ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಹಂಬಲವೇ ವಿರಕ್ತಿ

Last Updated 28 ಜೂನ್ 2019, 19:30 IST
ಅಕ್ಷರ ಗಾತ್ರ

ದೇವರೊಂದಿಗಿನ ಸಾಹಚರ್ಯವೇ ವಿರಕ್ತಿ. ಅಂದರೆ ಅದು ಭಗವಂತನೊಂದಿಗಿನ ಅನುರಕ್ತಿ. ಇಂತಹ ಅಭೂತಪೂರ್ವ ತಾದಾತ್ಮ್ಯವನ್ನು ತನ್ನ ದೈವದೊಡನೆ ಅಕ್ಕ ಸಾಧಿಸಿಕೊಂಡಿದ್ದಳು.

ದೇವರನ್ನು ಸೇರಬೇಕಾದುದು ಹೃದಯ. ಅದು ಶುಚಿಗೊಳ್ಳಬೇಕು. ಅಲ್ಲಿರುವ ಬಯಕೆಗಳು ಕೊನೆಗೊಳ್ಳಬೇಕು. ಅದೂ ಕೂಡ ಒತ್ತಾಯದಿಂದಲ್ಲ, ಒತ್ತಾಸೆಯಿಂದ. ಯಾವುದೇ ವ್ಯಕ್ತಿಯನ್ನು ಬೇರೆಯವರು ಒತ್ತಾಯ ಮಾಡಿ ಆಧ್ಯಾತ್ಮಕ್ಕೆ ಎಳೆದರೆ ಆತ ಬಲು ಬೇಗ ಅನಾಚಾರಕ್ಕಿಳಿಯುತ್ತಾನೆ. ಕಳ್ಳಮಾರ್ಗಗಳಿಂದ ತನ್ನ ಕಾಮನೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಾನೆ. ಏಕೆಂದರೆ ಪ್ರಾಪಂಚಿಕ ಸುಖ-ಭೋಗಗಳನ್ನು ನೋಡಬೇಕು ಎಂಬ ಚಪಲ ಆತನಲ್ಲಿ ಇನ್ನೂ ಉಳಿದಿರುತ್ತದೆ. ಮೊದಲು ಅದು ಕೊನೆಗೊಳ್ಳಬೇಕು. ಈ ಬಗೆಯ ಸುಖವುಂಡಿದ್ದು ಸಾಕೆಂಬ ಭಾವ ತಾನಾಗಿಯೇ ಬರಬೇಕು. ಹೀಗೆ ಹೃದಯದ ಬಯಕೆಗಳು ಸಹಜವಾಗಿ ಕೊನೆಗೊಂಡಾಗ ಮಾತ್ರ ಅದು ಫಲವಂತಿಕೆಯ ಸ್ಥಿತಿಯಾಗಿರುತ್ತದೆ. ಇದನ್ನು ಗಿಡದಲ್ಲಿ ಮಿಡಿಯೊಂದು ಬಲಿತು, ಕಾಯಾಗಿ, ಮಾಗಿ ಫಲಭರಿತಗೊಂಡು ಹಣ್ಣಾಗುವ ಸಹಜಕ್ರಿಯೆಗೆ ಹೋಲಿಸಬಹುದು.

ಅಯ್ಯ ವಿರಕ್ತರೆಂದರೇನೊ
ವಿರಕ್ತಿಯ ಮಾತಾಡುವರಲ್ಲದೆ
ವಿರಕ್ತಿ ಎಲ್ಲರಿಗೆಲ್ಲಿಯದೊ
ಕೈಯೊಳಗಣ ಓಲೆ ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಸತ್ಯವಿಲ್ಲ ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು
ಅದೆಂತೆಂದೆಡೆ
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯಾ
ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ

ವಿರಕ್ತಿಯೇನೆಂದು ಅಕ್ಕ ಎಷ್ಟು ಚೆನ್ನಾಗಿ ವ್ಯಾಖ್ಯಾನಿಸುತ್ತಾಳೆ. ಜಗತ್ತಿನಲ್ಲಿ ಬಹಳಷ್ಟು ಜನರು ದೈನಂದಿನ ಕೆಲಸಗಳನ್ನು ಮಾಡುವಷ್ಟೇ ಯಾಂತ್ರಿಕವಾಗಿ ಭಕ್ತಿಯ ಆಚರಣೆಯಲ್ಲಿ ತೊಡಗಿರುತ್ತಾರೆ. ಅವರಿಗೆ ಭಕ್ತಿ ಜೀವನಕ್ರಮವಲ್ಲ ಅಥವಾ ಮನದಾಳದ ಹಂಬಲವೂ ಅಲ್ಲ. ಇಂತಹ ತೋರಿಕೆಯ ಭಕ್ತರಿಗೆ ಡಾಂಭಿಕತೆಯ ಪ್ರದರ್ಶನದ ಮೇಲೆ ಇನ್ನಿಲ್ಲದ ವ್ಯಾಮೋಹ. ತಾವೇನೋ ಬಹಳ ದೊಡ್ಡ ಭಕ್ತರೆಂಬಂತೆ ನಟಿಸುತ್ತ ಇತರರ ಬಗ್ಗೆ ಟೀಕೆ ಮಾಡುತ್ತಾರೆ. ಅವರು ವಿರಕ್ತಿಯ ಕುರಿತಾಗಿ ಭಾರಿ ಸಾಧಕರಂತೆ ಮಾತಾಡಬಲ್ಲರು ಅಷ್ಟೆ. ಕೈಯಲ್ಲಿ ತಾಳೆಗರಿಯ ಕಟ್ಟು ಹಿಡಿದು ಕಂಕುಳಲ್ಲಿ ಪೂಜಿಸುವ ದೇವರಮೂರ್ತಿ ಇರುವ ಸಂಪುಟವನ್ನು ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಬಾಯಲ್ಲಿ ತಮ್ಮನ್ನು ಬಿಟ್ಟು ಇನ್ನುಳಿದವರೆಲ್ಲ ಭಕ್ತಿಹೀನರು ಎಂಬರ್ಥದ ಮಾತನ್ನೇ ಆಡುತ್ತಿರುತ್ತಾರೆ. ಇನ್ನೂ ಕೆಲವರು ತಮಗೆ ಪ್ರಾಪಂಚಿಕ ಸುಖದ ಆಕರ್ಷಣೆಯೇ ಇಲ್ಲವೆಂದೂ, ತಾವು ಮೋಹ-ಮಾಯೆಗಳಿಗೆ ಅತೀತರೆಂದು ಭಾವಿಸಿಕೊಂಡಿರುತ್ತಾರೆ. ಇತರರನ್ನೂ ಹಾಗೆಂದೇ ನಂಬಿಸಲೆತ್ನಿಸುತ್ತಾರೆ. ಆದರೆ ಅಕ್ಕ ಇಂಥವರನ್ನು ಹಿಡಿದು ನಿಲ್ಲಿಸಿ ಕಣ್ಣಲ್ಲಿ ಕಣ್ಣಿಟ್ಟು ಕೇಳುತ್ತಾಳೆ. ವಿರಕ್ತಿಯೆಂದರೇನು?

ಎಂಥವರ ನೈತಿಕ ಸ್ಥೈರ್ಯವಾದರೂ ಗಡಗಡ ನಡುಗಿ, ಒಳಗಿನ ಹುಳುಕೆಲ್ಲವೂ ಹೊರ ಬಂದು, ಆಳದಾಳದ ಪಾಪಪ್ರಜ್ಞೆಯಿಂದ ಕುಸಿದು ಬೀಳುವಂತೆ ಅವಳ ಪ್ರಶ್ನೆಯ ಚಾಟಿ ತಾಕಿದವರು ಒದ್ದಾಡುತ್ತಾರೆ. ಏಕೆಂದರೆ ಅವಳ ಪ್ರಶ್ನೆ ಮುಂದುವರಿದು ಕೇಳುತ್ತದೆ – ‘ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?’ ಸದಾಕಾಲ ಪೂಜೆಯಲ್ಲಿ ಮುಳುಗಿರುತ್ತೇನೆ ಎಂದು ಹೇಳುವವರೆಲ್ಲರ ಅಹಂಕಾರವನ್ನು ಈ ಪ್ರಶ್ನೆ ಸುಟ್ಟು ಬೂದಿ ಮಾಡಿಬಿಡುತ್ತದೆ. ತಮ್ಮನ್ನು ತಾವು ದೊಡ್ಡ ದೈವಭಕ್ತರೆಂದು ಕರೆದುಕೊಳ್ಳುವವರು, ತೀರ್ಥಕ್ಷೇತ್ರಗಳ ಪ್ರವಾಸ ಮಾಡಿ ದೈವಕೃಪೆಗೆ ಪಾತ್ರರಾದೆವೆಂದು ಬೀಗುವವರು, ಆ ಪೂಜೆ, ಈ ಅಭಿಷೇಕ-ಅರ್ಚನೆಗಳನ್ನು ಸಲ್ಲಿಸಿ ಭಾರೀ ಪುಣ್ಯಾರ್ಜನೆ ಮಾಡಿದೆವೆಂದು ಭ್ರಮಿಸುವವರಿಗೆ ಅರಿವಿನ ಕಣ್ತೆರೆಸುವಂತೆ ಅಕ್ಕ ಉದ್ಗರಿಸುತ್ತಾಳೆ.

ವಿರಕ್ತನ ಪರಿಯೇನು, ಆತ ಹೇಗಿರುತ್ತಾನೆ ಎಂಬ ಜಿಜ್ಞಾಸೆಗೆ ಅಕ್ಕನ ಉತ್ತರ ಸೊಗಸಾಗಿ ನಿರೂಪಿತವಾಗಿದೆ. ಕೇವಲ ಪ್ರಾಪಂಚಿಕ ಸುಖ-ಭೋಗಗಳನ್ನು ನಿರಾಕರಿಸಿದ ಕೂಡಲೆ ತಾವು ವಿರಕ್ತರಾದೆವೆಂದು ಭಾವಿಸುವ ಜನರಿಗೆ ಮುಖಕ್ಕೆ ರಾಚುವಂತೆ ಉತ್ತರ ಸಿಗುತ್ತದೆ. ಮನೆ-ಸಂಸಾರಗಳನ್ನು ಬಿಟ್ಟು, ಗುಡಿಸಲಿನಲ್ಲಿ ವಾಸಿಸಿದೊಡನೆ ಅದು ವಿರಕ್ತಿಯಾಗುವುದಿಲ್ಲ. ಅಂದರೆ ಐಹಿಕ ವಿಷಯಾಸಕ್ತಿಯನ್ನು ಬಿಡುವುದು ವಿರಕ್ತಿಯಲ್ಲ. ವಿರಕ್ತಿಯೆಂದರೆ ಶಿವನೊಂದಿಗೆ ಎಡೆಬಿಡದೆ ಕೂಡಿರುವುದು. ಅಂದರೆ ಹೃದಯದೊಳಗೆ ಶಿವಸಾನ್ನಿಧ್ಯವನ್ನು ಸಾಧ್ಯವಾಗಿಸಿಕೊಳ್ಳುವುದು. ಹಾಗೆ ಮನಸ್ಸಿನ ತುಂಬ ತುಂಬಿಕೊಂಡ ಈಶ್ವರಪ್ರಜ್ಞೆಯೊಂದಿಗೆ ಅನವರತವೂ ಬದುಕಲು ಶುರು ಮಾಡಿದರೆ ಪ್ರಾಪಂಚಿಕ ಸುಖವೆನ್ನುವುದು ತಾನಾಗಿಯೇ ಅನಾಸಕ್ತ ಸಂಗತಿಯಾಗಿ ಪರಿಣಮಿಸುತ್ತದೆ.

ಹೀಗೆ ದೈವಾನುರಕ್ತಿಯು ಆಪ್ತವಾಗುತ್ತ, ಆವರಿಸುತ್ತ, ತನ್ನ ಕಕ್ಷೆಯಲ್ಲಿ ನಮ್ಮನ್ನು ಮುಳುಗಿಸುತ್ತ, ತನ್ಮೂಲಕ ಬೇರೆ ವಿಷಯ-ವಸ್ತುಗಳಲ್ಲಿ ಅವಜ್ಞೆಯನ್ನು ಮೂಡಿಸುವುದೇ ವಿರಕ್ತಿ. ಅಂದರೆ ಅಕ್ಕ ಹೇಳಬಯಸುವುದೇನೆಂದರೆ ಕೇವಲ ಲಿಂಗವನ್ನು ಕೈಯಲ್ಲಿ ಹಿಡಿದರೆ ಅದು ಭಕ್ತಿಯಲ್ಲ, ಮನಸ್ಸಿನೊಳಗೆ ದೇವರು ತುಂಬಿಕೊಳ್ಳಬೇಕು. ಆಗ ಮನುಷ್ಯನಿಗೆ ಉಳಿದ ಸಂಗತಿಗಳಲ್ಲಿ ತಾನಾಗಿಯೇ ಆಸಕ್ತಿ ಹೊರಟು ಹೋಗುತ್ತದೆ. ವಸ್ತುಗಳು ತಾನಾಗಿಯೇ ಬೇಡವೆನಿಸಿ, ಅವನ್ನು ಬಿಡಬೇಕೇ ಹೊರತು ಒತ್ತಾಯದಿಂದಲ್ಲ, ಅಥವಾ ತೋರಿಕೆಗಾಗಿ ಅಲ್ಲ. ಹೀಗೆ ಇಷ್ಟವಾದದ್ದುರ ಹಂಬಲದಲ್ಲಿ ಉಳಿದ ವಿಚಾರಗಳ ಆಸಕ್ತಿ ಹೊರಟು ಹೋಗುವಿಕೆ ಸಹಜವಾಗಿ ನಡೆಯಬೇಕು. ಶಿವಧ್ಯಾನದ ಹಂಬಲದಲ್ಲಿ ಉಳಿದ ಸುಖವೆಲ್ಲ ಮನಸ್ಸಿಗೇ ಬೇಡವಾಗಿ ಕಡೆಗಾಣಿಸಲ್ಪಟ್ಟಾಗ ಅದು ವಿರಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT