ಸಾಮಗಾರಹಳ್ಳಿಯ‘ಪಾದರಕ್ಷೆ’ ಉದ್ಯಮ!

7

ಸಾಮಗಾರಹಳ್ಳಿಯ‘ಪಾದರಕ್ಷೆ’ ಉದ್ಯಮ!

Published:
Updated:
Deccan Herald

ಆ ಪುಟ್ಟ ಗ್ರಾಮದಲ್ಲಿ ಇಪ್ಪತ್ತೈದು ಮನೆಗಳಿವೆ. ಮುಂಜಾನೆಯಾಗುತ್ತಿದ್ದಂತೆ, ಆ ಮನೆಗಳಿಂದ ಕರ ಕರ ಎಂದು ಕತ್ತರಿಸುವ, ದಬ ದಬ ಎಂದು ಬಡಿಯುವ ಶಬ್ದ ಕೇಳಿ ಬರುತ್ತದೆ. ಈ ಶಬ್ದದ ದಾರಿ ಹಿಡಿದು ಯಾವುದಾದರೂ ಒಂದು ಮನೆ ಹೊಕ್ಕಿ ನೋಡಿದರೆ, ಆ ಮನೆಯ ಪಡಸಾಲೆಯಲ್ಲಿ ಚಪ್ಪಲಿ ತಯಾರಿಸುತ್ತಿರುವ ದೃಶ್ಯ ಕಾಣುತ್ತದೆ !

ಇದು ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಶ್ರೀರಾಮನಗರ – ಸಾಮಗಾರಹಳ್ಳಿಯ ಮನೆ ಮನೆ ಕಥೆ. ಇಲ್ಲಿ ಅಷ್ಟೂ ಮನೆಗಳಲ್ಲಿ ಚಪ್ಪಲಿ ಸಿದ್ಧಪಡಿಸುತ್ತಾರೆ. ಇದು ಪೂರ್ವಜರು ಅನುಸರಿಸಿಕೊಂಡು ಬಂದ ಕಾಯಕ. ಅದನ್ನು ಈ ಪೀಳಿಗೆಯವರೂ ಮುಂದುವರಿಸುತ್ತಿದ್ದಾರೆ. ಈ ಕಾಯಕಕ್ಕೆ ಲಿಂಗಬೇಧವಿಲ್ಲ. ಅಪ್ಪ–ಮಗ ಎಂಬ ವಯಸ್ಸಿನ ಭೇದವೂ ಇಲ್ಲ.

ಇದು ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ಕಸುಬು. ಅವರ ಶ್ರಮದ ಪ್ರಮಾಣಕ್ಕನುಗುಣವಾಗಿ ಬೆಲೆ ದೊರೆಯದಿದ್ದರೂ, ಪರ್ಯಾಯ ಉದ್ಯೋಗದ ಕಿರಿ ಕಿರಿಗಳು, ಸಂಕಷ್ಟವನ್ನು ಅರಿತು ಈ ಉದ್ಯೋಗವನ್ನೇ ಮುಂದುವರಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನೊಂದಿಗೆ ಬ್ಯಾಂಕ್‍ನಿಂದ ಸಾಲ ಪಡೆದು ತಮ್ಮ ಕಾಯಕಕ್ಕೆ ಹೊಸ ರೂಪ ನೀಡಿದ್ದಾರೆ.

ಒಂದೊಂದು ಜವಾಬ್ದಾರಿ ನಿರ್ವಹಣೆ
ಪ್ರತಿ ಮನೆಯಲ್ಲಿ ಗಂಡಸರು ಚರ್ಮ ಖರೀದಿ ಮಾಡಿ ಹದಗೊಳಿಸುತ್ತಾರೆ. ಮಹಿಳೆಯರು ಅದನ್ನು ಚಪ್ಪಲಿಯಾಗಿಸಿ, ಪಾಲಿಶ್ ಮಾಡಿ ಕೊಡುತ್ತಾರೆ. ತಯಾರಾದ ಚಪ್ಪಲಿಗಳನ್ನು ಜೋಡಿಸಿಕೊಂಡು ಮಾರುಕಟ್ಟೆಗೆ ಕೊಂಡೊಯ್ಯುವುದು ಪುನಃ ಪುರುಷರದ್ದೇ ಜವಾಬ್ದಾರಿ. 

‘ಚಪ್ಪಲಿ ತಯಾರಿಕೆಗೆ ಹೆಚ್ಚಾಗಿ ಎಮ್ಮೆ ಚರ್ಮ ಬಳಸುತ್ತೇವೆ. ಚರ್ಮ ಸೇರಿದಂತೆ ಚಪ್ಪಲಿ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಮುಧೋಳ ತಾಲೂಕಿನ ಹೊನ್ನೂರು, ಬೈಲಹೊಂಗಲ, ಸೈದಾಪುರದಿಂದ ಖರೀದಿಸುತ್ತೇವೆ’ ಎನ್ನುತ್ತಾರೆ ಗ್ರಾಮದ ವಿಠ್ಠಲ್ ದೊಂಡಿಬಾ ಕಾಮ್ಲೆ. ಒಂದು ಎಮ್ಮೆಯ ಚರ್ಮಕ್ಕೆ ₹2ಸಾವಿರದಿಂದ ₹3500 ದರವಿದೆ. ಒಣಗಿಸಿದ ಒಂದು ಕೆ.ಜಿ ಚರ್ಮಕ್ಕೆ ₹2700. ಇವರು ಎರಡು ರೀತಿಯ ಚಪ್ಪಲಿಗಳನ್ನು ತಯಾರಿಸುತ್ತಾರೆ. ಅದನ್ನು ಕುರಿ ಕಾಯುವವರ ಚಪ್ಪಲಿ ಮತ್ತು ಸಾಮಾನ್ಯರು ತೊಡುವ ಚಪ್ಪಲಿ ಎಂದು ವಿಭಾಗಿಸುತ್ತಾರೆ.

‘ಈ ಚಪ್ಪಲಿಗಳನ್ನು ತೊಡುವುದರಿಂದ ದೇಹ ತಂಪಾಗಿರುತ್ತದೆ. ಕಾಲು ಬಿರಿಯುವುದಿಲ್ಲ. ಕಾಡು, ಬೆಟ್ಟ ಸುತ್ತುತ್ತಾ ಮುಳ್ಳು ಕಂಟಿಗಳಲ್ಲಿ ನಡೆದಾಡುವ ನಮಗೆ ಇಂಥ ಚಪ್ಪಲಿ ತುಂಬಾ ಅನುಕೂಲ’ ಎನ್ನುತ್ತಾರೆ ಚಪ್ಪಲಿ ಬಳಸಿ ನೋಡಿರುವ ಕುರಿ ಕಾಯುವವರು. ‘ಹತ್ತು ವರ್ಷಗಳಿಂದ ಸಾಮಗಾರಹಳ್ಳಿಯಿಂದಲೇ ಚಪ್ಪಲಿ ಖರೀದಿಸುತ್ತಿದ್ದೇನೆ. ಇದನ್ನು ತೊಡುವುದರಿಂದ ಕಾಲುನೋವು ಕಡಿಮೆಯಾಗಿದೆ’ ಎನ್ನುತ್ತಾರೆ ಗೋಕಾಕನ ಚೆನ್ನಪ್ಪ ಸಿದ್ಧಪ್ಪ. ‘ಬಾಳಿಕೆಯಲ್ಲಿ ಬೇರೆ ಚಪ್ಪಲಿಗಿಂತ ನಾಲ್ಕು ಪಾಲು ಹೆಚ್ಚಿದೆ. ಹಲವಾರು ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ’ ಎಂದು ಕಡೂರಿನ ದಿನೇಶ್‍, ಚಪ್ಪಲಿ ಗುಣಮಟ್ಟವನ್ನು ಪ್ರಮಾಣೀಕರಿಸುತ್ತಾರೆ. ಹೀಗೆ ಚಪ್ಪಲಿ ಬಗ್ಗೆ ಮಾತನಾಡುವ ಕೆಲವರು ನಮಗೆ ಇದೇ ತರಹದ್ದು ಬೇಕೆಂದು ಬೇಡಿಕೆ ಇಟ್ಟು, ತಯಾರಿಸಿಕೊಳ್ಳುತ್ತಾರಂತೆ.


ಯಂತ್ರ ಬಳಸುವುದಿಲ್ಲ
ಈ ಕಸುಬಿನ ಯಾವ ಹಂತದಲ್ಲೂ ಯಂತ್ರಗಳನ್ನು ಬಳಸುವುದಿಲ್ಲ. ರೆಟ್ಟೆ ಬಲದಿಂದಲೇ ಎಲ್ಲವೂ ತಯಾರಾಗುತ್ತದೆ. ಇದೊಂದು ರೀತಿ ಅವರಿಗೆ ಅನಿವಾರ್ಯ ಕೂಡ.

ಒಂದು ಮನೆಯಲ್ಲಿ ಮೂವರು ಚಪ್ಪಲಿ ತಯಾರಿಕೆಯಲ್ಲಿ ತೊಡಗಿದರೆ, ಒಂದು ದಿನಕ್ಕೆ ಹತ್ತು ಜತೆಗಳನ್ನು ಸಿದ್ಧಪಡಿಸುತ್ತಾರೆ. ಒಂದೊಂದು ಚಪ್ಪಲಿ ಎರಡರಿಂದ ಮೂರು ಕೆ.ಜಿ ತೂಗುತ್ತದೆ. ನಾಲ್ಕೈದು ವರ್ಷ ಬಾಳಿಕೆ ಬರುತ್ತದೆ. ₹400 ಒಂದು ಜತೆ ಚಪ್ಪಲಿ ಬೆಲೆ. ಹತ್ತು ಜತೆ ಚಪ್ಪಲಿ ತಯಾರಿಸಿ ಮಾರಾಟ ಮಾಡಿದರೆ, ಖರ್ಚು ಬಿಟ್ಟು, ₹1500 ಸಿಗುತ್ತದೆ.

ಗ್ರಾಮದ ಹೊಳ್ಳಿಯಪ್ಪ, ಚಿಕ್ಕವರಿಂದಲೇ ಈ ಕಾಯಕ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಎರಡು ಜತೆ ಪುರುಷರ ಚಪ್ಪಲಿಗಳನ್ನು ತಯಾರಿಸುತ್ತಾರೆ. ಇದಕ್ಕೆ ₹900 ಖರ್ಚಾಗುತ್ತದೆ. ಇವುಗಳನ್ನು ಗೋಕಾಕ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ‘ಒಂದು ಜತೆ ತಯಾರಿಸಿದರೆ ₹150 ಲಾಭ ಸಿಗುತ್ತದೆ.

ಇಪ್ಪತ್ತೆರಡು ವರ್ಷಗಳಿಂದ ಚಪ್ಪಲಿಗೆ ಬೇಕಾದ ಚರ್ಮವನ್ನು ಹದ ಮಾಡುತ್ತಿರುವ ಗ್ರಾಮದ ರುಕ್ಮಿಣಿ ‘ಈ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ನಿರ್ವಹಿಸುತ್ತಾರೆ’ ಎಂದು ಹೇಳುತ್ತಾರೆ. ಗ್ರಾಮಕ್ಕೆ ಮದುವೆಯಾಗಿ ಬಂದ ಮೇಲೆ ಚರ್ಮ ಹದ ಮಾಡುವುದು, ಚಪ್ಪಲಿ ಹೊಲಿಯುವುದನ್ನು ಕಲಿತಿರುವ ಸುಜಾತ, ‘ಆರಂಭದ ದಿನಗಳಲ್ಲಿ ಚರ್ಮ ಹದ ಮಾಡುವುದನ್ನು ಕಲಿತೆ. ನಂತರ ಗಂಡನಿಂದ ಚಪ್ಪಲಿ ತಯಾರಿಸುವುದನ್ನು ಕಲಿತೆ. ಕಲಿಯುವ ಆಸಕ್ತಿ, ಕೌಶಲ್ಯವಿದ್ದರೆ ಒಂದು ತಿಂಗಳಲ್ಲಿ ಈ ಕೆಲಸ ಕಲಿಯಬಹುದು’ ಎಂದು ಹೇಳುತ್ತಾರೆ ಅವರು. ಸುಜಾತ ಏಳು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. 

ಇಲ್ಲಿ ತಯಾರಾದ ಚಪ್ಪಲಿಗಳನ್ನು ಬಾಗಲಕೋಟೆ, ಗಂಗಾವತಿಗೆ ಕಳುಹಿಸುತ್ತಾರೆ. ಕೆಲವೊಮ್ಮೆ ದೇವರಿಗೆ ಹರಕೆ ಹೊತ್ತು ಚಪ್ಪಲಿ ಒಪ್ಪಿಸುವವರೂ ಇವರಿಗೆ ಆರ್ಡರ್‌ ಕೊಟ್ಟು ಸಿದ್ಧಪಡಿಸುತ್ತಾರಂತೆ. ಅಂಥ ಚಪ್ಪಲಿಗಳ ಬೆಲೆ  ₹10 ಸಾವಿರದಿಂದ ₹ 20 ಸಾವಿರದವರೆಗೆ ಇರುತ್ತದೆ ಎನ್ನುತ್ತಾರೆ ತಯಾರಕರು.

ಚಪ್ಪಲಿಗೆ ಬೇಕಾದ ವಿನ್ಯಾಸ ರಚಿಸಲು ಬೇರೆಲ್ಲೂ ತರಬೇತಿ ಪಡೆದಿಲ್ಲ. ಹಾಗೆ ತರಬೇತಿ ನೀಡುವ ಸಂಸ್ಥೆಗಳೂ ಇಲ್ಲ ಎನ್ನಿ. ತಮ್ಮ ತಲೆಗೆ ಹೊಳೆದ ಹೊಸ ಯೋಚನೆಗಳಿಗೆ ತಾವೇ ಒಂದು ರೂಪ ಕೊಡುತ್ತಾರೆ. ಆಗ ಹೊಸ ಡಿಸೈನ್ ತಯಾರಾಗುತ್ತದೆ. ಇವುಗಳಲ್ಲಿ ಕೆಲವು ಡಿಸೈನ್‍ಗಳು ಗ್ರಾಹಕರ ಮನಗೆದ್ದರೆ ಕೆಲವು ಮಾರಾಟವಾಗದೆ ಉಳಿಯುತ್ತವೆ ಎನ್ನುತ್ತಾರೆ ತಯಾರಕರು. ಚಪ್ಪಲಿ ಅಲಂಕರಿಸಲು ಬೇಕಾದ ಟಿಕ್ಲಿ, ಬಣ್ಣ, ಹಗ್ಗ, ಬಣ್ಣದ ಗುಂಡಿಗಳನ್ನು ಬೆಂಗಳೂರಿನಿಂದ ಖರೀದಿಸುತ್ತಾರೆ. ಈ ಎಲ್ಲ ಅಲಂಕಾರಿಕ ವಸ್ತುಗಳನ್ನು ತಾವೇ ಅಂಟಿಸುತ್ತಾರೆ.

ಸಾಮಗಾರಹಳ್ಳಿಯಂತಹ ಗ್ರಾಮಗಳಲ್ಲಿ ನಡೆಯುತ್ತಿರುವ ಈ ಕಸುಬಿಗೆ ಯಾಂತ್ರಿಕ ಸ್ಪರ್ಶ ಸಿಕ್ಕಿದರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಚಪ್ಪಲಿ ದೊರೆಯುತ್ತದೆ. ಹಾಗೆಯೇ ಇದೊಂದು ದೊಡ್ಡ ಉದ್ಯಮವಾಗಿ ಬೆಳೆಸಬಹುದು. ಇನ್ನಷ್ಟು ಮಂದಿಗೆ ಉದ್ಯೋಗ ನೀಡಬಹುದು. ಆದರೆ ಆ ನಿಟ್ಟಿನಲ್ಲಿ ಈವರೆಗೆ ನಡೆದ ಪ್ರಯತ್ನಗಳು ಕಡಿಮೆಯೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !