ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ... ಮೊದಲು ಮನೆ ಮಕ್ಕಳಿಗೆ! ...ಮರುರೂಪಿಸಬೇಕಿರುವ ನೀತಿ

Last Updated 29 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಸ್ಥಳೀಯರಿಗೆ ಉದ್ಯೋಗ’ ಎನ್ನುವುದು ತೀರಾ ಹಿಂದುಳಿದ ದೇಶಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕಡೆ ಆಗಾಗ್ಗೆ ಕೇಳಿ ಬರುವ ಘೋಷಣೆಯಾಗಿದೆ. ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿನ ಚುನಾವಣೆಯಲ್ಲಿ ಇದನ್ನು ಟ್ರಂಪ್ ಕಾರ್ಡ್ ಮಾಡಿಕೊಂಡಿದ್ದಾರೆ. ವಲಸಿಗರು ತಲುಪಬಯಸುವ ದುಡಿಯುವ ತಾಣಗಳಲ್ಲಿ ಅಮೆರಿಕ ಪ್ರಮುಖವಾದುದು. ಹಾಗೆ ಗೆದ್ದು ಬಂದ ಟ್ರಂಪ್ ಅವರ ಅಧಿಕಾರಾವಧಿಯ ಕೊನೆಯಲ್ಲಿ ಬಂದ ಕೊರೊನಾ ಬಿಕ್ಕಟ್ಟಿನ ನಂತರ ವಿದೇಶಿಯರು ಅಮೆರಿಕದಲ್ಲಿ ಕೆಲಸ ಮಾಡಲು ಕೊಡುತ್ತಿದ್ದ ಎಚ್1 ಬಿ ವೀಸಾ ಮುಂದುವರೆಸದಿರುವ ಆದೇಶಗಳನ್ನು ಹೊರಡಿಸಿದ್ದಾರೆ. ಭಾರತದಲ್ಲಿ ಉದ್ಯೋಗದ ವಿಚಾರವು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದೆ. ಹಾಗೆ ನೋಡಿದರೆ 2014ರ ಲೋಕಸಭಾ ಚುನಾವಣೆಗೆ ಮುಂಚೆ ಮೋದಿಯವರು ವರ್ಷಕ್ಕೆ ಕೋಟಿ ಉದ್ಯೋಗದ ಭರವಸೆ ನೀಡಿದಾಗ, ನಿರುದ್ಯೋಗ ದೊಡ್ಡ ಸಮಸ್ಯೆಯಾಗಿರಲಿಲ್ಲ. ಅಲ್ಲಿಂದಾಚೆಗೆ ಪ್ರಪಂಚದ ಮಟ್ಟದಲ್ಲೂ, ಭಾರತದಲ್ಲೂ ನಿರುದ್ಯೋಗದ ಪ್ರಮಾಣ ಏರುತ್ತಾ ಹೋಯಿತು. ಸ್ಥಳೀಯರಿಗೆ ಉದ್ಯೋಗದ ಪ್ರಶ್ನೆಯು ಇಂತಹ ಸಂದರ್ಭದಲ್ಲೇ ದೊಡ್ಡದಾಗಿ ಏಳುತ್ತದೆ ಎಂದು ನಾವು ಭಾವಿಸುತ್ತೇವೆ.

ಒಂದು ವೇಳೆ ನಿರುದ್ಯೋಗವು ಸಮಸ್ಯೆಯೇ ಆಗಿರದಾದಾಗ ಯಾರಾದರೂ ಆ ಪ್ರಶ್ನೆ ಎತ್ತಲು ಆರಂಭಿಸಿದರೂ ಅದಕ್ಕೆ ಸಾಮಾನ್ಯವಾಗಿ ಬೆಂಬಲ ದೊರೆಯ ಲಾರದು ಎಂಬುದು ಸಾಮಾನ್ಯ ನಂಬಿಕೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚೆ ಇಲ್ಲಿ ಅಂತಹದೊಂದು ಪ್ರಯತ್ನ ನಡೆಯಿತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಲ್ಲಿಯೂ ನಿರುದ್ಯೋಗ ಹೆಚ್ಚಾಗುತ್ತಿದ್ದರೂ, ಇಡೀ ದೇಶದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗದ ಪ್ರಮಾಣವಿದ್ದ (ಆಧಾರ: ಸಿಎಂಐಇ ವರದಿ) ರಾಜ್ಯವಾದ ಕರ್ನಾಟಕದಲ್ಲಿ ಆ ಆಂದೋಲನವು ಗಮನ ಸೆಳೆಯಿತು. ಆದರೆ ಅದು ನಿರಂತರವಾಗಿ ಮುಂದುವರೆಯಬಹುದಾದ ಆಂದೋಲನವಾಗಲಿಲ್ಲ. 2018ರಲ್ಲೂ ಅದು ಉದ್ಯೋಗದ ಪ್ರಶ್ನೆಗಿಂತ ಉದ್ಯೋಗದ ಭದ್ರತೆಯ ವಿಷಯವಾಗಿ ಬೆಳೆದು ನಿಂತಿತು.

ಹಾಗೆಂದು ದೇಶದಲ್ಲೇ ಅತೀ ಹೆಚ್ಚು ನಿರುದ್ಯೋಗವಿದ್ದ ರಾಜ್ಯಗಳಲ್ಲಿ ಒಂದಾಗಿದ್ದ ಹರಿಯಾಣದಲ್ಲೂ (ಈಗಲೂ –ಜುಲೈ 2020- ಹರಿಯಾಣದಲ್ಲೇ ಶೇಕಡ 24ರಷ್ಟು, ಅಂದರೆ ದೇಶದಲ್ಲೇ ಅತೀ ಹೆಚ್ಚು ನಿರುದ್ಯೋಗದ ಪ್ರಮಾಣವಿದೆ) 2019ರಲ್ಲಿ ಅದೊಂದು ಚುನಾವಣಾ ವಿಷಯ ಆಗಲಿಲ್ಲ. ಆ ಭಾಗದ ಯುವಕರು ಯೂತ್ ಫಾರ್ ಸ್ವರಾಜ್ ಹೆಸರಿನಲ್ಲಿ ನಡೆಸಿದ ಆಂದೋಲನದ ಹೊರತಾಗಿ ಪ್ರಮುಖ ವಿರೋಧ ಪಕ್ಷವೂ ಸೇರಿದಂತೆ ಯಾರೂ ನಿರುದ್ಯೋಗದ ವಿಚಾರವನ್ನು ಪ್ರಮುಖ ವಿಚಾರವನ್ನಾಗಿ ಪರಿಗಣಿಸಿರಲಿಲ್ಲ. ದೇಶದ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ದೆಹಲಿಗೆ ಹೊಂದಿಕೊಂಡಿರುವ ಹರಿಯಾಣದ ಗುರುಗ್ರಾಮದಲ್ಲಿ ಇದೆ. ಅಲ್ಲಿ ಇಡೀ ಉತ್ತರ ಹಾಗೂ ಪೂರ್ವ ಭಾರತದ ಕಾರ್ಮಿಕರು ಬಂದು ಕೆಲಸ ಮಾಡುತ್ತಾರೆ. ಆದರೂ ಗುರುಗ್ರಾಮದಲ್ಲಿ ಸ್ಥಳೀಯರಿಗೆ ಉದ್ಯೋಗದ ಪ್ರಶ್ನೆ ದೊಡ್ಡ ವಿಚಾರವಾಗಿ ಮುಂದೆ ಬಂದಿಲ್ಲ. ಹಾಗಾಗಿ ಸ್ಥಳೀಯರಿಗೆ ಉದ್ಯೋಗದ ಪ್ರಶ್ನೆಯು ಎಲ್ಲಾ ಸಂದರ್ಭದಲ್ಲೂ ನಿರುದ್ಯೋಗದ ಪ್ರಮಾಣದ ಜೊತೆಗೆ ಸಂಬಂಧ ಹೊಂದಿರುತ್ತದೆಂದು ಹೇಳಲಾಗದು. 2014ರಲ್ಲಿ ತಾವೇ ಪ್ರಸ್ತಾಪಿಸಿದ ಕೋಟಿ ಉದ್ಯೋಗದ ಪ್ರಶ್ನೆಯನ್ನು 2019ರ ಚುನಾವಣೆಯ ಸಂದರ್ಭದಲ್ಲಿ -ನಿರುದ್ಯೋಗವು ಕಳೆದ ಅರ್ಧ ಶತಮಾನದಲ್ಲೇ ಅತೀ ಹೆಚ್ಚು ಇದ್ದಾಗ - ಬಿಜೆಪಿಯು ಮುಖ್ಯ ಸಂಗತಿಯನ್ನಾಗಿ ಮಾಡಿಕೊಳ್ಳಲಿಲ್ಲ.

ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇಕಡ 50ರಿಂದ ಶೇಕಡ 75ರವರೆಗೆ ಮೀಸಲಿಡುವ ಕುರಿತು ಚರ್ಚೆ ನಡೆದಿದೆ. ಆಂಧ್ರದಲ್ಲಿ ಅದು ಕಾನೂನೂ ಆಗಿದೆ. ಕರ್ನಾಟಕದಲ್ಲೂ #Karnatakajobsforkannadigas ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾದ ಟ್ರೆಂಡಿಂಗ್ ಒಂದೆರಡು ಪ್ರತಿಭಟನೆಗಳಿಗೂ ಕಾರಣವಾಯಿತು. ಕರ್ನಾಟಕಕ್ಕಿಂತ ಎರಡೂವರೆ ಪಟ್ಟು ಹೆಚ್ಚು ನಿರುದ್ಯೋಗವಿರುವ ಆಂಧ್ರಪ್ರದೇಶದಲ್ಲಿ (ಶೇಕಡ 8.3) ಅದೊಂದು ಚುನಾವಣಾ ಭರವಸೆಯಾಗಿದ್ದರೂ ಜನರು ಬೀದಿಗಿಳಿದು ಮುಂದಿಟ್ಟ ಬೇಡಿಕೆಯಾಗಿರಲಿಲ್ಲ. ವಾಸ್ತವದಲ್ಲಿ ಹೈದರಾಬಾದ್‍ ಅನ್ನು ಕಳೆದುಕೊಂಡ ಆಂಧ್ರಪ್ರದೇಶದ ಪ್ರಮುಖ ಸಮಸ್ಯೆ ಉದ್ಯೋಗ ಸೃಷ್ಟಿಯದ್ದು. ಇದೀಗ ಮೂರು ರಾಜಧಾನಿಗಳನ್ನು ಸೃಷ್ಟಿಸಿಕೊಂಡಿರುವ ಹೊಸ ಸರ್ಕಾರವು ಯಾವ ಬಗೆಯ ಹೊಸ ಉದ್ಯೋಗ ಸೃಷ್ಟಿಗೆ ಯೋಜಿಸಿ, ಪರಿಣಾಮಕಾರಿಯಾಗಿ ಜಾರಿ ಮಾಡುತ್ತದೆಂಬುದು ಮುಖ್ಯವೇ ಹೊರತು, ವಲಸೆ ಉದ್ಯೋಗಿಗಳು ಬಂದು ಹಿಡಿದುಕೊಂಡುಬಿಡಬಹುದೆಂದು ಕಾನೂನು ಮಾಡುವುದಲ್ಲ. ಏಕೆಂದರೆ ಈಗ ಹೊಸ ಆಂಧ್ರದ ಭಾಗವಾಗಿರುವ ರಾಯಲಸೀಮೆಯವರು ಬೆಂಗಳೂರು ಮತ್ತು ಕೋಸ್ತಾದವರು ಹೈದರಾಬಾದ್‍ನಿಂದ ಅಮೆರಿಕವರೆಗೆ ಉದ್ಯೋಗ ಹುಡುಕಿಕೊಂಡು ವಲಸೆ ಹೋಗಿದ್ದೇ ಇದುವರೆಗಿನ ಇತಿಹಾಸ.

ಇದರ ಜೊತೆಗೆ ಇನ್ನೂ ಒಂದು ಟ್ರೆಂಡ್‍ಅನ್ನು ಗಮನಿಸಬೇಕು. ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಬರುವ ಗುಜರಾತ್ ಮತ್ತು ತಮಿಳುನಾಡಿನ ನಿರುದ್ಯೋಗದ ದರಗಳಲ್ಲಿನ ವ್ಯತ್ಯಾಸಗಳು ಒಂದು ಆಸಕ್ತಿಕರ ವಿಚಾರವನ್ನು ತಿಳಿಸುತ್ತವೆ. ಗುಜರಾತ್ ಶೇಕಡ 1.9 ನಿರುದ್ಯೋಗದ ದರ ಹೊಂದಿದ್ದರೆ, ತಮಿಳುನಾಡು ಶೇಕಡ 8.1ರಷ್ಟು ನಿರುದ್ಯೋಗದ ದರ ಹೊಂದಿದೆ. ವಲಸೆ ಕಾರ್ಮಿಕರು ಹುಡುಕಿಕೊಂಡು ಹೋಗುವ ರಾಜ್ಯಗಳಲ್ಲಿ ಗುಜರಾತ್‍ಗಿಂತ ತಮಿಳುನಾಡು ಮೇಲಿನ ಸ್ಥಾನದಲ್ಲಿದೆ.

ಸುಪ್ರೀಂ ಕೋರ್ಟ್‌ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳಿಸಿ ಎಂದು ಆದೇಶ ಹೊರಡಿಸಿದ ನಂತರದಲ್ಲಿ 7 ರಾಜ್ಯಗಳು 63 ಶ್ರಮಿಕ್ ರೈಲುಗಳಿಗಾಗಿ ರೈಲ್ವೆ ಇಲಾಖೆಯ ಮುಂದೆ ಬೇಡಿಕೆ ಇರಿಸಿದವು. ಅವುಗಳಲ್ಲಿ ಕೇರಳ 32, ತಮಿಳುನಾಡು 10, ಜಮ್ಮು ಮತ್ತು ಕಾಶ್ಮೀರ 9, ಕರ್ನಾಟಕ 6, ಆಂಧ್ರ 3, ಪಶ್ಚಿಮ ಬಂಗಾಳ 2 ಮತ್ತು ಗುಜರಾತ್ ರಾಜ್ಯದ 1 ರೈಲುಗಳು ಇದ್ದವು. ಆಯಾ ರಾಜ್ಯದ ಆಡಳಿತ ಪಕ್ಷಗಳ ನೀತಿಗಳೂ ಇದಕ್ಕೆ ಕಾರಣವಾಗಿರುತ್ತವಾದರೂ ವಲಸೆ ಕಾರ್ಮಿಕರು ಹುಡುಕಿಕೊಂಡು ಹೋಗುವ ಅಥವಾ ಅವರು ಹುಡುಕಿಕೊಂಡು ಹೋಗಬಹುದಾದ ಉದ್ಯೋಗಗಳಿರುವ ರಾಜ್ಯಗಳು ಯಾವುವು ಎಂಬುದರ ಸೂಚನೆ ಇಲ್ಲಿದೆ.

ಹಿಂದಿ ವಿರೋಧಿ ಭಾವನೆ ಗಾಢವಾಗಿದೆ ಎಂದು ಹೇಳಲಾಗಿರುವ ತಮಿಳುನಾಡಿನ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರಲ್ಲಿ ಗಣನೀಯ ಪ್ರಮಾಣದ ಹಿಂದಿ ಮಾತನಾಡುವ ವಲಸೆ ಕಾರ್ಮಿಕರಿದ್ದಾರೆ. ಇನ್ನು ಕೇರಳದ ಜನರು ಜಗತ್ತಿನಾದ್ಯಂತ ವಲಸೆ ಹೋಗಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರ ಗಲ್ಫ್‌ನಲ್ಲೂ ನಡೆಯುವ ಮಟ್ಟಿಗೆ ಅವರ ವಲಸೆಯಿದೆ. ಅದೇ ಸಂದರ್ಭದಲ್ಲಿ ಕೇರಳವು ದೇಶದ ಹಿಂದುಳಿದ ಪ್ರದೇಶಗಳ ವಲಸೆ ಕಾರ್ಮಿಕರು ಹುಡುಕಿಕೊಂಡು ಹೋಗುವ ರಾಜ್ಯಗಳಲ್ಲಿ ಒಂದಾಗಿದೆ. ಇದೇ ಮಾತನ್ನು ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡಕ್ಕೂ ಹೇಳಬಹುದು.

ಅಂದರೆ ವಲಸೆಯ ಸ್ವರೂಪವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿಯ ವಿಚಾರ ದಾರಿ ತಪ್ಪುತ್ತದಷ್ಟೆ. ಶೇಕಡ 75ರಷ್ಟು ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಎಂದಾಗ, ಯಾವ ಬಗೆಯ ಉದ್ಯೋಗಗಳು ಎಂಬ ಪ್ರಶ್ನೆ ಹಾಕಿಕೊಳ್ಳಬೇಕು.

ಕರ್ನಾಟಕದಂತಹ ರಾಜ್ಯಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರಿನಲ್ಲಿ ‘ಸ್ಥಳೀಯರಿಗೆ ಉದ್ಯೋಗ’ ಎಂಬುದು ಅಗತ್ಯವಿರುವುದು ಕೌಶಲ ಕೇಳುವ, ಉತ್ತಮ ಸಂಬಳ ತರುವ ಮೇಲ್ಮಟ್ಟದ ಉದ್ಯೋಗಗಳೇ ಹೊರತು, ದೈಹಿಕ ಶ್ರಮದ ಉದ್ಯೋಗಗಳಲ್ಲ. ಆದರೆ, ಮೀಸಲಾತಿ ಕಲ್ಪಿಸಲು ಹೊರಡುವುದು ಅಂತಹ ಉದ್ಯೋಗಗಳಲ್ಲಿ. ಆಂಧ್ರದಲ್ಲಿಶೇಕಡ 75 ಉದ್ಯೋಗಗಳಿಗೆ ಸ್ಥಳೀಯರ ನೇಮಕ ಎಂದಾಗ, ಯಾವ ಕೇಡರ್ ಎಂದು ನಮೂದಿಸಿಲ್ಲ. ನಮ್ಮ ಸರೋಜಿನಿ ಮಹಿಷಿ ವರದಿಯಲ್ಲಿ ಕೆಳಹಂತದ ಉದ್ಯೋಗಗಳಲ್ಲಿ ಹೆಚ್ಚಿನ ಮೀಸಲಾತಿಯ ಪ್ರಮಾಣವನ್ನು ಅಧಿಕೃತವಾಗಿಯೇ ಹೇಳಲಾಗಿದೆ. ಈ ಪ್ರಶ್ನೆ ಏಕೆ ಮುಖ್ಯವೆಂದರೆ ಅತಿ ಹೆಚ್ಚಿನ ಉದ್ಯೋಗಸೃಷ್ಟಿ ಮಾಡುವ ರಾಜ್ಯಗಳಿಂದಲೂ ಹೆಚ್ಚಿನ ವಲಸೆ ಆಗಿರುವುದನ್ನುಅಂಕಿ-ಅಂಶ ಹೇಳುತ್ತದೆ.

ವಾಸ್ತವದಲ್ಲಿ ಉದ್ಯೋಗಗಳಿದ್ದರೂ ಭದ್ರತೆಯಿಲ್ಲದಿರುವುದು, ‘ಉದ್ಯೋಗದಾತ’ರ ಅನುಕೂಲ ಹಾಗೂ ಲಾಭದ ಮರ್ಜಿಗೆ ತಕ್ಕಂತೆ ಎಲ್ಲವೂ ನಿರ್ಧಾರವಾಗುವುದು ಒಂದು ಮೂಲಭೂತ ಪ್ರಶ್ನೆಯಾಗಿ ಮುಂದುವರೆದಿದೆ. ಹಾಗೆಯೇ ವಲಸೆ ಕಾರ್ಮಿಕರಿಲ್ಲದೇ ಹಲವು ಆರ್ಥಿಕತೆಗಳು ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿ ಇದೆ. ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ಅವರು ನಡೆಸಿರುವ ಸಂಶೋಧನೆಯ ಪ್ರಕಾರ ವಲಸೆ ಕಾರ್ಮಿಕರು/ಉದ್ಯೋಗಿಗಳಿಂದ ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗಿ, ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಇವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳುವ ವಲಸೆ ನೀತಿಯನ್ನು ರೂಪಿಸುವುದು ಹೆಚ್ಚು ಮುಖ್ಯವಾಗುತ್ತದೆ.

ಮುಗಿಸುವ ಮುನ್ನ 2018ರಲ್ಲಿ ಉದ್ಯೋಗಕ್ಕಾಗಿ ಯುವಜನರು ಹೊರತಂದಿದ್ದ ಯುವ ಪ್ರಣಾಳಿಕೆಯಲ್ಲಿನ ಒಂದು ಮಾತನ್ನು ಹೇಳಬೇಕಿದೆ. ‘ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿದ ಸ್ಥಳೀಯ ಉದ್ಯೋಗಗಳನ್ನು’ ಹೆಚ್ಚೆಚ್ಚಾಗಿ ಸೃಷ್ಟಿಸುವ ಕಡೆಗೆ ಸರ್ಕಾರದ ನೀತಿಗಳು ಕಣ್ಣು ಹಾಯಿಸಿದರೆ ‘ಸ್ಥಳೀಯರಿಗೇ ಹೆಚ್ಚು ಉದ್ಯೋಗ’ಗಳು ಸಿಗುತ್ತವೆ ಮತ್ತು ಅದು ಸುಸ್ಥಿರ ಆರ್ಥಿಕತೆ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT