ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಲಿಗಳ ಸ್ಥಳಾಂತರಕ್ಕೆ ಹೆಚ್ಚಿದ ಒತ್ತಡ

ನಿಫಾ ರೋಗ: ಮುನ್ನೆಚ್ಚರಿಕೆ ಕ್ರಮ ವಹಿಸಲು ಆಗ್ರಹ
Last Updated 25 ಮೇ 2018, 8:07 IST
ಅಕ್ಷರ ಗಾತ್ರ

ಬೀರೂರು: ನಿಫಾ ರೋಗದ ವೈರಾಣು ಕೇರಳದಿಂದ ಬಯಲುಸೀಮೆಗೆ ಹರಡದಂತೆ ಸಂಬಂಧಪಟ್ಟವರು ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೀರೂರು ಪಟ್ಟಣದ ಪುರಸಭೆ ಹಿಂಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿವಾಸಗಳಿವೆ, ಪಕ್ಕದಲ್ಲಿಯೇ ಸಾರ್ವಜನಿಕ ಆಸ್ಪತ್ರೆಯೂ ಇದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ರೈನ್‍ಟ್ರೀ ಮತ್ತು ನಾಡ ಕಚೇರಿಗೆ ಹೊಂದಿಕೊಂಡಿರುವ ನೀಲಗಿರಿ ಮರದಲ್ಲಿ ಸಾವಿರಾರು ಬಾವಲಿಗಳು ವಾಸವಾಗಿವೆ. ನಿಫಾ ವೈರಾಣು ಬಾವಲಿಗಳ ಮೂಲಕವೇ ಹರಡುತ್ತಿರುವುದರಿಂದ ಭೀತಿಗೊಂಡಿರುವ ನಾಗರಿಕರು, ಬಾವಲಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಪುರಸಭೆ, ನಾಡಕಚೇರಿಗೆ ನಿತ್ಯ ನೂರಾರು ನಾಗರಿಕರು ಭೇಟಿ ನೀಡುತ್ತಾರೆ. ಪಕ್ಕದಲ್ಲಿಯೇ ಇರುವ ಶುದ್ಧ ಕುಡಿಯುವ ನೀರು ಘಟಕ ಹಾಗೂ ಆಸ್ಪತ್ರೆಯಲ್ಲಿ ಯಾವಾಗಲೂ ಜನಸಂದಣಿ ಇದ್ದು ಮೊದಲೇ ರೋಗಪೀಡಿತರಾದವರೂ ಇರುತ್ತಾರೆ. ಹಾಗಾಗಿ, ಮುನ್ನೆಚ್ಚರಿಕೆ ವಹಿಸಿ ರೋಗ ಹರಡದಂತೆ ಕ್ರಮ ವಹಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಾಸುದೇವಮೂರ್ತಿ, ‘ಈ ರೋಗವು ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ ಎನ್ನುವ ಮಾಹಿತಿ ಇದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾವಲಿ ಇದ್ದ ಮಾತ್ರಕ್ಕೆ ಜ್ವರ ಹರಡಬೇಕು ಎಂದೇನಿಲ್ಲ. ಮೊದಲೇ ಸೋಂಕಿತ ಬಾವಲಿಯೊಂದಿಗೆ ಆರೋಗ್ಯ ವಂತ ಜೀವಿ ಸಂಪರ್ಕ ಹೊಂದಿದರೆ, ಬಾವಲಿ ಕಚ್ಚಿದ ಹಣ್ಣು ಸೇವಿಸಿದರೆ ಮತ್ತು ಕುರಿ, ಹಂದಿ, ನಾಯಿ, ಬೆಕ್ಕು ಗಳಿಗೆ ಸೋಂಕು ತಗುಲಿದ್ದರೆ ಅದು ಮನುಷ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಯಾರಿಗಾದರೂ ಜ್ವರ, ತಲೆ ನೋವು, ತಲೆ ಸುತ್ತುವಿಕೆ, ಮಾನಸಿಕ ಅಸಮತೋಲನ, ಜ್ಞಾನ ತಪ್ಪು ವುದು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಬಳಸುವ ಹಣ್ಣುಗಳು ಶುದ್ಧೀಕರಿಸಬೇಕು, ಅನಾರೋಗ್ಯಕ್ಕೆ ತುತ್ತಾಗಬಹುದಾದ ಪ್ರಾಣಿಗಳೊಡನೆ ಸಂಪರ್ಕ ತಪ್ಪಿಸಿಕೊಳ್ಳುವುದು, ಸೋಂಕಿತ ಬಾವಲಿ ತೆರೆದ ಬಾವಿಗಳಿಗೆ ಬೀಳದಂತೆ ಜಾಲರಿ ಅಳವಡಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಗಮನ ಹರಿಸುವ ಮೂಲಕ ರೋಗಭೀತಿಯಿಂದ ಮುಕ್ತರಾಗಬಹುದು’ ಎಂದು ಹೇಳಿದರು..

ಒಟ್ಟಿನಲ್ಲಿ ಬಾವಲಿಗಳು ಹೆಚ್ಚು ಇರುವ ಕಾರಣಕ್ಕೇ ಸಾರ್ವಜನಿಕರಲ್ಲಿ ಭೀತಿ ಎದುರಾಗಿದ್ದು ಅರಣ್ಯ, ಆರೋಗ್ಯ ಇಲಾಖೆಗಳು, ಪುರಸಭೆ ಬಾವಲಿ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಎನ್ನುವುದು ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT