ಶನಿವಾರ, ಆಗಸ್ಟ್ 24, 2019
23 °C

ಗುಡ್ಡ ಕರಗಿ ಗವಿಯಾಗಿ!

Published:
Updated:

ಅಲ್ಲಿ ಕಾಲಿಟ್ಟರೆ ಸ್ಮಶಾನ ಮೌನ, ಬೆನ್ನ ಹುರಿಯಲ್ಲಿ ಸಣ್ಣಗೆ ಭಯದ ಕಂಪನ ಮೂಡಿಸುವ ನಿಶ್ಯಬ್ದ. ದಿಕ್ಕು ಕಾಣಿಸದಷ್ಟು ಕಗ್ಗತ್ತಲು, ಮೂಗಿಗೆ ಅಡರುವ ದೇಹದ ಗಂಧ– ಕೆಮ್ಮಣ್ಣಿನ ಸುಗಂಧ. ಕೌತುಕದ ನಡುವೆಯೂ ಮನಸ್ಸಿನಲ್ಲಿ ಅದೆಂಥದ್ದೋ ತಳಮಳ...

ಧಾರವಾಡ ಜಿಲ್ಲೆ ಅಮ್ಮಿನಬಾವಿ ಗ್ರಾಮದ ಹೊರವಲಯದ ಸ್ಮಶಾನದಲ್ಲಿರುವ ‘ರುದ್ರಭೂಮಿ ಗವಿ’ ಹೊಕ್ಕಾಗ ಇಂಥದ್ದೊಂದು ಅನುಭವವಾಯಿತು. ಗುಹೆಯೊಳಗೆ ಹೋಗಬೇಕೆಂಬ ತವಕ. ಆದರೆ ದಾರಿ ಕಾಣದಷ್ಟು ಕಗ್ಗತ್ತಲು. ಪಕ್ಕದಲ್ಲಿದ್ದ ಗ್ರಾಮಸ್ಥರನ್ನು ನೆರವು ಕೇಳಿದೆವು. ಕತ್ತಲು ಸರಿಸುವಷ್ಟು ದೀಪ ಹಚ್ಚಿಕೊಳ್ಳೋಣ ಎಂದು ಅಂಗಡಿಯಿಂದ ಎಣ್ಣೆ, ಬತ್ತಿಗಳನ್ನು ತರಿಸಿದೆವು. ಗವಿಯೊಳಗೇ ಇದ್ದ ಮಣ್ಣಿನ ದೀಪಗಳನ್ನು ಹಚ್ಚಿದೆವು. ‘ದೇದೀಪ್ಯಮಾನ’ ಎನ್ನುವಂತೆ ದೀಪಗಳ ಬೆಳಕಿನಲ್ಲಿ ಗವಿಯೊಳಗಿದ್ದ ಕತ್ತಲು ಮತ್ತು ಮನಸ್ಸಿನಲ್ಲಿದ್ದ ಅವ್ಯಕ್ತ ಭಯ ಎರಡೂ ಮಾಯ.

ಹಣತೆಗಳ ಹೊಂಬೆಳಕಿನಲ್ಲಿ ಗವಿಯ ವಿಸ್ತಾರ, ವಿನ್ಯಾಸ, ಗೋಡೆಗಳ ಮೇಲಿರುವ ಚಿತ್ತಾರಗಳು ಅರಿವಿಗೆ ಬರತೊಡಗಿದವು. ಹಣತೆ ಹಿಡಿದು ಪೂರ್ವಾಭಿಮುಖವಾಗಿರುವ ಗವಿಯ ಪ್ರವೇಶದ್ವಾರ ದಾಟುತ್ತಿದ್ದಂತೆ ಅವಧೂತರಂತೆ ಕಾಣುವ ವ್ಯಕ್ತಿಯ ಫೋಟೊ ಕಂಡಿತು. ಜತೆಗೆ ಬಂದಿದ್ದ ಗ್ರಾಮಸ್ಥರಲ್ಲೊಬ್ಬರು ‘ಅದು ಈ ಗವಿ ನಿರ್ಮಾಣ ಮಾಡಿದ ಅವಧೂತ ಅಯ್ಯಣ್ಣಜ್ಜ’ ಎಂದರು. ಫೋಟೊ ಪಕ್ಕದಲ್ಲೇ ಗದ್ದುಗೆ ಇತ್ತು. ‘ಅಯ್ಯಣ್ಣಜ್ಜ, ಆರಾಧ್ಯ ದೈವವನ್ನು ಪೂಜಿಸಲು ಮಾಡಿಕೊಂಡ ಗದ್ದುಗೆ. ಗದ್ದುಗೆ ಮೇಲಿದ್ದ ಮತ್ತೊಂದು ಚಿತ್ರ ಅಯ್ಯಣ್ಣಜ್ಜನ ಗುರು ಅಯ್ಯಪ್ಪ ತಾತನದು’ – ನಾವು ಕೇಳುವ ಮೊದಲೇ ಗ್ರಾಮಸ್ಥರು ವಿವರಿಸಿದರು. ಈ ಗುರು–ಶಿಷ್ಯರ ಫೋಟೊಗಳ ಜತೆಗೆ ಅಲ್ಲಿ ಇನ್ನೂ ಮೂರ್ನಾಲ್ಕು ದೇವರ ಫೋಟೊಗಳಿದ್ದವು. ಅವುಗಳ ಪಕ್ಕದಲ್ಲಿ ಏಕತಾರಿ ಮತ್ತು ಮುಂಭಾಗದಲ್ಲಿದ್ದ ತ್ರಿಶೂಲಗಳು ಸಂಗೀತ– ಅಧ್ಯಾತ್ಮದ ಪ್ರತಿಬಿಂಬದಂತೆ ಕಂಡವು.

ಆದಿಶೇಷನ ದ್ವಾರ!
ಬಲಕ್ಕೆ ಹೊರಳಿ, ದೀಪಗಳ ಬೆಳಕಿನಲ್ಲಿ ಹೆಜ್ಜೆ ಹಾಕಿದೆವು. ಕಮಾನು ಆಕಾರದ ಒಳಬಾಗಿಲು ಸ್ವಾಗತಿಸಿತು. ಮತ್ತೆ ಬಲಕ್ಕೆ ಹೊರಳಿದರೆ ಮೆಟ್ಟಿಲುಗಳು ಕಂಡವು. ಒಂದೊಂದೇ ಮೆಟ್ಟಿಲು ಇಳಿದಂತೆ ಪಂಚ ಪದರಗಳ ಬಾಗಿಲು ಎದುರಾಯಿತು. ಅದು ಆದಿಶೇಷನ ದ್ವಾರ. ಎದುರಿಗಿದ್ದ ಎತ್ತರದ ಹೊಸ್ತಿಲು ದಾಟಿ ಒಳಗೆ ಕಾಲಿಟ್ಟರೆ, ವರಾಂಡದ ಮಧ್ಯದಲ್ಲಿ ಅಗ್ನಿಕುಂಡ. ಅದರ ಮೇಲ್ಭಾಗದಲ್ಲಿ ಸೂರ್ಯನ ಕಿರಣಗಳು ಒಳಗೆ ನುಸುಳಲು ಸಣ್ಣ ಕಿಂಡಿ ಇತ್ತು. ವರಾಂಡದ ಎಡಭಾಗಕ್ಕೆ ಅಯ್ಯಣ್ಣಜ್ಜ ಅವರ ಶಯ್ಯಾಗೃಹ. ನೇರವಾಗಿ ದೃಷ್ಟಿ ಹಾಯಿಸಿದರೆ, ಎತ್ತರದ ಗದ್ದುಗೆ ಮೇಲೆ ಇರುವ ಭವ್ಯವಾದ ಆದಿಶೇಷನ ಮೂರ್ತಿ ನಿಬ್ಬೆರಗಾಗಿಸಿತು.

ಆದಿಶೇಷನಿಗೆ ನಮಿಸಿ, ಬಂದ ದಾರಿಯಲ್ಲೇ ಹೊರಬಂದು ಬಲಕ್ಕೆ ತಿರುಗಿದೆವು. ನುಣುಪಾದ ಒಳಗೋಡೆ, ಸಮತಟ್ಟಾದ ಕಲ್ಲಿನ ನೆಲ, ಬಹು ಪದರಗಳ ಚಾವಣಿ ಗವಿಯ ಸೊಬಗಿಗೆ ಕನ್ನಡಿ ಹಿಡಿದಿದ್ದವು. ಮತ್ತೊಂದು ಬಾಗಿಲು ಎದುರಾಯಿತು. ಆ ಗರ್ಭ ಗುಡಿಯನ್ನು ಪ್ರವೇಶಿಸಿದರೆ, ಅಲ್ಲಿ ಅಯ್ಯಣ್ಣಜ್ಜ ಅವರ ಆರಾಧ್ಯ ದೈವ ನಂದಿ (ಬಸವ) ಮತ್ತು ಶಿವಲಿಂಗ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದವು. ಅವುಗಳನ್ನು ದಾಟಿ ಎರಡು ಹೆಜ್ಜೆ ಇಟ್ಟರೆ, ಕೊರಳಿನಲ್ಲಿ ಹಾವು ಧರಿಸಿರುವ ಅಯ್ಯಣ್ಣಜ್ಜನ ಮೂರ್ತಿ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಇಂಥ ಸುಂದರ ಕಲಾಕುಸುರಿ ಕತ್ತಲೆಯಲ್ಲೇ ಉಳಿದೆದೆಯಲ್ಲ ಎಂಬ ಚಿಂತೆ ಬಿಟ್ಟೂ ಬಿಡದಂತೆ ಕಾಡಿತು.

ಗವಿ ನೋಡಿ ಬಂದ ಮೇಲೆ..
90 ಅಡಿ ಉದ್ದ, 15 ಅಡಿ ಅಗಲ, 12 ಅಡಿ ಎತ್ತರದ ಈ ಬೃಹತ್‌ ಗವಿಯನ್ನು ಸುತ್ತಾಡಿ ಬಂದ ಮೇಲೆ, ಅದರ ಹಿನ್ನೆಲೆಯ ಹುಡುಕಾಟ ಶುರುವಾಯಿತು. ಇತಿಹಾಸ ಪುಟಗಳನ್ನು ತಿರುವಿದಷ್ಟೂ ಕುತೂಹಲಕರ ಮಾಹಿತಿ ತೆರೆದುಕೊಳ್ಳುತ್ತಾ ಹೋಯಿತು.

ಅಮ್ಮಿನಬಾವಿ ಗ್ರಾಮದಲ್ಲಿರುವ ಈ ಬೃಹತ್‌ ಗವಿ ನಿರ್ಮಾಣ ಮಾಡಿದವರು ಅವಧೂತ ಅಯ್ಯಣ್ಣಜ್ಜ. ಇವರು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ವಂದವಗಲಿ ಗ್ರಾಮದವರು. 1919ರಲ್ಲಿ ರಾಗಪ್ಪ ಮತ್ತು ನರಸಮ್ಮ ಅವರ ನಾಲ್ಕನೇ ಮಗನಾಗಿ ಜನಿಸಿದರು. ನಂತರ ಲಕ್ಷ್ಮವ್ವ ಅವರನ್ನು ವಿವಾಹವಾದರು. ಈ ದಂಪತಿಗೆ ಶಂಕರ ಮತ್ತು ಈಶ್ವರ ಎಂಬ ಗಂಡು ಮಕ್ಕಳು ಜನ್ಮ ತಾಳಿದರು. ಕಾರಣಾಂತರದಿಂದ ಸಂಸಾರದಲ್ಲಿ ವೈರಾಗ್ಯ ಆವರಿಸಿ, ಏಕತಾರಿಯೊಂದಿಗೆ ಮನೆಬಿಟ್ಟು ಹೊರಟುಬಿಟ್ಟರು.

ಅಯ್ಯಪ್ಪ ತಾತಾ ಎಂಬುವವರಿಂದ ಗುರು ಉಪದೇಶ ಪಡೆದು, ದೇಶ ಪರ್ಯಟನೆ ಕೈಗೊಂಡರು ಅಯ್ಯಣ್ಣಜ್ಜ. ಒಮ್ಮೆ ಧಾರವಾಡ ಜಿಲ್ಲೆ ಕುಂದಗೋಳ ಸಮೀಪದ ಹಿರೇಹರಕುಣಿಗೆ ಬಂದಾಗ, ಊರಿನ ಗೌಡರ ಸವಾಲು ಸ್ವೀಕರಿಸಿ, ಪತ್ರಿ ಮರದ ಮೇಲೆ ಹತ್ತಿ ಕುಳಿತು 41 ದಿನ ನೀರಾಹಾರ ತೊರೆದು ವ್ರತ ಮಾಡಿದರು. ಅಲ್ಲಿ ಅಮ್ಮಿನಬಾವಿ ಗ್ರಾಮದ ಭಜನಾ ತಂಡದವರಿಗೆ ಪರಿಚಯರಾದ ಇವರು, ಅವರೊಂದಿಗೆ ಗ್ರಾಮಕ್ಕೆ ಬಂದು ಇಲ್ಲಿನ ರುದ್ರಭೂಮಿಯನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.

ರಾತ್ರಿ ಗುಡ್ಡ ಕೊರೆಯುವ ಕೆಲಸ!
ಸ್ಮಶಾನವಾಸಿಯಾದ ಅಯ್ಯಣ್ಣಜ್ಜ ಅವರು ನಾಲ್ಕು ಪತ್ರಿ ಮರ ನೆಟ್ಟು, ಗವಿ ನಿರ್ಮಾಣ ಕಾರ್ಯ ಕೈಗೊಂಡರು. ಹಗಲಿನಲ್ಲಿ ಅಧ್ಯಾತ್ಮ, ವೇದಾಂತ ಚರ್ಚೆ ಹಾಗೂ ಪಂಡಿತರು, ಕಲಾಕಾರರೊಂದಿಗೆ ಸಂವಾದ ನಡೆಸುತ್ತಿದ್ದರು. ಭಕ್ತರು, ಗ್ರಾಮಸ್ಥರು ನೀಡಿದ ಕಾಣಿಕೆಯಿಂದ ಅನ್ನದಾಸೋಹ ಮಾಡುತ್ತಿದ್ದರು. ಸಂಜೆ ವೇಳೆಗೆ ಏಕತಾರಿ, ಚಿಟಕಿ ಹಿಡಿದು ಹಾಡುತ್ತಾ ಮೈಮರೆಯುತ್ತಿದ್ದರು.

‘ರಾತ್ರಿ ಪ್ರಸಾದ ಸೇವಿಸಿದ ನಂತರ ಅಯ್ಯಣ್ಣಜ್ಜ ಅವರು ಬೋಳು ಗುಡ್ಡ ಕೊರೆಯಲು ಶುರು ಮಾಡುತ್ತಿದ್ದರು. ಇದಕ್ಕೆ ಬೇಕಾದ ಉಪಕರಣಗಳನ್ನು ಅಮ್ಮಿನಬಾವಿಯ ಹನುಮಂತಪ್ಪ ಕಂಬಾರ ಸಿದ್ಧ ಮಾಡಿಕೊಟ್ಟಿದ್ದರು. ಸುಮಾರು 15 ವರ್ಷ (1962–1977) ಪರಿಶ್ರಮಪಟ್ಟು ಏಕಾಂಗಿಯಾಗಿ ಈ ಭವ್ಯವಾದ ಗವಿಯನ್ನು ನಿರ್ಮಿಸಿದ್ದಾರೆ’ ಎಂದು ಅಮ್ಮಿನಬಾವಿ ಗ್ರಾಮದ ಹಿರಿಯರಾದ ಶಿವಪ್ಪ ದೊಡ್ಡಮನಿ, ಸಿದ್ದಪ್ಪ ಡೊಂಕನವರ, ಪುಂಡಲೀಕ ಕುರಿ ಅವರು ಅಯ್ಯಣ್ಣಜ್ಜನವರ ಸಾಧನೆಯ ಮೆಟ್ಟಿಲುಗಳನ್ನು ಪರಿಚಯಿಸುತ್ತಾ ಹೊರಟರು.

‘ಅಯ್ಯಣ್ಣಜ್ಜನ ಗವಿ ನಿರ್ಮಾಣ ಕಾರ್ಯಕ್ಕೆ ಊರಿನವರು ಕೈಜೋಡಿಸುತ್ತಿದ್ದರು. ಕೃಷಿ ಚಟುವಟಿಕೆಗೆ ಸೋಮವಾರ ಬಿಡುವಿನ ದಿನ. ಆ ದಿನ ಗವಿಯಲ್ಲಿ ಗ್ರಾಮಸ್ಥರ ‘ಶ್ರಮದಾನ’. ಗ್ರಾಮಸ್ಥರ ಸೇವೆ ಎಷ್ಟೆಂದರೆ ‘ಸಮುದ್ರಕ್ಕೆ ಒಂದು ಚರಗಿ (ಚೊಂಬು) ನೀರನ್ನು ಹಾಕಿದಷ್ಟು!’. ಅಂದರೆ ಶೇ 95ರಷ್ಟು ಕಾರ್ಯವನ್ನು ಅಯ್ಯಣ್ಣಜ್ಜ ಒಬ್ಬರೇ ಮಾಡುತ್ತಿದ್ದರು. ‘ಹಾಗಾಗಿ ಇದು ಏಕವ್ಯಕ್ತಿಯಿಂದ ನಿರ್ಮಾಣವಾದ ಗವಿ’ ಎನ್ನುತ್ತಾರೆ ಗ್ರಾಮಸ್ಥರು.

ಗವಿಯಲ್ಲೇ ವಾಸವಿದ್ದ ಅಯ್ಯಣ್ಣಜ್ಜ 1977ರಲ್ಲಿ ದೈವಾಧೀನರಾದರು. ಅವರ ಗದ್ದುಗೆಯನ್ನು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಕಲ್ಲುಬಾವಿ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಅಯ್ಯಣ್ಣಜ್ಜ ಅವರ ನಂತರ ಉತ್ತರಾಧಿಕಾರಿಯಾಗಿದ್ದ ಕಲ್ಲುಬಾವಿ ನರಸಿಂಹಜ್ಜ 2012ರಂದು ದೇಹತ್ಯಾಗ ಮಾಡಿದರು. ಇವರ ಗದ್ದುಗೆ ಅಮ್ಮಿನಬಾವಿ ಗವಿಯ ಮುಂಭಾಗದ ವನದಲ್ಲಿದೆ. ಇಲ್ಲಿ ನಿತ್ಯ ಪೂಜೆ ನಡೆಯುವುದಿಲ್ಲ. ಆದರೆ, ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲ ಸೇರಿ ಅಯ್ಯಣ್ಣಜ್ಜ ಮತ್ತು ಅವರ ಉತ್ತರಾಧಿಕಾರಿ ನರಸಿಂಹಜ್ಜ ಅವರ ಪುಣ್ಯತಿಥಿ ಕಾರ್ಯವನ್ನು ನೆರವೇರಿಸುತ್ತಾರೆ. ಆಂಧ್ರದ ಕಲ್ಲುಬಾವಿ, ವಂದವಗಲಿ ಗ್ರಾಮಗಳಿಂದ ಭಕ್ತರು ಬರುತ್ತಾರೆ. ಅಯ್ಯಣ್ಣಜ್ಜ ಅವರನ್ನು ದೇವರಂತೆ ಪೂಜಿಸುವ ಅಮ್ಮಿನಬಾವಿ ಗ್ರಾಮಸ್ಥರ ಮನೆಗಳಲ್ಲಿ ಅಯ್ಯಣ್ಣಜ್ಜ ಅವರ ಭಾವಚಿತ್ರವಿದೆ.

ಬಹುಮುಖ ಪ್ರತಿಭೆಯ ‘ಅವಧೂತ’
‘ಅಯ್ಯಣ್ಣಜ್ಜ ಅವರು ಅವಧೂತ ಮಾತ್ರವಲ್ಲ, ಅದ್ಭುತ ಶಿಲ್ಪಿ, ಸಂಗೀತಗಾರ, ಕವಿ, ದಾರ್ಶನಿಕ ಹೀಗೆ ಬಹುಮುಖ ಪ್ರತಿಭೆಯಾಗಿದ್ದರು ಎಂಬುದನ್ನು ನಾನು ನಡೆಸಿದ ಕ್ಷೇತ್ರ ಅಧ್ಯಯನದಿಂದ ಕಂಡುಕೊಂಡಿದ್ದೇನೆ’ ಎನ್ನುತ್ತಾರೆ ಅಮ್ಮಿನಬಾವಿ ಗ್ರಾಮದ ಉಪನ್ಯಾಸಕ ಡಾ. ಬಸವರಾಜ ಎನ್‌. ಉಂಡೋಡಿ.

‘ಕೈಯ್ಯಲ್ಲಿ ಬೆತ್ತ, ಹಣೆಯಲ್ಲಿ ವಿಭೂತಿ, ಬಗಲಿಗೊಂದು ಜೋಳಿಗೆ, ಸೊಂಟಕ್ಕೆ ಲಂಗೋಟಿ ಇವೇ ಅಯ್ಯಣ್ಣಜ್ಜ ಅವರ ವೇಷಭೂಷಣವಾಗಿತ್ತು. ಅಪ್ಪಟ ಸನ್ಯಾಸಿಯಾಗಿ, ಸರಳ ಜೀವನ ನಡೆಸಿದ ಅವರು, ಅಮ್ಮಿನಬಾವಿಗೆ ಐತಿಹಾಸಿಕ ಕಲಾಕೃತಿಯಾದ ‘ಗವಿ’ಯನ್ನು ಕೊಡುಗೆಯನ್ನಾಗಿ ನೀಡಿದ್ದಾರೆ. ಈ ಅಪರೂಪದ ಸಾಧಕನ ಕತೆ ಹೊರಜಗತ್ತಿಗೆ ಅಪರಿಚಿತವಾಗಿಯೇ ಉಳಿದಿದೆ. ಈ ಅನುಭಾವಿ ಮತ್ತು ಗವಿಯ ಇತಿಹಾಸ ಮುಂದಿನ ಪೀಳಿಗೆಗೂ ತಿಳಿಯಬೇಕಿದೆ’ ಎನ್ನುತ್ತಾರೆ ಡಾ.ಬಸವರಾಜ.


ಅವಧೂತ ಅಯ್ಯಣ್ಣಜ್ಜ

Post Comments (+)