ಶುಕ್ರವಾರ, ನವೆಂಬರ್ 22, 2019
26 °C

ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್‌

Published:
Updated:
Prajavani

ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಟ್ಟು ಆದೇಶ ಹೊರಡಿಸಿದ್ದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಟಿಪ್ಪು ಪಾಠವನ್ನು ಶಾಲಾ ಪಠ್ಯದಿಂದ 101 ಪರ್ಸೆಂಟ್‌ ತೆಗೆದು ಹಾಕಲಾಗುವುದು ಎಂದು ಘೋಷಿಸಿದೆ. ಇಂತಹ ಸನ್ನಿವೇಶದಲ್ಲಿ ಮೈಸೂರಿನ ಈ ದೊರೆಯ ಚಾರಿತ್ರಿಕ ಮಹತ್ವದ ವಿಶ್ಲೇಷಣೆ ಇಲ್ಲಿದೆ...

**

ಭಾರತೀಯ ಇತಿಹಾಸದಲ್ಲಿ ಟಿಪ್ಪು ಸುಲ್ತಾನನದು ಒಂದು ಆಕರ್ಷಕ ವ್ಯಕ್ತಿತ್ವ. ಅವನ ಅಲ್ಪಕಾಲಿಕವೂ ಘಟನಾಪೂರ್ಣವೂ ಆದ ಆಳ್ವಿಕೆಯು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಅವನ ಪ್ರಾಮುಖ್ಯವಿರುವುದು ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲವಾದ ವಿರೋಧವನ್ನು ಒಡ್ಡಿದುದರಲ್ಲಿ. ಅವನಷ್ಟು ದುಸ್ಸಾಧ್ಯವಾದ ಶತ್ರುವನ್ನು ಬ್ರಿಟಿಷರು ಎಂದೂ ಎದುರಿಸಲಿಲ್ಲ. ಅವನ ಆಳ್ವಿಕೆ ಪ್ರಾರಂಭವಾಗುವುದು ಇಂಗ್ಲಿಷರ ವಿರುದ್ಧವಾಗಿ ನಡೆದಿದ್ದ ಯುದ್ಧದ ಮಧ್ಯೆ; ಅದು ಕೊನೆಗೊಳ್ಳುವುದೂ ಅವರೆದರು ಮಾಡುತ್ತಿದ್ದ ಯುದ್ಧದ ನಡುವೆಯೇ.

ಕನಸುಗಳಲ್ಲೂ ಅವನು ಇಂಗ್ಲಿಷರೊಡನೆ ಮಾಡು–ಮಡಿ ಹೋರಾಟ ನಡೆಸುತ್ತಿದ್ದ. ನರಿಯ ಹಾಗೆ ನೂರುವರ್ಷ ಬದುಕುವುದಕ್ಕಿಂತ ಸಿಂಹದ ಹಾಗೆ ಒಂದು ದಿನ ಬದುಕುವುದೇ ಮೇಲು ಎಂಬುದು ಅವನ ಧ್ಯೇಯವಾಗಿತ್ತು. ಅವನ ಜೀವಿತದ ಧ್ಯೇಯವೇ ಭಾರತದಿಂದ ಇಂಗ್ಲಿಷರನ್ನು ಹೊರಗಟ್ಟುವುದು. ಅದಕ್ಕಾಗಿ ತನ್ನೆಲ್ಲ ಸಾಧನ ಸಂಪತ್ತನ್ನೂ, ಶಕ್ತಿ ಸಾಮರ್ಥ್ಯಗಳನ್ನೂ, ಅಧಿಕಾರವನ್ನೂ ಉಪಯೋಗಿಸಿದ. ಕೊನೆಗೆ ತನ್ನ ಪ್ರಾಣವನ್ನೇ ಒಪ್ಪಿಸಿದ. ಎಂದಿಗೂ ಆ ಗುರಿಯಿಂದ ಅತ್ತಿತ್ತ ಚಲಿಸಲಿಲ್ಲ. ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ವಿದೇಶಿ ಪ್ರಭುತ್ವಕ್ಕೆ ಅಧೀನವಾಗಲಿಲ್ಲ.

ಭಾರತದ ಯಾವ ರಾಜ್ಯವೂ ಟಿಪ್ಪು ಸುಲ್ತಾನ್ ಸೆಣಸಿದಷ್ಟು ಯುದ್ಧಗಳಲ್ಲಿ ಪಾಲ್ಗೊಳ್ಳಲಿಲ್ಲ. ಟಿಪ್ಪು ನಾಲ್ಕು ‘ಮೈಸೂರು ಯುದ್ಧ’ಗಳಲ್ಲಿ ಸೆಣಸಾಟ ನಡೆಸಬೇಕಾಯಿತು. ಬೇರೆಯವರು ಯಾವ ಯುದ್ಧಗಳಲ್ಲೂ ಬ್ರಿಟಿಷರನ್ನು ಸೋಲಿಸಿರಲಿಲ್ಲ. ಟಿಪ್ಪು ಮೊದಲ ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಜಯ ಸಾಧಿಸಿದ. ಬ್ರಿಟಿಷರ ಸೈನ್ಯದ ಬಹುತೇಕ ಕಮಾಂಡರ್‌ಗಳನ್ನು ಕೈದಿಗಳನ್ನಾಗಿ ಇರಿಸಿಕೊಂಡ. 

ವಸಾಹತುಶಾಹಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಿದ್ದು ಟಿಪ್ಪುವಿನ ಮುಖ್ಯ ಕೊಡುಗೆ. ಟಿಪ್ಪು ಒಳ್ಳೆಯ ಆಡಳಿತಗಾರ ಕೂಡ ಆಗಿದ್ದ. ಒಂದಲ್ಲ, ಹಲವು ಕ್ಷೇತ್ರಗಳಲ್ಲಿ ರಾಜ್ಯವನ್ನು ಆಧುನಿಕಗೊಳಿಸಿದ. ಆಗಿನ ಕಾಲದಲ್ಲಿ ರಾಕೆಟ್ ವ್ಯವಸ್ಥೆಯ ಬಗ್ಗೆ ಯಾರೂ ಆಲೋಚನೆಯನ್ನೇ ಮಾಡಿರಲಿಲ್ಲ. ಟಿಪ್ಪು ಬಳಸಿ ತೋರಿಸಿದ್ದ. ಬಹುತೇಕ ಹಿಂದೂ, ಮುಸ್ಲಿಂ ರಾಜರು ನೌಕಾಪಡೆಯ ಬಗ್ಗೆ ಆಲೋಚನೆಯನ್ನೇ ಮಾಡಿರದಿದ್ದ ಹೊತ್ತಿನಲ್ಲಿ, ಅಂದಾಜು ನೂರು ನೌಕೆಗಳ ಪಡೆಯನ್ನು ಟಿಪ್ಪು ಕಟ್ಟಿದ. ಅವುಗಳನ್ನು ಭಾರತದ ವಸ್ತುಗಳನ್ನೇ ಬಳಸಿ, ಕಟ್ಟಿದ. ಅವು ಬ್ರಿಟಿಷರ ನೌಕಾಪಡೆಗೆ ಸರಿಸಾಟಿಯಾಗಿದ್ದವು.

ಟಿಪ್ಪುವಿನ ಆಳ್ವಿಕೆಯ ಮತ್ತೊಂದು ಮುಖ್ಯವಾದ ಅಂಶವೆಂದರೆ ತನ್ನ ಪ್ರಜೆಗಳ ಕಲ್ಯಾಣದ ಕುರಿತು ಅವನಗಿದ್ದ ಕಳಕಳಿ. ನಾಣ್ಯ ತಯಾರಿಕೆ, ಕ್ಯಾಲೆಂಡರ್‌, ಅಳತೆ ಮತ್ತು ತೂಕ, ಬ್ಯಾಂಕಿಂಗ್‌, ಹಣಕಾಸು, ವ್ಯಾಪಾರ–ವಾಣಿಜ್ಯ, ಕೃಷಿ ಮತ್ತು ಕೈಗಾರಿಕೆ, ನೀತಿ ಕಟ್ಟಳೆಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳು – ಹೀಗೆ ಹಲವು ವಲಯಗಳಲ್ಲಿ ಆತನ ಆಡಳಿತ ಸುಧಾರಣೆಯ ಉತ್ಸಾಹ ಹರಡಿತ್ತು; . ತನ್ನ ಪ್ರಜೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ತನ್ನ ನಾಡಿನ ಗೌರವವನ್ನೂ ಸಂಪದಭಿವೃದ್ಧಿಯನ್ನೂ ಹೆಚ್ಚಿಸಲು ಶಕ್ತಿ ಮೀರಿ ಶ್ರಮಿಸಿದ.

ಟಿಪ್ಪು ಮತೀಯ ಭಾವನೆಯನ್ನು ಎಂದಿಗೂ ಹೊಂದಿರಲಿಲ್ಲ. ಮುಸ್ಲೀಮೇತರ ಜನತೆಯೇ ಬಹುಸಂಖ್ಯೆಯಲ್ಲಿ ಇರುವ ಒಂದು ರಾಜ್ಯವನ್ನು ತಾನು ಆಳುತ್ತಿರುವ ಸ್ಪಷ್ಟ ಅರಿವು ಆತನಿಗಿತ್ತು. ನ್ಯಾಯಯುತವೂ ಮುಕ್ತವೂ ಜಾತ್ಯತೀತವೂ ಆದ ನೀತಿಯನ್ನು ಅನುಸರಿಸಿ ಎಲ್ಲರನ್ನೂ ಸಮಾನವಾಗಿ ಒಳ್ಳೆಯತನದಿಂದ ನೋಡಿದರೆ ಮಾತ್ರವೇ ತಾನು ಉಳಿದುಕೊಳ್ಳಲು ಸಾಧ್ಯ ಎನ್ನುವುದನ್ನು ಆತ ಮನಗಂಡಿದ್ದ. ಟಿಪ್ಪುವು ಶೃಂಗೇರಿ ಸ್ವಾಮಿಗಳಿಗೆ ಬರೆದ ಪತ್ರಗಳು ಅವನು ಎಷ್ಟೊಂದು ಮತೀಯ ಸಹಿಷ್ಣುವಾಗಿದ್ದ ಎಂಬುದಕ್ಕೆ ಸಾಕ್ಷಿ. ಒಂದು ಪತ್ರದಲ್ಲಿ ಆತ ಸಂಸ್ಕೃತ ಶ್ಲೋಕವನ್ನೂ ಉದ್ಧರಿಸಿದ್ದ. ‘ಜನರು ದುಷ್ಕಾರ್ಯಗಳನ್ನು ನಗುನಗುತ್ತಾ ಮಾಡುತ್ತಾರೆ. ಆದರೆ, ಅದರ ಫಲಗಳನ್ನು ಅಳುತ್ತಾ ಅನುಭವಿಸಬೇಕಾಗುತ್ತದೆ’ ಎನ್ನುವುದು ಆ ಶ್ಲೋಕದ ಅರ್ಥ.

ಮರಾಠರ ಪರಶುರಾಮ ಭಾವು ನೇತೃತ್ವದ ಸೈನ್ಯ ದಾಳಿ ನಡೆಸಿ ಶೃಂಗೇರಿ ದೇವಾಲಯಕ್ಕೆ ಹಾನಿ ಉಂಟುಮಾಡಿದಾಗ, ಶಾರದಾ ಮಾತೆಯ ಬೇರೊಂದು ಮೂರ್ತಿಯನ್ನು ಪ್ರತಿಷ್ಠಾಪಿಸಲು ಟಿಪ್ಪು ಧನಸಹಾಯ ಮಾಡಿದ್ದು, ವಿಗ್ರಹದ ಪ್ರತಿಷ್ಠಾಪನೆಯ ಬಳಿಕ ಸ್ವಾಮೀಜಿ ಖುಷಿಯಿಂದ ಶಾಲನ್ನೂ ಪ್ರಸಾದವನ್ನೂ ಟಿಪ್ಪುವಿಗೆ ಕಳುಹಿಸಿಕೊಟ್ಟಿದ್ದು ಚಾರಿತ್ರಿಕ ದಾಖಲೆ. ಶಾರದಾ ಮಾತೆಗೆ ಚಿನ್ನದ ಜರಿಯ ಸೀರೆಯನ್ನೂ ಸ್ವಾಮೀಜಿಗೆ ಜೋಡಿ ಶಾಲುಗಳನ್ನೂ ಟಿಪ್ಪು ಕಳುಹಿಸಿಕೊಟ್ಟಿದ್ದಕ್ಕೆ ದಾಖಲೆಗಳಿವೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ರತ್ನಖಚಿತವಾದ ಬಟ್ಟಲನ್ನು ಕೊಟ್ಟಿದ್ದ ಟಿಪ್ಪು, ಮೇಲುಕೋಟೆಯ ನಾರಾಯಣಸ್ವಾಮಿ ದೇವಾಲಯಕ್ಕೆ ಚಿನ್ನ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಮಾತ್ರವಲ್ಲದೆ ಆನೆಗಳನ್ನೂ ಅರ್ಪಿಸಿದ್ದ.

ರಂಗನಾಥ ದೇವಾಲಯವು ಟಿಪ್ಪುವಿನ ಅರಮನೆಯಿಂದ ಕೇವಲ ಒಂದು ಕಲ್ಲೆಸೆತದ ದೂದಲ್ಲಿತ್ತು. ಅಲ್ಲಿ ಅವನು ಮುಯೆಜಿನನ ಪ್ರಾರ್ಥನಾ ಕರೆಯನ್ನೂ ದೇವಾಲಯದ ಗಂಟೆಗಳ ನಾದವನ್ನೂ ಸಮಾನ ಗೌರವದಿಂದ ಆಲಿಸುತ್ತಿದ್ದ. ಹಿಂದೂ ದೇವಾಲಯಗಳಿಗೆ ಬೇಕಾದಷ್ಟು ದತ್ತಿಗಳನ್ನೂ ಕಾಣಿಕೆಗಳನ್ನೂ ಅರ್ಪಿಸಿದ್ದ. 156 ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಆತ ಪೋಷಣೆ ಒದಗಿಸಿದ್ದ. ಪೂರ್ಣಯ್ಯ, ಕೃಷ್ಣರಾವ್‌, ಶ್ರೀನಿವಾಸರಾವ್‌ ಅವರಂಥ ಹಿಂದೂಗಳು ಆತನ ದಿವಾನರಾಗಿದ್ದರು. ಜಾತಿ, ಜನಾಂಗ, ಧರ್ಮ ಅಥವಾ ಪಂಗಡಗಳ ಆಧಾರದ ಮೇಲೆ ಆತ ಎಂದಿಗೂ ಪಕ್ಷಪಾತ ಮಾಡಲಿಲ್ಲ.

ಇದನ್ನೂ ಓದಿ: 'ಯಡಿಯೂರಪ್ಪರಂಥ 10 ಸಿಎಂಗಳು ಬೇಡ ಎಂದರೂ ಟಿಪ್ಪು ಜಯಂತಿ ಆಚರಿಸುವುದು ಶತಸಿದ್ಧ'

ಕೃಷಿಗೆ ಟಿಪ್ಪು ಕೊಟ್ಟಿದ್ದ ಉತ್ತೇಜನದ ಕುರಿತು ಆತನ ಕಡು ವಿರೋಧಿಯಾಗಿದ್ದ ಇಂಗ್ಲಿಷ್‌ ಅಧಿಕಾರಿ ಜೇಮ್ಸ್‌ ಮಿಲ್‌ ದಾಖಲಿಸಿದ ರೀತಿ ಇಲ್ಲಿ ಉಲ್ಲೇಖನೀಯ. ‘ಟಿಪ್ಪುವಿನ ರಾಜ್ಯದಲ್ಲಿ ಅತ್ಯುತ್ತಮವಾಗಿ ಕೃಷಿ ಚಟುವಟಿಕೆಗಳು ನಡೆದಿವೆ. ಅಲ್ಲಿಯ ಜನರು ಇಡೀ ಭಾರತದಲ್ಲೇ ಅತ್ಯಂತ ಹೆಚ್ಚು ಪ್ರಗತಿ ಕಂಡಿರುವ ಜನರಾಗಿದ್ದಾರೆ. ಇಂಗ್ಲಿಷರ ಮತ್ತು ಅವರ ಆಶ್ರಿತರ ಕೈಕೆಳಗಿದ್ದ ಕರ್ನಾಟಕ ಮತ್ತು ಔಧ್‌ಗಳು ಬಂಜರು ಭೂಮಿಯಾಗುವ ಹಾದಿಯಲ್ಲಿ ದಾಪುಗಾಲಿಟ್ಟು ಈ ಭೂಮಿಯ ಮೇಲಿನ ಅತಿ ದರಿದ್ರ ಪ್ರದೇಶವಾಗಿದ್ದವು’ ಎಂದು ಆತ ವರದಿ ಮಾಡಿದ್ದ.

ಟಿಪ್ಪುವು ಕಬ್ಬು, ಗೋಧಿ ಮತ್ತು ಬಾರ್ಲಿಯ ಬೇಸಾಯಕ್ಕೆ, ತೇಗ, ನೀಲ, ಅಕೇಶಿಯ, ಶ್ರೀಗಂಧ, ಅಡಿಕೆ ಮತ್ತು ಮಾವಿನ ತೋಟಗಳಿಗೆ ಹೆಚ್ಚಿನ ಆಸಕ್ತಿ ತೋರಿಸಿದ್ದ. ರಾಜ್ಯದಲ್ಲಿ ಎಲ್ಲೂ ಅಫೀಮು ಬೆಳೆಯಕೂಡದೆಂದು ನಿಷೇಧಿಸಿದ್ದ. ಅಡಿಕೆ ಬೆಳೆಗಾರರಿಗೆ ಮೊದಲ ಐದು ವರ್ಷಗಳವರೆಗೆ ಕಂದಾಯದಿಂದ ವಿನಾಯ್ತಿ ನೀಡಿದ್ದ. ಆರನೆಯ ವರ್ಷದಿಂದ ಮಾಮೂಲು ದರದ ಅರ್ಧ ಕಂದಾಯ ಕೊಟ್ಟರೆ ಸಾಕು ಎಂದು ನಿಯಮ ಮಾಡಿದ್ದ. ವೀಳ್ಯದೆಲೆಯ ಬೆಳೆಗಾರರಿಗೂ ತೆಂಗು ಕೃಷಿ ಮಾಡುವವರಿಗೂ ಅದೇ ರಿಯಾಯ್ತಿ ಅನ್ವಯಿಸಿದ್ದ.

ಮೈಸೂರು ರಾಜ್ಯದಲ್ಲಿ ರೇಷ್ಮೆ ಉದ್ಯಮವನ್ನು ಅಭಿವೃದ್ಧಿ ಮಾಡಬೇಕೆಂಬ ಉತ್ಸುಕತೆಯಿಂದ ಟಿಪ್ಪುವು ಹಿಪ್ಪುನೇರಳೆ ಕೃಷಿಯನ್ನು ಪ್ರೋತ್ಸಾಹಿಸಿದ್ದ. ಅವನ ಎರಡು ಪ್ರೀತಿಯ ತೋಟಗಳೆಂದರೆ ಬೆಂಗಳೂರಿನ ಲಾಲ್‌ಬಾಗ್‌ ಮತ್ತು ಶ್ರೀರಂಗಪಟ್ಟಣದ ಸಸ್ಯೋದ್ಯಾನ. ಜಗತ್ತಿನ ಬೇರೆ ಬೇರೆ ದೇಶಗಳಿಂದ ತರಿಸಿದ ಬೀಜಗಳನ್ನೂ ಸಸಿಗಳನ್ನೂ ನೆಟ್ಟು ಬೆಳೆಸಲು ಆತ ಕಾರಣನಾಗಿದ್ದ. ಹಣ್ಣಿನ ಮರಗಳು ಮತ್ತು ಕುಂಡಗಳಲ್ಲಿ ಬೆಳೆಸುವ ಸಸಿಗಳನ್ನು ಕಂಡರೆ ಟಿಪ್ಪುವಿಗೆ ತುಂಬಾ ಆಸೆ. ಅವನ ತೋಟಗಳಲ್ಲಿ ಮಾವು, ಸೇಬು, ಕಿತ್ತಲೆ, ಸೀಬೆ, ಅಂಜೂರ, ಹಿಪ್ಪುನೇರಳೆ ಮರಗಳಿದ್ದವು. ಪೈಸ್‌ ಮತ್ತು ಓಕ್‌ ಸಸಿಗಳನ್ನು ಗುಡ್‌ಹೋಪ್‌ ಭೂಶಿರದಿಂದ ತರಿಸಿ ಬೆಳೆಸಿದ್ದ.

ರೈತರನ್ನು ತುಂಬಾ ಪ್ರೀತಿಯಿಂದ ಕಂಡಿದ್ದ ಈ ದೊರೆ ಫಸಲಿಲ್ಲದ ಸಮಯದಲ್ಲಿ ಹಣಕಾಸು ಮುಗ್ಗಟ್ಟಿನ ಪರಿಸ್ಥಿತಿಯನ್ನು ದಾಟಲು ತಕಾವಿ ಸಾಲದ ಪದ್ಧತಿಯನ್ನು ಜಾರಿಗೆ ತಂದಿದ್ದ. ಅಲ್ಪಾವಧಿಗೆ ಕೊಡುವ ಸಾಲ ಅದು. ತುಂಬಾ ಬಡವರಾಗಿದ್ದ ರೈತರಿಗೆ ನೇಗಿಲನ್ನೂ ಬೀಜವನ್ನೂ ಕೊಳ್ಳಲು ಈ ಸಾಲ ಸಿಗುತ್ತಿತ್ತು. ಲೇವಾದೇವಿಗಾರರ ಮತ್ತು ಅಧಿಕಾರಿಗಳ ಶೋಷಣೆಗೆ ಅವರು ಸಿಲುಕದಂತೆ ರಕ್ಷಣೆ ಕೊಡಲಾಗಿತ್ತು. ಕೂಲಿ ಕೊಡುವುದಾದರೆ ಮಾತ್ರ ಕೆಲಸಕ್ಕೆ ರೈತರನ್ನು ನೇಮಿಸಿಕೊಳ್ಳಬೇಕು ಎಂದು ಪಟೇಲರಿಗೆ ಕಟ್ಟಾಜ್ಞೆ ಇತ್ತು. ರೈತರಿಗೆ ಸ್ಥಳೀಯ ಅಧಿಕಾರಿಗಳಿಂದ ಕಿರುಕುಳ ಉಂಟಾಗದಂತೆ ನೋಡಿಕೊಳ್ಳುವ ಹೊಣೆಯನ್ನು ಅಮಲ್ದಾರರಿಗೆ ವಹಿಸಿದ್ದ.

ಟಿಪ್ಪು ಉಕ್ಕು, ಕಾಗದ, ಸಕ್ಕರೆ, ರೇಷ್ಮೆ ಕಾರ್ಖಾನೆಗಳನ್ನು ಸ್ಥಾಪಿಸಿದ. ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಕನಸು ಕಂಡ. ಆದರೆ ಇದು ಸಾಕಾರಗೊಂಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ. ನ್ಯಾಯಾಂಗ, ಸೇನೆ, ನೌಕೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆಯ ಆಲೋಚನೆ ಹೊಂದಿದ್ದ.

ಆತ ಕೆಲವರಿಗೆ ನೋವು ಕೊಟ್ಟಿರಬಹುದು. ಹಾಗೆ ಕೆಲವರೊಂದಿಗೆ ಆತ ಕ್ರೂರವಾಗಿ ನಡೆದುಕೊಳ್ಳಲು ರಾಜಕೀಯ ಕಾರಣಗಳಿದ್ದವು. ಕೇರಳದ ನಾಯರ್‌ಗಳು, ಮಂಗಳೂರಿನ ಕ್ರೈಸ್ತರು ಮತ್ತು ಕೊಡಗಿನ ರಾಜರು ಬ್ರಿಟಿಷರ ಜೊತೆ ಕೈಜೋಡಿಸಿದ್ದರು. ಟಿಪ್ಪುವನ್ನು ಕೆಳಗಿಳಿಸುವ ಉದ್ದೇಶವನ್ನೂ ಹೊಂದಿದ್ದರು. ಹಾಗಾಗಿ ಅವರ ಮೇಲೆ ಟಿಪ್ಪು ಕ್ರಮ ಕೈಗೊಂಡ. ಮುಸ್ಲಿಂ ಮಾಪಿಳ್ಳೆಗಳ ವಿಷಯದಲ್ಲೂ ಆತ ಅಷ್ಟೇ ಕ್ರೂರವಾಗಿ ವರ್ತಿಸಿದ. ಕರ್ನೂಲಿನ ನವಾಬರಿಗೂ ಶಿಕ್ಷೆ ವಿಧಿಸಿದ. ಹಾಗಾಗಿ ಟಿಪ್ಪುವನ್ನು ಒಂದೇ ದೃಷ್ಟಿಕೋನದಿಂದ ಅರ್ಥೈಸುವುದು ಸರಿಯಲ್ಲ.

ಟಿಪ್ಪು ಆಲೋಚನೆಯಲ್ಲಿ, ಕೃತಿಯಲ್ಲಿ ಒಬ್ಬ ಕ್ರಾಂತಿಕಾರಿಯಾಗಿದ್ದ. ಸಂದರ್ಭ ಹಾಗೂ ಸನ್ನಿವೇಶಗಳು ಎಷ್ಟರಮಟ್ಟಿಗೆ ಆಸ್ಪದ ಕೊಡುತ್ತಿದ್ದವೋ ಅದಕ್ಕಿಂತ ಅತ್ಯಧಿಕವಾಗಿ ಸಾಧಿಸಲು ಆತ ಬಯಸಿದ. ಕಾಲ ಒಡ್ಡಿದ ಸವಾಲುಗಳು, ಪ್ರತಿರೋಧಗಳು ಅವನನ್ನು ಇನ್ನಷ್ಟು ಚುರುಕಾಗಿ ಕೆಲಸ ಮಾಡುವಂತೆ ಕೆರಳಿಸುತ್ತಿದ್ದವು. ಅವನಲ್ಲಿ ಪ್ರಧಾನವಾಗಿದ್ದ ಪ್ರವೃತ್ತಿ ಬದಲಾವಣೆಯ ಹಂಬಲ. ಸ್ವಾತಂತ್ರ್ಯ ಮತ್ತು ಆತ್ಮಗೌರವಗಳಿಲ್ಲದೆ ಹೋದರೆ ಬದುಕುವುದೇ ವ್ಯರ್ಥ ಎಂಬ ತತ್ವವನ್ನು ಜನರಲ್ಲಿ ಮೂಡಿಸಲು ಯತ್ನಿಸಿದ್ದ. ಉದಾತ್ತ ಉದ್ದೇಶಕ್ಕಾಗಿ ಬದುಕಬೇಕು ಮತ್ತು ಅದಕ್ಕಾಗಿಯೇ ಸಾಯಬೇಕು ಎಂಬ ಸಂದೇಶವನ್ನು ಕೊಟ್ಟವನು ಆತ. ಇಂತಹ ಮಹಾನ್‌ ವ್ಯಕ್ತಿತ್ವದ ಚರಿತ್ರೆಯನ್ನಲ್ಲದೆ ಮಕ್ಕಳು ಬೇರೆ ಯಾವುದನ್ನು ಓದಬೇಕು?

ಒಳ್ಳೆಯದಿರಲಿ, ಕೆಟ್ಟದ್ದಿರಲಿ ಚರಿತ್ರೆ, ಚರಿತ್ರೆಯೇ. ಅದು ತಾಯಿ ಬೇರಿನಂತೆ. ಅದನ್ನು ಕತ್ತರಿಸಿಬಿಟ್ಟರೆ ಸಮಾಜದ ಭವಿಷ್ಯ ನಿಲ್ಲುವುದಾದರೂ ಹೇಗೆ? ಪಠ್ಯದಿಂದ ಟಿಪ್ಪುವಿನ ಇತಿಹಾಸವನ್ನು ತೆಗೆಯುವುದೆಂದರೆ ಅದು ನಾಡಿನ ಚರಿತ್ರೆಗೆ ಬಗೆದ ಅಪಚಾರವಲ್ಲದೆ ಟಿಪ್ಪುವಿಗೆ ಅದರಿಂದ ಏನೂ ಆಗಬೇಕಿಲ್ಲ.

ಎಷ್ಟೊಂದು ಸುಧಾರಣೆ!
ಟಿಪ್ಪು ಕೈಗೊಂಡ ಸಾಮಾಜಿಕ ಸುಧಾರಣೆಗಳಲ್ಲಿ ಮದ್ಯಪಾನ ನಿಷೇಧವೂ ಸೇರಿತ್ತು. ಪರಿತ್ಯಕ್ತ ಮಹಿಳೆಯರನ್ನೂ, ಮಕ್ಕಳನ್ನೂ ಕೊಳ್ಳುವ ಅಥವಾ ಮಾರುವ ದುಷ್ಟಪದ್ಧತಿಗೆ ಮಂಗಳಹಾಡಿದ್ದ. ಹೊಗೆಸೊಪ್ಪಿನ ಉಪಯೋಗವನ್ನು ನಿರುತ್ಸಾಹಗೊಳಿಸಿದ್ದ. ಮದುವೆಯೇ ಮೊದಲಾದ ಸಾಮಾಜಿಕ ಸಮಾರಂಭಗಳಲ್ಲಿ ದುಂದುವೆಚ್ಚ ಮಾಡುವುದಕ್ಕೆ ತಡೆಹಾಕಿದ್ದ. ಒಬ್ಬ ಹಿಂದೂವು ಮುಸ್ಲಿಂ ಕನ್ಯೆಯನ್ನು ಮದುವೆ ಮಾಡಿಕೊಂಡು ಬಿಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬ ವರದಿ ಮಾಡಿದಾಗ, ಇಂತಹ ಖಾಸಗಿ ವಿಚಾರಗಳನ್ನು ಎತ್ತಬಾರದು ಎಂದು ಟಿಪ್ಪು ತಾಕೀತು ಮಾಡಿದ್ದ. ಶ್ರೀರಂಗಪಟ್ಟಣದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಆಲೋಚಿಸಿದ್ದ. ಸ್ವಯಂ ಲೇಖಕನಾಗಿದ್ದ. ಅವನ ಗ್ರಂಥಾಲಯದಲ್ಲಿ ಎರಡು ಸಾವಿರ ಹಸ್ತಪ್ರತಿಗಳಿದ್ದವು.

ಭಾರತದ ಮತ್ತು ಹೊರಗಿನ ಮಹಾನ್‌ ಸೂಫಿ ಸಂತರ ಭಾವಚಿತ್ರಗಳನ್ನು ಒಳಗೊಂಡ ಬೃಹತ್‌ ಆಲ್ಬಮ್‌ ತಯಾರಿಸಿದ್ದ. ಮೈಸೂರಿನ ಈ ದೊರೆ ಎಂದಿಗೂ ಅಸಹಿಷ್ಣು ಆಗಿರಲಿಲ್ಲ. ಗಾಂಧೀಜಿ ‘ಯಂಗ್‌ ಇಂಡಿಯಾ’ದಲ್ಲಿ ಟಿಪ್ಪು –ಹಿಂದೂ, ಮುಸ್ಲಿಂ ಏಕತೆಯ ಮೂರ್ತರೂಪ ಎಂದು ಬರೆದಿದ್ದರು. ವ್ಯಾಪಾರ, ವಾಣಿಜ್ಯ ಮಾತ್ರವಲ್ಲ, ಕಲೆ ಮತ್ತು ಕೈಕಸುಬುಗಳಿಗೂ ಉತ್ತೇಜನ ನೀಡಿದ ರಾಜನೀತ. ರಾಜ್ಯ ರಕ್ಷಣೆಗೆ ಬೇಕಾದ ಬಂದೂಕು, ಕೋವಿ, ತೋಪು, ಫಿರಂಗಿ ಮೊದಲಾದವುಗಳನ್ನು ಸ್ವಂತವಾಗಿ ತಯಾರಿಸಲು ಶ್ರೀರಂಗಪಟ್ಟಣದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದ. ನೀರಿನ ಹರಿವಿನಿಂದಲೇ ಶಕ್ತಿಯನ್ನು ಪಡೆದುಕೊಂಡು ಫಿರಂಗಿಯನ್ನು ಎರಕಹೊಯ್ಯುವ ಯಂತ್ರ ಇಲ್ಲಿತ್ತು.

ಪ್ರತಿಕ್ರಿಯಿಸಿ (+)