ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಒಳಮೀಸಲಾತಿ: ದನಿ ಇಲ್ಲದವರಿಗೂ ದನಿ ಸಿಗಲಿ

Last Updated 13 ಸೆಪ್ಟೆಂಬರ್ 2020, 3:13 IST
ಅಕ್ಷರ ಗಾತ್ರ

2001ರ ಜನಗಣತಿ ಪ್ರಕಾರ ಅನಾಮಿಕ ಎಂಬ ಉಪ ಜಾತಿಯ ಜನಸಂಖ್ಯೆ ರಾಜ್ಯದಲ್ಲಿ ಕೇವಲ 19. 10 ಗಂಡು ಮತ್ತು 9 ಹೆಣ್ಣು ಇದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಾರ ಇವರ ಜನಸಂಖ್ಯೆ 867. ಗಂಡು 463 ಮತ್ತು ಹೆಣ್ಣು 404. ಬೆಳಗಾವಿ, ತುಮಕೂರು, ಕೋಲಾರ ಮುಂತಾದ ಕಡೆ ಇವರು ನೆಲೆಸಿದ್ದಾರೆ. ಅದೇ ರೀತಿ 2001ರ ಜನಗಣತಿ ಪ್ರಕಾರ ಆದಿಯಾ ಜನಸಂಖ್ಯೆ ರಾಜ್ಯದಲ್ಲಿ 635. ಇದರಲ್ಲಿ ಪುರುಷರು 306 ಮತ್ತು ಮಹಿಳೆಯರು 329. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಾರ ಇವರ ಸಂಖ್ಯೆ 5,342. ಪುರುಷರು 2,605 ಮತ್ತು ಮಹಿಳೆಯರು 2,737. ಕೇರಳದಿಂದ ವಲಸೆ ಬಂದ ಇವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಇವರಲ್ಲಿ ಕೆಲವರು ಆದಿಯನ್ ಎಂಬ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿಯೂ ಇದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲ ಮತ್ತು ಕುಮಟಾ ತಾಲ್ಲೂಕಿನಲ್ಲಿರುವ ಅಗರ್ ಎಂಬ ಉಪ ಜಾತಿಗೆ ಸೇರಿದವರ ಸಂಖ್ಯೆ 7,717. ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು, ಕೋಲಾರ, ಧಾರವಾಡ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಅಜಿಲಾ ಉಪ ಜಾತಿಯವರ ಸಂಖ್ಯೆ 11,458.

ಈ ಮಾಹಿತಿ ಈಗ ಯಾಕೆ ಮುಖ್ಯ ಎಂದರೆ ರಾಜ್ಯದಲ್ಲಿ ಮತ್ತೆ ಒಳಮೀಸಲಾತಿ ವಿಷಯ ಮುನ್ನೆಲೆಗೆ ಬಂದಿದೆ. ಒಂದಿಷ್ಟು ಮಂದಿ ಪರವಾಗಿದ್ದರೆ ಇನ್ನೊಂದಿಷ್ಟು ಮಂದಿ ಇದಕ್ಕೆ ವಿರೋಧವಾಗಿದ್ದಾರೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ನಂತರವಂತೂ ರಾಜ್ಯದಲ್ಲಿ ಒಳ ಮೀಸಲಾತಿ ಕೂಗು ಜೋರಾಗಿಯೇ ಎದ್ದಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು. ಈವರೆಗೆ ಮೀಸಲಾತಿ ಸೌಲಭ್ಯ ಸೂಕ್ತವಾಗಿ ಸಿಗದೇ ಇರುವವರಿಗೆ ಮೀಸಲಾತಿ ಸಿಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈವರೆಗೂ ಮೀಸಲಾತಿ ಸೌಲಭ್ಯ ಸಿಗದೇ ಇರುವ ಜಾತಿಗಳಿಗೆ ಮೀಸಲಾತಿ ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಚರ್ಚೆಯಾಗುತ್ತಿರುವುದು ನಾಲ್ಕು ಉಪಜಾತಿಗಳ ಬಗ್ಗೆ ಮಾತ್ರ ಎನ್ನುವುದು ವಿಷಾದನೀಯ ಅಂಶ.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಒಟ್ಟು ನೂರಾಒಂದು ಜಾತಿಗಳಿವೆ. ಅದರಲ್ಲಿ ಜನಸಂಖ್ಯೆಯ ಆಧಾರದಲ್ಲಿ ನಾಲ್ಕು ಉಪ ಜಾತಿಗಳು ಮೊದಲಿನ ಸ್ಥಾನದಲ್ಲಿವೆ. ಎಡಗೈ, ಬಲಗೈ, ಲಂಬಾಣಿ ಮತ್ತು ಬೋವಿ. ಈ ನಾಲ್ಕು ಉಪ ಜಾತಿಗಳ ಬಗ್ಗೆಯೇ ಚರ್ಚೆ ಗಿರಕಿ ಹೊಡೆಯುತ್ತಿದೆ. ಉಳಿದ 97 ಜಾತಿಗಳ ಜನರಿಗೆ ಮೀಸಲಾತಿ ಎನ್ನುವುದು ಇನ್ನೂ ಗಗನ ಕುಸುಮವೇ ಆಗಿದೆ. ತೀರಾ ಕೆಳಮಟ್ಟದಲ್ಲಿರುವ ಈ ಜಾತಿಗಳ ಪರವಾಗಿ ಅಲ್ಲೊಂದು ಇಲ್ಲೊಂದು ಹೇಳಿಕೆಗಳು ಬರುತ್ತಿವೆಯೇ ವಿನಾ ಇವರ ಪರವಾಗಿ ಗಟ್ಟಿಯಾಗಿ ನಿಲ್ಲುವವರು ಯಾರೂ ಇಲ್ಲ.

ಬಹಳ ಕಾಲದಿಂದಲೂ ಒಳಮೀಸಲಾತಿ ಎಂದರೆ ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಕೊಡಿಸುವ ಹೋರಾಟವಾಗಿದೆಯೇ ವಿನಾ ದನಿ ಇಲ್ಲದ ಇತರ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಒದಗಿಸಬೇಕು ಎನ್ನುವುದು ಇನ್ನೂ ಹರಳುಗಟ್ಟಿಲ್ಲ. ಸದಾಶಿವ ಆಯೋಗದ ವರದಿಯಲ್ಲಿ ದನಿ ಇಲ್ಲದ ಪರಿಶಿಷ್ಟ ಜಾತಿಯ ಹಲವಾರು ಉಪಜಾತಿಯ ಜನರ ಬಗ್ಗೆ ಪ್ರಸ್ತಾಪ ಇದೆ. ಈ ಉಪ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎನ್ನುವ ಒತ್ತಾಯವೂ ಇದೆ.

ಸಾಮಾಜಿಕ ಕಾರಣಗಳಿಂದಾಗಿ ಕೆಲವು ಜಾತಿಗಳಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿದೆ. ಅದದರಲ್ಲಿಯೂ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಸಹಜವಾಗಿಯೇ ಪರಿಶಿಷ್ಟರು ಹೆಚ್ಚಿನ ಅವಕಾಶವನ್ನು ಪಡೆದಿದ್ದಾರೆ. ಅದಕ್ಕೆ ಮೈಸೂರು ಅರಸರ ಔದಾರ್ಯ ಕಾರಣ. ರಾಜ್ಯದ ಬೇರೆ ಭಾಗಗಳಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿಯ ಜನರಿಗೆ ಈ ಸಹಾಯ ಲಭ್ಯವಾಗಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಇದನ್ನು ಸರಿ ಮಾಡಬೇಕಿದ್ದ ಸರ್ಕಾರ ಅದರ ಗೋಜಿಗೆ ಹೋಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಸರಿ ಪಡಿಸಿಕೊಳ್ಳಲು ಎಲ್ಲ ಕಾಲವೂ ಸಕಾಲವೆ.

ಯಾವುದೇ ಒಂದು ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಅದಕ್ಕೆ ಅರ್ಹರಾದ ಎಲ್ಲರೂ ಅರ್ಜಿ ಸಲ್ಲಿಸುತ್ತಾರೆ. ಅವರಲ್ಲಿಯೇ ಯಾರಿಗಾದರೂ ಅದು ಸಿಗುತ್ತದೆ. ‘ಅಯ್ಯೋ ಈ ಜಾತಿಗೆ ಇನ್ನೂ ಮೀಸಲಾತಿಯೇ ಸಿಕ್ಕಿಲ್ಲ. ಅದಕ್ಕಾಗಿ ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ’ ಎಂದು ಯಾವುದೇ ವ್ಯಕ್ತಿ ಹಿಂದಕ್ಕೆ ಸರಿಯುವುದಿಲ್ಲ. ಇದು ತಪ್ಪಲ್ಲ. ಯಾಕೆಂದರೆ ವ್ಯವಸ್ಥೆ ಇರುವುದೇ ಹಾಗೆ ಎಂದು ಕೆಲವರು ವಾದದಿಸಿದರೆ ಅದಕ್ಕಾಗಿಯೇ ಒಳಮೀಸಲಾತಿ ಇರಬೇಕು ಎಂದು ಇನ್ನು ಕೆಲವರು ವಾದಿಸುತ್ತಾರೆ.

ಮೀಸಲಾತಿ ಸೌಲಭ್ಯವನ್ನು ಒಂದು ಉಪ ಜಾಸ್ತಿಯವರೇ ಹೆಚ್ಚಾಗಿ ಬಳಸಿಕೊಂಡಿದ್ದಾರೆ ಎಂದರೆ ಅದಕ್ಕೆ ಆ ಜಾತಿಯವರನ್ನು ದೂಷಿಸುವುದು ಸರಿಯಲ್ಲ ಎಂದೂ ಕೆಲವರು ವಾದಿಸುತ್ತಾರೆ. ಹೌದು ಈ ಮಾತಿನಲ್ಲಿಯೂ ಅರ್ಥ ಇದೆ. ಯಾರನ್ನೋ ತುಳಿದು ಅವರು ಸೌಲಭ್ಯವನ್ನು ಬಳಸಿಕೊಂಡಿಲ್ಲ. ವ್ಯವಸ್ಥೆಯ ಲಾಭವನ್ನು ಅವರು ಪಡೆದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ಅವರು ಜಾಗೃತರಾಗಿದ್ದಾರೆ. ಆದರೆ ಇತರ ಹಲವಾರು ಜಾತಿಯ ಜನರಿಗೆ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲದೇ ಇರುವುದು ಕೂಡ ಸುಳ್ಳಲ್ಲ. ಅದಕ್ಕಾಗಿ ಅವರಿಗೂ ಮೀಸಲಾತಿ ಸಿಗುವ ಬಗ್ಗೆ ಎಲ್ಲರೂ ಆಲೋಚಿಸಬೇಕಾದ ಅಗತ್ಯವಂತೂ ಈಗ ಇದೆ.

ಒಳಮೀಸಲಾತಿಗೆ ಒತ್ತಾಯಿಸುವ ಜನರ ವಾದದಲ್ಲಿಯೂ ಹುರುಳಿದೆ. ಅದನ್ನು ವಿರೋಧಿಸುವ ಜನರ ವಾದದಲ್ಲಿಯೂ ಕೆಲವು ಸತ್ಯಗಳಿವೆ. ಆದರೆ ಅದಕ್ಕಿಂತ ಹೆಚ್ಚಾಗಿ ಮೀಸಲಾತಿ ಬಗ್ಗೆ ಇನ್ನೂ ಬಾಯಿ ಬಿಡಲೂ ಆಗದೇ ಇರುವ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಯೇ ಇರುವ ಹಲವಾರು ಉಪ ಜಾತಿಗಳ ಜನರ ಬಗ್ಗೆ ಆಲೋಚಿಸಲೂ ಇದು ಸಕಾಲವಾಗಿದೆ. ಒಳಮೀಸಲಾತಿ ಹೋರಾಟ ಈ ದನಿ ಇಲ್ಲದ ಜನರಿಗೂ ದನಿ ನೀಡುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT