ಶುಕ್ರವಾರ, ನವೆಂಬರ್ 22, 2019
25 °C

ಭಾವಸೇತು | ಗಂಡ ಹೆಂಡತಿ ಜಗಳ...

Published:
Updated:

ಈ ಘಟನೆ ನಡೆದದ್ದು 27-28 ವರ್ಷಗಳ ಹಿಂದೆ. ನಾನಾಗ ಆರನೇ ತರಗತಿ ಓದುತ್ತಿದ್ದೆ. ನಮ್ಮ ಊರಿನಿಂದ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದೆ. ಶಿರಾದಿಂದ ತುಮಕೂರಿನ ಹಾದಿ ಒಂದು ಗಂಟೆಯದಾಗಿತ್ತು. 10-15 ಕಿ.ಮೀ. ದೂರ ಬಸ್ ಸಾಗಿದ ನಂತರ ನಾವು ಕುಳಿತಿದ್ದ ಜಾಗದಿಂದ ಎರಡು ಮೂರು ಸೀಟುಗಳ ಹಿಂದೆ ಗಂಡ-ಹೆಂಡತಿ ಕುಳಿತಿರುವುದು ಕಂಡಿತು. ಸಣ್ಣದಾಗಿ ಮಾತು, ವಾಗ್ವಾದ ಕೇಳಿಸುತ್ತಿತ್ತು. ನೋಡಲು ಯಾವುದೋ ಸರ್ಕಾರಿ ಉದ್ಯೋಗಿಯಂತೆ ಗಂಡ ಕಾಣುತ್ತಿದ್ದರು. ಇದ್ದಕ್ಕಿದ್ದಂತೆ ಗಂಡನು ಹೆಂಡತಿಗೆ ಕಪಾಳಕ್ಕೆ ಎರಡು ಮೂರು ಬಾರಿ ಹೊಡೆದುಬಿಟ್ಟ. ಜೋರಾದ ಹೊಡೆತ, ಶಬ್ದಕ್ಕೆ ಬಸ್ಸಿನಲ್ಲಿ ಇದ್ದವರೆಲ್ಲ ಯಾಕಪ್ಪಾ ಏನಾಯ್ತು... ಎಂದು ಎಲ್ಲರೂ ಅವರ ಕಡೆಗೆ ನೋಡಲು ಶುರುಮಾಡಿದರು. ಹೆಂಡತಿಯನ್ನು ಯಾಕೆ ಈ ರೀತಿ ಹೊಡೆಯುತ್ತಿದ್ದೀಯಾ ಎಂದು ಹಲವರು ಕೇಳಿದರು. ಅದಕ್ಕೆ ಗಂಡ ‘ನೋಡಿ ಸರ್ ನಾನು ಮದುವೆಯಾಗಿ ಕೇವಲ ಎರಡು-ಮೂರು ತಿಂಗಳಾಗಿದೆ. ಅಷ್ಟರಲ್ಲೇ ನನಗೆ ತಾಯಿಯನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದಾಳೆ. ನನ್ನ ತಾಯಿಯನ್ನು ಬಿಟ್ಟು ಇರಲು ನನ್ನಿಂದ ಸಾಧ್ಯವಿಲ್ಲ. ನನ್ನ ತಾಯಿಗೆ ನನ್ನನ್ನು ಬಿಟ್ಟರೆ ಬೇರೆ ಮಕ್ಕಳಿಲ್ಲ. ನನ್ನ ಅಪ್ಪನೂ ಇಲ್ಲ. ಅವರೊಬ್ಬರೇ ಹೇಗೆ ಇರುತ್ತಾರೆ. ಎಲ್ಲಿ ಇರುತ್ತಾರೆ? ಇವಳಿಗೆ ಬುದ್ಧಿವಾದ ಹೇಳಿ ಹೇಳಿ ಸಾಕಾಗಿದೆ’ ಎಂದ.

ಊಹೆ ಮಾಡದ ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಅವಮಾನವಾದ ಹೆಂಡತಿಯು ಗಾಬರಿಯಾಗಿ ಮೆಲ್ಲಗೆ ಅಳಲು ಪ್ರಾರಂಭಿಸಿದರು. ಗಂಡ ಹೊಡೆದ ನಂತರ ಜನರು ತಲೆಗೆ ಒಬ್ಬರಂತೆ ಒಂದೊಂದು ಮಾತನಾಡಲು ಶುರು ಮಾಡಿದರು. ಅದರಲ್ಲಿ ಕೆಲವರು ಹೆಂಡತಿಗೆ ಬುದ್ಧಿವಾದ ಹೇಳಿದರೆ, ಇನ್ನು ಕೆಲವರು ಗಂಡನಿಗೆ ಬುದ್ಧಿವಾದ ಹೇಳುತ್ತಿದ್ದರು. ಅವರವರ ವೈಯಕ್ತಿಕ ಬದುಕಿನ ಅನುಭವ ಹೇಳುತ್ತಿದ್ದರು. ಬಸ್ ತುಂಬಾ ಮಾತು ಶುರುವಾಗಿಬಿಟ್ಟಿತ್ತು. ಹತ್ತಿರ ಹೋಗಿ ನಿಂತ ಕೆಲವರು ಹೆಂಡತಿಗೆ ಬಾಯಿಗೆ ಬಂದಂತೆ ಬೈದರು. ಇನ್ನು ಕೆಲವರು ಗಂಡನಿಗೆ ಹಾಗಲ್ಲ ಹೀಗೆ.. ಎಂದು ಹೇಳುತ್ತಿದ್ದರು. ಹೀಗೆ ಮಾತಿಗೆ ಮಾತು ಬೆಳೆಯುತ್ತಾ ಸಾಗಿತು. ಮುಗಿಯದ ಇವರ ಜಗಳ, ಮಾತು ತುಮಕೂರು ಬಂದರೂ ನಡೆದೇ ಇತ್ತು. ಗಂಡ ಹೆಂಡತಿ ಎಲ್ಲಿಗೆ ಹೋಗಬೇಕೆಂದಿದ್ದರೋ, ಗೊತ್ತಿಲ್ಲ. ಆದರೆ ತುಮಕೂರಿನ ಬಸ್ ನಿಲ್ದಾಣದಲ್ಲಿ ಇಳಿದರು.

ಆ ಘಟನೆಯನ್ನು ನೋಡಿದ ನಾನು ದೊಡ್ಡವನಾದ ಮೇಲೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದೆ. ನನ್ನ ತಾಯಿಗೂ ಇದೇ ರೀತಿ ಕಷ್ಟ ಬರುತ್ತದೆ. ಮದುವೆಯಾದರೆ ನನ್ನ ಹೆಂಡತಿಯು ಇದೇ ರೀತಿ ನನ್ನ ಕಾಡಿಸುತ್ತಾಳೆ ಎಂದು ಯೋಚಿಸಿ ಬಸ್ಸಿನಲ್ಲಿ ಮುಂದಿನ ದಾರಿಯತ್ತ ಪ್ರಯಾಣಿಸಿದೆ. ನಂತರ ಈ ಘಟನೆ ಮರತೇ ಹೋಯಿತು. ಇಂತಹುದೇ ಘಟನೆ 28 ವರ್ಷಗಳ ನಂತರ ಇತ್ತೀಚೆಗೆ ಬಸ್‌ನಲ್ಲಿ ಹೋಗುವಾಗ ನಡೆಯಿತು.

ಆದರೆ ಗಂಡ ಹೆಂಡತಿಯ ಜಗಳಕ್ಕೆ ಕಾರಣ ಮಾತ್ರ ಇದೇ. ಮಿಕ್ಕಂತೆ ಎಲ್ಲವೂ ಅದೆ. ಸೇಮ್ ಟೂ ಸೇಮ್. ಅದೇ ಮಾತು, ಅದೇ ಜನ, ಅದೇ ಬುದ್ಧಿವಾದ... ಬಸ್ ಡ್ರೈವರ್ ಬಸ್ ಅನ್ನು ನಿಲ್ಲಿಸಿ ಆತನೂ ಬೈದ. ನಾನು ಕುಳಿತು ಮೂಕ ಪ್ರೇಕ್ಷಕನಂತೆ ಕೇಳಿಸಿಕೊಂಡೆ. ಬಾಲ್ಯದ ಆ ಘಟನೆ, ಪುನಃ ಅದೇ ಪುನರಾವರ್ತನೆಯ ಮಾತುಗಳನ್ನು ಕೇಳಿಸಿಕೊಂಡೆ. ಇದು ಮುಗಿಯದ ಗೋಳು ಎಂದೆನಿಸಿತು. ಕಾಲ ಬದಲಾದರೂ ಜನರು ಬದಲಾಗಲಿಲ್ಲ. ಅವರ ಯೋಚನೆ ಬದಲಾಗಲಿಲ್ಲ. ಆಗಲೂ, ಈಗಲೂ ಎಲ್ಲರ ಬುದ್ಧಿಮಾತುಗಳನ್ನು ಶಾಂತ ರೂಪಿ ಗಂಡ ಕೇಳಿಸಿಕೊಂಡು ಉತ್ತರಿಸುತ್ತಿದ್ದ. ಎಲ್ಲರೂ ಗಂಡನಿಗೆ ಕರುಣೆ ತೋರಿಸುತ್ತಿದ್ದರು. ಕೊನೆಗೆ ಊರು ಬಂದಾಗ ಇಳಿದು ಹೋದರು.

ಎಲ್ಲರೂ ಪರಸ್ಪರ ಹೊಂದಾಣಿಕೆಯಾದರೆ ಇಂತಹ ಘಟನೆಗಳು ನಡೆಯುವುದಿಲ್ಲ. ಹೊಂದಾಣಿಕೆಯೇ ಇಲ್ಲದಿದ್ದ ಮೇಲೆ ಜೀವನ ನಡೆಸುವುದಾದರೂ ಹೇಗೆ? ಎಲ್ಲರೂ ನಮ್ಮ ತಾಯಿಯಂತೆ, ಅವರೂ ಸೊಸೆಯನ್ನು ತಮ್ಮ ಮಗಳಂತೆ ನೋಡಿಕೊಳ್ಳಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯದಿಂದ ಮಾತ್ರ ಇಂತಹ ಘಟನೆ ತಡೆಯಬಹುದು ಎಂದೆನಿಸಿತು.

ಮನೆಯೊಳಗೆ ನಡೆಯುವ ಇಂತಹ ಎಷ್ಟೋ ಘಟನೆಗಳು ಕೆಲವು ಬಾರಿ ಮಾತ್ರ ಬಸ್‌ನಲ್ಲಿ ಕಾಣಬಹುದು. ‘ಎಲ್ಲರ ಮನೆಯ ದೋಸೆಯು ತೂತು’ ಎಂಬುದನ್ನು ಮರೆವ ಜನರು ಜಗಳ ನಡೆದಾಗ ಬುದ್ಧಿಮಾತು ವಿಚಿತ್ರವಾಗಿ, ಉಚಿತವಾಗಿ ಕೊಡುವುದನ್ನು ಮಾತ್ರ ಮರೆಯುವುದಿಲ್ಲ.

ಪ್ರತಿಕ್ರಿಯಿಸಿ (+)