ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಟೆ: ಸ್ಟೈಲೋ ಟೈಲರ್‌ನ ಸಾಂಸ್ಕೃತಿಕ ಜಗತ್ತು!

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಮುಖ್ಯ ರಸ್ತೆಯಿಂದ ಕೂಗಳತೆಯಲ್ಲಿ ನಮ್ಮ ಮನೆ. ಮನೆ ಮತ್ತು ಮುಖ್ಯ ರಸ್ತೆ ಮಧ್ಯದಲ್ಲಿ ಒಂದು ಟೈಲರಿಂಗ್ ಅಂಗಡಿ. ಅದರ ಪಕ್ಕದಲ್ಲಿ ಕಾಲೇಜು ಹಾಸ್ಟೆಲ್. ಅದರ ಪಕ್ಕದಲ್ಲಿ ಮೈಲಾರಪ್ಪನ ಕಾಫಿ ಪೆಟ್ಟಿಗೆ ಅಂಗಡಿ. ಒಳ ಬಂದಂತೆ ಢಾಳಾದ ಗ್ರಾಮೀಣ ಸೊಗಡು. ನಾನು ಮಿಡ್ಲ್‌ ಸ್ಕೂಲಿನಲ್ಲಿ ಓದುತ್ತಿರುವಾಗ ಕೇವಲ 10X12 ಚದರ ಅಡಿ ವಿಸ್ತೀರ್ಣದ ಪುಟ್ಟ ರೂಮಿನಲ್ಲಿ ನೆಲೆಗೊಂಡ ‘ಸ್ಟೈಲೋ ಟೈಲರ್’ ಕೇವಲ ಬಟ್ಟೆ ಹೊಲೆದು ಕೊಡುವ ಕೇಂದ್ರವಾಗದೆ ಸ್ಥಳೀಯ ಸಂಸ್ಕೃತಿಯನ್ನು ಗರ್ಭೀಕರಿಸಿಕೊಂಡು ತಾಲ್ಲೂಕಿನ ಎಲ್ಲ ವರ್ಗದ ಗ್ರಾಹಕರ ಆಕರ್ಷಿಸಿ ಅಭಿರುಚಿಗೆ ತಕ್ಕಂತೆ ಬಟ್ಟೆ ಹೊಲೆದುಕೊಡುವ ಅತ್ಯುತ್ತಮ ಟೈಲರಿಂಗ್ ಕೇಂದ್ರವೆನಿಸಿತ್ತು. ಕಾಲೇಜು ನಂತರ ನಿರುದ್ಯೋಗಿಯಾಗಿದ್ದ ದಿನಗಳಲ್ಲಿ ನಿತ್ಯವೂ ಇಲ್ಲಿದ್ದುಕೊಂಡೆ ದರ್ಜಿಭಾಷೆ ಮಾತನಾಡುವುದ ಕಲಿತು, ಅರೆಬರೆ ಟೈಲರಿಂಗ್ ಸಹ ಕಲಿತುಕೊಂಡೆ. ಅಲ್ಲಿ ಟೈಲರಿಂಗ್‌ ಮೆಷಿನ್‌ ಹೊರಡಿಸುತ್ತಿದ್ದ ಕಟಕಟ ಸದ್ದು ಸಂಗೀತದ ಆಲಾಪದಂತೆ ನನಗೆ ಕೇಳುತ್ತಿತ್ತು.

ಒಂದಕ್ಷರ ಬಿಡದಂತೆ ದಿನಪತ್ರಿಕೆ ಓದಿದ್ದು, ಶುಕ್ರವಾರದ ಸಿನಿಮಾ ವಿಶೇಷ ಪುಟಗಳಿಗೆ ಕಚ್ಚಾಡಿದ್ದು, ಟೇಪ್ ರೆಕಾರ್ಡ್‌ರಿನಲ್ಲಿ ನನಗಿಷ್ಟವಾದ ರಾಜ್‍ಕುಮಾರ್ ಗೀತೆಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದುದು ಇಂದು ಕೇವಲ ನೆನಪು. ಎಲ್ಲಕ್ಕಿಂತ ಮಿಗಿಲಾಗಿ ಹತ್ತಾರು ಸ್ನೇಹಿತರು ಕೂಡಿ ಸಿನಿಮಾ, ಜಾತ್ರೆ, ಮದುವೆ, ಟೂರು, ಬಾಡೂಟಗಳಿಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದ ಜಂಕ್ಷನ್ ಇದಾಗಿತ್ತು. ಸೆಕೆಂಡ್ ಷೋ ಸಿನಿಮಾಕ್ಕೆ ಹೋದವ, ಸೆಕೆ ತಡೆಯಲಾರದೆ ಮನೆಯಿಂದ ಎದ್ದು ಬಂದವ, ಇಸ್ಪೀಟಿನಲ್ಲಿ ದುಡ್ಡು ಸೋತು ಮನೆಗೆ ಹೋಗಲಾರದವ, ಎಣ್ಣೆ ಕುಡಿದು ಟೈಟ್ ಆದವ, ಜಗಳವಾಡಿಕೊಂಡು ಮನೆಯಿಂದ ನೂಕಲ್ಪಟ್ಟವ ಒಟ್ಟಾರೆ ಅವೇಳೆಯಲ್ಲಿ ತಮ್ಮ ಮನೆಗೋಗಲಾಗದವರು ಈ ಟೈಲರ್ ಅಂಗಡಿ ಬಾಗಿಲು ಬಡಿದು ಅದೆಷ್ಟೇ ತಿಗಣೆಗಳು ಕಡಿದರೂ ಅಲ್ಲಿದ್ದ ಶರ್ಟ್‌ ಅಥವಾ ಪ್ಯಾಂಟ್ ಪೀಸ್ ಹಾಸಿ ಹೊದ್ದು ಒಬ್ಬರ ಮೇಲೊಬ್ಬರು ಮಲಗಿ (ಜನ ಹೆಚ್ಚಾದಂತೆ ಕೆಲವರು ಮುಂಭಾಗದ ಮೆಟ್ಟಿಲ ಮೇಲೆ ಮುದುರಿಕೊಳ್ಳುತ್ತಿದ್ದರು) ಮುಂಜಾನೆ ಮುಸಾಫಿರ್ ಖಾನೆಯಿಂದ ಎದ್ದು ಬರುವ ಗಿರಾಕಿಗಳಂತೆ ಕಾಣುತ್ತಿದ್ದರು. ಇದಕ್ಕೆ ಅಂಗಡಿಯಲ್ಲೆ ಮಲಗುತ್ತಿದ್ದ ಮಾಲೀಕರ ತಮ್ಮ ಬಾಬು ಕೂಡ ಸಹಕರಿಸುತ್ತಿದ್ದ.

ಒಮ್ಮೊಮ್ಮೆ ಕೆಲವು ಪೋಷಕರು ಬಂದು ‘ನಮ್ಮ ಹುಡುಗನನ್ನು ಇಲ್ಲಿ ಸೇರಿಸಿಕೊಳ್ಳಬೇಡವೆಂದು ನಿನಗೆ ಎಷ್ಟು ಬಾರಿ ಹೇಳಬೇಕು? ನಿನ್ನಿಂದ ಅವ ಸೋಮಾರಿಯಾದ. ಹೀಗೇ ಮುಂದುವರೆದರೆ ನಿನ್ನ ಅಂಗಡಿ ಎತ್ತಂಗಡಿ ಮಾಡಿಸಬೇಕಾಗುತ್ತದೆ’ ಎಂಬ ಧಮ್ಕಿಯ ಪ್ರಾರಂಭದ ಒಂದೆರಡು ದಿನಗಳು ನಾವುಗಳು ಅತ್ತ ಸುಳಿಯುತ್ತಿರಲಿಲ್ಲ. ನಂತರ ಯಥಾಸ್ಥಿತಿ ಅಬಾಧಿತವಾಗಿತ್ತು. ವಿಪರ್ಯಾಸವೆಂದರೆ ಮನೆಯಲ್ಲಿ ಕಿತ್ತಾಡಿಕೊಂಡು ಬಂದಂಥ ಅನೇಕರು ಇಲ್ಲಿ ದಿನಗಟ್ಟಲೆ ಕಾಲ ಕಳೆಯುತ್ತಿದ್ದರು. ಆಗ ಸಂಬಂಧಪಟ್ಟ ಪೋಷಕರು ಬಂದು, ‘ಏನಪ್ಪ ದೇವಣ್ಣ, ಈ ನನ್ ಮಗ ಇಂತಹ ಕೆಲಸ ಮಾಡಬಹುದೇ? ನೀನಾದರೂ ವಸಿ ಉಗಿಯಬಾರದೆ’ ಎಂದು ಮಂಗಳಾರತಿ ಮಾಡಿ ಮನೆದುಂಬಿಸಿಕೊಳ್ಳುತ್ತಿದ್ದರು (ಇಂತಹ ಕೂಡಿಕೆಯಲ್ಲಿ ದೇವು ಪಾತ್ರವು ಹಿರಿದಾಗಿತ್ತು).

ಆಟೊರಾಜ, ಸೀತಾರಾಮು, ಶಂಕರ್ ಗುರು, ನಾನೊಬ್ಬ ಕಳ್ಳ ಮುಂತಾದ ಚಿತ್ರಗಳು ಬಿಡುಗಡೆಯಾದ ಸಮಯ. ಶಂಕರನಾಗ್, ರಾಜ್‍ಕುಮಾರ್ ಧರಿಸುತ್ತಿದ್ದ ಚರ್ಮಕ್ಕೆ ಅಂಟಿದ ಬಣ್ಣಬಣ್ಣದ ಅಂಗಿಗಳಿಗೆ ಡಬಲ್ ಸ್ಟಿಚ್ಚಿನೊಂದಿಗೆ ಡಬಲ್ ಪಾಕೆಟ್ಟು, ಡಬಲ್ ಫ್ಲಾಪು, ಉದ್ದನೆಯ ಬಾಬ್ಬಿ ಕಾಲರ್, ಶೋಲ್ಡರ್ ಫ್ಲಾಪ್‌, ಎದೆಮಟ್ಟಕ್ಕೆ ಕಟ್ಟಿದ ಮೂವತ್ತು ಇಂಚು ಅಗಲದ ಬೆಲ್ ಬಾಟಮ್ ಪ್ಯಾಂಟುಗಳು ಯುವಕರಲ್ಲಿ ಹೊಸ ಟ್ರೆಂಡ್ ನಿರ್ಮಿಸಿದ್ದವು. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಈ ಹೊಸ ವಿನ್ಯಾಸದಲ್ಲಿ ಸಿದ್ಧಪಡಿಸಿದ ಉಡುಪುಗಳಿಂದ ರೊಮ್ಯಾಂಟಿಕ್ ಗೆಟಪ್ಪಿನಲ್ಲಿ ಹುಡುಗಿಯರ ಪಟಾಯಿಸಲು ಯತ್ನಿಸುತ್ತಿದ್ದ ಉಚ್ಛ್ರಾಯ ದಿನಗಳು.

ಇದೇ ಸ್ಟೈಲಿನಲ್ಲಿ ಬಟ್ಟೆ ಹೊಲಿಸಿಕೊಳ್ಳಲು ಸುತ್ತಮುತ್ತ ಹತ್ತಾರು ಹಳ್ಳಿಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳ ಕೈಹಿಡಿದು ನಿನ್ನ ಹೆಸರೇನು? ಯಾವ ಊರು? ಎಷ್ಟನೇ ತರಗತಿ ಓದುತ್ತಿರುವೆಯೆಂದು ವಿಚಾರಿಸಿ, ಸಂತೃಪ್ತ ದ್ರಾವಣ ಎಂದರೇನು? ದ.ರಾ.ಬೇಂದ್ರೆಯವರ ಕಾವ್ಯನಾಮ ಯಾವುದು? ಬ್ರಿಟಿಷರಿಗಿಂತ ಮುನ್ನ ನಮ್ಮ ದೇಶ ಯಾರ ಕೈವಶದಲ್ಲಿತ್ತು? ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ನಾಟಕ ಯಾವುದು? ಹೀಗೆ ಮುಂತಾದ ಪ್ರಶ್ನೆಗಳ ಬಾಣ ಬಿಡುತ್ತಿದ್ದೆ. ಹುಡುಗರು ಸಂಕೋಚದಿಂದ ನಮಗಿನ್ನೂ ಆ ಪಾಠ ಮಾಡಿಲ್ಲ, ನಾನಿನ್ನೂ ಓದಿಕೊಂಡಿಲ್ಲ, ನನಗೆ ಗೊತ್ತಿಲ್ಲವೆಂದು ನನ್ನ ಕೈಕೊಸರಿ ಓಡಿ ಹೋಗುತ್ತಿದ್ದರು.

ಈ ನಮೂನೆ ಬಟ್ಟೆ ಸಿದ್ಧಪಡಿಸಲು ದೇವು ದುಪ್ಪಟ್ಟು ಮಜೂರಿ ಪೀಕುತ್ತಿದ್ದ. ಗ್ರಾಹಕರು ಯಾಕಿಷ್ಟು ಎಂದು ಪ್ರಶ್ನಿಸಿದರೆ ನಾನು ಅಮೆಟೊ ದಾರ, ಪ್ರೆಸ್ಸಿಂಗ್ ಬಾಬ್ಬಿ, ಕ್ಯಾನ್ವಾಸ್, ಪ್ರೆಸ್ಸಿಂಗ್ ಬಟನ್, ಸ್ಯಾಟಿನ್‌ ಬಟ್ಟೆ, ಬಾಟಮ್ ಜಿಪ್ಪು ಬಳಸುತ್ತೇನೆ, ಈ ಗುಣಮಟ್ಟದ ಕಚ್ಚಾ ವಸ್ತುಗಳು ದುಬಾರಿಯೆಂದು ಸಮಜಾಯಿಷಿ ನೀಡುತ್ತಿದ್ದ. ಅವರೆಲ್ಲ ಹೋದ ನಂತರ ‘ನೋಡು ಸಿರಿವಂತರ ಬಳಿ ದುಪ್ಪಟ್ಟು ಹಣ ತೆಗೆದುಕೊಂಡರೆ ಏನೂ ತಕರಾರಿಲ್ಲ. ಆದರೆ, ಬಡ ವಿದ್ಯಾರ್ಥಿಗಳಿಂದ ಹತ್ತಿಪ್ಪತ್ತು ರೂಪಾಯಿ ಮಾತ್ರ ಹೆಚ್ಚಿಗೆ ತೆಗೆದುಕೊ. ಇಷ್ಟೊಂದು ಚಾರ್ಜ್‌ ಮಾಡುವುದು ಭಾರಿ ಅನ್ಯಾಯ’ ಎಂದು ನಾನು ವಾದಿಸುತ್ತಿದ್ದೆ. ಆಗ ದೇವು, ‘ನೋಡು, ಇದು ನಮ್ಮ ವೃತ್ತಿಗೆ ಸಂಬಂಧಿಸಿದ ಗೋಪ್ಯತೆ. ಇದರ ಕಷ್ಟ ಸುಖಗಳು ನಮಗೇ ಗೊತ್ತು. ಇದು ನಿನಗೆ ಸಂಬಂಧಿಸಿದ್ದಲ್ಲ. ನಿನಗಿಲ್ಲಿ ಜಾಗ ಕೊಟ್ಟಿದ್ದೇ ನನ್ನ ತಪ್ಪು. ಈ ರೀತಿ ತಲೆಹರಟೆ ಮಾಡುವುದಾದರೆ ನಾಳೆಯಿಂದ ನನ್ನ ಅಂಗಡಿಗೆ ಬರಕೂಡದೆಂದು ಸಿಟ್ಟಿನಿಂದ ಕಟ್ಟಪ್ಪಣೆ ಮಾಡಿದ್ದು ಈಗ ಇತಿಹಾಸ (ಇದೇನು ಮೊದಲ ಕಟ್ಟಪ್ಪಣೆಯಾಗಿರಲಿಲ್ಲ. ಅಂತಹ ಹಲವು ಅಪ್ಪಣೆಗಳನ್ನು ನಾನು ಪಡೆದಿದ್ದೆ!).

ಬದಲಾದ ಕಾಲಘಟ್ಟದಲ್ಲಿ ದೇವು ಟೈಲರಿಂಗ್ ಅಂಗಡಿಯನ್ನು ಮನೆ ಬಳಿಯಿರುವ ತನ್ನ ಸ್ವಂತ ಮಳಿಗೆಗೆ ಶಿಫ್ಟ್ ಮಾಡಿದರೂ ರೆಡಿಮೇಡ್ ಬಟ್ಟೆಗಳ ತೀವ್ರ ಪೈಪೋಟಿಯಲ್ಲಿ ಮಾಮೂಲಿ ಗಿರಾಕಿಗಳಿಂದ ಕೈತುಂಬ ಕೆಲಸಗಳಿರುವುದು ಕೇವಲ ವ್ಯಾವಹಾರಿಕವಲ್ಲ. ಅಲ್ಲೊಂದು ಸಾಮಾಜಿಕ ಬಂಧನದ ನಂಟು. ಶರ್ಟ್‌ ಮೇಕರ್ ರಮೇಶ್ ಪೈ, ಪ್ಯಾಂಟ್ ಪರಿಣತ ಕೃಷ್ಣಮೂರ್ತಿ (ಆಚಾರಿ), ತಮ್ಮ ಬಾಬು ಮತ್ತು ಇಲ್ಲಿಗೆ ನಿತ್ಯ ಬರುತ್ತಿದ್ದ ಅನೇಕರು ಇಂದಿಲ್ಲವಾದರೂ ಅವರ ಕುಡಿಗಳು ಕಾಲಕ್ಕೆ ತಕ್ಕಂತೆ ಅಪ್‌ಡೇಟಾಗಿ ಐವತ್ತು ವರ್ಷಗಳ ಸುದೀರ್ಘ ವೃತ್ತಿಬದುಕು ನಡೆಸಿರುವುದು ಸುಮ್ಮನೆ ತಳ್ಳಿಹಾಕುವಂತಹ ಮಾತೇನಲ್ಲ.

ಹತ್ತಾರು ವರ್ಷಗಳ ಒಡನಾಟ ಕೇವಲ ಅಂಗಡಿಗೆ ಸೀಮಿತವಾಗದೆ ಇವರ ಮನೆಯಲ್ಲಿ ನಡೆಯುತ್ತಿದ್ದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕುಟುಂಬದ ಸದಸ್ಯನಾಗಿದ್ದೆ. ಏಕೆಂದರೆ ಅಲ್ಲಿದ್ದ ಇವ ನಮ್ಮವನೆಂಬ ಅಭಿಮಾನ ಇಂದಿಗೂ ಕೊಂಚ ಕೂಡ ಮುಕ್ಕಾಗಿಲ್ಲ. ದೇವು ಒಮ್ಮೊಮ್ಮೆ ‘ನಿನಗೆ ಕೂತು ತಿನ್ನುವಷ್ಟು ಆಸ್ತಿಯಿಲ್ಲ. ಗಾಂಚಲಿ ಬಿಟ್ಟು ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಲ್ಲಿ ಸರ್ಕಾರಿ ನೌಕರಿ ಗ್ಯಾರಂಟಿ ಗಿಟ್ಟಿಸಬಹುದು. ಇಲ್ಲವಾದರೆ ನೀನು ನನ್ನ ಹಾಗೆ ಸೂಜಿ ತಿಕದಾಗೆ ದಾರ ಪೋಣಿಸಬೇಕಾಗುತ್ತದೆ’ ಎಂಬ ಮಾತು ಇಂದಿಗೂ ಅನುರಣಿಸುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಈ ಪುಟ್ಟ ಅಂಗಡಿಯ ಮುಂದೆ ಇಂದು ಓಡಾಡಿದಾಗಲೆಲ್ಲ ಅಂದಿನ ದುರ್ಬರ ದಿನಗಳು ನೆನಪಾಗಿ ಅವಮಾನ, ಹತಾಶೆ, ನಿರಾಸೆ, ಮೂದಲಿಕೆಗಳು ಜೀವನ
ಪಾಠ ಕಲಿಸಿ ಮನುಷ್ಯನಾಗಲು ಉಪಕರಿಸಿವೆ. ಜೇಬಿನಲ್ಲಿ ನಯಾಪೈಸೆ ಇಲ್ಲದಿದ್ದರೂ ದಿನವಿಡೀ ನಕ್ಕು ನಲಿಯುತ್ತಿದ್ದ ಇಂತಹ ಕೌಟುಂಬಿಕ ಮತ್ತು ಮಾನವೀಯ ಸೆಲೆಯುಳ್ಳ ಲೌಕಿಕ ಕೇಂದ್ರಗಳು ಇಂದಿಲ್ಲ. ಇತ್ತ ಬದುಕು ಕಟ್ಟಿಕೊಳ್ಳುವ ಛಲವೂ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT