ದೇವಿಯೂ ಅಲ್ಲ ದೆವ್ವವೂ ಅಲ್ಲ

7

ದೇವಿಯೂ ಅಲ್ಲ ದೆವ್ವವೂ ಅಲ್ಲ

Published:
Updated:
Deccan Herald

ಕೆಲದಿನಗಳ ಹಿಂದೆ ಪ್ರಕಟವಾದ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ತೀರ್ಪಿನ ವಿಷಯ ತಿಳಿಯುತ್ತಿದ್ದಂತೆಯೇ ನನಗೆ ‘ಸೀತೆಯ ಮಕ್ಕಳು’ ಕೃತಿಯ ವಿವರವೊಂದು ನೆನಪಾಯಿತು. ಉತ್ತರ ಪ್ರದೇಶ ಮತ್ತು ಬಿಹಾರದ ಮಹಿಳೆಯರ ಸಂದರ್ಶನಗಳನ್ನು ಆಧರಿಸಿದ ಮಹತ್ವದ ಅಧ್ಯಯನ ಕೃತಿ ಇದು. ಇದರಲ್ಲಿ ಹಲವು ಜಮೀನ್ದಾರಿ ಕುಟುಂಬಗಳಿಗೆ ಸೇರಿದ ಹಲವು ಮಹಿಳೆಯರು ಆಘಾತಕಾರಿ ವಿಷಯವೊಂದನ್ನು ಪ್ರಸ್ತಾಪಿಸುತ್ತಾರೆ.

ಅವರ ಗಂಡಂದಿರು ಪ್ರತಿದಿನ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗುವ ಮುಂಚೆ ಅವರ ಸೊಂಟಕ್ಕೆ ಒಂದು ಉಪಕರಣವನ್ನು ಹಾಕಿ ಹೋಗುತ್ತಾರಂತೆ. ಆ ಉಪಕರಣ ಎಂಥದೆಂದರೆ ಅವರ ಸೊಂಟದಿಂದ ಆರಂಭವಾಗಿ ಅವರ ಗುಪ್ತಾಂಗವನ್ನು ಅದು ಆವರಿಸಿರುತ್ತದೆ. ಎಂದರೆ ಅವರಿಗೆ ಮೂತ್ರ ವಿಸರ್ಜನೆ ಮಾಡುವುದೂ ಸಾಧ್ಯವಿಲ್ಲದಂತಹ ಉಪಕರಣ. ಅದು ಕಬ್ಬಿಣದ್ದೋ, ಹಿತ್ತಾಳೆಯದ್ದೋ ಆಗಿರುತ್ತದೆ. ಅದಕ್ಕೆ ಕೀಲಿ ಹಾಕುವ ಅವಕಾಶವೂ ಇರುತ್ತದೆ. ಬೀಗ ಹಾಕಿ ಅವರು ಕೀಲಿ ಕೈಯನ್ನು ಅವರೊಂದಿಗೆ ಒಯ್ಯುತ್ತಾರೆ. ಸಂಜೆ ಅವರು ಮನೆಗೆ ಬಂದ ಮೇಲೆಯೇ ಬೀಗ ತೆಗೆಯುತ್ತಾರೆ. ಅಲ್ಲಿಯವರೆಗೂ ಇವರು ಮೂತ್ರವನ್ನೂ ಮಾಡದೇ ಒದ್ದಾಡಬೇಕು. ಇದರ ಉದ್ದೇಶ ಏನೆಂದು ವಿವರಿಸಬೇಕಿಲ್ಲ. ಆ ಮಹಿಳೆಯರು ‘ಪರ ಪುರುಷ’ರೊಂದಿಗೆ ಸಂಬಂಧ ಬೆಳೆಸಬಾರದು, ಆ ಮಹಿಳೆಯರ ‘ಶೀಲ’ ಹಾಳಾಗಬಾರದು, ಅವರ ‘ಪಾತಿವ್ರತ್ಯಕ್ಕೆ’ ಭಂಗ ಬರಬಾರದು.

ತಮ್ಮ ‘ಆಸ್ತಿ’ಯನ್ನು ಯಾರೂ ಅತಿಕ್ರಮಣ ಮಾಡಬಾರದು ಎನ್ನುವ ಯಜಮಾನಿಕೆ, ಕಾಳಜಿ (?), ಎಚ್ಚರಿಕೆ ಎಲ್ಲವೂ ಇದರ ಹಿಂದಿದೆ. ಇನ್ನೂ ಮುಂದುವರಿದು ಅವರು ಮದುವೆ ಎನ್ನುವ ಅತ್ಯಂತ ಮಹತ್ವದ ಸಾಮಾಜಿಕ ಸಂಸ್ಥೆಯನ್ನು, ಅದರ ಶಕ್ತಿ ಮತ್ತು ಆರೋಗ್ಯವನ್ನು ಕಾಪಾಡಲು ಇದು ಅವಶ್ಯಕ ಎನ್ನುವ ವಿತಂಡವಾದವನ್ನು ಈಗಲೂ ಮುಂದುವರಿಸಿದ್ದಾರೆ. ಆ ಮಹಿಳೆಯರು ಇದು ತಮಗಾಗುತ್ತಿರುವ ಅವಮಾನ, ಶೋಷಣೆ ಎನ್ನುವುದರ ಅರಿವಿದ್ದೂ ಏನೂ ಮಾಡಲಾಗದ ಸ್ಥಿತಿಯಲ್ಲಿರುವುದಾಗಿ ಹೇಳುತ್ತಾರೆ. ಅನೈತಿಕ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾವು ಆಡಬಹುದಾದ ನೂರು ಮಾತುಗಳನ್ನು ಈ ವಾಸ್ತವ ಸನ್ನಿವೇಶಗಳು ಧ್ವನಿಸುತ್ತವೆ. ಈ ತೀರ್ಪಿನ ಮಹತ್ವ ಮತ್ತು ಅಗತ್ಯವನ್ನೂ ಇದು ಸೂಚಿಸುತ್ತದೆ. ನ್ಯಾಯಮೂರ್ತಿ ದೀಪಕ್ ಮಿಶ್ರಾ ‘ಅನೈತಿಕ ಸಂಬಂಧ ಎನ್ನುವುದು ಮದುವೆ ಎನ್ನುವ ಸಂಸ್ಥೆಯನ್ನು ಹದಗೆಡಿಸುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಹದಗೆಟ್ಟ ಮದುವೆಯಿಂದ ಇವು ಸೃಷ್ಟಿಯಾಗುತ್ತವೆ’ ಎನ್ನುತ್ತಾರೆ.

ಭಾರತೀಯ ಮೌಲ್ಯ ವ್ಯವಸ್ಥೆಯನ್ನೂ, ಪಿತೃ ಸಂಸ್ಕೃತಿಯ ದಬ್ಬಾಳಿಕೆಯಿಂದಾಗಿ ಲಕ್ಷಾಂತರ ಹೆಣ್ಣು ಮಕ್ಕಳ ಬದುಕೇ ‘ಹದಗೆಟ್ಟು’ ಹೋಗುವ ವಾಸ್ತವವನ್ನೂ ಅವರು ಸರಿಯಾಗಿ, ಮಾನವೀಯ ನೆಲೆಯಲ್ಲಿ, ಮಾನವ ಹಕ್ಕುಗಳ ನೆಲೆಯಲ್ಲಿ ಗ್ರಹಿಸಿದ್ದಾರೆ. ಇದು ಕಾನೂನು ಪ್ರಕಾರ ತಪ್ಪಲ್ಲ, ನೈತಿಕವಾಗಿ ತಪ್ಪು ಎನ್ನುವ ನಿಲುವನ್ನೂ ಅಷ್ಟೇ ಸ್ಪಷ್ಟವಾಗಿ ಈ ತೀರ್ಪಿನಲ್ಲಿ ಹೇಳಲಾಗಿದೆ. ನೈತಿಕವಾಗಿ ತಪ್ಪು ಎನ್ನುವುದಾದರೆ ಅದು ಗಂಡು ಮತ್ತು ಹೆಣ್ಣು ಇಬ್ಬರ ಮಟ್ಟಿಗೂ ನಿಜ ಎನ್ನುವ ಮಾನವೀಯ ನ್ಯಾಯವನ್ನು ಈ ತೀರ್ಪು ಎತ್ತಿ ಹಿಡಿದಿದೆ.

ಈ ಮೂಲಕ ಲೋಕದಲ್ಲಿರುವ ನೈತಿಕತೆಯೆಲ್ಲ ಹೆಣ್ಣಿನಲ್ಲೇ ಇರಬೇಕು, ಗಂಡಿಗೆ ಮಾತ್ರ ನೂರು ನೆವಗಳ ರಿಯಾಯತಿಯನ್ನು ಕೊಡುವ ಅಮಾನವೀಯತೆಯನ್ನು ಎಷ್ಟೆಲ್ಲ ಬಗೆಗಳಲ್ಲಿ ಪ್ರಶ್ನಿಸಿದರೂ ಅದು ವ್ಯರ್ಥ ಎನ್ನುವ ಮಟ್ಟಿಗೆ ಈ ಕಾರಣವನ್ನಿಟ್ಟುಕೊಂಡು ಹೆಣ್ಣು ಮಕ್ಕಳನ್ನು, ಅವರ ಬದುಕನ್ನು ನಾಶ ಮಾಡಲಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅನೈತಿಕ ಸಂಬಂಧದ ಕಾರಣವನ್ನಿಟ್ಟುಕೊಂಡು ಹೆಣ್ಣು ಮಕ್ಕಳನ್ನು ಕೊಲ್ಲುವುದನ್ನು, ಹಲವೊಮ್ಮೆ ಮಹಿಳೆಯರೂ ಈ ಕಾರಣಕ್ಕಾಗಿ ಗಂಡಂದಿರು ಮತ್ತು ಗಂಡಸರನ್ನು ಕೊಲೆ ಮಾಡುವುದನ್ನು, ಅವರ ಬದುಕನ್ನು ನಾಶಗೊಳಿಸುವುದನ್ನು ಒಂದೇ ಎಂದು ನೋಡುವುದು ಕಷ್ಟ. ಸಂಖ್ಯೆ, ಪ್ರಮಾಣಗಳ ಕಾರಣಕ್ಕಾಗಿ ಮಾತ್ರವಲ್ಲ, ಅದು ಒಳಗೊಂಡಿರುವ ಸಾಮಾಜಿಕ ಕಾರಣಗಳಿಗಾಗಿಯೂ.

ಹೀಗಾಗಿ ನೈತಿಕತೆ ಎನ್ನುವ ಅಗ್ನಿದಿವ್ಯವನ್ನು ಗಂಡು ಮತ್ತು ಹೆಣ್ಣು ಇಬ್ಬರೂ ಹಾಯಲೇಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸುತ್ತದೆ.

ಇಷ್ಟಕ್ಕೂ ಈ ಕಾರಣದಿಂದ ಶಿಕ್ಷೆಗೆ ಒಳಗಾದವರು ಇಲ್ಲ ಎನ್ನುತ್ತಾರೆ ನನ್ನೊಬ್ಬ ವಕೀಲ ಸ್ನೇಹಿತೆ. ಆದರೆ ಈ ತೀರ್ಪು ಹೆಣ್ಣುಮಕ್ಕಳ ನೈತಿಕ ಬಲವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಕಾನೂನಿನ ಹೆಸರು ಮತ್ತು ಕಾರಣಕ್ಕಾಗಿಯಾದರೂ ಗಂಡಸರ ಸಂವೇದನೆಯಲ್ಲಿ ಕಿಂಚಿತ್ ಬದಲಾವಣೆಯನ್ನು ತರುವುದಾದರೆ ಅದು ಸ್ವಾಗತಾರ್ಹ ಮತ್ತು ಅಪೇಕ್ಷಣೀಯ.

ಅನೈತಿಕ ಸಂಬಂಧಗಳ ವಿಷಯದಲ್ಲಿ ಸ್ಥಾಪಿತವಾಗಿರುವ ಅಂಶಗಳು ಯಾವುವು? ತನ್ನ ಗಂಡನಿಗಿರುವ ಅದೆಷ್ಟೋ ಸಂಬಂಧಗಳನ್ನು ಹೆಣ್ಣು ಮಕ್ಕಳು ಎಷ್ಟು ಮೌನವಾಗಿ ಒಪ್ಪಿಕೊಳ್ಳುತ್ತೀರೋ, ಸಹಿಸಿಕೊಳ್ಳುತ್ತೀರೋ ಅಷ್ಟಷ್ಟು ನೀವು ‘ಮಹಾಸತಿ’ಯರಾಗುತ್ತಾ ಹೋಗುತ್ತೀರಿ. ನಾವು ಗೌರವಿಸುವ ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ಪ್ರಸಂಗವೊಂದನ್ನು ನೋಡೋಣ. ಆ ಮಹನೀಯರು ಹೇಳುತ್ತಾರೆ, ‘ನನಗೆ...ಇವರ ಮೇಲೆ ಪ್ರೀತಿ ಹುಟ್ಟಿದೆ. ಇದನ್ನು ಮುಂದುವರೆಸೋದಿಕ್ಕೆ ನಿಮ್ಮ ಅನುಮತಿ ಕೇಳ್ತಿದೀನಿ. ನೀವು ಒಪ್ಪಿದರೂ ನನಗೆ ದುಃಖ, ಒಪ್ಪದಿದ್ದರೂ ದುಃಖ. ತೀರ್ಮಾನ ನಿಮಗೇ ಬಿಟ್ಟದ್ದು.’ ಸರಿ, ಇವರ ಪ್ರಾಮಾಣಿಕತೆ, ಗೊಂದಲ, ಹೆಂಡತಿಯ ಮೇಲಿರುವ ಗೌರವ ಎಲ್ಲವನ್ನೂ ಒಪ್ಪೋಣ. ಎರಡು ಪ್ರಶ್ನೆಗಳು ಇಲ್ಲಿ ಎದುರಾಗುತ್ತವೆ, ಬಹುತೇಕ ಸಂದರ್ಭಗಳಲ್ಲಿ ಹೆಂಡತಿಯರಿಗೆ ಇದನ್ನು ಒಪ್ಪದೇ ದಾರಿ ಇದೆಯೆ? ವಿರೋಧಿಸಿದರೆ, ಮದುವೆಯಿಂದ ಹೊರಹೋಗಿ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ, ಸಾಮಾಜಿಕ ಬಲ ಆಕೆಗೆ ಇದೆಯೆ?
ಇಂಥದ್ದೇ ಒಂದು ಸನ್ನಿವೇಶವನ್ನು ಹೆಂಡತಿಯಾದವಳು ಗಂಡನಿಗೆ ಹೇಳುವ ಸನ್ನಿವೇಶವೇ ನಮಗೆ ಅಸಂಬದ್ಧವಾಗಿ ಕಾಣಿಸುತ್ತದೆ ಎನ್ನುವ ಅಂಶ ಕಾಣಿಸುತ್ತಿರುವ ಸತ್ಯ ಈ ತೀರ್ಪಿನ ಮಹತ್ವವನ್ನು ತಾನೇ ತಾನಾಗಿ ಹೆಚ್ಚಿಸುತ್ತದೆ ಅಲ್ಲವೆ?

ಹೆಣ್ಣನ್ನು ಕಾಣುವ ನಮ್ಮ ಸಮುದಾಯ ಯಾವಾಗಲೂ ಎರಡು ಅತಿರೇಕಗಳಲ್ಲಿ ಹೊಯ್ದಾಡುತ್ತಿರುತ್ತದೆ. ಎರಡೂ ಮಿಥ್ಯೆಗಳೇ. ಅವಳನ್ನು ‘ದೇವಿ’ ಎಂದು, ಇಲ್ಲವೇ ‘ದೆವ್ವ’ ಎಂದು ಗುರುತಿಸಲಾಗುತ್ತದೆ. ಈ ಎರಡೂ ನಿಲುವುಗಳು ಗಂಡು ಮತ್ತು ಸ್ವತಃ ಹೆಣ್ಣು ಇಬ್ಬರಿಗೂ ಹೆಣ್ಣನ್ನು ಅವಳ ನಿಜದಲ್ಲಿ, ಸಹಜತೆಯಲ್ಲಿ, ಮನುಷ್ಯ ಸತ್ಯದಲ್ಲಿ ಗುರುತಿಸುವಲ್ಲಿ ತಡೆಯಾಗುತ್ತವೆ. ಇದು ಹೆಣ್ಣನ್ನು ನಿಯಂತ್ರಿಸುವ, ಅಧೀನದಲ್ಲಿಟ್ಟುಕೊಳ್ಳಲು ಹೂಡಲಾಗಿರುವ ಹುನ್ನಾರ. ಹೆಣ್ಣು ಅವಳ ಪ್ರಾಕೃತಿಕ ಶಕ್ತಿ ಹಾಗೂ ದೌರ್ಬಲ್ಯಗಳಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದಿರುವ ಬಿಕ್ಕಟ್ಟನ್ನು ಇದು ಸೃಷ್ಟಿಸುತ್ತದೆ.ಆದ್ದರಿಂದಲೇ ಮಹಿಳಾ ಸಂಕಥನದ ಹಕ್ಕೊತ್ತಾಯವೆಂದರೆ, ನಮ್ಮನ್ನು ದೇವಿತ್ವದ ಸ್ವರ್ಗದಿಂದಲೂ ದೆವ್ವತ್ವದ ನರಕದಿಂದಲೂ ಏಕಕಾಲಕ್ಕೆ, ಸಾರ್ವಕಾಲಿಕವಾಗಿ ಬಿಡುಗಡೆ ಮಾಡಿ ಎನ್ನುವುದು.

ನಾನು ವರ್ಗಿಯಲ್ಲ, ನಾನು ಅಪವರ್ಗಿಯಲ್ಲ, ನಾನು ಮರ್ತ್ಯಳಲ್ಲ. ಅಮರ್ತ್ಯಳಲ್ಲ ಎನ್ನುವ ನೀಲಮ್ಮ ವಚನ ಮಹಿಳೆಯರೆಲ್ಲರ ಪ್ರಾತಿನಿಧಿಕ ಆಶಯವೂ, ಹಕ್ಕೊತ್ತಾಯವೂ ಆಗುವುದು ಈ ಕಾರಣಕ್ಕೆ. ಹೆಣ್ಣೂ ದೇಹ ಕಾಮಗಳ, ಜೀವ ಕಾಮಗಳ ಜೀವಿ ಎನ್ನುವುದನ್ನು ಒಪ್ಪಿ ಗೌರವಿಸಲು ಇಂಥ ತೀರ್ಪುಗಳು ಅವಕಾಶ ಮಾಡಿಕೊಡುತ್ತವೆ. ಇದರ ತಾಂತ್ರಿಕತೆಗಿಂತ, ತಾರ್ಕಿಕತೆಗಿಂತ, ಹೆಣ್ಣಿನ ರಾಜಕೀಯ ಹೋರಾಟಕ್ಕೆ ಇದು ತುಂಬುವ ಬಲ ಬಲು ದೊಡ್ಡದು. ಗಂಡ ಯಜಮಾನನಲ್ಲ ಎನ್ನುವ ವಿವರಣೆ, ಕೊನೆಯ ಪಕ್ಷ ಕಾನೂನಿನ ವ್ಯಾಪ್ತಿಯಲ್ಲಾದರೂ ಮದುವೆ ಎನ್ನುವ ಸಂಸ್ಥೆಯನ್ನು ಮರುವ್ಯಾಖ್ಯಾನಿಸುತ್ತದೆ. ಗಂಡ ಮತ್ತು ಹೆಣ್ಣಿನ ನಡುವಿನ ಶ್ರೇಣೀಕರಣವನ್ನು ನಿರಾಕರಿಸಿ ಸಮಾನ ಪಾತಳಿಯನ್ನು ರೂಪಿಸಲು ನಿರ್ಣಾಯಕ ಹೆಜ್ಜೆಯನ್ನು ಇಟ್ಟಂತಾಗಿದೆ. ಸಾಮಾಜಿಕವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಮತ್ತು ಗೌರವವನ್ನು ಇದು ಉಳಿಸಿದೆ ಮತ್ತು ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !