದು ವಿಭಿನ್ನ ಅನುಭವ ಎನ್ನುತ್ತಾರೆಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ನಾಯಿಗಳನ್ನು ಸಾಕಿ ದೇಶಾದ್ಯಂತ ಹೆಸರುವಾಸಿಯಾಗಿರುವ ಬೆಂಗಳೂರಿನ ಸೆಲಿಬ್ರಿಟಿಡಾಗ್ ಬ್ರೀಡರ್ ಸತೀಶ್ ಕ್ಯಾಡಬಾಮ್ಸ್‌.

‘ಇದು ನನಗೊಂದು ವ್ಯವಹಾರ ಮಾತ್ರವಲ್ಲ, ನನ್ನ ಬದುಕಿನ ರೀತಿ, ನನ್ನ ಜೀವನದ ಧ್ಯೇಯವಾಗಿ ಮಾರ್ಪಟ್ಟಿದೆ. ನಾಯಿಗಳು ನನ್ನ ಪಾಲಿಗೆ ಪ್ರಾಣಿಗಳಲ್ಲ, ಅವು ನನ್ನ ಬಂಧುಗಳು, ಆಪ್ತಮಿತ್ರರು’ ಎನ್ನುವ ಸತೀಶ್, ಇಂಥ ನಾಯಿಗಳನ್ನು ಕೊಳ್ಳುವ, ಸಾಕುವ, ಮಾರುವ ಒಟ್ಟಾರೆ ನಾಯಿಪ್ರೀತಿಯ ತಮ್ಮ ಅನುಭವ ಕಥನವನ್ನು ಬಿಚ್ಚಿಡುತ್ತಾರೆ-

ಅಪ್ಪ ಶಿವರಾಮ್‌ಪಶುವೈದ್ಯ. ಅದಕ್ಕೇ ಇರಬೇಕು, ನನ್ನೊಳಗೂ ನಾಯಿಗಳೆಂದರೆ ಏನೊ ಪ್ರೀತಿ. ತಿಳಿವಳಿಕೆ ಬಂದಾಗಿನಿಂದಲೂ ನನ್ನ ಹಾಗೂ ನಾಯಿಗಳ ಒಡನಾಟ ಇತ್ತು. ಅಪ್ಪನ ಕ್ಲಿನಿಕ್ಕಿಗೆ ಬರುವ ವಿವಿಧ ಜಾತಿ ನಾಯಿಗಳನ್ನು ನೋಡಿದಾಗೆಲ್ಲ ಅಂಥವುಗಳ ಒಡೆಯನಾಗಬೇಕೆಂಬ ಬಯಕೆ ಹೆಪ್ಪುಗಟ್ಟುತ್ತಿತ್ತು. ಆದರೆ ಅಪ್ಪ ಅವುಗಳನ್ನು ಮನೆಯಲ್ಲಿ ಸಾಕುವುದಕ್ಕೆ ವಿರುದ್ಧವಾಗಿದ್ದರು. ಹಾಗಾಗಿ ಮೊದಲೆಲ್ಲ ಬೀದಿ ನಾಯಿಗಳಿಗೆ ಊಟ ಹಾಕಿ ಸಂಭ್ರಮಿಸುತ್ತಿದ್ದೆ. ಅವು ಸತ್ತಾಗ ದಿನವಿಡೀ ಕಣ್ಣೀರಾಗುತ್ತಿದ್ದೆ. ಒಮ್ಮೆ ಬೀದಿ ನಾಯಿಯೊಂದರ ಬಾಲ ಕತ್ತರಿಸಿ ಅದು ಜಾತಿ ನಾಯಿಯಾಗುವುದೇನೊ ಎಂದು ಕಾಯ್ದು, ಅಪ್ಪನಿಂದ ಏಟು ತಿಂದಿದ್ದೆ. ನನ್ನ ನಾಯಿಪ್ರೀತಿ ಕಂಡು, ಬೈದು, ಬೇಸತ್ತು ಕೊನೆಗೆ ಅಪ್ಪ ಒಂದು ಜಾತಿ ನಾಯಿ ಕೊಡಿಸುವ ಮನಸ್ಸು ಮಾಡಿದರು.

ತಮ್ಮ ಸ್ನೇಹಿತನಫಾರ್ಮ್‌ಗೆ ಕರೆದೊಯ್ದು ಇವನಿಗೆಸಣ್ಣದೊಂದು ನಾಯಿ ಕೊಡಿ ಅಂತ ಹೇಳಿದರು. ಅವರು ಪಮೋರಿಯನ್‌ ಮರಿ ಕೊಡುವುದಾಗಿ ಹೇಳಿದರು. ಅಲ್ಲಿಂದ ಹಿಂತಿರುಗಿ ಬರುವಾಗ ಹಸು ಕರುವಿನ ಗಾತ್ರದ ನಾಯಿಯೊಂದು ಎದುರಾಯಿತು. ಅದೇ ಬೇಕು ಎಂದೆ. ಅದೆಲ್ಲ ನಮ್ಮ ಕೈಲಿ ಸಾಕಾಕಾಗಲ್ಲ ಅಂದ್ರು ಅಪ್ಪ. ಆದ್ರೂ ಹಟ ಹಿಡಿದೆ. ಸರಿ, ಮೂರು ತಿಂಗಳ ನಂತ್ರ ಮರಿ ಹಾಕುತ್ತೆ, ಕೊಡ್ತಿನಿ ಅಂದ್ರು ಅವರ ಸ್ನೇಹಿತರು. ಕೊನೆಗೂ ಮನೆಗೆ ಬಂತುಗ್ರೆನಡಾ ನಾಯಿಮರಿ. ಅದರ ಹೆಸರು (ಕ್ರಾಸ್‌ ಬ್ರೀಡ್‌) ವಿಕ್ಕಿ.

ಸುಮಾರು ನಾಲ್ಕಾರು ವರ್ಷಗಳ ನಂತರ ಗೆಳೆಯನೊಬ್ಬ ಅದರಿಂದ ಮರಿ ಮಾಡಿಸುವ ವಿಧಾನ ಹೇಳಿದ. ಅವನ ಮನೆಯ ನಾಯಿಯೊಂದಿಗೇ ಕ್ರಾಸ್‌ ಮಾಡಿಸಿ ಮರಿ ಮಾಡಿಸಿದೆವು. ಅವುಗಳನ್ನು ಸ್ನೇಹಿತರಿಗೆಲ್ಲ ಹಂಚಿದೆವು. ಕೊನೆಯದಾಗಿ ಒಂದು ಮರಿ ಉಳಿದಿತ್ತು. ಅದನ್ನು ವಿವೇಕ್‌ ಎನ್ನುವವರು ತೆಗೆದುಕೊಂಡರು. ಎಲ್ಲರಂತೆ ಅವರೂ ನಾಯಿಮರಿಯನ್ನು ಎತ್ತಿಕೊಂಡು ಹೋಗಿದ್ದರೆ ನನ್ನ ಜೀವನಕ್ಕೆ ಈ ತಿರುವೇ ಸಿಗುತ್ತಿರಲಿಲ್ಲವೇನೊ, ಆದರೆ ಅವರು ಒತ್ತಾಯದಿಂದ ₹ 1,200 ಕೊಟ್ಟರು. ಆಮೇಲೆ ಗೊತ್ತಾಗಿದ್ದು, ಇದೊಂದು ವ್ಯವಹಾರ, ಬಿಸಿನೆಸ್‌. ನಾಯಿಯಿಂದ ದುಡ್ಡು ಮಾಡಬಹುದು ಅಂತ. ಅಲ್ಲಿಂದ ಗಂಭೀರವಾಗೇ ನಾಯಿಯ ಹಿಂದೆ ಬಿದ್ದೆ. ಅವುಗಳಿಂದ ಬಂದ ಹಣವನ್ನು ಮತ್ತೆ ಅವುಗಳ ಮೇಲೇ ಹಾಕಿದೆ. ಒಂದಕ್ಕಿಂತ ಒಂದು ದುಬಾರಿ ನಾಯಿಗಳನ್ನು ದೇಶ–ವಿದೇಶಗಳಿಂದ ತರಿಸಿದೆ, ಕ್ರಾಸ್‌ ಮಾಡಿಸಿ, ಅವುಗಳ ಸಂತತಿ ಬೆಳೆಸಿದೆ... ನನ್ನ ಬಳಿ ಇರುವ ಒಂದು ನಾಯಿಯ ಬೆಲೆ ₹ 10 ಕೋಟಿ (ಟಿಬೆಟನ್ಮ್ಯಾಸ್ಟಿಫ್).ಅಲಸ್ಕನ್‌ ಮ್ಯಾಲಮ್ಯೂಟ್‌ ಮತ್ತು ನಿಯೋಪೋಲಿಯನ್ ಮ್ಯಾಸ್ಟಿಫ್‌ ನಾಯಿಗಳಿಗೆ ಈಗ ₹ 8 ಕೋಟಿ ಬೆಲೆ ಇದೆ!ಮುನ್ನೂರು ಚಾಂಪಿಯನ್‌ ನಾಯಿಗಳಿವೆ.ತಿಂಗಳಿಗೆ 3– 4 ನಾಯಿ ಮಾರುತ್ತೇನೆ(₹ 5 ಲಕ್ಷ ಮೌಲ್ಯದ).

ಈ ನನ್ನ ವ್ಯವಹಾರದ ಬಗ್ಗೆ ಅಪ್ಪನಿಗೆ ಸಮಾಧಾನವಿಲ್ಲ. ‘ನನ್‌ ಮಗನೇ ಈ ನಾಯಿಯಿಂದ ದುಡ್ಡು ಮಾಡೋದನ್ನೆಲ್ಲ ಬಿಡ್ತಿಯಿಲ್ಲೊ...ಡಾಕ್ಟರ್‌ ಮಗ ಆಗಿ ನಾಯಿ ಮಾರ‍್ತಿ ಏನೊ...’ ಅಂತ ಬೈಯೋರು. ಆದರೆ ನನಗೆ ನಾಯಿ ಬಿಟ್ಟರೆ ಬೇರೆ ಜಗತ್ತೇ ಇಲ್ಲ. ಅವುಗಳನ್ನು ಬಿಟ್ಟು ಬೇರೆ ಏನನ್ನೂ ಯೋಚಿಸಲಾರೆ ಕೂಡ. ಅವುಗಳೊಂದಿಗೆ ಕಾಲ ಕಳೆಯುವುದು ಬಹಳ ಪ್ರೀತಿಯ ಕೆಲಸವಾಗಿದೆ. ಒಂದೊಂದು ನಾಯಿ ಮರಿಯನ್ನು ಮಾರಿದಾಗ ಈಗಲೂ ಕಣ್ಣು ಹನಿಗೂಡುವುದುಂಟು. ಆದರೆ ಈ ನಾಯಿಗಳನ್ನು ಕೊಂಡವರೂ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆನ್ನುವ ಭರವಸೆ ಸಮಾಧಾನ ಮಾಡಿ, ಸಾಂತ್ವನಗೈಯುತ್ತೆ.

***

ಇದೇ 12, 13, 14ರಂದು ಪದ್ಮನಾಭನಗರದ ಕಾರ್ಮೆಲ್‌ ಶಾಲಾ ಮೈದಾನದಲ್ಲಿ ‘ಪದ್ಮನಾಭನಗರ ಸಂಕ್ರಾಂತಿ ಉತ್ಸವ’ ಏರ್ಪಡಿಸಿದ್ದೇವೆ. ನೆಚ್ಚಿನ ಖಾದ್ಯಗಳನ್ನು ಸವಿದು, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹಾಡು–ನೃತ್ಯ ಕೇಳಿ, ನೋಡಿ ಈ ವಾರಾಂತ್ಯವನ್ನು ಕಳೆಯಬಹುದು. ಇಲ್ಲಿ ಸತೀಶ್ ಅವರ ದುಬಾರಿ ನಾಯಿಗಳೇ ಪ್ರಮುಖ ಆಕರ್ಷಣೆ. ಅಪರೂಪದ ಸುಮಾರು 12 ನಾಯಿಗಳನ್ನು ಇಲ್ಲಿ ಕರೆತರಲಿದ್ದಾರೆ. ಭಾರತದಲ್ಲಿ ಎಲ್ಲೂ ಕಾಣದ ಈ ಅಪೂರ್ವ ಶ್ವಾನಗಳನ್ನು ಇಲ್ಲಿ ಒಂದೇ ವೇದಿಕೆಯಲ್ಲಿ ಕಾಣಬಹುದು.–ದೀಪಕ್‌ ಶೆಣೈ, ಸಂಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT