ಪಾಪದ ಕೂಸು

7

ಪಾಪದ ಕೂಸು

Published:
Updated:
Deccan Herald

ಅವು ಪ್ರಾಥಮಿಕ ಶಾಲಾ ದಿನಗಳು. ನಮ್ಮ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇರಲಿಲ್ಲ. ಆದರೆ, ಶಾಲೆಯ ಸುತ್ತ ಬಯಲು ಬೇಕಾದಷ್ಟಿತ್ತು. ಆದ್ದರಿಂದ ಬಯಲೇ ಎಲ್ಲದಕ್ಕೂ ಒದಗಿ ಬರುತ್ತಿತ್ತು.

‘ರಿಸೆಸ್ ಪೀರಿಯಡ್’ನಲ್ಲಿ ಸ್ಕರ್ಟ್‌ ಹಾಕಿಕೊಂಡ ಹುಡುಗಿಯರು ನಾವೆಲ್ಲ ಶಾಲೆಯ ಹಿಂದಿನ ನಿರ್ಜನ ರಸ್ತೆಯಲ್ಲಿ ಒತ್ತಾಗಿ ಬೆಳೆದ ಮರಗಳ ಎಡೆಗೆ ಓಡುತ್ತಿದ್ದವು. ಯಾರಾದರೂ ನೋಡಬಹುದು ಎಂಬ ಸಂಕೋಚ ಇದ್ದ ನೆನಪಾಗುತ್ತಿಲ್ಲ! ಇದು ಅನೇಕ ವರ್ಷಗಳ ಕಾಲ ಸಾಂಗವಾಗಿ ನಡೆದುಕೊಂಡು ಬಂದಿತ್ತು. ಆದರೆ, ಅಲ್ಲಿಗೆ ಆ ‘ಚೌಡಿ’ ಬಂದ ಮೇಲೆ ಮೊದಲಿನಂತೆ ಬಿಡುಬೀಸಾಗಿ ಹೋಗಿ ಬರಲು ಆಗುತ್ತಿರಲಿಲ್ಲ. ಮತಿಭ್ರಮಣೆಗೊಂಡ ಆ ಹೆಂಗಸಿಗೆ ಅದ್ಹೇಗೆ ಚೌಡಿ ಎಂಬ ನಾಮಕರಣವಾಯಿತೋ ಗೊತ್ತಿಲ್ಲ. ಸದಾ ಕೆದರಿದ ಎಣ್ಣೆಕಾಣದ ಕೂದಲು. ಸ್ನಾನ ಕಾಣದ ಕಪ್ಪು ದೇಹ. ಎತ್ತರದ ನಿಲುವಿನ ಆಕೆಗೆ ಉಡಲು ಸರಿಯಾದ ಸೀರೆಯೂ ಇರಲಿಲ್ಲ. ಇದ್ದ ಸೀರೆ ಮೊಣಕಾಲ ಮೇಲೆ ಇರುತ್ತಿದ್ದ ಅಸ್ಪಷ್ಟ ನೆನಪು. ನಾವು ಅಡಗಿ ಕುಳಿತುಕೊಳ್ಳುತ್ತಿದ್ದ ಒಂದು ದೊಡ್ಡ ಮರಕ್ಕೆ ಹರಿದ ಸೀರೆಯನ್ನು ಕಟ್ಟಿ ಆಕೆ ಸೂರೊಂದನ್ನು ನಿರ್ಮಿಸಿಕೊಂಡಿದ್ದಳು. ಅದು ಆಕೆಯನ್ನು ಮಲೆನಾಡಿನ ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸುತ್ತಿರಲಿಲ್ಲವಾದರೂ ಅದೇ ಆಕೆಯ ಮನೆಯಾಗಿತ್ತು.

ಸರಿಯಾಗಿ ನಮ್ಮ ಮೊದಲ ವಿರಾಮದ ಸಮಯಕ್ಕೆ ಆಕೆ ಅನ್ನ ಬೇಯಿಸುತ್ತಿದ್ದಳು. ಮೂರು ಕಲ್ಲು ಹೂಡಿ ಬೆಂಕಿಯ ಮೇಲೆ ಪಾತ್ರೆಯಲ್ಲಿ ಏನೋ ಇಟ್ಟಿರುತ್ತಿದ್ದಳು. ಆಗಾಗ ಅದರಿಂದ ಮೀನಿನ ಘಾಟು ವಾಸನೆಯೂ ಬರುತ್ತಿತ್ತು. ಕೆಲ ತಿಂಗಳಲ್ಲಿ ಅವಳ ಕೆದರಿದ ತಲೆಯ ಬಗ್ಗೆ ನಮ್ಮ ಹೆದರಿಕೆಯೂ ಕಡಿಮೆಯಾಗಿ ನಿರಾಳತೆಯಿಂದ ಹೋಗಿ ಬರುತ್ತಿದ್ದೆವು.

ಈ ನಿರಾಳತೆ ಬಹಳ ದಿನ ಉಳಿಯಲಿಲ್ಲ. ಅವಳು ಉರಿಮಾರಿಯಂತೆ ಸದಾ ಭುಸುಗುಡಲು ಆರಂಭಿಸಿದಳು. ಅವಳ ಬಾಯಲ್ಲಿ ನಾವು ಅದುವರೆಗೂ ಕೇಳಿರದ, ಅರ್ಥವೂ ಆಗದ ಪದಗಳು ಕೇಳಿಬರುತ್ತಿದ್ದವು. ಅವು ಕೆಟ್ಟ ಪದಗಳು, ಬೈಗಳುಗಳು ಎಂದು ನಮ್ಮ ಓರಿಗೆಯ ಕೆಲ ಹುಡುಗಿಯರು ಹೇಳಿದ ಮೇಲೆ ಎಲ್ಲರಲ್ಲೂ ಆಕೆಯ ಬಗ್ಗೆ ಭಯ ಮತ್ತೆ ಹೆಚ್ಚಾಯಿತು. ಬರುಬರುತ್ತ ಅವಳ ಸಿಟ್ಟು, ಕೋಪ-ತಾಪ ವಿಪರೀತವಾಯಿತು. ಬೈಯುತ್ತಲೇ ಜೋರಾಗಿ ದನಿತೆಗೆದು ಅಳುತ್ತಿದ್ದಳೂ ಕೂಡ. ನಮಗೆ ಯಾರಿಗೂ ಯಾವ ತೊಂದರೆಯನ್ನೂ ಅವಳು ಮಾಡಿರದಿದ್ದರೂ ಅವಳ ರುದ್ರಾವತಾರವೇ ನಮ್ಮನ್ನು ಹೆದರಿಸುತ್ತಿತ್ತು.

ಅವಳ ಬೈಗಳುಗಳೆಲ್ಲ ಗಂಡಸರಿಗೇ ಎಂದು ನಮಗೆ ಕ್ರಮೇಣ ಅರ್ಥವಾಯಿತು. ಆದರೆ, ಏಕೆ ಎಂದು ಇನ್ನೂ ಅರ್ಥವಾಗಿರಲಿಲ್ಲ. ದಿನ ಕಳೆದಂತೆ ಅವಳ ಹೊಟ್ಟೆ ದೊಡ್ಡದಾಗುತ್ತ ಬಂದಿತು. ನಮ್ಮಲ್ಲೇ ಕೆಲವು ಹುಡುಗಿಯರು ಅದರ ಬಗ್ಗೆ ಗುಸುಗುಸು ಮಾಡಿಕೊಳ್ಳುತ್ತ ಆ ಉಬ್ಬಿದ ಹೊಟ್ಟೆಯೇ ಅವಳ ಸಿಟ್ಟಿಗೆ ಕಾರಣ ಎಂದು ತೀರ್ಮಾನಿಸಿದರು. ಅದಕ್ಕೆ ಕಾರಣನಾದ ವ್ಯಕ್ತಿಯಿಂದಲೇ ಅವಳು ಎಲ್ಲ ಗಂಡಸರಿಗೂ ಸದಾ ಬೈಯುತ್ತಾಳೆ ಎಂದೂ ಅವರು ಲೆಕ್ಕಾಚಾರ ಹಾಕಿದರು. ನಮಗಾದರೊ ಅದೆಲ್ಲ ಪೂರ್ಣ ಅರ್ಥವಾಗದ ವಯಸ್ಸು. ಅಂತೂ ಗಂಡಸಿನಿಂದ ಅವಳಿಗೆ ಏನೋ ದ್ರೋಹವಾಗಿದೆ ಎಂದಂತೂ ಗೊತ್ತಾಗಿತ್ತು.

ನಮ್ಮ ಓದು ಆ ಶಾಲೆಯಲ್ಲಿ ಮುಗಿದು ನಾವೆಲ್ಲ ಮಾಧ್ಯಮಿಕ ಶಾಲೆಗೆ ಹೋದೆವು. ಆನಂತರವೂ ಚೌಡಿಯ ಬಗ್ಗೆ ಆಗಾಗ ಮಾತಾಡುತ್ತಿದ್ದವು. ಅವಳ ಮಡಿಲಲ್ಲಿ ಮಗುವೊಂದಿದೆ ಎಂದು ನಮ್ಮ ಕೆಲ ಸ್ನೇಹಿತೆಯರು ಸಮಾಚಾರ ತಂದರು. ಅವಳೇ ಮತಿಭ್ರಮಿತಳು. ಅವಳು ಮಗುವನ್ನು ಹೇಗೆ ಬೆಳೆಸಬಹುದು. ಅವಳ ಆ ಅವಸ್ಥೆಗೆ ಕಾರಣರಾದವರು ಯಾರು ಎಂಬ ಪ್ರಶ್ನೆಗಳ ಬಗ್ಗೆ ಆಗಾಗ ನಾವು ನೋವಿನಿಂದ ಚರ್ಚಿಸಿದ್ದಿದೆ. ನಂತರ ಆಕೆ ಏನಾದಳೋ ಗೊತ್ತಿಲ್ಲ. ಆದರೆ, ಇಂದಿಗೂ ಆಕೆಯ ಮುಖ, ಸಿಟ್ಟು- ಸೆಡವಿನ ನೋಟ, ಬೈಯ್ಗಳು ಎಲ್ಲ ನಿನ್ನೆ ಮೊನ್ನೆ ನಡೆದಂತೆ ಅಚ್ಚಳಿಯದೆ ಮನದಲ್ಲಿ ನಿಂತಿದೆ. ಅದು ಅತ್ಯಾಚಾರ ಎಂದು ತಿಳಿಯದ ವಯಸ್ಸಿನಲ್ಲಿ ನಾವು ಚೌಡಿಯ ಜೀವನಕ್ಕೆ ಮುಖಾಮುಖಿಯಾಗಿದ್ದರೂ ಈಗ ಹೆಣ್ಣಿನ ಅತ್ಯಾಚಾರಗಳ ಸುದ್ದಿ ಕೇಳಿ ಬಂದಾಗಲೆಲ್ಲ ನನಗೆ ಆ ಚೌಡಿ ನೆನಪಾಗುತ್ತಾಳೆ.

ಒಬ್ಬ ಮತಿಭ್ರಮಿತಳನ್ನೂ ಬಿಡದ ಹೀನ ಮನಸ್ಥಿತಿಯಿಂದ ಶೋಷಿತಳಾಗಿದ್ದ ಚೌಡಿಗಾಗಿ ಮನ ಮಿಡಿಯುತ್ತದೆ. ಸಮಾಜ ಅವಳನ್ನು ನಡೆಸಿಕೊಂಡ ರೀತಿಗೆ ತಲೆತಗ್ಗಿಸುವಂತೆ ಆಗುತ್ತದೆ. ಅವಳನ್ನು ಸಂಭೋಗಿಸಿದ ಅನಾಮಿಕನಿಗೆ ಯಾವ ನೋವು, ಸಂಕಟಗಳೂ ತಾಕಲಿಲ್ಲ. ಆದರೆ, ಚೌಡಿ ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಅರಿವೂ ಇಲ್ಲದೇ ಅದನ್ನು ಹೊತ್ತು, ಹೆತ್ತಳು. ಬೀದಿಬದಿಯಲ್ಲಿ ಬೇಯಿಸಿಕೊಂಡು ತಿಂದಳು. ನೋವುಂಡು, ನರಳಿ ಜನ್ಮವಿತ್ತರೂ ‘ಪಾಪದ ಕೂಸು’ ಎಂದು ನಾಗರಿಕ ಜನ ಬಾಯ್ತುಂಬ ಕರೆದರು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !