ಭಾನುವಾರ, ಜನವರಿ 17, 2021
19 °C

ಭೂತಾಯಿಗೆ ಬಾಗಿನ ಅರ್ಪಿಸಿ, ಬೆಳೆಗೆ ಸೀಮಂತ ಮಾಡುವ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವ. ಎಳ್ಳ ಅಮಾವಾಸ್ಯೆಯ ದಿನ ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯ.ಜಮೀನುಗಳಲ್ಲಿಯ ಬೆಳೆಯ ಮಧ್ಯೆ ಐದು ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ‘ದೇವರಿಗೆ’ ಉಡಿ ತುಂಬುತ್ತಾರೆ. ತಾವು ಒಯ್ದ ನೈವೇದ್ಯವನ್ನು ಬೆಳೆಯಲ್ಲಿ ಎರಚಿ (ಚರಗ ಚೆಲ್ಲಿ) ಭೂತಾಯಿಗೆ ಉಣಬಡಿಸುತ್ತಾರೆ. ನಂತರ ಬಂಧು–ಬಾಂಧವರೆಲ್ಲರೂ ಸಹಭೋಜನ ಸವಿಯುತ್ತಾರೆ. ಸ್ವಲ್ಪ ಹೊತ್ತು ಅಲ್ಲೇ ವಿಶ್ರಮಿಸುತ್ತಾರೆ. ಹೊಲದಲ್ಲಿ ಹುಲುಸಾಗಿ ಬೆಳೆದ ಕಡಲೆ, ಜೋಳದ ತನೆ ಕೊಯ್ದು ಸೀತನಿ ಸವಿಯುತ್ತಾರೆ. ಕೆಲವರು ಗ್ರಾಮೀಣ ಆಟಗಳನ್ನು ಆಡಿ ಸಂಭ್ರಮಿಸುತ್ತಾರೆ.

***

ಎಳ್ಳ ಅಮಾವಾಸ್ಯೆ. ಹಸಿರು ಹೊದ್ದು ಕಂಗೊಳಿಸುವ ಭೂರಮೆಗೆ ಬಾಗಿನ ಅರ್ಪಿಸುವ, ಹುಲುಸಾಗಿ ಬೆಳೆದ ಬೆಳೆಗೆ ಸೀಮಂತ ಮಾಡಿ ಉತ್ತಮ ಇಳುವರಿ ಬರಲಿ ಎಂದು ಪೂಜಿಸುವ ವಿಶಿಷ್ಟ ಹಬ್ಬ. ಬಂಧು–ಬಾಂಧವರು ಪ್ರಕೃತಿ ಮಡಿಲಲ್ಲಿ ಇಡೀ ದಿನ ಸಂಭ್ರಮಿಸಲು ಇರುವ ಅವಕಾಶ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವ. ಎಳ್ಳ ಅಮಾವಾಸ್ಯೆಯ ದಿನ ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯ.

ಸಜ್ಜೆರೊಟ್ಟಿ, ಜೋಳದ ಖಡಕ್‌ ರೊಟ್ಟಿ, ಹೂರಣದ ಹೋಳಿಗೆ, ಎಳ್ಳಿನ ಹೋಳಿಗೆ, ಶೇಂಗಾ ಹೋಳಿಗೆ, ಚಪಾತಿ,  ಶೇಂಗಾ–ಪುಟಾಣಿ, ಗುರೆಳ್ಳು ಹೀಗೆ ವಿವಿಧ ಬಗೆಯ ಚಟ್ನಿ, ವೈವಿಧ್ಯಮಯ ಪಲ್ಯ, ಬಗೆಬಗೆಯ ಅನ್ನ, ಭಜ್ಜಿ, ಕಡುಬು, ಹೀಗೆ ತರಹೇವಾರಿ ಮೃಷ್ಟಾನ್ನ ತಯಾರಿಸಿಕೊಂಡು ಮನೆ ಮಂದಿ ಎಲ್ಲ ಜಮೀನುಗಳಿಗೆ ತೆರಳುತ್ತಾರೆ.

ಜಮೀನುಗಳಲ್ಲಿಯ ಬೆಳೆಯ ಮಧ್ಯೆ ಐದು ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ‘ದೇವರಿಗೆ’ ಉಡಿ ತುಂಬುತ್ತಾರೆ. ತಾವು ಒಯ್ದ ನೈವೇದ್ಯವನ್ನು ಬೆಳೆಯಲ್ಲಿ ಎರಚಿ (ಚರಗ ಚೆಲ್ಲಿ) ಭೂತಾಯಿಗೆ ಉಣಬಡಿಸುತ್ತಾರೆ. ನಂತರ ಬಂಧು–ಬಾಂಧವರೆಲ್ಲರೂ ಸಹಭೋಜನ ಸವಿಯುತ್ತಾರೆ. ಸ್ವಲ್ಪ ಹೊತ್ತು ಅಲ್ಲೇ ವಿಶ್ರಮಿಸುತ್ತಾರೆ. ಹೊಲದಲ್ಲಿ ಹುಲುಸಾಗಿ ಬೆಳೆದ ಕಡಲೆ, ಜೋಳದ ತನೆ ಕೊಯ್ದು ಸೀತನಿ ಸವಿಯುತ್ತಾರೆ. ಕೆಲವರು ಗ್ರಾಮೀಣ ಆಟಗಳನ್ನು ಆಡಿ ಸಂಭ್ರಮಿಸುತ್ತಾರೆ.

ಹೊಲಕ್ಕೆ ಹೋಗುವುದೇ ಸಂಭ್ರಮ: ಚರಗ ಚೆಲ್ಲಲು ಹೊಲಕ್ಕೆ ಹೋಗುವುದನ್ನು ನೋಡುವುದೇ ಸಂಭ್ರಮ. ಮಹಿಳೆಯರ ಪಾಲಿಗೆ ಇದು ಸಡಗರದ ಹಬ್ಬ. ಹಬ್ಬದ ಹಿಂದಿನ ದಿನವೇ ಅಗತ್ಯ ತರಕಾರಿ ಖರೀದಿಸುತ್ತಾರೆ. ಅದನ್ನು ಸ್ವಚ್ಛಮಾಡಿಟ್ಟುಕೊಂಡು ಮರುದಿನ ನಸುಕಿನಲ್ಲಿ ಎದ್ದು ಅಡುಗೆ ತಯಾರಿಸುತ್ತಾರೆ. ಬಂಧುಗಳನ್ನು–ನೆರೆ ಹೊರೆಯವರು ಹಾಗೂ ಮಿತ್ರರನ್ನೂ ಊಟಕ್ಕೆ ಆಹ್ವಾನಿಸುವುದರಿಂದ ಅಡುಗೆಯನ್ನು ಹೆಚ್ಚಾಗಿಯೇ ತಯಾರಿಸಿಕೊಳ್ಳುತ್ತಾರೆ.

ಹೀಗೆ ತಯಾರಿಸಿಕೊಂಡ ಅಡುಗೆಯನ್ನು ಕಟ್ಟಿಕೊಂಡು, ನೀರಿನ ದೊಡ್ಡ ಬಾಟಲಿಗಳನ್ನು ಇಟ್ಟುಕೊಂಡು ಕಾರು, ದ್ವಿಚಕ್ರವಾಹನ, ಟ್ರ್ಯಾಕ್ಟರ್‌, ಆಟೊ ರಿಕ್ಷಾ, ಟಂಟಂ ಹೀಗೆ ಲಭ್ಯವಿರುವ ವಾಹನಗಳನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತಾರೆ. ಗ್ರಾಮೀಣ ಪ್ರದೇಶದ ರೈತರು ಎತ್ತಿನ ಬಂಡಿಯಲ್ಲಿ ಎಲ್ಲರೂ ಕುಳಿತು ಹೊಲಕ್ಕೆ ಹೋಗಿ ಬರುತ್ತಾರೆ. ಹೊಸ ಬಟ್ಟೆ ತೊಟ್ಟು– ಬುತ್ತಿ ಕಟ್ಟಿಕೊಂಡು ಎಲ್ಲರೂ ಒಟ್ಟಾಗಿ ಹೊಲಕ್ಕೆ ಹೋಗುವುದನ್ನು ನೋಡುವುದೇ ಒಂದು ಸೊಬಗು.

ಇನ್ನು ಕೆಲವೆಡೆ ಅವರೆಕಾಳು, ಸೊಪ್ಪು, ಬಟಾಣಿ, ಶೇಂಗಾ, ಹಸಿಕಡಲೆ ಸೇರಿಸಿ ‘ಭಜ್ಜಿ’ ತಯಾರಿಸುತ್ತಾರೆ. ಹಬ್ಬದ ಹಿಂದಿನ ದಿನ ತರಕಾರಿ ವ್ಯಾಪಾರಿಗಳು ತೊಂಡೆಕಾಯಿ, ಕೊತ್ತಂಬರಿ, ಎಲೆ ಈರುಳ್ಳಿ, ಮೆಂತೆ ಸೊಪ್ಪು, ಗಜ್ಜರಿ, ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಬದನೆಕಾಯಿ, ಹೀರೇಕಾಯಿ, ಬೀನ್ಸ್ ಎಲ್ಲವೂ ಮಿಶ್ರ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಇದಕ್ಕೆ ’ಮಿಶ್ರ ತರಕಾರಿ’ ಎಂದೇ ಅವರು ಕರೆಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು