ನನ್ನ ಮೇಷ್ಟ್ರು ಮರುಭೂಮಿಯಲ್ಲೂ ಬೆಳೆ ತೆಗೆಯುವ ರೈತ!

7

ನನ್ನ ಮೇಷ್ಟ್ರು ಮರುಭೂಮಿಯಲ್ಲೂ ಬೆಳೆ ತೆಗೆಯುವ ರೈತ!

Published:
Updated:
Deccan Herald

ಶಿವಾನಂದ ಹೊನ್ನಾಳಿ ಸರ್‌,  ಮೊನ್ನೆ ನಿಮ್ಮನ್ನು‌ ಹುಡುಕಿಕೊಂಡು ನಿಮ್ಮ ಊರಿಗೆ ಹೋಗಿದ್ದೆ. ನೀವು ಸಿಗಲಿಲ್ಲ! ಮನೆ ಖಾಲಿ‌ ಮಾಡಿಕೊಂಡು ಮಗನ ಬಳಿ ಹೋಗಿದ್ದಾರೆ ಅನ್ನುವ ಉತ್ತರ ಸಿಕ್ಕಿತು. ನಿರಾಸೆಯಿಂದ ವಾಪಸ್ಸು ಬಂದೆ. ನಿಮ್ಮ ಬಳಿ ಮಾತನಾಡುವುದು, ಹೇಳುವುದು ತುಂಬಾನೇ ಇತ್ತು. ಪ್ರತಿ ಮಾತುಗಳನ್ನು ತುಂಬಾ ಜತನವಾಗಿ ಅನುಭವದ ಮೂಟೆಯಿಂದ ಎತ್ತಿಟ್ಟುಕೊಂಡು ಬಂದಿದ್ದೆ.

ನಿತ್ಯ ನಾನು ಮಕ್ಕಳ ಮುಂದೆ ನಿಂತಾಗ ನೀವು ನೆನಪಾಗುತ್ತೀರಿ ಸರ್. ನಿಮಗೆ ನೆನಪಿರಬಹುದು ಶಾಲೆಯಲ್ಲಿ ನೀವು ಹೀಗೆ ಇಪ್ಪತ್ತು ವರ್ಷಗಳ ಹಿಂದೆ ಕೆಲಸ ಮಾಡಿದ್ರಿ. ನೀವು ಇಂಗ್ಲೀಷ್ ಹೇಳಿಕೊಡುವ ಮೇಷ್ಟ್ರು. ಅದು ನಮಗೆ ಹೆಚ್ಚು ಭಯ ಹುಟ್ಟಿಸುವ ವಿಷಯವಾಗಿತ್ತು. ನಾವು ತೀರಾ ಹಳ್ಳಿಯ ಮಕ್ಕಳು. A ಅನ್ನುವ ಅಕ್ಷರ ಬರೆದಿದ್ದು ಆರನೇ ಕ್ಲಾಸಿಗೆ. ನೀವು ಮಾತ್ರ ನಮಗೆ ಕಲಿಸಿಯೆ ಸಿದ್ಧ ಅನ್ನುವ ಹಟ ತೊಟ್ಟಿರುವಂತಿತ್ತು.

ನೀವು ತರಗತಿಗೆ ಬಂದರೆ ಕೈಕಾಲುಗಳಲ್ಲಿ ನಡುಕವಿರುತ್ತಿತ್ತು. ಬೆವೆತು ಹೋಗುತ್ತಿದ್ದೆವು. ಶಾಪ ಹಾಕದೆ ಇರುವ ದಿನಗಳೇ ಇರಲಿಲ್ಲ. ಹಳ್ಳಿಯ ಮಕ್ಕಳಲ್ಲೂ ಇಂಗ್ಲಿಷ್‌ ಕಲಿಕೆಯ ಬೀಜ ಹಾಕಿದಿರಲ್ಲಾ ನಾನೆಷ್ಟು ಋಣಿಯಾಗಿರಲಿ ನಿಮಗೆ. ಕಬ್ಬಿಣದ ಕಡಲೆಕಾಯಿ ಇಂಗ್ಲಿಷ್‌ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಎಂಬತ್ತು ಅಂಕ ತೆಗೆಯುವಂತೆ ಮಾಡಿದ್ರಲ್ಲ ಸರ್‌... ಮರುಭೂಮಿಯಲ್ಲೂ ಬೆಳೆ ಬೆಳೆಯುವ ಇಚ್ಛಾಶಕ್ತಿ ಇತ್ತು ನಿಮ್ಮಲ್ಲಿ!

ಈಗ ನಾನು ಮಕ್ಕಳ ಮುಂದೆ ನಿಂತು ಪಟಾಪಟ್ ಅಂತ ಇಂಗ್ಲಿಷ್‌ನಲ್ಲಿ ಮಾತಾಡ್ತೀನಿ. ಕನ್ನಡದಷ್ಟೇ ಇಂಗ್ಲಿಷ್ ಕೂಡ ಸರಾಗ. ಬಹುಶಃ ನೀವಿಲ್ಲದಿದ್ದರೆ ಇವತ್ತಿಗೂ ಇಷ್ಟೊಂದು ಚೆಂದನೆಯ ಇಂಗ್ಲಿಷ್‌ ನನ್ನ ಪಾಲಿಗೆ ಇರುತ್ತಿರಲಿಲ್ಲ. ನಿಮ್ಮ ಹಾದಿಯಲ್ಲೇ ಕಲಿಸುತ್ತಿದ್ದೇನೆ. ನಾನೂ ಹಳ್ಳಿಯಲ್ಲಿದ್ದೇನೆ. ನಿಮ್ಮ ಋಣದ ಲಾಭವನ್ನು ಮಕ್ಕಳಿಗೆ ಹಂಚುತ್ತಿದ್ದೇನೆ. ನಮ್ಮ ಮಕ್ಕಳಿಗೆ ಯಾವತ್ತೂ ಕೂಡ ನಿಮ್ಮ ಬಗ್ಗೆ ಹೇಳುತ್ತಿರುತ್ತೇನೆ. ಮಕ್ಕಳ ಕಣ್ಣಲ್ಲಿ ಖುಷಿ ಇರುತ್ತೆ. ಇವೆಲ್ಲವನ್ನೂ ನಿಮ್ಮ ಮುಂದೆ ಇಡಬೇಕೆಂದು ಓಡಿ ಬಂದೆ. ನೀವು ಸಿಗಲಿಲ್ಲ. 

ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !