ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳ ಲೋಕದ ಪ್ರವಾದಿ ದಸ್ತಯೇವ್‍ಸ್ಕಿ

Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಯಾವ ವಿಜ್ಞಾನಿಗಳಿಂದಲೂ ಕಲಿಯಲಾಗದಂತಹದ್ದನ್ನು ನಾನು ದಸ್ತಯೇವ್‍ಸ್ಕಿಯಿಂದ ಕಲಿತಿದ್ದೇನೆ.
-ಆಲ್ಬರ್ಟ್ ಐನ್‌ಸ್ಟೀನ್

*

ಫ್ಯೋದರ್ ದಸ್ತಯೇವ್‍ಸ್ಕಿ ಒಬ್ಬ ಅಪಾಯಕಾರಿ ಸೃಷ್ಟಿಕರ್ತ. ಇವರ ದಿಗಿಲುಗೊಳಿಸೋ ಕಾದಂಬರಿ ‘ಕ್ರೈಮ್‌ ಆ್ಯಂಡ್‌ ಪನಿಶ್‌ಮೆಂಟ್‌’ ಅನ್ನೇ ತೆಗೆದುಕೊಳ್ಳಿ. ಇಲ್ಲಿ ರಸ್ಕೋಲ್ನಿಕೊವ್ ಎಂಬಾತ ಗಿರವಿ ಅಂಗಡಿ ಮುದುಕಿಯನ್ನು ಕೊಚ್ಚಿ ಕೊಲ್ಲೋದೇ ‘ನನ್ನಂಥ ಲೋಕಾತೀತ ಮನುಷ್ಯನಿಗೆ ಈ ಜಗತ್ತಿನ ವಿಧಿಗಳು, ಷರತ್ತುಗಳು ಅನ್ವಯವಾಗುವುದಿಲ್ಲ’ ಅನ್ನುವಂತಹ ಕರಾರುವಕ್ಕಾದ ನಂಬಿಕೆಯಿಂದ. ಜೋಡಿ ಕೊಲೆಗಳನ್ನು (ಒಂದು ಪೂರ್ವ ನಿಯೋಜಿತವಾಗಿ, ಇನ್ನೊಂದು ಅಕಸ್ಮಾತ್ತಾಗಿ) ಮಾಡಿದ ಈ ಪ್ರಚಂಡ ಬುದ್ಧಿವಂತ ಯುವಕ, ಕಡೆಗೆ ಪಾಪಪ್ರಜ್ಞೆಯ ಭಾರ ತಾಳಲಾರದೆ, ಎಲ್ಲವನ್ನೂ ನಿವೇದಿಸಿ ಬೇರೆ ದಾರಿ ಇಲ್ಲದೆ ಜೈಲು ಸೇರುತ್ತಾನೆ.

ತನ್ನಂತಹ ಅತಿಮಾನುಷನೂ ಸಮಾಜದ ರೀತಿರಿವಾಜುಗಳಿಗೆ ಕವಡೆಕಾಸಿನ ಬೆಲೆಯನ್ನೂ ಕೊಡದೆ ಅನ್ಯನಾಗಿದ್ದವನೂ ಹೇಗೆ ಕೊನೆಗೆ ಇದೇ ಸಮಾಜದ ಸೆರೆಯಾದೆ ಅನ್ನೋ ಗೊಂದಲವೇ ಆತನನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತದೆ. ರಸ್ಕೋಲ್ನಿಕೊವ್ ನಿಜವಾಗಿ ಮೌನಿಯಾಗೋದು ಆಗ. ಈ ಮೌನ ಹುಟ್ಟುವುದು, ಯಾವ ಕುರುಹನ್ನೂ ಕೊಡದೆ ಒಳಗೆ ಅವಿತು, ನಮ್ಮ ಎಲ್ಲ ಚಲನವಲನಗಳನ್ನೂ ಅನೈಚ್ಛಿಕ ಕ್ರಿಯೆಗಳನ್ನೂ ನಮಗಿತ್ತಿರೋ ಸ್ವಾತಂತ್ರ್ಯವನ್ನೂ ನಿಯಂತ್ರಿಸುವ ಬಾಹ್ಯ ಅದೃಶ್ಯಶಕ್ತಿಯ ಅರಿವು ಇದ್ದಕ್ಕಿದ್ದಂತೆ ನಮಗಾದಾಗ. ಈ ಶಕ್ತಿಗೆ ಅನೇಕ ಮುಖಗಳಿವೆ- ಪ್ರಭುತ್ವ, ಅಧಿಕಾರ, ಧರ್ಮ, ಸಮಾಜ ಇತ್ಯಾದಿ. ಆದರೂ ಇದಕ್ಕೆ ಯಾವ ರೂಪವೂ ಇಲ್ಲ, ಯಾವ ಆಕಾರವೂ ಇಲ್ಲ. ಎಷ್ಟೋ ಸಲ ಅಪ್ರಜ್ಞಾಪೂರ್ವಕವಾಗಿ ಆಗಿಹೋಗೋ ಕ್ರಿಯೆಗಳೂ ಪ್ರೇರಿತಗೊಳ್ಳುವುದು ಈ ಶಕ್ತಿಯಿಂದಲೇ.

ರಸ್ಕೋಲ್ನಿಕೊವ್ ಕೊಂದದ್ದು ಈ ಶಕ್ತಿಯ ವಿರುದ್ಧ ಸ್ವಯಂಪ್ರೇರಿತನಾಗಿಯೇ ದಂಗೆ ಏಳುವ ಸಲುವಾಗಿ. ಆದರೆ ಆತ ಮತ್ತೆ ಆ ಶಕ್ತಿಯ ಗುಲಾಮನಾಗುವುದು ಪಾಪಪ್ರಜ್ಞೆ, ಆತ್ಮಸಾಕ್ಷಿಯಂತಹ ಕಟ್ಟುಪಾಡುಗಳಿಂದ, ನೈತಿಕ ಮೌಲ್ಯಗಳಿಂದ. ಸಹಜವಾಗಿ ನಮ್ಮೊಳಗೇ ವಿಕಾಸವಾಗಿರುವ ಮನಃಸಾಕ್ಷಿ ನಿಜಕ್ಕೂ ನಮಗೆ ದಕ್ಕಿರುವುದೇ ಅಥವಾ ಅದು ಹೊರಗಿನ ಜಗತ್ತಿನಲ್ಲಿ ಗಿರಕಿ ಹೊಡೆಯುತ್ತಿರುವ ಈ ಶಕ್ತಿ ಅನ್ನೋ ಮಾಯೆ ನಮಗೆ ಗೊತ್ತೇ ಇಲ್ಲದಂತೆ ನಮ್ಮೊಳಗೆ ಬಿಟ್ಟಿರುವ ಒಂದು ಸೀಕ್ರೆಟ್ ಏಜೆಂಟೇ?! ಇದು, ರಸ್ಕೋಲ್ನಿಕೊವ್ ಮೂಲಕ ಓದುಗರಿಗೆ ದಸ್ತಯೇವ್‍ಸ್ಕಿ ಕೇಳುತ್ತಿರುವ ಪ್ರಶ್ನೆ.

ಈ ಶಿಕ್ಷೆಯ ವಂಶಾವಳಿಯ ಮೇಲೆ ನೀವು ಸುಮ್ಮನೆ ಕಣ್ಣಿಟ್ಟು ನೋಡಿ. ಒಂದಾನೊಂದು ಕಾಲದಲ್ಲಿ ಕೊಲೆಗಾರರನ್ನು, ಪಾಪಿಗಳನ್ನು ಅಥವಾ ಪ್ರಭುತ್ವದ ವಿರುದ್ಧ ಹೋದವರನ್ನು ಎಲ್ಲರ ಕಣ್ಣೆದುರೇ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ಫ್ರಾನ್ಸಿನಲ್ಲಿ 1750ರಲ್ಲಿ ರಾಬರ್ಟ್ ಫ್ರಾನ್‍ಕೋಯ್ಸ್ ಡೇಮಿಯನ್ಸ್ ಅನ್ನೋ ವ್ಯಕ್ತಿ, ದೊರೆ ಹದಿನೈದನೆಯ ಲೂಯಿಯನ್ನು ಕೊಲ್ಲಲು ಪ್ರಯತ್ನಿಸಿ ಸೋತು ಸೆರೆಯಾದ. ಈ ಡೇಮಿಯನ್ಸ್‌ನನ್ನು ಹೊಡೆದು, ಬಡಿದು, ಅಂಗಾಂಗಗಳನ್ನೆಲ್ಲ ಕತ್ತರಿಸಿ, ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರೆದುರೇ ಕೊಂದು ಹಾಕಲಾಯಿತು. ಡೇಮಿಯನ್ಸ್‌ನ ಶರೀರವು ಹೀಗೆ ಛಿದ್ರವಾಗುತ್ತಾ ಇದ್ದಾಗ, ಗಂಧಕದಲ್ಲಿ ಆತನ ರಕ್ತಮಾಂಸ ಕರಟುತ್ತಾ ಇದ್ದಾಗ ಜನ ನೋಡಿ ಉನ್ಮತ್ತರಾಗಿ ಶಿಳ್ಳೆ ಹೊಡೆಯುತ್ತಾ ಇದ್ದರು. ಯುಟಿಲಿಟೇರಿಯನ್‌ ಚಿಂತಕರು ಇಂತಹ ಕ್ರೂರ ವಿಧಾನವನ್ನು ಬದಲಿಸುವ, ಹಾಗೆಯೇ ಬಂದೀಖಾನೆಗಳನ್ನು ಹೆಚ್ಚು ಮಾನವೀಯವಾಗಿಸುವ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದರು. ಈ ಸಂಗತಿಗಳನ್ನೆಲ್ಲ ಚಿಂತಕ ಮೈಕಲ್‌ ಫೌಕಾಲ್ಟ್‌ ತನ್ನ ‘ಡಿಸಿಪ್ಲಿನ್ ಆ್ಯಂಡ್ ಪನಿಶ್‌’ ಪುಸ್ತಕದಲ್ಲಿ ಬರೆಯುತ್ತಾ, ಬ್ರಿಟನ್ನಿನ ತತ್ವಜ್ಞಾನಿ ಜೆರೆಮಿ ಬೆನ್‍ಥಂ ಕಂಡುಹಿಡಿದ ಪ್ಯಾನಾಪ್ಟಿಕನ್ ವಿನ್ಯಾಸವನ್ನು ನೆನಪಿಸಿಕೊಳ್ಳುತ್ತಾನೆ. ಇದು ಜೈಲಿನೊಳಗಿರೋ ಕೈದಿಗಳ ಮೇಲೆ ಸುಲಭವಾಗಿ ಕಣ್ಣಿಡಲು ಸಾಧ್ಯವಾಗುವ ಗುಂಡಾದ ಆಕಾರ ಹೊಂದಿರೋ ಒಂದು ಕಟ್ಟಡ. ತಮ್ಮ-ತಮ್ಮ ಕೋಣೆಯೊಳಗಿರೋ ಬಂಧಿತರಿಗೆ ಕಾಣದಂತೆ ಅಧಿಕಾರಿಗಳು ಮೇಲೆ ನಿಂತು ಅವರ ಚಲನವಲನಗಳನ್ನೆಲ್ಲ ಗಮನಿಸಬಹುದಾದಂತಹ ಜಾಗ.

ಪ್ಯಾನಾಪ್ಟಿಕನ್ ಪರಿಕಲ್ಪನೆಯಿಂದ ಹುಟ್ಟಿದ ಗ್ರಹಿಕೆಯೇ ಈ ಶತಮಾನದ ಕಣ್ಗಾವಲ ಕ್ಯಾಮೆರಾ. ಅಪರಾಧಿಗಳನ್ನು, ತಪ್ಪಿತಸ್ಥರನ್ನು ಗುಟ್ಟಾಗಿ ಗಮನಿಸುತ್ತಾ ಇದ್ದ ಕಣ್ಣು ಈಗ ಎಲ್ಲ ನಾಗರಿಕರನ್ನು ತಣ್ಣನೆ ವೀಕ್ಷಿಸುತ್ತಾ ಇದೆ. ಪ್ರಾಮಾಣಿಕರು, ಪೋಲಿಗಳು, ಪಾಪಿಗಳು, ಸಂತರು, ಸಂಸಾರಸ್ಥರು, ತ್ಯಕ್ತಪ್ರವಾದಿಗಳು, ವಿಟ ಪುರುಷರು, ಹೆಂಗಸರು, ಗಂಡಸರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಎಂಬ್ಯಾವ ಭೇದಭಾವವೂ ಇಲ್ಲದೆ ಎಲ್ಲರೂ ಅನುದಿನವೂ ಡಿಜಿಟಲ್ ಕ್ಯಾಮೆರಾ ಸೆರೆಹಿಡಿಯುವ ನಿರಂತರ ಫಿಲ್ಮ್‌ನಲ್ಲಿ ರೆಕಾರ್ಡ್ ಆಗುತ್ತಲೇ ಇದ್ದಾರೆ. ಸಿ.ಸಿ. ಟಿವಿಯ ಈ ಕ್ಯಾಮೆರಾ ಇದೆ ಅಂತ ಗೊತ್ತಾಗುತ್ತಿದ್ದಂತೆಯೇ, ಯಾವ ಚಾಟಿ ಏಟಿನ ಭಾರವೇ ಇಲ್ಲದೆ ಮನುಷ್ಯ ಅನಾಮತ್ತಾಗಿ ಜಾಗೃತನಾಗುತ್ತಾನೆ, ಶಿಸ್ತಿನಲ್ಲಿರುತ್ತಾನೆ. ತನ್ನ ಆತ್ಮಸಾಕ್ಷಿಯ ಮೂರನೆಯ ಕಣ್ಣೇ ಈ ಕಣ್ಗಾವಲು ಕ್ಯಾಮೆರಾದ ಲೆನ್ಸು ಎನ್ನುವಷ್ಟು ತೀವ್ರವಾಗಿ, ಭದ್ರತೆಯ ಹೆಸರಲ್ಲಿ ನಿಗಾ ವಹಿಸುವ ಕಾರ್ಯಕ್ರಮವನ್ನು ಇಪ್ಪತ್ತೊಂದನೆಯ ಶತಮಾನದ ಮನುಷ್ಯ ಒಪ್ಪಿಬಿಟ್ಟಿದ್ದಾನೆ. ಇಲ್ಲಿ ಯಾವುದು ಪನಿಶ್‌ಮೆಂಟು? ಯಾವುದು ಕ್ರೈಮು? ಯಾರು ಕ್ರಿಮಿನಲ್ಸು?

ದಸ್ತಯೇವ್‍ಸ್ಕಿಯವರ ಇನ್ನೊಂದು ಭಯಂಕರ ಕಾದಂಬರಿ- ‘ದ ಪೊಸೆಸ್ಡ್‌’ ಅಥವಾ ‘ದ ಡೆವಿಲ್ಸ್’ನಲ್ಲಿ (ದೆವ್ವ ಮೆಟ್ಟಿಸಿಕೊಂಡವರು ಅಥವಾ ಪಿಶಾಚಿಗಳು)- ರಸ್ಕೋಲ್ನಿಕೊವ್‍ನಂತೆ ಸ್ವಂತ ಇಚ್ಛೆಯಿಂದಲೇ ಎಷ್ಟು ಕೇಡಿನಲ್ಲಿ ಬೇಯಬಹುದೋ ಅಷ್ಟು ಬೆಂದು, ಕಡೆಗೆ ಪ್ರಾಣ ಬಿಡುವ ವ್ಯಕ್ತಿ ಸ್ಟಾವ್ರೊಜಿನ್‌ ಇದ್ದಾನೆ. ಈತ ಕಾದಂಬರಿಯ ಎಲ್ಲ ಪಾತ್ರಗಳನ್ನೂ ತನ್ನತ್ತ ಆಕರ್ಷಿಸುವ ಶಕ್ತಿ ಇದ್ದವ. ಆದರೆ ಬೆಳಕಿನ ಬದಲು ಈತ ಒಬ್ಬ ‘ಕಪ್ಪು ಸೂರ್ಯ’ನಂತೆ ಚೆಲ್ಲುವುದು ಗಾಢಾಂಧಕಾರ. ಹನ್ನೆರಡನೇ ವಯಸ್ಸಿನ ಪುಟಾಣಿ ಹುಡುಗಿ ಮ್ಯಾಟ್ರಿಯೋಷಳೂ ಇವನ ಮೋಹಕ್ಕೆ ಬಿದ್ದು, ಸ್ಟಾವ್ರೊಜಿನ್‌ನನ್ನು ಅಪ್ಪಿ ಮುತ್ತಿಡುವ ತೀರ ದಿಗ್ಭ್ರಮೆಗೊಳಿಸುವ ಪ್ರಸಂಗ ಬರುತ್ತದೆ. ಆ ಬಡಪಾಯಿ ಹುಡುಗಿ ನಂತರ ದೇವರ ಭಯ, ನರಕದ ಭೀತಿ ಮುಂತಾದ ತಳಮಳಗಳಿಗೆ ತುತ್ತಾಗಿ, ‘ನಾನೊಂದು ದೊಡ್ಡ ಪಾಪ ಮಾಡಿಬಿಟ್ಟೆ’ ಅನ್ನೋ ತಲ್ಲಣಕ್ಕೆ ಸಿಕ್ಕಿ ನೇಣು ಹಾಕಿಕೊಂಡು ಸಾಯುತ್ತಾಳೆ. ಆದರೆ ಈ ಸ್ಟಾವ್ರೊಜಿನ್‌ ಎಂತಹ ಕೇಡಿನ ಹೃದಯದವನೆಂದರೆ, ಆ ಮಗು ಕುರ್ಚಿ ಹತ್ತಿ ಕುಣಿಕೆ ಸಿದ್ಧ ಮಾಡಿ, ಅದರೊಳಗೆ ತೂರಿ ಪ್ರಾಣ ಬಿಡುವುದನ್ನೆಲ್ಲ ಹೊರಗಿಂದ ಕದ್ದು ನೋಡುತ್ತಾ ಆಕೆಯ ಜೀವ ಹೋಯಿತೆಂದು ಖಾತರಿ ಆದ ಮೇಲೆ ಅತ್ತ ಹೋಗುತ್ತಾನೆ. ಹಾಗೆ ನೋಡಿದರೆ ಆತ ವಿಕೃತನೋ ಅಥವಾ ಹೃದಯಹೀನನೋ ಅಲ್ಲ. ಸ್ಟಾವ್ರೊಜಿನ್‌ ಮಹಾ ಬುದ್ಧಿವಂತ, ಸೂಕ್ಷ್ಮಮನಸ್ಸಿನವ, ಮೌಲ್ಯಗಳ ಬಗ್ಗೆ, ದೇವರ ಅಸ್ತಿತ್ವದ ಬಗ್ಗೆ ಆಳದಿಂದ ಹೊಮ್ಮುವ ಪ್ರಾಮಾಣಿಕತೆಯಲ್ಲಿ ಮಾತನಾಡೋ ತಾಕತ್ತಿರುವ ಮೇಧಾವಿ.

ಆದರೆ, ಎಲ್ಲ ಗೊತ್ತಿದ್ದೂ ಈತನೇಕೆ ಪಾಪಿಯಾದ? ಕಲಾವಿದನ ಮನಸ್ಸಿದ್ದೂ ಏಕೆ ಈತ ಶಿಶುಹತ್ಯೆಗೆ ಕಾರಣನಾದ? ದೇವರಿಗೆ, ನೈತಿಕತೆಗೆ, ಪಾಪಪುಣ್ಯದಂತಹ ಗ್ರಹಿಕೆಗಳಿಗೆ ಸಡ್ಡು ಹೊಡೆಯುವ ಸಲುವಾಗಿಯೇ? ಅಥವಾ ಯಾವುದೋ ಮಾನಸಿಕ ಕಾಯಿಲೆಯಿಂದಲೋ? ಬಿಡಿಸಿ ಹೇಳುವುದು ಕಷ್ಟ. ಹಾಗಿದ್ದರೂ ಈ ಸ್ಟಾವ್ರೊಜಿನ್‌ ಬೇಕಂತಲೇ ದೇವರನ್ನು ತಿರಸ್ಕರಿಸುವುದು ಸಂಪೂರ್ಣವಾದ ಸ್ವಾತಂತ್ರ್ಯವನ್ನು ಗಿಟ್ಟಿಸಿಕೊಳ್ಳಲು. ದೇವರನ್ನು ಕೊಂದರೆ ಮಿಕ್ಕೆಲ್ಲದಕ್ಕೂ ಹೇಗಿದ್ದರೂ ಅವಕಾಶವಿರುತ್ತದಲ್ಲ, ಅದಕ್ಕೇ ದೈವಕ್ಕೆ ಹೆದರಿ ಸಭ್ಯಸ್ಥರೂ ಸಜ್ಜನರೂ ಅದುಮಿಟ್ಟ ಎಲ್ಲ ಕಾಮನೆ, ಖಯಾಲಿಗಳನ್ನು ಈಡೇರಿಸಿಕೊಳ್ಳುವ ಧೈರ್ಯವಿದೆ ಈತನಿಗೆ. ದಸ್ತಯೇವ್‍ಸ್ಕಿಯವರ ಗಾಢವಾದ ಸೃಷ್ಟಿಯಾದ ಸ್ಟಾವ್ರೊಜಿನ್‌ ಇಡೀ ಇಪ್ಪತ್ತನೆಯ ಶತಮಾನದ ಕ್ರೂರ ವೈರುಧ್ಯಗಳ ಪ್ರತಿನಿಧಿಯಾಗಿಯೂ ಕಾಣುತ್ತಾನೆ.

ಮಹಾ ಸರ್ವಾಧಿಕಾರಿ ಹಿಟ್ಲರ್‌ನನ್ನೂ ನಾಸಿಸಮ್ಮನ್ನೂ ನಿರ್ನಾಮ ಮಾಡುತ್ತೇವೆ ಎಂದೇ ಎರಡನೆಯ ಮಹಾಯುದ್ಧಕ್ಕೆ ನೆಗೆಯಿತು ಅಮೆರಿಕ. 50ರ ದಶಕದಲ್ಲಿ ಕಮ್ಯುನಿಸ್ಟ್‌ ದಿಗಿಲಿನ ನೆಪವನ್ನು ಮುಂದಿಟ್ಟು, ಪ್ರಜಾಪ್ರಭುತ್ವಕ್ಕೆ ಅವಮಾನವಾಗುವಂತೆ ಅಂದಿನ ಸರ್ಕಾರವೇ ಇದ್ದಕ್ಕಿದ್ದಂತೆ ಅದೆಷ್ಟೋ ನಾಗರಿಕರ ಬದುಕುವ ಹಕ್ಕನ್ನು ಕಿತ್ತುಕೊಂಡಿತ್ತು. ನಿಜಕ್ಕೂ ಅಸ್ತಿತ್ವದಲ್ಲೇ ಇಲ್ಲದ, ಕಮ್ಯುನಿಸ್ಟ್‌ ಭೀತಿ ಅನ್ನೋ ಸಮಸ್ಯೆಯನ್ನು ಸೃಷ್ಟಿಸಿ, ದೇಶಪ್ರೇಮವನ್ನು ಒರೆಗೆ ಹಚ್ಚಲು ಎಲ್ಲ ಸರ್ಕಾರಿ ಮೀಟಿಂಗುಗಳಲ್ಲಿ ‘ಗಾಡ್ ಬ್ಲೆಸ್ ಅಮೆರಿಕ’ ಅಂತ ಹಾಡಿ, ದೇಶಭಕ್ತಿಯ ಮೇಲೆ ಆಣೆ, ಭಾಷೆ ಮಾಡುವುದನ್ನೆಲ್ಲ ಕಡ್ಡಾಯ ಮಾಡಲಾಯಿತು. ಅಮೆರಿಕದ ಆಗಿನ ಅಧ್ಯಕ್ಷ ಹೆನ್ರಿ ಟ್ರೂಮನ್ ಸಾಹೇಬರು (ಇವರು ಇದಕ್ಕೂ ಮುನ್ನ ‘ನಾಗರಿಕರೆಲ್ಲರ ಒಳಿತಿಗಾಗಿ ಯುದ್ಧ ನಿಲ್ಲಿಸುತ್ತೇನೆ’ ಎಂದು ಜಪಾನಿನ ಎರಡು ನಗರಗಳನ್ನು ಧ್ವಂಸ ಮಾಡಿದ್ದರು– ರಸ್ಕೋಲ್ನಿಕೊವ್ ಲೋಕಕಲ್ಯಾಣಕ್ಕೆಂದು ಜೋಡಿಹೆಣ ಬೀಳಿಸಿದಂತೆ) ಸರ್ಕಾರಿ ನೌಕರರ ಸ್ವಾಮಿನಿಷ್ಠೆಯನ್ನು ಪರೀಕ್ಷಿಸಲು ನಾನಾ ಕಾನೂನು ತಂದರು. ಯಾರೇ ಆಗಲಿ, ಆಳುತ್ತಿದ್ದ ಸರ್ಕಾರದ ವಿರುದ್ಧ ಮಾತನಾಡಿದರೆ, ಧರ್ಮವನ್ನು ಟೀಕಿಸಿದರೆ, ಗುಟ್ಟಾಗಿ ಸಲಿಂಗಕಾಮಿ ಗಳಾಗಿದ್ದರೆ, ವಿದೇಶಾಂಗ ನೀತಿಯನ್ನು ವಿಮರ್ಶಿಸಿದರೆ ಥಟ್ಟನೆ ದೇಶದ್ರೋಹಿಗಳೆಂಬ ಬರೆಹಾಕಿಸಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.

ಇಡೀ ಅಮೆರಿಕದ ಭದ್ರತೆಯ ಜವಾಬ್ದಾರಿ ವಹಿಸೋ ಎಫ್‌ಬಿಐ ಸಂಸ್ಥೆಯ ಸಂಸ್ಥಾಪಕ ಎಡ್ಗರ್ ಹೂವರ್‌ ಅಂತೂ ಯುದ್ಧ ಮುಗಿದ ಕಾಲದಲ್ಲೇ ಕುಖ್ಯಾತಿ ಪಡೆದಿದ್ದವ. ತನಗೆ ಆಗದ ವ್ಯಕ್ತಿಗಳ ಫೋನ್ ಟ್ಯಾಪ್ ಮಾಡಿ, ಅಂತಹವರ ರಾಜರಹಸ್ಯದ ಬಗ್ಗೆ ಕದ್ದು ಸಾಕ್ಷಿ ಸಂಗ್ರಹಿಸಿ ಅವರನ್ನು ಬೆದರಿಸುವುದು (ಅಮೆರಿಕದ ಅಧ್ಯಕ್ಷ ಜಾನ್ ಎಫ್‌. ಕೆನಡಿಯವರನ್ನೂ ಬಿಡದೆ) ಸಮಾಜವಾದಿ ನಿಲುವಿದ್ದ ನಟರು, ಬರಹಗಾರರು, ನಿರ್ದೇಶಕರನ್ನು ಕಮ್ಯುನಿಸ್ಟ್‌ ದೇಶದ್ರೋಹಿಗಳೆಂದು ಅರೆಸ್ಟ್‌ ಮಾಡಿಸುವುದು ಇವನ್ನೆಲ್ಲ ಮಾಡುತ್ತಿದ್ದ. ಪ್ರಜಾಪ್ರಭುತ್ವದ ಪರವಾಗಿದ್ದು, ಫಿಡೆಲ್ ಕ್ಯಾಸ್ಟ್ರೊ ಜತೆ ಒಪ್ಪಂದ ಮಾಡಿಕೊಂಡು, ಶೀತಲಸಮರವನ್ನು ಹತ್ತಿಕ್ಕೋ ಪ್ರಯತ್ನದಲ್ಲಿದ್ದ ಕೆನಡಿ ಹಾಗೂ ಜನಾಂಗೀಯ ಸಾಮರಸ್ಯಕ್ಕೋಸ್ಕರ ತನ್ನ ಬದುಕಿಡೀ ಹೋರಾಡಿದ್ದ ಮಾರ್ಟಿನ್ ಲೂಥರ್ ಕೊಲೆಯಾಗಿದ್ದು ಈ ಹೂವರ್ ಅಧಿಕಾರದಲ್ಲಿದ್ದಾಗ.

ದಸ್ತಯೇವ್‍ಸ್ಕಿಯವರನ್ನು ಆಲ್ಬರ್ಟ್ ಕಮೂ ಹತ್ತೊಂಬತ್ತನೆಯ ಶತಮಾನದ ಪ್ರವಾದಿ ಎಂದು ಕರೆದಿದ್ದರು. ಆದರೆ ಮತ್ತೆ ಬಂದ ಶತಮಾನಗಳತ್ತ ಕಣ್ಣು ಹಾಯಿಸಿದಾಗ, ಈ ಮಹಾಶಯ ಭವಿಷ್ಯದ ಪ್ರವಾದಿ ಅಂತ ನಿಮಗೆ ಅನ್ನಿಸಿದರೂ ಆಶ್ಚರ್ಯವಿಲ್ಲ. ಮನುಷ್ಯ ಏಕೆ ಬೇಕಂತಲೇ ಅನಾಹುತಗಳನ್ನೇ ಸೃಷ್ಟಿಸೋ ಹಾದಿ ತುಳಿಯುತ್ತಾನೆ, ಅವನ ಹೃದಯ ಏಕೆ ಕೇಡಿನ ಸೌಧವಾಗುತ್ತಾ ಹೋಗುತ್ತದೆ ಎನ್ನುವ ಅನ್ವೇಷಣೆಯಲ್ಲೇ ಬರೆಯುತ್ತಾ ಇದ್ದರು ದಸ್ತಯೇವ್‍ಸ್ಕಿ. ಇವರ ಒಂದೊಂದು ಸೃಷ್ಟಿಗೂ ಹತ್ತಾರು ಮುಖಗಳಿವೆ. ಎರಡೆರಡಲ ನಾಲ್ಕು ಅಂದಷ್ಟು ಸಲೀಸಾಗಿ ದಸ್ತಯೇವ್‍ಸ್ಕಿಯವರ ಪಾತ್ರಗಳನ್ನು ನಿರ್ಧರಿಸಿ ಬಿಡಲಾಗದು. ಇವರ ‘ಕರಮಝೋವ್ ಸಹೋದರರು’ ಎಂಬ ಅದ್ಭುತ ಕಾವ್ಯದಲ್ಲಿ ಬರೋ ಪ್ರಮುಖ ವಿಚಾರಣಾಧಿಕಾರಿಯನ್ನೇ ನೋಡಿ. ಅಲ್ಲಿ ವಿಧರ್ಮಿಗಳನ್ನೆಲ್ಲ ಕಂಬಕ್ಕೆ ಏರಿಸಿ ಜೀವಂತ ಉರಿಸಿ ಸಾಯಿಸುತ್ತಾ ಇದ್ದ ತೊಂಬತ್ತರ ಕ್ಯಾಥೊಲಿಕ್ ವಿಚಾರಣಾಧಿಕಾರಿ, ಪವಾಡ ಮಾಡುತ್ತಾ ಇದ್ದ ಏಸುಕ್ರಿಸ್ತನನ್ನೇ ಬಂಧಿಸುತ್ತಾನೆ. ಸಾಮಾನ್ಯ ಜನರಲ್ಲಿ ಕ್ರಿಸ್ತನ ನೋವಿನ ಹಾದಿಯನ್ನು ಆಯ್ದುಕೊಳ್ಳುವ ಧೈರ್ಯವಿಲ್ಲ ಎನ್ನುತ್ತಾನೆ. ‘ಜನರಿಗೆ ತಿನ್ನಲು ಅನ್ನ ಬೇಕು, ನೀನು ಕಂಡುಹಿಡಿದ ದಿವ್ಯ ಮಾರ್ಗವಲ್ಲ. ಹೊಟ್ಟೆ ತುಂಬಿದ್ದಾಗ ಮಾತ್ರ ಅವರು ನಿನ್ನ ಪ್ರವಚನವನ್ನು ಖುಷಿಯಲ್ಲಿ ಕೇಳುತ್ತಾರೆ. ಇಲ್ಲದಿದ್ದರೆ ನಿನ್ನ ವಿರುದ್ಧವೇ ದಂಗೆ ಏಳುತ್ತಾರೆ. ಅದಕ್ಕೇ ನಾವು ನಿನ್ನ ಪ್ರತಿಮೆಯನ್ನು ಮುಂದಿಟ್ಟು ಅವರಿಗೆ ಅನ್ನ ಹಾಕುತ್ತೇವೆ. ಸಣ್ಣಪುಟ್ಟ ಪಾಪಗಳನ್ನು ಮಾಡಲು ಬಿಟ್ಟು ನಂತರ ಪ್ರಾಯಶ್ಚಿತ್ತಕ್ಕೂ ಅವಕಾಶ ಕೊಟ್ಟಿದ್ದೇವೆ’ ಎನ್ನುವ ಅರ್ಥ ಬರುವಂತೆ ಅರಚಾಡಿ, ಕ್ರಿಸ್ತನನ್ನೇ ಮೂಕವಿಸ್ಮಿತನನ್ನಾಗಿಸುತ್ತಾನೆ.

ಹಾಗಿದ್ದೂ ಈ ವಿಚಾರಣಾಧಿಕಾರಿಯ ನಂಬಿಕೆಗಳು, ಈತ ಧರ್ಮದ ಬಗ್ಗೆ ಮಾಡಿಕೊಂಡ ಕಲ್ಪನೆ ಓದುಗನನ್ನು ಬೆರಗುಗೊಳಿಸುತ್ತದೆ. ಇಲ್ಲಿ ದಸ್ತಯೇವ್‍ಸ್ಕಿ ನಾಸ್ತಿಕರನ್ನು ತಮಾಷೆ ಮಾಡುತ್ತಾ ಇದ್ದಾರೆಯೇ? ಅಥವಾ ಅವರ ಪರವಾಗಿದ್ದಾರೆಯೇ? ಹಾಗೇ ಈ ಮುದುಕನನ್ನು ನಾಸ್ತಿಕನೆಂದಾಗಲೀ ಕ್ರಿಸ್ತನ ವಿರೋಧಿಯೆಂದಾಗಲೀ ಘೋಷಿಸಲೂ ಆಗುವುದಿಲ್ಲ. ಏಕೆಂದರೆ ಈತ ಹೇಳಿದಂತೆ, ಹುಲುಮಾನವರಿಗೆ ದೈವತ್ವಕ್ಕೆ ಏರೋ ಆಸೆಯಾಗಲೀ ಆ ಶಕ್ತಿಯಾಗಲೀ ಇಲ್ಲ. ಅವರಿಗೂ ಬೇಕಾಗಿರೋದು ಈ ವಿಚಾರಣಾಧಿಕಾರಿ ಹೇಳುತ್ತಾ ಇರೋ ವಿಷಯಗಳೇ. ಹಾಗಿದ್ದರೆ ಬರೀ ತನ್ನ ಹಸಿವನ್ನು ನೀಗಿಸಿ ತನ್ನ ಸಂಸಾರದ ನೆಮ್ಮದಿ ಕಾಪಾಡಿಕೊಳ್ಳುವುದನ್ನು ಬಿಟ್ಟು, ಸಾಮಾನ್ಯ ಮನುಜನು ಕ್ರಿಸ್ತನ ಬದುಕಿಂದ (ಸಾವಿಂದ) ಏನೂ ಕಲಿಯಲಿಲ್ಲವೇ?

ಲಿಯೊ ಟಾಲ್‍ಸ್ಟಾಯ್ ಮನುಷ್ಯನನ್ನು ಅರಿಯಲು ಪ್ರಯತ್ನಿಸಿ, ಆತನ ಸ್ವಭಾವದ ಪ್ರೇರಣೆ- ಪ್ರಚೋದನೆಗಳನ್ನು, ಹಮ್ಮುಬಿಮ್ಮುಗಳನ್ನು ಬಿಚ್ಚಿಟ್ಟು, ಆತನ ಆತ್ಮದಾಳಕ್ಕೆ ನಮ್ಮನ್ನು ಇಳಿಸುತ್ತಾರೆ. ಆದರೆ ದಸ್ತಯೇವ್‍ಸ್ಕಿ ಮನುಷ್ಯನನ್ನು ಅರಿಯುವುದೇ ಎಷ್ಟು ಅಸಾಧ್ಯ ಎನ್ನುವುದನ್ನು ಸಾಬೀತು ಮಾಡುತ್ತಾರೆ. ಇವರ ಕಾದಂಬರಿಗಳು, ಮನುಷ್ಯನ ಆತ್ಮವೆನ್ನುವುದು ಭೇದಿಸಲಾಗದ ಆಮೆಯ ಚಿಪ್ಪಿನಂತಹ ಕೋಟೆಯಿದ್ದಂತೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತವೆ. ಮೊಗೆದಷ್ಟೂ ಮುಗಿಯದಷ್ಟು ಆಳ ಮನುಜನ ಹೃದಯ; ತಿಳಿದೆನೆಂದರೂ ತಿಳಿಯಲು ಆಗದ ನಿಗೂಢ ವ್ಯಕ್ತಿ ಈ ಎರಡು ಕಾಲಿನ ಜೀವಿ. ‘ಪಿಶಾಚಿಗಳು’ ಕಾದಂಬರಿಯ ಸ್ಟಾವ್ರೊಜಿನ್ನನ್ನೇ ಇನ್ನೊಮ್ಮೆ ನೋಡಿ! ಅಂಥಾ ಮುಗ್ಧ ಹೆಣ್ಣುಮಗುವಿನ ಮನಸ್ಸಲ್ಲಿ ಮೋಹದ ಚಂಡಮಾರುತ ಎಬ್ಬಿಸುವಷ್ಟು ಸೂಕ್ಷ್ಮಜೀವಿಯಾಗಿದ್ದ ಈತ, ಮತ್ತೆ ಅದೇ ಹುಡುಗಿ ಸಾಯುವುದನ್ನು ಕದ್ದು ಇಣುಕಿ ನೋಡುತ್ತಾನಲ್ಲ, ಹೇಗೆ ಅರಿಯುತ್ತೀರಿ ಇಂತಹ ಜೀವಿಯನ್ನ? ಇಂತಹ ನಿಗೂಢ ಮನುಷ್ಯರನ್ನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT