ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಮುಗ್ಗಟ್ಟು ಸಂಬಂಧದಲ್ಲೂ ಬಿಕ್ಕಟ್ಟು

Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19ನಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ಕುಟುಂಬದ ಸದಸ್ಯರ ನಡುವಿನ ಸಂಬಂಧದ ಮೇಲೆಯೂ ಪರಿಣಾಮ ಬೀರಿದೆ. ಇದಕ್ಕೆಲ್ಲ ಪರಿಹಾರ ಇಲ್ಲವೇ?

ನಿಖಿತಾ 24ರ ಹರೆಯದ ಯುವತಿ. ಸಣ್ಣ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಆಕೆ ಕೋವಿಡ್‌–19ನಿಂದಾಗಿ ಉದ್ಯೋಗ ಕಳೆದು ಕೊಳ್ಳಬೇಕಾಯಿತು. ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಮನಸ್ಸು ಒಪ್ಪದೆ ಸದ್ಯ ಆನ್‌ಲೈನ್‌ನಲ್ಲಿ ಕೋರ್ಸ್‌ ಒಂದಕ್ಕೆ ಸೇರಿಕೊಂಡಿದ್ದಾಳೆ. ಆದರೆ ಪೋಷಕರ ಕಿರಿಕಿರಿ ಮಿತಿ ಮೀರಿದೆ ಎನ್ನುವುದು ಆಕೆಯ ಅಳಲು.

‘ಕೆಲಸ ಮಾಡುತ್ತಿದ್ದಾಗ ನನ್ನ ಅಗತ್ಯ ಖರ್ಚನ್ನು ಬಿಟ್ಟರೆ ಸಂಬಳದ ಹಣವನ್ನೆಲ್ಲ ಪೋಷಕರಿಗೆ ಕೊಡುತ್ತಿದ್ದೆ. ಆದರೆ ಈಗ ನನ್ನ ಅಗತ್ಯಕ್ಕೂ ಅವರ ಮುಂದೆ ಕೈಚಾಚಬೇಕು. ಮನೆಯೆಂದ ಮೇಲೆ, ಅದೂ ಇಡೀ ದಿನ ಮನೆಯಲ್ಲೇ ಇರುವಾಗ ಸಣ್ಣಪುಟ್ಟ ವಾಗ್ವಾದ ಮಾಮೂಲು. ಆದರೆ ಮಾತಿಗೆ ಮಾತು ಬೆಳೆದಾಗ ‘ನಿನಗಿನ್ನು ದುಡ್ಡು ಕೊಡುವುದನ್ನು ನಿಲ್ಲಿಸಿಬಿಡುತ್ತೇವೆ’ ಎಂದು ಹೆದರಿಸುತ್ತಾರೆ’ ಎನ್ನುವ ನಿಖಿತಾ, ‘ಹಣದ ಮೂಲಕ ನನ್ನ ಬಾಯಿ ಮುಚ್ಚಿಸಲು ನೋಡುತ್ತಾರೆ. ಸಂಬಂಧಕ್ಕಿಂತ ಹಣವೇ ಹೆಚ್ಚಾಗಿಬಿಟ್ಟಿದೆ’ ಎಂದು ಅಳಲು ತೋಡಿಕೊಳ್ಳುತ್ತಾಳೆ.

ಸಂಬಂಧವೆಂಬುದೇ ಹಾಗೆ– ಮುಳ್ಳಿನ ಮೇಲೆ ಬಿದ್ದ ಬಟ್ಟೆಯಂತೆ. ಹುಷಾರಾಗಿ ಬಿಡಿಸಿಕೊಳ್ಳಬೇಕು, ಬಟ್ಟೆಯೂ ಹರಿಯಬಾರದು. ಇತ್ತೀಚೆಗೆ ಕೋವಿಡ್‌–19ನಿಂದಾಗಿ ಬಹುತೇಕರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈಗೀಗ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದುಕೊಂಡರೂ ಏರುತ್ತಿರುವ ಹಣದುಬ್ಬರದಿಂದಾಗಿ ಹಣವನ್ನು ಕೂಡಿಡುವುದು ಕನಸಿನ ಮಾತೇ ಸರಿ. ಹೀಗಾಗಿ ನಗರಗಳಲ್ಲಿ ಮಾತ್ರವಲ್ಲ, ಪಟ್ಟಣ, ಹಳ್ಳಿಗಳಲ್ಲಿ ಕೂಡ ಪೋಷಕರು– ಮಕ್ಕಳ ನಡುವೆ, ಒಡಹುಟ್ಟಿದವರ ಮಧ್ಯೆ ಹಣಕ್ಕಾಗಿ ಸಂಬಂಧಗಳು ಹಳಸುತ್ತಿವೆ.

‘ಒಂದು ಕುಟುಂಬವೆಂದ ಮೇಲೆ ಒಂದೇ ತರಹದ ಅಭಿಪ್ರಾಯ ಇರಬೇಕೆಂದಿಲ್ಲ. ಆದರೆ ಒಂಚೂರು ಭಿನ್ನಾಭಿಪ್ರಾಯ ಬಂದರೂ ಸಾಕು, ಹಣಕಾಸಿನ ವಿಷಯ ಪ್ರಸ್ತಾಪವಾಗಿಬಿಡುತ್ತದೆ. ನಮ್ಮಂಥವರನ್ನು ಸುಮ್ಮನಿರಿಸಲು ಆರ್ಥಿಕವಾಗಿ ನಿಯಂತ್ರಣ ಹೇರಲು ಶುರು ಮಾಡುತ್ತಾರೆ’ ಎನ್ನುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಲಲಿತಾ ಸುಧೀಂದ್ರ, ‘ಸಣ್ಣಪುಟ್ಟ ಖರ್ಚಿಗೂ ಪತಿಯಿಂದ ಹೇಳಿಸಿಕೊಳ್ಳಬೇಕು. ಯಾವತ್ತು ಈ ಕೊರೊನಾ ಸಂಕಟ ಮುಗಿದು ಮತ್ತೆ ಕೆಲಸಕ್ಕೆ ಹೋಗುತ್ತೇನೋ ಎಂದು ಕಾಯುವುದೇ ಆಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಉದ್ಯೋಗ ಮಾಡುತ್ತಿದ್ದಾಗ ಇದ್ದ ವೈಯಕ್ತಿಕ ಸ್ವಾತಂತ್ರ್ಯಕ್ಕೂ ಹಣಕಾಸಿನ ವಿಷಯ ಮುಂದೆ ಮಾಡಿಕೊಂಡು ಬೇಲಿ ತೊಡಿಸುವುದು ಎಷ್ಟು ಸರಿ ಎಂಬುದು ಲಲಿತಾ ಅವರ ಪ್ರಶ್ನೆ.

ಸಂಬಂಧದಲ್ಲೂ ತೊಂದರೆ
ಹೌದು, ಆರ್ಥಿಕ ಭದ್ರತೆ ಎನ್ನುವುದು ಒಂದು ರೀತಿಯ ಸ್ವಾತಂತ್ರ್ಯವನ್ನು ನಮಗೆ ನೀಡಿದೆ. ಕುಟುಂಬದಲ್ಲಿ ಇತರರು ಅನಗತ್ಯವಾಗಿ ಅಧಿಕಾರ ಹೇರದಂತೆ ತಡೆಯುವ ಶಕ್ತಿಯೂ ಇದಕ್ಕಿದೆ. ಹಾಗಂತ ಗಳಿಸುವ ಶಕ್ತಿ ಇಲ್ಲದಿದ್ದಾಗ ಪರಸ್ಪರ ಗೌರವ, ಪ್ರೀತಿ, ಸೌಹಾರ್ದಗಳಿಗೆ ತಿಲಾಂಜಲಿ ನೀಡುವುದು ಎಷ್ಟು ಸರಿ?

‘ಯಾವುದೋ ಒಂದು ಹಂತದಲ್ಲಿ ಇಂತಹ ಪ್ರಸಂಗಗಳು ಪ್ರತಿ ಕುಟುಂಬದಲ್ಲೂ ನಡೆಯುವುದು ಸಹಜ. ಸಂಬಂಧವನ್ನು ಹಣದಿಂದ ಅಳೆಯುವುದು ಶುರುವಾಗಿಬಿಡುತ್ತದೆ. ಗಂಡ– ಹೆಂಡತಿ, ಪೋಷಕರು– ಮಕ್ಕಳು, ಒಡಹುಟ್ಟಿದವರ ನಡುವೆ ವೈಮನಸ್ಯ ಬರುವುದು ಈ ಹಣದ ವಿಷಯದಿಂದಲೇ ಎನ್ನುವುದು ದುರದೃಷ್ಟಕರ’ ಎನ್ನುವ ಆಪ್ತ ಸಮಾಲೋಚಕರ ಡಿ.ಟಿ.ಭಟ್ಟ, ‘ಕಳೆದ 6–8 ತಿಂಗಳಿಂದ ಇಂತಹ ಪ್ರಕರಣಗಳು ಜಾಸ್ತಿಯಾಗಿವೆ. ಇದಕ್ಕೆ ಕಾರಣ ದುರಿತ ಕಾಲದಲ್ಲಿ ಹಲವರು ಕೆಲಸ ಕಳೆದುಕೊಂಡಿದ್ದರಿಂದ ಎದುರಾದ ಆದಾಯವಿಲ್ಲದಂತಹ ಪರಿಸ್ಥಿತಿ’ ಎಂದು ವಿಶ್ಲೇಷಿಸುತ್ತಾರೆ.

ಮಾತುಕತೆಯೇ ಪರಿಹಾರ
ಹಾಗಾದರೆ ಇದಕ್ಕೆಲ್ಲ ಪರಿಹಾರವಿಲ್ಲವೇ? ಕುಟುಂಬದ ಸದಸ್ಯರ ಮನಸ್ಥಿತಿ ಬದಲಾಗಬೇಕೇ ಹೊರತು ಇದಕ್ಕೆ ಸಿದ್ಧ ಪರಿಹಾರಗಳಿಲ್ಲ ಎನ್ನುತ್ತಾರೆ ಆಪ್ತ ಸಮಾಲೋಚಕರು. ‘ಪರಸ್ಪರ ಮಾತುಕತೆಯೇ ಕುಟುಂಬದಲ್ಲಿ ಎಲ್ಲದಕ್ಕೂ ಪರಿಹಾರ ಒದಗಿಸಬಲ್ಲದು. ಆರಂಭದಲ್ಲಿ ವಾದ– ವಿವಾದಗಳು, ಅಪನಂಬಿಕೆಗಳು ಸಾಮಾನ್ಯ. ಆದರೆ ಚರ್ಚೆಯ ನಂತರ ಹೊರಹೊಮ್ಮುವ ಅಭಿಪ್ರಾಯಗಳು ಬಹುತೇಕ ಸಮಸ್ಯೆಗೆ ಉತ್ತರವನ್ನು ನೀಡುತ್ತವೆ’ ಎನ್ನುತ್ತಾರೆ ತಜ್ಞರಾದ ಪ್ರಮೀಳಾ ಎಸ್‌.

ದುಡಿಯುವವರಿಗೂ ಅಷ್ಟೇ, ನಾನು ಕಷ್ಟಪಟ್ಟು ಗಳಿಸಿದ್ದನ್ನು ಇವರು ಕುಳಿತುಕೊಂಡು ತಿನ್ನುತ್ತಾರೆ ಎಂಬ ಭಾವನೆ ಇರಬಹುದು. ಆದರೆ ಒಂದು ಕುಟುಂಬದ ಆಗುಹೋಗುಗಳು ಸುಸೂತ್ರವಾಗಿ ನಡೆಯಬೇಕಾದರೆ ಹಣದ ಜೊತೆ ಇತರ ಹೊಂದಾಣಿಕೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಬದಲಾವಣೆ ಅನಿವಾರ್ಯ. ಅದಕ್ಕೆ ಹೊಂದಿಕೊಳ್ಳಬೇಕಾದರೆ ನಮ್ಮ ಮನಸ್ಸನ್ನೂ ಬದಲಾವಣೆಗೆ ಒಡ್ಡಿಕೊಳ್ಳಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT