ಸೋಮವಾರ, ಆಗಸ್ಟ್ 15, 2022
23 °C

ಜಸ್ಟ್‌ ಬುಕ್ಸ್...

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಪುಸ್ತಕ ಪ್ರೇಮಿಗಳು ಇಲ್ಲಿಗೆ ತಿಂಗಳು, ವರ್ಷದ ಆಧಾರದಲ್ಲಿ ಚಂದಾದಾರರಾಗಲು ಅವಕಾಶ ನೀಡಲಾಗಿದೆ. ಚಂದಾ ಅವಧಿಯಲ್ಲಿ ಎಷ್ಟು ಪುಸ್ತಕಗಳನ್ನಾದರೂ ಪಡೆದು ಓದಬಹುದು. ಅದರ ಹೊರತಾಗಿ ದಿನದ ಬಾಡಿಗೆ ಆಧಾರದಲ್ಲೂ ಪುಸ್ತಕ ಪಡೆಯುವ ಆಯ್ಕೆ ಇದೆ...

ಪುಸ್ತಕ ಮನುಷ್ಯನ ಸದಾಕಾಲದ ಮಿತ್ರ. ಬೇಸರ ಕಳೆಯಲು, ಮನೋವಿಕಾಸಕ್ಕೆ ನೀರೆರೆಯಲು, ಜಗತ್ತನ್ನು ತಿಳಿಯಲು ಪುಸ್ತಕಗಳೇ ಆಧಾರ. ಪುಸ್ತಕ ಓದುವ ಹವ್ಯಾಸ ಇರುವವರು ಎಂತಹ ಏಕಾಂಗಿತನವನ್ನಾದರೂ ಜಯಿಸಬಲ್ಲರು. ಈ ಕಾರಣಕ್ಕೇ ಲಾಕ್‌ಡೌನ್ ಸಮಯದಲ್ಲಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿದೆ. ಮನರಂಜನೆಯ ಜೊತೆಗೆ ಕುಸಿದ ಮನಸ್ಸುಗಳಿಗೆ ಊರುಗೋಲಾಗುವ ಕೆಲಸವನ್ನೂ ಪುಸ್ತಕಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದೆ ‘ಜಸ್ಟ್ ಬುಕ್ಸ್’ ಗ್ರಂಥಾಲಯ.

ಪುಸ್ತಕ ಕೊಳ್ಳುವ, ಮನೆಯಲ್ಲಿ ಇಟ್ಟುಕೊಳ್ಳುವ ಸೌಕರ್ಯ ಇಲ್ಲದವರಿಗೆ ಹೇಳಿಮಾಡಿಸಿದಂತಿರುವ ವೇದಿಕೆ ‘ಜಸ್ಟ್ ಬುಕ್ಸ್’. ಈ ವೇದಿಕೆ ಮೂಲಕ ಪುಸ್ತಕಗಳನ್ನು ಎರವಲು ಕೊಡಲಾಗುತ್ತದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮೈಸೂರು, ಪುಣೆ, ಮುಂಬೈ ಮುಂತಾದ ಕಡೆಗಳಲ್ಲಿ ಎಂಬತ್ತಕ್ಕೂ ಅಧಿಕ ಕೇಂದ್ರಗಳನ್ನು ಜಸ್ಟ್ ಬುಕ್ಸ್ ಹೊಂದಿದೆ. ಈ ಕೇಂದ್ರಗಳಿಂದ ಪುಸ್ತಕಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಬಹುದು.

ಆದರೆ ಈಗ ಕೊರೊನಾ ಭಯದಿಂದ ಹೊರಗಡೆ ಓಡಾಡಲು ಜನರು ಅಂಜುತ್ತಿದ್ದಾರೆ. ಅಂಥವರಿಗೂ ಜಸ್ಟ್ ಬುಕ್ಸ್ ತನ್ನ ಸಹಾಯಹಸ್ತವನ್ನು ಚಾಚಿದೆ. ನಿಮಗೆ ಯಾವ ಪುಸ್ತಕ ಬೇಕು ಎಂದು ವೆಬ್‌ಸೈಟ್ (justbooks.in) ಮತ್ತು ಆ್ಯಪ್‌ಗಳಲ್ಲಿ (justbooks) ತಿಳಿಸಿದರೆ ಸಾಕು. ಜಸ್ಟ್ ಬುಕ್ಸ್ ಸಿಬ್ಬಂದಿ ನಿಮ್ಮ ಮನೆಬಾಗಿಲಿಗೇ ಬಂದು ಪುಸ್ತಕ ಕೊಟ್ಟು ಹೋಗುತ್ತಾರೆ, ಅದೂ ಉಚಿತವಾಗಿ! ಓದಿ ಮುಗಿದ ನಂತರ ಅದನ್ನು ವಾಪಸ್ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಮಾಡುತ್ತಾರೆ. ವಿಶೇಷ ಎಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಸೇರಿದ ಹದಿನೈದು ಲಕ್ಷಕ್ಕೂ ಅಧಿಕ ಪುಸ್ತಕಗಳ ಆಯ್ಕೆಗಳು ಇಲ್ಲಿವೆ.

ಪುಸ್ತಕ ಪ್ರೇಮಿಗಳು ಇಲ್ಲಿಗೆ ತಿಂಗಳು, ವರ್ಷದ ಆಧಾರದಲ್ಲಿ ಚಂದಾದಾರರಾಗಲು ಅವಕಾಶ ನೀಡಲಾಗಿದೆ. ಚಂದಾ ಅವಧಿಯಲ್ಲಿ ಎಷ್ಟು ಪುಸ್ತಕಗಳನ್ನಾದರೂ ಪಡೆದು ಓದಬಹುದು. ಅದರ ಹೊರತಾಗಿ ದಿನದ ಬಾಡಿಗೆ ಆಧಾರದಲ್ಲೂ ಪುಸ್ತಕ ಪಡೆಯುವ ಆಯ್ಕೆ ಇದೆ. ಈ ರೀತಿ ಪುಸ್ತಕ ತೆಗೆದುಕೊಂಡರೆ ದಿನಕ್ಕೆ ಇಂತಿಷ್ಟು ಎಂದು, ಎಷ್ಟು ದಿನ ಪುಸ್ತಕ ಇಟ್ಟುಕೊಳ್ಳುತ್ತಾರೆಯೋ ಅಷ್ಟು ದಿನಕ್ಕೆ ಬಾಡಿಗೆ ಕಟ್ಟಬೇಕು.

ಬೆಂಗಳೂರಿನಲ್ಲೇ ಆದರೆ ಎರಡು ದಿನಗಳ ಒಳಗಾಗಿ ಪುಸ್ತಕ ತಲುಪಿಸಲಾಗುತ್ತದೆ. ಕೆಲವೊಮ್ಮೆ ಏಳು ದಿನಗಳು ಬೇಕಾಗುತ್ತವೆ ಅಥವಾ ಪುಸ್ತಕ ಲಭ್ಯ ಇಲ್ಲದಿದ್ದರೆ ಹತ್ತು ದಿನಗಳ ಒಳಗಾಗಿ ತರಿಸಿ ತಲುಪಿಸುವ ಬದ್ಧತೆಯನ್ನು ಜಸ್ಟ್ ಬುಕ್ಸ್ ಹೊಂದಿದೆ. ಬೇಡಿಕೆ ಸಲ್ಲಿಸಿ ಮೂರು ತಾಸಿನ ಒಳಗಾಗಿ ತಲುಪಿಸುವ ವ್ಯವಸ್ಥೆಯೂ ಇದೆ. ಕೇಳಿದ ಪುಸ್ತಕ ಸ್ಥಳೀಯ ಕೇಂದ್ರದಲ್ಲಿ ಲಭ್ಯವಿಲ್ಲದೇ ಹೋದರೆ ಬೇರೆ ಕೇಂದ್ರಗಳಿಂದಲಾದರೂ ತರಿಸಿ ಕೊಡಲಾಗುತ್ತದೆ. ಹಾಗೊಮ್ಮೆ ತಮ್ಮ ಜಾಲದಲ್ಲಿ ಎಲ್ಲೂ ಆ ಪುಸ್ತಕ ಇಲ್ಲ ಎಂದಾದಲ್ಲಿ ಅದನ್ನು ಖರೀದಿಸಿ ಬಾಡಿಗೆಗೆ ನೀಡಲಾಗುತ್ತದೆ. 

ಓದುವ ಅಭಿರುಚಿಯನ್ನು ಬೆಳೆಸುವುದು ಮೂಲಭೂತ ಅಗತ್ಯಗಳಲ್ಲಿ ಒಂದು ಎಂದು ನಂಬಿರುವ ಕೋ ಕ್ರಿಯೇಟ್ ಕಂಪನಿಯ ಮಾಲೀಕ ಸುರೇಶ್ ನರಸಿಂಹ ಅವರು, ಬೆಂಗಳೂರು ಮೂಲದ ‘ಜಸ್ಟ್ ಬುಕ್ಸ್’ ಅನ್ನು ನಡೆಸುತ್ತಿದ್ದಾರೆ.

‘ಕನ್ನಡದಲ್ಲಿ ಎಸ್.ಎಲ್. ಭೈರಪ್ಪ, ಸಾಯಿಸುತೆ ಅವರನ್ನು ಹಾಗೂ ಇಂಗ್ಲಿಷ್‌ನಲ್ಲಿ ಹ್ಯಾರಿ ಪಾಟರ್ ಪುಸ್ತಕಗಳನ್ನು ಜನ ಹೆಚ್ಚಾಗಿ ಓದುವುದು ಇದುವರೆಗಿನ ಟ್ರೆಂಡ್’ ಎಂದು ಅವರು ಹೇಳುತ್ತಾರೆ.

‘ನಮ್ಮ ಗ್ರಂಥಾಲಯದ ಗ್ರಾಹಕರಿಗೆ ಎಷ್ಟೊಂದು ಬಗೆಯ ಪುಸ್ತಕಗಳು ಒಂದೇ ಕಡೆ ಸಿಗುತ್ತವೆ. ಎಷ್ಟೆಲ್ಲ ಆಯ್ಕೆಗಳಿವೆ. ತಮಗೆ ಬೇಕಾದ ಪುಸ್ತಕಗಳು ಸಿಗುತ್ತವೆ ಎಂದಾದಾಗ ಓದುವ ಶಿಸ್ತು ಬೆಳೆಯುತ್ತದೆ. ಅದೂ ಅಲ್ಲದೆ ಮನೆಗಳಲ್ಲಿ ಸಾವಿರಾರು ಪುಸ್ತಕಗಳನ್ನು ಇಟ್ಟುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಬೇಕು. ಹೊಸ ಪುಸ್ತಕಗಳಿಗೆ ಜಾಗ ಮಾಡಲು ಆಗುವುದಿಲ್ಲ. ಯಾರಿಗಾದರೂ ಕೊಟ್ಟರೆ ಅದು ವಾಪಸ್ ಬರುವುದಿಲ್ಲ, ಪದೇ ಪದೇ ಕೇಳಲು ಆಗುವುದಿಲ್ಲ. ಅದೇ ಬಾಡಿಗೆ ಪಡೆದು ಓದುವುದಾದರೆ ಇಷ್ಟೆಲ್ಲ ತಲೆಬಿಸಿಯೇ ಇಲ್ಲ. ಹೀಗಾಗಿ ಪುಸ್ತಕಗಳನ್ನು ಖರೀದಿಸುವುದು ಒಳಿತೇ ಅಥವಾ ಬಾಡಿಗೆ ಪಡೆದು ಓದುವುದು ಲಾಭದಾಯಕವೇ ಎಂಬ ಆರ್ಥಿಕ ಲೆಕ್ಕಾಚಾರದ ಕುರಿತು ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಗ್ರಂಥಾಲಯಕ್ಕೆ ಹೋಗುವುದು, ಅಲ್ಲಿಂದ ಪುಸ್ತಕ ತಂದು ಓದುವುದು ಒಂದು ಸಂಸ್ಕೃತಿ’ ಎಂದು ಸುರೇಶ್ ಅಭಿಪ್ರಾಯಪಡುತ್ತಾರೆ.

ಲಾಕ್‌ಡೌನ್ ಪರಿಣಾಮ
ಲಾಕ್‌ಡೌನ್ ಸಂದರ್ಭದಲ್ಲಿ ಪುಸ್ತಕಗಳನ್ನು ಓದುಗರಿಗೆ ತಲುಪಿಸುವುದು ಕಷ್ಟವಾಗಿದೆ. ಬೆಳಿಗ್ಗೆ ಹತ್ತು ಗಂಟೆ ಒಳಗೆ ಸಾಧ್ಯವಾದಷ್ಟು ಪುಸ್ತಕಗಳನ್ನು ತಲುಪಿಸುತ್ತಿದ್ದಾರೆ. ‘ದಿನಪತ್ರಿಕೆ, ಬೇರೆ ಎಲ್ಲ ಅಗತ್ಯ ಸೇವೆಗಳನ್ನು ಮನೆಗೆ ತಲುಪಿಸಲು ಅವಕಾಶ ನೀಡಿದಂತೆಯೇ ನಮಗೂ ಅವಕಾಶ ನೀಡಬೇಕಿತ್ತು. ಮಕ್ಕಳಿಗೆ ಎಷ್ಟು ಅಂತ ಟಿ.ವಿ., ಮೊಬೈಲ್ ನೋಡಿಸಲು ಸಾಧ್ಯವಾಗುತ್ತದೆ’ ಎಂದು ಸುರೇಶ್ ಕೇಳುತ್ತಾರೆ.

ಪುಸ್ತಕವನ್ನು ಪ್ರತಿಬಾರಿ ಗ್ರಾಹಕರಿಂದ ವಾಪಸ್ ತಂದಮೇಲೆ ಅದನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಒಂದು ದಿನ ಹೊರಗಡೆ ಇಟ್ಟು ಅದನ್ನು ಯಾರೂ ಮುಟ್ಟುವುದಿಲ್ಲ. ಪ್ರತಿಯೊಬ್ಬ ಸಿಬ್ಬಂದಿಯೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಪ್ರತಿಯೊಬ್ಬರನ್ನೂ ನಿತ್ಯ ಪರೀಕ್ಷೆ ಮಾಡಿಯೇ ಒಳಕ್ಕೆ ಬಿಟ್ಟುಕೊಳ್ಳಲಾಗುತ್ತದೆ. ಏಕೆಂದರೆ ಹೆಚ್ಚಿನ ಓದುಗರು ಹಿರಿಯ ನಾಗರಿಕರು ಮತ್ತು ಮಕ್ಕಳು ಎಂಬ ಕಾಳಜಿ ಜಸ್ಟ್ ಬುಕ್ಸ್‌ನದ್ದು.


-ಸುರೇಶ್ ನರಸಿಂಹ

ಬರಲಿದೆ ‘ಎಲ್ಲರಿಗಿಂತ ಮೊದಲು…’
ರಾಜ್ಯದಲ್ಲಿ ಬೆಂಗಳೂರು, ಮೈಸೂರು ಅಲ್ಲದೆ ಪ್ರಮುಖ ನಗರಗಳು ಹಾಗೂ ದೇಶದ ಇತರ ಪ್ರಮುಖ ಭಾಗಗಳಲ್ಲೂ ಜಸ್ಟ್ ಬುಕ್ಸ್, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಅದಕ್ಕಾಗಿ ‘ಬಿಫೋರ್ ಎನಿಒನ್ ಎಲ್ಸ್’ (ಎಲ್ಲರಿಗಿಂತ ಮೊದಲು) ಎಂಬ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುವ ಸಿದ್ಧತೆಯೂ ನಡೆದಿದೆ.

ಉದಾಹರಣೆಗೆ, ಹುಬ್ಬಳ್ಳಿ ನಗರದಲ್ಲಿ ಜಸ್ಟ್ ಬುಕ್ಸ್ ಕೇಂದ್ರ ಇಲ್ಲ, ಸದ್ಯಕ್ಕೆ ಅವರ ವೇದಿಕೆಯಿಂದ ಇಲ್ಲಿ ಪುಸ್ತಕ ಬಾಡಿಗೆ ಸೇವೆ ಇಲ್ಲ. ಆದರೆ ಹುಬ್ಬಳ್ಳಿಯಲ್ಲಿ ಯಾರ ಹತ್ತಿರವೋ ಸಾವಿರಾರು ಪುಸ್ತಕಗಳು ಇವೆ. ಅವರು ‘ಬಿಫೋರ್ ಎನಿಒನ್ ಎಲ್ಸ್’ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪುಸ್ತಕಗಳನ್ನು ಬಾಡಿಗೆಗೆ ಪಡೆಯುವ ಗ್ರಾಹಕರೂ ಈ ಆ್ಯಪ್‌ಗೆ ನೋಂದಣಿ ಮಾಡಿಕೊಳ್ಳುತ್ತಾರೆ. ಆ್ಯಪ್ ಮೂಲಕ ಪುಸ್ತಕವನ್ನು ಬಾಡಿಗೆ ಕೊಡಬಹುದು.

ಈ ರೀತಿ ಕೊಡುವ ಪುಸ್ತಕಗಳಿಗೆ ಬಾಡಿಗೆ ದರವನ್ನು ಮಾಲೀಕರೇ ನಿಗದಿ ಮಾಡುತ್ತಾರೆ. ಇವರಿಬ್ಬರ ನಡುವೆ ಕೊಂಡಿಯಂತೆ ಕೆಲಸ ಮಾಡುವ ಜಸ್ಟ್ ಬುಕ್ಸ್, ಪುಸ್ತಕಗಳನ್ನು ಓದುಗರಿಗೆ ತಲುಪಿಸುವುದು, ವಾಪಸ್ ತರುವುದು, ಅವರಿಂದ ಬಾಡಿಗೆ ಹಣವನ್ನು ಸಂಗ್ರಹಿಸಿ ಮಾಲೀಕರಿಗೆ ಸಂದಾಯ ಮಾಡುವ ಕೆಲಸವನ್ನು ಮಾಡುತ್ತದೆ. ಪುಸ್ತಕ ಹಾಳಾದರೆ ಅದಕ್ಕೆ ಪರಿಹಾರವನ್ನೂ ಕೊಡಿಸುತ್ತದೆ. ಯಾವ ಪುಸ್ತಕ ಯಾರ ಹತ್ತಿರ ಲಭ್ಯವಿದೆ ಎಂಬ ಮಾಹಿತಿಯನ್ನೂ ಆ್ಯಪ್‌ನಲ್ಲಿ ಹಂಚಿಕೊಳ್ಳುತ್ತದೆ. ಜುಲೈನಲ್ಲಿ ಈ ಯೋಜನೆ ಕಾರ್ಯಾರಂಭಿಸುವ ಸಾಧ್ಯತೆ ಇದೆ.

ಹೊಸ ಮಾಧ್ಯಮಗಳ ದಾಳಿಯಿಂದ ಪುಸ್ತಕ ಸಂಸ್ಕೃತಿ ನಾಶವಾಗುತ್ತಿದೆ ಎಂಬ ನಿರಾಸೆಯ ಹುಯಿಲಿನಲ್ಲಿ ಜಸ್ಟ್ ಬುಕ್ಸ್ ರೀತಿಯ ಸಂಸ್ಥೆಗಳು ಮಾಡುತ್ತಿರುವ ಕೆಲಸ ಓದುಪ್ರಿಯರಲ್ಲಿ ನಾಳೆಯ ಬಗ್ಗೆ ನಂಬಿಕೆಯನ್ನು ಹುಟ್ಟಿಸುವುದಂತೂ ಸತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು