ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟ ಚರಿತ್ರೆ: ಎರಡು ಕಾವ್ಯಗಳು ಹೇಳುವ ಕಥೆ

Last Updated 31 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮೈಸೂರರಸರ ಮೊದಲಿಗ, ನೋಡು

ಇಂತಹ ದೊರೆಗಳ ಸೇರಿದ ನಾಡು,

ಸಿಂಗರದಾ ಸಿರಿಗನ್ನಡನಾಡು,

ಮಂಗಳಮಯದಾ ನನ್ನೀನಾಡು,

ಕಂದದು, ಕುಂದದು, ಕೊರಗದು, ನೋಡು

-ಬಿಎಂಶ್ರೀ

ಸ್ವಾಮಿ ಸರ್ವೋತ್ತಮಳೇ ಸಕಲ ಜನಕಧಾರೆ

ಆವ ಪಾತಕವ ಮಾಡಿಹವೆಂದು ಪುಟ್ಟಿದೆವೊ|

ನಾವೀ ಮಹಾರಾಷ್ಟ್ರ ಸಂಸ್ಥಾನಗಳಲಿ

ಏವೇಳ್ವೆನೈ ಮಹಾರಾಷ್ಟ್ರ ಭಾಷೆಯ ಬಲುಮೆ||

ಠಾವಿಲ್ಲ ಕನ್ನಡಕೆ ಸಂಸ್ಥಾನಗಳಲಿ

(ತಮ್ಮಣ್ಣಪ್ಪ ಚಿಕ್ಕೋಡಿ, 1925)

ಜಯವಿರಲಿ ಸಂತತಂ ಭೂಪರತ್ನಾ|

ನಯನೀತಿಧರ್ಮದಿಂ ನಡೆ ಲೋಕಭರಣಾ

ಜನಿಸಿ ವಿಖ್ಯಾತ ಪಟ-ವರ್ಧನ ಕುಲಾಬ್ಧಿಯಲಿ||

(ತಮ್ಮಣ್ಣಪ್ಪ ಚಿಕ್ಕೋಡಿ, 1927)

ಮೂರು ಕವನಗಳ ತುಣುಕುಗಳು ಸಂಸ್ಥಾನಿ ರಾಜರನ್ನು ಕುರಿತು ಬರೆಯಲ್ಪಟ್ಟಿರುವಂಥವು. 20ನೇ ಶತಮಾನದ ಮೊದಲಾರ್ಧದಲ್ಲಿ ಇದ್ದ 500ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದ ಮೈಸೂರು ಮತ್ತು ಉತ್ತರ ಭಾಗದ ಜಮಖಂಡಿ ಸಹ ಸೇರಿದ್ದವು. ಆ ಸಂಸ್ಥಾನಗಳನ್ನು ಕುರಿತು ಇರುವ ಈ ಕವನಗಳು ಬಹುತೇಕ ಸಮಕಾಲೀನವಾದುವು. ಅಂದರೆ ಈ ಮೂರು ಕವನಗಳ ಕಾಲ 1920ರ ದಶಕ. ಕರ್ನಾಟಕ ಏಕೀಕರಣ ಚಳವಳಿಯು ಗರಿಗೆದರುತ್ತಿದ್ದ ಸಮಯ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಜಾಗೃತಿಯನ್ನು ಉಂಟುಮಾಡಿ, ನವೋದಯದ ಕನಸನ್ನು ಕಾಣುತ್ತಿದ್ದ ಕಾಲ. ಮೊದಲನೆಯ ಕವನ ಮೈಸೂರು ಸಂಸ್ಥಾನದ ರಾಜರ ಬಗ್ಗೆ ಇದ್ದರೆ, ಉಳಿದೆರಡು ಕವನಗಳು ಜಮಖಂಡಿ ಸಂಸ್ಥಾನವನ್ನು ಆಳುತ್ತಿದ್ದ ಮರಾಠಿ ರಾಜರ ಕುರಿತಾಗಿವೆ. ಮೊದಲ ಕವನದಲ್ಲಿ ಬಿ.ಎಂ.ಶ್ರೀಕಂಠಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕದ ರಜತ ಮಹೋತ್ಸವದ ಸಂದರ್ಭದಲ್ಲಿ ದೀರ್ಘವಾದ ಕವನವನ್ನು (ಪ್ರಗಾಥವೆಂದು ಅವರು ಕರೆದಿದ್ದಾರೆ) ಬರೆದು ಹಾಡಿಹೊಗಳಿದ್ದಾರೆ. ಬಿಎಂಶ್ರೀಯವರ ಸಮಕಾಲೀನರಾದ ತಮ್ಮಣ್ಣಪ್ಪ ಚಿಕ್ಕೋಡಿ ತಮ್ಮ ಎರಡು ಕವನಗಳಲ್ಲಿ ಮೊದಲನೆಯದರಲ್ಲಿ ಮರಾಠಿ ಮೂಲದ ರಾಜರ ಆಳ್ವಿಕೆಯನ್ನು ಹಳಿದಿದ್ದಾರೆ. ಎರಡನೆಯದರಲ್ಲಿ ಹೊಗಳಿದ್ದಾರೆ.

ರಾಜಾಧಿಪತ್ಯದ ದೀರ್ಘ ಪರಂಪರೆಯುಳ್ಳ ಕರ್ನಾಟಕದಲ್ಲಿ, ರಾಜನನ್ನು ಪ್ರತ್ಯಕ್ಷ ದೇವತಾ ಮನುಷ್ಯನೆಂದು ಭಾವಿಸುವ ಈ ನಾಡಿನಲ್ಲಿ ಈ ಬಗೆಯ ಭಿನ್ನ, ಭಿನ್ನ ದನಿಗಳುಳ್ಳ ಕವನಗಳು ನಮಗೆ ಸೋಜಿಗವನ್ನುಂಟು ಮಾಡುತ್ತವೆ. ಸಂಸ್ಥಾನ, ಕನ್ನಡ ಮತ್ತು ಕಾವ್ಯದ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕಿ, ಯೋಚಿಸುವಂತೆ ಮಾಡುತ್ತವೆ. ಮೇಲಿನ ಮೂರೂ ಕವನಗಳನ್ನು ಒಂದು ವಿಷಯ ಬಂಧಿಸುತ್ತದೆ. ಅದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ವ್ಯಕ್ತವಾಗಿರುವ ಭಾವನೆ. ಕನ್ನಡ ಮತ್ತು ಕರ್ನಾಟಕವನ್ನು ಕೇಂದ್ರವನ್ನಾಗಿಸಿಕೊಂಡು ರಾಜರ ಆಳ್ವಿಕೆಯನ್ನು ಪರಾಮರ್ಶಿಸುವ ಕವನಗಳನ್ನಾಗಿ ನಾವು ಇವನ್ನು ನೋಡಬಹುದು. ಬಿಎಂಶ್ರೀಯವರಿಗೆ ಮೈಸೂರು ಒಂದು ಪ್ರತ್ಯೇಕ ರಾಜ್ಯವಾಗಿ ಕಂಡರೆ, ತಮ್ಮಣ್ಣಪ್ಪನವರಿಗೆ ಇನ್ನೂ ‘ಕರ್ಣಾಟ’ವು ರೂಪುಗೊಳ್ಳುವ ಹಂತದಲ್ಲಿದ್ದಂತಿತ್ತು.

ಬಿಎಂಶ್ರೀಯವರು ಮೈಸೂರು ಸೀಮೆಗೆ ಸೇರಿದ ಪ್ರಸಿದ್ಧ ಕವಿ, ವಿದ್ವಾಂಸ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಆಧುನಿಕತೆಯ ಸ್ಪರ್ಶವನ್ನು ನೀಡಿದ ‘ಕನ್ನಡದ ಕಣ್ವ’ ಎಂದೇ ಹೆಸರಾದವರು. ಸರ್ಕಾರಿ ಸೇವೆಯಲ್ಲಿದ್ದ ಅವರು ನಾಲ್ವಡಿ ಕೃಷ್ಣರಾಜರ ಪಟ್ಟಾಭಿಷೇಕದ ರಜತ ಮಹೋತ್ಸವಕ್ಕೆ ಬರೆದಂತಹ ಪ್ರಗಾಥದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿಗೆ ನಾಲ್ವಡಿಯವರು ನೀಡಿದ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. ನಾಲ್ವಡಿಯವರನ್ನು ಶಾಂತಿದೂತ, ಸಾತ್ವಿಕತೆಯುಳ್ಳ ಸೌಮ್ಯಮೂರ್ತಿ ಎಂದೆಲ್ಲ ಹೊಗಳಿದ್ದಾರೆ. ಕನ್ನಡ ನಾಡಿನ ಮನ್ನಣೆಯನ್ನು ಪಡೆದು ಆಳುತ್ತಿರುವ ನಾಲ್ವಡಿಯವರು ‘ಕನ್ನಡಿಗರ ವಯಿರಮುಡಿಯ ರಾಯಕೃಷ್ಣ’ ಎನ್ನುವ ಬಿಎಂಶ್ರೀ ಅವರು, ಮೈಸೂರು ರಾಜ್ಯದ ಜ್ಞಾನ, ಸಿರಿ, ಕೃಷಿಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವುದಕ್ಕೆ ನಾಲ್ವಡಿಯವರೇ ಕಾರಣರು ಎಂದೂ ಹೊಗಳಿದ್ದಾರೆ.

ರಾಜಾಶ್ರಯದ ಮೂಲಕ ಕನ್ನಡ ಮತ್ತು ಮೈಸೂರು ರಾಜ್ಯಕ್ಕೆ ಗಟ್ಟಿಯಾದ ನೆಲೆ ಸ್ಥಾಪಿಸಿದ್ದನ್ನು ಕವನದಲ್ಲಿ ಶ್ಲಾಘಿಸಲಾಗಿದೆ. ಸಂಸ್ಥಾನದ ಕೆರೆ-ಕಟ್ಟೆ, ನದಿ-ಸರೋವರ, ಬೆಟ್ಟ-ಗುಡ್ಡ, ಸಾಹಿತ್ಯ, ಕಲೆಗಳ ಸೊಬಗನ್ನು ಹೊಗಳಲು ಬಿಎಂಶ್ರೀ ಮರೆಯುವುದಿಲ್ಲ. ತಮ್ಮ ಮತ್ತೊಂದು ಕವನದಲ್ಲಿ (ಮೈಸೂರು ಮಕ್ಕಳು) ಕೂಡ ‘ನಾಲುಮಡಿ ಕೃಷ್ಣನ ಮೈಸೂರು’ ಎಂದೂ ‘ಚಿನ್ನದ, ಗಂಧದ ಮತ್ತು ವೀಣೆಯ ನಾಡು ಮೈಸೂರು’ ಎಂದೂ ಹಾಡಿ ಹೊಗಳಿದ್ದಾರೆ. ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಅರಸರ ಬಗ್ಗೆ ಬಿಎಂಶ್ರೀಯವರ ತರಹ ಅನೇಕರು ಭಕ್ತಿಪೂರ್ವಕವಾಗಿ ತಮ್ಮ ಗೌರವವನ್ನು ಸೂಚಿಸಿರುವ ಕವನಗಳು ಅನೇಕ. ತೀ.ನಂ.ಶ್ರೀಕಂಠಯ್ಯನವರ ‘ಸ್ವಾಗತ (ಮೈಸೂರಿಗೆ)’ ಎಂಬ ಕವನ ಮತ್ತು ಬೆನಗಲ್ ರಾಮರಾವ್‍ರವರ ‘ಕನ್ನಡಾಂಬೆಯ ಹಿರಿಮೆ’ ಇದಕ್ಕೆ ಉದಾಹರಣೆಗಳು.

ಕನ್ನಡಿಗರೇ ಇದ್ದಂತಹ ಸಂಸ್ಥಾನದಲ್ಲಿ, ಕನ್ನಡದ ರಾಜನೇ ಆಳುತ್ತಿದ್ದ ಸಂದರ್ಭ, ಕನ್ನಡದ ಅನೇಕ ಸಾಹಿತಿಗಳಿಗೆ (ವಿಶೇಷವಾಗಿ ಮೈಸೂರಿನ ಸಂಸ್ಥಾನದವರಿಗೆ) ಹೆಮ್ಮೆಯ ವಿಷಯವಾಗಿತ್ತು. ಮಾದರಿ ರಾಜ್ಯವೆನಿಸಿಕೊಂಡಿದ್ದ ಮೈಸೂರು ಸಂಸ್ಥಾನ ಕನ್ನಡಿಗರ ಪ್ರಗತಿಪರತೆಯ ದ್ಯೋತಕವೆಂದು ಅನೇಕರು ಭಾವಿಸುತ್ತಿದ್ದರು. ಆದರೂ ಕರ್ನಾಟಕ ಏಕೀಕರಣ ಚಳವಳಿಯ ಸಮಗ್ರ ಕರ್ನಾಟಕದ ನಕ್ಷೆಯಲ್ಲಿ ಮೈಸೂರು ಕಾಣಿಸಿಕೊಂಡಿರಲಿಲ್ಲ. ಉತ್ತರ ಕರ್ನಾಟಕದ ರಾಷ್ಟ್ರೀಯ ನಾಯಕರ ಮುಂದಾಳತ್ವದಲ್ಲಿ ಭರದಿಂದ ಸಾಗುತ್ತಿದ್ದ ಏಕೀಕರಣ ಚಳವಳಿಯಲ್ಲಿ ಮೈಸೂರು ಪಾಲ್ಗೊಳ್ಳಲು ಹಿಂಜರಿಯುತ್ತಿತ್ತು. ಕರ್ನಾಟಕದ ಸಮಸ್ತ ಸಾಂಸ್ಕೃತಿಕ ಐಕ್ಯತೆಗಾಗಿ ಕನ್ನಡಿಗರಲ್ಲಿದ್ದ ಸಹಮತ, ರಾಜಕೀಯ ಐಕ್ಯತೆಗಾಗಿ ಇರಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿತ್ತು. ಇಂತಹ ಸಂದರ್ಭದಲ್ಲಿ ಬಿಎಂಶ್ರೀ ಅವರು ಬರೆದ ‘ಮೈಸೂರರಸರ ಮೊದಲಿಗ...’ ಕವನವು ಮೈಸೂರು ಸಂಸ್ಥಾನವನ್ನು ಪ್ರತ್ಯೇಕತೆಯ ಮಾನದಂಡದಲ್ಲಿ ಅಳೆಯುತ್ತದೆ. ಕನ್ನಡವನ್ನಾಡುವ ಇತರ ಪ್ರದೇಶಗಳು ಹಾಗೂ ಸಂಸ್ಥಾನಗಳಿಗೆ ಇದು ಮಾದರಿಯೆಂದು ಭಾವಿಸುವ ಹಾಗೆ ಗೋಚರಿಸುತ್ತದೆ.

ತಮ್ಮಣ್ಣಪ್ಪನವರು ಜಮಖಂಡಿಯ ಸಂಸ್ಥಾನದಲ್ಲಿದ್ದ ಒಬ್ಬ ಪ್ರಮುಖ, ಪ್ರಭಾವಶಾಲಿ ವ್ಯಕ್ತಿ. 1910 ಹಾಗೂ 20ರ ದಶಕಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧಿಕೃತವಾಗಿ ಜಮಖಂಡಿಯನ್ನು ಪ್ರತಿನಿಧಿಸುತ್ತಿದ್ದ ತಮ್ಮಣ್ಣಪ್ಪ ನಾಟಕಕಾರರೂ ಹೌದು. ಜಮಖಂಡಿಯ ಸಾಂಸ್ಕೃತಿಕ ಹಾಗೂ ರಾಜಕೀಯ ಆಗು-ಹೋಗುಗಳಲ್ಲಿ ಅವರ ಛಾಪನ್ನು ನೋಡಬಹುದು. ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಮಾವನವರಾಗಿದ್ದ ಇವರು ಹಳಕಟ್ಟಿಯವರ ವಚನಶಾಸ್ತ್ರಸಾರ (1923) ಪ್ರಕಟಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮೇಲ್ಕಂಡ ಮೊದಲ ಕವನವನ್ನು ತಮ್ಮಣ್ಣಪ್ಪ 1925ರಲ್ಲಿ ವಿಜಯಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚನ ಮಾಡಿದರು. ಇದು ಕನ್ನಡ ಸಾಹಿತ್ಯ ಪರಿಷತ್ತಿನ ‘ಪರಿಷತ್ಪತ್ರಿಕೆ’ಯಲ್ಲಿ ಪ್ರಕಟವಾಯಿತು. ಎರಡನೇ ಕವನ ಶಂಕರರಾವ್‌ ಪಟವರ್ಧನ ಜಮಖಂಡಿಯ ಆಳ್ವಿಕೆಯನ್ನು 1926ರಲ್ಲಿ ವಹಿಸಿಕೊಂಡಾಗ ಬರೆಯಲ್ಪಟ್ಟ ಕವನ.

ಮೊದಲನೇ ಕವನದಲ್ಲಿ ತಮ್ಮಣ್ಣಪ್ಪನವರು ಮರಾಠಿ ರಾಜರ ಆಳ್ವಿಕೆಯಲ್ಲಿ ಕನ್ನಡಿಗರಿಗೆ ಸಿಗಬೇಕಾದ ಮಾನ್ಯತೆ, ಗೌರವಗಳು ಸಿಗದೇ ಇರುವುದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ರಾಜ್ಯದಲ್ಲಿ ಹುಟ್ಟಿದ ಕನ್ನಡಿಗರು ಯಾವ ಅಪರಾಧವನ್ನು ಮಾಡಿದರು ಎಂದು ಖೇದದಿಂದ ಕೇಳುತ್ತಾರೆ. ಇವರ ಆಳ್ವಿಕೆಯಲ್ಲಿ ಕನ್ನಡಿಗರ ಮೇಲ್ಮೈ ಮತ್ತು ಗೌರವಗಳು ಅಳಿಸಿಹೋಗಿವೆ ಎಂದು ಗೋಗರೆಯುತ್ತಾರೆ. ‘ಕರ್ಣಾಟ’ ಸಂಸ್ಕೃತಿಗೆ ಬೆಲೆ ಇಲ್ಲದಂತಾಗಿದೆ ಎಂದು ಹಳಹಳಿಸುತ್ತಾರೆ.

ಈ ಕವನವನ್ನು ಬರೆದಾಗ ಜಮಖಂಡಿಯನ್ನು ಆಳುತ್ತಿದ್ದ ರಾಜ ಪರಶುರಾಮ ಬಾವು ಪಟವರ್ಧನ. ಜಮಖಂಡಿಯ ಆಡಳಿತ ಮತ್ತು ದರ್ಬಾರಿ ಭಾಷೆ ಮರಾಠಿಮಯವಾಗಿದ್ದ ಕಾಲದಲ್ಲಿ ಮತ್ತು ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಕನ್ನಡಿಗರಿಗೆ ಸಿಗಬೇಕಾದ ಮಾನ್ಯತೆ ಸಿಗದೇ ಹೋದಾಗ ಬೇಸರಗೊಂಡು ಬರೆಯಲ್ಪಟ್ಟಂತಹ ಕವನ ಇದು. ಕನ್ನಡವನ್ನಾಡುವ ಇತರ ಪ್ರದೇಶಗಳಿಂದ ದೂರವಾಗಿರುವ ಜಮಖಂಡಿ ಸಂಸ್ಥಾನವನ್ನು ಅವುಗಳೊಂದಿಗೆ ಬೆಸೆಯುವ ಪ್ರಯತ್ನವನ್ನು ಮತ್ತು ಜಮಖಂಡಿ ಶುದ್ಧ ಕನ್ನಡದ ಬೀಡು ಎಂದು ಸಾರಿ ಹೇಳುವ ಪ್ರಯತ್ನವನ್ನು ಈ ಕವನದಲ್ಲಿ ನೋಡಬಹುದು. ಇಂತಹುದೇ ಮತ್ತಷ್ಟು ಕವನಗಳನ್ನು ನಾವು ಅಂದಿನ ದಿನಗಳಲ್ಲಿ ಕಾಣಬಹುದು. ಜಿ.ಕೆ. ಪ್ರಾಣೇಶಾಚಾರ್ ಎಂಬುವವರ ಒಂದು ಕವನ ಹೈದರಾಬಾದಿನ ಸಂಸ್ಥಾನವನ್ನು ಕುರಿತು ಇದೆ. ಇದರಲ್ಲಿ ಕನ್ನಡಿಗರ ಬವಣೆಯನ್ನು ವ್ಯಕ್ತಪಡಿಸುತ್ತಾ ,

‘ಇಕ್ಕೆಲದ ಸೆಳೆತಕ್ಕೆ ಸೀಳಾಗಿ ಪಾಡು,

ವಿಂಗಡಿಸಿ ಹೇಗಾಗಿ ಹೋಗಿಹುದು ನೋಡು’ ಎಂದು ಉದ್ಗಾರವೆತ್ತುತ್ತಾರೆ.

ತಮ್ಮಣ್ಣಪ್ಪನವರ ಎರಡನೇ ಕವನದಲ್ಲಿ ಜಮಖಂಡಿಯ ಮುಂದಿನ ರಾಜರಾದ ಶಂಕರರಾವ್‌ ಪಟವರ್ಧನರನ್ನು ಹೊಗಳಿರುವ ಸಾಲುಗಳಿವೆ. ಪಟ್ಟಕ್ಕೆ ಏರಿದ ಸಂದರ್ಭದಲ್ಲಿ ಕವನದ ಮೂಲಕ ಈ ರೀತಿ ಹಾರೈಸಲಾಗಿದೆ. ಪ್ರಾಯಶಃ ಈ ಹಾರೈಕೆಗೆ ಮೂಲ ಕಾರಣ ತಮ್ಮಣ್ಣಪ್ಪನವರಿಗೂ ಹಾಗೂ ಶಂಕರರಾವ್‌ ಅವರಿಗೂ ಇದ್ದ ಒಳ್ಳೆಯ ಸಂಬಂಧವಿರಬಹುದು. ಇದರ ಬಗ್ಗೆ ಬರೆದಿರುವ ಉಮಾ ಕೊಟ್ಟಪ್ಪ ಎಂಬ ಸಂಶೋಧಕರು ಜಮಖಂಡಿಯ ಸಂಸ್ಥಾನಿಕರು ಕನ್ನಡ ಶಾಲೆಗಳನ್ನು ತೆರೆದಿದ್ದರಿಂದ ಮತ್ತು ಕನ್ನಡಿಗರಿಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರಿಂದ ಬನಹಟ್ಟಿ ನಗರಸಭೆಯವರು ಅವರಿಗೆ ‘ಮಾನಪತ್ರ’ವನ್ನು ಕೊಡುವ ಸಂದರ್ಭದಲ್ಲಿ ತಮ್ಮಣ್ಣಪ್ಪನವರು ಅವರನ್ನು ಕುರಿತು ಬರೆದ ಕವನವಿದು ಎಂದು ನಮೂದಿಸಿದ್ದಾರೆ.

‘ಭಾರತೀಯ ಭಾರತ’ ಎಂದೆನಿಸಿಕೊಂಡಿದ್ದ ನೂರಾರು ಸಂಸ್ಥಾನಗಳು ವೈದೃಶ್ಯವುಳ್ಳ ಅನೇಕ ಕವನ, ಕಾದಂಬರಿ ಹಾಗೂ ಕಥೆಗಳಿಗೆ ಸಾಕ್ಷಿಯಾಗಿವೆ. ಭಾರತ ಎಷ್ಟು ವೈವಿಧ್ಯದಿಂದ ಕೂಡಿದೆಯೋ ಅಷ್ಟೇ ಪ್ರಮಾಣದ ವೈವಿಧ್ಯವನ್ನು ಈ ಸಾಹಿತ್ಯದ ಪ್ರಕಾರ, ವಸ್ತು-ವಿಷಯ ಹಾಗೂ ಅಭಿವ್ಯಕ್ತಿಗಳಲ್ಲಿ ಕಾಣಬಹುದು. ಇವು ಸಂಸ್ಥಾನದ ಸಾಹಿತ್ಯ, ಅದರ ಆಗು-ಹೋಗುಗಳು ಮತ್ತು ಸಮಾಜೋ-ಸಾಂಸ್ಕೃತಿಕ-ರಾಜಕೀಯದ ಇತಿಹಾಸವನ್ನು ಹಿಡಿದಿಟ್ಟಿವೆ. ಪ್ರತಿಯೊಂದು ಸಂಸ್ಥಾನದ ಸಾಹಿತ್ಯ ಭಂಡಾರವು ಈ ವಿಭಿನ್ನ ಹಿನ್ನೆಲೆಯ ಐತಿಹಾಸಿಕ ಅಂಶಗಳಿಂದ ಕೂಡಿದ್ದು ಪ್ರದೇಶ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಭಿನ್ನ, ಭಿನ್ನವಾಗಿ ಗ್ರಹಿಸಿವೆ. ಭಾರತ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದಲ್ಲಿ ಲೀನವಾದ ಈ ಸಂಸ್ಥಾನಗಳು ಈಗ ಗತಕಾಲದ ಪಳೆಯುಳಿಕೆಗಳಾಗಿವೆ. ಇವುಗಳನ್ನು ನಾವು ಈಗಲೂ ‘ಗತವೈಭವ’ದ ಪರಿಧಿಯಲ್ಲಿ ನೋಡಲು ಇಚ್ಛಿಸುತ್ತೇವೆ. ಆದರೆ ಈ ಸಂಸ್ಥಾನಗಳು ಹಿಡಿದಿಟ್ಟಿರುವ ಇತಿಹಾಸ ಮಾತ್ರ ನಮ್ಮ ‘ಗತವೈಭವ’ದ ಪರಿಧಿಯನ್ನು ಅಣಕಿಸುವ ಹಾಗೆ ಗೋಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT