ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೇಹಳ್ಳಿಯ ಮೂಡಲಪಾಯಕ್ಕೆ ಸುವರ್ಣ ಸಂಭ್ರಮ

Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೊನೇಹಳ್ಳಿ ಸಣ್ಣ ಗ್ರಾಮ. ಇದು ಅಂಚೆಕೊಪ್ಪಲು, ಶಂಕರಿಕೊಪ್ಪಲು, ಕರೀಕೆರೆ, ಸಿದ್ದಾಪುರ, ಭೈರಾಪುರ ಗ್ರಾಮಗಳಿಂದ ಸುತ್ತುವರಿದಿದೆ.

ಅದು 1960ರ ದಶಕ. ಮಳೆ, ಬೆಳೆ ಸಮೃದ್ಧವಾಗಿದ್ದ ಕಾಲವದು. ರೈತಾಪಿ ಬದುಕು ಹಸನಾಗಿತ್ತು. ಮೂಡಲಪಾಯ ಯಕ್ಷಗಾನ, ಕರಪಾಲಮೇಳ, ಚೌಡಿಕೆ, ಭಜನೆ... ಈ ಭಾಗದ ಪಾರಂಪರಿಕ ಮನರಂಜನಾ ಸಂಸ್ಕೃತಿಯಾಗಿತ್ತು. ಹಳ್ಳಿಗಳಲ್ಲಿ ಹವ್ಯಾಸಿ ಯಕ್ಷಗಾನ ತಂಡಗಳು, ವೃತ್ತಿಪರ ಭಾಗವತರಿದ್ದರು. ಆ ದಿನಗಳಲ್ಲಿ ಕೊನೇಹಳ್ಳಿಯ ಸುತ್ತಮುತ್ತ ಮನೆಗೊಬ್ಬರು ಕಲಾವಿದರಿದ್ದರು.

ಪ್ರತಿದಿನ ಹೊಲ–ಗದ್ದೆಯ ಕೆಲಸ ಮುಗಿಸಿ ರಾತ್ರಿ ಊರ ಮುಂದಿನ ಅಂಗಳ, ದೇವಸ್ಥಾನದ ಪ್ರಾಂಗಣಗಳಲ್ಲಿ ಸೇರಿ ಮೃದಂಗ, ತಾಳ, ಮುಖವೇಣಿಯ ಮೇಳ ಸಂಗೀತಗಳಿಗೆ ತದ್ದಿ ತೋಂ ಜಣು ಥೈತ ಥೈತ ತದಿತಾ... ಎಂದು ಹೆಜ್ಜೆ ಹಾಕುತ್ತಿದ್ದರು. ಎಲೈ ಸಾರಥಿ... ಹೀಗೆ ಬಾ... ಮತ್ತೂ ಹೀಗೆ ಬಾ... ಶಹಬಾಷ್‌... ಎನ್ನುತ್ತಾ ಪಾತ್ರಗಳ ತಾಲೀಮು ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಊರಹಬ್ಬ, ಉತ್ಸವ, ಜಾತ್ರೆಗಳಲ್ಲಿ ‘ದೇವಿ ಮಹಾತ್ಮೆ’, ‘ಕರಿಭಂಟನ ಕಾಳಗ’, ‘ಗಯ ಚರಿತ್ರೆ’, ‘ದಕ್ಷಯಜ್ಞ’, ‘ಕೌಂಡಲೀಕವಧೆ’, ‘ಕೃಷ್ಣಾರ್ಜುನರ ಕಾಳಗ’, ‘ಲವಕುಶ’ ಮುಂತಾದ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. ಸಾಮಾನ್ಯವಾಗಿ ಸುಗ್ಗಿಯಲ್ಲಿ ಆರಂಭವಾಗುತ್ತಿದ್ದ ಯಕ್ಷಗಾನ ಮೇಳಗಳು ಗೌರಿಹಬ್ಬದವರೆಗೂ ನಡೆಯುತ್ತಿದ್ದುದು ವಿಶೇಷ.

ಕಳೆದ ನಾಲ್ಕೈದು ದಶಕಗಳವರೆಗೂ ಹಳೆಯ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ಮೂಡಲಪಾಯಉಚ್ಚ್ರಾಯ ಸ್ಥಿತಿಯಲ್ಲಿ ಇತ್ತು. ಕಾಲಕ್ರಮೇಣ ಕಂಪನಿ ನಾಟಕಗಳು, ಗ್ರಾಮೀಣ ಹವ್ಯಾಸಿ ನಾಟಕಗಳ ಪೈಪೋಟಿ ಎದುರಿಸಬೇಕಾಗಿ ಬಂತು. ಪಡುವಲಪಾಯದಂತೆ ಮೂಡಲಪಾಯಕ್ಕೆ ದೇವಾಲಯಗಳು, ಹಣವಂತರು, ವಿದ್ಯಾವಂತರು ಹಾಗೂ ವಿದ್ವಾಂಸರ ಪ್ರವೇಶವಾಗದಿರುವುದು, ವೃತ್ತಿ ಮೇಳ, ಹರಕೆ ಆಟ ಮುಂತಾದ ಆಚರಣೆಯ ಪರಿಕಲ್ಪನೆಗಳು ಪಡುವಲಪಾಯಕ್ಕೆ ಆರ್ಥಿಕ ಭದ್ರತೆ ಕಲ್ಪಿಸಿಕೊಂಡಂತೆ ಮೂಡಲಪಾಯದಲ್ಲಿ ಆಗಲಿಲ್ಲ. ಮೂಡಲಪಾಯದ ಭಾಗವತರು ಜೀವನಾಧಾರಕ್ಕೆ ಬೇರೆ ಬೇರೆ ಕಸುಬುಗಳನ್ನು ಆಶ್ರಯಿಸಬೇಕಾಯಿತು. ನಂತರದ ದಿನಗಳಲ್ಲಿ ಬಂದ ಸಿನಿಮಾ ಮುಂತಾದ ಮನರಂಜನಾ ಮಾಧ್ಯಮಗಳು ಮೂಡಲಪಾಯದ ಅವನತಿಗೆ ಮುನ್ನುಡಿ ಬರೆದವು.

ಗತವೈಭವ ಕ್ರಮೇಣ ಮಸುಕಾಗುತ್ತಿದ್ದ ಕಾಲದಲ್ಲಿ ಮೂಡಲಪಾಯ ಯಕ್ಷಗಾನದ ಪುನಶ್ಚೇತನಕ್ಕೆ ತ್ರಿಮೂರ್ತಿಗಳ ಸಂಗಮವಾಯಿತು. ಕೊನೇಹಳ್ಳಿಯ ಕಲಾ ಪೋಷಕರಾದ ಬಿ. ನಂಜುಂಡಪ್ಪ, ಕೊನೇಹಳ್ಳಿಯ ಎಲ್ಲ ಮೇಳಗಳಿಗೆ ಭಾಗವತರಾಗಿದ್ದ ಪಟೇಲ್ ನಾರಸಪ್ಪ ಹಾಗೂ ಜನಪದ ತಜ್ಞ ಡಾ.ಜಿ.ಶಂ. ಪರಮಶಿವಯ್ಯ ಹಗಲಿರುಳು ಶ್ರಮಿಸಿದರು. ಕೊನೇಹಳ್ಳಿಯ ಮೂಡಲಪಾಯ ಯಕ್ಷಗಾನ ತಂಡಕ್ಕೆ ಚಾಲಕಶಕ್ತಿಯಾಗಿ ನಿಂತರು. 1969ರಲ್ಲಿ ಶ್ರೀಬಿದಿರೆಯಮ್ಮ ಯಕ್ಷಗಾನ ಮಂಡಳಿ ಸ್ಥಾಪಿಸಿದ್ದು ಅವರ ಹೆಗ್ಗಳಿಕೆ.

ಮೊದಲಿಗೆ ವೇಷಭೂಷಣಗಳಲ್ಲಿ, ಪಾತ್ರಗಳ ಬಣ್ಣಗಾರಿಕೆಯಲ್ಲಿ ಕಂಡುಬರುತ್ತಿದ್ದ ಅರಕೆಗಳನ್ನು ಸರಿಪಡಿಸಿ ಹೊಸ ಮೆರುಗು ನೀಡಲಾಯಿತು. ಹಳೆಯ ರಂಗ ಸಂಪ್ರದಾಯಗಳನ್ನು ಸಜೀವಗೊಳಿಸಿದ್ದು ಮತ್ತೊಂದು ವಿಶೇಷ. ಭಾಗವತ ಹಿಮ್ಮೇಳ, ಮುಖವೀಣೆಯ ವೈಪರೀತ್ಯವನ್ನು ಕುಗ್ಗಿಸಿ ಮೂಡಲಪಾಯದಲ್ಲಿ ಕಂಡುಬರುತ್ತಿದ್ದ ಸೂಕ್ಷ್ಮತೆಯನ್ನು ಅತ್ಯಂತ ಪರಿಶ್ರಮದಿಂದ ಸರಿಪಡಿಸಲಾಯಿತು.

1982ರಲ್ಲಿ ₹ 2 ಲಕ್ಷ ಅಂದಾಜು ವೆಚ್ಚದಡಿ ಕೊನೇಹಳ್ಳಿಯಲ್ಲಿ ಮೂಡಲಪಾಯ ರಂಗಮಂದಿರ ನಿರ್ಮಾಣವಾಯಿತು. ಇದೇ ಸಭಾಂಗಣದಲ್ಲಿ ಅಕಾಡೆಮಿಯ ಸಹಯೋಗದಡಿ ಕಲಾವಿದರು, ಭಾಗವತರನ್ನು ಒಟ್ಟುಗೂಡಿಸಿ ‘ಮೂಡಲಪಾಯ ಕಮ್ಮಟ’ವನ್ನೂ ಆಯೋಜಿಸಲಾಯಿತು. ಈ ಪ್ರದರ್ಶನಗಳು ಸಾವಿರಾರು ಜನರನ್ನು ಆಕರ್ಷಿಸುತ್ತಾ ಮೂಡಲಪಾಯ ಕಲಾ ಕಾಶಿ ಎಂಬ ಪ್ರಶಂಸೆಗೆ ಪಾತ್ರವಾಯಿತು.‌

1969ರಿಂದ 90ರವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಮೂಡಲಪಾಯ ಯಕ್ಷಗಾನ ಕೇಂದ್ರ ಕೆಲವೇ ವರ್ಷಗಳ ಅಂತರದಲ್ಲಿ ತನ್ನೆಲ್ಲಾ ಚಟುವಟಿಕೆಗಳ ಆಧಾರ ಸ್ತಂಭಗಳಾಗಿದ್ದ ಈ ಮೂವರನ್ನೂ ಕಳೆದುಕೊಂಡು ಅನಾಥವಾಯಿತು. ಯಾರೂ ಊಹಿಸದ ಈ ಆಘಾತದಿಂದ ಚೇತರಿಕೊಳ್ಳಲಾಗದೇ ಕೇಂದ್ರದ ಕಲಾವಿದರು ಕಂಗಾಲಾದರು.ಹತ್ತು ಹಲವು ಕಾರಣಗಳಿಂದ ಯಕ್ಷಗಾನ ಕೇಂದ್ರದ ಬಾಗಿಲು ಮುಚ್ಚುವಂತಾಯಿತು.

ಮತ್ತೆ ವಸಂತ...

ಇವೆಲ್ಲದರ ನಡುವೆ ಒಂದು ಸಣ್ಣ ಆಶಾಕಿರಣವೆಂಬಂತೆ ಕಳೆದ ಹನ್ನೆರಡು ವರ್ಷಗಳಿಂದ ತಿಪಟೂರಿನ ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಮತ್ತು ಕೊನೇಹಳ್ಳಿಯ ಯಕ್ಷಗಾನದ ಕೇಂದ್ರದ ಸಹಯೋಗದಡಿ ಮೂಡಲಪಾಯ ಪುನಶ್ಚೇತನದ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

1969ರಲ್ಲಿ ಪ್ರಾರಂಭವಾಗಿ ಇಂದಿನವರೆಗೂ 50 ವರ್ಷಗಳ ಕಾಲದ ಏಳುಬೀಳುಗಳನ್ನು ದಾಟಿಕೊಂಡು ಮುನ್ನಡೆಯುತ್ತಾ ಬಂದಿರುವ ಮೂಡಲಪಾಯ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.
ಫೆ. 22 ಮತ್ತು 23ರಂದು ಈ ಸಡಗರಕ್ಕೆ ವೇದಿಕೆ ಸಿದ್ಧವಾಗಿದೆ.

ಮೂಡಲಪಾಯ ಮಕ್ಕಳ ಮೇಳದಿಂದ ‘ಲವಕುಶ’, ಕೇಂದ್ರದ ಹಿರಿಯ ಕಲಾವಿದರಿಂದ ‘ಕರಿಭಂಟನ ಕಾಳಗ’ ಯಕ್ಷಗಾನ ಪ್ರದರ್ಶನ ಸೇರಿದಂತೆ ತೊಗಲುಬೊಂಬೆ ಆಟ, ಕರಪಾಲಮೇಳ, ‘ಕೃಷ್ಣ ಸಂಧಾನ’ ನಾಟಕಗಳ ಪ್ರದರ್ಶನ ಆಯೋಜಿಸಲಾಗುತ್ತಿದೆ.

ಕೊನೇಹಳ್ಳಿಯ ಮೂಡಲಪಾಯ ಯಕ್ಷಗಾನ ಕಲಾವಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT