ಡೆಂಗಿ ವಿರುದ್ಧ ಏಕಾಂಗಿ ಹೋರಾಟ

7

ಡೆಂಗಿ ವಿರುದ್ಧ ಏಕಾಂಗಿ ಹೋರಾಟ

Published:
Updated:
Deccan Herald

ಓಣಿಯಲ್ಲಿದ್ದವರೊಬ್ಬರು ಡೆಂಗಿ ಜ್ವರದಿಂದ ಸಾವನ್ನಪ್ಪಿದ್ದರು. ಆ ಮನೆಯವರ ಗೋಳು ಯುವಕನಿಂದ ನೋಡಲಾಗಲಿಲ್ಲ. ಫಾಗಿಂಗ್‌ ಮಾಡಿದರೆ ಡೆಂಗಿ ಹರಡುವ ಸೊಳ್ಳೆಗಳನ್ನು ನಿಯಂತ್ರಿಸಬಹುದಲ್ಲ ಎಂದುಕೊಂಡ ಆ ಯುವಕ, ಕೂಡಲೇ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಫಾಗಿಂಗ್‌ ಮಾಡಿಸುವಂತೆ ಮನವಿ ಮಾಡಿದ.

‘ಮೊದಲು ಪಾಲಿಕೆಗೆ ಮನವಿ ಪತ್ರ ನೀಡಬೇಕು. ಆಮೇಲಷ್ಟೇ ಆ ಪ್ರದೇಶದಲ್ಲಿ ಫಾಗಿಂಗ್‌ ಕಾರ್ಯ ಕೈಗೊಳ್ಳಲು ಸಾಧ್ಯ. ಅದೂ ಒಂದು ವಾರ ಆಗುತ್ತದೆ’ ಎಂದಿದ್ದರು ಪಾಲಿಕೆಯವರು. ‘ಇಷ್ಟೆಲ್ಲ ಪ್ರಕ್ರಿಯೆ ಮುಗಿಸಿ, ಒಂದು ವಾರದವರೆಗೂ ಕಾಯುತ್ತಿದ್ದರೆ, ಸೊಳ್ಳೆಗಳು ಹೆಚ್ಚುತ್ತವೆ. ಸಮಸ್ಯೆ ಬಿಗಡಾಯಿಸುತ್ತದೆ’ ಎಂದು ಚಿಂತಿಸಿದ ಆ ವ್ಯಕ್ತಿ, ‘ನಾನೇ ಏಕೆ ಈ ಕೆಲಸ ಮಾಡಬಾರದು’ ಎಂದು ಯೋಚಿಸಿದರು. ಮಾತ್ರವಲ್ಲ, ಯಂತ್ರವನ್ನು ಹೆಗಲಿಗೆ ಏರಿಸಿಕೊಂಡು ಓಣಿಯ ಬೀದಿಗಳಲ್ಲಿ ಫಾಗಿಂಗ್‌ ಕಾರ್ಯ ಶುರು ಮಾಡಿದರು. ಓದಿನ ನಡುವೆಯೂ ಎರಡು ವರ್ಷಗಳಿಂದ ಈ ಕಾರ್ಯ ಮುಂದುವರಿಸುತ್ತಿರುವ ಅವರ ಹೆಸರು ಇಮ್ಯಾನುಯಲ್‌ ಪಠಾರೆ.

ಹುಬ್ಬಳ್ಳಿಯ ಕೇಶ್ವಾಪುರದ ಫಾತಿಮಾ ಪದವಿ ಕಾಲೇಜಿನ ವಿದ್ಯಾರ್ಥಿ ಇಮ್ಯಾನುಯಲ್‌ ಈ ಕಾರ್ಯ ಕೈಗೆತ್ತಿಕೊಂಡಾಗ,  ಆರ್ಥಿಕ ಸಂಪನ್ಮೂಲದ ಅಡಚಣೆ ಎದುರಾಯಿತು. ಹುಬ್ಬಳ್ಳಿಯಲ್ಲಿರುವ ‘ದೇಶಪಾಂಡೆ ಫೌಂಡೇಷನ್‌’ನಲ್ಲಿ ಸಾಮಾಜಿಕ ನೆರವಿಗೆ ಮುಂದಾಗುವ ಯುವಕರ ಯೋಜನೆಗಳಿಗೆ ಆರ್ಥಿಕ ನೆರವು ನೀಡುವ ವ್ಯವಸ್ಥೆ ಇದೆ. ಈ ವಿಷಯ ಅರಿತಿದ್ದರು ಅವರು. ಯೋಜನಾ ವರದಿಯೊಂದನ್ನು ತಯಾರಿಸಿ ಸಂಸ್ಥೆಗೆ ಮನವಿ ಸಲ್ಲಿಸಿದರು. ‘ಅವರ ಮನವಿ ಪರಿಗಣಿಸಿ, ಲೀಡ್‌ ಕಾರ್ಯಕ್ರಮದಡಿ ಫಾಗಿಂಗ್‌ ಮಷಿನ್‌ ಕೊಡಿಸಲಾಗಿದೆ’ ಎಂದು ದೇಶಪಾಂಡೆ ಫೌಂಡೇಷನ್‌ನ ಯೋಜನಾ ಸಹಾಯಕ ಆರ್. ವಿ.ಹಳ್ಳಿಕೇರಿ ಸ್ಪಷ್ಟಪಡಿಸುತ್ತಾರೆ

ಇಲ್ಲಿಯವರೆಗೆ ಹುಬ್ಬಳ್ಳಿಯ 2 ಲಕ್ಷ ಜನಸಂಖ್ಯೆ ವಾಸಿಸುವ ಪ್ರದೇಶಗಳಲ್ಲಿ ಈತ ಫಾಗಿಂಗ್‌ ಮಾಡಿದ್ದಾರೆ. ಆದರೆ, ‘ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ 11 ಲಕ್ಷ ಜನಸಂಖ್ಯೆ ಇದೆ. ಈಗ ಮಾಡುತ್ತಿರುವ ಕೆಲಸ ಏನು ಸಾಲದು’ ಎನ್ನುವ ಅವರು, ಫಾಗಿಂಗ್‌ ಕಾರ್ಯವನ್ನು ತಿವ್ರಗೊಳಿಸಲು ನಿರ್ಧರಿಸಿದ್ದಾರೆ. ಅದನ್ನು ಮತ್ತಷ್ಟು ವಿಸ್ತರಿಸಲು ಆರ್ಥಿಕ ನೆರವಿಗಾಗಿ ಕ್ರೌಡ್‌ ಫೌಂಡಿಂಗ್‌ಗಾಗಿ ವೇದಿಕೆ ಕಲ್ಪಿಸುವ ಮಿಲಾಪ್‌ ಸಂಸ್ಥೆಯ ಮೊರೆ ಹೋಗಿದ್ದಾರೆ. ₹ 6 ಲಕ್ಷ ಸಂಗ್ರಹಿಸುವ ಗುರಿ ಹೊಂದಿದ್ದು, ಈಗಾಗಲೇ ₹ 18,216 ಸಂಗ್ರಹವಾಗಿದೆ.

‘ಕಳೆದ ಬಾರಿ ಒಂದೂವರೆ ಲಕ್ಷ ಜನರ ವಾಸ ಮಾಡುವ ಫಾಗಿಂಗ್‌ ಮಾಡಿದ್ದೆ. ಈ ಬಾರಿ ಅವಳಿ ನಗರಗಳಿಗೆ ಸಂಪೂರ್ಣವಾಗಿ ಫಾಗಿಂಗ್‌ ಮಾಡುವ ಯೋಜನೆ ಇದೆ. ಈಗಿರುವ ಒಂದೇ ಯಂತ್ರದಿಂದ ಅದು ಸಾಧ್ಯವಾಗುತ್ತಿಲ್ಲ. ಐದು ಮೆಷಿನ್‌ ಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಹಣ ಬೇಕಾಗುತ್ತದೆ’ ಎನ್ನುತ್ತಾರೆ ಇಮ್ಯಾನುಯಲ್‌.

‘ಮಷಿನ್‌ಗಳಿಗೆ ಡೀಸೆಲ್‌, ಸಿಂಪಡಿಸಲು ಬೇಕಾಗುವ ಕೆಮಿಕಲ್‌ ವೆಚ್ಚ ಸೇರಿ ಒಟ್ಟು ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ. ಅದನ್ನು ಸಂಗ್ರಹಿಸಲು ಕ್ರೌಡ್‌ ಫಂಡಿಂಗ್‌ ಮೊರೆ ಹೋಗಿದ್ದೇನೆ. ಜತೆಗೆ ನನ್ನೊಂದಿಗೆ ಉಚಿತವಾಗಿ ಫಾಗಿಂಗ್‌ ಕಾರ್ಯಕ್ಕೆ ಕೈಜೋಡಿಸುವ ಮನಸ್ಸುಗಳನ್ನು ಎದುರು ನೋಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಬೆಳಗಾವಿ, ಚಿತ್ರದುರ್ಗ, ದಾವಣಗೆರೆಗೂ ವಿಸ್ತರಿಸುವ ಯೋಜನೆ ಇದೆ’ ಎನ್ನುತ್ತಾರೆ ಅವರು. ಇಮ್ಯಾನುಯಲ್ ಅವರ ಸಂಪರ್ಕ ಸಂಖ್ಯೆ:8147050090 


ಇಮ್ಯಾನುಯೆಲ್ ಬೆಂಬಲಿಸುವ ನಿವಾಸಿಗಳು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !