ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಡ್ಯಾಡಿ ಅಬ್ಬಯ್ಯ: ಶಾಸಕ ಪ್ರಸಾದ ಅಬ್ಬಯ್ಯ

Last Updated 15 ಜೂನ್ 2019, 17:46 IST
ಅಕ್ಷರ ಗಾತ್ರ

ನಾನು ನಮ್ಮ ಡ್ಯಾಡಿ(ಅಬ್ಬಯ್ಯ ಯಲ್ಲಪ್ಪ)ಗೆ ಬಹಳ ಪ್ರೀತಿಯ ಮಗನಾಗಿದ್ದೆ. ಅವರನ್ನು ಬಿಟ್ಟು ಇರುತ್ತಿರಲಿಲ್ಲ. ಎಂಟನೇ ತರಗತಿವರೆಗೂ ಅವರೊಟ್ಟಿಗೆ ಮಲಗುತ್ತಿದ್ದೆ. ಅವರು ಕೆಲಸಕ್ಕೆ(ಫುಡ್‌ ಇನ್‌ಸ್ಪೆಕ್ಟರ್‌) ಹೋಗುವಾಗಲೂ ಬೆನ್ನುಬೀಳುತ್ತಿದ್ದೆ. ಬೇಸರಗೊಳ್ಳದೇ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ತಂದೆ–ತಾಯಿಗೆ ಐವರು ಹೆಣ್ಣು ಮತ್ತು ಆರು ಗಂಡು ಸೇರಿದಂತೆ 11 ಜನ ಮಕ್ಕಳಾದರೂ ಸಹ ಯಾವುದಕ್ಕೂ ಕೊರತೆ ಇಲ್ಲದಂತೆ ಸಾಕಿ, ಬೆಳೆಸಿದರು. ಎಲ್ಲರಿಗೂ ಉನ್ನತ ಶಿಕ್ಷಣ ಕೊಡಿಸಿದರು. ನನಗೆ ಮದುವೆಯಾಗು ಎಂದು ಆಗಾಗ ಪೀಡಿಸುತ್ತಿದ್ದರು. ನಾನು ಮಾತ್ರ ಮದುವೆ ಬೇಡ ಎಂದು ತೀರ್ಮಾನಿಸಿದ್ದೆ. ಆದರೆ, ಅವರು ತೀರಿಕೊಂಡ ಬಳಿಕ ಮದುವೆಯಾದೆ. ನನ್ನ ಹೆಂಡತಿ, ಮಕ್ಕಳನ್ನು ಅವರು ನೋಡಲಾಗಲಿಲ್ಲ. ಈ ವಿಷಯವಾಗಿ ಈಗಲೂ ನನಗೆ ಬೇಸರವಿದೆ.

ಪೆನ್ಷನ್‌ ಹಣವನ್ನು ಬಡವರು, ರೋಗಿಗಳ ಸಹಾಯಕ್ಕೆ ಬಳಕೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದ ಆಟೋರಾಜ ಎಂಬುವವರಿಗೆ ಮನಿ ಆರ್ಡರ್‌ ಮಾಡುತ್ತಿದ್ದರು. 2008ರ ವಿಧಾನಸಭೆ ಚುನಾವಣೆಗೆ ನಾನು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ನನಗೆ ಟಿಕೆಟ್‌ ಸಿಗುತ್ತದೆ ಎಂಬ ಆಶಾಭಾವ ತಂದೆ ಹೊಂದಿದ್ದರು. ಆದರೆ, ಟಿಕೆಟ್‌ ಸಿಗದಿರುವುದಕ್ಕೆ ಬೇಸರ ಮಾಡಿಕೊಂಡಿದ್ದರು. ಅವರು 2011ರಲ್ಲಿ ತೀರಿಕೊಂಡರು. ಆ ಮೇಲೆ ನಾನು ಶಾಸಕನಾದೆ. ರಾಜಕೀಯ ಹಿನ್ನೆಲೆ ಇಲ್ಲದೇ ಬೆಳೆದಿರುವ ನನ್ನನ್ನು ಅವರು ಇಂದು ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು.

80 ವರ್ಷ ಬಾಳಿ, ಬದುಕಿದ ಅವರು ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ಎಂ.ಎಂ. ಜೋಶಿ ಆಸ್ಪತ್ರೆಗೆ ದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಬೆಳಕಾಗಿದ್ದಾರೆ. ನನ್ನ ಪಾಲಿಗೆ ಅವರೊಬ್ಬ ಆದರ್ಶ ಡ್ಯಾಡಿ. ಕಲಘಟಗಿ ತಾಲ್ಲೂಕಿನ ಆಸ್ತಿಕಟ್ಟೆ ಗ್ರಾಮದಲ್ಲಿರುವ ಸಹೋದರನ ತೋಟದಲ್ಲಿ ಅವರ ಸಮಾಧಿ ಇದೆ. ಯಾವುದೇ ಶುಭ ಕಾರ್ಯ ಆರಂಭಿಸುವ ಮುನ್ನಾ ಅಲ್ಲಿಗೆ ಭೇಟಿ ನೀಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT