ಕಣ್ಣು ದಾನಕ್ಕೆ ವಾಕಥಾನ್

7

ಕಣ್ಣು ದಾನಕ್ಕೆ ವಾಕಥಾನ್

Published:
Updated:
Deccan Herald

ರಾಷ್ಟ್ರೀಯ ಕಣ್ಣುದಾನ ಪಾಕ್ಷಿಕದ ಅಂಗವಾಗಿ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ವಾಕಥಾನ್‌ಗೆ ನಗರದಲ್ಲಿ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಾಕಥಾನ್‌ನಲ್ಲಿ ಗುಡ್‌ವಿಲ್ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯರು, ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಹಾಗೂ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದವರೆಲ್ಲ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ವಾಗ್ದಾನ ಮಾಡಿದರು. ಕಣ್ಣುಗಳ ದಾನಕ್ಕೆ ಸಂಬಂಧಿಸಿದ ಪತ್ರಗಳಿಗೂ ಅವರು ಸಹಿ ಹಾಕಿದರು. ಇದಕ್ಕೂ ಮುನ್ನ, ನಗರದ ಸಿಆರ್‌ಪಿಎಫ್‍ನ ಕಾಂಪೊಸಿಟ್ ಆಸ್ಪತ್ರೆಯ ಡಿಐಜಿಪಿ ಡಾ.ಸುಜಾತ ಅವರು ವಾಕಥಾನ್‍ಗೆ ಚಾಲನೆ ನೀಡಿದರು. ಬಿಎಸ್‍ಎಫ್‍ನ ಡಿಐಜಿ ಯು.ಎಂ.ಸುಬ್ರಮಣಿ ಅವರೂ ಇದ್ದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರವಿ, ‘ಸರ್ಕಾರ ಪ್ರಸ್ತುತ ಕಾರ್ನಿಯಲ್ ಕಸಿಗೆ ಬದಲಾಗಿ ಕೆಟರಾಕ್ಟ್ ಸರ್ಜರಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಸರ್ಕಾರ ದೇಶವನ್ನು ಅಂಧಮುಕ್ತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಯೋಜನೆಯನ್ನೇ ರೂಪಿಸಿದೆ. ಈ ಯೋಜನೆಯಡಿಯಲ್ಲಿ ಕಣ್ಣು ಶಸ್ತ್ರಚಿಕಿತ್ಸೆಗೆಂದೇ ಹಣವನ್ನೂ ಮೀಸಲಿಟ್ಟಿದೆ. ಆದರೆ, ಈ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸದ ಕಾರಣ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ’ ಎಂದರು.

‘ಬೆಂಗಳೂರು, ಮೈಸೂರಿನಂತಹ ನಗರಗಳಿಗೆ ಹೋಲಿಸಿದರೆ 2 ಮತ್ತು 3 ನೇ ವರ್ಗದ ನಗರ-ಪಟ್ಟಣಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕಣ್ಣು ದಾನ ಮಾಡುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. ಇದಕ್ಕೆ ಪ್ರಮುಖ ಕಾರಣ ಆ ಪ್ರದೇಶಗಳಲ್ಲಿ ಸೂಕ್ತ ರೀತಿಯಲ್ಲಿ ಕಣ್ಣು ಬ್ಯಾಂಕುಗಳು ಇಲ್ಲದಿರುವುದು. ಅಂಧತ್ವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪರಿಣಿತ ನೇತ್ರ ತಜ್ಞರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಅಲ್ಲದೇ, 2 ಮತ್ತು 3 ನೇ ವರ್ಗದ ನಗರ-ಪಟ್ಟಣಗಳಲ್ಲಿ ಇನ್ನೂ ಹೆಚ್ಚಿನ ನೇತ್ರತಜ್ಞರು ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕಣ್ಣು ಕಸಿಗೆ ಬೇಕಾದ ಮೂಲಸೌಕರ್ಯ
ಗಳನ್ನು ಕಲ್ಪಿಸುವುದು ಅಗತ್ಯ’ ಎಂದು ವಿವರಿಸಿದರು.

***

ಶ್ರೀಲಂಕಾದಂತಹ ಸಣ್ಣ ದೇಶದಲ್ಲಿ ಕಣ್ಣು ದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಅಗತ್ಯಕ್ಕಿಂತ ಹೆಚ್ಚು ಕಣ್ಣು ದಾನ ಮಾಡಲಾಗುತ್ತಿದೆ. ಹೆಚ್ಚುವರಿ ಕಣ್ಣುಗಳನ್ನು ಅಗತ್ಯವಿರುವ ದೇಶಗಳಿಗೆ ದಾನವಾಗಿ ಆ ದೇಶ ನೀಡುತ್ತಿದೆ. ಆದರೆ, ಭಾರತದ ಕತೆಯೇ ಬೇರೆ. ಇಲ್ಲಿ ಕಣ್ಣಿನ ಒಟ್ಟು ಅಗತ್ಯದ ಶೇ. 10 ರಷ್ಟನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ

– ಡಾ.ರಘು ನಾಗರಾಜ್

***

ದಾನದ ಪ್ರಮಾಣ ಕಡಿಮೆ

ನಮ್ಮ ದೇಶದಲ್ಲಿ 80 ಲಕ್ಷ ಮಂದಿ ಅಂಧರಿದ್ದಾರೆ. ನಮ್ಮ ಜನಸಂಖ್ಯೆಯಲ್ಲಿ ಶೇ.1 ರಷ್ಟು ಜನರು ತಮ್ಮ ಕಣ್ಣುಗಳನ್ನು ದಾನ ಮಾಡಿದರೆ, ದೇಶದಲ್ಲಿರುವ ಎಲ್ಲಾ ಅಂಧರಿಗೆ ದೃಷ್ಟಿ ಬರುತ್ತದೆ. ಆದರೆ, ಪ್ರತಿವರ್ಷ 15 ಸಾವಿರಕ್ಕೂ ಕಡಿಮೆ ಕಣ್ಣುಗಳನ್ನು ದಾನ ಮಾಡಲಾಗುತ್ತಿದೆ ಎಂಬುದು ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ವೈದ್ಯರ ಅಭಿಪ್ರಾಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !