ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ–ಧರ್ಮಗಳ ಎಲ್ಲೆ ಮೀರಿ: ಯಕ್ಷ ಸಾಮರಸ್ಯ

Last Updated 9 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಪುರಾಣ ಕತೆಗಳ ಪ್ರಸಾರಕ್ಕಾಗಿ ಹುಟ್ಟಿಕೊಂಡಿದ್ದರೂ ಯಕ್ಷಗಾನವು ಜಾತಿ–ಧರ್ಮಗಳ ಎಲ್ಲೆ ಮೀರಿ ಮನೆಮಾತಾದ ಕಲೆ. ಯಕ್ಷಗಾನದ ಪಟ್ಟುಗಳನ್ನು ಒಲಿಸಿಕೊಂಡು, ಈ ಕಲೆಯ ಸೆಲೆಯನ್ನು ಸಮೃದ್ಧಗೊಳಿಸುವುದಕ್ಕೆ ಶ್ರಮಿಸಿದ ಮುಸ್ಲಿಂ ಕಲಾವಿದರನೇಕರಿದ್ದಾರೆ. ಹತ್ತಾರು ಮುಸ್ಲಿಂ ಕಲಾವಿದರು ಯಕ್ಷಗಾನಕ್ಕೆ ಮಾನ, ಸಮ್ಮಾನ ತಂದುಕೊಡುವುದರ ಜೊತೆಗೆ ತಾವೂ ಗೌರವ ಪಡೆದಿದ್ದಾರೆ. ವೇಷಭೂಷಣ, ಪ್ರಸಾಧನ, ನಾಟ್ಯ ಅಥವಾ ನಟನೆಯಲ್ಲಿ ಸೈ ಎನಿಸಿಕೊಂಡ, ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಲೆ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಅನೇಕ ಕಲಾವಿದರು ಯಕ್ಷರಸಿಕರ ಮನದ ರಂಗಸ್ಥಳದಲ್ಲಿ ಈಗಲೂ ಸ್ಥಾನಪಡೆದಿದ್ದಾರೆ.

ಅರ್ಕುಳದ ‘ಒಡೆಯರ್‌ ಮಾಮ’: ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ಡಾ.ಎಫ್‌.ಎಚ್‌.ಒಡೆಯರ್‌ ಅವರದು ಪ್ರಸಿದ್ಧ ಹೆಸರು. ‘ಒಡೆಯರ್‌’ ಎಂಬ ಹೆಸರು ಕೇಳಿದ ಬಹಳಷ್ಟು ಮಂದಿಗೆ ಅವರು ಮುಸ್ಲಿಂ ಎಂಬುದು ತಿಳಿದಿರಲಿಕ್ಕಿಲ್ಲ. ಗುಂಗುರು ಕೂದಲಿನ ಅಜಾನುಬಾಹು ವ್ಯಕ್ತಿತ್ವದ ಅವರು ‘ಡಾಕ್ಟ್ರು ಮಾಮ’, ‘ಒಡೆಯರ್‌ ಮಾಮ’ ಎಂದೇ ಪ್ರಸಿದ್ಧರಾಗಿದ್ದರು.

ಒಡೆಯರ್ ಅವರು 1903ರ ಮಾರ್ಚ್‌ 15ರಂದು ಅರ್ಕುಳದ ‌ಬ್ಯಾರಿ ಸಮುದಾಯದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ವಿದ್ಯಾಭ್ಯಾಸವನ್ನು ಮೇರಮಜಲು ಇಗರ್ಜಿ ಶಾಲೆಯಲ್ಲಿ ಹಾಗೂ ಬಾಸೆಲ್‌ ಮಿಷನ್‌ ಹೈಸ್ಕೂಲಿನಲ್ಲಿ ಪೂರೈಸಿದರು. 1920ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಶೌಖತ್‌ ಅಲಿಯವರು ತುಳುನಾಡಿನಲ್ಲೂ ದೇಶಪ್ರೇಮದ, ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ್ದರು. ಹಿಂದೂ–ಮುಸ್ಲಿಮರ ಏಕತೆ ಸಾರುವ ಕುರಿತು ಗಾಂಧೀಜಿಯಾಡಿದ ಮಾತಿನಿಂದ ಪ್ರೇರಣೆಗೊಂಡು ಹೋರಾಟಕ್ಕೆ ಧುಮುಕಿದ್ದ ಮುಸ್ಲಿಂ ಯುವಕರಲ್ಲಿ ಒಡೆಯರ್‌ ಅವರೂ ಒಬ್ಬರು. ತಾಳಮದ್ದಲೆ ಅರ್ಥಧಾರಿಯೂ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎನ್‌.ಎಸ್‌.ಕಿಲ್ಲೆಯವರ ಒಡನಾಟ ಅವರನ್ನು ಯಕ್ಷರಂಗದತ್ತ ಸೆಳೆಯಿತು. ಗುರುಗಳಾದ ಅರ್ಕುಳದ ಲಕ್ಷ್ಮಣ ಶಾನುಭೋಗರ ಗರಡಿಯಲ್ಲಿ ಪಳಗಿದ್ದ ಅವರಿಗೆ ಅರ್ಥಗಾರಿಕೆಯ ಪಟ್ಟುಗಳು ಬೇಗ ಒಲಿದವು. ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಪೌರಾಣಿಕ ಪ್ರಸಂಗಗಳ ಆಳ ಅಧ್ಯಯನದಿಂದ ಪಾಂಡಿತ್ಯವನ್ನೂ ಗಳಿಸಿಕೊಂಡರು. ಉತ್ತಮ ಕಂಠಸಿರಿಯನ್ನು ಹೊಂದಿದ್ದ ಒಡೆಯರ್‌ ಅರ್ಥಧಾರಿಯಾಗಿ ಆ ಕಾಲದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಎನ್‌.ಎಸ್‌.ಕಿಲ್ಲೆ ಮೊದಲಾದ ವಿದ್ವಾಂಸರ ಜತೆಗೆ ಸಮದಂಡಿಯಾಗಿ ಅರ್ಥದಾರಿಕೆ ಮಾಡುತ್ತಿದ್ದ ಒಡೆಯರ್‌, ಮುಂದೆ ತಮ್ಮದೇ ಆದ ‍‘ಒಡೆಯರ್‌ ಬಳಗ’ ಎಂಬ ಯಕ್ಷಗಾನ ಕೂಟವನ್ನು ಕಟ್ಟಿ ಬೆಳೆಸಿದರು.

ಮುಸಲ್ಮಾನನೊಬ್ಬ ಹಿಂದೂ ಪುರಾಣದ ಪಾತ್ರಗಳಿಗೆ ಲೀಲಾಜಾಲವಾಗಿ ಜೀವ ತುಂಬುವುದನ್ನು ಕಂಡು ಚಕಿತಗೊಂಡವರಿಗೆಲ್ಲ ಅವರು ಹೇಳುತ್ತಿದ್ದ ಗರ್ವದ ಮಾತುಗಳನ್ನು ಅವರ ಕುಟುಂಬದ ಜೊತೆ ಒಡನಾಟ ಹೊಂದಿದ್ದ ಲೇಖಕಿ ಚಂದ್ರಕಲಾ ನಂದಾವರ ನೆನಪಿಸಿಕೊಳ್ಳುತ್ತಾರೆ.

‘ನಾನು ಭಾರತೀಯ. ಆದ ಕಾರಣ ಭಾರತೀಯತೆಯನ್ನು ಗೌರವಿಸುವುದು ಹಾಗೂ ಅನುಸರಿಸುವುದು ನನ್ನ ಹಕ್ಕು ಎಂದು ಒಡೆಯರ್ ಹೇಳಿಕೊಳ್ಳುತ್ತಿದ್ದರು’ ಎಂದು ಚಂದ್ರಕಲಾ ಹೇಳುತ್ತಾರೆ.

ಅರ್ಕುಳದಲ್ಲಿ ಕೆಲವು ತರುಣರಿಗೆ ತಾಳಮದ್ದಲೆಯ ಅರ್ಥದಾರಿಕೆಯನ್ನೂ ಒಡೆಯರ್ ಅವರು ಕಲಿಸಿದ್ದರು. ‘ನಿಮಗೆ ಒಬ್ಬ ಮಾಪಿಳ್ಳೆ ಯಕ್ಷಗಾನದ ಅರ್ಥ ಕಲಿಸಿದ ಎಂದು ಹೇಳಿದರೆ ಅಷ್ಟೇ ಸಾಕು. ಅದುವೇ ನನಗೆ ಗುರುದಕ್ಷಿಣೆ’ ಎಂದು ಒಡೆಯರ್‌ ಅವರು ಹೇಳುತ್ತಿದ್ದರಂತೆ. ‘ತಾಳಮದ್ದಲೆಯಲ್ಲಿ ವಾಗ್ವಾದವೇ ಹೂರಣ. ಆದರೂ, ನಿರ್ವಹಿಸುವ ಪಾತ್ರಕ್ಕೆ ಯೋಗ್ಯವಲ್ಲದ, ಅನುಚಿತವಾದ ವಾಚಾಳಿತನದಿಂದ, ಸಲ್ಲದ ಮಾತುಗಾರಿಕೆಯಿಂದ ಒಡೆಯರ್‌ ಯಾವತ್ತೂ ದೂರ. ಅರ್ಥಗಾರಿಕೆಯ ಸಂದರ್ಭ
ದಲ್ಲಿ ಕುರಾನ್‌ನ ಧರ್ಮವಾಕ್ಯಗಳನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುತ್ತಿದ್ದರು’ ಎಂದು ಅವರು ವಿವರಿಸುತ್ತಾರೆ.

ಮಂತ್ರಮುಗ್ಧಗೊಳಿಸುವ ಜಬ್ಬಾರ್ ಸಮೋ: ‘18 ದಿವಸಗಳ ಈ ಅಂತರದಲ್ಲಿ ಎಂಥೆಂತಹ ವೈಚಿತ್ರ್ಯಗಳನ್ನು, ಎಂಥೆಂತಹ ಅದ್ಭುತಗಳನ್ನು ಅತಿಮಾನುಷವಾದ ಪವಾಡಸದೃಶ್ಯವಾದ ಕೃತ್ಯಗಳನ್ನು ಆಚರಿಸಲಾಯಿತು ಎಂಬುದನ್ನು ನಾನು ಪ್ರತ್ಯಕ್ಷವಾಗಿ ಕಂಡೆ...’ –ಕುರುಕ್ಷೇತ್ರದಲ್ಲಿ ನಿಂತ ಸುಯೋಧನನ ಅಂತರಂಗದ ಮಾತುಗಳಿವು.

ಜಬ್ಬಾರ್ ಸಮೋ ಅವರು ಕೌರವ ಪಾತ್ರದ ಒಳಹೊಕ್ಕು, ‘ಛಲಭರಿತ ಉತ್ಸಾಹಭರಿತವಾದ ಸ್ಫೂರ್ತಿಯುತವಾದ ನನ್ನ ಸುದೀರ್ಘ ಕಾಲದ ಬದುಕಿನಲ್ಲಿ ಯಾವುದನ್ನು ಸಾಧಿಸುವುದಕ್ಕಾಗಿ ಹಗಲಿರುಳು ನಾನು ಹಪಹಪಿಸಿದೆನೋ... ಆ ಎಲ್ಲ ನನ್ನ ಸದಿಚ್ಛೆಗಳು, ವಿಶಾಲವಾದ ಆಲೋಚನೆಗಳು ಎಲ್ಲವೂ ಕುರುಕ್ಷೇತ್ರದ ರಕ್ತದ ಕೆಸರಿನಲ್ಲಿ ತುಣುಕುಗಳಾಗಿ ಮಿಳಿತಗೊಳ್ಳುವ ದುರಂತಮಯವಾದ ವಿಷಾದದ ದೃಶ್ಯವನ್ನು ನಾನು ಕಾಣುತ್ತಿದ್ದೇನೆ...’ ಎನ್ನುತ್ತಾ ವಾಗ್ಝರಿ ಹರಿಸಲು ಶುರುವಾದರೆ ಶ್ರೋತೃಗಳು ಪುರಾಣಲೋಕಕ್ಕೆ ತೇಲಿಹೋಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಂಚಿನ ಸಂಪಾಜೆ ಎಂಬ ಪುಟ್ಟ ಊರಿನಿಂದ ಬಂದು ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರಗಳೆರಡರಲ್ಲೂ ಹೆಸರು ಮಾಡಿ ಧರ್ಮಾತೀತವಾಗಿ ಪ್ರೀತಿ ಅಭಿಮಾನ ಗಳಿಸಿರುವ ಕಲಾವಿದ ಜಬ್ಬಾರ್‌ ಸಮೋ. ಅರ್ಥ ಹೇಳಲು ಕುಳಿತಾಗ ಜಬ್ಬಾರ್‌ ಪುರಾಣ ಪಾತ್ರಗಳ ಆಳಕ್ಕೆ ಇಳಿದು ತಾವೂ ಪಾತ್ರವೇ ಆಗಿಬಿಡುವ ಪರಿ, ಪಾತ್ರಗಳನ್ನೂ ಅವರು ಕಟ್ಟಿಕೊಡುವ ರೀತಿ, ಭಾಷೆಯ ಮೇಲೆ ಅವರಿಗಿರುವ ಪ್ರಭುತ್ವ, ಶಬ್ದ ಪ್ರಯೋಗಗಳಲ್ಲಿ ತೋರುವ ಲಾಲಿತ್ಯ ಮೋಹಕವಾದುದು.

‘ಕರಾವಳಿಯದ್ದು ಪರಮ ಸಹನಶೀಲವಾದ, ಎಲ್ಲವನ್ನೂ ಧರಿಸಬಹುದಾದ ಮಣ್ಣು. ನಮ್ಮ ನಂಬುಗೆಗಳನ್ನು, ಆಚಾರಗಳನ್ನು ಸಂಸ್ಕೃತಿಗಳನ್ನು ಕಣಕಣಗಳಲ್ಲಿ ಹೊಂದಿ ಲಕಲಕನೆ ಹೊಳೆಯುವ ಮಣ್ಣಿನ ಪವಿತ್ರ ಭರತವರ್ಷವಿದು. ಇಂತಹ ಮಣ್ಣಿನ ಕಣಕಣಗಳೇ ನನ್ನಲ್ಲಿ ಯಕ್ಷ ಪ್ರೀತಿಯನ್ನು ಬೆಳೆಸಿವೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಬ್ಬಾರ್‌.

ಬಡಗಿನ ಗೌಸ್: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಾವ್ರಾಡಿಯ ಶೇಕ್‌ ಬುಡಾನ್‌ ಸಾಹೇಬ್‌ ಹಾಗೂ ಬೀಬಿ ಮಾಬಿಬಿ ದಂಪತಿಯ ಪುತ್ರ ಮಹಮ್ಮದ್‌ ಗೌಸ್‌ ಯಕ್ಷ ಕೃಷಿಯಲ್ಲಿ ಸಮೃದ್ಧ ಫಸಲನ್ನು ಕಂಡವರು. ಯಕ್ಷಗಾನ ಬಯಲಾಟ, ತಾಳಮದ್ದಳೆ, ಹರಿಕಥೆ, ಸಂಗೀತ, ಭಜನೆ ಕಾರ್ಯಕ್ರಮಗಳಿಂದ ಪ್ರೇರಿತರಾಗಿದ್ದ ಅವರು ಬಡಗುತಿಟ್ಟಿನ ರಂಗಸ್ಥಳದಲ್ಲಿ ಮಿಂಚಿನ ಸಂಚಲನ ಮೂಡಿಸುತ್ತಿರುವ ಪ್ರಬುದ್ಧ ಕಲಾವಿದ.

ಸಕ್ಕಟ್ಟು ಲಕ್ಷ್ಮೀನಾರಾಣಯ್ಯ ಹಾಗೂ ವಂಡ್ಸೆ ಮುತ್ತ ಗಾಣಿಗರ ಗರಡಿಯಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಕಲಿತು, 12 ವರ್ಷ ಯಕ್ಷ ಶಿಕ್ಷಣ ಪಡೆದುಕೊಂಡು, ರೆಂಜದಕಟ್ಟೆ, ಹಾಲಾಡಿ, ಸಿಗಂಧೂರು, ಬಗ್ವಾಡಿ, ಮಡಾಮಕ್ಕಿ ಮುಂತಾದ ವೃತ್ತಿ ಮೇಳಗಳಲ್ಲಿ ಪರಿಪೂರ್ಣ ಕಲಾವಿದರಾಗಿ ಜನ ಮೆಚ್ಚುಗೆ ಗಳಿಸಿದವರು. ಪೌರಾಣಿಕ, ಚಾರಿತ್ರಿಕ ಹಾಗೂ ಕಾಲ್ಪನಿಕ ಪ್ರಸಂಗಗಳಲ್ಲಿ ಅವರು, ನಾಯಕ, ಪ್ರತಿ ನಾಯಕ ಹಾಗೂ ಖಳ ನಾಯಕ ಪಾತ್ರಗಳಿಗೆ ಜೀವ ತುಂಬುವ ಪರಿ ಮನೋಜ್ಞವಾದುದು.

ಅರ್ಷಿಯಾ ಯಕ್ಷವಲ್ಲರಿ: ಪುರುಷ ಪ್ರಧಾನವಾದ ಯಕ್ಷಗಾನ ಕಲೆಯಲ್ಲಿ ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಗಂಡಸರಿಗೆ ಸಮದಂಡಿಯಾಗಿ ಬೆಳೆದ ಮಹಿಳಾ ಕಲಾವಿದರು ಹಲವರಿದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ, ಯಕ್ಷಗಾನದ ಸಕಲ ವಿಭಾಗಗಳಲ್ಲೂ ಮಹಿಳೆಯರು ಮಿಂಚುತ್ತಿದ್ದಾರೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಮಂಗಳೂರಿಗೆ ಹುಡುಗಿ ಅರ್ಷಿಯಾ. ಅವರನ್ನು ಯಕ್ಷ ರಂಗಸ್ಥಳ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂದೇ ಗುರುತಿಸಲಾಗುತ್ತದೆ.

ಆಟೊಮೊಬೈಲ್ ಕಂಪೆನಿಯ ಉದ್ಯೋಗಿಯಾಗಿರುವ ಅರ್ಷಿಯಾ, 10ನೇ ವಯಸ್ಸಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಒಕ್ಕೆತ್ತೂರು ಮಾಡದಲ್ಲಿ ನಡೆದಿದ್ದ ಯಕ್ಷಗಾನ ಪ್ರದರ್ಶನ ಕಂಡು ಈ ಕಲೆಯತ್ತ ಆಕರ್ಷಿತರಾಗಿದ್ದರಂತೆ. ಅವರ ಪ್ರತಿಭೆಗೆ ಆರಂಭದಲ್ಲಿ ಉತ್ತೇಜನ ನೀಡಿದ್ದು ಊರಿನ ಶಿಕ್ಷಕರು. ಬಳಿಕ ಮಂಗಳೂರಿನ ಕದಳಿ ಕಲಾ ಕೇಂದ್ರ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಿತು. ಯಕ್ಷಗಾನ ಮಾತ್ರವಲ್ಲ, ಚೆಂಡೆ ನುಡಿಸುವುದನ್ನೂ ಅವರು ಕಲಿತಿದ್ದಾರೆ. ದೇವಿ ಮಹಾತ್ಮೆ ಪ್ರಸಂಗದಲ್ಲಿ ‘ಮಹಿಷಾಸುರ’ನ ಪಾತ್ರ ವಹಿಸಿದ ಅಗ್ಗಳಿಕೆ ಅವರದ್ದು.

‘ಯಕ್ಷ ಶ್ರೇಷ್ಠ’ ಶೇಣಿ ಗೋಪಾಲಕೃಷ್ಣ ಭಟ್ಟರು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗದಲ್ಲಿ ‘ಬಪ್ಪ ಬ್ಯಾರಿ’ಯ ಪಾತ್ರವನ್ನು ಕಟ್ಟಿಕೊಟ್ಟ ರೀತಿಯನ್ನು ಕರಾವಳಿಯ ಜನರು ಮರೆತವರಲ್ಲ. ಶೇಣಿ ಅವರು ಯಕ್ಷಯಾತ್ರೆ ಮುಗಿಸಿ ಒಂದೂವರೆ ದಶಕ ಕಳೆದ ಬಳಿಕವೂ ಅವರು ಕಟ್ಟಿಕೊಟ್ಟ ಬಪ್ಪ ಬ್ಯಾರಿಯ ಪಾತ್ರ ಕಲಾಪ್ರೇಮಿಗಳ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿದೆ. ಆ ಪಾತ್ರ ನಿರ್ವಹಣೆಗಾಗಿ ಶೇಣಿಯವರು ಕುರಾನ್ ಗ್ರಂಥವನ್ನು ಹಾಗೂ ಮುಸ್ಲಿಮರ ಆಚಾರ-ವಿಚಾರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಬಪ್ಪ ಬ್ಯಾರಿಯ ಪಾತ್ರವನ್ನು ಹಿಂದೂಗಳು ಮಾತ್ರವಲ್ಲ, ಮುಸ್ಲಿಮರು ಸಹ ಮನಸಾರೆ ಸ್ವೀಕರಿಸಿದ್ದರು.

ಹಿಂದೂ ಪುರಾಣಗಳ ಪಾತ್ರಗಳನ್ನು ಮುಸ್ಲಿಂ ಕಲಾವಿದರು, ಮುಸ್ಲಿಂ ಕಥಾನಾಯಕನ ಪಾತ್ರವನ್ನು ಹಿಂದೂ ಕಲಾವಿದರು ಎಲ್ಲರೂ ಒಪ್ಪುವಂತೆ ಕಟ್ಟಿಕೊಟ್ಟ ಪರಿ ಯಕ್ಷಲೋಕದ ಸಾಮರಸ್ಯದ ಹೆಗ್ಗುರುತುಗಳು. ಹಾಲು–ಜೇನು ಬೆರೆಯುವಂತಹ ಇಂತಹ ಸಮರಸ ಭಾವ ಅನೂಚಾನವಾಗಿ ಮುಂದುವರಿಯುವಂತೆ ನೋಡಿಕೊಳ್ಳುವ ಉತ್ತರದಾಯಿತ್ವ ಕಲಾರಸಿಕರದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT