ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾತುರ್ಮಾಸ್ಯ ಆತ್ಮಸಾಧನೆಯ ವ್ರತ

Last Updated 1 ಜುಲೈ 2020, 20:30 IST
ಅಕ್ಷರ ಗಾತ್ರ

ಆಷಾಢಮಾಸ ಶುಕ್ಲ ಪಕ್ಷ ಏಕಾದಶಿ ದ್ವಾದಶಿ ಹುಣ್ಣಿಮೆ ಅಥವಾ ಕರ್ಕ ಸಂಕ್ರಾಂತಿಯಂದು ಚಾತುರ್ಮಾಸ್ಯವ್ರತ ಆರಂಭವಾಗುತ್ತದೆ. ಈ ದಿವಸಗಳಲ್ಲಿ ಯಾವಾಗ ಅದನ್ನು ಆರಂಭಿಸಿದರೂ ಕಾರ್ತಿಕ ಶುಕ್ಲ ದ್ವಾದಶಿಯಂದೇ ಮುಗಿಸಬೇಕೆಂದು ಧರ್ಮಶಾಸ್ತ್ರಗ್ರಂಥಗಳಲ್ಲಿದೆ. ಹೀಗೆ ಸುಮಾರು ನಾಲ್ಕು ತಿಂಗಳ ಕಾಲ ವ್ರತವನ್ನು ಆಚರಿಸುವುದು ಮುಖ್ಯ ಪಕ್ಷವಾದರೂ, ನಾಲ್ಕು ಪಕ್ಷ ಮಾತ್ರ ಅದನ್ನು ಆಚರಿಸಿದರೆ ಸಾಕು ಎಂದೂ ಶಾಸ್ತ್ರದಲ್ಲಿದೆ. ಇದನ್ನು ಯತಿಗಳು–ಸಾಧು-ಸಂತರು ಆಚರಿಸುವುದು ರೂಢಿಯಾದರೂ ಎಲ್ಲಾ ವರ್ಣಗಳವರೂ ಎಲ್ಲಾ ಆಶ್ರಮದವರೂ ಆಚರಿಸಬಹುದು. ನೈಷ್ಠಿಕ ಬ್ರಹ್ಮಚಾರಿಗಳು ಇಂದಿಗೂ ಇದನ್ನು ಆಚರಿಸುತ್ತಾರೆ. ಸಾಧ್ವಿಯರು ಇದರ ಆಚರಣೆ ಮಾಡುವುದು ಎಲ್ಲರಿಗೂ ತಿಳಿದೇ ಇದೆ.

ಆಸ್ತಿಕರಷ್ಟೇ ಅಲ್ಲದೆ ನಾಸ್ತಿಕರೂ ಈ ವ್ರತವನ್ನು ಪಾಲಿಸುತ್ತಾರೆ. ಜೈನರಾಗಲಿ, ಬೌದ್ಧರಾಗಲಿ ದೇವರ ನೆರಳಿನಲ್ಲಿ ವಿಶ್ವಾಸವಿಡುವುದಿಲ್ಲ. ಆದರೆ ಪುಣ್ಯ-ಪಾಪಗಳಲ್ಲಿ ಅವರಿಗೂ ವಿಶ್ವಾಸವಿದೆ. ಪರೋಪಕಾರ ಪುಣ್ಯವಾದರೆ, ಪರಪೀಡೆಯು ಪಾಪವೆಂದು ಅವರು ಭಾವಿಸುತ್ತಾರೆ. ಅಹಿಂಸೆಯು ಅತ್ಯಂತ ಶ್ರೇಷ್ಠವಾದ ಧರ್ಮವಾಗಿರುವುದರಿಂದ ಅದನ್ನು ಪಾಲಿಸುವುದು ಅವರಿಗೂ ಅನಿವಾರ್ಯವೆನ್ನಬಹುದು. ಮಳೆಗಾಲದಲ್ಲಿ ಉಂಬಳ ನಂಜುಳೆ ಚೋರಟೆಯಂತಹ ಸಾವಿರಾರು ಜಂತುಗಳು ಕಾಣತೊಡಗುತ್ತವೆ. ಅವುಗಳ ಹಿಂಸೆಯಾಗದೆ ಮಳೆಗಾಲ ಮುಗಿಯುವುದು ಕಷ್ಟಸಾಧ್ಯ. ಎಲ್ಲಿಗೂ ಹೋಗದಿದ್ದರೆ ಅದನ್ನು ಸುಲಭವಾಗಿ ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಈ ವ್ರತವನ್ನು ಮಾಡುತ್ತಾರೆ.

ಅದನ್ನು ಹೆಚ್ಚು ವರ್ಷ ಮಾಡಿದವನು ಹೆಚ್ಚಿನವನು ಎಂಬ ನಂಬಿಗೆಯೂ ಇದೆ. ಹಾಗಾದರೂ ಅದನ್ನು ಆಚರಿಸದೆ ಇರುವ ಮಹಾಜನರ ಅವಲಂಬನೆಯಿಂದಲೇ ವ್ರತವನ್ನು ಪೂರ್ಣ ಮಾಡಲು ಸಾಧ್ಯ. ವ್ರತವನ್ನು ಸಂಕಲ್ಪಿಸುವಾಗ ಸಹಾಯವನ್ನು ಮಾಡುವಂತೆ ಜನರನ್ನು ಪ್ರಾರ್ಥಿಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಸಹಾಯ ಮಾಡುವುದಾಗಿ ಮಹಾಜನರು ಆಶ್ವಾಸನೆ ಕೊಡುತ್ತಾರೆ. ಸಂಸ್ಕೃತದಲ್ಲಿರುವ ಈ ಸಂಭಾಷಣ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.ವ್ರತದ ಕೊನೆಯಲ್ಲಿ ಸೀಮೋಲ್ಲಂಘನ ಮಾಡುತ್ತಾರೆ. ಈ ಕಾರ್ಯಕ್ರಮ ಸಾಮಾನ್ಯವಾಗಿ ಭಾದ್ರಪದ ಹುಣ್ಣಿಮೆಯ ದಿನ ನಡೆಯುತ್ತದೆ.

ಈ ವ್ರತವನ್ನು ಗುರುಪೂರ್ಣಮೆಯ ದಿನ ಆರಂಭಿಸುವುದು ಅರ್ಥಪೂರ್ಣವಾಗಿದೆ. ಶ್ರೀಕೃಷ್ಣನು ಜಗದ್ಗುರು. ಸನಕಾದಿಗಳು ಬ್ರಹ್ಮವಿದರು. ಅವರು ಅಧ್ಯಾತ್ಮವಿದ್ಯೆಯನ್ನು ಉಪದೇಶಿಸಿದ ಸಂಗತಿ ಸನತ್ಸುಜಾತೀಯದಿಂದ ತಿಳಿದು ಬರುತ್ತದೆ. ವ್ಯಾಸರು ಶ್ರೀಕೃಷ್ಣನ ಇನ್ನೊಂದು ರೂಪ. ಆಷ್ಟೇ ಅಲ್ಲ, ವೇದವನ್ನು ಅವರು ಶಿಷ್ಯರಿಗೆ ಪಾಠ ಮಾಡಿದವರು. ಆಚಾರ್ಯ ಶಂಕರರು ವೇದಾಂತವನ್ನು ಮತ್ತೆ ಉಪದೇಶಿಸಿ ಅದರಲ್ಲಿರುವ ಕೊಳೆಯನ್ನು ನಿವಾರಿಸಿದವರು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ಅವುಗಳಲ್ಲಿ ತಮ್ಮ ಪ್ರಧಾನ ಶಿಷ್ಯರನ್ನು ನೇಮಿಸುವ ಮೂಲಕ ವೈದಿಕ ಧರ್ಮವನ್ನು ಅವರು ರಕ್ಷಿಸಿದವರು. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಆದರದಿಂದ ಸ್ಮರಿಸಲಾಗುತ್ತದೆ.

ಪ್ರಥಮೈಕಾದಶಿಯಿಂದ ಪ್ರಬೋಧೈಕಾದಶಿಯ ವರೆಗೆ ವಿಷ್ಣುವನ್ನು ವಿಶೇಷವಾಗಿ ಆರಾಧಿಸುತ್ತಾರೆ. ಆಷಾಢ ಶುಕ್ಲದಶಮಿಯಿಂದ ಆರಂಭವಾಗಿ ಕಾರ್ತಿಕ ಹುಣ್ಣಿಮೆಗೆ ಈ ವ್ರತ ಮುಗಿಯುತ್ತದೆ. ಈ ನಾಲ್ಕು ತಿಂಗಳುಗಳಲ್ಲಿ ಕ್ರಮವಾಗಿ ಶಾಕವ್ರತ, ದಧಿ ವ್ರತ, ಕ್ಷೀರವ್ರತ ಮತ್ತು ದ್ವಿದಳವ್ರತವನ್ನು ಆಚರಿಸುತ್ತಾರೆ.ಚಾತುರ್ಮಾಸ್ಯದಲ್ಲಿ ಸಜ್ಜನಸಂಗ ಭಕ್ತಿ ತರ್ಪಣ ಗೋದಾನ ವೇದಾಭ್ಯಾಸ ಸತ್ಕಾರ್ಯ ಸತ್ಯ ಗೋಸೇವೆ ದಾನ ಧರ್ಮಾಚರಣೆ - ಕರ್ತವ್ಯ ಎನ್ನಲಾಗಿದೆ.

ಜೈನರ ಆಚರಣೆ ಅತ್ಯಂತ ಕಠೋರವಾಗಿದೆ. ವರ್ಷಯೋಗ ಎಂದೇ ಪ್ರಸಿದ್ಧವಾದ ಈ ವ್ರತವನ್ನು ಶ್ರಮಣರೂ ಶ್ರಮಣಿಯರೂ ತಪ್ಪದೆ ಆಚರಿಸುತ್ತಾರೆ. ಮೌನ ಉಪವಾಸ ಪ್ರವಚನ ಮುಂತಾದವು ನಡೆಯುತ್ತವೆ. ಪರ್ಯೂಷಣ ಅಥವಾ ಕ್ಷಮಾಪ್ರಾರ್ಥನೆ ಈ ಸಂದರ್ಭದಲ್ಲಿಯೇ ಬರುತ್ತದೆ. ಭದ್ರಬಾಹು ಎಂಬ ಜೈನಮುನಿ ಒಂದನೆಯ ಶತಮಾನದಲ್ಲಿ ಬರೆದ ಕಲ್ಪಸೂತ್ರದಲ್ಲಿ ಈ ವ್ರತದ ವಿಶೇಷ ವಿವರಣೆಯಿದೆ.

ಸ್ವತಃ ಗೌತಮ ಬುದ್ಧನು ರಾಜಗೀರಿನ ಬಿಂಬಸಾರನ ಉದ್ಯಾನದಲ್ಲಿ ಈ ವ್ರತವನ್ನು ಆಚರಿಸಿದ ಬಗ್ಗೆ ಉಲ್ಲೇಖವಿದೆ. ಅಲ್ಲಿಂದ ಇಲ್ಲಿಯ ವರೆಗೂ ಬುದ್ಧನ ಅನುಯಾಯಿಗಳು ಈ ವ್ರತವನ್ನು ತಪ್ಪದೆ ಆಚರಿಸುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT