ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ | ಯೋಗನರಸಿಂಹಂ: ಪಾಂಡಿತ್ಯದ ಗಣಿ...125 ರ ಈ ಮಣಿ

Last Updated 14 ಮೇ 2022, 19:30 IST
ಅಕ್ಷರ ಗಾತ್ರ

ಮಧುರ ಧ್ವನಿ, ಆಳವಾದ ವಿಚಾರದ ವಾಗ್ಗೇಯಕಾರರಾಗಿದ್ದ ಯೋಗನರಸಿಂಹಂ ಅವರ 125ನೇ ವರ್ಷದ ಜಯಂತಿಯ ಸಂದರ್ಭವಿದು. ಆ ನೆಪದಲ್ಲೊಂದು ಈ ಮೇರು ವ್ಯಕ್ತಿತ್ವದ ಮೇಲೊಂದು ಇಣುಕು ನೋಟ

ಯಾರನ್ನೂ ನೋಯಿಸದ, ಎಲ್ಲರನ್ನೂ ಅವರಿಚ್ಛೆಯಂತೆ ಬದುಕಲು ಬಿಡುತ್ತಿದ್ದಂತಹ ಆರ್ದ್ರ ಜೀವಿ; ಇಂದಿನ ಕಾಲಮಾನಕ್ಕೆ ಅನ್ಯಗ್ರಹ ಜೀವಿಯೇನೋ ಎಂದು ಭಾಸವಾಗುವ ಉದಾತ್ತ ಚೇತನ ಖ್ಯಾತ ವಾಗ್ಗೇಯಕಾರ ಎಚ್. ಯೋಗನರಸಿಂಹಂ. ಮೇ 17 ಅವರ 125ನೇ ಜಯಂತಿ (ಜನನ 1897). ಸಂಗೀತ, ಸಂಸ್ಕೃತ, ಇಂಗ್ಲಿಷ್ ಭಾಷಾಶಾಸ್ತ್ರಗಳ ಅಧ್ಯಯನ, ಅಧ್ಯಾಪನ, ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ಇವರು ಸದ್ದುಗದ್ದಲವಿಲ್ಲದೆ ಬದುಕಿದವರು. ಆದರೆ ತಮ್ಮ ಒಡನಾಟಕ್ಕೆ ಬಂದವರೆಲ್ಲರ ಮೇಲೆಯೂ ಅಳಿಸಲಾಗದ ಪರಿಣಾಮವನ್ನು ಬೀರಿದರು. ಯಾವ ವಶೀಲಿಬಾಜಿ ಇಲ್ಲದೆ ಸ್ವಂತ ವರ್ಚಸ್ಸಿನಿಂದ ಬೆಳಗಿ, ಮಕ್ಕಳನ್ನೂ ಹಾಗೆಯೇ ಬೆಳಗುವಂತೆ ಬೆಳೆಸಿದ ಮಹಾನುಭಾವರು.

ಹೊಳೆನರಸೀಪುರದ ನಾರಣಪ್ಪ ಮತ್ತು ಪಾಲಳ್ಳಿ ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾದ ಯೋಗನರಸಿಂಹಂ ಅವರ ಅಧ್ಯಯನವೆಲ್ಲಾ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ. ಉತ್ಕೃಷ್ಟ ದರ್ಜೆಯ ವಿದ್ಯಾರ್ಥಿ. ಪ್ರೊ. ಹಿರಿಯಣ್ಣ,
ಡಾ. ರಾಧಾಕೃಷ್ಣನ್, ಪ್ರೊ. ವಾಡಿಯಾ ಮುಂತಾದವರ ಅಚ್ಚುಮೆಚ್ಚಿನ ಶಿಷ್ಯ. ಸಂಸ್ಕೃತ, ತತ್ತ್ವಶಾಸ್ತ್ರ, ಆಂಗ್ಲಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯ. ಆದರೆ, ಅವರು ಮನಸಾರೆ ಒಲಿದು, ತಮ್ಮನ್ನು ಕೊಟ್ಟುಕೊಂಡಿದ್ದು ಸಂಗೀತಕ್ಕೆ.

1917ರಲ್ಲೇ ಮೈಸೂರಿನ ಮಹಾರಾಜ ಕಾಲೇಜಿನ ಸಂಸ್ಕೃತ ಟ್ಯೂಟರ್ ಆದರು. ಅತ್ಯಂತ ಪ್ರೀತಿಯಿಂದ, ರಸಭರಿತವಾಗಿ, ವಿದ್ವತ್‍ಪೂರ್ಣವಾಗಿ ಆದರೆ ಎಲ್ಲರಿಗೂ ಮನದಟ್ಟಾಗುವಂತೆ ಪಾಠ ಮಾಡುತ್ತಿದ್ದರು ಎಂದು ಅವರ ವಿದ್ಯಾರ್ಥಿ, ಕವಿ ವಿ. ಸೀತಾರಾಮಯ್ಯ ಹೇಳುತ್ತಿದ್ದರು. ನಂತರದಲ್ಲಿ ಅವರು ಶಿಕ್ಷಣ ಇಲಾಖೆಯಲ್ಲಿ ವಿಭಿನ್ನ ಸ್ಥಳಗಳಲ್ಲಿ, ವಿಭಿನ್ನ ಹುದ್ದೆಗಳನ್ನು ನಿರ್ವಹಿಸಿ, ಡಿಸ್ಟ್ರಿಕ್ಟ್‌ ಎಜುಕೇಷನ್‌ ಆಫೀಸರ್‌(ಡಿಇಒ) ಆಗಿ ನಿವೃತ್ತಿ ಹೊಂದಿದರು.

ಕೆಲಕಾಲ ಮೈಸೂರಿನ ಶಾರದಾವಿಲಾಸ ಶಿಕ್ಷಣ ಸಂಸ್ಥೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ಸಹಜ ಗಾಂಭೀರ್ಯ, ಹಿತಮಿತವಾದ ಮಧುರ ಧ್ವನಿ, ಸೌಜನ್ಯಪೂರಿತ ನಡವಳಿಕೆ, ಸರಳ ಸದಭಿರುಚಿಯ ಉಡುಗೆ ತೊಡುಗೆ, ನಿಷ್ಕೃಷ್ಟವಾದ ಜ್ಞಾನ, ಆಳವಾದ ವಿಚಾರ, ಇವು ಇವರ ವ್ಯಕ್ತಿತ್ವದ ಹೆಗ್ಗುರುತುಗಳಾಗಿದ್ದವು. ಇಂತಹ ಶುದ್ಧ ಸುಸಂಸ್ಕೃತ ಜೀವಕ್ಕೆ ಸಹಧರ್ಮಿಣಿಯಾಗಿ ಬಂದವರು ಸರಸ್ವತಿ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸಮಾಜಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದ, ಗೋಖಲೆಯವರ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿದ್ದ ವಾಜಪೇಯಂ ವೆಂಕಟಸುಬ್ಬಯ್ಯನವರ ಮಗಳು. ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆ, ಸರಳತೆ, ಕಠಿಣ ಪರಿಶ್ರಮ ಮುಂತಾದ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಮಹಿಳೆ.

ದಿನನಿತ್ಯದ ಈ ಬದುಕಿನ ನಡುವೆ ಸಂಗೀತ ಅವರ ಉಸಿರಿನ ಜೊತೆಗೇ ಸೇರಿಹೋಗಿತ್ತು. ಸಂಗೀತಲೋಕದಲ್ಲಿ ತಾನೇನೋ ಆಗಬೇಕು, ಕೀರ್ತಿ ಪಡೆದು ಹೆಸರು ಮಾಡಬೇಕು ಎನ್ನುವ ಆಸೆಯೇ ಅವರಿಗಿರಲಿಲ್ಲ. ವೇದಿಕೆ ಕಲಾವಿದರಾಗುವ ಕನಸು ಎಂದೂ ಅವರದಾಗಿರಲಿಲ್ಲ. ತಮ್ಮ ಆನಂದಕ್ಕೆ ತಾವು ಹಾಡಿಕೊಳ್ಳುತ್ತಿದ್ದರು. ದೇಹಕ್ಕೆ ಉಸಿರಿನಷ್ಟೇ ಸಹಜವಾಗಿ ಸಂಗೀತ ಅವರೊಡನಿತ್ತು. ಮನೆಯಲ್ಲಿದ್ದ ಸಂಗೀತಪ್ರೀತಿ ಇವರಲ್ಲಿಯೂ ಚಿಗುರೊಡೆದಿತ್ತು. ವಾಸುದೇವಾಚಾರ್ಯರಲ್ಲಿ ಸೊಗಸಾದ ಪಾಠವಾಗಿತ್ತು. ಹಿತವಾದ, ಶ್ರುತಿಶುದ್ಧವಾದ, ಮೆಲುವಾದ, ಮಧುರಕಂಠ. ತಾರಸ್ಥಾಯಿಯಲ್ಲಿ ಅಂತಹ ಸೌಖ್ಯವಿರಲಿಲ್ಲ. ನೆಮ್ಮದಿಯಾದ, ಆಡಂಬರ–ಅಬ್ಬರ ಇಲ್ಲದ, ಕೇಳುಗರ ಹೃದಯದೊಡನೆ ಸಂವಾದಿಸುವ ಹಾಡುಗಾರಿಕೆ. ಅವರು ಅತ್ಯಂತ ಸಂವೇದನಾಶೀಲ ಕೇಳುಗರು ಮತ್ತು ವಿಮರ್ಶಕರೂ ಆಗಿದ್ದರು.

ಆರಂಭದಲ್ಲಿ ಶ್ಲೋಕಗಳಿಗೆ ರಾಗ ಸಂಯೋಜಿಸುತ್ತಿದ್ದರು. ಓಂಕಾರಪಂಜರಶುಕೀಂ, ಕಾಳಿದಾಸನ ಶ್ಯಾಮಲಾದಂಡಕ ಅವುಗಳಲ್ಲಿ ತುಂಬಾ ಹೆಸರುವಾಸಿ. ನಂತರದಲ್ಲಿ ಕರ್ನಾಟಕ ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ದೇವ ಎಂಬ ಅಂಕಿತವಿಟ್ಟು ತೆಲುಗು, ಸಂಸ್ಕೃತ ಮತ್ತು ಕನ್ನಡದಲ್ಲಿ ವಾಗ್ಗೇಯ ಕೃತಿಗಳನ್ನು ರಚಿಸಿದರು. ಗೀತಕುಸುಮಾಂಜಲಿ ಇವರ ರಚನೆಗಳ ಸಂಕಲನ. ಹಲವು ರಚನೆಗಳು ತೀರಾ ಅಪರೂಪದ ರಾಗಗಳಲ್ಲಿವೆ. ಇದಕ್ಕೆ ಅವರಿಗೆ ತ್ಯಾಗರಾಜರೇ ಮೇಲ್ಪಂಕ್ತಿ. ಇವರ ರಚನೆಗಳಲ್ಲಿ ರಾಷ್ಟ್ರಧ್ವಜವಂದನೆಯೂ ಇದೆ. ಇವರ ಕೃತಿಗಳ ಸೊಬಗು ಮತ್ತು ವಿದ್ವತ್ತಿಗೆ ಮಾರುಹೋದ ಎಂ.ಎಸ್. ಸುಬ್ಬುಲಕ್ಷ್ಮಿಯವರು ಇವರ ಕೃತಿಗಳನ್ನು ಹಾಡಿ ಒಂದು ಧ್ವನಿಮುದ್ರಿಕೆಯನ್ನೇ ಹೊರತಂದರು.

ಶ್ರೀಯುತರು ವೀಣೆ ಶೇಷಣ್ಣ ಮತ್ತು ಮೈಸೂರು ಸದಾಶಿವರಾಯರ ಕೃತಿಗಳ ಸಂಕಲನವನ್ನು ಸಂಪಾದಿಸಿದ್ದಾರೆ. ಬರ್ಟ್ವಂಡ್‌ ರಸೆಲ್ಲನ ಕಾನ್‍ಕ್ವೆಸ್ಟ್ ಆಫ್ ಹ್ಯಾಪಿನೆಸ್ ಮತ್ತು ಮಹರ್ಷಿ ಕರ್ವೆಯವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕ ಅವರಿಗೆ ಪ್ರಿಯವಾದ ಮತ್ತೊಂದು ಕ್ಷೇತ್ರವಾಗಿತ್ತು. ಭಾಸನ ಊರುಭಂಗವನ್ನು ಮಹಾರಾಜ ಕಾಲೇಜಿನಲ್ಲಿ ಪ್ರದರ್ಶಿಸಿದ್ದರು. ಆಕಾಶವಾಣಿಗಾಗಿ ಕಾಳಿದಾಸನ ಶಾಕುಂತಲವನ್ನು ಅಳವಡಿಸಿದ್ದರು. ಎಡಿಎ ರಂಗಮಂದಿರದಲ್ಲಿ ಹಲವು ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಫ್ರೆಂಚ್ ನಾಟಕಕಾರ ಮೋಲಿಯರ್‌ನ ನಾಟಕವನ್ನು ಕನ್ನಡಕ್ಕೆ ‘ಮನ್ಸಿಲ್ಲದ್ಮದ್ವೆ’ ಎಂದು ಭಾಷಾಂತರಿಸಿದ್ದರು.

ತೆರೆದ ಮನಸ್ಸಿನ ಯೋಗನರಸಿಂಹಂ ಅವರಲ್ಲಿ ಕರ್ಮಠತೆ ಎನ್ನುವುದೇ ಇರಲಿಲ್ಲ. ಹಿಂದುಸ್ತಾನಿ, ಘಜಲ್, ಸಿನಿಮಾ ಸಂಗೀತವನ್ನೂ ಹೀಗೆ ಎಲ್ಲಾ ಬಗೆಯ ಸಂಗೀತವನ್ನು ಸುಖಿಸುತ್ತಿದ್ದರು. ಆಸಕ್ತಿ ಇರುವುದನ್ನು ಕಲಿಯುವುದೇ ಶಿಕ್ಷಣ ಎಂದು ಭಾವಿಸಿ ಮಕ್ಕಳಿಗೆ ಅವರವರ ಆಸಕ್ತಿಯ ಬೆನ್ಹತ್ತಲು ಅವಕಾಶ ನೀಡಿದ್ದರು. ವ್ಯಕ್ತಿಸ್ವಾತಂತ್ರ್ಯವನ್ನು ತುಂಬಾ ಗೌರವಿಸುತ್ತಿದ್ದರು. ದ್ವೇಷ ಹಾಗೂ ಅಸಹನೆ ಎನ್ನುವುದೇ ಅವರಲ್ಲಿರಲಿಲ್ಲ. ಅಸಹನೆಯ ದಳ್ಳುರಿಯಲ್ಲಿ ಬೆಂದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಮಗೆ ಮಾದರಿಯಾಗಬೇಕಾದಂಥವರು ಯೋಗನರಸಿಂಹಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT