ಸೋಮವಾರ, ಮಾರ್ಚ್ 1, 2021
24 °C

ಭೀತಿ ಬೇಡ ಎಚ್ಚರ ಇರಲಿ

ಡಾ. ಕಿರಣ್ ವಿ. ಎಸ್‌. Updated:

ಅಕ್ಷರ ಗಾತ್ರ : | |

Prajavani

ನಿಮ್ಮ ಕಣ್ಣ ಮುಂದೆ ಹುಲಿ ನಿಂತಿದ್ದರೆ ಅದು ಅಪಾಯ; ಕಣ್ಣ ಮುಂದೆ ಇಲ್ಲದ ಹುಲಿಯನ್ನು ಮನಸ್ಸು ಭ್ರಮಿಸುತ್ತಿದ್ದರೆ ಅದು ಆತಂಕ...

ಇಪ್ಪತ್ತೊಂದನೆಯ ಶತಮಾನವನ್ನು ಜಗತ್ತಿನ ‘ಶಾಂತಿಪರ್ವ’ ಎನ್ನಬಹುದು. ಇತಿಹಾಸದ ಯಾವುದೇ ಶತಮಾನಕ್ಕಿಂತ ಆತಂಕರಹಿತ ಜೀವನವನ್ನು ನಾವಿಂದು ನಡೆಸುತ್ತಿದ್ದೇವೆ. ಜಗತ್ತಿನ ಬಹಳಷ್ಟು ದೇಶಗಳು ಪ್ರಜಾಪ್ರಭುತ್ವದಲ್ಲಿವೆ; ಹಣಕಾಸಿನ ಸಮೃದ್ಧಿಯಿದೆ; ಬಡತನದ ಬಗ್ಗೆ ಬಹುತೇಕ ದೇಶಗಳಲ್ಲಿ ಕಾಳಜಿಯಿದೆ; ಆರೋಗ್ಯದ ವಿಷಯದಲ್ಲಿ ಅಪೂರ್ವವಾದ ಪ್ರಗತಿಯಾಗಿದೆ; ವಿಜ್ಞಾನ ಮತ್ತು ತಂತ್ರಜ್ಞಾನಗಳು ಪವಾಡವೆನಿಸುವ ಸವಲತ್ತುಗಳನ್ನು ನಮ್ಮ ಅಂಗೈಯಲ್ಲಿಟ್ಟಿವೆ. ಒಟ್ಟಿನಲ್ಲಿ ಮನುಕುಲ ಹಿಂದೆಂದೂ ಇಲ್ಲದಷ್ಟು ಶಾಂತಿಯಿಂದ ಇಂದು ಬದುಕುತ್ತಿದೆ. 

ಈ ಶಾಂತಿಯನ್ನು ಸ್ವಲ್ಪ ಮಟ್ಟಿಗೆ ಕದಡುವ ಪ್ರಸಂಗಗಳು ಬರುತ್ತಲೇ ಇರುತ್ತವೆ. ಅದು ಜಗತ್ತಿನ ಯಾವುದೋ ಭಾಗದಲ್ಲಿ ನಡೆಯುವ ಕದನದಿಂದ ನಮಗೆ ಬರಬೇಕಾದ ಇಂಧನದ ವರ್ಗಾವಣೆಯಲ್ಲಿ ಆಗುವ ಅಡೆತಡೆ ಇರಬಹುದು; ದೂರದ ದೇಶದಲ್ಲಿ ಆದ ಹಣಕಾಸಿನ ಅವ್ಯವಹಾರದಿಂದ ನಮ್ಮ ದೇಶದಲ್ಲಿ ಕುಸಿದ ಷೇರು ಮಾರುಕಟ್ಟೆ ಇರಬಹುದು; ಎಂಥದೋ ಸಾಗರದಾಳದಲ್ಲಿ ಆದ ಭೂಕಂಪ ನಮ್ಮ ದೇಶದ ಕಡಲತೀರಗಳಿಗೆ ಅಪ್ಪಳಿಸುವ ಸುನಾಮಿ ಆಗಬಹುದು; ಯಾವುದೋ ದೇಶದಲ್ಲಿ ಉದ್ಭವಿಸಿದ ಕಾಯಿಲೆಯೊಂದು ನಮ್ಮ ದೇಶದ ವ್ಯವಸ್ಥೆಯನ್ನು ಏರುಪೇರು ಮಾಡುವುದು – ಹೀಗೆ ‘ವಸುಧೈವ ಕುಟುಂಬಕಂ’ ಎನ್ನುವ ಭಾವವನ್ನು ಸುಖಗಳಿಗಿಂತ ಕಷ್ಟಗಳು ಮನದಟ್ಟಾಗಿಸುತ್ತವೆ. ನಿಶ್ಚಿತ ವಿನ್ಯಾಸದ ಜೀವನಕ್ರಮಕ್ಕೆ ಒಗ್ಗಿಕೊಂಡಿರುವ ಮಾನವಬದುಕು ಏಕಾಏಕಿ ಬದಲಾವಣೆಗಳನ್ನು ಕಂಡರೆ ಗಾಬರಿಗೊಳ್ಳುವುದು ಸಹಜ. ಆತಂಕದ ಕಾರಣಗಳು ತಮ್ಮ ನಿಯಂತ್ರಣದಲ್ಲಿ ಇಲ್ಲದವು ಎಂದು ತಿಳಿದರೂ ಅದರಿಂದ ಮಾನಸಿಕ ತುಮುಲಕ್ಕೆ ಒಳಗಾಗುವವರು ಲಕ್ಷಾಂತರ ಮಂದಿ. ಆದರೆ, ಈ ತುಮುಲ ಅಗತ್ಯವೇ?

ಆತಂಕಗಳ ಬಗ್ಗೆ ಮನೋವಿಜ್ಞಾನಿಗಳು, ವೈದ್ಯರು ಒಂದು ಸಲಹೆಯನ್ನು ಹೇಳುತ್ತಲೇ ಬಂದಿದ್ದಾರೆ: ‘ಬದುಕಿನ ಬಗ್ಗೆ ಎಚ್ಚರವಿರಲಿ; ಆದರೆ ಭೀತಿ ಬೇಡ’. ಜೀವನದ ಪ್ರತಿಯೊಂದು ಸಮಸ್ಯೆಗೂ ಉತ್ತರ ಇದ್ದೇ ಇರುತ್ತದೆ. ಸಮರ್ಥ ಪರಿಹಾರ ದೊರೆಯುವವರೆಗೆ ಅದು ನಮ್ಮ ಭರವಸೆಯನ್ನು ಅಲುಗಾಡಿಸದಂತೆ ಎಚ್ಚರ ವಹಿಸಬೇಕು; ಒಂದು ವೇಳೆ ಸಮಸ್ಯೆಗಳು ನಮ್ಮನ್ನು ನೇರವಾಗಿ ಕಾಡಿದರೂ, ನಮ್ಮ ಮಿತಿಗಳಲ್ಲಿ ಅದಕ್ಕೆ ಸಾಧ್ಯವಿರಬಹುದಾದ ಪರ್ಯಾಯಗಳ ಬಗ್ಗೆ ಆಲೋಚಿಸಬೇಕೇ ವಿನಾ ಆತಂಕ ಪಡಬಾರದು. ಆಡಳಿತದಲ್ಲಿ ಸಮಸ್ಯೆಗಳು ಎದುರಾದಾಗ ಸರ್ ಎಂ. ವಿಶ್ವೇಶ್ವರಯ್ಯನವರು ‘What is the worst?’ ಎಂದು ಕೇಳುತ್ತಿದ್ದರಂತೆ. ಅದೇಕೆ ಎಂದು ಯಾರೋ ಪ್ರಶ್ನಿಸಿದಾಗ ‘ನಮ್ಮ ಮನಸ್ಸನ್ನು ಅತಿ ದೊಡ್ಡ ನಷ್ಟಕ್ಕೆ ಒಪ್ಪಿಸಿದಾಗ ಪರಿಹಾರಗಳನ್ನು ಯೋಜಿಸುವುದು ಸರಾಗ. ಇಲ್ಲವಾದರೆ ಪ್ರತಿಯೊಂದು ಹಂತದಲ್ಲಿಯೂ ಸರಿ-ತಪ್ಪುಗಳ ಜಿಜ್ಞಾಸೆ ಮಾಡಲಾಗದು’ ಎಂದು ಅವರ ಚಿಂತನೆ. ಇದು ಸಾಧಕರು ಕಲಿಸುವ ಜೀವನಪಾಠ. ಇದೇ ಮಾತನ್ನು ಜಗತ್ತಿನ ಪ್ರಸಿದ್ಧ ಮನಶಾಸ್ತ್ರಜ್ಞರೂ ಕೂಡ ಹೇಳಿದ್ದಾರೆ.

ಅಪಾಯ ಮತ್ತು ಆತಂಕಗಳ ವ್ಯತ್ಯಾಸದ ಬಗ್ಗೆ ಬಹಳ ಜನ ಗೊಂದಲಗೊಳ್ಳುತ್ತಾರೆ. ‘ನೀವು ಕಾಡಿನಲ್ಲಿ ನಡೆಯುತ್ತಿದ್ದೀರಿ ಎಂದು ಭಾವಿಸಿ. ನಿಮ್ಮ ಕಣ್ಣ ಮುಂದೆ ಹುಲಿ ನಿಂತಿದ್ದರೆ ಅದು ಅಪಾಯ; ಕಣ್ಣ ಮುಂದೆ ಇಲ್ಲದ ಹುಲಿಯನ್ನು ಮನಸ್ಸು ಭ್ರಮಿಸುತ್ತಿದ್ದರೆ ಅದು ಆತಂಕ’ ಎಂದು ತಜ್ಞರ ವಿವರಣೆ. ಅಪಾಯಕ್ಕೆ ತತ್‌ಕ್ಷಣದ ಪರಿಹಾರ ಬೇಕು. ಆತಂಕಕ್ಕೆ ಅಂತಹ ಪರಿಹಾರವಿಲ್ಲ. ಕಾಡಿನ ಪಯಣ ನಮ್ಮ ಜೀವನ. ಹುಲಿಗಳು ನಮ್ಮ ಕಷ್ಟಗಳು. ಪಯಣವಾಗಲೀ ಹುಲಿಗಳಾಗಲೀ ತಪ್ಪಿದ್ದಲ್ಲ. ನಮ್ಮೊಟ್ಟಿಗೆ ಸದಾ ಇರಬೇಕಾದ್ದು ಧೈರ್ಯ, ಆತ್ಮವಿಶ್ವಾಸ, ಅಪಾಯವನ್ನು ನಿರ್ವಹಿಸಬಲ್ಲ ಸಮರ್ಥ ಯೋಜನೆಯ ಕಾರ್ಯಸೂಚಿ, ಮತ್ತು ಭರವಸೆಯ ಆಶಾವಾದ. ಈ ಪಟ್ಟಿಯಲ್ಲಿ ಆತಂಕಕ್ಕೆ ಎಡೆಯಿಲ್ಲ!

ಜನಪ್ರಿಯ ಹ್ಯಾರಿ ಪಾಟರ್ ಸರಣಿಯಲ್ಲಿ ಡಂಬಲ್‌ಡೋರ್ ಮಹಾಶಯ ‘It is the unknown we fear when we look upon death and darkness‘ ಎನ್ನುತ್ತಾನೆ. ಇಲ್ಲಿ darkness ಎನ್ನುವುದು ಅಜ್ಞಾತವೂ ಆಗಬಹುದು; ಅಜ್ಞಾನವೂ ಆಗಬಹುದು! ಅವುಗಳ ಸಂಗಮ ಭೀತಿದಾಯಕ ಎಂಬುದರಲ್ಲಿ ಅನುಮಾನವಿಲ್ಲ. ಪ್ರಸ್ತುತ ಜಾಗತಿಕ ವಿಪತ್ತೆಂಬ ಕೋವಿಡ್-19 ಉದಾಹರಣೆಯನ್ನೇ ಗಮನಿಸಿ. ಆರಂಭದಲ್ಲಿ ಕೋವಿಡ್-19 ನಮಗೆ ಅಜ್ಞಾತವೂ ಆಗಿತ್ತು; ಅದರ ಜ್ಞಾನವೂ ಮಿತವಾಗಿತ್ತು. ಇಂದು ಸಂದರ್ಭ ನಮ್ಮ ನಿಯಂತ್ರಣಕ್ಕೆ ದಕ್ಕುತ್ತಿದೆ. ಯಾವುದೇ ಅಶಾಂತಿಯ ಬಗ್ಗೆ ಜನರು ಸಮ್ಯಕ್ ಜ್ಞಾನವನ್ನು ಬೆಳೆಸಿಕೊಂಡಾಗ ಸಮಾಜದ ಆತಂಕ ತಾನೇತಾನಾಗಿ ಕಡಿಮೆಯಾಗುತ್ತದೆ. ವಿದ್ಯೆಯ ಮೂಲೋದ್ದೇಶವೇ ಅಜ್ಞಾನದಿಂದ, ಆತಂಕದಿಂದ ವಿಮುಕ್ತಿ. ಅದನ್ನು ಸಾಧಿಸುವ ಒಳ್ಳೆಯ ಅವಕಾಶ ಕೋವಿಡ್-19 ಕಾರಣದಿಂದ ಆನುಷಂಗಿಕವಾಗಿ ಒದಗಿದೆ. ಕೋವಿಡ್-19 ಮಾನವತೆಯ ಬಗ್ಗೆ, ಸಮಷ್ಟಿಯ ಒಗ್ಗಟ್ಟಿನ ಬಗ್ಗೆ, ಸಾಂಘಿಕ ಕತೃತ್ವಶಕ್ತಿಯ ಬಗ್ಗೆ ಆತ್ಮವಿಶ್ವಾಸವನ್ನು ತುಂಬುವ ಬಹು ದೊಡ್ಡ ಉದಾಹರಣೆಯಾಗಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.