ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪು: ಅಪ್ರತಿಮ ಕನ್ನಡತಿ

ಕಮಲಾದೇವಿ ಚಟ್ಟೋಪಾಧ್ಯಾಯ
Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬಹುಶಃ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರು ಕೇಳಿದರೆ, ಅವರು ಬಂಗಾಳಿ ಮೂಲದವರಿರಬೇಕೆಂದು ಅಂದುಕೊಳ್ಳುವವರೇ ಹೆಚ್ಚು. ಆಶ್ಚರ್ಯವೆಂದರೆ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು ದೇಶದಾದ್ಯಂತ ಸಂಚಲನ ಮೂಡಿಸಿದ ಹಾಗೂ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಕಮಲಾದೇವಿ, ಮಂಗಳೂರು ಮೂಲದ ಕನ್ನಡತಿ. ವಿಷಾದದ ಸಂಗತಿಯೆಂದರೆ, ಅವರನ್ನು, ಅವರ ಸಾಧನೆಯನ್ನು ನಮ್ಮ ರಾಜ್ಯ, ರಾಷ್ಟ್ರ ಎರಡೂ ಸಂಪೂರ್ಣವಾಗಿ ಮರೆತುಬಿಟ್ಟಿವೆ.

ಕಮಲಾದೇವಿ ಅವರನ್ನು ನಾವು ಯಾವೆಲ್ಲ ಆಯಾಮಗಳಿಂದ ಅಧ್ಯಯನ ಮಾಡಬಹುದು? ವಿಶ್ಲೇಷಿಸಿದರೆ, ಅವರು ಮಹತ್ತರ ಕೊಡುಗೆ ನೀಡಿರುವುದು ಎದ್ದು ಕಾಣುತ್ತದೆ. ಸ್ವಾತಂತ್ರ್ಯ ಹೋರಾಟಗಾರರಾಗಿ, ಆಧುನಿಕ ಮಹಿಳೆಯ ಪ್ರತೀಕವಾಗಿ, ಕರಕುಶಲ ಕೈಗಾರಿಕೆಯನ್ನು ಪುನರುಜ್ಜೀವನಗೊಳಿಸಿದ ಕರ್ಮಯೋಗಿಯಾಗಿ, ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಕರಕುಶಲಕರ್ಮಿಗಳ ನೆಲೆಗಾಗಿ ಫರೀದಾಬಾದ್ ನಗರವನ್ನು ರೂಪಿಸಿದ ನಾಯಕಿಯಾಗಿ, ಪ್ರಪಂಚ ಪರ್ಯಟನೆ ಮಾಡಿ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಕಿಚ್ಚು ಹಬ್ಬಿಸಿದ ಕ್ರಾಂತಿಕಾರಿಯಾಗಿ ಮತ್ತು ದೇಶದಲ್ಲಿ ಇಂದು ವಿಶೇಷ ಸ್ಥಾನ ಪಡೆದಿರುವ ಹಲವಾರು ಸಂಘ ಸಂಸ್ಥೆಗಳ ಸ್ಥಾಪಕಿಯಾಗಿ... ಹೀಗೆ ಅವರ ಸಾಧನೆಗೆ ಬಹುಮುಖಿ ಆಯಾಮ. ಕಮಲಾದೇವಿಯವರನ್ನು ಅರಿತಷ್ಟು ಅವರ ಮೇಲಿನ ಗೌರವವೂ ಹೆಚ್ಚುತ್ತದೆ.

ಅವರ ವಿಶೇಷವನ್ನು ಅರಿಯುವ ಮೊದಲು ಅವರ ಕರ್ನಾಟಕದ ನಂಟನ್ನು ತಿಳಿದುಕೊಳ್ಳೋಣ. ಕಮಲಾದೇವಿ 1903ರ ಏಪ್ರಿಲ್ 3ರಂದು ಮಂಗಳೂರಿನ ಪ್ರಗತಿಪರ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿನ ಸೇಂಟ್‌ ಆನ್ಸ್‌ ಕಾನ್ವೆಂಟಿನಲ್ಲಿ ಮುಗಿಸಿದರು. ಕರಾವಳಿಯ ಯಕ್ಷಗಾನವನ್ನು ನಿರಂತರವಾಗಿ ನೋಡುತ್ತಾ ಬೆಳೆದ ಅವರಲ್ಲಿ ಸಹಜವಾಗಿ ಕಲಾಸಕ್ತಿ ಅರಳಿ, ಮುಂದೆ ದೇಶದ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ಅವರ ಹೋರಾಟಕ್ಕೆ ನಾಂದಿ ಹಾಡಿತು. ತಂದೆಯ ಸಾವಿನ ನಂತರ ತಾಯಿಯೊಂದಿಗೆ ಸೋದರ ಮಾವನ ಮನೆಯಲ್ಲಿ ನೆಲೆಗೊಂಡ ಕಮಲಾದೇವಿ ಅವರಿಗೆ, ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲಕೃಷ್ಣ ಗೋಖಲೆ, ಶ್ರೀನಿವಾಸ ಶಾಸ್ತ್ರೀ, ರಮಾಬಾಯಿ ರಾನಡೆ ಮತ್ತು ಅನಿ ಬೆಸೆಂಟ್ ಅವರನ್ನು ಭೇಟಿಯಾಗುವ ಅವಕಾಶ ದೊರೆತು, ನಿಧಾನವಾಗಿ ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕರೆದುತಂದಿತು. ತಮ್ಮ 14ನೇ ವಯಸ್ಸಿನಲ್ಲಿ ವಿವಾಹವಾದ ಕಮಲಾದೇವಿ, ಎರಡು ವರುಷಗಳ ತರುವಾಯ ವಿಧವೆಯಾದರು. ಆದರೆ, ಅಳುಕದೆ, ಹೆಚ್ಚಿನ ಶಿಕ್ಷಣಕ್ಕಾಗಿ ಮದರಾಸಿನ ಕ್ವೀನ್ ಮೇರೀಸ್ ಕಾಲೇಜು ಸೇರಿದರು. ಅಲ್ಲಿ ಸರೋಜಿನಿ ನಾಯ್ಡು ಸಹೋದರ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರ ಪರಿಚಯವಾಯಿತು. ಇಬ್ಬರಿಗೂ ಕಲೆ, ನಾಟಕದಲ್ಲಿದ್ದ ಸಮನಾದ ಆಸಕ್ತಿ, ವಿವಾಹವಾಗುವಂತೆ ಪ್ರೇರೇಪಿಸಿತು. ಆ ಕಾಲದಲ್ಲಿ ವಿಧವೆ ಮರುವಿವಾಹವಾಗುವುದು ವಿಶೇಷವೇ ಸರಿ. ಅವರಿಬ್ಬರೂ ಕಾನೂನು ರೀತಿಯಲ್ಲಿ ಮದುವೆಯಾಗಿ, ದೇಶದಾದ್ಯಂತ ಜೊತೆಯಾಗಿ ನಾಟಕ ಪ್ರದರ್ಶನ ನೀಡಲು ತೊಡಗಿಸಿಕೊಂಡರು. ನಂತರ, ಲಂಡನ್ನಿಗೆ ತೆರಳಿದ ಪತಿಯೊಂದಿಗೆ ತಾವೂ ಹೋಗಿ, ಬೆಡ್‌ಫೋರ್ಡ್‌ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿಗಳಿಸಿದರು. ಕೆಲವು ವರ್ಷಗಳ ದಾಂಪತ್ಯದ ನಂತರ ಪರಸ್ಪರ ಹೊಂದಾಣಿಕೆ ಅಸಾಧ್ಯವೆನಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದರು. ಇದು, ದೇಶದಲ್ಲಿ ಕಾನೂನಿನ ಮೂಲಕ ಪಡೆದ ಮೊದಲ ವಿಚ್ಛೇದನವೆಂದು ಹೆಸರು ಪಡೆಯಿತು.

ಇನ್ನು ಅವರ ಸಾರ್ವಜನಿಕ ಜೀವನಕ್ಕೆ ಮರಳಿದರೆ, ದೇಶದ ಸ್ವಾತಂತ್ರ್ಯಕ್ಕೆ ಕಮಲಾದೇವಿಯವರ ಕಾಣಿಕೆಯೇನು? ಸ್ವಾತಂತ್ರ್ಯ ಹೋರಾಟಕ್ಕೆ ಕಮಲಾದೇವಿಯವರ ನೇರ ಪ್ರವೇಶ ಮದರಾಸ್ ಅಸೆಂಬ್ಲಿಯ ಚುನಾವಣೆ ಕಣಕ್ಕಿಳಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಯ ಮೂಲಕ. ಅಲ್ಲಿ ಸೋತರೂ ಮುಂದೆ ಅಖಿಲ ಭಾರತ ಮಹಿಳಾ ಸಮ್ಮೇಳನದ ಸೆಕ್ರೆಟರಿ ಆಗಿ ದೇಶದಾದ್ಯಂತ ಸುತ್ತಿ ಮಹಿಳೆಯರ ಹಕ್ಕಿನ ಜಾಗೃತಿ ಮೂಡಿಸಿದರು. 1927ರಲ್ಲಿ ಕಾಂಗ್ರೆಸ್ ಸೇರಿದ ಕಮಲಾದೇವಿ, ಒಂದೇ ವರ್ಷದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದರು. ಆಮೇಲೆ, ಯುವ ಕಾಂಗ್ರೆಸ್ ಸೇರಿ 1929ರಲ್ಲಿ ಅಧ್ಯಕ್ಷರಾದರು. ನಂತರ, ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಗಾಂಧಿಗೆ ನಿಕಟವರ್ತಿಯಾಗಿ, ಮಹಿಳೆಯರಿಗೂ ಇದರಲ್ಲಿ ಭಾಗವಹಿಸಲು ಸಮಾನ ಅವಕಾಶ ನೀಡಬೇಕೆಂದು ಒತ್ತಾಯ ಮಾಡಿ ಗಾಂಧಿಯನ್ನು ಒಪ್ಪಿಸಿ, ಜೊತೆಗೆ ಹೆಜ್ಜೆ ಹಾಕಿದರು. ಮುಂದೆ, ಸೇವಾದಳ ಸೇರಿ, ಅದರ ಮಹಿಳಾ ಅಧ್ಯಕ್ಷರಾಗಿ, ಮಹಿಳಾ ಕಾರ್ಯಕರ್ತರಿಗೆ ತರಬೇತಿ ನೀಡಿದರು. ಆದರೆ, ಬ್ರಿಟಿಷ್ ಸರಕಾರ ಸೇವಾದಳವನ್ನು ನಿಷೇಧಿಸಿ ಕಮಲಾದೇವಿಯವರನ್ನು ಜೈಲಿಗೆ ಹಾಕಿತು. ಜೈಲಿನಲ್ಲಿ ಕಾಮಾಲೆ ರೋಗಕ್ಕೆ ತುತ್ತಾದಾಗ, ಅಲ್ಲಿನ ಆಸ್ಪತ್ರೆಯ ದುರ್ವ್ಯವಸ್ಥೆ ಗಮನಿಸಿ, ಬಿಡುಗಡೆಯ ನಂತರ ಕೈದಿಗಳಿಗಾಗಿ ಆಸ್ಪತ್ರೆ ನಿರ್ಮಿಸಿದರು. ಆ ನಂತರ ಕಮಲಾದೇವಿ ಅವರಿಗೆ ಸಮಾಜವಾದ ಆಕರ್ಷಣೀಯವೆನಿಸಿ, ಕಾರ್ಮಿಕರ ಮತ್ತು ರೈತರ ಸಮಸ್ಯೆಗಳನ್ನು ಕೈಗೆತ್ತಿಕೊಂಡರು. ಮಂಗಳೂರಿನಲ್ಲಿ ಗೇರು ಬೀಜ ಕಾರ್ಖಾನೆಯ ಕಾರ್ಮಿಕರ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ಮಾಡಿದರು.

1939ರಲ್ಲಿ ಕಾಂಗ್ರೆಸ್ಸಿನ ರಾಜಕೀಯ ಚಟುವಟಿಕೆಗಳಿಂದ ವಿರಾಮ ಪಡೆದು ಮಗನೊಂದಿಗೆ ಅಮೆರಿಕ ತಲುಪಿದರು. ಅಲ್ಲಿ ಮಗ ವ್ಯಾಸಂಗ ಮಾಡಿದರೆ, ಇವರು ಅಮೆರಿಕ ಸುತ್ತಿ, ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ವಿವಿಧ ಪ್ರಗತಿಪರ ಸಂಸ್ಥೆಗಳಿಗೆ ಅರಿವು ಮೂಡಿಸಿದರು. ಅದು ಎರಡನೇ ಮಹಾಯುದ್ಧದ ಸಂದರ್ಭ. ಬ್ರಿಟಿಷರಿಗೆ ಇವರ ಚಟುವಟಿಕೆಗಳ ಅರಿವಾಗಿ ಇವರ ಭಾರತ ವಾಪಸಾತಿಗೆ ನಿಷೇಧ ಹೇರಿದರು. ಆದರೆ, ಕಮಲಾದೇವಿ ಜಗ್ಗದೆ, ಪ್ರವಾಸ ಮುಂದುವರಿಸುತ್ತಾ ದಕ್ಷಿಣ ಆಫ್ರಿಕಾ, ಚೀನಾ, ಜಪಾನ್, ವಿಯೆಟ್ನಾಂ ದೇಶಗಳನ್ನೂ ಸುತ್ತಿದರು.

ಇನ್ನು ಸ್ತ್ರೀವಾದಿಯಾಗಿ, ಆಧುನಿಕ ಭಾರತ ಕಂಡ ಮಾದರಿ ದಿಟ್ಟ ಮಹಿಳೆ ಕಮಲಾದೇವಿ. ಅವರ ದೃಢ ವ್ಯಕ್ತಿತ್ವ ಮತ್ತು ಸ್ವತಂತ್ರ ನಿರ್ಧಾರಗಳು, ಸಾಂಪ್ರದಾಯಿಕ ಮನಃಸ್ಥಿತಿಯ ಗಾಂಧಿಯವರನ್ನೇ ಕಸಿವಿಸಿಗೊಳಿಸಿದ್ದಿದೆ. ಗಾಂಧಿಯವರ ಜೊತೆಗೆ ದೀರ್ಘ ಒಡನಾಟವಿದ್ದರೂ ಗಾಂಧಿಯವರನ್ನು ಸಂತನಂತೆ ಕಾಣದೆ ಅವರ ಹಲವಾರು ಸ್ತ್ರೀ ಧೋರಣೆಗಳನ್ನುತಿದ್ದಿದರು. ಕಮಲಾದೇವಿಯವರಿಗೆ,ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯ ಮತ್ತು ಜನನ ನಿಯಂತ್ರಣದಲ್ಲಿ ನಂಬಿಕೆಯಿತ್ತು. ವಿಧವೆಯ ಮರುಮದುವೆ ಅಪರೂಪವಾಗಿದ್ದ ಕಾಲದಲ್ಲಿ ಪುನರ್ವಿವಾಹವಾಗಿದ್ದಲ್ಲದೆ, ಎರಡನೆಯ ಗಂಡನ ಸ್ತ್ರಿಲೋಲುಪತೆಯನ್ನು ಸಹಿಸದೆ ಕಾನೂನಿನ ಪ್ರಕಾರ ವಿಚ್ಛೇದನ ಪಡೆದ ಧೈರ್ಯಶಾಲಿ. ಮಹಿಳಾ ಸಬಲೀಕರಣದ ಕುರಿತು ತಮ್ಮ ಅಭಿಪ್ರಾಯ ಕೇಳಿದ ಪತ್ರಕರ್ತೆಯಲ್ಲಿ ಕಮಲಾದೇವಿ ಹೇಳಿದ್ದಿಷ್ಟೆ: ‘ಮೊದಲು ಗಂಡು, ಹೆಣ್ಣಿಗೆ ಸರಿಸಮಾನವಾಗುವುದನ್ನು ಕಲಿಯಲಿ’.

ಅವರಷ್ಟು ವಿದೇಶ ಸುತ್ತಿ ಲೋಕ ಜ್ಞಾನಗಳಿಸಿರುವ ಇನ್ನೊಬ್ಬ ಮಹಿಳೆ ಆ ಕಾಲಘಟ್ಟದಲ್ಲಿ ನಮಗೆ ಸಿಗುವುದಿಲ್ಲ. ಹೋದ ಕಡೆಯಲ್ಲಿ ಎಲ್ಲಾ ವರ್ಗಗಳ ಜನಸಮುದಾಯವನ್ನು ಭೇಟಿಮಾಡಿ ಜನರ ಸಮಸ್ಯೆಯನ್ನು ಅರ್ಥೈಸಲು ಪ್ರಯತ್ನಿಸಿದರು. ಇದರಿಂದಾಗಿ, ಅವರೊಬ್ಬ ಜಾತ್ಯತೀತ ಸಮಾಜವಾದಿಯಾಗಿ ರೂಪುಗೊಂಡರು. ಹಾಗಾಗಿಯೇ ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಬಂದ 50 ಸಾವಿರ ಪಠಾಣ್ ಕರಕುಶಲ ಕರ್ಮಿಗಳ ಮರುವಸತಿಗಾಗಿ, ನೆಹರೂ ಸರ್ಕಾರದ ನೆರವು ಕೋರಿದರು. ಹೌದು, ಅವರೊಬ್ಬ ವಿಶ್ವಮಾನವ ದೃಷ್ಟಿಕೋನದ ವಾಸ್ತವವಾದಿಯಾಗಿದ್ದರು.

ನಟನೆಯಲ್ಲಿ ಆಸಕ್ತಿ ಹೊಂದಿದ್ದ ಕಮಲಾದೇವಿ, ಹಲವಾರು ಸಿನೆಮಾಗಳಲ್ಲಿ ನಟಿಸಿದ್ದರು. ಇದರಲ್ಲಿ ಕನ್ನಡಿಗರು ವಿಶೇಷವಾಗಿ ನೆನಪಿಸಿಕೊಳ್ಳುವಂತಹದ್ದು, ಕನ್ನಡದ ಮೊದಲ ಮೂಕಿ ಚಿತ್ರ ಮೃಚ್ಛಕಟಿಕ (1931).

ಅವರು ಹುಟ್ಟು ಹಾಕಿದ ಕೆಲವು ಖ್ಯಾತ ಸಂಸ್ಥೆಗಳೆಂದರೆ: ಇಂಡಿಯನ್ ನ್ಯಾಷನಲ್ ಥಿಯೇಟರ್, ಭಾರತೀಯ ನಾಟ್ಯ ಸಂಘ, ಲೇಡಿ ಇರ್ವಿನ್ ಕಾಲೇಜು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸಂಗೀತ ನಾಟಕ ಅಕಾಡೆಮಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ, ವರ್ಲ್ಡ್ ಕ್ರಾಫ್ಟ್ ಕೌನ್ಸಿಲ್, ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ, ದೆಹಲಿ ಕ್ರಾಫ್ಟ್ ಕೌನ್ಸಿಲ್, ಹಾಗೂ ಶ್ರೀನಿವಾಸ ಮಲ್ಯ ಮೆಮೋರಿಯಲ್ ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ.

ಕಮಲಾದೇವಿ ಅವರ ಆತ್ಮಚರಿತ್ರೆ, ‘ಇನ್ನರ್ ರೆಸೆಸ್ಸಸ್‌, ಔಟರ್ ಸ್ಪೇಸಸ್: ಮೆಮೊರೀಸ್‌’ ಬಹು ಚರ್ಚಿತ ಕೃತಿ. ತಮ್ಮ ಕಾಲಘಟ್ಟದಲ್ಲಿ ಮಾತ್ರವಲ್ಲದೆ, ಈಗಲೂ, ಕಾಲ ಮತ್ತು ದೇಶ ಮೀರಿದ ವ್ಯಕ್ತಿಯಾಗಿ ಕಾಣಿಸುತ್ತಾರೆ ಕಮಲಾದೇವಿ (ನಿಧನ: 1988ರ ಅಕ್ಟೋಬರ್ 29) ಪ್ರಾಯಶಃ, ಸಾಂಪ್ರದಾಯಿಕ ಭಾರತಕ್ಕೆ, ಎಲ್ಲೆಗಳ ಮೀರಿ ಪರಿಪೂರ್ಣವಾಗಿ ಬದುಕಿ, ಸಮಾಜ ಸೇವೆಯಲ್ಲಿ ಸಾರ್ಥಕ್ಯ ಕಂಡ ಅವರು ಸೋಜಿಗದಂತೆ ಕಾಣಿಸಿರಬೇಕು. ಇಷ್ಟೆಲ್ಲಾ ಸಾಧನೆಯ ಹೆಜ್ಜೆ ಗುರುತುಗಳ ಬಿಟ್ಟು ಹೋಗಿರುವ ಕನ್ನಡ ನಾಡಿನ ಹೆಮ್ಮೆಯ ಮಹಿಳೆಯನ್ನು ರಾಜ್ಯ ಸರ್ಕಾರ ಇನ್ನಾದರೂ ಮರೆಯದೆ ಗೌರವಿಸಿದರೆ, ನಾಡಿನ ಇತಿಹಾಸಕ್ಕೆ ತೋರುವ ಕೃತಜ್ಞತೆಯಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT