ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಸ್ಫೋಟ

Last Updated 1 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸಹ್ಯಾದ್ರಿಶ್ರೇಣಿಯನ್ನು ರಕ್ಷಿಸಲು ಜನಜಾಗೃತಿ ಮೂಡಿಸುವ ‘ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ’ ಮೂರು ದಶಕಗಳ ಹಿಂದೆ ನಡೆದಿತ್ತು. ಸಮಾಜದ ಎಲ್ಲ ಸ್ಥರದವರೂ ಪಾಲ್ಗೊಂಡಿದ್ದ ಜಾಥಾ ಅದು. ಪರಿಸರ ಜಾಗೃತಿಯ ಅಪೂರ್ವ ಕಾಲಘಟ್ಟವೆಂದೇ ಅದನ್ನು ಪರಿಸರ ಇತಿಹಾಸ ಗುರುತಿಸುತ್ತಿದೆ. ಆಗ ಕೆಲವರು ಪರಿಸರ ಚಳವಳಿಗಳು ಅಭಿವೃದ್ಧಿಯನ್ನು ನಿರಾಕರಿಸಿ ಜನರನ್ನು ಶಿಲಾಯುಗಕ್ಕೆ ಕೊಂಡೊಯ್ಯುತ್ತವೆ ಎಂದು ಕಟಕಿಯಾಡಿದ್ದರು. ಸಂರಕ್ಷಣಾ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ನಾಡಿನ ವಿವೇಕಪ್ರಜ್ಞೆ ಶಿವರಾಮ ಕಾರಂತರು ಆಗ ಹೇಳಿದ ಮಾತು: ‘ಶಿಲಾಯುಗಕ್ಕೆ ಮರಳುವುದೇನೋ ತಿಳಿಯದು. ಆದರೆ, ಪರಿಸರನಾಶ ಮುಂದುವರಿದ್ದಾದಲ್ಲಿ, ಬರುವ ದಿನಗಳಲ್ಲಿ ನೆಲ-ಜಲಕ್ಕಾಗಿ ಮಧ್ಯಯುಗದಲ್ಲಾಗುತ್ತಿದ್ದಂಥ ಕಾಳಗಗಳನ್ನೇ ನಾವು ಎದುರಿಸಬೇಕಾದೀತು!’

ಆಗಸ್ಟ್ ಮಧ್ಯಭಾಗದಲ್ಲಿ ಕೊಡಗಿನಲ್ಲಾದ ಪಕೃತಿ ವಿಕೋಪದ ಪರಿಣಾಮವು ಯುದ್ಧಭೂಮಿಯ ಸಾವು-ನೋವುಗಳನ್ನೇ ಹೋಲುವಂತಿತ್ತಲ್ಲ?! ಭಾರಿ ಮಳೆಗೆ ಭೂಕುಸಿತವಾಗಿ ಸಂಕಷ್ಟಕ್ಕೆ ಸಿಲುಕಿದ ಜನ ಬದುಕಿನಲ್ಲಿ ಮತ್ತೆ ನೆಮ್ಮದಿ ಕಾಣಲು ದಶಕಗಳೇ ಬೇಕಾದಾವು! ಹೀಗಾಗಿ ಪುನರ್ವಸತಿಯ ಜೊತೆಯಲ್ಲಿಯೇ, ಭವಿಷ್ಯದ ಸುರಕ್ಷತೆಯ ಕುರಿತೂ ಚಿಂತನೆ ನಡೆಯಬೇಕಿದೆ. ಕೊಡಗಿನ ಅವಘಡ ಸಹ್ಯಾದ್ರಿ ಶ್ರೇಣಿಯುದ್ದಕ್ಕೂ ಜರುಗುತ್ತಿರುವ ಹಲವು ಬಗೆಯ ವಿಪ್ಲವಗಳನ್ನು ಪ್ರತಿನಿಧಿಸುವ ಘೋರ ರೂಪಕ. ಇಂದು ಕೊಡಗಿನಲ್ಲಾಗಿದ್ದು ನಾಳೆ ಬೇರೆಡೆಯೂ ಜರುಗಬಹುದು. ಸಾವು-ನೋವುಗಳ ಭಾರಿ ಬೆಲೆಕೊಟ್ಟು ಪಡೆದ ಈ ಎಚ್ಚರಿಕೆ ಗಂಟೆ ಈಗಲಾದರೂ ನಮ್ಮನ್ನು ಎಚ್ಚರಿಸಬೇಕಲ್ಲವೇ?

ಸಹ್ಯಾದ್ರಿ ಅಷ್ಟೇಕೆ ಸೂಕ್ಷ್ಮ?
ಸಹ್ಯಾದ್ರಿ ಶ್ರೇಣಿಯ ವಿಕಾಸವೇ ವಿಶಿಷ್ಟ. ಭಾರತ ಉಪಖಂಡವು ಕೋಟ್ಯಾಂತರ ವರ್ಷಗಳ ಹಿಂದೆ ವಿಶಾಲ ಗೊಂಡವಾನ ಭೂಖಂಡದಿಂದ ಬೇರ್ಪಟ್ಟು, ಮೇಲ್ಮುಖವಾಗಿ ಚಲಿಸಿ ಉತ್ತರದ ಯುರೇಷಿಯನ್ ಭೂಭಾಗಕ್ಕೆ ಡಿಕ್ಕಿ ಹೊಡೆಯಿತಷ್ಟೇ? ಇದಕ್ಕಿಂತಲೂ ಪೂರ್ವದಲ್ಲಿಯೇ, ಭೂತಳದಲ್ಲಿನ ಲಾವಾರಸ ಹೊರಚಿಮ್ಮಿ ಪಶ್ಚಿಮದ ಸಮುದ್ರದಂಚಿಗೆ ಬಸಿದು ಗಟ್ಟಿಗೊಂಡು ಸಹ್ಯಾದ್ರಿ ಶ್ರೇಣಿ ಉಗಮವಾಯಿತು ಎನ್ನುತ್ತದೆ ಭೂಗರ್ಭಶಾಸ್ತ್ರ. ಪಶ್ಚಿಮದ ಅರು ರಾಜ್ಯಗಳ ಕರಾವಳಿಯುದ್ದಕ್ಕೂ ಸುಮಾರು ಸಾವಿರದ ಆರುನೂರು ಕಿ.ಮಿ ಉದ್ದಕ್ಕೆ ಹಬ್ಬಿಕೊಂಡಿರುವ ಈ ಗುಡ್ಡಗಳ ಸಾಲು, ಅಡಿಯಿಂದ ಮುಡಿಯವರೆಗೂ ವಿಶಿಷ್ಟವೇ. ಹಾಗೆಂದೇ ಸಹ್ಯಾದ್ರಿಯನ್ನು ಸೂಕ್ಷ್ಮವೆಂದು ಗುರುತಿಸುತ್ತಿರುವುದು.

ಸಹ್ಯಾದ್ರಿ ಶಿಖರಗಳ ಭೂಗರ್ಭ ಅಷ್ಟೇನೂ ಗಟ್ಟಿಯಾದದ್ದಲ್ಲ. ಅಲ್ಲಿನ ಶಿಲಾವಲಯಗಳಲ್ಲಿ ಅಪಾರ ಬಿರುಕುಗಳು, ಖಾಲಿಜಾಗಗಳೂ ಇವೆ. ಆಳದಲ್ಲಿ ಭೂಮಿಯು ಆಗಾಗ ಕುಸಿಯುವುದರಿಂದಾಗಿ, ಪಶ್ಚಿಮ ಘಟ್ಟದ ಉದ್ದಕ್ಕೂ ಆಗಾಗ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸುವುದು, ಅಲ್ಲಲ್ಲಿ ಸಣ್ಣ ಬಿರುಕು ಕಾಣುವದೆಲ್ಲ ನಿರೀಕ್ಷಿತವೇ ಎನ್ನುತ್ತಾರೆ ದೆಹಲಿಯ ‘ರಾಷ್ಟ್ರೀಯ ಭೂಕಂಪನ ಮಾಹಿತಿ ಕೇಂದ್ರ’ದ (NCS) ತಜ್ಞರು. ಕಳೆದ ಜುಲೈನಲ್ಲಿ ಕೊಡಗಿನಲ್ಲೂ ಅಂಥ ಲಘು ಕಂಪನವಾಯಿತು. ಸಹ್ಯಾದ್ರಿ ಶ್ರೇಣಿಯಾಳದ ಸೂಕ್ಷ್ಮತೆಯ ಸ್ವರೂಪವಿದು.

ಭೂಕಂಪನದ ಜೊತೆಗೆ, ಕೆಲವೊಮ್ಮೆ ಭೂಮಿಯಾಳದಿಂದ ಮಳೆಗಾಲದಲ್ಲಿ ಸ್ಫೋಟದ ಶಬ್ದವೂ ಕೇಳುವುದಿದೆ. ಈ ಬಗೆಯ ಭಾರಿ ಶಬ್ದಗಳು ಇತ್ತೀಚೆಗೆ ಕೊಡಗಿನ ಜನರಿಗೂ ಅರಿವಿಗೆ ಬಂದಿವೆ. ಆಗಸ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಮೇರುತಿ ಪರ್ವತ ಮಾಲೆಯಲ್ಲಿ ಈ ರೀತಿಯ ಸ್ಫೋಟದ ಶಬ್ದ ಹೊರಹೊಮ್ಮಿದ್ದನ್ನು ಜಿಲ್ಲಾಡಳಿತ ಧೃಡೀಕರಿಸಿದೆ. ಕಲ್ಲುಗಳ ಬಿರುಕಿನಿಂದಾಗಿಯೋ, ಒಣಗಿದ ಮಣ್ಣಿನಿಂದಲೋ ಅಥವಾ ಕೊಳೆತ ಸಸ್ಯಜನ್ಯ ಅವಶೇಷಗಳಿಂದಾಗಿಯೋ, ನೂರಾರು ಅಡಿ ಭೂಮಿಯಾಳದಲ್ಲಿ ಈ ಬಗೆಯ ಖಾಲಿಪ್ರದೇಶಗಳು ನಿರ್ಮಾಣವಾಗುತ್ತವೆ. ಭಾರಿ ಮಳೆಯಾದಾಗ ಪೂರ್ತಿ ಒದ್ದೆಯಾಗುವ ಮೇಲ್ಮೈ ಮಣ್ಣು ಭಾರ ತಾಳಲಾರದೆ ಒಮ್ಮೆಲೆ ಕುಸಿದು, ಆಳ ನೆಲದಲ್ಲಿರುವ ಈ ರಂಧ್ರಗಳು (Cavities) ಮುಚ್ಚಿದಾಗ ಈ ಬಗೆಯ ಶಬ್ದ ಹೊರಹೊಮ್ಮುವುದು ಸಹಜ, ಅಪಾಯವೇನೂ ಆಗದು ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ತಜ್ಞರು. ಸಂಕೀರ್ಣವಾದ ಭೂಗರ್ಭದಂತೆಯೇ, ಸಹ್ಯಾದ್ರಿಯ ಮೇಲಿನಸ್ಥರದ ಮಣ್ಣು ಹವಾಮಾನ ವೈಪರೀತ್ಯಕ್ಕೆ ನಲುಗುವ ಸೂಕ್ಷ್ಮತೆಯದ್ದೇ. ಇಲ್ಲಿನ ಮಣ್ಣಿನ ಮೇಲ್ಪದರದಲ್ಲಿ ಹೆಚ್ಚಾಗಿ ಕಾಣುವುದು ಬಾಸಲ್ಟ್ ಬಿರಿದು ನಿರ್ಮಾಣವಾದ ಗುಂಡುಕಲ್ಲುಗಳು. ಜೊತೆಗೆ, ತೀರಾ ಸಡಿಲವಾದ ಜಂಬಿಟ್ಟಿಗೆ ಮಣ್ಣು ಮತ್ತು ಸುಣ್ಣದಕಲ್ಲಿನ ರೀತಿಯ ರೂಪಾಂತರಗೊಳ್ಳುತ್ತಿರುವ ಕಲ್ಲಿನ ಮಿಶ್ರಣ. ಹೀಗೆ ಮಿಶ್ರವಾಗಿ ರೂಪುಗೊಂಡ ಎರೆಮಣ್ಣೇ ಸಹ್ಯಾದ್ರಿ ಸಾಲಿನಲ್ಲಿ ಸಾಮಾನ್ಯವಾಗಿ ದೊರಕುವ ಮೇಲ್ಮಣ್ಣು. ಆಳದಲ್ಲಿ ಇದನ್ನು ಹೊತ್ತು ನಿಂತ ಗ್ರಾನೈಟಿನ ಸ್ಥರವು ಗಟ್ಟಿಯಾಗಿದ್ದರೂ, ಮಣ್ಣಿನ ಈ ಮೇಲಿನ ಪದರು ಮಾತ್ರ ಬಹುಸಡಿಲ! ಮೇಲೆ ಆವರಿಸಿದ ಹಸಿರು ಕಾಡಿನ ಪರಿಸರ, ಗಿಡಮರಗಳ ಬೇರಿನಜಾಲ ಮತ್ತು ಜೀವಜನ್ಯ ಕೊಳೆತ ವಸ್ತುಗಳು... ಇವೆಲ್ಲ ಸೇರಿ ಸೃಷ್ಟಿಸಿದ ಅನನ್ಯ ನೈಸರ್ಗಿಕ ಬಲೆಯೇ ಈ ಸಡಿಲಮಣ್ಣನ್ನು ಬೆಸೆದು ಗಟ್ಟಿಯಾಗಿ ಹಿಡಿದಿಟ್ಟಿರುವುದು.

ಭೂಮಿಯಡಿಯಿಂದ ಶಿಖರದ ಮುಡಿಯವರೆಗೂ ವಿಶಿಷ್ಟವಾಗಿರುವ ಸಹ್ಯಾದ್ರಿಗೆ ಜನರ ಜೀವನ ಕಾಪಾಡುವಲ್ಲೂ ಮುಖ್ಯ ಪಾತ್ರವಿದೆ. ಇಲ್ಲಿ ಹುಟ್ಟಿಹರಿಯುವ ಕೃಷ್ಣೆ-ಕಾವೇರಿ, ಕಾಳಿ-ನೇತ್ರಾವತಿ ಕಣಿವೆಗಳ ಅಸಂಖ್ಯ ನದಿತೊರೆಗಳೇ ಅಲ್ಲವೇ ದಕ್ಷಿಣ ಭಾರತದ ನೀರಿನ ಮೂಲ? ಕರ್ನಾಟಕದ ಸಹ್ಯಾದ್ರಿಯಂತೂ ಬೇರೆಲ್ಲೆಡೆಗಿಂತ ಒಳನಾಡಿಗೆ ಹೆಚ್ಚಿನ ಮಳೆ ತರುವ ಸಾಮರ್ಥ್ಯದ್ದು. ನಾಡಿನ ಜನಜೀವನ ಪೊರೆಯುತ್ತಿರುವ, ಈ ವೈಶಿಷ್ಟ್ಯಮಯ ಸಹ್ಯಾದ್ರಿಯ ಪರಿಸರವನ್ನು ಸೂಕ್ಷ್ಮವೆನ್ನುವದು ಸಹಜ ತಾನೇ?

ವಿಕೋಪದ ನಂತರ ನಡೆದ ಜೋಡುಪಾಲ ರಕ್ಷಣಾ ಕಾರ್ಯ. ನಿಸರ್ಗದ ಅಗಾಧ ಶಕ್ತಿಯೆದುರು ಸಾವರಿಸಿಕೊಳ್ಳಲೆತ್ನಿಸಿದ ಪರಿ.
ವಿಕೋಪದ ನಂತರ ನಡೆದ ಜೋಡುಪಾಲ ರಕ್ಷಣಾ ಕಾರ್ಯ. ನಿಸರ್ಗದ ಅಗಾಧ ಶಕ್ತಿಯೆದುರು ಸಾವರಿಸಿಕೊಳ್ಳಲೆತ್ನಿಸಿದ ಪರಿ.

ಸಹಜ ಭೂಕುಸಿತಕ್ಕೆ ಕಾರಣ?
ನಿಸರ್ಗಸಹಜ ಕಡಿದಾದ ಇಳಿಜಾರಿನಿಂದಾಗಿಯೋ ಅಥವಾ ಪ್ರಕೃತಿ ಸಹಜವಾದ ಅರಣ್ಯದ ಏರಿಳಿತದಿಂದಾಗಿಯೋ ಸಹ್ಯಾದ್ರಿಯಲ್ಲಿ ಕೆಲವೆಡೆ ಮಳೆಗಾಲದಲ್ಲಿ ಭೂಕುಸಿತವಾಗಬಹುದು. ಆದರೆ, ಆ ಸಾಧ್ಯತೆಗಳು ತೀರಾ ಕಡಿಮೆಯೆಂದು ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯ (GSI) ತಜ್ಞರು ಹೇಳುತ್ತಾರೆ. ಕೊಡಗಿನ 150 ಪ್ರದೇಶಗಳೂ ಸೇರಿದಂತೆ, ಮಲೆನಾಡಿನ 704 ಸ್ಥಳಗಳನ್ನು ಭೂಕುಸಿತ ಸಾಧ್ಯತೆಯ ಪ್ರದೇಶಗಳೆಂದು ಅವರು ಈಗಾಗಲೇ ಗುರುತಿಸಿದ್ದಾರೆ. ಇದು ಕರ್ನಾಟಕದ ಸಹ್ಯಾದ್ರಿಯ ಸುಮಾರು ಶೇಕಡ ಇಪ್ಪತ್ತರಷ್ಟು ಭಾಗ! ಅದರಲ್ಲಿ, ತೊಂಭತ್ತು ಪ್ರತಿಶತಕ್ಕೂ ಹೆಚ್ಚಿನ ಸ್ಥಳಗಳು ಕಾಡುನಾಶ, ಗಣಿಗಾರಿಕೆ ಹಾಗೂ ಗುಡ್ಡಕೊರೆತಗಳಂಥ ಮಾನವನ ಅತಿರೇಕಗಳಿಂದಲೇ ಆಗುವಂಥವು ಎನ್ನುವುದು ಅವರ ಅಭಿಪ್ರಾಯ.

ಅಂದರೆ, ಕಾಡಿನ ಹಸಿರುಹೊದಿಕೆ ಒಮ್ಮೆ ತೆರೆಯಿತಾದರೆ ಮಣ್ಣು ಸವಕಳಿಯಾಗಿ, ಕಣಿವೆಯ ಪ್ರದೇಶದಲ್ಲಿ ಭೂಕುಸಿಯುವುದು ಸಹಜವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಘಟನೆಗಳು ಹೆಚ್ಚಾಗಿವೆ. ಉತ್ತರ ಕನ್ನಡದ ಕಾರವಾರ ಬಳಿಯ ಶಿರವಾಡದಲ್ಲಿ 2009ರಲ್ಲಿ ಗುಡ್ಡ ಕುಸಿದು, ಹತ್ತೊಂಬತ್ತು ಜನ ಸತ್ತ ದುರ್ಘಟನೆಯ ನೆನಪಿನ್ನೂ ಮಾಸಿಲ್ಲ. ಬೇಡ್ತಿ ನದಿ ಕಣಿವೆಯ ಅರಬೈಲು, ಕೊಡಚಾದ್ರಿ ಸಮೀಪದ ಅಂಬಾರಗುಡ್ಡ ಸಂರಕ್ಷಿತ ಅರಣ್ಯದಲ್ಲೂ ಆಗಾಗ ಗುಡ್ಡಗಳು ಕುಸಿಯುತ್ತಿವೆ. ದಕ್ಷಿಣ ಕನ್ನಡದ ಘಟ್ಟದ ತಪ್ಪಲಿನ ನೆರಿಯದಲ್ಲಂತೂ 2008ರಲ್ಲಿ ಭಾರಿ ಗುಡ್ಡಗಳೇ ಕುಸಿದು ಕಣಿವೆಗೆ ಜಾರಿದ್ದವು. ಇವನ್ನೆಲ್ಲ ಅಧ್ಯಯನ ಮಾಡಿದ ತಜ್ಞರು ಅಂತಿಮವಾಗಿ ಹೇಳಿದ್ದಿಷ್ಟೇ: ‘ಅಲ್ಲಿನ ಭೂಕುಸಿತದಲ್ಲಿ ಭೂಗರ್ಭದ ಕಾರಣಗಳೇನೂ ಗೋಚರಿಸುತ್ತಿಲ್ಲ. ಕಾಡಿನ ರಕ್ಷಾಕವಚ ನಾಶವಾಗಿ, ಗುಡ್ಡಗಳ ಸಡಿಲಮಣ್ಣಿನಲ್ಲಿ ಅಪಾರವಾಗಿ ಮಳೆ ನೀರಿಳಿದದ್ದೇ ಕಾರಣ!’.

ಭಾರಿ ಪ್ರಮಾಣದ ಭೂಕಂಪನವೂ ಭೂಕುಸಿತ ಮಾಡಬಲ್ಲದು. ಆದರೆ ಲಘು ಕಂಪನಗಳು ಹೀಗೆ ಮಾಡಲಾರವು. ಜುಲೈ 9ರಂದು ಮಡಿಕೇರಿ ಸಮೀಪದ ಮುಕ್ಕೊಡ್ಲು, ಹತ್ತಿಹೊಳೆ ಪ್ರದೇಶಗಳಲ್ಲಿ ಲಘು ಕಂಪನವಾಯಿತು. ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದ ಈ ಕಂಪನದ ಕೇಂದ್ರ, ಮಡಿಕೇರಿ-ಸಂಪಾಜೆ ನಡುವಿನ ಪ್ರದೇಶದಲ್ಲಿ ಸುಮಾರು ಹತ್ತು ಕಿ.ಮಿಗೂ ಹೆಚ್ಚಿನ ಆಳದಲ್ಲಿ ಇದ್ದಿರಬಹುದೆಂದು ಹೈದರಾಬಾದಿನ ರಾಷ್ಟ್ರೀಯ ಭೂಗರ್ಭಶಾಸ್ತ್ರ ಸಂಶೋಧನಾ ಸಂಸ್ಥೆ (NGRI) ದಾಖಲಿಸಿದೆ. ಆದರೆ, ಈ ಲಘುಕಂಪನ ಆಗಸ್ಟಿನಲ್ಲಾದ ಭೂಕುಸಿತಕ್ಕೆ ನೇರವಾಗಿ ಕಾರಣವಾಗಿರಲಾರದು. ಹಾಗೇನಾದರೂ ಆಗುವುದಿದ್ದರೆ ತಕ್ಷಣ ಭೂಮಿ ಕುಸಿಯಬೇಕಿತ್ತು, ಒಂದು ತಿಂಗಳವರೆಗೆ ತಡವಾಗುತ್ತಿರಲಿಲ್ಲ ಎನ್ನುತ್ತಾರೆ ತಜ್ಞರು. ದೆಹಲಿಯ ರಾಷ್ಟ್ರೀಯ ಭೂಕಂಪನ ನಿರೀಕ್ಷಣಾ ಕೇಂದ್ರದ (NCS) ವಿಜ್ಞಾನಿಗಳು ಕೂಡ, ‘ಹೆಚ್ಚೆಂದರೆ, ಭೂಮಿಯ ಆಳದಲ್ಲಿ ಆಗ ಮೂಡಿದ ಬಿರುಕುಗಳು ಭೂಕುಸಿತದ ತೀವ್ರತೆಯನ್ನು ಕೊಂಚ ಹೆಚ್ಚಿಸಿರಬಹುದಷ್ಟೆ’ ಎನ್ನುತ್ತಾರೆ.

ಕೊಡಗಿನಲ್ಲಿ ಏನಾಗಿರಬಹುದು?
ಹಾಗಾದರೆ, ಕೊಡಗಿನ ಭೂಕುಸಿತಕ್ಕೆ ಏನೆಲ್ಲ ಕಾರಣಗಳಿರಬಹುದು? ಈ ಸಂಕೀರ್ಣ ವೈಪರಿತ್ಯದ ಮೂಲವನ್ನು ಆಳವಾಗಿ ಅರಿಯಲು ತಜ್ಞರಿಗೆ ಇನ್ನೂ ಸಮಯ ಬೇಕಾಗಬಹುದು. ಆದರೆ ಈಗಾಗಲೇ ಲಭ್ಯವಿರುವ ಮಾಹಿತಿ ಮತ್ತು ಪರಿಸರ ಸಂರಚನಾ ತತ್ವಗಳನ್ನು ಆಧರಿಸಿ ಅವಘಡದ ಮೂಲವನ್ನು ಅರ್ಥೈಸಿಕೊಳ್ಳಲು ಸಾಧ್ಯವಿದೆ. ಅಂಥ ಎಲ್ಲ ಅಂಶಗಳೂ ವಿಪರೀತವಾದ ಅರಣ್ಯನಾಶದತ್ತಲೇ ಬೆರಳು ತೋರಿಸುತ್ತಿವೆ.

ಆಗಸ್ಟ್ ಮಧ್ಯಭಾಗದಲ್ಲಿ ಭಾರಿ ಮಳೆಯಾದಾಗ, ಹೆಚ್ಚಿನ ಅವಘಡವಾಗಿದ್ದು ಮಾನವ ಹಸ್ತಕ್ಷೇಪ ಅತಿಯಾಗಿರುವ ಮಡಿಕೇರಿ-ಸಂಪಾಜೆ ಪ್ರದೇಶದ ಪರ್ವತಸಾಲಿನಲ್ಲೇ. ಈ ಕಣಿವೆಯಂಚಿನ ಒಂಚಾಲು, ಕಾಟಾಗೇರಿ, ಮಾಕಂದೂರು, ಜೋಡುಪಾಲ, ಮಣ್ಣಾನಗೇರಿ, ಚೆರ್ಮಾನೆ ಇತ್ಯಾದಿ ಹಳ್ಳಿಗಳಲ್ಲೇ ಭೂಕುಸಿತ, ಪ್ರವಾಹ ಸಂಭವಿಸಿದ್ದು. ಒಮ್ಮಿಂದೊಮ್ಮೆ ಸುರಿದ ಮಳೆಗೆ ಗುಡ್ಡ ಕುಸಿದು, ಕಣಿವೆಯ ನೀರಿನ ಹರಿವಿನ ದಾರಿ ಮುಚ್ಚಿ, ಪ್ರವಾಹ ಉಕ್ಕಿತು. ಸಾವಿರಾರು ಕುಟುಂಬಗಳು ನಿರ್ಗತಿಕವಾದವು!

ಇಲ್ಲಿನ ಮೇಲ್ಮೈಮಣ್ಣು ಕೇವಲ ನಾಲ್ಕಾರು ಅಡಿಯದ್ದು ಎಂದು ಭೂಗರ್ಭಶಾಸ್ತ್ರಜ್ಞರು ಹೇಳುತ್ತಾರೆ. ಅತಿಯಾದ ಮಳೆಯಾದಾಗ, ಸಡಿಲ ಜಂಬಿಟ್ಟಿಗೆಯ ಎರೆಮಣ್ಣಿನಲ್ಲಿರುವ ಅಪಾರ ರಂಧ್ರಗಳಲ್ಲಿ ನೀರಿಳಿಯತೊಡಗುತ್ತದೆ. ಆದರೆ ಮಣ್ಣಿನ ಕಣಗಳು ನೀರನ್ನು ಹೀರಿಕೊಳ್ಳಲಾರವು. ಹೀಗಾಗಿ, ಬಹುಬೇಗ ನೀರಿನೊತ್ತಡ ಹೆಚ್ಚುತ್ತದೆ. ಇದು ಮಿತಿಮೀರಿದಾಗ ನೀರು ಮಣ್ಣನ್ನು ಬಿರಿದು ಹೊರಬರುತ್ತದೆ. ಹೀಗೆ ಗುಡ್ಡದ ಮೇಲ್ಭಾಗದಿಂದ ಜಾರತೊಡಗುವ ನೀರು-ಮಣ್ಣಿನ ಜೊತೆಗೆ, ಕಲ್ಲುಬಂಡೆಗಳೂ ಉರುಳುತ್ತವೆ. ಗುರುತ್ವಶಕ್ತಿಗೆ ಅವು ಇನ್ನೂ ವೇಗಪಡೆದು, ತಮ್ಮೆಲ್ಲ ಭಾರದೊಂದಿಗೆ ಕೆಳಭಾಗದ ಪ್ರದೇಶಕ್ಕೆ ಅಪ್ಪಳಿಸುವುದರಿಂದ ಗುಡ್ಡವೇ ಕುಸಿಯುತ್ತದೆ. ಕಾಡಿನ ಹೊದಿಕೆ ಕಳೆದುಕೊಂಡ ಒದ್ದೆಮಣ್ಣು, ಭಾರಿ ಮಳೆಯ ನೀರನ್ನು ಜಾರಿಸಲೂ ಅಥವಾ ಹಿಡಿದಿಡಲೂ ಸಾಧ್ಯವಾಗದೆ, ತಾನೇ ಕಣಿವೆಗೆ ಜಾರಿದ್ದೇ ಕೊಡಗಿನ ಅವಘಡಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ನಿರ್ವಹಣಾ ಕೇಂದ್ರದ (KSNDMC) ತಜ್ಞರು ವಿವರಿಸಿದ್ದಾರೆ.

ಅತಿಯಾದ ಅರಣ್ಯ ನಾಶ, ಭೂ ಅತಿಕ್ರಮಣ, ಗದ್ದೆ-ಝರಿಗಳನ್ನು ತುಂಬಿ ವಸತಿ ಸಂಕೀರ್ಣಗಳನ್ನು ಕಟ್ಟಿದ್ದು, ಕಡಿದಾದ ಇಳಿಜಾರಿನಲ್ಲಿ ರಸ್ತೆಗಳ ನಿರ್ಮಾಣ ಇತ್ಯಾದಿಗಳೆಲ್ಲ ಮುಂದೆ ಭೂಕುಸಿತಕ್ಕೆ ಕಾರಣವಾದೀತೆಂದು 2016ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನಗಳು ಎಚ್ಚರಿಸಿದ್ದವು. ಮಡಿಕೇರಿ, ಪಕ್ಕದ ಸಕಲೇಶಪುರದ ಬಿಸಿಲೆ, ಕುಮಾರಪರ್ವತ ಕಣಿವೆಗಳು... ಇಲ್ಲೆಲ್ಲ ಕಳೆದ ಆಗಸ್ಟಿನಲ್ಲಾದದ್ದು ಈ ಬಗೆಯ ಭೂಕುಸಿತಗಳೇ!

ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬೀಸಿದ ಬದಲಾವಣೆಗೆ ಕೊಡಗಿನ ಪರಿಸರ ತತ್ತರಿಸುತ್ತಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಕೊಡಗಿನ ಅರಣ್ಯದಲ್ಲಿ ಕಾದಿಟ್ಟ ಅರಣ್ಯ ಶೇಕಡ 30ರಷ್ಟಾದರೆ, ಉಳಿದ ಸುಮಾರು ಶೇಕಡ 30ರಷ್ಟು ಭಾಗ ಅರಣ್ಯವು ಸರ್ಕಾರಿ ಕಂದಾಯ ಭೂಮಿಯಲ್ಲಿದೆ. ಜಮ್ಮಾ, ಫೈಸಾರಿ, ಸಾಗುವಳಿ ಮಲೈ, ಕಾನು, ದೇವರಕಾಡು ಇತ್ಯಾದಿ ಹೆಸರಿನ ಈ ಡೀಮ್ಡ್ ಕಾಡುಪ್ರದೇಶವು ಇತ್ತೀಚಿನ ದಶಕಗಳಲ್ಲಿ ವ್ಯಾಪಕವಾಗಿ ಅತಿಕ್ರಮಣವಾಗಿದೆ. ಸ್ಥಳೀಯರ ಜೊತೆಗೆ, ಕೇರಳವೂ ಸೇರಿ ಇತರ ಪ್ರದೇಶಗಳಿಂದ ಬಂದ ವಲಸಿಗರು, ಕಾಫಿ, ರಬ್ಬರ್, ಶುಂಠಿ ಬೆಳೆಗಳನ್ನು ವಿಸ್ತರಿಸಿದ್ದೇ ಇದಕ್ಕೆ ಕಾರಣ! ಈ ಕೆಲವು ವರ್ಷಗಳಲ್ಲೇ ಡೀಮ್ಡ್ ಕಾಡುಗಳು ಎಗ್ಗಿಲ್ಲದೆ ಬೆಳೆಯುತ್ತಿರುವ ವಸತಿ ಸಮುಚ್ಚಯ, ರಿಸಾರ್ಟ್, ಹೋಮ್-ಸ್ಟೇಗಳಂಥ ಪ್ರವಾಸೋದ್ಯಮಕ್ಕೂ ಬಲಿಯಾಗಿವೆ. ಕೊಡಗಿನಲ್ಲಿ ಈ ಪರಿಯ ಅರಣ್ಯಪ್ರದೇಶ ಕುಗ್ಗಿದ್ದನ್ನು ಕೇಂದ್ರ ಸರ್ಕಾರದ ಭಾರತೀಯ ಅರಣ್ಯ ಸರ್ವೇಕ್ಷಣಾ ಸಂಸ್ಥೆ ಹೊರತರುವ ‘ಭಾರತೀಯ ಅರಣ್ಯ ಪರಿಸ್ಥಿತಿ’ ವರದಿ (2017) ಗುರುತಿಸಿದೆ.

ಕಾಫಿತೋಟದ ವೈವಿಧ್ಯವೂ ಬದಲಾಗಿದೆ. ದಟ್ಟ ಅರಣ್ಯದಂತಹ ಕಾಫಿತೋಟಗಳಲ್ಲಿ ಹೆಕ್ಟೇರಿಗೆ 350ಕ್ಕೂ ಮಿಕ್ಕಿ ಮರಗಳಿರುತ್ತಿದ್ದವು. ಆದರೆ ಈಗ, ಹಲವೆಡೆ ಹೆಕ್ಟೇರಿಗೆ ನೂರು ಮರಗಳೂ ಇರದು. ಸೂರ್ಯನ ಬೆಳಕು ಹೆಚ್ಚಾಗಿ ಬಿದ್ದರೆ ಇಳುವರಿ ಹೆಚ್ಚಿಸಲು ಸಾಧ್ಯವೆಂದೋ, ಸೂಚಿಪರ್ಣಿ ಸಿಲ್ವರ್-ಓಕ್ ನೆಟ್ಟರೆ ಅದಕ್ಕೆ ಕಾಳುಮೆಣಸು ಬೆಳೆಯಲು ಅನುಕೂಲವೆಂದೋ, ವ್ಯಾಪಕವಾಗಿ ಕಾಫಿತೋಟಗಳ ಕಾಡುಮರಗಳನ್ನು ಕಡಿಯುತ್ತಿರುವುದು ಸತ್ಯದ ಸಂಗತಿ. ಜೊತೆಗೆ, ಮರಮಟ್ಟು ವ್ಯಾಪಾರದಿಂದ ಬರುವ ಲಾಭದ ಆಸೆ. ಹೀಗಾಗಿ, ಎಸ್ಟೇಟ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಹಲಸು, ವಾಟೆ, ಧೂಪ, ನಂದಿ, ಹೆಬ್ಬೇವು, ಸಂಪಿಗೆ, ಮಹಾಗನಿ, ಸುರಹೊನ್ನೆ, ಹೊಳೆಹೊನ್ನೆ, ದಾಲ್ಚಿನ್ನಿ, ಕೋಕಂ, ಕಾಡುಬೇವು, ಕರಿಮರ, ಬೆಟ್ಟದ ಕಣಗಿಲು, ಎಣ್ಣೆಮರ, ನಾಗಸಂಪಿಗೆ, ನೇರಳೆ, ಮಡ್ಡಿಧೂಪ ಇತ್ಯಾದಿ ಅಮೂಲ್ಯ ಸಸ್ಯವೈವಿಧ್ಯ ಕರಗುತ್ತಿದೆ. ಹಲವೆಡೆ ತೋಟಗಳು ಸಿಲ್ವರ್-ಓಕ್ ನೆಡುತೋಪಿನಂತೆ ಭಾಸವಾಗುತ್ತಿವೆ! ಇವನ್ನೆಲ್ಲ ಇಲ್ಲಿನ ರೈತರು ವಿಷಾದದಿಂದ ಒಪ್ಪಿಕೊಳ್ಳುತ್ತಾರೆ.

ಇನ್ನು ಟಿಂಬರ್ ಲಾಬಿಯದ್ದೇ ಒಂದು ಕಥೆ. ಖಾಸಗಿ ಜಮೀನಿನಲ್ಲಿನ ಮರಗಳ ಹಕ್ಕನ್ನು ಅದರ ಮಾಲೀಕರಿಗೆ ಕೊಡುವ ಸೌಲಭ್ಯ ‘ಕರ್ನಾಟಕ ಟ್ರೀ ಕಾಯ್ದೆ’ಯಲ್ಲಿದೆ. ಖಾಸಗಿ, ಡೀಮ್ಡ್ ಹಾಗೂ ರಕ್ಷಿತಾರಣ್ಯಗಳ ಮರಗಳನ್ನು ಈ ಕಾಯ್ದೆಯ ದುರುಪಯೋಗ ಮಾಡಿ ವ್ಯಾಪಕವಾಗಿ ಲೂಟಿ ಮಾಡಿದ್ದನ್ನು ಅರಣ್ಯ ಇಲಾಖೆಯೇ ಒಪ್ಪುತ್ತದೆ. ಈ ಕುರಿತು ನ್ಯಾಯಲಯಗಳಲ್ಲಿ ಖಟ್ಲೆಗಳೂ ನಡೆಯುತ್ತಿವೆ. ಜಾಗದ ಸರ್ವೆಯಲ್ಲಿ ಮೋಸ, ಲಂಚಗುಳಿತನ, ಕಾನೂನು ದುರುಪಯೋಗ ಇತ್ಯಾದಿಗಳ ಮೂಲಕ ಸಾಗಿರುವ ಈ ಮರಮಟ್ಟಿನ ಉದ್ಯಮವು ಮಾಡಿರುವ ಅನಾಹುತಕ್ಕೆ ಅರಣ್ಯ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿಗಳೇ ಖೇದ ವ್ಯಕ್ತಪಡಿಸುತ್ತಾರೆ. ಇತ್ತೀಚೆಗಷ್ಟೇ ಭಾರಿ ವಿದ್ಯುತ್ ಮಾರ್ಗಕ್ಕಾಗಿ ಐದು ಸಾವಿರಕ್ಕೂ ಮಿಕ್ಕಿ ಮರಗಳು ಬಲಿಯಾದ ವರ್ತಮಾನವೂ ಹೊರಬಿದ್ದಿದೆ. ಇವುಗಳಿಂದಾಗಿ ಕಳೆದ ನಾಲ್ಕು ದಶಕಗಳಲ್ಲಿ ಕೊಡಗಿನ ಕನಿಷ್ಠ ಶೇಕಡ 30ಕ್ಕೂ ಹೆಚ್ಚಿನ ಕಾಡು ನಾಶವಾಗಿರುವುದನ್ನು ಪುದುಚೇರಿಯ ಫ್ರೆಂಚ್ ಇನ್‌ಸ್ಟಿಟ್ಯೂಟ್ ಅಧ್ಯಯನ ಹೇಳುತ್ತಿದೆ!

ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಡೀಮ್ಡ್ ಕಾಡುಗಳಲ್ಲೂ ಅತಿಕ್ರಮಣ ಆಗುತ್ತಿದೆ. ಗೋಮಾಳದಂಥ ಸಾಮೂಹಿಕ ಭೂಮಿಯು ಅಕೇಶಿಯಾ ನೆಡುತೋಪಿಗೆ ಬಲಿಯಾಗುತ್ತಿದೆ. ಉತ್ತರ ಕನ್ನಡದಲ್ಲಿ ನದಿತೀರದ ಕಾಡು, ಜೌಗುಪ್ರದೇಶಗಳು ಮಾಯವಾಗುತ್ತಿವೆ. ವ್ಯಾಪಕವಾದ ಅಂತರ್ಜಲ ನಾಶ, ನದಿ-ಕೆರೆ ಮಾಲಿನ್ಯ, ಪಟ್ಟಣಗಳ ತ್ಯಾಜ್ಯದ ಸಮಸ್ಯೆ ಇವೆಲ್ಲ ಜನಜೀವನವನ್ನು ನಲುಗಿಸುತ್ತಿವೆ. ಗೌಳಿ, ಕುಣಬಿ, ಮಲೆಕುಡಿಯರಂಥ ಸಾವಿರಾರು ಅಪ್ಪಟ ವನವಾಸಿಗರು ಕನಿಷ್ಠ ಕೃಷಿಭೂಮಿ ಪಡೆಯಲೂ ಪರದಾಡುತ್ತಿರುವಾಗ, ಬಲಾಢ್ಯರು ಮಾತ್ರ ಅರಣ್ಯಹಕ್ಕು ಕಾಯ್ದೆಯನ್ನು ದುರುಪಯೋಗ ಮಾಡಿ ಸರಾಗವಾಗಿ ಅರಣ್ಯವನ್ನು ಅತಿಕ್ರಮಿಸುತ್ತಿದ್ದಾರೆ. ಪರಿಸರ ಸೂಕ್ಷ್ಮತೆಯನ್ನು ಧಿಕ್ಕರಿಸಿ, ಮಲೆನಾಡಿನೆಲ್ಲೆಡೆ ಹಲವು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರೈಲು ಯೋಜನೆಗಳಿಗೆ ಸರ್ಕಾರ ಚಾಲನೆ ನೀಡುತ್ತಿದೆ. ಎತ್ತಿನಹೊಳೆ ಯೋಜನೆಯ ಅಧ್ವಾನದ ಹೊರತಾಗಿಯೂ ಶರಾವತಿ, ಅಘನಾಶಿನಿ, ಗಂಗಾವಳಿಯಂಥ ಪ್ರಮುಖ ನದಿಗಳ ನೀರನ್ನು ಪೂರ್ವಕ್ಕೆ ಕೊಂಡೊಯ್ಯುವ ಭಾರಿ ಯೋಜನೆಗಳ ಪ್ರಸ್ತಾವವನ್ನು ಜಲಸಂಪನ್ಮೂಲ ಇಲಾಖೆ ಇತ್ತೀಚೆಗಷ್ಟೇ ಇರಿಸಿದೆ! ಈ ಅಭಿವೃದ್ಧಿ ಸ್ಪೋಟಕ್ಕೆ ಎಲ್ಲರೂ ಜವಾಬ್ದಾರಲ್ಲವೇ?

ಮನುಷ್ಯನ ಸೃಷ್ಟಿಯೊಂದನ್ನು (ವಾಹನ) ಧ್ವಂಸಗೊಳಿಸಲು ಸೃಷ್ಟಿಗೆ ನಿಮಿಷ ಸಾಕು!
ಮನುಷ್ಯನ ಸೃಷ್ಟಿಯೊಂದನ್ನು (ವಾಹನ) ಧ್ವಂಸಗೊಳಿಸಲು ಸೃಷ್ಟಿಗೆ ನಿಮಿಷ ಸಾಕು!

ಸುಸ್ಥಿರ ಅಭಿವೃದ್ಧಿ ಹೇಗೆ?
ಮಲೆನಾಡಿನ ಪರಿಸರದ ಅನನ್ಯತೆಯನ್ನು ಕಾಯ್ದುಕೊಂಡೂ, ಜನರಿಗೆ ಅವಶ್ಯವಿರುವ ಅನುಕೂಲ ಒದಗಿಸಲು ಮಾಯಾದಂಡ ಬೇಕಿಲ್ಲ. ಇರುವ ಕಾನೂನುಗಳ ಪಾಲನೆಯಾದರೆ ಸಾಕು. ಉದಾಹರಣೆಗೆ, ವೈಜ್ಞಾನಿಕ ಮತ್ತು ಪಾರದರ್ಶಕ ಭೂಬಳಕೆ ನೀತಿಯೊಂದರ ಆಧಾರದಲ್ಲಿ ಮಾತ್ರ ಮಲೆನಾಡಿನ ನೆಲವನ್ನು ನಿರ್ವಹಿಸಬೇಕು. ಎಲ್ಲಿ ಅರಣ್ಯವಿರಲೇಬೇಕು, ಎಂಥ ಸ್ಥಳಗಳಲ್ಲಿ ಮನೆ, ಊರು, ಬಡಾವಣೆ ಇರಬಹುದು, ಜಲಮೂಲಗಳನ್ನು ಹೇಗೆ ಮತ್ತು ಎಲ್ಲಿ ಬಳಸಬೇಕು- ಇತ್ಯಾದಿ ಆಡಳಿತಾತ್ಮಕ ತೀರ್ಮಾನಗಳನ್ನೆಲ್ಲ ಆಗ ವಿವೇಕಯುಕ್ತವಾಗಿ ತೆಗೆದುಕೊಳ್ಳಲು ಸಾಧ್ಯ. ಸಹ್ಯಾದ್ರಿ ಶ್ರೇಣಿಯ ಪಾರಿಸರಿಕ ಸೂಕ್ಷ್ಮತೆಯನ್ನು ಪುರಸ್ಕರಿಸಿ, ಈ ಬಗೆಯ ನೀತಿ ರೂಪಿಸಲು ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಮುಂದಾಗಬೇಕು. ಜಿಲ್ಲಾ ಪಂಚಾಯತಿಗಳು ಕಡ್ಡಾಯವಾಗಿ ರೂಪಿಸಬೇಕಿರುವ ಅಭಿವೃದ್ಧಿ ಯೋಜನೆಗಳಲ್ಲಿ ಇವೆಲ್ಲ ಸೇರಬೇಕು.

ಮಲೆನಾಡಿಗೆ ಅಗತ್ಯವಿರುವುದು ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ ಬೆಳೆಸುವ ಆರ್ಥಿಕತೆ. ಅರಣ್ಯ, ಹುಲಿ ಹಾಗೂ ಆನೆ ಸಂರಕ್ಷಿಸುವ ಯೋಜನೆಗಳು ಇಲ್ಲಿನ ನೆಲ–ಜಲ ಸುರಕ್ಷತೆಯನ್ನೂ ಕಾಪಾಡಬಲ್ಲವು. ಜಾಗತಿಕ ಮಾರುಕಟ್ಟೆಯಿರುವ ಕಾಫಿ, ಏಲಕ್ಕಿ, ಕಾಳುಮೆಣಸಿನಂಥ ತೋಟಗಾರಿಕಾ ಬೆಳೆಗಳು ಹಾಗೂ ಔಷಧಿ ಗಿಡಮೂಲಿಕೆಗಳ ಸುಸ್ಥಿರ ಕೃಷಿಯಾಗಲಿ, ನದಿ-ಕೆರೆಗಳ ಜಲಮೂಲ ರಕ್ಷಣೆ, ಅರಣ್ಯ ಮತ್ತು ಕೃಷಿಯಾಧಾರಿತ ಉದ್ದಿಮೆ ಹಾಗೂ ವ್ಯವಹಾರ ಇರಲಿ – ಇವೆಲ್ಲವೂ ಇಲ್ಲಿನ ಪರಿಸರವನ್ನು ನಿರಂತರವಾಗಿ ಪೋಷಿಸಿದರೆ ಮಾತ್ರ ಸಾಧ್ಯ. ಅಣೆಕಟ್ಟೋ, ಹೊಸ ರೈಲುಮಾರ್ಗವೋ ಸ್ಥಳೀಯರಿಗೆ ತಾತ್ಕಾಲಿಕ ಕೂಲಿ ಅವಕಾಶ ನಿರ್ಮಿಸಬಹುದಷ್ಟೇ. ದೀರ್ಘಕಾಲದಲ್ಲಿ ಅವು ಪರಿಸರ ನಿರಾಶ್ರಿತರನ್ನು ಹಾಗೂ ಮಾಲಿನ್ಯವನ್ನು ಮಾತ್ರ ಸೃಷ್ಟಿಸಬಲ್ಲವು ಎನ್ನುವುದನ್ನು ಲಿಂಗನಮಕ್ಕಿ, ಸೂಪಾ, ದಾಂಡೇಲಿ ಯೋಜನೆಗಳಲ್ಲಿ ನೋಡುತ್ತಿದ್ದೇವಲ್ಲವೇ?

ಕೊಡಗಿನ ಯಶೋಗಾಥೆಗಳು
ಪ್ರಸ್ತುತ ಕಾಣುತ್ತಿರುವ ಪರಿಸರ ತುರ್ತುಪರಿಸ್ಥಿತಿಯನ್ನು ನಿಭಾಯಿಸಬಲ್ಲ ದಾರಿಗಳು ಕೊಡಗಿನಲ್ಲೇ ಕಾಣಸಿಗುತ್ತವೆ. ಉದಾಹರಣೆಗೆ: ನೈಜಕಾಡನ್ನು ಉಳಿಸಿಕೊಂಡೇ ಸಾವಯವ ಕಾಫಿ ಬೆಳೆಸುವ ಪ್ರಯತ್ನವನ್ನು ಹಲವು ಪ್ರಗತಿಪರ ರೈತರು ಮಾಡುತ್ತಿದ್ದಾರೆ. ಇಂಥ ಸಾವಯವ ಕಾಫಿಗೆ ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಶೇಕಡ 15ರಿಂದ 20ರಷ್ಟು ಹೆಚ್ಚು ಬೆಲೆ ಸಿಗುವುದರಿಂದ ಹಲವಾರು ರೈತರು ತೋಟದ ಜೀವವೈವಿಧ್ಯ ಹೆಚ್ಚಿಸಲು ಉತ್ಸುಕರಾಗಿದ್ದಾರೆ. ಸಿಲ್ವರ್-ಓಕ್ ಗೀಳಿಗೆ ಬಲಿಯಾಗದೆ, ಸ್ಥಳೀಯ ಮರಪ್ರಭೇದಗಳನ್ನು ಬೆಳೆಸುತ್ತಿದ್ದಾರೆ. ಹಲವು ಸಂಶೋಧನಾ ಸಂಸ್ಥೆಗಳ ಜೊತೆಸೇರಿ, ಸಾವಯವ ಪ್ರಮಾಣಪತ್ರ ನೀಡುವ ಸಂಸ್ಥೆಗಳು ಈವರೆಗೆ ಸುಮಾರು ಹತ್ತು ಸಾವಿರ ಎಕರೆಗೂ ಮಿಕ್ಕಿ ಇಂಥ ನಿಸರ್ಗಸ್ನೇಹಿ ಕಾಫಿ ತೋಟಗಳನ್ನು ಗುರುತಿಸಿವೆ. ಬಹುರಾಷ್ಟ್ರೀಯ ಕಂಪನಿಗಳೂ ಈ ಕಾಫಿ ಉತ್ಪನ್ನಗಳನ್ನು ಹೆಚ್ಚು ಬೆಲೆಕೊಟ್ಟು ಕೊಳ್ಳತೊಡಗಿರುವುದರಿಂದ ರೈತರು ಲಾಭ ಗಳಿಸುತ್ತಿದ್ದಾರೆ.

ಕಾಫಿಯನ್ನು ಹೆಚ್ಚೆಚ್ಚು ಅರಣ್ಯಕೃಷಿ ಮಾದರಿಗೆ ಒಗ್ಗಿಸುವ ಹಲವಾರು ಸಂಶೋಧನೆಗಳೂ ಆಗುತ್ತಿವೆ. ಪ್ರಗತಿಪರ ರೈತರ ಜೊತೆಗೂಡಿ, ಪೊನ್ನಂಪೇಟೆಯ ಅರಣ್ಯ ಕಾಲೇಜು ಹಾಗೂ ಪುದುಚೇರಿಯ ಫ್ರೆಂಚ್ ಇನ್‌ಸ್ಟಿಟ್ಯೂಟ್ ತಜ್ಞರು ಇಂಥ ಹಲವು ಮಾದರಿಗಳನ್ನು ರೂಪಿಸಿದ್ದಾರೆ. ಅರಣ್ಯ ಕಾಲೇಜಿನಲ್ಲಿರುವ ‘ಕೊಡಗು ಮಾದರಿ ಅರಣ್ಯ ಟ್ರಸ್ಟ್’ ಜಿಲ್ಲೆಯಾದ್ಯಂತ ಅರಣ್ಯಾಧಾರಿತ ತೋಟಗಾರಿಕಾ ಕೃಷಿ ಕುರಿತು ಸಂಶೋಧನೆ, ಪ್ರಾತ್ಯಕ್ಷಿಕೆ ಕೈಗೊಳ್ಳುತ್ತಿದೆ. ಸಾವಯವ ಮತ್ತು ಕೃಷಿ ಅರಣ್ಯ ತತ್ವದ ಕಾಫಿ, ಏಲಕ್ಕಿ, ಕಿತ್ತಳೆ, ಜೇನು ಕೃಷಿಗಳ ಮಾದರಿ ತೋಟಗಳಿವೆ. ಆನೆ ಹಾಗೂ ಹುಲಿಗಳು ಸದಾ ಓಡಾಡುವ ಸಂರಕ್ಷಿತಾರಣ್ಯದಂಚಿನ ತೋಟಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವ ರೈತರಿಗೆ, ಪ್ರೋತ್ಸಾಹಧನ ನೀಡುವ ಮಾದರಿಗಳೂ ಇವೆ. ಸಂರಕ್ಷಣೆ ಹಾಗೂ ಆರ್ಥಿಕ ಅಭಿವೃದ್ಧಿ- ಇವೆರಡನ್ನೂ ಸಾಧಿಸುವ ಈ ಬಗೆಯ ಅನೇಕ ಉಪಾಯಗಳು ಕೊಡಗಿನಂಗಳದಲ್ಲೇ ಇವೆ. ಅವನ್ನು ಗಮನಿಸಿ, ಸರ್ಕಾರಿ ಯೋಜನೆಗಳಲ್ಲಿ ಅಳವಡಿಸುವ ವಿವೇಕ ಬೇಕಿದೆ.

ಮಲೆನಾಡಿನಲ್ಲಿ ನೈಸರ್ಗಿಕ ಭೂಕುಸಿತದ ಸಾಧ್ಯತೆ ಎಲ್ಲೆಲ್ಲಿ?
ಜಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ದೇಶದ ಭೂಮಿಯಾಳದ ಕುರಿತು ಅಧ್ಯಯನ ಮಾಡುವ ಸಾಂವಿಧಾನಿಕ ಜವಾಬ್ದಾರಿಯುಳ್ಳ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆ. ಪ್ರಸ್ತುತ 'ಭೂಕುಸಿತವಾಗಬಲ್ಲ ಪ್ರದೇಶಗಳ ದಾಖಲೀಕರಣ' (National Landslide Susceptibility Mapping-NLSM) ಯೋಜನೆಯಡಿ, ಭವಿಷ್ಯದಲ್ಲಿ ಭೂಕುಸಿತವಾಗಬಲ್ಲ ಸ್ಥಳಗಳನ್ನು ಗುರುತಿಸಿ, 2020ರ ವೇಳೆಗೆ ಕಂಪ್ಯೂಟರೀಕರಣ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ನೆಲದಾಳದ ಕಲ್ಲಿನ ರಚನೆ, ಮೇಲ್ಮೈಮಣ್ಣು, ಇಳಿಜಾರಿನ ಸ್ವರೂಪ, ಹಸಿರು ಹೊದಿಕೆ, ಮಳೆಯ ಪ್ರಮಾಣ, ಗಾಳಿ ಬೀಸುವ ವೇಗ, ಅಂತರ್ಜಲ ಮತ್ತು ಮೇಲಿನ ನೀರಿನ ಹರಿವು, ಮಾನವನ ಭೂಬಳಕೆ ರೀತಿ- ಇವನ್ನೆಲ್ಲ ಆಧರಿಸಿ, ಒಂದು ಪ್ರದೇಶದಲ್ಲಿ ಭವಿಷ್ಯದಲ್ಲಿ ಭೂಕುಸಿತ ಆಗುವ ಸಾಧ್ಯತೆಗಳನ್ನು ತಜ್ಞರು ಊಹಿಸುತ್ತಾರೆ. ಅದರ ಪ್ರಾಥಮಿಕ ಮಾಹಿತಿ ಭೂಗರ್ಭ ಇಲಾಖೆಯ 'ಭೂಕೋಶ' ಅಂತರ್ಜಾಲ ತಾಣದಲ್ಲೂ ಲಭ್ಯವಿದೆ.

ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಡೆಸಿದ ಪ್ರಾಥಮಿಕ ಅಧ್ಯಯನವು ಅಂತಹ ಸುಮಾರು ಏಳುನೂರು ಸ್ಥಳಗಳನ್ನು ಗುರುತಿಸಿದೆ. ಇವುಗಳಲ್ಲಿ ಶೇಕಡ 96ಕ್ಕೂ ಹೆಚ್ಚಿನವು ಮಾನವವನ ಹಸ್ತಕ್ಷೇಪದಿಂದಾಗಿ ಭೂಕುಸಿತವಾಗಬಲ್ಲ ಸ್ಥಳಗಳು. ಅರಣ್ಯನಾಶ, ಕ್ವಾರಿ, ಮರಳು ಗಣಿಗಾರಿಕೆ, ಹೆದ್ದಾರಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಕಡಿದಿದ್ದು- ಇವೆಲ್ಲ ಇದಕ್ಕೆ ಕಾರಣ.

ಸಹ್ಯಾದ್ರಿಯಲ್ಲಿ ಸಾಗುವ ಹೆದ್ದಾರಿ ಹಾಗೂ ರೈಲುಮಾರ್ಗದ ಅಂಚಿನ ಗುಡ್ಡಗಳು ಹಾಗೂ ಗಣಿಪ್ರದೇಶಗಳೇ ಇವುಗಳಲ್ಲಿ ಪ್ರಮುಖವಾದವು. ಅಪ್ಪಟ ನೈಸರ್ಗಿಕ ಕಾರಣದಿಂದ ಕುಸಿತವಾಗಬಲ್ಲ ಪ್ರದೇಶಗಳು ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇಲ್ಲ. ಚಿಕ್ಕಮಗಳೂರು, ಸಕಲೇಶಪುರ ಹಾಗೂ ಕೊಡಗಿನಲ್ಲಿ ಬೋಳಾದ ಶಿಖರ ಮತ್ತು ಕಡಿದಾದ ಇಳಿಜಾರುಳ್ಳ ಕೆಲವು ಪರ್ವತಗಳ ತಪ್ಪಲಿನಲ್ಲಿ ಕುಸಿತದ ಸಾಧ್ಯತೆಗಳಿವೆ. ಆದರೆ ಅಲ್ಲಿ ಜನವಸತಿಯಿಲ್ಲದ ಕಾರಣ, ಜನ ಭಯಪಡುವ ಅವಶ್ಯಕತೆಯಿಲ್ಲ.

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ವಿಭಾಗ ಕೂಡ ಉತ್ತರ ಕನ್ನಡದ ಶರಾವತಿ ಮತ್ತು ಅಘನಾಶಿನಿ ನದಿ ಕಣಿವೆಗಳಲ್ಲಿ ಈ ಬಗೆಯ ಅಧ್ಯಯನ ಮಾಡಿದೆ. ಈ ವರದಿಯೂ ಈ ನದಿಗಳ ಅಂಚಿನಲ್ಲಿ ಭೂಕುಸಿತವಾಗಬಲ್ಲ ಹಲವು ಪ್ರದೇಶಗಳನ್ನು ಗುರುತಿಸಿದೆ. ಅವೆಲ್ಲವೂ ಅರಣ್ಯನಾಶ ಮತ್ತು ಅವೈಜ್ಞಾನಿಕ ಮಣ್ಣು ಅಗೆತ ಮಾಡಿರುವುದರ ಫಲವಾಗಿ ಗುಡ್ಡದ ಇಳಿಜಾರು ಕುಸಿಯುತ್ತಿರುವ, ಮಾನವ ವಸತಿರಹಿತ ಪ್ರದೇಶಗಳೇ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT