ಶನಿವಾರ, ಮೇ 28, 2022
26 °C

ಜೇನ್ ಗಿಲ್ಬರ್ಟ್: ಹೀಟ್‌ ಆಫೀಸರ್‌ ಬಂದರು ದಾರಿಬಿಡಿ...

ಸುನೀಲ್ ಬಾರ್ಕೂರ್ Updated:

ಅಕ್ಷರ ಗಾತ್ರ : | |

Prajavani

ಯಾರಿಗೆ ಗೊತ್ತು? ಇಂಥ ಹೀಟ್‌ ಆಫೀಸರನ್ನು ಬೆಂಗಳೂರು ಕೂಡಾ ಕಾಣುವ ದಿನ ಹತ್ತಿರವೇ ಇರಬಹುದು!

ಅಮೆರಿಕದ ಮಿಯಾಮಿ ನಗರಸಭೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜೇನ್ ಗಿಲ್ಬರ್ಟ್ ಅವರಿಗೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ತುರ್ತು ಸಂದೇಶದ ಪತ್ರವೊಂದು ಬಂತು. ನಗರಸಭೆ ಅಧಿಕಾರಿಯ ಜವಾಬ್ದಾರಿಯಿಂದ ಅವರನ್ನು ಮುಕ್ತಿಗೊಳಿಸಿ 34 ನಗರಸಭೆಗಳ ವ್ಯಾಪ್ತಿಯ ಮಿಯಾಮಿ ಡೇಡ್ ಕೌಂಟಿಯ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಿ ಪದೋನ್ನತಿ ನೀಡಿದ ಪತ್ರವದು. ಅದರಲ್ಲೇನು ವಿಶೇಷ ಎನ್ನುವಿರಾ? ಜೇನ್‌ಗೆ ನೀಡಿದ್ದ ನೂತನ ಹುದ್ದೆಯ ಹೆಸರು ಮಾತ್ರ ಹಿಂದೆಂದೂ ಕೇಳಿರದಂಥದು! ಆ ಹುದ್ದೆಯನ್ನು ಜೇನ್ ಗಿಲ್ಬರ್ಟ್ ವಹಿಸಿಕೊಂಡಾಗ ಜಗತ್ತಿನ ಪ್ರಥಮ ಶಾಖ ಅಧಿಕಾರಿ (ಶಾಖಾಧಿಕಾರಿ ಅಲ್ಲ, Heat Officer!) ಎಂಬ ಖ್ಯಾತಿಗೆ ಪಾತ್ರರಾದರು.


ಜೇನ್ ಗಿಲ್ಬರ್ಟ್

ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತ ಭೂಮಿಯು ಕಾದ ಬಾಣಲೆಯಂತಾಗಿ ಬೇಸಿಗೆ ದುಃಸ್ವಪ್ನದಂತೆ ಕಾಡುತ್ತಿರುವುದು ಎಲ್ಲರ ಅನುಭವಕ್ಕೂ ಬರುತ್ತಿದೆ. ಹಿಂದೆಲ್ಲ ನಾವು ಬರೀ ಸುದ್ದಿಯಲ್ಲಿ ಓದುತ್ತಿದ್ದ ಉಷ್ಣ ಮಾರುತಗಳು ಇದೀಗ ನಮ್ಮ ಮನೆಯಂಗಳದಲ್ಲೂ ಬೀಸಲಾರಂಭಿಸಿವೆ. ನೈಸರ್ಗಿಕ ಹವಾನಿಯಂತ್ರಿತ ತಾಣಗಳೆಂಬ ಹೆಗ್ಗಳಿಕೆಯ ನಮ್ಮ ಮಲೆನಾಡಿನ ಶಹರಗಳೇ 40 ಡಿಗ್ರಿ ಸೆಲ್ಸಿಯಸ್‌ನ ಎಡಬಲದಷ್ಟು ತಾಪಮಾನ ಅನುಭವಿಸುತ್ತಿವೆ. ಮುಂಬರುವ ದಿನಗಳಲ್ಲಿ ಈ ಉಷ್ಣ ಮಾರುತಗಳ ಭೇಟಿ ಇನ್ನೂ ಹೆಚ್ಚಲಿದೆ. ಹೀಗಾಗಿ ಹವಾನಿಯಂತ್ರಕಗಳು ಮಧ್ಯಮವರ್ಗಗಳ ಬೇಕುಗಳ ಪಟ್ಟಿಯಲ್ಲೂ ಸ್ಥಾನ ಪಡೆಯುತ್ತಿವೆ. ಭಾರತದಲ್ಲಿ ಕಳೆದ ವರ್ಷ ದಾಖಲೆಯ ಸಂಖ್ಯೆಯಲ್ಲಿ ಹವಾನಿಯಂತ್ರಕಗಳು ಬಿಕರಿಯಾಗಿವೆ. ಈ ಸಾಧನಗಳು ಇನ್ನಷ್ಟು ವಿದ್ಯುತ್ ಬೇಡಿಕೆಯನ್ನು ಸೃಷ್ಟಿಸುವುದು, ಅದಕ್ಕಾಗಿ ಮತ್ತಷ್ಟು ಕಲ್ಲಿದ್ದಲನ್ನು ಸುಡುವುದು, ಜೊತೆಗೆ ಖುದ್ದು ಈ ಸಾಧನಗಳೇ ತಾವು ಬಳಸುವ ಅನಿಲದಿಂದ ಪರಿಸರಕ್ಕೆ ಸವಾಲೊಡ್ಡುವುದು... ಒಟ್ಟಾರೆ ಹಸಿರುಮನೆ ಪರಿಣಾಮಕ್ಕೆ ತಮ್ಮ ದೇಣಿಗೆಯನ್ನು ನೀಡಿ ಹೊರಬರಲಾಗದ ಚಕ್ರವ್ಯೂಹವನ್ನು ಸೃಷ್ಟಿಸುತ್ತಿವೆ.

ಉಳ್ಳವರು ಶಿವಾಲಯವನ್ನು ಕಟ್ಟುವರಯ್ಯ ಎಂಬಂತೆ ಅನುಕೂಲಸ್ಥರೇನೋ ಈ ಬಿರುಬೇಸಿಗೆಯ ಆತಂಕದಿಂದ ಬಚಾವಾಗಬಹುದು. ಆದರೆ ಉಳಿದವರು? ಇಂತಹುದೊಂದು ಪ್ರಶ್ನೆ ಇದೀಗ ಎಲ್ಲೆಡೆ ಕಾಡುತ್ತಿದೆ. ಬದಲಾದ ಹವಾಮಾನದ ಪರಿಸ್ಥಿತಿಯಲ್ಲಿ ಮುಂಬರುವ ಘೋರ ದಿನಗಳನ್ನು ಎದುರಿಸಲು ಸಾಕಷ್ಟು ಪೂರ್ವತಯಾರಿಯ ಜರೂರತ್ತಿದೆ. ಇದನ್ನು ಮನಗಂಡ ಮಿಯಾಮಿ ಡೇಡ್ ಕೌಂಟಿಯ ಆಡಳಿತ ಮಂಡಳಿ ಹೀಟ್‌ ಆಫೀಸರ್ ಹುದ್ದೆ ಸೃಷ್ಟಿಸಿದೆ.

ಅತಿಉಷ್ಣದಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಅಂತಹ ಪರಿಸ್ಥಿತಿಯಲ್ಲಿ ತಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿಹೇಳುವುದು, ಮಕ್ಕಳಿಗಾಗಿ ಶಿಬಿರ ಆಯೋಜಿಸುವುದು, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ ಝಳ ಹೆಚ್ಚಿರುವ ಸಮಯವನ್ನು ಹೊರತುಪಡಿಸುವಂತಹ ಕೆಲಸದ ಪಾಳಿಯನ್ನು ನಿಗದಿಪಡಿಸುವುದು, ನಗರದ ವ್ಯಾಪ್ತಿಯಲ್ಲಿ ತಾಪಮಾನವನ್ನು ನಿಯಂತ್ರಿಸಲು ಸಾಕಷ್ಟು ಗಿಡಮರ ಬೆಳೆಸಿ ಹಸಿರುಪಟ್ಟಿಗಳನ್ನು ಅಭಿವೃದ್ಧಿಪಡಿಸುವುದು, ಉಷ್ಣ ಮಾರುತಗಳ ಸಮಯದಲ್ಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಉಳಿದುಕೊಳ್ಳಲು ಆಸರೆಯಾಗುವಂತೆ ತಂಗುದಾಣ ನಿರ್ಮಿಸುವುದು... ಇವುಗಳೆಲ್ಲ ಹೀಟ್‌ ಆಫೀಸರ್‌ ಹೊಣೆ.

ದಿನ ಕಳೆದಂತೆ ಶಹರಗಳು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಅರಣ್ಯಪ್ರದೇಶವನ್ನು ಕಬಳಿಸುತ್ತ ಶಾಖ ದ್ವೀಪ ಪರಿಣಾಮಕ್ಕೆ ಕಾರಣವಾಗುತ್ತಿವೆ. ಅಂದರೆ ಹಸಿರನ್ನು ಕಬಳಿಸಿ ಆ ಜಾಗವನ್ನು ಆಕ್ರಮಿಸಿಕೊಳ್ಳುವ ಕಾಂಕ್ರೀಟ್ ಕಟ್ಟಡಗಳು ಮೊದಲಿದ್ದ ಹಸಿರು ವಲಯಕ್ಕಿಂತ ಹೆಚ್ಚಿನ ಪ್ರಮಾಣದ ಶಾಖವನ್ನು ಹೀರಿಕೊಂಡು ಆ ಪ್ರದೇಶದ ತಾಪಮಾನದ ಏರಿಕೆಗೆ ಕಾರಣವಾಗುತ್ತವೆ.

ಈ ಕಾರಣಕ್ಕೆ ಶಹರ ಪ್ರವೇಶಿಸುತ್ತಿದ್ದಂತೆಯೇ ತಾಪಮಾನದ ಏರಿಕೆಯ ಅನುಭವ ಆಗುವುದು. ಶಹರಗಳಲ್ಲಿ ಈಗ ತುರ್ತಾಗಿ ಆಗಬೇಕಿರುವುದು ತಂಪೆರೆಯುವ ಕೆಲಸ. ಗಿಲ್ಬರ್ಟ್ ಅವರಿಗೆ ದೊರೆತ ಈ ಹೊಸ ಹುದ್ದೆಯೂ ಇಂಥದೊಂದು ದೂರದೃಷ್ಟಿ ಚಿಂತನೆಯ ಪರಿಣಾಮವೇ.

ಹೀಟ್‌ ಆಫೀಸರ್‌ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದ ಸಮಾಚಾರ ಎಲ್ಲೆಡೆ ಹರಡಿದ ಪರಿಣಾಮ ಗ್ರೀಸ್‌ನ ಅಥೆನ್ಸ್, ಅಮೆರಿಕದ ಫಿನಿಕ್ಸ್ ನಗರ, ಆಫ್ರಿಕಾದ ಫ್ರೀಟೌನ್, ಚಿಲಿಯ ಸಾಂಟಿಯಾಗೊ ನಗರಗಳಲ್ಲೂ ಇಂತಹ ಅಧಿಕಾರಿಗಳು ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಮೈಬಿಸಿ ಏರಿಸಿಕೊಳ್ಳುತ್ತಿರುವ ಬೆಂಗಳೂರಿನಲ್ಲೂ ಶಾಖ ಅಧಿಕಾರಿಯನ್ನು ಬರಮಾಡಿಕೊಳ್ಳುವ ದಿನಗಳು ದೂರವಿಲ್ಲ.

1998ರಿಂದ 2017ರ ಅವಧಿಯಲ್ಲಿ ಜಾಗತಿಕವಾಗಿ ಸುಮಾರು ಒಂದು ಲಕ್ಷ ಎಪ್ಪತ್ತು ಸಾವಿರದಷ್ಟು ಜನ ಉಷ್ಣ ಮಾರುತಗಳಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 2010ರ ಮೇ ತಿಂಗಳಿನಲ್ಲಿ ಗುಜರಾತಿನ ಅಹ್ಮದಾಬಾದ್‌ ತನ್ನ ಇತಿಹಾಸದ ಅತ್ಯಂತ ಘೋರ ಉಷ್ಣ ಮಾರುತವನ್ನು ಅನುಭವಿಸಿತು. 1334 ಜನರ ಪ್ರಾಣಕ್ಕೆ ಎರವಾದ ಈ ಮಾರುತವು ಸ್ಥಳೀಯ ಆಡಳಿತಕ್ಕೆ ಎಂದೂ ಮರೆಯದಂತಹ ಪಾಠ ಕಲಿಸಿತು. ಇದರಿಂದ ಎಚ್ಚೆತ್ತ ಆಡಳಿತ ವರ್ಗವು 2013ರಲ್ಲಿ ಉಷ್ಣ ಕ್ರಿಯಾಯೋಜನೆಯನ್ನು ರೂಪಿಸಿತು. ಉಷ್ಣ ಮಾರುತಗಳು ಬರುವ ಮೊದಲು ಮಾಡಿಕೊಳ್ಳಬೇಕಾದ ಪೂರ್ವತಯಾರಿಗಳು, ಬಂದಾಗ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಈ ಯೋಜನೆಯಲ್ಲಿ ವಿವರವಾಗಿ ಚರ್ಚಿಸಲಾಗಿತ್ತು. ಇದೇ ರೀತಿಯ ಯೋಜನೆಯನ್ನು ನಂತರ ಅನೇಕ ರಾಜ್ಯಗಳು, ನಗರ ಸಂಸ್ಥೆಗಳು ಅಳವಡಿಸಿಕೊಂಡವು.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಸಮತಟ್ಟಾದ ಪ್ರದೇಶಗಳಲ್ಲಿ 40 ಡಿಗ್ರಿ ಹಾಗೂ ಘಟ್ಟದ ಮೇಲಿನ ಎತ್ತರದ ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವಿದ್ದಲ್ಲಿ ಅದು ಉಷ್ಣ ಮಾರುತದ ಲಕ್ಷಣ. ಬೇಸಿಗೆಯಲ್ಲಿ ಮಳೆ ಬಾರದಿರುವಿಕೆಯೇ ನಮ್ಮಲ್ಲಿನ ಉಷ್ಣ ಮಾರುತಗಳಿಗೆ ಮೂಲ ಕಾರಣವಾಗಿದ್ದು, ಈ ಪ್ರಕ್ರಿಯೆ ಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ದೆಹಲಿಯೂ ಸೇರಿದಂತೆ ಉತ್ತರಭಾರತದಲ್ಲಿ ಹಲವೆಡೆ ಉಷ್ಣ ಮಾರುತದ ಕಾರಣ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಸಿಬಿ ನಗರವು 47 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ದಾಖಲಿಸಿ ಉತ್ತರ ಗೋಳಾರ್ಧದ ಅಂದಿನ ಅತಿಹೆಚ್ಚು ತಾಪಮಾನವೆಂಬ ಕುಖ್ಯಾತಿಗೆ ಒಳಗಾಯಿತು. ಈ ಬೇಸಿಗೆಯಲ್ಲಿ ನಮ್ಮ ಶಹರಗಳು ಪೈಪೋಟಿಗೆ ಬಿದ್ದಂತೆ ಮೈಬಿಸಿ ಏರಿಸಿಕೊಳ್ಳುವುದನ್ನು ನೋಡುತ್ತಿದ್ದಲ್ಲಿ ನಮ್ಮಲ್ಲೂ ಶಾಖ ಅಧಿಕಾರಿಗಳ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು