ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಪ್ರತಿಭೆಗಳಿಗೆ ಅಪ್ಪನೇ ‘ದ್ರೋಣ’

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಈಗ ನೆತ್ತಿ ಸುಡುವ ಬಿಸಿಲು. ಹೊರಗೆ ಹೋಗಲಾಗದೇ, ಮನೆಯೊಳಗೆ ಝಳ ತಡೆಯಲಾಗದೇ ಒದ್ದಾಡುವವರೇ ಎಲ್ಲ ಕಡೆ. ಇಂತಹದರಲ್ಲಿ ಕ್ರೀಡೆ ಎಂದರೆ ‘ಉಸ್ಸಪ್ಪಾ..’ ಎನ್ನುವವರೇ ಹೆಚ್ಚು. ಆದರೆ, ಯಾದಗಿರಿಯ ನವಲೆ ಕುಟುಂಬದ ಕ್ರಿಕೆಟ್‌ ಪ್ರೀತಿಗೆ ಬಿಸಿಲ ಬಿಸಿ ತಟ್ಟಿಲ್ಲ.

ಈ ದಿನಗಳಲ್ಲಿಯೂ ಪಾಂಡುರಂಗ ಆನಂದರಾವ್ ನವಲೆ ಅವರ ಇಬ್ಬರು ಮಕ್ಕಳು ಕ್ರಿಕೆಟ್ ಅಭ್ಯಾಸ ನಿಲ್ಲಿಸಿಲ್ಲ. ಮಕ್ಕಳನ್ನು ದೊಡ್ಡ ಆಟಗಾರರನ್ನಾಗಿ ಮಾಡಬೆನ್ನುವ ಛಲ ಪಾಂಡುರಂಗ ಅವರದ್ದು. ಅಪ್ಪನ ಕನಸು ನನಸು ಮಾಡುವ ಪಣ ಭೀಮರಾವ್ ಮತ್ತು ಸಿದ್ಧಾಂತ್ ಅವರದ್ದು. ವ್ಯಾಪಾರ ವೃತ್ತಿಯಲ್ಲಿರುವ ಪಾಂಡುರಂಗ ಅವರು ತಾವು ಕ್ರಿಕೆಟರ್ ಆಗಬೇಕು ಎಂಬ ಕನಸು ಕಂಡವರು. ಅದು ಈಡೇರದ ಕಾರಣ ಆ ಕನಸಿನ ಬೀಜವನ್ನು ಮಕ್ಕಳಲ್ಲಿ ಬಿತ್ತಿ, ಅದಕ್ಕೆ ನೀರೆರೆದು ಪೋಷಿಸುತ್ತಿದ್ದಾರೆ.

ಅವರ ಮಕ್ಕಳಾದ ಭೀಮರಾವ್ ನವಲೆ ಮತ್ತು ಸಿದ್ಧಾಂತ್ ನವಲೆ ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಎಂಬುವುದು ಅವರ ಹೆಬ್ಬಯಕೆ. ಅದಕ್ಕಾಗಿ ಅವರು ಅಪಾರ ಪರಿಶ್ರಮಪಡುತ್ತಿದ್ದು, ಮಕ್ಕಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ.

ಭೀಮರಾವ್‌ಗೆ ಒಂದು ರೀತಿಯಲ್ಲಿ ಮನೆಯೇ ಮೊದಲ ಪಾಠಶಾಲೆ. ತಂದೆಯೇ ಕೋಚ್‌. ಅವರು ಪ್ರತಿನಿತ್ಯ ಎಂಟು ಗಂಟೆ ಮಗನಿಗೆ ಅಭ್ಯಾಸ ಮಾಡಿಸುತ್ತಾರೆ. ಅಲ್ಲದೆ, ತಿಂಗಳಲ್ಲಿ ಏಳು ದಿನ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ, ವಾರದಲ್ಲಿ ಮೂರು ದಿನ ಕಲಬುರ್ಗಿಯ ಕರ್ನಾಟಕ ಕ್ರಿಕೆಟ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಾರೆ. ಉಳಿದ ದಿನ ಮನೆಯಲ್ಲೇ ಅಭ್ಯಾಸ ನಡೆಯುತ್ತದೆ.

ಮಕ್ಕಳ ಕ್ರಿಕೆಟ್ ಕಲಿಕೆಗೆ ಸಹಾಯವಾಗಲು ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮೆಂಟ್ ಪಿಚ್ ನಿರ್ಮಿಸಿರುವ ಅವರು, ಫಿಟ್‌ನೆಸ್‌ಗಾಗಿ ಮನೆಯಲ್ಲಿ ಜಿಮ್‌ ಸೌಲಭ್ಯವನ್ನೂ ಕಲ್ಪಿಸಿದ್ದಾರೆ.

16 ವರ್ಷದ ಭೀಮರಾವ್‌ ಈಗಾಗಲೇ ಕೆಎಸ್‌ಸಿಎ ಎರಡನೇ ಡಿವಿಷನ್‌ ಕ್ರಿಕೆಟ್ ಟೂರ್ನಿ, 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮವಾಗಿ ಆಡಿ ಭರವಸೆ ಮೂಡಿಸಿದ್ದಾರೆ. ಅವರ ಇನ್ನೊಬ್ಬ ಮಗ 13 ವರ್ಷದ ಸಿದ್ಧಾಂತ್ ವೃತ್ತಿಪರ ತರಬೇತಿ ಪಡೆಯುತ್ತಿದ್ದಾರೆ.

‘ಮಕ್ಕಳು ಓದಿ ಸರ್ಕಾರಿ ಕೆಲಸ ಮಾಡಬೇಕು ಎಂದು ನಾನು ಬಯಸುವುದಿಲ್ಲ. ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಎಂಬವುದು ನನ್ನ ಕನಸು. ಹೀಗಾಗಿ ಕ್ರಿಕೆಟ್ ಕಲಿಕೆಗೆ ಮತ್ತು ಅದರಲ್ಲಿ ಸಾಧನೆ ಮಾಡಲು ಏನು ಬೇಕೋ ಎಲ್ಲವನ್ನೂ ಮಾಡಿದ್ದೇನೆ ಎನ್ನುತ್ತಾರೆ‘ ಪಾಂಡುರಂಗ.

ಭೀಮರಾವ್‌ 12 ವರ್ಷದವನಿದ್ದಾಗ ಅವನಿಗೆ ವೃತ್ತಿಪರ ತರಬೇತಿ ಕೊಡಿಸಲು ಆರಂಭಿಸಿದೆ. ಅಲ್ಲದೆ, ನನಗೆ ಗೊತ್ತಿರುವ ಅಂಶಗಳನ್ನು ಪ್ರತಿನಿತ್ಯ ನಾನೇ ಅವರಿಗೆ ಹೇಳಿಕೊಡುತ್ತೇನೆ. ಕ್ರೀಡಾಪಟುಗಳಿಗೆ ಫಿಟ್‌ನೆಸ್ ಬಹಳ ಮುಖ್ಯ. ಹೀಗಾಗಿ ಮನೆಯಲ್ಲೇ ಜಿಮ್ ವ್ಯವಸ್ಥೆ ಇದೆ ಎಂದರು.

ಹಿರಿಯ ಮಗನನ್ನು ಏಳನೇ ತರಗತಿಗೆ ಶಾಲೆ ಬಿಡಿಸಿದ್ದೆ. ಆದರೆ, ಹಿತೈಷಿಗಳ ಒತ್ತಾಯಕ್ಕೆ ಶಾಲೆಗೆ ಕಳಿಸುತ್ತಿದ್ದೇನೆ. ಆದರೆ, ಅವನು ಪೂರ್ಣ ಸಮಯ ಕ್ರಿಕೆಟ್ ಅಭ್ಯಾಸಕ್ಕೆ ಮೀಸಲಿಡಬೇಕು. ಉಳಿದಂತೆ ಪರೀಕ್ಷೆ ಬರೆಯಲು ಮಾತ್ರ ಶಾಲೆಗೆ ಹೋಗುತ್ತಾನೆ. ಇದಕ್ಕೆ ಶಾಲೆಯವರೂ ಸಹಕರಿಸುತ್ತಾರೆ. ಅವರಿಗೆ ನಾನೇ ಮನೆಯಲ್ಲಿ ಗಣಿತ, ಇಂಗ್ಲಿಷ್ ಹೇಳಿಕೊಡುತ್ತೇನೆ. ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ನನ್ನ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಅವರ ಭವಿಷ್ಯದ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT