ಭಾನುವಾರ, ಸೆಪ್ಟೆಂಬರ್ 26, 2021
21 °C

ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಸರೋಜಾ ಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಆಧುನಿಕ ಭಾರತದ ಚರಿತ್ರೆಯಲ್ಲಿ ಪಾರ್ಸಿಗಳಿಗೆ ಮಹತ್ವದ ಸ್ಥಾನ ಇದೆ. ಪರ್ಶಿಯಾದಿಂದ ಬಂದು ಭಾರತದಲ್ಲಿ ನೆಲೆ ನಿಂತು ಶತಮಾನಗಳೇ ಉರುಳಿದರೂ ಈ ಸಮುದಾಯ ಇನ್ನೂ ಹಲವು ವಿಶಿಷ್ಟ ಆಚರಣೆಗಳ ಮೂಲಕ ತನ್ನತನ ಉಳಿಸಿಕೊಂಡಿದೆ. ಹೌದು, ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧದ ಕುರಿತು ನಿಮಗೆ ಗೊತ್ತೆ?

***

ಈಗಲ್ಲ, 25 ವರ್ಷಗಳ ಹಿಂದೆಯೇ ಗುಜರಾತಿನ ನವಸಾರಿಯಲ್ಲಿ ನಾವಿರುವಾಗ ಪತಿಯ ಹಿರಿಯ ಸಹೋದ್ಯೋಗಿ ಸುರ್ತಿ ಸಾಬ್ ಒಮ್ಮೆ ಹೇಳಿದ್ರು, ‘ನಮ್ಮಲ್ಲಿ ಹೆಣ ಸುಡೋದೂ ಇಲ್ಲ, ಹೂಳೋದೂ ಇಲ್ಲ, ನದಿ ಸಮುದ್ರಕ್ಕೆ ಹಾಕೋದೂ ಇಲ್ಲ’ ಎಂದು. ಅಂತಿಮ ಸಂಸ್ಕಾರವೆಂದು ಸತ್ತವರ ದೇಹವನ್ನು ಪ್ರಾಣಿಪಕ್ಷಿಗಳಿಗೆ ಆಹಾರವಾಗಿಸುವ ಅವರ ಪದ್ಧತಿಯ ಬಗ್ಗೆ ಕೇಳಿ ಮೈ ಜುಂ ಎನಿಸಿತ್ತು.

ಯಹೂದಿ ಮತ್ತು ಕ್ರೈಸ್ತ ಧರ್ಮಗಳೆರಡೂ ಮಿಳಿತಗೊಂಡ ಝೊರೊವಾಸ್ಟ್ರಿಯನ್ ತತ್ವವನ್ನು ಅನುಸರಿಸುವ ಜನಾಂಗ ಪಾರ್ಸಿ. ಮೂಲ ಪರ್ಶಿಯಾ ಅಥವಾ ಈಗಿನ ಇರಾನ್ ದೇಶದ ದಂಗೆಕೋರರಿಂದ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಚದುರಿ ಒಂದು ತಂಡ ಏಳು ದೋಣಿಗಳಲ್ಲಿ ಗುಜರಾತಿನ ಸಾಂಜನ್ ದಂಡೆಯನ್ನು ತಲುಪಿದ್ದು ಹತ್ತನೇ ಶತಮಾನದಲ್ಲಿ. ಎಲ್ಲ ವಲಸಿಗರಂತೆ ಸೇರಿದ ನೆಲದ ರೀತಿ, ನೀತಿ, ಭಾಷೆ, ದಿರಿಸುಗಳನ್ನು ತಮ್ಮದಾಗಿಸಿಕೊಂಡರೂ ತಮ್ಮ ಮೂಲ ಸಮುದಾಯದೊಳಗಿನ ಕೆಲವು ಆಚಾರ, ಸಂಸ್ಕೃತಿಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ ಈ ಸಮುದಾಯದವರು.

ಅಂದು ಖಾಲಿ ಕೈಯಲ್ಲಿ ಬಂದಿಳಿದ ಪಾರ್ಸಿಗಳು ವ್ಯಾಪಾರ ವಹಿವಾಟಿಗೆ ಕೈ ಹಾಕಿದರು. ಅದೇ ರಕ್ತಗತವಾಗಿ, ಭಾರತದಲ್ಲಿ ವಿವಿಧ ವಸಾಹತುಶಾಹಿಗಳಿದ್ದ ಕಾಲದಲ್ಲಿ ಮನೆಯಲ್ಲಿ ನಾಲ್ವರು ಮಕ್ಕಳಿದ್ದರೆ ಒಬ್ಬ ಫ್ರೆಂಚ್, ಇನ್ನೊಬ್ಬ ಡಚ್, ಮತ್ತೊಬ್ಬ ಪೋರ್ಚುಗೀಸ್, ಮಗದೊಬ್ಬನನ್ನು ಬ್ರಿಟಿಷ್ ಹೀಗೆ ಪಾರ್ಸಿ ಅಪ್ಪ ತನ್ನ ಮಕ್ಕಳನ್ನು ಬೇರೆ ಬೇರೆ ಕಂಪನಿಗಳ ಜೊತೆ ವ್ಯಾಪಾರಕ್ಕೆ ಇಳಿಸುತ್ತಿದ್ದನಂತೆ. ಗುಜರಾತಿ ಮತ್ತು ಇಂಗ್ಲಿಷ್‌ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿರುವ ಪಾರ್ಸಿಗಳ ಮನೆ ಮಾತಿನ ಮಾಧ್ಯಮ ಕೂಡ ಇವೇ ಭಾಷೆಗಳೇ ಆಗಿವೆ.


ಪಾರ್ಸಿ ಹೊಸ ವರ್ಷದ ಸಮಯದಲ್ಲಿ ಆ ಸಮುದಾಯದ ಮಹಿಳೆಯರ ಸಂಭ್ರಮ

ಪಾರ್ಸಿಗಳು ಇಂದು ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಾಗಿ, ಕೆಲವರು ಕೋಟ್ಯಧೀಶರಾಗಿದ್ದಾರಷ್ಟೇ ಅಲ್ಲ, ಆಸ್ಪತ್ರೆ, ಅನಾಥಾಶ್ರಮ, ಶಾಲೆ ಕಾಲೇಜು ಮುಂತಾದ ಸಮುದಾಯ ಸೇವೆಗಳಲ್ಲೂ ಹೆಸರು ಗಳಿಸಿದ್ದಾರೆ. ವಿಜ್ಞಾನ, ಬ್ಯಾಂಕಿಂಗ್, ಟೆಕ್ಸ್‌ಟೈಲ್ಸ್, ಹೋಟೆಲ್ ಇತ್ಯಾದಿ ಕ್ಷೇತ್ರಗಳ ಮೂಲಕ ಮುಂಬೈಯನ್ನು ಮಹಾನಗರವಾಗಿಸುವಲ್ಲಿ ಪಾರ್ಸಿಗಳ ಕೊಡುಗೆ ದೊಡ್ಡದು. ಟಾಟಾ, ಭಾಭಾ, ಗೊದ್ರೆಜ್, ವಾಡಿಯಾ, ಮೆಹ್ತಾ ಇಂಥ ಹೆಸರುಗಳನ್ನು ಕೇಳದಿರುವವರು ಯಾರು? ಅವರ ವ್ಯಾಪಾರೀ ಮನೋಭಾವದಿಂದಾಗಿ ಕಾಜೂವಾಲಾ, ಘೀವಾಲಾ, ಮಸಾಲಾವಾಲಾ, ಸೋಡಾಬಾಟ್ಲಿ ಓಪನ್‌ವಾಲಾದಂಥ ಬಿರುದುಗಳೂ ಕೆಲವರಿಗೆ ದೊರಕಿದ್ದು ಅವುಗಳನ್ನು ಹೆಮ್ಮೆಯಿಂದ ಅಡ್ಡಹೆಸರಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದು ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿ ಮತ್ತು ಸಿರಿವಂತ ವಲಸೆ ಜನಾಂಗವೆಂದರೆ ಅದು ಪಾರ್ಸಿ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ.

ಆದರೆ, ಒಮ್ಮೆ ಲಕ್ಷದಷ್ಟು ಏರಿದ್ದ ಭಾರತೀಯ ಪಾರ್ಸಿಗಳ ಸಂಖ್ಯೆ ಇಂದು ಅರವತ್ತು ಸಾವಿರದ ಆಸುಪಾಸಿಗೆ ಇಳಿದಿದೆ. ಕಾರಣ, ಸಮುದಾಯದ ಸೀಮಿತ ರಕ್ತಸಂಬಂಧಿಗಳ ನಡುವೆ ಮಾತ್ರ ವಿವಾಹ ನಡೆಯುತ್ತಿರುವುದು. ವಂಶಪಾರಂಪರ್ಯ ರೋಗಗಳು ಮುಂದುವರೆದು ಸಂತಾನ ಕಡಿಮೆಯಾಗುತ್ತಿದೆ. ಬೇರೆ ಧರ್ಮದವರೊಡನೆ ವಿವಾಹ ಮಾನ್ಯವಿಲ್ಲ, ಪ್ರೇಮವಿವಾಹ ಆದರೂ ‘ಪಾರ್ಸಿ’ ಎನಿಸುವುದಕ್ಕೆ ಹಲವು ಕಟ್ಟುಪಾಡುಗಳಿವೆ. ಹೀಗಾಗಿ ನಗರವಾಸಿ ಪಾರ್ಸಿಗಳು ಆಧುನಿಕ ಬುಡಕಟ್ಟು ಜನಾಂಗ ಎನಿಸುತ್ತಿದ್ದಾರೆ.

ಈಗ ಹದ್ದುಗಳ ಬಗ್ಗೆ ನೋಡೋಣ. ಯಾವುದೇ ದೊಡ್ಡ ಪ್ರಾಣಿ ಸತ್ತರೂ ಸರ‍್ರನೆ ಎರಗಿ ಬಂದು ಕಚ್ಚಿ ತಿಂದು ಖಾಲಿ ಮಾಡುವ ಹಕ್ಕಿ ಹದ್ದು. ಆಗಸದಲ್ಲಿ ಮೊದಲು ಒಂದು ಹದ್ದು ಗಸ್ತು ಹೊಡೆಯುತ್ತ ಮಾಹಿತಿ ಹಂಚುತ್ತದೆ, ಆಮೇಲೆ ಹತ್ತಾರು ಹದ್ದುಗಳು ಹಾರಾಡಿ ಧುತ್ತನೆ ಬಂದಿಳಿಯುತ್ತವೆ. ಕೊಳೆತ, ಬ್ಯಾಕ್ಟೀರಿಯಾ, ಫಂಗಸ್ ತುಂಬಿದ ಮಾಂಸ ತಿಂದರೂ ಜೀರ್ಣಿಸಿಕೊಳ್ಳುವಂಥ ತಾಕತ್ತು ಅವಕ್ಕಿದೆ. ಆ ಮೂಲಕ ನೆಲ ಮತ್ತು ನೀರನ್ನು ಸ್ವಚ್ಛವಾಗಿಸುವ ಹದ್ದುಗಳು ಜೀವಜಾಲದ ಪ್ರಮುಖ ಕೊಂಡಿಯೂ ಹೌದು. ‘ಹದ್ದಿನ ಕಣ್ಣು’ ನುಡಿಗಟ್ಟು ಹೇಳುವಂತೆ ಹತ್ತು ಕಿಮೀ ಎತ್ತರದಿಂದಲೂ ನೆಲದ ಮೇಲಿದ್ದ ಪ್ರಾಣಿಗಳನ್ನು ಗುರುತಿಸಬಲ್ಲದು. ಒಂಬತ್ತು ಜಾತಿಯ ಹದ್ದುಗಳು ನಮ್ಮಲ್ಲಿದ್ದರೂ ಪದರದ ಗರಿಗಳ, ಉದ್ದ ಕೊಕ್ಕಿನ, ಅಗಲ ರೆಕ್ಕೆಗಳ, ಬೂದು ಬಣ್ಣದ ಇಂಡಿಯನ್ ವಲ್ಚರ್ ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರುವಂಥದ್ದು.


ಲೋಬಾನದ ಹೊಗೆ ಹರಡುವ ಸೊಬಗು

ಹಿಂದೆ ತೊಂಬತ್ತರ ದಶಕದಲ್ಲಿ ಪ್ರಾಣಿಗಳಿಗೆ ನೋವುನಿವಾರಕವಾಗಿ ಡೈಕ್ಲೊಫೆನಾಕ್ ಮಾತ್ರೆಯನ್ನು ಕೊಡಲಾರಂಭಿಸಿದಾಗ ಇದ್ದಕ್ಕಿದ್ದಂತೆಯೇ ಇಡೀ ದಕ್ಷಿಣ ಏಷ್ಯಾದಲ್ಲಿ ಹದ್ದುಗಳ ಸಂತತಿ ಕ್ಷೀಣಗೊಳ್ಳಲಾರಂಭಿಸಿತ್ತು. ಸತ್ತ ಪ್ರಾಣಿಗಳ ದೇಹದ ಅಲ್ಪ ಪ್ರಮಾಣದ ಡೈಕ್ಲೊಫೆನಾಕ್ ಕೂಡ ಹದ್ದಿನ ದೇಹಕ್ಕೆ ಮಾರಕ; ಅದನ್ನು ಜೀರ್ಣಿಸಿಕೊಳ್ಳಲಾಗದೆ ಕಿಡ್ನಿ ಊತ ಉಂಟಾಗಿ ಸಾವನ್ನಪ್ಪುತ್ತವೆ. ಈ ವಿಷಯದ ಬಗ್ಗೆ ಶೋಧ ನಡೆದು ಆ ಔಷಧವನ್ನು ನಿಷೇಧಿಸುವಷ್ಟರಲ್ಲಿ ಆಗಲೇ ನೂರಕ್ಕೆ ತೊಂಬತ್ತರಷ್ಟು ಹದ್ದುಗಳು ಸಾವಿಗೀಡಾಗಿದ್ದವು. ಆಡಳಿತದ ತೆರೆಮರೆಯಲ್ಲಿ ವೆಟೆರಿನರಿ ಡೈಕ್ಲೊಫೆನಾಕ್ ಮಾರಾಟ, ಬಳಕೆ ಇಂದಿಗೂ ಕೆಲಮಟ್ಟಿಗೆ ಇದ್ದೇ ಇದೆ. ಕಳೆದ ವರ್ಷ ಮಹಾರಾಷ್ಟ್ರದ ರಾಯಗಡದಲ್ಲಿ ಬೀಸಿದ ‘ನಿಸರ್ಗ’ ಚಂಡಮಾರುತ ಕೂಡ ತಾಳೆಮರಗಳ ತುದಿಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಅನೇಕ ಹದ್ದುಗಳನ್ನು ಗೂಡು, ಮರಿಗಳ ಸಹಿತ ಹೊಸಕಿ ಹಾಕಿದೆ. ಹೀಗೆ ಹದ್ದುಗಳ ಸಂಖ್ಯೆ ಏರಬೇಕಾದ ಪ್ರಮಾಣದಲ್ಲಿ ಏರುತ್ತಿಲ್ಲ. ಅವುಗಳ ಸಂಖ್ಯೆ ಈಗ ಕೆಲವೇ ಸಾವಿರಕ್ಕೆ ಇಳಿದಿದೆ.

ಪಾರ್ಸಿಗಳು ಹಾಗೂ ಹದ್ದುಗಳ ನಡುವೆ ಒಂದು ವಿಶೇಷವಾದ ಸಂಬಂಧ ಇದೆ. ಪಾರ್ಸಿ ಜನರಲ್ಲಿ ಮಾನವನ ಮೃತದೇಹವನ್ನು ಅಂತಿಮ ಪ್ರಾರ್ಥನೆ ಸಲ್ಲಿಸಿದ ನಂತರ ಸುಡದೆ, ಹೂಳದೆ, ನೀರಿಗೆ ಹಾಕದೆ ಹಾಗೆಯೇ ಪಕ್ಷಿಗಳು ತಿಂದು ಹೋಗುವಂತೆ ಇಡುತ್ತಾರೆ. ಇದೇ ‘ಡೊಕ್ಮೆನಿಶಿನಿ’ ಸಂಪ್ರದಾಯ. ಅದಕ್ಕಾಗಿಯೇ ನಿರ್ಮಿಸಿರುವ ಎತ್ತರದ, ಮೇಲೆ ಸುತ್ತಲೂ ಗೋಡೆಯಿದ್ದು ಅಗಲ ತಟ್ಟೆಯಂತಿರುವ ‘ಮೌನ ಗೋಪುರ’ದಲ್ಲಿ ಶವವನ್ನು ಇಟ್ಟು ಬರುತ್ತಾರೆ. ಹದ್ದುಗಳು ಗುಂಪಾಗಿ ಬಂದು ಅರ್ಧ ತಾಸಿನಲ್ಲಿ ಅದನ್ನು ಭಕ್ಷಿಸಿ ಸ್ವಚ್ಛಗೊಳಿಸುತ್ತವೆ. ಬೇರೆ ಪಕ್ಷಿಗಳೂ ತಮ್ಮ ಪಾಲು ಪಡೆಯಲು ಹಾರಿ ಬರುತ್ತವೆ.

ಪಾರ್ಸಿಗಳು ನೆಲೆಯೂರಿರುವ ನವಸಾರಿ, ಮುಂಬೈ, ಹೈದರಾಬಾದ್‌ಗಳು ಬೆಳೆದು ಪ್ರಮುಖ ನಗರಗಳಾಗಿವೆ. ಹದ್ದುಗಳ ಹಾರಾಟ ಕಡಿಮೆಯಾಗಿದೆ. ‘ಮೌನ ಗೋಪುರ’ಗಳಿರುವ ದೂಂದಿಯಾವಾಡಿಗಳ ಆಸುಪಾಸುಗಳಲ್ಲಿ ಕಟ್ಟಡಗಳು ಮೇಲೆದ್ದು ಕೊಳೆತ ಶವಗಳ ವಾಸನೆ, ದೃಶ್ಯಗಳಿಗೆ ಜನರ ಆಕ್ಷೇಪಗಳು ಬರಲಾರಂಭಿಸಿವೆ. ಅವುಗಳ ನಿವಾರಣೆಗೆ ಏರ್ ಪ್ಯೂರಿಫೈಯರ್ ಬಳಸಲಾಗುತ್ತಿದೆ, ಶವಗಳನ್ನು ಒಣಗಿಸಲೆಂದು ಸೌರ ಬಿಸಿಲನ್ನು ಕೇಂದ್ರೀಕೃತಗೊಳಿಸುವ ಸೋಲಾರ್ ಕಾನ್ಸಂಟ್ರೇಟರುಗಳನ್ನು ಹೂಡಲಾಗಿದೆ, ಆದರೆ ಅವುಗಳ ಬಿಸಿಯಿಂದಾಗಿ ಇತರೆ ಪಕ್ಷಿಗಳೂ ಸಮೀಪ ಸುಳಿಯುತ್ತಿಲ್ಲ. ಹಾಗಾಗಿ ಈಗೀಗ ಅಂತ್ಯಸಂಸ್ಕಾರಕ್ಕೆಂದು ಪಾರ್ಸಿಗಳು ವಿದ್ಯುತ್ ಚಿತಾಗಾರವನ್ನಾಗಲೀ, ಹೂಳಲು ಸ್ಥಳವನ್ನಾಗಲೀ ಹುಡುಕಿ ಹೋಗಬೇಕಾದ ಅನಿವಾರ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ಪಾರ್ಸಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ, ಹದ್ದುಗಳ ಸಂಖ್ಯೆಯೂ ಅದೇ ಹಾದಿ ಹಿಡಿದಿದೆ. ಇದು ವಿಪರ್ಯಾಸವೋ ಅಥವಾ ಕಾಕತಾಳೀಯವೋ?.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು