ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಖಪುರ ಆಸ್ಪತ್ರೆಯ ದುರಂತ ಕಥೆ: ಕುರುಡು ಅಧಿಕಾರ ಕುಣಿಯುತಲಿತ್ತು...

Last Updated 5 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಈ ಕಥೆಯನ್ನು ಹೇಗೆ ಆರಂಭಿಸುವುದು? ಬೆಳೆದು ಬಾಳಿ ಬದುಕಬೇಕಾದ ಕಂದಮ್ಮಗಳು ಹೃದಯಹೀನ ಪ್ರಭುತ್ವವೊಂದರ ಹೊಣೆಗೇಡಿತನದ ವರ್ತನೆಯಿಂದ ಜೀವ ಕಳೆದುಕೊಂಡ ದುರಂತ ಘಟನೆಯಿಂದಲೋ? ದೇಶದ ಸರ್ಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿಯಿಂದ ಆಗುತ್ತಿರುವ ಎಡವಟ್ಟುಗಳಿಂದಲೋ? ದುರ್ಘಟನೆಯೊಂದು ನಡೆದಾಗ –ಅದರಿಂದ ಆಡಳಿತ ವ್ಯವಸ್ಥೆಯು ಪಾಠ ಕಲಿಯುವ ಬದಲು– ಸತ್ಯವನ್ನೇ ಮರೆಮಾಚಲು ನಡೆಸಿದ ಸರ್ಕಸ್‌ನ ಚಿತ್ರಣದಿಂದಲೋ? ಇಲ್ಲವೆ ಹಸುಗೂಸುಗಳ ಪ್ರಾಣ ಕಾಪಾಡಲು ಹೆಣಗಾಡಿದ ವೈದ್ಯನನ್ನೇ ಬಲಿಪಶು ಮಾಡಲಾದ ಘಟನೆಯಿಂದಲೋ?

ಉತ್ತರಪ್ರದೇಶದ ಗೋರಖಪುರ ಆಸ್ಪತ್ರೆಯ ದುರಂತ ಕಥೆಯ ಆರಂಭಿಕ ಬಿಂದುವಾಗಿ ಯಾವುದನ್ನೇ ಆಯ್ಕೆ ಮಾಡಿಕೊಂಡರೂ ವಿವರಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಕೊನೆಗೆ ಉಳಿಯುವುದು ವಿಷಾದವೊಂದೇ. ನನ್ನ ಇತ್ತೀಚಿನ ಓದಿನಲ್ಲಿ ತುಂಬಾ ಗಾಢವಾಗಿ ತಟ್ಟಿದ ಕೃತಿ ಡಾ. ಕಫೀಲ್‌ ಖಾನ್‌ ಅವರ ‘ದಿ ಗೋರಖ್‌ಪುರ್‌ ಹಾಸ್ಪಿಟಲ್‌ ಟ್ರ್ಯಾಜಿಡಿ: ಎ ಡಾಕ್ಟರ‍್ಸ್‌ ಮೆಮೋರ್‌ ಆಫ್‌ ಎ ಡೆಡ್ಲಿ ಮೆಡಿಕಲ್‌ ಕ್ರೈಸಿಸ್‌’ (ಇದಕ್ಕೂ ಮುನ್ನ ನನ್ನ ಗಮನಸೆಳೆದ ವೈದ್ಯಕೀಯ ಕೃತಿಯೆಂದರೆ ಗೆಳೆಯ ಎನ್‌.ರಾಮ್‌ ಕೊಟ್ಟಿದ್ದ ಡಾ. ಅತುಲ್‌ ಗಾವಂಡೆ ಅವರ ‘ಕಾಂಪ್ಲಿಕೇಷನ್ಸ್‌’. ವೈದ್ಯರು ಎದುರಿಸುವ ಸವಾಲುಗಳನ್ನು ಆ ಕೃತಿ ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿತ್ತು. ಅವರ ‘ಬೆಟರ್‌’, ‘ದಿ ಚೆಕ್‌ಲಿಸ್ಟ್‌ ಮೆನಿಫೆಸ್ಟೊ’ ಮತ್ತು ‘ಬೀಯಿಂಗ್‌ ಮಾರ್ಟಲ್‌’ ಕೃತಿಗಳನ್ನೂ ಓದಿರುವೆ). ಬಾಬಾ ರಾಘವ ದಾಸ್‌ (ಬಿಆರ್‌ಡಿ) ವೈದ್ಯಕೀಯ ಕಾಲೇಜಿನ ಆಡಳಿತಕ್ಕೆ ಒಳಪಟ್ಟಿರುವ ನೆಹರೂ ಆಸ್ಪತ್ರೆಯಲ್ಲಿ 2017ರ ಆಗಸ್ಟ್‌ 10ರಂದು ದ್ರವೀಕೃತ ಆಮ್ಲಜನಕದ ಸಂಗ್ರಹ ತೀರಿದ ಬಳಿಕ ಸಂಭವಿಸಿದ ದುರಂತದಲ್ಲಿ 63 ಕಂದಮ್ಮಗಳು ಅಸುನೀಗಿದ್ದು ನನ್ನ ಹೃದಯವನ್ನು ಬಹುವಾಗಿ ಕಲಕಿತ್ತು. ಘಟನೆಗೆ ಸಂಬಂಧಿಸಿದಂತೆ ಮುಂದೆ ನಡೆದ ಬೆಳವಣಿಗೆಗಳ ಮೇಲೂ ನನ್ನದೊಂದು ಚಿಕಿತ್ಸಕ ಕಣ್ಣು ನೆಟ್ಟಿತ್ತು. ಖಾನ್‌ ಅವರ ಕೃತಿಯನ್ನು ಓದಿದ ಮೇಲೆ ನನ್ನ ಬಹುತೇಕ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿವೆ.

ಆಸ್ಪತ್ರೆಯಲ್ಲಿ, ಆ ಸರಿರಾತ್ರಿಯಲ್ಲಿ ಆಮ್ಲಜನಕದ ಸಂಗ್ರಹ ತೀರಿದ ಬಳಿಕ ದುರಂತದ ಘಟನಾವಳಿಗಳು ಹೇಗೆ ಬಿಚ್ಚಿಕೊಳ್ಳುತ್ತಾ ಸಾಗಿದವು, ಕರ್ತವ್ಯದ ಮೇಲಿದ್ದ ವೈದ್ಯರು ಜೀವಗಳನ್ನು ಉಳಿಸಲಾಗದೆ ಹೇಗೆ ಅಸಹಾಯಕರಾಗಿ ಕೈಚೆಲ್ಲಿದರು, ಕಂದಮ್ಮಗಳು ಒಂದೊಂದಾಗಿ ಹೇಗೆ ಕಣ್ಮುಚ್ಚಿದವು, ಮೇಲಧಿಕಾರಿಗಳು ಹೇಗೆ ಹೊಣೆಗೇಡಿತನದಿಂದ ನುಣುಚಿಕೊಂಡರು, ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಬೇಕಿದ್ದ ಆಡಳಿತ ವ್ಯವಸ್ಥೆಯನ್ನು ಪಾರುಮಾಡಲು ಅದರ ಪರವಾಗಿ ದಾಖಲೆಗಳನ್ನು ಹೇಗೆ ತಿರುಚಲಾಯಿತು ಹಾಗೂ ಸ್ವಂತ ಖರ್ಚಿನಿಂದ ಪ್ರಾಣವಾಯುವಿನ ವ್ಯವಸ್ಥೆ ಮಾಡಿದ್ದ ವೈದ್ಯನನ್ನೇ ಹೇಗೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು ಎಂಬುದನ್ನು ದಾಖಲೆಗಳ ಮೂಲಕ– ಅದೂ ‘ಟೈಮ್‌ಲೈನ್‌’ ಸಹಿತ– ಖಾನ್‌ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ನಿರಪರಾಧಿಯಾದ ವೈದ್ಯನನ್ನು (ಡಾ. ಖಾನ್‌) ‘ತಪ್ಪಿತಸ್ಥ’ನೆಂದು ರುಜುವಾತು ಮಾಡಲು ಪಣತೊಟ್ಟ ಇಡೀ ಆಡಳಿತ ವ್ಯವಸ್ಥೆ, ಆತನನ್ನು ಹೇಗೆ ಅಟ್ಟಾಡಿಸಿಕೊಂಡು ಹೋಗಿ ಬಲಿಪಶು ಮಾಡಿತು ಎಂಬ ವಿವರಗಳಂತೂ ದಿಗ್ಭ್ರಮೆ ಮೂಡಿಸುತ್ತವೆ. ಪ್ರಭುತ್ವವೊಂದು ಪ್ರಾಪ್ತ ಅಧಿಕಾರವನ್ನೆಲ್ಲ ತನ್ನ ಮೂಗಿನ ನೇರಕ್ಕೆ ಘಟನೆಯ ವಿವರಗಳನ್ನು ತಿರುಚಲು Aದಿಂದ Zವರೆಗೂ ಪ್ರಯೋಗಿಸಿದ ಅತ್ಯಂತ ಕೆಟ್ಟ ನಿದರ್ಶನ ಇದು.

ಖಾನ್‌ ಅವರು ದುರಂತ ಘಟನೆಗಳ ಕುರಿತು ನೀಡುವ ವಿವರಗಳಿಗೆ ಬರುವ ಮುನ್ನ ಅವರ ಹಿನ್ನೆಲೆಯನ್ನೊಮ್ಮೆ ನೋಡೋಣ. ಗೋರಖಪುರದ್ದೇ ಮೂಲದ ಕುಟುಂಬ ಅವರದು. ಅವರ ತಂದೆ ಶಕೀಲ್‌ ಖಾನ್‌, ನೀರಾವರಿ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದವರು. ಈಗಲೂ ಅವರ ಮನೆ ಇರುವುದು ಅದೇ ಗೋರಖಪುರದ ಬಸಂತಪುರ ಬಡಾವಣೆಯಲ್ಲಿ. ಎಲ್ಲ ಜಾತಿ, ಸಮುದಾಯ, ವರ್ಗಗಳ ಕುಟುಂಬಗಳಿಗೆ ನೆಲೆ ಒದಗಿಸಿದ ಪ್ರದೇಶ ಅದು.

‘ದಲಿತರು, ಯಾದವರು, ಕುಂಬಾರರು, ಕ್ರಿಶ್ಚಿಯನ್ನರು ಮಾತ್ರವಲ್ಲದೆ ಬ್ರಾಹ್ಮಣ ಸಮುದಾಯದ ಗೆಳೆಯರನ್ನೂ ನಾನು ಹೊಂದಿದ್ದೆ. ಹೋಳಿ ಹಬ್ಬವನ್ನು ನಾವೆಲ್ಲ ಒಟ್ಟಾಗಿ ಆಚರಿಸುತ್ತಿದ್ದೆವು. ಈದ್ ದಿನ ನಮ್ಮ ಮನೆಗೆ ಇತರ ಸಮುದಾಯಗಳ ಅತಿಥಿಗಳನ್ನೂ ಔತಣಕ್ಕೆ ಕರೆಯುತ್ತಿದ್ದೆವು. ದೀಪಾವಳಿಗೆ ನೆರೆಹೊರೆಯವರು ಕೊಟ್ಟ ಸಿಹಿ ತಿಂಡಿ ಎಷ್ಟಿರುತ್ತಿತ್ತೆಂದರೆ ಮುಂದೆ ವಾರವಿಡೀ ಶಾಲೆಯ ಊಟದ ಡಬ್ಬಿಯಲ್ಲಿ ಆ ತಿಂಡಿಗಳನ್ನೇ ತುಂಬಿಸಿಕೊಂಡು ಹೋಗುತ್ತಿದ್ದೆವು’ ಎಂದು ಖಾನ್‌ ಬರೆಯುತ್ತಾರೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಅವರು ಬೆಳೆದವರಲ್ಲ ಎನ್ನುವುದನ್ನು ನಾವು ಗಮನಿಸಬೇಕು.

ಖಾನ್‌ ಅವರು ಎಂಬಿಬಿಎಸ್‌ ಓದಿದ್ದು ನಮ್ಮ ರಾಜ್ಯದ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ. ‘ರೋಗಿಗಳ ಧರ್ಮ, ಜಾತಿ, ಲಿಂಗ, ಆರ್ಥಿಕ ಹಿನ್ನೆಲೆ ಯಾವುದೂ ಮುಖ್ಯವಲ್ಲ. ಅವರ ಕಾಯಿಲೆಯ ಸ್ವರೂಪ ಎಂತಹದ್ದು ಮತ್ತು ಅವರನ್ನು ಚೇತರಿಕೆಯ ಹಾದಿಯಲ್ಲಿ ಹೇಗೆ ತಂದು ನಿಲ್ಲಿಸಬಹುದು ಎಂಬ ಯೋಚನೆಯಷ್ಟೇ ಮುಖ್ಯವಾಗಬೇಕು ಎಂಬ ಪಾಠವನ್ನು ನಾನಲ್ಲಿ ಕಲಿತೆ’ ಎಂದು ಅವರು ವಿವರಿಸುತ್ತಾರೆ. ಖಾನ್‌ ಅವರ ವೃತ್ತಿಪರ ಬದ್ಧತೆಯ ಕುರಿತು ಸಂಶಯದಿಂದ ನೋಡುವ ಅಗತ್ಯವೇ ಇಲ್ಲ ಎನ್ನುವುದನ್ನು ಮೇಲಿನ ವಿವರಗಳು ಬಲು ಸ್ಪಷ್ಟವಾಗಿ ಹೇಳುತ್ತವೆ.

ಗ್ಯಾಂಗ್‌ಟಕ್‌ನ ಮಣಿಪಾಲ ಕಾಲೇಜಿನಲ್ಲಿ ಕೆಲವು ವರ್ಷ ಕೆಲಸ ಮಾಡಿದ ಅವರು, ಮುಂದೆ ತಮ್ಮದೇ ಊರಿನ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಚಿಕ್ಕಮಕ್ಕಳ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಉದ್ಯೋಗ ಪಡೆದರು. ಅಲ್ಲಿನ ಆಸ್ಪತ್ರೆಯಲ್ಲಿ ದುರಂತ ಘಟನೆ ಸಂಭವಿಸಿದಾಗ ಅವರು ಅಲ್ಲಿ ಉದ್ಯೋಗಕ್ಕೆ ಸೇರಿ ಒಂದು ವರ್ಷದ ಮೇಲೆ ಎರಡು ದಿನಗಳಾಗಿದ್ದವಷ್ಟೆ.

ಇನ್ನು 2017ರ ಆಗಸ್ಟ್‌ 10ರಂದು ನಡೆದ ಆ ಘಟನೆಗೆ ಬರೋಣ. ಕಂಬನಿಯ ಕುಯಿಲಿಗೆ ಕಾರಣವಾದ ಆ ದುರಂತ ರಾತ್ರಿಯಲ್ಲಿ ಕಾಲೇಜಿನ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂದೇಶವೊಂದು ಬರುತ್ತದೆ. ‘ತುರ್ತುಚಿಕಿತ್ಸಾ ಘಟಕಕ್ಕೆ ಆಮ್ಲಜನಕ ಪೂರೈಕೆ ಆಗುತ್ತಿಲ್ಲ. ಸಿಲಿಂಡರ್‌ಗಳ ದಾಸ್ತಾನು ಕೂಡ ಮುಗಿದಿದೆ’ ಎಂದು ಅದರಲ್ಲಿ ಬರೆದಿರುತ್ತದೆ. ಒಮನ್‌ನಿಂದ ಬಂದಿದ್ದ ಸಹೋದರಿ ಜತೆ ಕಾಲ ಕಳೆಯಲು ಅಂದು ರಜೆ ಹಾಕಿದ್ದ ಖಾನ್‌, ಆ ಸಂದೇಶ ನೋಡಿದವರೇ ಆಸ್ಪತ್ರೆಗೆ ಹೊರಟು ನಿಲ್ಲುತ್ತಾರೆ. ದಾರಿಯಲ್ಲಿ ಹೋಗುತ್ತಿರುವಾಗಲೇ ವಿಭಾಗದ ಮುಖ್ಯಸ್ಥರಿಗೆ, ಕಾಲೇಜಿನ ಹಲವು ಮೇಲಧಿಕಾರಿಗಳಿಗೆ ಅವರು ಕರೆ ಮಾಡುತ್ತಾರೆ. ಬಹುತೇಕ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಕರೆ ಸ್ವೀಕರಿಸಿದವರೂ ಪರಿಸ್ಥಿತಿಯ ತೀವ್ರತೆಯನ್ನು ಗ್ರಹಿಸಲು ವಿಫಲರಾಗುತ್ತಾರೆ.

ಚಿಕ್ಕಮಕ್ಕಳ ವಾರ್ಡ್‌ನಲ್ಲಿ ಅಂದಿನ ಪರಿಸ್ಥಿತಿ ಹೇಗಿತ್ತು ಎನ್ನುವುದರ ವಿವರವಾದ ಮಾಹಿತಿಯನ್ನೂ ಖಾನ್‌ ಒದಗಿಸುತ್ತಾರೆ. ಒಂದೆಡೆ, ಜೀವನ್ಮರಣದ ನಡುವೆ ಹೋರಾಟ ನಡೆಸಿದ ಕಂದಮ್ಮಗಳು, ಇನ್ನೊಂದೆಡೆ, ಕಣ್ಣೆದುರಿಗೆ ಜೀವ ಕಳೆದುಕೊಳ್ಳುತ್ತಿರುವ ಕುಡಿಗಳಿಂದ ಶೋಕಸಾಗರದಲ್ಲಿ ಮುಳುಗಿದ್ದ ಪಾಲಕರು, ಮತ್ತೊಂದೆಡೆ, ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದು, ಜಗಳಕ್ಕಿಳಿದ ಸಂಬಂಧಿಗಳು, ಇದೆಲ್ಲದರ ಮಧ್ಯೆ ಅಸಹಾಯಕರಾಗಿದ್ದ ಕಿರಿಯ ವೈದ್ಯರು, ನರ್ಸ್‌ಗಳು ಹಾಗೂ ವಾರ್ಡ್‌ ಬಾಯ್‌ಗಳು. ಆ ದಿನ, ಚಿಕ್ಕಮಕ್ಕಳ ಹಾಗೂ ನವಜಾತ ಶಿಶುಗಳ ಚಿಕಿತ್ಸಾ ವಿಭಾಗದಲ್ಲಿ 313 ಕಂದಮ್ಮಗಳು ದಾಖಲಾಗಿದ್ದವು. ರಾತ್ರಿ 7.30ರ ಸುಮಾರಿಗೆ ಆಮ್ಲಜನಕದ ಅಭಾವ ಸೃಷ್ಟಿಯಾಯಿತು. ಆಮ್ಲಜನಕದ ಪೂರೈಕೆ ನಿಲ್ಲುತ್ತಿರುವ ಸದ್ದು ಮೊಳಗತೊಡಗಿತು. ತಕ್ಷಣ ತುರ್ತು ಸನ್ನಿವೇಶಕ್ಕಾಗಿ ಮೀಸಲಿಟ್ಟಿದ್ದ 52 ಸಿಲಿಂಡರ್‌ಗಳನ್ನು ಅಳವಡಿಸಲಾಯಿತು. ಕೇವಲ ನಾಲ್ಕೇ ಗಂಟೆಗಳಲ್ಲಿ ಅವುಗಳೂ ಖಾಲಿಯಾಗಿ ಪುಟ್ಟ ಪುಟ್ಟ ಎದೆಗೂಡುಗಳಿಗೆ ಪ್ರಾಣವಾಯುವೇ ಇಲ್ಲವಾಯಿತು. ಖಾನ್‌ ಅವರು ಆಸ್ಪತ್ರೆ ತಲುಪುವ ವೇಳೆಗೆ ಎಂಟು ಕಂದಮ್ಮಗಳು ಸಾವನ್ನಪ್ಪಿದ್ದವು.

ವಾರ್ಡ್‌ನಲ್ಲಿ ದಾಖಲಾಗಿದ್ದ ಮಕ್ಕಳ ಸ್ಥಿತಿಯನ್ನು ನೋಡಿ, ತುಂಬಾ ಜರೂರು ಇರುವ ಮಕ್ಕಳ ಮೂಗಿನ ಮೇಲೆ ಖಾನ್‌ ಅವರ ತಂಡ ಬ್ಯಾಗ್‌ ವಾಲ್ವ್‌ ಮಾಸ್ಕ್‌ (ಅಂಬು ಬ್ಯಾಗ್‌) ಇಟ್ಟು, ಗಾಳಿಯನ್ನು ಕೈಯಿಂದ ಪಂಪ್‌ ಮಾಡತೊಡಗಿತು. ಮೂರು ವರ್ಷದ ಹುಡುಗಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿತ್ತು. ಅಂಬು ಬ್ಯಾಗ್‌ನಿಂದ ಎಷ್ಟೇ ಆಮ್ಲಜನಕವನ್ನು ಪಂಪ್‌ ಮಾಡಲು ಯತ್ನಿಸಿದರೂ ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಆಮ್ಲಜನಕದ ಕೊರತೆ ಇರುವುದು ಗಮನಕ್ಕೆ ಬಂದ ಮಕ್ಕಳ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಮಧ್ಯೆ, ಖಾನ್‌ ಅವರ ಮುಂದೆ ಎರಡು ಸವಾಲುಗಳಿದ್ದವು. ಒಂದು, ಕಂದಮ್ಮಗಳು ಸಾವಿನ ಮನೆಯ ಕದ ತಟ್ಟದಂತೆ ತಡೆಯುವುದು, ಮತ್ತೊಂದು, ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥೆ ಮಾಡುವುದು.

ಸಿಲಿಂಡರ್‌ ಪೂರೈಸಬೇಕಾಗಿದ್ದ ಫೈಜಾಬಾದ್‌ನ ಇಂಪೆರಿಯಲ್‌ ಗ್ಯಾಸ್‌ ಲಿಮಿಟೆಡ್‌ನ ಲಾರಿಯ ಸುಳಿವೇ ಇರಲಿಲ್ಲ. ಪಕ್ಕದ ಆಸ್ಪತ್ರೆಯಿಂದ ತಮ್ಮದೇ ಕಾರಿನಲ್ಲಿ ಮೂರು ಸಿಲಿಂಡರ್‌ಗಳನ್ನು ಖಾನ್‌ ಕೇಳಿ ತಂದಿದ್ದರು. ಇನ್ನೂ ಎಂಟು ಆಸ್ಪತ್ರೆಗಳನ್ನು ಅವರು ಸಂಪರ್ಕಿಸಿದ್ದರು. ಎನ್ಸೆಪಾಲಿಟಿಸ್‌ (ಮಿದುಳಿನ ಉರಿಯೂತ) ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳ ವಾರ್ಡ್‌ಗೆ ಪ್ರತೀ ಮುಕ್ಕಾಲು ಗಂಟೆಗೆ 16 ಸಿಲಿಂಡರ್‌ಗಳು ಬೇಕಿದ್ದವು. ಸ್ಥಳೀಯ ಜಿಡಾ ಎಂಬ ಸಿಲಿಂಡರ್‌ ಪೂರೈಕೆ ಸಂಸ್ಥೆಯನ್ನೂ ಅವರು ಸಂಪರ್ಕಿಸಿದ್ದರು. ತಮ್ಮ ಸಂಸ್ಥೆಯ ಜತೆಗಿದ್ದ ಒಪ್ಪಂದವನ್ನು ಕಾಲೇಜು ರದ್ದುಗೊಳಿಸಿ, ಫೈಜಾಬಾದ್‌ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದ್ದರಿಂದ ಜಿಡಾ ಸಂಸ್ಥೆ ಸಿಲಿಂಡರ್‌ ಪೂರೈಸಲು ಒಪ್ಪಲಿಲ್ಲ. ಖಾನ್‌ ಜೇಬಿನಿಂದ ₹ 20 ಸಾವಿರ ವ್ಯಯಿಸಿ ಖಲೀಲಾಬಾದ್‌ನಿಂದ ಸಿಲಿಂಡರ್‌ಗಳನ್ನು ತರಿಸಲು ವ್ಯವಸ್ಥೆ ಮಾಡಿದರು. ಸಿಲಿಂಡರ್‌ಗಳನ್ನು ತರಲು ವಾಹನಗಳು ಸಿಗದಾದಾಗ ಸಶಸ್ತ್ರ ಸೀಮಾ ದಳದ (ಎಸ್‌ಎಸ್‌ಬಿ) ಮುಖ್ಯಸ್ಥರನ್ನು ಸಂಪರ್ಕಿಸಿ, ಮಿಲಿಟರಿ ಟ್ರಕ್‌ನ ಸೇವೆಯನ್ನೂ ಪಡೆದುಕೊಂಡರು. ಟ್ರಕ್‌ ಜತೆಗೆ 12 ಜವಾನರನ್ನೂ ಎಸ್‌ಎಸ್‌ಬಿ ಕಳುಹಿಸಿಕೊಟ್ಟಿತು. ಈ ಎಲ್ಲ ವಿವರಗಳನ್ನೂ ಖಾನ್‌ ವಿವರವಾಗಿ ದಾಖಲಿಸಿದ್ದಾರೆ.

ಸಿಲಿಂಡರ್‌ ತರಿಸಿಕೊಳ್ಳಲು ನಡೆಸಿದ ಎಲ್ಲ ಯತ್ನಗಳ ನಡುವೆ ಮಾರನೇ ದಿನದ ಬೆಳಗಿನ ಹತ್ತರೊಳಗೆ 23 ಮಕ್ಕಳು, 18 ಹಿರಿಯರು ಪ್ರಾಣವಾಯು ಇಲ್ಲದೆ ಪ್ರಾಣ ತೆತ್ತರು. ಜಿಲ್ಲಾಧಿಕಾರಿ ರಾಜೀವ್‌ ರೌತೇಲಾ ಅವರು ಆಗಸ್ಟ್‌ 11ರಂದು ಖಾನ್‌ ಅವರನ್ನು ಸಂಪರ್ಕಿಸಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಲ್ಲದೆ ಸಿಲಿಂಡರ್‌ಗಳನ್ನು ಪೂರೈಸುವ ಭರವಸೆ ನೀಡಿದರು. ಮೊದಲು ಸಿಲಿಂಡರ್‌ ಪೂರೈಸಲು ನಿರಾಕರಿಸಿದ್ದ ಜಿಡಾ ಸಂಸ್ಥೆಯು ತಾತ್ಕಾಲಿಕವಾಗಿ ಆಮ್ಲಜನಕದ ವ್ಯವಸ್ಥೆ ಮಾಡಿತು. ಬಳಿಕ ಫೈಜಾಬಾದ್‌ನಿಂದಲೂ ಸಿಲಿಂಡರ್‌ಗಳನ್ನು ಹೊತ್ತ ಟ್ರಕ್‌ ಬಂತು. ವಿಷಯ ಮಾಧ್ಯಮಗಳಿಗೆ ಗೊತ್ತಾಗಿ, ವರದಿಗಾರರು ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ಖಾನ್‌ ಅವರ ಪ್ರಯತ್ನಗಳ ಕುರಿತು ಗೊತ್ತಾಗಿ, ಅವರನ್ನು ಹೆಚ್ಚಿನ ಪ್ರಾಣಹಾನಿ ತಪ್ಪಿಸಿದ ಹೀರೊ ಎಂದು ಕೊಂಡಾಡಿ ಬರೆದರು.

ಆಗಸ್ಟ್‌ 12ರಂದು ಆಸ್ಪತ್ರೆಗೆ ಧಾವಿಸಿದ ರಾಜ್ಯ ಆರೋಗ್ಯ ಸಚಿವ ಸಿದ್ಧಾರ್ಥನಾಥ ಸಿಂಗ್‌ ಮತ್ತು ವೈದ್ಯಕೀಯ ಸಚಿವ ಆಶುತೋಷ್‌ ಟಂಡನ್‌, ‘ಆಮ್ಲಜನಕದ ಕೊರತೆಯಿಂದ ಮಕ್ಕಳ ಸಾವು ಸಂಭವಿಸಿಲ್ಲ. ಮಿದುಳಿನ ಉರಿಯೂತದಿಂದ ಆಗಸ್ಟ್‌ನಲ್ಲಿ ಪ್ರತಿವರ್ಷ ಮಕ್ಕಳ ಸಾವುಗಳು ಸಂಭವಿಸುವುದು ಮಾಮೂಲಿ’ ಎಂದು ತಿಪ್ಪೆ ಸಾರಿಸಿಬಿಟ್ಟರು. ಆಮೇಲೆ ಬಂದ ಆಗಿನ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಕೂಡ ಆಮ್ಲಜನಕದ ಕೊರತೆ ಎದುರಾಗಿದ್ದನ್ನು ಮರೆಮಾಚಿಸಿಬಿಟ್ಟರು.

ಈ ಮಧ್ಯೆ, ಆಗಸ್ಟ್‌ 13ರಂದು ದ್ರವೀಕೃತ ಆಮ್ಲಜನಕದ ಟ್ಯಾಂಕರ್‌ ಸಹ ಬಂತು. ಆಮ್ಲಜನಕ ಪೂರೈಕೆ ಮತ್ತೆ ಯಥಾಪ್ರಕಾರ ಶುರುವಾಯಿತು. 48 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಇದ್ದು, ಎಲ್ಲ ವ್ಯವಸ್ಥೆ ಮಾಡಿದ್ದ ಖಾನ್‌ ಮನೆಗೆ ಹೊರಟರು. ಆದರೆ, ಬೆಳಿಗ್ಗೆ ಎದ್ದು ಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದರೆ ಘಟನೆಯ ಕುರಿತು ಹೊಸ ಸಂಕಥನವನ್ನೇ ಕಟ್ಟಲಾಗಿತ್ತು. ಕೆಲವು ಪುಟ್ಟ ಜೀವಗಳನ್ನಾದರೂ ಉಳಿಸಲು ಹೆಣಗಿದ ಖಾನ್‌ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಪ್ರಭುತ್ವದ ಪುಂಗಿಯ ನಾದಕ್ಕೆ ತಕ್ಕಂತೆ ಮಾಧ್ಯಮ ಕೂಡ ಹೆಡೆಯಾಡಿಸಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಜತೆಗೆ ನಡ್ಡಾ ಅವರೂ ಇದ್ದರು. ಖಾನ್‌ ಅವರಿಗೆ ಮುಖ್ಯಮಂತ್ರಿ ಅವರನ್ನು ಕಾಣಲು ಬುಲಾವ್‌ ಬಂತು. ಶಹಬ್ಬಾಷ್‌ಗಿರಿ ಸಿಗಬಹುದು ಅಂದುಕೊಂಡು ಬಂದಿದ್ದ ಖಾನ್‌ ಅವರಿಗೆ ಶಾಕ್‌ ಕಾದಿತ್ತು. ಮುಂದಿನ ಘಟನೆಯನ್ನು ಅವರ ವಿವರಣೆಯಲ್ಲೇ ಕೇಳಿ:

ಮುಖ್ಯಮಂತ್ರಿ ಪ್ರಶ್ನಿಸಿದರು– ‘ನೀನೇ ಏನು ಡಾ. ಕಫೀಲ್‌ ಖಾನ್‌?’

‘ಹೌದು ಸರ್‌’

‘ಸಿಲಿಂಡರ್‌ ವ್ಯವಸ್ಥೆ ಮಾಡಿದ್ದು ನೀನೇ ಏನು?’

‘ಹೌದು ಸರ್‌’

‘ಆ 4–5 ಸಿಲಿಂಡರ್‌ ತಂದು ನೀನು ಎಷ್ಟು ಜೀವ ಉಳಿಸಿದೆ? ಸಿಲಿಂಡರ್‌ ವ್ಯವಸ್ಥೆ ಮಾಡಿದ ಮೇಲೆ ಹೀರೊ ಆದೆ ಎಂದು ನೀನು ಭಾವಿಸಿರಬಹುದು. ನಿನ್ನನ್ನು ಆಮೇಲೆ ನೋಡಿಕೊಳ್ಳುವೆ’

ಖಾನ್‌, ಆ ಕ್ಷಣದಲ್ಲೇ ಖಳನಾಯಕನಾಗಿ ಪ್ರತಿಬಿಂಬಿತವಾಗಿಬಿಟ್ಟಿದ್ದರು. ಆಮ್ಲಜನಕ ಅಭಾವದ ಸುದ್ದಿಯನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿದ ಆಪಾದನೆಯನ್ನೂ ಅವರ ಮೇಲೆ ಹೊರಿಸಲಾಗಿತ್ತು. ಸ್ಪಷ್ಟನೆ ನೀಡಲು ಮುಂದಾದ ಅವರನ್ನು ಹಿರಿಯ ಅಧಿಕಾರಿಗಳು ತಡೆದಿದ್ದರು. ಆದರೆ, ಖಾನ್‌ ಅವರನ್ನು ತಪ್ಪಿತಸ್ಥ ಎಂದು ಬಿಂಬಿಸಲು ಹೊರಟ ಯತ್ನಗಳೆಲ್ಲ ವಿಫಲವಾಗಿದ್ದವು. ಮೊದಲ ತನಿಖಾ ವರದಿಯಲ್ಲಿ ಖಾನ್‌ ಅವರಿಂದ ಪ್ರಮಾದವಾದ ಕುರಿತು ಯಾವ ಉಲ್ಲೇಖವೂ ಇರಲಿಲ್ಲ. ಆದರೆ, ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಖಾನ್‌ ಸೇರಿದಂತೆ ಒಂಬತ್ತು ಜನ ತಪ್ಪಿತಸ್ಥರು ಎಂದು ವರದಿ ನೀಡಿತು. ಮಿಕ್ಕ ಎಂಟು ಜನರನ್ನು ಬಿಟ್ಟು, ಇವರ ವಿರುದ್ಧವಷ್ಟೇ ಕ್ರಮ ಕೈಗೊಳ್ಳಲು ಉತ್ಸಾಹ ತೋರಲಾಯಿತು. ಎಫ್‌ಐಆರ್‌ ಕೂಡ ದಾಖಲಾಯಿತು. ಖಾನ್‌ ಅವರನ್ನು ಬಂಧಿಸಿ ಜೈಲಿಗೂ ಅಟ್ಟಲಾಯಿತು. ಆದರೆ, ಕೋರ್ಟ್‌ಗಳಲ್ಲಿ ಅವರ ವಿರುದ್ಧದ ಒಂದೂ ಆರೋಪ ನಿಲ್ಲಲಿಲ್ಲ. ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ದೇಶದ್ರೋಹಿ (ಕೋರ್ಟ್‌ನಲ್ಲಿ ಆ ಆರೋಪ ಕೂಡ ನಿಲ್ಲಲಿಲ್ಲ) ಎಂದು ಹಣೆಪಟ್ಟಿ ಕಟ್ಟಿ ಸೇವೆಯಿಂದ ವಜಾ ಮಾಡಲಾಯಿತು.

ಜೈಲಿನಲ್ಲಿ ಈ ವೈದ್ಯ ಕಂಡುಂಡ ಅನುಭವಗಳ ವಿವರ ನೋಡಿದರೆ, ಅದು ನಮ್ಮ ಪರಪ್ಪನ ಅಗ್ರಹಾರ ಜೈಲಿನ ವಾತಾವರಣವನ್ನು ನೆನಪಿಸುತ್ತದೆ. ಜೈಲಿನಿಂದ ಹೊರಬಂದ ಮೇಲೆ ಸ್ಮೈಲ್‌ ಫೌಂಡೇಷನ್‌ ಸ್ಥಾಪಿಸಿದ ಅವರು ‘ಹೆಲ್ತ್‌ ಫಾರ್‌ ಆಲ್‌’ ಆಂದೋಲನ ಕಟ್ಟಿದರು. ‘ಡಾಕ್ಟರ್ಸ್‌ ಆನ್‌ ರೋಡ್‌’ ಯೋಜನೆ ಮೂಲಕ ಕುಗ್ರಾಮಗಳಲ್ಲಿ ನರಳುತ್ತಿರುವ ರೋಗಿಗಳಿಗೂ ಚಿಕಿತ್ಸೆ ಕಲ್ಪಿಸಿದರು. ಅವರ ಆ ಕೈಂಕರ್ಯ ಈಗಲೂ ನಡೆಯುತ್ತಿದೆ.

ದುರಂತ ಕಥೆಯನ್ನು ಓದಿದ ಮೇಲೆ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳಿವು:

1. ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಅತ್ಯಂತ ಕಿರಿಯ ಅಧಿಕಾರಿ ಖಾನ್‌. ಅವರಿಗೆ ಆಡಳಿತಾತ್ಮಕ ಇಲ್ಲವೆ ಆರ್ಥಿಕ ಅಧಿಕಾರಗಳೆರಡೂ ಇರಲಿಲ್ಲ. ಕರ್ತವ್ಯಲೋಪ ಎಸಗಿದ ಮೇಲಧಿಕಾರಿಗಳನ್ನು ಬಿಟ್ಟು ನಿರಪರಾಧಿಯಾದ ಖಾನ್‌ ಅವರನ್ನು ಬಲಿಪಶು ಮಾಡಿದ್ದೇಕೆ?

2. ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಲ್ಲದೆ ಆರೋಗ್ಯ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರು, ವಿಭಾಗದ ಮುಖ್ಯಸ್ಥರನ್ನೆಲ್ಲ ಹೆಸರಿಸಿಯೇ ಖಾನ್‌, ಅವರ ಮೇಲೆ ಹಲವು ಗುರುತರ ಆರೋಪ ಮಾಡಿದ್ದಾರೆ. ತಾವೇನೂ ತಪ್ಪು ಮಾಡಿಲ್ಲ ಎಂದಾದರೆ ಮಾನನಷ್ಟ ಮೊಕದ್ದಮೆ ಹೂಡದೆ ಅವರೆಲ್ಲ ತೆಪ್ಪಗಿರುವುದೇಕೆ?

3. ಬೆನ್ನಿನ ಮೂಳೆಯೇ ಇಲ್ಲದಂತೆ ಉತ್ತರ ಪ್ರದೇಶದ ಅಷ್ಟೂ ಐಎಎಸ್‌ ಅಧಿಕಾರಿಗಳು ಸರ್ಕಾರದ ಸಂಕಥನಕ್ಕೆ ಜೋತುಬಿದ್ದು, ಖಾನ್‌ ವಿರುದ್ಧ ಚಿತಾವಣೆ ಮಾಡಿದ್ದೇಕೆ? ಖಾನ್‌ ಮಾಡಿದ ಮಾನವೀಯ ಕಾರ್ಯಕ್ಕಾಗಿ ಮೊದಲು ಅವರನ್ನು ಹಾಡಿಹೊಗಳಿದ ಮಾಧ್ಯಮ, ಉಸರವಳ್ಳಿಯಂತೆ ಬಣ್ಣ ಬದಲಾಯಿಸಿ, ಅವರನ್ನು ಖಳನಾಯಕನಂತೆ ಬಿಂಬಿಸಿದ್ದೇಕೆ?

4. ಬಾಯಿ ತೆರೆದರೆ ‘ಉತ್ತರ ಪ್ರದೇಶ ಸರ್ಕಾರ ಎಲ್ಲರನ್ನೂ ಸುರಕ್ಷಿತವಾಗಿಟ್ಟಿದೆ’ ಎಂದು ಹೇಳುವ ಪ್ರಧಾನಿಗೆ, ಮಕ್ಕಳು ಅನ್ಯಾಯವಾಗಿ ಜೀವ ಬಿಡುವಂತಾಗಿದ್ದು, ನಿರಪರಾಧಿಯು ಜೈಲು ಪಾಲಾಗುವಂತಾಗಿದ್ದು ಕಣ್ಣಿಗೆ ಕಾಣಲೇ ಇಲ್ಲವೇ?

5. ‘ನನ್ನ ಜಾಗದಲ್ಲಿ ಯಾರೇ ಇದ್ದರೂ ಇದೇ ಗತಿ ಆಗುತ್ತಿತ್ತು’ ಎಂದೇನೋ ಖಾನ್‌ ಹೇಳಿದ್ದಾರೆ. ಆದರೆ, ಅವರು ಮುಸ್ಲಿಂ ಎನ್ನುವ ಕಾರಣಕ್ಕೇ ಸರ್ಕಾರ ಈ ಸೇಡಿನ ಕ್ರಮ ಕೈಗೊಂಡಿತಲ್ಲವೇ?

ಚುನಾವಣೆಯ ಅಬ್ಬರದಲ್ಲಿ ಉತ್ತರಪ್ರದೇಶ ರಾಜ್ಯವೇ ಮುಳುಗಿ ಹೋಗಿರುವ ಈ ಹಂತದಲ್ಲಿ ಮೇಲಿನ ಪ್ರಶ್ನೆಗಳು ಯಾರ ಕಿವಿಯನ್ನು ತಲುಪಬಲ್ಲವು? ಉತ್ತರ ಹೇಳುವವರು ಯಾರಿದ್ದಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT