ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಸ್ಕೂಲ್‌ ಸಹ‍ಪಾಠಿಗಳ ಹೊಳೆಯೂಟ

Last Updated 25 ಏಪ್ರಿಲ್ 2021, 10:02 IST
ಅಕ್ಷರ ಗಾತ್ರ

ಹೈಸ್ಕೂಲ್‌ ಮುಗಿಸಿ ವರ್ಗಾವಣೆ ಪತ್ರ (ಟಿಸಿ) ತಗೊಂಡು ಹೊರಬಿದ್ದ ನಾವೆಲ್ಲ ಸಹಪಾಠಿಗಳು ಮತ್ತೆ ಹೈಸ್ಕೂಲ್‌ ಮೆಟ್ಟಿಲೇರಿದ್ದು ಬರೋಬ್ಬರಿ 29 ವರ್ಷಗಳ ನಂತರ. ಅದು ಕೂಡ ಗುರುವಂದನೆ ನೆಪದಲ್ಲಿ. ಸಿದ್ದಾಪುರ ತಾಲ್ಲೂಕಿನ ಕಾನಸೂರು ಶ್ರೀಕಾಳಿಕಾ ಭವನಿ ಹೈಸ್ಕೂಲ್‌ನಲ್ಲಿ ನಮಗೆ ಕಲಿಸಿದ ಗುರುಗಳಿಗೆಲ್ಲ ಗೌರವಿಸಿ, ಅವರೊಂದಿಗೆ ಒಂದಷ್ಟು ಹೊತ್ತು ಉಭಯಕುಶಲೋಪರಿ ನಡೆಸಿ ಜೊತೆಗೆ ಊಟ ಮಾಡಿ ಅವರನ್ನೆಲ್ಲ ಮನೆಗೆ ಬೀಳ್ಕೊಟ್ಟು ಮಧ್ಯಾಹ್ನದ ನಂತರ ನಾವೆಲ್ಲ ಸಹಪಾಠಿಗಳು ಹರಟೆ ಹೊಡೆಯೋದು ಎಂಬುದು ನಮ್ಮ ಗುರುವಂದನೆ ಪ್ಲಾನ್‌ ಆಗಿತ್ತು. ಆದರೆ ಊಟದ ನಂತರವೂ ನಮ್ಮ ಮಾಸ್ತರು ಮನೆಗೆ ಹೋಗದೆ ನಮ್ಮ ಜೊತೆಗೆ ಉಳಿದು ನಮ್ಮೆಲ್ಲರ ಮಾತು ಕಥೆ ಜೀವನಗಾಥೆ ಕೇಳ್ಕೊಂತ ಕೂಂತೇಬಿಟ್ರು. ನಮಗೂ ಅವರು ನಮ್ಮ ಜೊತೆ ಉಳಿದಿದ್ದು ತುಂಬಾನೇ ಖುಷಿಯಾಯ್ತು. ಸಂಜೆವರೆಗೂ ಸ್ಟೇಜ್ ಹತ್ತಿ ಒಬ್ಬೊಬ್ಬರಾಗಿ ಮಾತಾಡಿದ್ದೇ ಮಾತಾಡಿದ್ದು. ಇದರ ನಡುವೆ ನಮ್ಮ ಈ ಹರಟೆ ಹೊಡೆಯೋ ಚಾಪ್ಟರ್‌ ಹಾಗೇ ಉಳಿದುಬಿಡ್ತು.

ಹೊಳೆಯೂಟದ ಅಡುಗೆ ತಯಾರಿ
ಹೊಳೆಯೂಟದ ಅಡುಗೆ ತಯಾರಿ

ಗುರುವಂದನೆ ಮುಗಿಸಿ ವಾರವಾದರೂ ನಮಗೆಲ್ಲ ಅದರ ಹ್ಯಾಂಗೋವರ್‌ನಿಂದ ಹೊರಬರಲಾಗಲಿಲ್ಲ. ಆದರೂ ಹರಟೆ ಹೊಡೆಯೋದು ಹಾಗೇ ಉಳಿತಲ್ಲ ಅನ್ನೋ ಕೊರತೆ ಕಾಡುತ್ತಲೇಇತ್ತು. ಅದಕ್ಕೂ ನಮ್ಮ ದತ್ತು ಒಂದು ಪ್ಲಾನ್‌ ಮಾಡಿದ. ‘ಒಂದು ಹೊಳೆಯೂಟ ಮಾಡ್ವಾ. ಅಲ್ಲಿ ಬೇಕಾದಷ್ಟು ಹರಟೆ ಹೊಡೆದರಾಯ್ತು’ ಎಂಬ ಸಲಹೆಯನ್ನಿತ್ತ. ಉಳಿದವರಿಗೂ ಅದೇ ಸರಿಯೆನಿಸಿತು. ಅಂತೂ ಏಪ್ರಿಲ್‌ 4ಕ್ಕೆ ಹೊಳೆಯೂಟ ಫಿಕ್ಸ್‌ ಆಯ್ತು.

ಶಿರಸಿಯಿಂದ 30 ಕಿ.ಮೀ. ದೂರದಲ್ಲಿರೋ (ಶಿರಸಿ–ಯಲ್ಲಾಪುರ ಮಾರ್ಗ) ಗಣೇಶಪಾಲ್‌ ಹೊಳೆ (ಶಾಲ್ಮಲಾ ನದಿ)ಯಲ್ಲಿ ನಮ್ಮ ಹೊಳೆಯೂಟಕ್ಕೆ ತಯಾರಿಯೂ ನಡೆಯಿತು. ಗುರುವಂದನೆಗೆ ಸೇರಿದಷ್ಟು ಮಂದಿ ಬರಲಿಲ್ಲ ಅಂದ್ರೂ ಹತ್ತ ಮಂದಿ ಮತ್ತವರ ಕುಟುಂಬ ಜೊತೆಯಾದರು. ಅರ್ಧ ಅಡುಗೆ ಮನೆಯಿಂದ ರೆಡಿ ಮಾಡ್ಕೊಂಡು ಬಂದ್ರೆ, ಉಳಿದರ್ಧ ಅಡುಗೆ ಹೊಳೆದಂಡೆ ಮೇಲೆ ಮಾಡೋದಂತಾಗಿತ್ತು.

ದೋಸೆ ಎರೆಯುತ್ತಿರುವ ದತ್ತು
ದೋಸೆ ಎರೆಯುತ್ತಿರುವ ದತ್ತು

ಅಡುಗೆ ಮಾಡೋದಕ್ಕೆ ಬೇಕಾದ ಪರಿಕರಗಳನ್ನೆಲ್ಲ ಕಾರ್‌ಗಳಲ್ಲಿ ತುಂಬ್ಕೊಂಡು ಗಣೇಶಪಾಲ್‌ಗೆ ಬಂದ್ರೆ ಅಲ್ಲಿ ಹೊಳೆ ಮಧ್ಯದಲ್ಲಿರೋ ಗಣೇಶನ ದೇವಸ್ಥಾನದಲ್ಲಿ ಯಾರೋ ಗಣಹೋಮ ಇಟ್ಕೊಂಡಿದ್ರು. ಗಣೇಶನಿಗೆ, ಅಲ್ಲೆ ಪಕ್ಕದಲ್ಲಿದ್ದ ಶಿವಂಗೆ ಕೈಮುಗಿದು ಅಲ್ಲೇ ಹಿಂದಿರೋ ನಮ್ಮ ಹೊಳೆಯೂಟದ ಜಾಗಕ್ಕೆ ಅಡುಗೆ ಸಾಮಗ್ರಿಯೊಂದಿಗೆ ಬಂದು ಆಸೀನರಾದೇವು.

ನಮಗೆ ಅಡುಗೆ ಮಾಡೋ ಯೋಚನೆಯಾದ್ರೆ, ನಮ್ಮ ಜೊತೆ ಬಂದ ಮಕ್ಕಳಿಗೋ ಹೊಳೆಯಲ್ಲಿ ಆಡೋ ಅವಸರ. ಮಕ್ಕಳು ನೀರಿನತ್ತ ಓಡಿದ್ರೆ ನಮ್‌ ಒಂದ್‌ ಕಣ್ಣು ಮಕ್ಕಳ ಮೇಲೆ ಮತ್ತೊಂದು ಕಣ್ಣು ಅಡುಗೆ ಮೇಲೆ.

ಹೊಳೆಯೂಟದಲ್ಲಿ ಮಿರ್ಚಿ ಬಜ್ಜಿ ಗಮ್ಮತ್ತು
ಹೊಳೆಯೂಟದಲ್ಲಿ ಮಿರ್ಚಿ ಬಜ್ಜಿ ಗಮ್ಮತ್ತು

ಹೊಳೆ ದಂಡೆ ಮೇಲೆ ಮೊದಲು ತಾಡಪಾಲು ಹಾಸಿ ಅದರ ಮೇಲೆ ಮನೆಯಿಂದ ತಂದ ಅಡುಗೆ ಪರಿಕರ ಜೋಡಿಸುವ ಕೆಲಸ ಶುರುವಾಯ್ತು. ತಾಡಪಾಲು ಹಾಸಲು ಹೋದರೆ ಗಾಳಿ ಒಂದ್‌ ಕಡೆಯಿಂದ ಹಾರಿಸಿ ಹಾಕುತ್ತಿತ್ತು. ಅದಕ್ಕೂ ಒಂದು ಐಡಿಯಾ ಮಾಡಿಯಾಯ್ತು. ತಾಡಪಾಲ್‌ ಹಾಸಿದ ಮೇಲೆ ಅಂಚಿನಲ್ಲಿ ನಮ್ಮ ವ್ಯಾನಿಟಿ ಬ್ಯಾಗ್‌ಗಳನ್ನು ಇಟ್ಟೆವು. ಕೆಲವರು ಒಲೆ ಹೂಡುವ ತರಾತುರಿಯಲ್ಲಿದ್ದರೆ ಸುಬ್ಬುಗೆ ಗೋಳಗೋಡ ರಮೇಶ ತಂದ ಮಸಾಲೆ ಮಜ್ಜಿಗೆ ಕುಡಿಯೋ ಆತುರ. 5 ಲೀಟರ್‌ ಕ್ಯಾನ್‌ ಓಪನ್‌ ಮಾಡಿ, ಶುರು ಹಚ್ಚೇಬಿಟ್ಟ.... ಕೈಯಲ್ಲೊಂದು ಸೌಟು ಹಿಡಿದು ಮಜ್ಜಿಗೆ ಪಾತ್ರೆಕ್ಕೆ ಬಡಿಯುತ್ತ ‘ಬನ್ನಿಬನ್ನಿಬನ್ನಿ...ಬಿಸಿಬಿಸಿ ಮಜ್ಗೆ, ಬಿಸಿಬಿಸಿ ಮಜ್ಗೆ; ಗೋಳಗೋಡ್‌ ಸ್ಪೇಷಲ್‌ ಮಜ್ಗೆ. ಕೊನೆಯ ಅವಕಾಶ. ಕೊನೆಯ ಅವಕಾಶ. ಕಳೆದು ಮರುಗದಿರಿ..ಮರೆತು ಮರುಳಾಗದಿರಿ....‘ ಎಂದು ಜೋರಾಗಿ ಒದರುತ್ತಿದ್ದರೆ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಒಬ್ಬೊಬ್ರು ಎರಡು ಮೂರು ಲೋಟ ಏರಿಸಿದ್ರೆ ಸುಬ್ಬು ಮಾತ್ರ ಅರ್ಧ ಪಾತ್ರೆನ ಒಬ್ನೇ ಖಾಲಿ ಮಾಡಿದ್ದ. ಈಚೆ ಕಡೆ ಮಜ್ಜಿಗೆ ಪುರಾಣ ನಡಿತಿದ್ರೆ ದತ್ತು, ಶಿವಾನಂದ ಒಲೆ ಹೂಡಿ ಬೆಂಕಿ ಒಟ್ಟಲು ತಯಾರಿ ಮಾಡಿದ್ರು. ಉಳಿದವರು ಮಿರ್ಚಿ ಬಜ್ಜಿ ಮಾಡಲು ಮೆಣಸಿನಕಾಯಿ ಕೊಯ್ದು, ಕಡ್ಲೆ ಹಿಟ್ಟನ್ನು ಹದಾ ಮಾಡಿದ್ರು. ಅಂತು ಒಲೆಮೇಲೆ ಎಣ್ಣೆ ಬಂಡಿ ಇಟ್ಟು ಎಣ್ಣೆ ಸುರಿದು ಬಜೆ ಬಿಟ್ಟರೆ ಎಲ್ಲರೂ ಬಜೆ ಎಷ್ಟ್‌ ಹೊತ್ತಿಗೆ ಬಟ್ಲಿಗೆ ಬಂದು ಬೀಳುತ್ತೋ ಅಂತಾನೇ ಕಾಯ್ತಿದ್ರು. ಅಂತೂ ಮಿರ್ಚಿ ಬಜ್ಜಿ ಬದನೆಕಾಯಿ ಬಜ್ಜಿ ತಿಂದು ಮಜ್ಜಿಗೆ ಕುಡಿದ ಮೇಲೆ ಎಲ್ಲ ಸ್ನಾನಕ್ಕೆ ಅಂತ ಹೊಳೆಗಿಳಿದ್ರು. ಮಕ್ಕಳಂತೂ ಹೊಳೆಯೊಳಗಿನ ಮೀನೆ ಆಗಿಬಿಟ್ಟಿದ್ರು. ಎಷ್ಟು ಕರೆದ್ರೂ ನೀರು ಬಿಟ್ಟ ಮೇಲೆ ಬರಲು ತಯಾರೇ ಇರ್ಲಿಲ್ಲ.

ಗಣೇಶಪಾಲ್‌ ಹೊಳೆಯಲ್ಲಿ ಜಲಕ್ರೀಡೆ
ಗಣೇಶಪಾಲ್‌ ಹೊಳೆಯಲ್ಲಿ ಜಲಕ್ರೀಡೆ

ಹೇಗೋ ಮಕ್ಕಳನ್ನೆಲ್ಲ ಹೊಳೆಯಿಂದ ಎಬ್ಬಿಸಿಕೊಂಡು ಬಂದು ಮುಂದಿನ ಅಡುಗೆ ತಯಾರಿ ಮಾಡಾಯ್ತು. ದತ್ತು ಮನೆಯಿಂದ ಮಸಾಲೆ ದೋಸೆ ಹಿಟ್ಟು ಬೀಸ್ಕಂಡು ಸ್ಟೀಲ್‌ ಡಬ್ಬಿಯಲ್ಲಿ ತಂದಿದ್ದ. ಡಬ್ಬಿ ಮುಚ್ಚುಳ ತೆಗೆದ್ರೆ ಬಿಸಿಲಿಗೆ ಸ್ವಲ್ಪ ಹುಳಿ ಬಂದು ಹೊರಗೆ ಬರಲು ದಾರಿ ಹುಡ್ಕುತ್ತಿತ್ತು. ಒಲೆ ಮೇಲೆ ದೋಸೆ ಕಾವಲಿ ಇಟ್ಟು ದೋಸೆನೂ ಹೊಯ್ದಾಯ್ತು. ದೋಸೆಗೆ ಹಚ್ಚಕೊಳ್ಳೊಕೆ ಬೆಣ್ಣೆ, ಜೋನಿ ಬೆಲ್ಲ, ಚಟ್ನಿನೂ ಇದ್ವು. ಜೊತೆಗೆ ಎರಡು ಬಗೆ ಫಲಾವ್‌ ಬೇರೆ. ಅದಕ್ಕೆ ಹಾಕಿಕೊಳ್ಳಲು ಮೊಸರು ಬಜ್ಜಿಯನ್ನು ಅಲ್ಲೇ ರೆಡಿಮಾಡಿಯಾಯ್ತು. ವಿನುತಾ ಬರ್ಫಿ ಮಾಡಿಕೊಂಡು ತಂದಿದ್ಲು. ಬಿಸಿಬಿಸಿ ದೋಸೆ ಜೊತೆಗೆ ಫಲಾವ್‌ ತಿಂದು ಮಂಗಲಾ ತಂದಿದ್ದ ಅಪ್ಪೆಹುಳಿ ಕುಡಿದರೆ ಕೆಲವರಿಗೆ ಅಲ್ಲೇ ಜೋಂಪು ಹತ್ತಲು ಶುರುವಾಗಿತ್ತು. ಹಾಗೇ ಹರಟೆ ಮಾತು ಶುರುವಾಗಿ ಹೈಸ್ಕೂಲ್‌ ದಿನಗಳ ನೆನಪುಗಳ ಮೆರವಣಿಗೆ ಜೋರಾಗೇ ನಡಿತು.

ಮಾತು ಎಲ್ಲಿಗೆ ಹೋಗಿ ಮುಟ್ಟಿತೆಂದರೆ, ‘30 ವರ್ಷಗಳ ಹಿಂದೆ ಆರಂಭವಾಗ ನಮ್ಮ ಸ್ನೇಹ ಜೀವನಪೂರ್ತಿ ಹೀಗೆ ಇರುವಂತಾಗಲಿ. ಸಂಧ್ಯಾ ಕಾಲದಲ್ಲಿ ಯಾರ‍್ಯಾರ ಜೀವನ ಹೇಗೆಗಿರುತ್ತೋ ಗೊತ್ತಿಲ್ಲ. ಮಕ್ಕಳು ನಮ್ಮನ್ನು ಕಾಣ್ತಾರೋ ಅನ್ನೋ ನಿರೀಕ್ಷೆನೂ ಇಟ್ಕೊಳ್ಳೋದು ಬೇಡ. ಹಾಂಗೊಂದು ವೇಳೆ ನಾವೆಲ್ಲ ವೃದ್ಧಾಶ್ರಮದಲ್ಲಿ ಕಾಲ ಕಳೆಯೋ ಪರಿಸ್ಥಿತಿ ಬಂದರೆ ನಮ್ಮ ಹೈಸ್ಕೂಲ್ ಸ್ನೇಹಿತರೆಲ್ಲ ಒಡಗೂಡಿ ವೃದ್ದಾಶ್ರಮ ಮಾಡಿಕೊಂಡು ಹೈಸ್ಕೂಲ್‌ನಲ್ಲಿ ಕಳೆದ ದಿನಗಳ ಹಾಳುಹರಟೆ ಹೊಡೆಯುತ್ತ ಖುಷಿಯಿಂದ ಇದ್ದು ಬಿಟ್ಟರಾಯ್ತು...’ ಎಂಬಲ್ಲಿಗೆ ಬಂದು ತಲುಪಿತ್ತು. ವರ್ಷಕ್ಕೆರಡು ಬಾರಿಯಾದ್ರೂ ಭೇಟಿ ಮಾಡುತ್ತ ಹೈಸ್ಕೂಲ್‌ ದಿನಗಳ ಮೆಲುಕು ಹಾಕೋಣ ಎಂಬ ಸಲಹೆಯೂ ಸೇರಿತು.

ಊಟವೆಲ್ಲ ಮುಗಿದ ಮೇಲೆ ಎಲ್ಲ ಪ್ಯಾಕ್‌ಅಪ್‌ ಮಾಡಿ, ಹೊಳೆದಂಡೆಯಲ್ಲಿ ಬಿದ್ದ ಕಸಗಳನ್ನೆಲ್ಲ ಒಟ್ಟುಗೂಡಿಸಿ ಸುಟ್ಟು, ಸ್ವಚ್ಛಗೊಳಿಸಿ ಒಲೆಯಲ್ಲಿರೋ ಬೆಂಕಿಯನೆಲ್ಲ ನೀರು ಹಾಕಿ ನಂದಿಸಿ ಮನೆ ದಾರಿ ಹಿಡಿದೆವು.

ಹೊಳೆಯೂಟದ ನೆಪದಲ್ಲಿ ಸಂಜೆವರೆಗೂ ಗಣೇಶಪಾಲ್‌ ಹೊಳೆಯಲ್ಲಿ ಕಳೆದಿದ್ದು, ಆ ನೆನಪಿನಿಂದ ಹೊರಬರಲು ವಾರವೇ ಹಿಡಿಯಿತು.

ಹೊಳೆಯೂಟದ ನಂತರ ಹೈಸ್ಕೂಲ್‌ ಸಹಪಾಠಿಗಳ ಹರಟೆ ಸಮಯ
ಹೊಳೆಯೂಟದ ನಂತರ ಹೈಸ್ಕೂಲ್‌ ಸಹಪಾಠಿಗಳ ಹರಟೆ ಸಮಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT