ಶುಕ್ರವಾರ, ಜುಲೈ 30, 2021
21 °C

ಅಪ್ಪನ ನೆನಪು | ‘ತಲೆ ತಗ್ಗಿಸದೆ ಬದುಕಲು ಕಲಿಸಿದ ಪಪ್ಪ’

ಚುಕ್ಕಿ ನಂಜುಂಡಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಪಪ್ಪ ನಮ್ಮನ್ನು ಅಗಲಿದಾಗ ನನಗೆ ಇಪ್ಪತ್ತೆರೆಡು ವರ್ಷ. ಆ ಇಪ್ಪತ್ತೆರಡು ವರ್ಷಗಳಲ್ಲಿ ನಮಗೆ ಅವರು ಸಿಕ್ಕಿದ್ದು ಬಹಳ ಕಡಿಮೆ. ನಾನು ಹುಟ್ಟುವ ಹೊತ್ತಿಗೆ ನರಗುಂದ ಗೋಲಿಬಾರ್ ನಡೆದಿತ್ತು. ರೈತ ಚಳವಳಿಯ ಆರಂಭದ ದಿನಗಳವು. ಅವರ ಹೆಚ್ಚು ಸಮಯ ಜನರ ಮಧ್ಯೆ, ರಸ್ತೆಗಳ ಮೇಲೆ, ಹಳ್ಳಿಗಳಲ್ಲಿ ಕಳೆಯುತ್ತಿದ್ದರು.

ಪಪ್ಪ ನಮ್ಮ ಜೊತೆ ಕಳೆದಿದ್ದು ಕಡಿಮೆ ಸಮಯವಾದರೂ, ಅವರ ಜೊತೆಗಿದ್ದ ಪ್ರತಿ ಕ್ಷಣವೂ ಮರೆಯಾಲಾಗದಂತಹವು. ಪಪ್ಪ ನಮಗೆಂದೂ ಬೋಧಿಸಲಿಲ್ಲ. ಅವರು ನಂಬಿದ ವಿಚಾರಗಳಂತೆ ಬದುಕಿನುದ್ದಕ್ಕೂ ನಡೆದುಕೊಂಡರು ಅಷ್ಟೆ. ಅಲ್ಲೆಲ್ಲೂ ಆಷಾಢಭೂತಿತನಕ್ಕೆ ಜಾಗ ಇರಲಿಲ್ಲ. ಅಸತ್ಯ, ಭ್ರಷ್ಟತೆಯ ಜೊತೆ ರಾಜಿ ಇರುತ್ತಿರಲಿಲ್ಲ. ಸತ್ಯವನ್ನು ನಂಬಿ ಬದುಕಿದ್ದ ವ್ಯಕ್ತಿತ್ವ ಅದು. ಪ್ರಾಮಾಣಿಕರನ್ನು, ಮುಗ್ಧರನ್ನು, ಕಷ್ಟ ಪಟ್ಟು ದುಡಿಯುವವರನ್ನು ಬಹಳ ಪ್ರೀತಿಸುತ್ತಿದ್ದರು. ಇವೆಲ್ಲವನ್ನೂ ನೋಡುತ್ತಲೇ ಬೆಳೆದವಳು ನಾನು. ಹಾಗಾಗಿಯೇ ಪಪ್ಪನನ್ನು ಎಷ್ಟು ಪ್ರೀತಿ ಮಾಡುತ್ತೇನೋ ಅಷ್ಟೇ ಗೌರವಿಸುತ್ತೇನೆ.

ಪಪ್ಪ ಮಾಡದ ಕೆಲಸಗಳಿರಲಿಲ್ಲ. ಕಾನೂನಿನಲ್ಲಿ ಎಷ್ಟು ಪರಿಣತಿ ಹೊಂದಿದ್ದರೋ ಅಷ್ಟೇ ಪರಿಣತಿ ಕಾರು ರಿಪೇರಿ ಮಾಡುವುದರಲ್ಲಿತ್ತು. ಮರಗೆಲಸ ಮಾಡುವುದರಲ್ಲಿತ್ತು. ನಮ್ಮ ಮನೆ ಸೋಫಾ ಕವರ್, ಕಿಟಕಿ ಕರ್ಟನ್ ಹೊಲೆಯುವುದರಲ್ಲಿ, ಉದ್ದಿನ ಹಪ್ಪಳ, ಸಂಡಿಗೆ, ಹಣ್ಣುಗಳನ್ನು ಕತ್ತರಿಸುವಲ್ಲೂ ಪರಿಣತಿ ಇತ್ತು. ಬದುಕಿಗೆ ಬೇಕಾಗಿದ್ದ ಎಲ್ಲಾ ಕೌಶಲಗಳನ್ನೂ ಕಲಿತಿದ್ದರು. ಅಂತಹ ಕೌಶಲಯುಕ್ತ ಕೆಲಸಗಳನ್ನು ಅತ್ಯಂತ ಪ್ರೀತಿಯಿಂದ ಮಾಡಿ ತೋರಿಸಿ, ‘ನೋಡಿದೆಯಾ ಹೇಗೆ ಮಾಡೋದು ಅಂತಾ... ನೋಡು ಎಷ್ಟು ದುಡ್ಡು ಉಳಿಸಿದೆ’ ಅಂತ ಹೇಳಿ ತಮಾಷೆ ಮಾಡುತ್ತಿದ್ದರು.

ಬದುಕಿನ ಸಣ್ಣ ಸಣ್ಣ ವಿಷಯಗಳಲ್ಲೂ ಪಪ್ಪ ನೆನಪಾಗುತ್ತಾರೆ... ಗೋಡೆಗೆ ಮೊಳೆ ಹೊಡೆಯುವಾಗ, ಮಾವಿನ ಹಣ್ಣು ಕತ್ತರಿಸುವಾಗ, ಡ್ರೈವರ್ ಎಡಗಡೆಯಿಂದ ಓವರ್‌ಟೇಕ್‌ ಮಾಡುತ್ತಿರುವಾಗ, ಸೋಮಾರಿತನದಿಂದಾಗಿ ಸಮಯಕ್ಕೆ ಸರಿಯಾಗಿ ಹೋಗದೇ ಇದ್ದಾಗ ಪಪ್ಪ ಎದುರು ಬಂದು ಬಿಡುತ್ತಾರೆ. ಬಹುಶಃ ಇವೇ ಕಾರಣಗಳಿಂದಾಗಿಯೇ ಇಂದಿಗೂ ಪಪ್ಪ ನನ್ನ ಜೊತೆಯಲ್ಲಿಯೇ ಇದ್ದಾರೆ ಎಂಬ ಭಾವನೆ. 

ಪಪ್ಪ ಮನೆಯಲ್ಲಿದ್ದರೆ ನಮಗೆಲ್ಲ ಹಬ್ಬದ ರೀತಿ ಅನ್ನಿಸುತ್ತಿತ್ತು. ಅವರು ಮನೆಯಲ್ಲಿದ್ದಾಗ, ಒಮ್ಮೊಮ್ಮೆ ಬೆಳಗಿನ ಜಾವ ಐದು ಗಂಟೆಯವರೆಗೆ ನಾವೆಲ್ಲರೂ ಮಾತನಾಡುತ್ತಾ ಕೂರುತ್ತಿದ್ದೆವು. ಅದೇ ನಮ್ಮ ಕುಟುಂಬಕ್ಕೆಂದು ಸಿಗುತ್ತಿದ್ದ ಖಾಸಗಿ ಸಮಯ. ಆ ಸಮಯದಲ್ಲಿ ನಮ್ಮ ತಾತ, ಮುತ್ತಾತ ನಡೆಸಿದ ಸ್ವಾಭಿಮಾನಿ ಬದುಕಿನ ಬಗ್ಗೆ ಹೇಳುತ್ತಿದ್ದರು. ಊರಿನ ಪಟೇಲರಾಗಿದ್ದ ಮುತ್ತಾತ ಒಬ್ಬ ಬ್ರಿಟಿಷ್ ಅಧಿಕಾರಿಗೆ ಪೊರಕೆಯಿಂದ ಹೊಡೆದು ಊರಿನಿಂದ ಅಟ್ಟಿದ್ದ ಕತೆಗಳನ್ನು ಹೇಳುತ್ತಿದ್ದರು. ‘ನೀವೂ ಹೀಗೆ ಯಾರಿಗೂ ತಲೆ ಬಾಗದೇ ಬದುಕಬೇಕು’ ಎಂದು ಹೇಳುತ್ತಿದ್ದರು.

ಪಪ್ಪ ಅತ್ಯಂತ ಸ್ವಾಭಿಮಾನಿ. ಆದರೆ, ಅತಿಸೂಕ್ಷ್ಮ. ತಾವು ಪ್ರೀತಿಸುತ್ತಿದ್ದ ಸಮಾಜ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅಮಾನವೀಯವಾಗಿ ನಡೆಸಿಕೊಂಡ ಘಟನೆಗಳು ಅವರ ಮನಸ್ಸನ್ನು ಘಾಸಿಗೊಳಸಿತ್ತು. ಅದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಆದರೆ, ಎಲ್ಲೂ ಅವರು ಸಿನಿಕರಾಗಲಿಲ್ಲ. ‘ನೀವು ಯಾರನ್ನು ನಂಬ ಬಾರದೋ ಅವರನ್ನೇ ನಂಬಿ ಮೋಸ ಹೋಗುತ್ತೀರಿ’ ಎಂದು ಅಮ್ಮ ಆಗಾಗ ಹೇಳುತ್ತಿದ್ದರು. ಅದಕ್ಕೆ ‘ನಂಬಿಕೆ ವಿಶ್ವಾಸವಿಲ್ಲದೇ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಕಣಮ್ಮ’ ಎಂದು ಪಪ್ಪ ಹೇಳುತ್ತಿದ್ದರು.

ಪಪ್ಪ ನನಗೆ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವುದನ್ನು ಹೇಳಿಕೊಟ್ಟ ಒಬ್ಬ ಮೇಷ್ಟ್ರು. ಶಿಸ್ತು-ಬದ್ಧತೆಯನ್ನು ತೋರಿಸಿಕೊಟ್ಟ ಒಬ್ಬ ಹೋರಾಟಗಾರ. ಕೊನೆ ಕೊನೆಗಂತೂ ನಿಷ್ಕಲ್ಮಶ ಹೃದಯವಿದ್ದ ಒಂದು ಮಗುವಾಗಿ ಹೋದರು.

ಪಪ್ಪ, ಒಳ್ಳೆಯ ಕ್ರೀಡಾ ಪಟುವಾಗಿದ್ದರು. ಕುದುರೆ ಸವಾರಿ, ಟೆನ್ನಿಸ್ ಮತ್ತು ಬ್ಯಾಡಮಿಂಟನ್ ಚೆನ್ನಾಗಿ ಆಡುತ್ತಿದ್ದರು.

ಹಿಂದೂಸ್ತಾನಿ ಸಂಗೀತದ ಜ್ಞಾನವಿತ್ತು. ಮೊಹಮ್ಮದ್ ರಫಿಯವರ ಬೈಜುಬಾವರಾ ಸಿನಿಮಾದ ಮನ ತಡಪತ ಗೀತೆಯನ್ನು ಬಹಳ ಇಷ್ಟಪಡುತ್ತಿದ್ದರು. Painting, Crochet, tailoring ಬರುತ್ತಿತ್ತು.

ನೆನಪಿನಲ್ಲಿ ಉಳಿಯುವ ಸಂವಾದ

ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸಹಪಾಠಿಯೊಬ್ಬಳು ನನ್ನ ಜಾತಿ ಯಾವುದೆಂದು ಕೇಳಿದಳು. ಜಾತಿ ಎಂಬ ಪದ ಬಹುಷಃ ನಾನು ಅದೇ ಮೊದಲು ಕೇಳಿದ್ದಿರಬೇಕು.ಪಪ್ಪ ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ದಾರಿಯಲ್ಲಿ ನನ್ನ ಸ್ನೇಹಿತೆ ಕೇಳಿದ ಪ್ರಶ್ನೆಯನ್ನು ಕೇಳಿದೆ. ನಾವು ಮನುಷ್ಯ ಜಾತಿಗೆ ಸೇರಿದವರೆಂದು ಹೇಳಲು ಹೇಳಿದರು.

ಜಾಗತೀಕರಣದ ವಿರುದ್ಧ ವಿದ್ಯಾರ್ಥಿಗಳ ಚಳವಳಿ ಕಟ್ಟಲು ಯೂರೋಪಿನ ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಲು ಒಮ್ಮೆ ಮೂರು ತಿಂಗಳ ಪ್ರವಾಸ ಹಮ್ಮಿಕೊಂಡಿದ್ದರು. ಆಗ international call ಮಾಡಬೇಕಾದರೆ ತುಂಬಾ ದುಬಾರಿ. ಅವರೂ ಕೂಡ ಅಪರೂಪಕ್ಕೊಮ್ಮೆ ಫೋನ್ ಮಾಡುತ್ತಿದ್ದರು. ನಾನಾಗ 15 ಅಥವಾ 16 ವಯಸ್ಸಿನವಳು. ಒಮ್ಮೆ ಫೋನ್ ಮಾಡಿದಾಗ ನಾನೇ ಫೋನ್ ತೆಗೆದುಕೊಂಡೆ. ಅಳುಬಂದು ಬಿಟ್ಟಿತ್ತು. ಆ ಕಡೆಯಿಂದ ಅವರೂ ಅಳುತ್ತಿದ್ದರು ಅನ್ನಿಸುತ್ತೆ. ನನಗೆ ಜರ್ಮನಿಯಿಂದ ಏನು ತರಲಿ ಎಂದರು. ನಾನು ನೀವು ಬೇಗ ಬನ್ನಿ. ನಮಗೇನೂ ಬೇಡ ಎಂದೆ. ಆಗ ಅಳಬೇಡ ಚುಕ್ಸ್... ಪೈಲಿಟ್‌ಗೆ ಹೇಳ್ತೀನಿ ಜೋರಾಗಿ ವಿಮಾನ ಓಡಿಸು ಅಂತ. ಬೇಗ ಬಂದು ಬಿಡ್ತೀನಿ ಅಂದರು. ನಾನು ನಕ್ಕು ಪಪ್ಪ ನನಗೀಗ 16 ವರ್ಷ ಅಂದೆ... ಅವರೂ ನಕ್ಕರು.

ಕೊನೆಯ ಮಾತು

ಈಗ ಅಮೃತ ಭೂಮಿ ಬೆಳೆಯುತ್ತಿದೆ. ಅವರು ಅಂದುಕೊಂಡ ಕನಸುಗಳು ಚಿಗುರೊಡೆಯುತ್ತಿವೆ. ಅವರ ಕೊನೆಯ ಯೋಜನೆಗಳಲ್ಲಿ ಮತ್ತೊಂದು "ನಮ್ದು" ಎಂಬ ಬ್ರಾಂಡಿನಡಿ ರೈತರು ಮತ್ತು ಗ್ರಾಹಕರ ನಡುವಿನ ನೇರ ಮಾರುಕಟ್ಟೆಯನ್ನು ಸೃಷ್ಟಿಸುವುದು...ಅದೂ ಕೂಡ ಚಿಗುರೊಡೆಯಲು ಶುರುವಾಗಿದೆ. ಅವರಿಗೆ ಇವೆಲ್ಲ ಬೆಳವಣಿಗೆಗಳನ್ನೂ ತೋರಿಸುವ ಆಸೆಯಾಗುತ್ತದೆ... ಹೇಗೆ ತೋರಿಸಲಿ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು