ಜೈಹೋ....‘ಸೀಡ್‌ಬಾಲ್‌’ ಗಣೇಶ

7

ಜೈಹೋ....‘ಸೀಡ್‌ಬಾಲ್‌’ ಗಣೇಶ

Published:
Updated:
Deccan Herald

‘ನೋಡಿ ನಮ್ಮ ಮನೆಯ ಕೈತೋಟ. ಕಳೆದ ವರ್ಷ ಚೌತಿ ಮುಗಿದ ಎರಡು–ಮೂರು ತಿಂಗಳಿಗೆ ಈ ಕೈತೋಟದಲ್ಲೇ ಬೆಳೆದ ಬೀನ್ಸ್‌, ಹೀರೆ ಕಾಯಿ, ಟೊಮೆಟೊ, ಹಾಗಲಕಾಯಿ ತರಕಾರಿಗಳಿಂದಲೇ ಅಡುಗೆ. ಇದು ಗಣೇಶನ ಪ್ರಸಾದ’ – ಎನ್ನುತ್ತಾ ಮಾತಿಗಿಳಿದರು ಧಾರವಾಡದ ಪರಿಸರಸ್ನೇಹಿ ಗಣೇಶ ಮೂರ್ತಿಗಳ ತಯಾರಕ ಮಂಜುನಾಥ ಹಿರೇಮಠ.

‘ಆ ಚೌತಿ ಹಬ್ಬ ಕೈತೋಟ ಮಾಡುವುದಕ್ಕೆ ಬುನಾದಿ ಹಾಕಿಕೊಟ್ಟಿತು. ನಮ್ ತೋಟದಲ್ಲಿ ನಾವೇ ಬೆಳೆಸಿದ ತರಕಾರಿಗಳನ್ನು ಉಣ್ಣುವುದರಲ್ಲಿ ಎಂಥ ಖುಷಿ ಇರುತ್ತೆ ಅಲ್ವಾ’ ಎನ್ನುತ್ತಾ ‘ಈ ವರ್ಷವೂ ಅದೇ ರೀತಿಯ ಗಣೇಶ ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ’ ಎಂದು ಹೇಳಿ ಮಾತು ಮುಗಿಸಿದರು.

ಗಣೇಶ, ಚೌತಿ, ಕೈತೋಟ, ತರಕಾರಿ... ಇದೇನಪ್ಪ ‌ಒಂದಕ್ಕೊಂದು ಸಂಬಂಧವೇ ಇಲ್ಲ ಅಂತ ಯೋಚನೆ ಮಾಡ್ತಿದ್ದೀರಾ? ಹಿರೇಮಠರ ಮಾತು ಕೇಳಿದಾಗ ನನಗೂ ಹಾಗೆ ಎನ್ನಿಸಿತ್ತು. ಆದರೆ, ಅವರೊಂದಿಗೆ ಸುದೀರ್ಘವಾಗಿ ಮಾತನಾಡುತ್ತ ಹೋದಾಗಲೇ ಗೊತ್ತಾಗಿದ್ದು ಗಣೇಶನ ಚೌತಿಗೂ ಕೈತೋಟದ ತರಕಾರಿಗಳಿಗೂ ಅವಿನಾಭಾವ ಸಂಬಂಧವಿದೆ ಎಂದು. ಅದು ಹೇಗೆ ಎನ್ನುತ್ತೀರಾ? ಮುಂದೆ ಓದಿ...

ಪರಿಸರ ಕಾಳಜಿಯುಳ್ಳ ಕಲಾವಿದ ಮಂಜುನಾಥ ಹಿರೇಮಠ ಅವರು ಎರಡು ದಶಕಗಳಿಂದ ಪರಿಸರಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕಳೆದ ವರ್ಷದಿಂದ ‘ಬೀಜದುಂಡೆ’ ಗಣೇಶ ಮೂರ್ತಿಯೂ ಸೇರಿಕೊಂಡಿದೆ. ಪ್ರತಿ ಮೂರ್ತಿಯ ಬೆನ್ನಲ್ಲಿ ರಂಧ್ರ ಮಾಡಿ, ಅದರೊಳಗೆ ಬೆಂಡೆ, ಹಾಗಲ, ಬೀನ್ಸ್‌ನಂತಹ ತರಕಾರಿ ಬೀಜಗಳು, ಹೂವಿನ ಬೀಜಗಳನ್ನೊಳಗೊಂಡ ಮಣ್ಣಿನ ಉಂಡೆ (ಸೀಡ್‌ ಬಾಲ್‌) ಸೇರಿಸುತ್ತಾರೆ. ಈ ಮೂರ್ತಿಯನ್ನು ಪೂಜಿಸಿ, ವಿಸರ್ಜಿಸಿದ ನಂತರ ಉಳಿಯುವ ಮಣ್ಣನ್ನು, ಕೈತೋಟದಲ್ಲಿ ಹಾಕಬೇಕು. ಮಣ್ಣಿನೊಳಗೆ ಸೇರಿರುವ ತರಕಾರಿ ಬೀಜಗಳು ಮೊಳಕೆಯೊಡೆದು ಒಂದೆರಡು ತಿಂಗಳಲ್ಲೇ ಸಮೃದ್ಧ ಫಲ ಕೊಡಲಾರಂಭಿಸುತ್ತವೆ. ಈ ಪ್ರಯೋಗ ಮೊದಲು ಆರಂಭವಾಗಿದ್ದು ಧಾರವಾಡದ ಹರ್ಷವರ್ಧನ್ ಶೀಲವಂತ ಅವರ ಮನೆಯಲ್ಲಿ. ನಂತರ ಕಲಾವಿದ ಹಿರೇಮಠ ಅವರ ಮೂಲಕ ವ್ಯವಸ್ಥಿತವಾಗಿ ಅನುಷ್ಠಾನಕ್ಕಿಳಿಸಲಾಯಿತು. ಇವರಿಂದ ಗಣೇಶನನ್ನು ಒಯ್ದವರೆಲ್ಲರ ಮನೆಗಳಲ್ಲಿ ಹೂವು, ತರಕಾರಿಗಳ ಫಲ ಸಿಕ್ಕಿದೆ. ಇದನ್ನೇ ಬೀಜದುಂಡೆ ಗಣೇಶನ ಪ್ರಸಾದ ಎಂದಿದ್ದು!

ಈ ವರ್ಷ ಒಂದು ಹೆಜ್ಜೆ ಮುಂದಿಟ್ಟ ಹಿರೇಮಠ ಅವರು, ಬೀಜದುಂಡೆ ಗಣೇಶನವನ್ನು ಆಂದೋಲನವಾಗಿಸಿದರು. ಪರಿಸರ ಪ್ರೇಮಿಗಳು, ಸಮಾನಮನಸ್ಕರು ಇದೇ ಗಣೇಶನನ್ನು ಮನೆಯಲ್ಲಿ ಪೂಜಿಸಲು ಆರಂಭಿಸಿದರು. ಅಂಥವರ ಮನೆಗಳ ಕೈತೋಟಗಳಲ್ಲಿ ಹಬ್ಬ ಮುಗಿದು ಐದಾರು ತಿಂಗಳ ಕಾಲ ನಿರಂತರ ತರಕಾರಿಗಳು ಸಿಗುತ್ತಿವೆ. ಹೂವಿನ ಗಿಡಗಳು ಹೂ ಬಿಟ್ಟಿವೆ.

ಹುಬ್ಬಳ್ಳಿಯ ನವನಗರದ ಡಾ. ಧೀರಜ್‌ ವೀರನಗೌಡರ್‌ ಕಳೆದ ವರ್ಷ ಇಂತಹದ್ದೇ ಗಣೇಶನನ್ನು ಕೂರಿಸಿ, ಡ್ರಮ್‌ನಲ್ಲಿ ನೀರು ತುಂಬಿ ವಿಸರ್ಜಿಸಿದರು. ನೀರಿನಲ್ಲಿ ಕರಗಿದ ಮಣ್ಣಿಗೆ ಕಾಂಪೋಸ್ಟ್‌, ಬೇರೆ ಮಣ್ಣನ್ನೂ ಸೇರಿಸಿ ಎರಡು ಕುಂಡಗಳಲ್ಲಿ ಹಾಕಿ ಅದರಲ್ಲಿ ಗುಲಾಬಿ ಗಿಡ ಬೆಳೆಸಿದ್ದಾರೆ. ‘ನಮ್ಮ ಸ್ನೇಹಿತ, ಸಂಬಂಧಿಕರ ಬಳಗದಲ್ಲೂ ಬೀಜದುಂಡೆ ಗಣೇಶನನ್ನು ಪೂಜಿಸಲು ಮನಸ್ಸು ಮಾಡಿದ್ದಾರೆ’ ಎನ್ನುತ್ತಾರೆ ಧೀರಜ್.

ಹಾವೇರಿಯ ಮೀನಾಕ್ಷಿ ಪೂಜಾರ್ ಪ್ರತಿ ವರ್ಷ ಮೂರು ಬಸ್‌ಗಳನ್ನು ಬದಲಿಸಿ ಧಾರವಾಡಕ್ಕೆ ಬಂದು ಮಂಜುನಾಥ ಅವರಿಂದ ಗಣೇಶ ಮೂರ್ತಿಯನ್ನೇ ಒಯ್ಯುತ್ತಾರೆ. ಕಳೆದ ವರ್ಷ ಗಣೇಶ ವಿಗ್ರಹ ವಿಸರ್ಜಿಸಿದ ನಂತರ ಬೆಂಡೆ, ಹಾಗಲಬೀಜಗಳು ಫಲಕೊಟ್ಟಿವೆಯಂತೆ. ಈಗ ಅವರ ಓಣಿಯ 25 ಕುಟುಂಬಗಳು, ಸಾರ್ವಜನಿಕ ಗಣೇಶ ಮಂಡಳಿಯವರೂ ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

‘ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಜೊತೆಗೆ ಮಾಲಿನ್ಯ ರಹಿತ ವಿಸರ್ಜನೆಯ ಬಗ್ಗೆಯೂ ಆಲೋಚಿಸಬೇಕಿದೆ. ಮಂಟಪದಲ್ಲಿಯೇ ಮೂರ್ತಿಯ ಕರಗಿಸಿ, ಅದೇ ಮಣ್ಣಿನಲ್ಲಿ  ಕೃಷ್ಣ ತುಳಸಿ ಗಿಡಗಳನ್ನು ನೆಟ್ಟು ಭಕ್ತರಿಗೆ ನೀಡಬಹುದು’ ಎಂಬ ಸಲಹೆ ಧಾರವಾಡದ ಸುಭಾಸ ರಸ್ತೆ ಗಣೇಶ ವಿಗ್ರಹ ಪ್ರತಿಷ್ಠಾಪನಾ ಸಮಿತಿ ಅಶೋಕ ಅಮಿನಗಡ ಅವರದ್ದು.


ಮಂಜುನಾಥ ಅವರ ಕೈಯಲ್ಲಿ ಮೂಡಿದ ಪರಿಸರ ಸ್ನೇಹಿ ಗಣೇಶಮೂರ್ತಿಗಳು

ಸಾವಿರ ಬೀಜದುಂಡೆ ‘ಗಣೇಶ’ಗಳು
ಈ ವರ್ಷ ಬೀಜದುಂಡೆಯ ಗಣೇಶ ಮೂರ್ತಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕಾಗಿ ಮಂಜುನಾಥ 1000ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದಾರೆ. ಇದರೊಂದಿಗೆ ಮೂರ್ತಿ ಕೈಯಲ್ಲಿ ಒಂದಷ್ಟು ತರಕಾರಿ ಬೀಜಗಳ ಬುತ್ತಿಯನ್ನೂ ಕಟ್ಟಿಕೊಡುತ್ತಿದ್ದಾರೆ. ಮಣ್ಣಿನ ಗಣೇಶನ ವಿಗ್ರಹಕ್ಕೇ ವಿವಿಧ ತರಕಾರಿಗಳ ಬೀಜಗಳನ್ನೇ ಅಲಂಕರಿಸುತ್ತಾರೆ. ಅಷ್ಟೇ ಅಲ್ಲ, ವಿಗ್ರಹದ ಕುತ್ತಿಗೆ, ಕಿವಿ, ಕಿರೀಟ, ಕೈ, ಕಾಲುಗಳಿಗೂ ಬೀಜಗಳನ್ನೇ ಆಭರಣಗಳಾಗಿಸುತ್ತಾರೆ ಮಂಜುನಾಥ. ಮೂರ್ತಿಗೆ ಕೃತಕ ಬಣ್ಣಗಳ ಬದಲಿಗೆ ಗಂಧ, ಅರಿಸಿನ, ಕುಂಕುಮವನ್ನೇ ಬಳಿಯುತ್ತಾರೆ. ಧೋತಿ, ಶಾಲುಗಳಿಗೆ ಬಟ್ಟೆಗಳನ್ನೇ ಬಳಸುವುದರಿಂದ, ವಿಸರ್ಜನೆ ವೇಳೆ ಅವೆಲ್ಲವನ್ನೂ ಸುಲಭವಾಗಿ ತೆಗೆಯಬಹುದು. ಒಟ್ಟಿನಲ್ಲಿ ಮಂಜುನಾಥ ಅವರ ಬಳಿ ಗಣೇಶ ಮೂರ್ತಿಗಳನ್ನು ಖರೀದಿಸುವವರಿಗೆ, ತರಕಾರಿಗಳು ಬೋನಸ್‌ ಆಗಿ ಸಿಗಲಿವೆ ಅನ್ನೋದು ವಿಶೇಷ.

ಮಾದರಿಯಾದ ಪರಿಸರ ಕಾಳಜಿ
ಮೂರ್ತಿಗಳನ್ನು ಕೊಡುವಾಗ ‘ಕೆರೆ, ಬಾವಿಯಲ್ಲಿ ವಿಸರ್ಜಿಸಬೇಡಿ. ತೊಟ್ಟಿ, ಕುಂಡ, ಬಕೆಟ್‌ನಲ್ಲಿ ವಿಸರ್ಜಿಸಿ, ನಂತರ ಅವುಗಳಲ್ಲಿ ಉಳಿಯುವ ಮಣ್ಣನ್ನು ಕೈತೋಟಕ್ಕೆ ಬಳಸಿ. ಕೆರೆ, ಬಾವಿಗೆ ಹೂಳು ತುಂಬುವುದು ತಪ್ಪುತ್ತದೆ’ ಎಂದು ಮಂಜುನಾಥ ಸಲಹೆ ನೀಡುತ್ತಿರುತ್ತಾರೆ. ಅವರ ಈ ಪರಿಸರ ಕಾಳಜಿ ಹಲವರಿಗೆ ಮಾದರಿಯಾಗಿದೆ. ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ವಿಘ್ನೇಶ್ವರ ಉತ್ಸವ ಸಮಿತಿಯವರು ಪಟಾಕಿ ಹೊಡೆಯುವುದನ್ನೇ ನಿಲ್ಲಿಸಿದ್ದಾರೆ. ಮೆರವಣಿಗೆ ಕೈ ಬಿಟ್ಟು ಅದೇ ಹಣದಲ್ಲಿ ಒಂದಷ್ಟು ಗಿಡಗಳನ್ನು ತಂದು ಪರಿಸರಸ್ನೇಹಿ ಗಣೇಶನನ್ನು ಪೂಜಿಸುವವರಿಗೆ ವಿತರಿಸುತ್ತಿದ್ದಾರೆ. ‘ಪಿಒಪಿ ಗಣೇಶನ ಭರಾಟೆ ನಡುವೆ ಜನರು ನಿಧಾನವಾಗಿ ಬದಲಾಗುತ್ತಿದ್ದಾರೆ ಎಂಬುದು ಸಮಾಧಾನದ ವಿಷಯ. ವರ್ಷದಿಂದ ವರ್ಷಕ್ಕೆ ಇಂಥವರ ಸಂಖ್ಯೆ ಏರುತ್ತಿರುವುದು ಖುಷಿಯ ಸಂಗತಿ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಹಿರೇಮಠ.

ಪಿಒಪಿಗೆ ಹೋಲಿಸಿದರೆ ಮಣ್ಣಿನ ಮೂರ್ತಿಗಳು ತುಸು ದುಬಾರಿ ಹಾಗೂ ತೂಕ ಹೆಚ್ಚು. ₹1,000ಕ್ಕೆ ಸಿಗುವ ಪಿಒಪಿ ಗಣೇಶ, ಮಣ್ಣಿನದ್ದಾದರೆ ₹1,300 ಬೆಲೆ. ಐದಡಿ ಎತ್ತರದ ಪಿಒಪಿ ಗಣೇಶ 15 ಕೆ.ಜಿ. ತೂಗಿದರೆ, ಮಣ್ಣಿನ ಗಣೇಶ 35 ಕೆ.ಜಿ. ತೂಗಲಿದೆ. ಆದರೆ, ಪಿಒಪಿ ಮೂರ್ತಿಗಳು ಬಾವಿ, ಕೆರೆಯಲ್ಲಿ ವಿಸರ್ಜಿಸಿದಾಗ ನೀರು ಮಲಿನವಾಗಿ, ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಯಾದರೆ ಈ ಎರಡೂ ಸಮಸ್ಯೆಗಳಿಂದ ಹೊರಗುಳಿಯಬಹುದು. ಮನೆಯಲ್ಲಿ ಪೂಜಿತ ಗಣೇಶ ಹಿತ್ತಲಿನ ಗಿಡಗಳಿಗೆ ಫಲವತ್ತತೆಯನ್ನು ನೀಡಲಿದ್ದಾನೆ. ಮತ್ಯಾಕೆ ತಡ; ಈ ಬಾರಿ ಚೌತಿಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶನನ್ನೇ ಮನೆಗೆ ಕರೆತನ್ನಿ. ಪರಿಸರ ಸಂರಕ್ಷಣೆಗೆ ಕೈಜೋಡಿಸಿ.


ಚಿಕ್ಕ ಗಣೇಶನ ಜೊತೆ ಕಲಾವಿದ ಮಂಜುನಾಥ ಹಿರೇಮಠ

ಮಕ್ಕಳಲ್ಲೂ ಪರಿಸರ ಜಾಗೃತಿ
ಈಗೆಲ್ಲ ಶಾಲೆಗಳಲ್ಲಿ ಕ್ಲೇ ಮಾಡೆಲಿಂಗ್‌ ತಯಾರಿಕೆಯಲ್ಲಿ ಮಕ್ಕಳು ಪಳಗಿರುತ್ತಾರೆ. ಇಂಥ ಮಕ್ಕಳಿಗೆ ಕಳೆದ ವರ್ಷ ಚೌತಿ ಹಬ್ಬದ ವೇಳೆ ಗಣೇಶ ಮೂರ್ತಿ ತಯಾರಿ ಕುರಿತು ಮಂಜುನಾಥ ಶಿಬಿರ ಆಯೋಜಿಸಿದ್ದರು. ಆ ಮಕ್ಕಳೇ ಈ ವರ್ಷ ತಮ್ಮ ತಮ್ಮ ಮನೆಗಳಲ್ಲಿ ಗಣೇಶ ಮೂರ್ತಿ ತಯಾರಿಸಿ ಪೂಜಿಸಬಹುದು ಎನ್ನುತ್ತಾರೆ ಮಂಜುನಾಥ.

ತಯಾರಿಕೆಯ ಹಿಂದಿನ ಪರಿಶ್ರಮ
ಧಾರವಾಡದ ಮುಗದ ಕೆರೆಯಿಂದ ಮಣ್ಣನ್ನು ತರಿಸಿ ಸಂಗ್ರಹಿಸಿಟ್ಟುಕೊಂಡು ಮೂರ್ತಿಗಳನ್ನು ತಯಾರಿಸುತ್ತಾರೆ. ದೀಪಾವಳಿ ನಂತರ ಇವರ ಕಾಯಕ ಆರಂಭ. ಈ ಮೂರ್ತಿ ತಯಾರಿಕೆಗೆ ಪತ್ನಿ ನಿರ್ಮಲಾ ಹಿರೇಮಠ ಹಾಗೂ ಪುತ್ರರಾದ ವಿನಾಯಕ, ಕಾಂತೇಶ ಕೈ ಜೋಡಿಸಿದ್ದಾರೆ. ಇವರು ಬಳಸುವ ಕೆರೆ ಮಣ್ಣಿನಲ್ಲೂ ಮೆದು, ಗಟ್ಟಿ ಹಾಗೂ ಮರಳು ಮಿಶ್ರಿತವಾಗಿದೆ. ಈ ಮೂರೂ ತರಹದ ಮಣ್ಣಿನ ಜೊತೆ ಹಿಡಿತ ಸಿಗುವುದಕ್ಕಾಗಿ ತೆಂಗಿನ ನಾರಿನ ಪುಡಿ (ಕಾಯರ್ ಪಿತ್) ಬಳಸುತ್ತಾರೆ.

ವರ್ಷಕ್ಕೆ ನಾಲ್ಕು ಟ್ರಕ್‌ ಲೋಡ್‌ (ಟ್ರಾಕ್ಟರ್‌ ಆದರೆ 10–12 ಲೋಡ್‌) ಮಣ್ಣನ್ನು ಬಳಸುತ್ತಿದ್ದು, ಒಂದು ಟ್ರಕ್‌ ಮಣ್ಣಿಗೆ ₹48,000. ಮಂಜುನಾಥ ಅವರು, ‘ಪರಿಸರ ಸ್ನೇಹಿ ಗಣೇಶ ಉತ್ಸವಕ್ಕೆ ಒತ್ತು ಕೊಡುವ ನಮಗೆ ಯಾವತ್ತೂ ಮೋಸ ಆಗಿಲ್ಲ. ದಿನಕ್ಕೆ 12 ತಾಸು ಶ್ರಮ ಹಾಕಿದರೆ ತಿಂಗಳಿಗೆ ₹ 25 ಸಾವಿರ ಗಳಿಕೆಗೆ ತೊಂದರೆಯಿಲ್ಲ’ ಎನ್ನುತ್ತಾರೆ ಅವರು.


ಗಣೇಶ ಕೃಪೆಯಿಂದ ತಯಾರಾದ ಕೈತೋಟ

ಎಷ್ಟೊಂದು ಲಾಭನೋಡಿ...
‘ಪರಿಸರ ಸ್ನೇಹಿ ಬೀಜದುಂಡೆ ಗಣೇಶನ ಪೂಜೆ ಆರಂಭವಾಗಿದ್ದು ನಮ್ಮಿಂದಲೇ. ನಂತರ ಮಂಜುನಾಥ ಅವರ ಮೂಲಕ ಆಂದೋಲನದ ರೂಪಕ್ಕಿಳಿಸಲಾಯಿತು. ಇದರಿಂದ ಎಷ್ಟೊಂದು ಲಾಭವಿದೆ ನೋಡಿ. ಪ್ರಾಥಮಿಕವಾಗಿ ಜಲಮೂಲ ರಕ್ಷಣೆಯಾಗಲಿದೆ. ಮನೆಯಂಗಳದಲ್ಲೇ ಅಥವಾ ಗಣೇಶೋತ್ಸವ ಮಂಟಪದಲ್ಲೇ ಗಣೇಶನ ವಿಸರ್ಜಿಸುವುದರಿಂದ ಅದ್ದೂರಿ ಮೆರವಣಿಗೆಯ ಪ್ರಶ್ನೆ ಬರುವುದಿಲ್ಲ. ಪಟಾಕಿ, ಡಾಲ್ಬಿ ಶಬ್ದಕ್ಕೆ ಕಡಿವಾಣ ಬೀಳುತ್ತದೆ. ಶಬ್ದ ಮಾಲಿನ್ಯ ತಪ್ಪಲಿದೆ. ದುಂದುವೆಚ್ಚದ ಮಾತೇ ಇರುವುದಿಲ್ಲ.  ಪೊಲೀಸರಿಗೂ ಸುವ್ಯವಸ್ಥೆ, ಶಾಂತಿ ಪಾಲನೆ ಮುಂತಾದ ಹೆಸರಲ್ಲಿ ಇರುವ ಹೆಚ್ಚಿನ ತಲೆಬಿಸಿ ತಪ್ಪಲಿದೆ. ಪ್ರಸ್ತುತ ಅಲಂಕಾರಕ್ಕೆ ಬಳಸುವ ವಸ್ತು ಪ್ಲಾಸ್ಟಿಕ್‌ಮಯವಾಗಿದೆ. ಆದರೆ, ಅಂಥವನ್ನು ಸೀಡ್‌ಬಾಲ್‌ ಗಣೇಶನಿಗೆ ಬಳಸುವುದಿಲ್ಲ. ಇದರಿಂದ ಪ್ಲಾಸ್ಟಿಕ್‌ ಮಾಲಿನ್ಯವೂ ತಪ್ಪಲಿದೆ. ಗಣೇಶನ ಮಣ್ಣನ್ನು ತರಕಾರಿ ಬೀಜ ಬಿತ್ತಲು ಬಳಸುವುದರಿಂದ ಪರಿಸರಕ್ಕೆ ಹಸಿರ ಕೊಡುಗೆ, ಅಳಿಲು ಸೇವೆ ನಮ್ಮಿಂದಾಗಲಿದೆ’ ಎನ್ನುತ್ತಾರೆ ಧಾರವಾಡದ ನೇಚರ್ ರಿಸರ್ಚ್ ಸೆಂಟರ್‌ನ ಮುಖ್ಯಸ್ಥ ಹರ್ಷವರ್ಧನ್ ವಿ.ಶೀಲವಂತ.

(ಮಂಜುನಾಥ ಹಿರೇಮಠ ಅವರ ಸಂಪರ್ಕ: 9880787122)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !