ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೋ ಕನ್ನಡದ ‘ವಿಶ್ವ’ಕೋಶ!

Last Updated 31 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕನ್ನಡದಕೆಲಸ ಎನ್ನುವುದನ್ನು ‘ಇದೇ, ಇಷ್ಟೇ, ಹೀಗೇ’ ಎಂದು ಒಂದು ಕೆಲಸಕ್ಕೆ ನಿಗದಿಗೊಳಿಸಿ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಅಂತರ್ಜಾಲ ನಮ್ಮ ಬದುಕಿನ ಮೂಲೆ ಮೂಲೆಯನ್ನೂ ವ್ಯಾಪಿಸಿಕೊಂಡಿರುವಾಗ,ಕನ್ನಡದಕೆಲಸಗಳಿಗೂ ಎಲ್ಲೆ ಇಲ್ಲ. ಫೇಸ್‍ಬುಕ್‍ನಲ್ಲಿಕನ್ನಡದಒಂದು ಪೋಸ್ಟ್‌ಗೆ ಲೈಕ್ ಕೊಡುವ ಸಣ್ಣ ಪ್ರಯತ್ನದಿಂದ ಹಿಡಿದು, ಅಮೂಲ್ಯವಾದ ಕನ್ನಡ ಸಾಹಿತ್ಯವನ್ನು ಅಪ್‍ಲೋಡ್ ಮಾಡುವತನಕ ಎಲ್ಲವೂಕನ್ನಡದಕೆಲಸವೇ. ಅಂತಹದ್ದೊಂದು ಅಪರೂಪದ ಕೆಲಸದಲ್ಲಿ ತೊಡಗಿದ್ದಾರೆ ಹೊರನಾಡ ಕನ್ನಡಿಗ ವಿಶ್ವನಾಥ್ ಗಾಂವ್ಕರ್. ತಾವು ಡಿಜಿಟಲ್‌ ಕನ್ನಡ ಪುಸ್ತಕ ಓದಲೆಂದು, ಹವ್ಯಾಸಕ್ಕಾಗಿ ಪುಸ್ತಕಗಳ ಡಿಜಿಟಲೀಕರಣಕ್ಕೆ ತೊಡಗಿ ಇದೀಗ ಒಂಬತ್ತು ಸಾವಿರಕ್ಕೂ ಹೆಚ್ಚು ವಿರಳ ಕನ್ನಡ ಪುಸ್ತಕಗಳನ್ನು ಅಂತರ್ಜಾಲ ಕೋಶದಲ್ಲಿ ಸೇರಿಸಿ, ಸದ್ದಿಲ್ಲದೆಕನ್ನಡದಸೇವೆಯನ್ನು ಅವರು ಮಾಡುತ್ತಿದ್ದಾರೆ.

ಕರ್ನಾಟಕದ ಯಲ್ಲಾಪುರದಲ್ಲಿ ಹುಟ್ಟಿ, ಪಿಯುಸಿಯವರೆಗೆ ಅಲ್ಲೇ ವಿದ್ಯಾಭ್ಯಾಸ ಮಾಡಿದ ವಿಶ್ವನಾಥ್ ಬದುಕು ಕಂಡುಕೊಂಡಿದ್ದು ಮಾತ್ರ ಗೋವಾದಲ್ಲಿ. ಚಿಕ್ಕಂದಿನಲ್ಲಿ ಕಲಿತ ವೇದಪಾಠ ಗೋವಾದಲ್ಲಿ ಪೌರೋಹಿತ್ಯ ಮಾಡಲು ನೆರವಾಯಿತು. ಕನ್ನಡ ಸಾಹಿತ್ಯ ಹಾಗೂ ಪುಸ್ತಕ ಪ್ರೇಮಿಯಾಗಿದ್ದ ವಿಶ್ವನಾಥ್ ಅವರು ಐದು ವರ್ಷಗಳ ಹಿಂದೆ ಗೋವಾಕ್ಕೆ ಹೋದಾಗ, ಅಲ್ಲಿ ಕನ್ನಡ ಪುಸ್ತಕಗಳ ಕೊರತೆಯನ್ನು ಎದುರಿಸಿದರು. ಅವುಗಳಿಗಾಗಿ ಅಂತರ್ಜಾಲದಲ್ಲಿ ಜಾಲಾಡಿದರು. ಆಗ ಸಿಕ್ಕಿದ್ದು ಬೆರಳೆಣಿಕೆಯ ಪುಸ್ತಕಗಳು ಮಾತ್ರ. ಅವುಗಳನ್ನೇ ಎಷ್ಟು ಬಾರಿ ಓದುವುದು? ಆಗ ಅವರಿಗೆ ಅನ್ನಿಸಿದ್ದು: ‘ಅಂತರ್ಜಾಲದಲ್ಲಿ ಅನೇಕ ಸಂಸ್ಥೆಗಳು ಕನ್ನಡ ಪುಸ್ತಕಗಳನ್ನು ಸೇರಿಸಿರಬಹುದು, ಅವುಗಳನ್ನೆಲ್ಲಾ ಹುಡುಕಿ, ಒಂದೇ ಕಡೆ ಸಿಗುವಂತೆ ಮಾಡಬೇಕು, ಆಗ ಅದು ಎಲ್ಲರಿಗೂ ಉಪಯೋಗವಾಗುತ್ತದೆ’ ಎಂದು.

ಈ ಆಲೋಚನೆ ಬಂದಕೂಡಲೇ ವಿಶ್ವನಾಥ್ ಅವರು ಹಲವಾರು ವೆಬ್‍ಸೈಟ್‍ಗಳನ್ನು ಹುಡುಕಿ, ಕನ್ನಡ ಪುಸ್ತಕಗಳು ಎಲ್ಲೆಲ್ಲಿ ದೊರೆಯುವುವೋ ಅವುಗಳನ್ನು ಡೌನ್‍ಲೋಡ್ ಮಾಡಿಕೊಂಡು ಒಂದು ಡಿಜಿಟಲ್ ಗ್ರಂಥಾಲಯವನ್ನೇ ತಮ್ಮ ವೆಬ್‍ಸೈಟಿನಲ್ಲಿ ಆರಂಭಿಸಿಬಿಟ್ಟರು. ‘ಕೆಂಡಸಂಪಿಗೆ ಪುಸ್ತಕಗಳು’ ಎಂಬ ವೆಬ್‍ಸೈಟ್ ತೆರೆದು, ಅಲ್ಲಿರುವ ಪಟ್ಟಿಯಲ್ಲಿನ ಯಾವುದೇ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಸೌಲಭ್ಯವನ್ನೂ ಕಲ್ಪಿಸಿದರು.

‘ನಾನು ಇಲ್ಲಿ ಅಪ್‍ಲೋಡ್ ಮಾಡಿರುವ ಬಹುತೇಕ ಪುಸ್ತಕಗಳು ಇಂದು ಮಾರುಕಟ್ಟೆಯಲ್ಲಿ ದೊರಕದ ಔಟ್ ಆಫ್ ಪ್ರಿಂಟ್ ಆಗಿರುವ ಅಮೂಲ್ಯ ಕೃತಿಗಳು. ಕೆ.ವಿ. ಅಯ್ಯರ್ ಅವರ ‘ಶಾಂತಲಾ’, ಕುವೆಂಪು ಅವರ ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’, ‘ಅಗ್ನಿಹಂಸ', ದ.ರಾ.ಬೇಂದ್ರೆಯವರ ‘ಹಕ್ಕಿ ಹಾರುತಿದೆ' ಮೊದಲಾದ ಕೃತಿಗಳನ್ನು ಪ್ರತೀ ತಿಂಗಳು ಸರಾಸರಿ ಎರಡು ಸಾವಿರ ಜನ ಓದುತ್ತಾರೆ’ ಎಂದು ಅವರು ಹೇಳುತ್ತಾರೆ.

‘ನಾನು ಭಾರತ ಸರ್ಕಾರದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಸಂಸ್ಥೆಯು ಸ್ಕ್ಯಾನ್ ಮಾಡಿದ್ದ ಕನ್ನಡ ಪುಸ್ತಕಗಳನ್ನು ನನ್ನ ವೆಬ್‍ಸೈಟಿನಲ್ಲಿ ಬಳಸಿಕೊಂಡಿದ್ದೇನೆ. ಈಗ ಒಂಬತ್ತು ಸಾವಿರ ಪುಸ್ತಕಗಳು ಡಿಜಿಟಲ್ ರೂಪದಲ್ಲಿದ್ದು, ಕನ್ನಡ ಸಹೃದಯರು ಅದರ ಸಾರ್ಥಕ ಬಳಕೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ವಿಶ್ವನಾಥ್. ತಮ್ಮ ವೆಬ್‍ಸೈಟಿನ ಮಡಿಲಲ್ಲಿ ಇಟ್ಟುಕೊಂಡಿರುವ ಸಹಸ್ರಾರು ಕೃತಿಗಳನ್ನು ಸಾಹಿತ್ಯ ಪ್ರಕಾರಕ್ಕನುಗುಣವಾಗಿ ಪ್ರತ್ಯೇಕಿಸಬೇಕಾದ ಕೆಲಸ ನಡೆಯಬೇಕಿದ್ದು, ಅದಕ್ಕೆ ಹಲವರ ತಾಂತ್ರಿಕ ನೆರವನ್ನೂ ಬಯಸಿದ್ದಾರೆ.

ವಿಶ್ವನಾಥ್ ಅವರ ಪ್ರಕಾರ- ಇನ್ನು ಮುಂದೆ ಪುಸ್ತಕಗಳ ಸಂಗ್ರಹಣೆ ಮತ್ತು ಪುಸ್ತಕ ಓದುವ ಕೆಲಸ ನಡೆಯುವುದು ಡಿಜಿಟಲ್ ಮಾಧ್ಯಮದ ಮೂಲಕವೇ. ಡಿಜಿಟಲ್ ಪುಸ್ತಕಗಳಿಂದ ಹಲವಾರು ಅನುಕೂಲಗಳಿವೆ. ಮುದ್ರಿತ ಪುಸ್ತಕಗಳನ್ನು ಡಿಜಿಟಲ್‍ಆಗಿ ಶಾಶ್ವತವಾಗಿ ಸಂಗ್ರಹಿಸಿಡಬಹುದು. ಲಾಕ್‍ಡೌನ್ ಅವಧಿಯಲ್ಲಿ ನನ್ನ ‘ಕೆಂಡಸಂಪಿಗೆ’ ಪುಸ್ತಕಗಳನ್ನು ಹದಿನಾರು ಸಾವಿರ ಜನ ಬಳಸಿದ್ದಾರೆ. ಡಿಜಿಟಲ್ ಪುಸ್ತಕಗಳ ಗಾತ್ರವನ್ನು ‘ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಷನ್’ ಎಂಬ ತಂತ್ರಜ್ಞಾನದಿಂದ ತಗ್ಗಿಸಿದರೆ, ಇನ್ನೂ ಹೆಚ್ಚು ಜನ ಬಳಸಬಹುದು. ಆದರೆ, ನಮ್ಮ ವೆಬ್‍ಸೈಟಿನಲ್ಲಿರುವ ಕನ್ನಡ ಪುಸ್ತಕಗಳು ಹಳೆಯ ಪುಸ್ತಕಗಳಾಗಿರುವುದರಿಂದ ಅವುಗಳನ್ನು ಓಸಿಆರ್ ತಂತ್ರಜ್ಞಾನಕ್ಕೆ ಅಳವಡಿಸುವುದು ಕಷ್ಟ’ ಎಂದು ವಿವರಿಸುತ್ತಾರೆ

ಯಾರಾದರೂ ತಾಂತ್ರಿಕ ನಿಪುಣರು ಈ ಕಾರ್ಯದಲ್ಲಿ ಯಶಸ್ವಿಯಾದರೆ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಭಾರ ಕಡಿಮೆಯಾಗುತ್ತದೆ; ಸಂಗ್ರಹ ಹಗುರವಾಗುತ್ತದೆ. ಹೀಗೆ, ಕೇವಲ ಮುದ್ರಿತ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತರುವುದಷ್ಟೇ ಅಲ್ಲ, ಅದರಲ್ಲಿ ಒದಗಬಹುದಾದ ಹೊಸ ತಂತ್ರಜ್ಞಾನದ ಸಾಧ್ಯತೆ ಮತ್ತು ಅಳವಡಿಕೆಯ ಬಗೆಗೂ ವಿಶ್ವನಾಥ್ ಅವರು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ಆಸಕ್ತಿ-ಅಭಿರುಚಿ ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಸ್ವತಃ ಕವಿ ಹಾಗೂ ಲೇಖಕರಾಗಿದ್ದು, ‘ವಿಶ್ವನಾಥ್ ಕವನತನಯ’ ಕಾವ್ಯನಾಮದಿಂದ ತಮ್ಮ ಕವನ-ಕಥೆಗಳಿಗೆ ಡಿಜಿಟಲ್ ಸಾಹಿತ್ಯ ಲೋಕದಲ್ಲಿ ಹೆಸರಾಗಿದ್ದಾರೆ.

‘ಪುಸ್ತಕಗಳು ಕೇವಲ ಪದ ಸಮೂಹವಲ್ಲ, ಅವು ಜೀವನದ ಪಾಠ ಕಲಿಸಬಲ್ಲ ಗುರು’ ಎಂಬ ಭಾವನೆಯ ವಿಶ್ವನಾಥ್ ಕನ್ನಡ ಮಕ್ಕಳ ಪೋಷಕರಲ್ಲಿ ಹೀಗೆ ವಿನಂತಿಸಿದ್ದಾರೆ: ‘ದಯವಿಟ್ಟು ನಿಮ್ಮ ಮಕ್ಕಳು ಎಂಥದ್ದೇ ಸಂದರ್ಭದಲ್ಲೂ ಜೀವನವನ್ನು ಸಮರ್ಥವಾಗಿ ಜೀವಿಸುವಂತೆ ತಯಾರು ಮಾಡಲು ಅವರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ. ಮೊಬೈಲ್‍ಗೆ ಅಂಟಿಕೊಂಡ ಮಕ್ಕಳಿಗೆ ಮೊಬೈಲ್‍ನಲ್ಲೇ ಪುಸ್ತಕ ಹಾಕಿ ಕೊಡಿ. ಪುಸ್ತಕ ಓದುವ ಕಲೆ ರೂಢಿಸಿಕೊಂಡ ಮಕ್ಕಳು ಅಪ್ಪ-ಅಮ್ಮ ಯಾವತ್ತೂ ತಲೆ ತಗ್ಗಿಸುವಂತೆ ಮಾಡುವುದಿಲ್ಲ ಅನ್ನುವುದು ನನ್ನ ನಂಬಿಕೆ’

ಹೀಗೆ, ಕರ್ನಾಟಕದಿಂದ ಹೊರಗೆ, ಗೋವಾದಲ್ಲಿದ್ದರೂ ಕನ್ನಡ ಪುಸ್ತಕಗಳು, ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅನವರತ ಚಿಂತಿಸುವ ವಿಶ್ವನಾಥ್, ಸಾಮಾನ್ಯ ಕನ್ನಡಿಗನೊಬ್ಬ ತನ್ನ ನಾಡು-ನುಡಿಗಾಗಿ ಯಾರ ಸಹಾಯವೂ ಇಲ್ಲದೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆ. ಯಾರಿಂದಲೂ ನಯಾಪೈಸೆ ಪಡೆಯದೆ ಉಚಿತವಾಗಿಕನ್ನಡದಕೆಲಸ ಮಾಡುತ್ತಿರುವುದು ಅವರ ಹೆಚ್ಚುಗಾರಿಕೆ.

ಪುಸ್ತಕ ಲೋಕಕ್ಕೆ ಭೇಟಿ ನೀಡಲು: https://kendasampige.in/booksv

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT