ಧರ್ಮಕ್ಕೆ ದೇವರ ಅಗತ್ಯವಿಲ್ಲ!

7
ಬೆಳದಿಂಗಳು

ಧರ್ಮಕ್ಕೆ ದೇವರ ಅಗತ್ಯವಿಲ್ಲ!

Published:
Updated:

‘ಧರ್ಮ’ – ಈ ಪದವನ್ನು ಅಡಿಗಡಿಗೂ ಕೇಳುತ್ತಿರುತ್ತೇವೆ. ಅದು ರಾಜಕಾರಣವನ್ನು ಪ್ರವೇಶಿಸಿದ ಬಳಿಕವಂತೂ ಅದರ ಉಲ್ಲೇಖ ಹೆಚ್ಚಾಗಿದೆಯೆನ್ನಿ! ಆದರೆ ಅದರ ಅರ್ಥವನ್ನು ಸರಿಯಾಗಿ ಗ್ರಹಿಸಿ, ಬಳಸುವವರ ಸಂಖ್ಯೆ ಕಡಿಮೆಯೇ. ಹೀಗಾಗಿ ತಮಗೆ ತೋಚಿದಂತೆಲ್ಲ ಅರ್ಥವನ್ನು ಕಂಡುಕೊಂಡು, ಬೇಕಾದಂತೆ ಬಳಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಿರುವಂತೆ ತೋರುತ್ತದೆ. ಇಂಥ ಅಪವ್ಯಾಖ್ಯಾನ ಕೇವಲ ‘ಧರ್ಮ’ ಎಂಬ ಒಂದು ಪದಕ್ಕಷ್ಟೆ ನಡೆದಿಲ್ಲ; ಹಲವು ಪಾರಿಭಾಷಿಕ ಪದಗಳ ಬಗ್ಗೆಯೂ ಇಂಥದೇ ಧೋರಣೆಯನ್ನು ನೋಡಬಹುದು.

‘ಧರ್ಮ’ಕ್ಕೆ ಅರ್ಥವನ್ನು ಹೇಳುವುದು ಕೂಡ ಕಷ್ಟ. ಏಕೆಂದರೆ ಅದು ಸಂದರ್ಭನಿಷ್ಠವಾದ ಪದವೂ ಹೌದು. ಎಂದರೆ ಆಯಾ ಸಂದರ್ಭಕ್ಕೆ ತಕ್ಕಂತೆ ಅದರ ಅರ್ಥದಲ್ಲಿ ವ್ಯತ್ಯಾಸವಾಗುವುದುಂಟು. ಹಲವರು ವಿದ್ವಾಂಸರು, ಚಿಂತಕರು ಈ ಪದದ ಸ್ವಾರಸ್ಯಗಳನ್ನು ನಿರೂಪಿಸಿದ್ದಾರೆ. ನಮ್ಮ ಕಾಲದಲ್ಲಿ ಹೀಗೆ ಕನ್ನಡದಲ್ಲಿ ‘ಧರ್ಮದ ಪರಿಕಲ್ಪನೆ’ಯ ಬಗ್ಗೆ ವಿಸ್ತಾರವಾಗಿ ಬರೆದಿರುವವರಲ್ಲಿ ಪ್ರಮುಖರು ಸಾ. ಕೃ. ರಾಮಚಂದ್ರರಾವ್‌. ಅವರ ಪ್ರಬಂಧದ ಹೆಸರೇ ‘ಧರ್ಮದ ಪರಿಕಲ್ಪನೆ.’ ’ಧರ್ಮ’ ತುಂಬ ಪ್ರಾಚೀನ ಶಬ್ದವೇ ಹೌದು. ಆದರೆ ಅದು ನಿತ್ಯದ ವ್ಯವಹಾರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡದ್ದು ರಾಮಾಯಣಕಾಲದಿಂದ ಎಂದಿದ್ದಾರೆ, ರಾಯರು. ಈ ಪ್ರಬಂಧದ ಮೊದಲ ಪ್ಯಾರಾ ಹೀಗಿದೆ:

‘ಧರ್ಮವೆಂಬ ಮಾತು ನಮ್ಮ ವ್ಯವಹಾರದಲ್ಲಿ ವಿಶೇಷವಾಗಿ ರೂಢಿಗೆ ಬಂದುದು ರಾಮಾಯಣದಿಂದ ಎಂದು ತೋರುತ್ತದೆ. ವಾಲ್ಮೀಕಿಗಳು ರಾಮನನ್ನು ಬಣ್ಣಿಸಿ ಬಣ್ಣಿಸಿ ಮಾತುಗಳು ಸಾಲದೆನಿಸಿದಾಗ ‘‘ರಾಮೋ ವಿಗ್ರಹವಾನ್‌ ಧರ್ಮಃ’’ ಎಂದಷ್ಟು ಹೇಳಿ ಮುಗಿಸುತ್ತಾರೆ. ಧರ್ಮವೆಂಬುದು ಮೈದೆಳೆದು ಮನುಷ್ಯಾಕಾರವನ್ನು ಹೊಂದಿತೆಂದರೆ ರಾಮನಾಗಿ ತೋರಿಸಿಕೊಳ್ಳುತ್ತದೆಯಂತೆ. ಧರ್ಮದ ಸ್ವರೂಪ, ಸ್ವಭಾವ, ಅಗತ್ಯ, ಅನ್ವಯ, ಪ್ರಯೋಜನ ಮುಂತಾದವು ಆದಿಕಾವ್ಯದಲ್ಲಿ ಅಡಿಗಡಿಗೆ ಕಾಣಿಸಿಕೊಳ್ಳುತ್ತವೆ. ರಾಮನಲ್ಲದೆ ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಇವರೆಲ್ಲರೂ ಧರ್ಮಕ್ಕೆ ಕಟ್ಟುಬಿದ್ದವರೇ. ಧರ್ಮದ ಕಟ್ಟುಪಾಡಿನಿಂದ ಹೊರತಾದವರು ವಾಲಿ, ರಾವಣ, ಮಾರೀಚ ಮೊದಲಾದವರು. ‘‘ರಾಮಾದಿವದ್ವರ್ತಿತವ್ಯಂ ನ ರಾವಣಾದಿವತ್‌’’ ಎಂಬುದು ಕಾವ್ಯದ ಪ್ರಯೋಜನವೂ ಹೌದೆಂದು ನಮ್ಮ ಕವಿಗಳೂ ಆಲಂಕಾರಿಕರೂ ಹೇಳಿದರು. 

‘ಧರ್ಮದ ಕಲ್ಪನೆಯನ್ನು ಶಾಸ್ತ್ರದ, ಲೋಕದ ಚೌಕಟ್ಟಿನಲ್ಲಿ ಸ್ಪಷ್ಟಪಡಿಸಿದವರು ಮೀಮಾಂಸಕರು. ಆರ್ಷೇಯ ಸಂಸ್ಕೃತಿಗೆ ಆಕರವೆನಿಸಿದ ವೇದವು ಧರ್ಮವನ್ನು ತಿಳಿಸಲೆಂದೇ ಹೊರಟಿತೆಂದು ಅವರ ವಿಶ್ವಾಸ. ವೇದವಾಙ್ಮಯದಲ್ಲಿ ಧರ್ಮದ ಉಲ್ಲೇಖ ವಿಶೇಷವಾಗಿಯೇ ಇದೆಯೆನ್ನಿ. ಉಪನಿಷತ್ತುಗಳಲ್ಲಾದರೋ ಅಷ್ಟಾಗಿ ಕಾಣುವುದಿಲ್ಲ. ಆದರೆ ಉಪನಿಷತ್ತುಗಳಿಂದ ಸ್ಫೂರ್ತಿ ಪಡೆದ ಬೌದ್ಧದರ್ಶನದಲ್ಲಿ ಧರ್ಮವೇ ಮೂಲಭೂತ ಕಲ್ಪನೆಯಾಯಿತು. ತ್ರಿಪಿಟಿಕಗಳಲ್ಲಿ ಒಂದಾದ ಸೂತ್ರಪಿಟಿಕ ಧರ್ಮವನ್ನೇ ಕುರಿತದ್ದು; ಭಗವದ್ಗೀತೆಗೆ ಪರ್ಯಾಯವಾಗಿ ಅವರಲ್ಲಿರುವುದು ಧರ್ಮಪದವಲ್ಲವೆ? ಮಹಾವೀರಸ್ವಾಮಿಗಳೂ ‘ಧಮ್ಮೋ ಮಂಗಲ ಮುಕ್ಕಿಟ್ಠಂ’ (ಧರ್ಮವೇ ಉತ್ಕೃಷ್ಟವಾದ ಮಂಗಳ) ಎಂದು ಹೇಳಿ, ಧರ್ಮವೆಂದರೆ ಅಹಿಂಸೆ, ಸಂಯಮ, ತಪಸ್ಸು ಎಂದು ನಿರ್ದೇಶನವನ್ನೂ ಮಾಡಿದರು. ನಾಸ್ತಿಕರೆನಿಸಿದ ಲೋಕಾಯತರೂ ಧರ್ಮವನ್ನೇನು ಕೈಬಿಡಲಿಲ್ಲ. ಆದರೆ ಧರ್ಮಕ್ಕೆ ಅಧ್ಯಾತ್ಮದ ಹಿನ್ನೆಲೆ ಅಗತ್ಯವಿಲ್ಲವೆಂದರು.’

ಇಲ್ಲಿ ಗಮನಿಸಬೇಕಾದ್ದು ಧರ್ಮದ ಹರವು. ಇಂದು ನಾವು ಧರ್ಮ ಎಂದರೆ ಯಾವುದೋ ನಿರ್ದಿಷ್ಟ ಸಮುದಾಯದ ಆಚಾರ ಎನ್ನುವಂತೆ ಗ್ರಹಿಸಿಕೊಂಡಿದ್ದೇವೆ. ಇಂಥ ಸಂಕುಚಿತ ಅರ್ಥ ‘ಧರ್ಮ’ಕ್ಕೆ ಇರಲಿಲ್ಲ ಎನ್ನುವುದು ಮೇಲಣ ಮಾತುಗಳಿಂದ ತಿಳಿಯುತ್ತದೆ. ಹೀಗಾಗಿಯೇ ಕೇವಲ ವೈದಿಕಧರ್ಮದಲ್ಲಿ ಮಾತ್ರವಲ್ಲದೆ, ಬೌದ್ಧ ಮತ್ತು ಜೈನಮತಗಳೂ ಕೂಡ ಧರ್ಮವನ್ನು ಒಪ್ಪಿದ್ದು; ಎಲ್ಲರಿಗೂ ಸಲ್ಲುವಂಥ ವಿವರಗಳನ್ನು ಧರ್ಮವು ಒಳಗೊಂಡಿದ್ದರಿಂದಲೇ ಅದು ಎಲ್ಲರಿಗೂ ಸ್ವೀಕಾರಾಹರ್ವಾದದ್ದು. ರಾಮಚಂದ್ರರಾಯರ ಮುಂದಿನ ಮಾತುಗಳು ಈ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸುವಂತಿವೆ:

‘ಜನರ ಮನಸ್ಸಿನಲ್ಲಿ ದೇವರಿಗೂ ಧರ್ಮಕ್ಕೂ ನಂಟು ಒದಗಿಬಂದಿರುವುದುಂಟು, ದಿಟ. ಆದರೆ ಇದು ಸಹಜವಾದುದೂ ಅಲ್ಲ, ಅಗತ್ಯವಾದುದೂ ಅಲ್ಲ. ದೇವರನ್ನು ನಂಬದವರೂ ಧರ್ಮವನ್ನು ಕೈಬಿಡುವಂತಿಲ್ಲ. ಬದುಕಿನಲ್ಲಿ ದೇವರ ಕೆಲಸವೇ ಬೇರೆ, ಧರ್ಮದ ಕೆಲಸವೇ ಬೇರೆ; ಧರ್ಮದ ಹರವು ಹೆಚ್ಚಿನದು. ರಾಮ ದೇವರೆಂದು ರಾಮಾಯಣ ನಮ್ಮಲ್ಲಿ ಜನಪ್ರಿಯವಾದದ್ದಲ್ಲ; ರಾಮ ಧರ್ಮಪರನೆಂದೇ ರಾಮನ ಕಥೆಗೆ ಹೆಗ್ಗಳಿಕೆ. ರಾಮನಿಂದ ಧರ್ಮಕ್ಕೆ ಒತ್ತಾಸೆ; ಧರ್ಮದಿಂದ ರಾಮನಿಗೆ ನಾಯಕಪಟ್ಟ. ರಾಮಾಯಣದಲ್ಲಿ ದೇವರ ಸೊಲ್ಲು ತೀರ ಅಲ್ಪ; ರಾಮನಿಗಂತೂ ಧರ್ಮಕ್ಕಿಂತ ಬೇರೆ ದೇವರಿಲ್ಲ. ರಾಮನು ವಿಷ್ಣುವಿನ ಅವತಾರವೆಂಬುದು ರಾಮನು ಪ್ರಸಿದ್ಧನಾದಮೇಲೇ ಬೇರೂರಿಕೊಂಡ ಕಲ್ಪನೆ. ರಾಮನ ಹಿರಿಮೆಗೆ ಅವತಾರದ ನೆರವಿನ ಅಗತ್ಯವೇನಿರದು. ಅವತಾರಕ್ಕೇ ರಾಮನ ಬಲದಿಂದ ಪ್ರಯೋಜವಿದ್ದೀತು! ಈ ವಿಚಾರವಾಗಿ ರಾಮಾಯಣದಲ್ಲಿರುವ ಉಲ್ಲೇಖಗಳೆಲ್ಲವೂ ಪ್ರಕ್ಷಿಪ್ತಭಾಗಗಳೆಂದು ವಿದ್ವಾಂಸರ ಬಹುಮತ. ಇದು ಹೇಗಾದರೂ ಇರಲಿ. ಧರ್ಮದ ಅಗತ್ಯಕ್ಕೆ ದೇವರೆಂಬ ಬೇರು ಬೇಕಾದುದಿಲ್ಲ; ಶ್ರದ್ಧೆ, ಭಕ್ತಿ, ಪೂಜೆಗಳೆಂಬ ಪರಿಕರಗಳು ಬೇಕಾದುದಿಲ್ಲ. ಅದು ಸ್ವತಂತ್ರವಾಗಿಯೇ ನಿಲ್ಲಬಲ್ಲ ಕಲ್ಪನೆ.’

‘ಧರ್ಮದ ಅಗತ್ಯಕ್ಕೆ ದೇವರೆಂಬ ಬೇರು ಬೇಕಾದುದಿಲ್ಲ; ಶ್ರದ್ಧೆ, ಭಕ್ತಿ, ಪೂಜೆಗಳೆಂಬ ಪರಿಕರಗಳು ಬೇಕಾದುದಿಲ್ಲ. ಅದು ಸ್ವತಂತ್ರವಾಗಿಯೇ ನಿಲ್ಲಬಲ್ಲ ಕಲ್ಪನೆ’ – ಈ ಮಾತನ್ನು ಮತ್ತೆ ಮತ್ತೆ ಮನನ ಮಾಡಬೇಕಿದೆ. 

‘ಧರ್ಮ’ ಎಂಬ ಮಾತಿಗೆ ಮೂಲ ‘ಧೃಙ್‌’ ಎಂಬ ಧಾತು. ಅದರ ಅರ್ಥ ‘ಧಾರಣೇ’ ಎಂದು. ‘ಕಾಲು ಜಾರುವ ಸಂದರ್ಭದಲ್ಲಿ ಆಯತಪ್ಪಿ ಬೀಳಗೊಡದೆ ಹಿಡಿದು, ಎತ್ತಿಹಿಡಿದು ನಿಲ್ಲಿಸುವುದು’ ಈ ಧಾತುವಿಗೆ ಇರುವ ಅರ್ಥ. ಮನುಷ್ಯ ಅವನ ನಡೆವಳಿಕೆಗಳಲ್ಲಿ ಸಮತೋಲನವನ್ನು ತಪ್ಪಿ, ಕೆಳಕ್ಕೆ ಬೀಳುವ ಸಂದರ್ಭಗಳು ಅಸಂಖ್ಯ. ಹೀಗೆ ಅವನು ಬೀಳುವಾಗ ಅವನನ್ನು ಎತ್ತಿಹಿಡಿದು ನಿಲ್ಲಿಸುವುದೇ ‘ಧರ್ಮ’. ಅವನು ಬೀಳುವ ಸಂದರ್ಭಗಳು ಎಷ್ಟು ಎಂದು ಪಟ್ಟಿಮಾಡುವುದು ಸುಲಭವಲ್ಲ. ಏಕೆಂದರೆ ಅದು ಕಾಲ–ದೇಶಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಹೊಸ ಹೊಸ ‘ಅಧಃಪತನಕ್ರಿಯೆ’ಗಳು ಎದುರಾಗುತ್ತಲೇ ಇರುತ್ತವೆ. ಅಂಥ ಸಂದರ್ಭಗಳಲ್ಲಿ ಅವನನ್ನು ಯಾವುದು ಎತ್ತಿಹಿಡಿಯುವುದೋ ಅದೇ ಧರ್ಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !