ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇರಣೆ | ಬದಲಾವಣೆ ಹರಿಕಾರ ಫಕ್ಕೀರಪ್ಪ ಹರಿಜನ; ಗಟ್ಟಿಯಾಗಿ ‘ನಿಂತ’ ಸಾಧಕ

Last Updated 11 ಫೆಬ್ರುವರಿ 2023, 19:45 IST
ಅಕ್ಷರ ಗಾತ್ರ

ಬದಲಾವಣೆ ಹರಿಕಾರನೆಂದು ಡೆಕ್ಕನ್‌ ಹೆರಾಲ್ಡ್‌ನಿಂದ ಗೌರವಕ್ಕೆ ಪಾತ್ರರಾಗಿರುವ ಫಕ್ಕೀರಪ್ಪ ಹರಿಜನ ಅವರ ಬದುಕು ಎಂಥವರಿಗೂ ಪ್ರೇರಣೆ.

***

ಕೀಳರಿಮೆ, ಖಿನ್ನತೆ, ಅಸಹಾಯಕ ಮನಸ್ಥಿತಿ – ಈ ಮೂರೂ ನನ್ನನ್ನು ಬಹಳ ಕಾಡಿವೆ. ಅವುಗಳ ವಿರುದ್ಧ ಹೋರಾಟಕ್ಕೆ ನಿಂತಾಗಲೇ ಗೊತ್ತಾಗಿದ್ದು; ನಾನು ಇತರರಿಗಿಂತ ಎಷ್ಟು ಗಟ್ಟಿ ಎಂದು. ಜೀವನೋತ್ಸಾಹ ಎಂಬ ಹುಟ್ಟು ನನ್ನನ್ನು ಗೆಲುವಿನ ದೋಣಿಯಲ್ಲಿ ತೇಲಿಸಿತು. ಅದೇ ಹುಟ್ಟನ್ನು ನನ್ನಂಥ ಎಲ್ಲರಿಗೂ ನೀಡಬೇಕು, ಎಲ್ಲರನ್ನೂ ದಡ ಸೇರುವಂತೆ ಮಾಡಬೇಕು ಎಂಬ ಸಂಕಲ್ಪ ಮಾಡಿದೆ. ಮನೆಯಿಂದ ಹೊರಬರಲು ಥರಗುಟ್ಟುತ್ತಿದ್ದವನು ಈಗ ದೇಶ ಸುತ್ತುತ್ತಿದ್ದೇನೆ. ತಾರತಮ್ಯ ಮೀರಿ ನಿಂತರೆ ನಮ್ಮನ್ನು ಯಾರೂ ತರಬಾಂಗಿಲ್ಲ. ಥ್ಯಾಂಕ್ಸ್ ಟು ಜಾಗೃತಿ...

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹುಲಿಕೊತ್ತಲ ಎನ್ನುವ ಕಾಡಂಚಿನ ಗ್ರಾಮದ ಕೂಸು ಫಕ್ಕೀರಪ್ಪ ಹರಿಜನ ಅದಮ್ಯ ಉತ್ಸಾಹದಿಂದ ಹೇಳುತ್ತಲೇ ಇದ್ದರು. ಕಾಳ್ಗತ್ತಲ ಬದುಕಿನಿಂದ ಎದ್ದುಬಂದ ಅವರೀಗ ಹಲವರಿಗೆ ಬೆಳಕು. ಅಂಗವಿಕಲರು, ಹಳ್ಳಿಗಾಡಿನ ಹೆಣ್ಣುಮಕ್ಕಳು, ಶೋಷಿತರು, ಅಸಹಾಯಕರಿಗೆ ಊರುಗೋಲು. ಗುಡಿಸಲಿನಲ್ಲಿ ಅರಳಿದ ಜೀವನಕ್ಷತ್ರ ಎನ್ನುವುದು ಅವರ ಮಾತಲ್ಲೇ ವ್ಯಕ್ತವಾಗುತ್ತದೆ.

ಶೆಟ್ಟೆಪ್ಪ– ಶಾಂತವ್ವ ಅವರ ಆರು ಮಕ್ಕಳಲ್ಲಿ ಫಕೀರಪ್ಪ ಕೂಡ ಒಬ್ಬರು. ನಾಲ್ವರು ಪುತ್ರಿಯರು, ಇಬ್ಬರು ಪುತ್ರರು. ಗಂಡುಮಕ್ಕಳಿಬ್ಬರೂ ಅಂಗವಿಕಲರು, ಆಗರ್ಭ ಬಡವರು. ಜಾತಿ ತಾರತಮ್ಯದ ಕುಲುಮೆಯಲ್ಲೇ ಬೆಂದು ಹದವಾದವರು ಈ ಸಾಧಕ. ತನ್ನ ಅಜ್ಜನ ಹೆಗಲ ಮೇಲೆ ಕುಳಿತು ಶಾಲೆಗೆ ಹೋಗುತ್ತಿದ್ದ ಸಂದರ್ಭ ಅವರನ್ನು ಇನ್ನಿಲ್ಲದಂತೆ ಹಿಂಸಿಸಿತ್ತು. ಸಾಮಾನ್ಯರಂತೆ ಆಟವಾಡಲು ಆಗದ ದಿನಗಳು ಖಿನ್ನತೆಯನ್ನು ಮೂಡಿಸಿದ್ದವು. ಹೆತ್ತವರೇ ಕೂಲಿ ಮಾಡಿ ಸಾಕುವಾಗ ಅಸಹಾಯಕತೆ ಕಾಡಿತು.

‘ಪಾಪ ಮಾಡಿ ಹುಟ್ಟಿದವರು’ ಎಂದು ಯಾರೋ ಅಣಕಿಸಿದ ಮಾತು ಕತ್ತಲಕೋಣೆ ಸೇರುವಂತೆ ಮಾಡಿತ್ತು. ಆಗ, ತೆರೆದುಕೊಂಡಿದ್ದೇ ‘ಜಾಗೃತಿ’ ಎನ್ನುವ ಬೆಳಕಿನ ಗವಾಕ್ಷಿ. ಹಳ್ಳಿಗಳ ಅಂಗವಿಕಲರು, ಅಸಹಾಯಕರು, ಶೋಷಿತ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವುದಕ್ಕೆ ಹುಟ್ಟಿಕೊಂಡ ಸಂಘಟನೆ ಇದು. ಅದರ ತೆಕ್ಕೆಗೆ ಸಿಕ್ಕಿಕೊಂಡಿದ್ದೇ ಫಕ್ಕೀರಪ್ಪ ಅವರ ಬದುಕಿನ ಸಂತಸ ಅರಳುವ ಸಮಯ.

‘ಜಾಗೃತಿ ತಂಡದೊಂದಿಗೆ ಸೇರಿದ ಮೊದಲ ದಿನದಿಂದಲೇ ಹುಡುಕಾಟ ಶುರು ಮಾಡಿದೆ. ಅಂಗವಿಕಲರ ಹುಡುಕಾಟ, ಅವರ ತೊಳಲಾಟಗಳ ಹುಡುಕಾಟ, ಪರಿಹಾರ ಮಾರ್ಗಗಳ ಹುಡುಕಾಟ, ಸರ್ಕಾರಿ ಯೋಜನೆಗಳ ಹುಡುಕಾಟ, ಹಕ್ಕುಗಳ ಹುಡುಕಾಟ, ಹಕ್ಕಿನ ಅರಿವಿಲ್ಲದವರ ಹುಡುಕಾಟ. ಹೀಗೆ ಒಂದೊಂದನ್ನೇ ಹುಡುಕುತ್ತ ಹೋದಂತೆ ನನ್ನನ್ನೇ ನಾನು ಹುಡುಕಿಕೊಂಡೆ. ಸ್ವಾವಲಂಬಿ ಆಗಿ ಬದುಕಲು ಸಾಧ್ಯ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಪಿಂಚಣಿ ಪಡೆದೆ, ಸಾಲ ಯೋಜನೆ ಪಡೆದೆ, ಮೇಕೆ ಸಾಕಣೆ ಕೇಂದ್ರ ತೆರೆದೆ. ಅಂಗವಿಕಲನಾದ ಅಣ್ಣನಿಗೂ, ವಯಸ್ಸಾದ ತಂದೆ– ತಾಯಿಗೂ ಆಸರೆಯಾದೆ...’ ಫಕೀರಪ್ಪ ಅವರ ಈ ಮಾತಲ್ಲಿ ಖುಷಿ ಧ್ವನಿಸುತ್ತದೆ.

‘ನಾನು ಸ್ವಾವಲಂಬಿ ಆದೆ. ಆದರೆ, ನನಗೆ ಬೇಕಿರುವುದು ಅಂಗವಿಕಲರ ಸ್ವಾವಲಂಬನೆ. ನನ್ನಂಥ ಎಲ್ಲರನ್ನೂ ಒಂದುಗೂಡಿಸಬೇಕು, ಹಕ್ಕಿನ ಅರಿವು ಮೂಡಿಸಬೇಕು, ಸೌಕರ್ಯಗಳನ್ನು ಅವರೇ ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂಬ ತುಡಿತ ಶುರುವಾಯಿತು. ತಾಲ್ಲೂಕು ಅಂಗವಿಕಲರ ಒಕ್ಕೂಟ ಕಟ್ಟಿದೆ. ಊರೂರು ಸುತ್ತಿ ಎಲ್ಲರ ಮಾಹಿತಿ ಸಂಗ್ರಹಿಸಿದೆ. ಆಯಾ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಪಿಂಚಣಿ, ತ್ರಿಚಕ್ರವಾಹನ, ಊರುಗೋಲು, ಶಿಕ್ಷಣ, ಆರೋಗ್ಯ, ಏನೇನು ಸಾಧ್ಯವೋ ಅದನ್ನು ಕೊಡಿಸಿದೆ. ನರೇಗಾ ಯೋಜನೆಯಲ್ಲಿ ಅಂಗವಿಕಲರಿಗೂ ಕೆಲಸ ಕೊಡಲು ಅವಕಾಶವಿದೆ. ಅದನ್ನು ಬಳಸಿಕೊಂಡೆ. ಗ್ರಾಮ ಪಂಚಾಯಿತಿಗಳಲ್ಲಿ ಇದ್ದ ಶೇ 3ರಷ್ಟು ಮೀಸಲಾಯಿತಿಯನ್ನು ಸರ್ಕಾರ ಶೇ 5ಕ್ಕೆ ಏರಿಸಿತು. ಆದರೆ, ಇದು ನಗರವಾಸಿಗಳಿಗೆ ಮಾತ್ರ ಇತ್ತು. ಹೋರಾಟಕ್ಕೆ ನಿಂತೆವು. ಅದರ ಫಲ ಗ್ರಾಮೀಣರಿಗೂ ಅನ್ವಯ ಆಯಿತು’ ಎಂದು ಈ ಸಾಧಕ ಹೆಮ್ಮೆಯಿಂದ ಹೇಳುತ್ತಾರೆ.

ಈಗಲೂ ಅವರು ಹಳ್ಳಿಹಳ್ಳಿ ಸುತ್ತುತ್ತಿದ್ದಾರೆ. ಅಂಗವಿಕಲರು, ಶೋಷಿತರಿಗೆ ಅರಿವು ಮೂಡಿಸುವುದು, ತರಬೇತಿ ನೀಡುವುದು, ಖಿನ್ನತೆಯಿಂದ ಹೊರತರುವುದು... ಹೀಗೆ ವಿಶ್ರಾಂತಿ ಇಲ್ಲದ ಓಟಕ್ಕೆ ನಿಂತಿದ್ದಾರೆ.

ಮುಂದಿನ ನಡೆ ಏನು?: ‘ಪರಿಶಿಷ್ಟ ಸಮುದಾಯದ ಕೆಲವರು ತಮ್ಮ ಹೆಸರುಗಳನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಥವಾ ಎಲ್ಲಿಯಾದರೂ ಹೆಸರು ಹೇಳಲು ಹಿಂಜರಿಯುತ್ತಾರೆ. ತನ್ನ ಮನೆತನದ ಹೆಸರನ್ನು ಕೇಳಿದರೆ ಕೀಳಾಗಿ ಕಾಣುತ್ತಾರೇನೋ ಎಂಬ ಭಯವೇ ಇದಕ್ಕೆ ಕಾರಣ. ನಾವು ಎಷ್ಟೇ ಮುಂದುವರಿದಿದ್ದೇವೆ ಎಂದುಕೊಂಡರೂ ಈ ತರತಮ ಹೋಗುತ್ತಿಲ್ಲ. ದೇವಸ್ಥಾನಗಳಲ್ಲಿ, ಕುಡಿಯುವ ನೀರಲ್ಲಿ, ಓದುವ ಶಾಲೆಗಳಲ್ಲಿ ಬದಲಾವಣೆ ಕಂಡಿರಬಹುದು. ಆದರೆ, ಮನಸ್ಸುಗಳಲ್ಲಿ ಬೇರುಬಿಟ್ಟಿದೆ. ಹಾಗಾಗಿ, ಜಾತಿ ತಾರತಮ್ಯ ಹೊರಹೋಗಬೇಕೆಂದರೆ, ನಮ್ಮೊಳಗಿನ ಕೀಳರಿಮೆಯಿಂದ ನಾವು ಹೊರಬರಬೇಕು. ಕೀಳಾಗಿ ಕಂಡವರ ಬಾಯಲ್ಲೇ ಹೌದೌದು ಅನ್ನಿಸಿಕೊಳ್ಳಬೇಕು. ಆ ಮಾರ್ಗದಲ್ಲಿ ಮುಂದಿನ ಹೆಜ್ಜೆ ಇಡಬೇಕು ಎಂದುಕೊಂಡಿದ್ದೇನೆ. ಪರಿಶಿಷ್ಟರಲ್ಲಿ ಅಪಾರ ಕಲಾವಿದರು ಇದ್ದಾರೆ. ಅವರನ್ನು ಹೆಕ್ಕಿ ತೆಗೆದು, ಮುಖ್ಯವಾಹಿನಿಗೆ ಕರೆತರಬೇಕಿದೆ...’ ಫಕ್ಕೀರಪ್ಪ ಮಾತಲ್ಲಿ ಹಂಬಲ ಎದ್ದುಕಾಣುತ್ತದೆ.

ಫಕ್ಕೀರಪ್ಪ ತಮ್ಮ ಸಮುದಾಯದ ಕೆಲಸಕ್ಕೆ ನಿಂತ ಮೇಲೆ ಅವರ ಅಣ್ಣ ಮೇಕೆ ಸಾಕಣೆ ಶುರು ಮಾಡಿದ್ದಾರೆ. ತಂದೆ– ತಾಯಿ ಈಗಲೂ ಕೂಲಿ ಕೆಲಸ ಮಾಡುತ್ತಿದ್ದಾರೆ.

‘ಡಿಸೋಮ್‌ ದ ಲೀಡರ್‌ಶಿಪ್‌ ಸ್ಕೂಲ್‌’ ಎನ್ನುವ ಅಖಿಲ ಭಾರತ ಮಟ್ಟದ ಒಂದು ಅಧ್ಯಯನ ಸಂಸ್ಥೆಗೂ ಫಕ್ಕೀರಪ್ಪ ಫೆಲೋ ಆಗಿದ್ದಾರೆ. ಇದರ ಮೂಲಕ ದೇಶದ ಉದ್ದಗಲ ಅಲೆದಿದ್ದಾರೆ. ಬೇರೆಬೇರೆ ರಾಜ್ಯಗಳ ರಾಜಕೀಯ, ಧರ್ಮ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಬದುಕಿನ ರೀತಿ... ಹೀಗೆ ಎಲ್ಲ ಆಯಾಮಗಳಲ್ಲೂ ಈ ಶಾಲೆ ಮೂಲಕ ಅಧ್ಯಯನ ಮಾಡಿದ್ದಾರೆ. ದೇಶ ಸುತ್ತಿದ ಅನುಭವ ಅವರನ್ನು ಮತ್ತಷ್ಟು ಗಟ್ಟಿಯಾಗಿ ‘ನಿಲ್ಲುವಂತೆ’ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT