ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಉಳಿಸುವ ಬಗೆ

Last Updated 11 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕರ್ನಾಟಕವು ಇಲ್ಲಿನ ಜನಕ್ಕೆ ನೆಲ, ನೀರು, ನೆರಳು ಮತ್ತು ಬದುಕು ಕಟ್ಟಿಕೊಳ್ಳಲು ಎಲ್ಲಾ ಅವಕಾಶಗಳನ್ನು ನೀಡುತ್ತಲೇ ಇದೆ. ಆದರೆ, ಕಳೆದ ಎರಡು–ಮೂರು ದಶಕಗಳಲ್ಲಿ ರಾಜ್ಯದೆಲ್ಲಡೆ ಶಿಕ್ಷಣ ಸಂಸ್ಥೆಗಳು ಹಾಗೂ ವ್ಯವಹಾರ ಕೇಂದ್ರಗಳಲ್ಲಿ ಕನ್ನಡ ಭಾಷೆ ಬಗ್ಗೆ ಒಂದು ರೀತಿಯ ಅಸಡ್ಡೆಯಂತೂ ವ್ಯಾಪಕವಾಗಿ ಹರಡಿದೆ. ಇದು ಎಲ್ಲರ ಗಮನಕ್ಕೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುಭವಕ್ಕೆ ಬಂದೇ ಇರುತ್ತದೆ. ಅಲ್ಲಲ್ಲಿ ಸಣ್ಣ ಹಾಗೂ ದೊಡ್ಡ ಪ್ರತಿರೋಧಗಳು ಕನ್ನಡಿಗರಿಂದ ಬರುವುದುಂಟು ಮತ್ತು ಬರಲೇ ಬೇಕು ಕೂಡ.

ಇಂದು ಜಾಗತೀಕರಣದ ವ್ಯೂಹದಲ್ಲಿರುವ ನಾವು ಇಂಗ್ಲಿಷ್‌ ಭಾಷೆಯನ್ನು ನೆಚ್ಚಿಕೊಂಡಿರುವುದು ಉದ್ಯೋಗಕ್ಕೆ ಮಾತ್ರ. ಅದು ಭ್ರಮೆಯಂತೆ ನಮ್ಮನ್ನು ಆವರಿಸಿಕೊಂಡಿರುವುದು ನಿಜಕ್ಕೂ ದುರಂತ. ಆದುದರಿಂದ ಇಂದಿನ ಮಕ್ಕಳ ಕಲಿಕೆಯಲ್ಲಿ ಕನ್ನಡ ಕಸ್ತೂರಿಯ ಸುವಾಸನೆ ಕಡಿಮೆಯಾಗುತ್ತಿದೆ. ಭಾಷೆಯೇ ಸೊರಗುತ್ತಿರುವಾಗ ಅದರಿಂದ ಸೃಷ್ಟಿಯಾಗುವ ನಾನಾ ರೀತಿಯ ಸಾಹಿತ್ಯ ಪ್ರಕಾರಗಳೂ ಮತ್ತು ಸಾಹಿತ್ಯ ಸಂಸ್ಥೆಗಳು ಜನರಿಂದ ದೂರವಾಗುತ್ತಿವೆ. ಈ ಹಂತದಲ್ಲಿ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಬಳಸಿ ಉಳಿಸಬೇಕಲ್ಲವೆ?

ಭಾಷೆಯ ಅಳಿವು ಎಂಬ ಈ ಕಾರ್ಮೋಡದ ಅಡಿಯಲ್ಲಿ ನಾವು ನಿರಾಶರಾಗಬೇಕಿಲ್ಲ. ಕನ್ನಡಿಗರು ಕನ್ನಡವನ್ನು ನಿತ್ಯ ಬಳಸುವುದು, ಕನ್ನಡೇತರರಿಗೆ ಕನ್ನಡವನ್ನು ಸಣ್ಣಮಟ್ಟದಲ್ಲಾದರೂ ಕಲಿಸುವುದು ಅಗತ್ಯ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿರುವ ನಾವು ಭಾಷೆಯನ್ನು ಉಳಿಸಿ ಬೆಳೆಸುವುದಕ್ಕೆ ಸಂಬಂಧಪಟ್ಟ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳಲು ಮುಂದಾಗಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯುವಜನರು ಕಳೆದುಹೋಗಿದ್ದಾರೆ ಎಂಬ ಆರೋಪ ಸಾಮಾನ್ಯ. ಈ ತಾಣದ ಪ್ರಭಾವ ಮಾತ್ರ ಅತಿತೀಕ್ಷ್ಣ ಹಾಗೂ ನೇರ. ಸ್ಮಾರ್ಟ್‌ಫೋನ್‍ಗಳನ್ನು ಬಳಸುತ್ತಿರುವ ಬಹುತೇಕ ಇಂಗ್ಲಿಷ್‌ ಬಾರದ ಕನ್ನಡಿಗರು ಕನ್ನಡದಲ್ಲೇ ಮಾಹಿತಿ ಸಂಗ್ರಹಿಸಿ ವರ್ಗಾವಣೆ ಮಾಡುತ್ತಿದ್ದಾರೆ. ಈ ಸೌಲಭ್ಯ ಅಗ್ಗವಾಗಿದ್ದು, ಬಹುಬೇಗ ಜನರನ್ನು ತಲುಪುವ ಮಾರ್ಗವಾಗಿದೆ. ಸಾಮಾಜಿಕ ಜಾಲತಾಣಗಳು ಜನರನ್ನು ಒಟ್ಟಾಗಿ ತರುವ ಹಾಗೂ ದೂರ ತಳ್ಳಬಲ್ಲ ಸುಲಭವಾದ ಮಾಧ್ಯಮವೂ ಆಗಿದೆ. ಈ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಮೂಲಕ ಸದಭಿರುಚಿಯನ್ನು ಯುವಜನರು ಬೆಳೆಸಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ.

ಇದರಲ್ಲಿ ವಿವಿಧ ಪ್ರಕಾರಗಳ ಸಾಹಿತ್ಯ ನಮೂನೆಗಳು ಲಭ್ಯವಿಲ್ಲದಿರುವುದರಿಂದಲೇ ಜನರು ಬೇಡದ ಇತರೆ ಕ್ಷುಲ್ಲಕ ವಿಷಯಗಳಲ್ಲಿ ಮಗ್ನವಾಗಿದ್ದಾರೆ. ಯುವಕರನ್ನು ಮೂದಲಿಸುತ್ತಲೇ ಮಧ್ಯವಯಸ್ಕ ಮತ್ತು ಹಿರಿಯರು ನಾವೇನು ಹಿಂದೆ ಬಿದ್ದಿಲ್ಲವೆಂಬಂತೆ ಸಾಮಾಜಿಕ ಜಾಲತಾಣಗಳಿಗೆ ಶರಣು ಹೋಗಿದ್ದಾರೆ.

ಆದರೆ, ಅದರಿಂದಲೂ ಜನಸಮುದಾಯವನ್ನು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾಷೆಯ ಮೂಲಕ ಉಳಿಸಿ ಬೆಳೆಸುವ ಸಾಧ್ಯತೆಗಳನ್ನು ಮನಗಾಣಬೇಕಿದೆ. ಕೆಲವು ತಿಂಗಳಗಳ ಹಿಂದೆ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಪ್ರಾಕೃತ-ಕನ್ನಡ ನಿಘಂಟನ್ನು ಬಿಡುಗಡೆ ಮಾಡಿದ ಭಾಷಾತಜ್ಞ ಪ್ರೊ.ಕೆ.ವಿ. ನಾರಾಯಣ ಅವರು ಹೇಳಿದಂತೆ: ‘ಅಂತರ್ಜಾಲದಲ್ಲಿ ಕನ್ನಡದಲ್ಲಿ ದೊರಕುವ ಮಾಹಿತಿಯು ಅತ್ಯಲ್ಪ. ಈ ನಿಟ್ಟಿನಲ್ಲಿ ನಾವು ಹೆಚ್ಚು ಹೆಚ್ಚು ಕನ್ನಡಕ್ಕೆ ಸಂಬಂಧಪಟ್ಟ ಸಾಹಿತ್ಯದ ಪ್ರಕಾರಗಳನ್ನು ಅಂತರ್ಜಾಲದ ಮೂಲಕ ಜನರನ್ನು ತಲುಪಬೇಕಿರುವುದು ಇಂದಿನ ತುರ್ತು.’

ಇನ್ನು ಸರ್ಕಾರಿ, ಅನುದಾನಿತ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ಕನ್ನಡ ಪ್ರಾಸಪದ್ಯಗಳನ್ನು ಹಾಗೂ ಕೆಲವು ಪಠ್ಯಗಳನ್ನು ಮಾಸ್ತರುಗಳ ಸ್ಮಾರ್ಟ್‌ಫೋನ್‍ಗಳ ಮೂಲಕ ಹೇಳಿಕೊಡಲು ಸಾಧ್ಯವಿದೆ. ಇನ್ನು ಇಂಟರ್‌ನೆಟ್ ಶೋಧವಂತೂ ಇದ್ದೇ ಇದೆ. ಅಲ್ಲಿ ಕೆಲವೊಂದನ್ನು ತಿಳಿಯಬಹುದು, ತಿಳಿಸಬಹುದು, ತಿದ್ದಬಹುದು ಮತ್ತು ಇಲ್ಲದಿರುವುದನ್ನು ಸೇರಿಸಲೂಬಹುದು. ಈ ಎಲ್ಲವನ್ನೂ ಕನ್ನಡ ಭಾಷೆಯಲ್ಲೇ ಮಾಡಲು ಸಾಧ್ಯವಿದೆ. ಗಣಕಯಂತ್ರಗಳಲ್ಲಿ ಲಿಪಿ, ನುಡಿ, ಬರಹ ತಂತ್ರಾಂಶಗಳನ್ನು ಅಳವಡಿಸಿ ಉಪಯೋಗಿಸುವ ಅನುಕೂಲವೂ ಇದೆ. ಕೆಲವು ಹಣ ಪೀಕುವ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಹಾಗೂ ಇತರೆ ಪಠ್ಯವಿಷಯಗಳನ್ನು ಸ್ಮಾರ್ಟ್‌ಬೋರ್ಡ್‌ಗಳ ಸಹಾಯದಿಂದ ಕಲಿಸುತ್ತಿದ್ದಾರೆ.

ಸೌಲಭ್ಯ ಇಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಕನ್ನಡದ ಮೂಲಕ ಕನ್ನಡವನ್ನು ಕಲಿಸಿಕೊಡುವ ಸೌಲಭ್ಯವನ್ನು ಹೆಚ್ಚು ಮಾಡಬೇಕಿದೆ. ಇಲ್ಲಿ ಸ್ಮಾರ್ಟ್‌ಫೋನ್‍ಗಳ ಬಳಕೆ ಸೂಕ್ತ ಎನಿಸುತ್ತದೆ. ಕನ್ನಡ ಅಧ್ಯಾಪಕನಾಗಲು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳು ತಂತ್ರಜ್ಞಾನ ಸಹಾಯದಿಂದ ಕನ್ನಡ ಕಲಿಸಲು ಮುಂದಾಗಬೇಕಿದೆ.

ಇಂದಿನ ವಿದ್ಯಾರ್ಥಿಗಳ ಕೈಗಳು ಪುಸ್ತಕಗಳ ಬದಲಿಗೆ ಮೊಬೈಲ್ ಸೆಟ್‍ಗಳ ಹಾಗೂ ಲ್ಯಾಪ್‍ಟಾಪ್‍ಗಳು ಹೆಚ್ಚು ಆವರಿಸಿಕೊಂಡಿವೆ. ಅವರು ಅವುಗಳಿಗೆ ಮಾರುಹೋಗಿದ್ದಾರೆ. ಇದೊಂದು ಕಾಲಧರ್ಮ. ಅವರಿಗೆ ಪುಸ್ತಕ ರೂಪದಲ್ಲಿರುವುದನ್ನು ಇಂದು ತಂತ್ರಜ್ಞಾನ ಸಹಾಯದಿಂದ ಕನ್ನಡದಲ್ಲಿ ನೀಡಲು ಅಡ್ಡಿಯಿಲ್ಲ. ಉಪಯೋಗಿಸುವಂತೆ ಕಲಿಸಿಕೊಡಲು ಅಡ್ಡಿಯಿಲ್ಲ.

ಕನ್ನಡ ಭಾಷೆಯಲ್ಲಿ ಕಥೆ, ಕವನ, ಚುಟುಕು, ಕಾದಂಬರಿಗಳು ಸ್ಮಾರ್ಟ್‌ಫೋನ್‍ನಲ್ಲಿ ಲಭ್ಯವಾದಲ್ಲಿ ಓದುಗರ ಸಮೂಹವೂ ದೊಡ್ಡದಾಗಿ ವಿಸ್ತರಿಸಿದಂತಾಗುತ್ತದೆ. ಭಾಷಾತಜ್ಞರ ಮತ್ತು ಸಾಹಿತಿಗಳ ಭಾಷಣಗಳಿಗೆ ವಿದ್ಯಾರ್ಥಿಗಳನ್ನು ಕುರಿ ಮಂದೆಯಂತೆ ಒಂದು ಸಭಾಂಗಣದಲ್ಲಿ ಕೂಡಿಹಾಕುವ ಪರಿಪಾಠ ಬಹು ಹಿಂದಿನಿಂದಲೂ ನಡೆದುಬಂದಿರುವ ಆಚರಣೆ. ಅದು ಈಗಲೂ ಅನೇಕ ಶಾಲಾ -ಕಾಲೇಜುಗಳಲ್ಲಿ ಮುಂದುವರಿದಿದೆ. ವಿದ್ಯಾರ್ಥಿಗಳೇ ಹೇಳುವಂತೆ ‘ಅತಿಥಿಗಳ ಭಾಷಣವನ್ನು ವಿಡಿಯೊ ಮಾಡಿ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದರೆ ನಮಗೆ ಬೇಕಾದಾಗ ನೋಡಿಕೊಳ್ಳಬಹುದೆಂದು.’ ಅದನ್ನು ಮಾಡುವ ಎಲ್ಲಾ ಸೌಲಭ್ಯಗಳು ಇಂದು ಲಭ್ಯವಿದೆ. ಕನ್ನಡದಲ್ಲಿ ಆ್ಯಪ್‍ಗಳನ್ನು ರೂಪಿಸುವ ಸಾಧ್ಯತೆಗಳಿವೆ. ಇಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳವರೆಗೆ ತಮ್ಮದೇ ಗ್ರೂಪ್‍ಗಳನ್ನು ಮಾಡಿಕೊಂಡಿದ್ದಾರೆ. ಹಿಂದಿನ ದಶಕಗಳ ಕಾಲಘಟ್ಟದಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಕ್ರಮ, ಮಾಸ್ತರರ ಆಸಕ್ತಿ, ವಿದ್ಯಾರ್ಥಿಗಳ ಕಲಿಕಾ ಅಭಿರುಚಿ ಇತ್ಯಾದಿ ಅಂಶಗಳಿಗೂ ಇಂದಿನ ಕಾಲಘಟ್ಟಕ್ಕೂ ಸ್ವರೂಪದಲ್ಲಿ ಗಣನೀಯ ವ್ಯತ್ಯಾಸಗಳಿವೆ. ಆದರೆ, ಕಲಿಕೆಯ ಮೂಲ ಆಶಯಕ್ಕೆ ಯಾವುದೇ ಕುಂದು ಉಂಟಾಗಿಲ್ಲ.

ವಿದ್ಯಾರ್ಥಿಗಳಲ್ಲಿ ಭಾಷೆ ಕಲಿಯುವ ಹಾಗೂ ಜನಸಮುದಾಯಗಳಲ್ಲಿ ಭಾಷೆ ಬಳಸುವ ಹಪಾಹಪಿ ಸದಾ ಜಾಗೃತವಾಗಿಯೇ ಇರುತ್ತದೆ. ಆದರೆ, ಅದರ ಮಾಧ್ಯಮ ಮತ್ತು ಸಾಧನಗಳು ಬದಲಾಗಬಹುದು. ಮೂವತ್ತೈದು ವರ್ಷಗಳ ಹಿಂದೆ ನಮಗೆ ತರಗತಿಗಳಲ್ಲಿ ಸ್ಮಾರ್ಟ್‍ಬೋರ್ಡ್ ಇದ್ದಿದ್ದರೆ ಕೆಲವು ಕಠಿಣವಾದ ಪಠ್ಯಗಳು ಬಹು ಸುಲಭವಾಗಿ ತ್ವರಿತವಾಗಿ ಕಲಿಯಬಹುದಿತ್ತು ಅಲ್ಲವೆ! ಇಂದು ಅದು ಒಂದು ಸ್ಮಾರ್ಟ್‌ಫೋನ್‍ನಿಂದ ಸಾಧ್ಯವಿದೆ.

ಕಾಲೇಜುಗಳಲ್ಲಿ ‘ವೆಬ್‍ ಪುಟ’ ಆಧಾರಿತ ಕನ್ನಡ ಪತ್ರಿಕೆಗಳನ್ನು ಪ್ರಕಟಿಸುವ ಸೌಲಭ್ಯವಿದೆ. ಅದರಂತೆ ಕನ್ನಡ ಸಂಘಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಇ-ಸಂಪರ್ಕ ಏರ್ಪಡಿಸಿಕೊಳ್ಳಬಹುದು. ಅದರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ವೇದಿಕೆ ಒದಗಿಸಿ ಕನ್ನಡದ ಸೇವೆ ಮಾಡಲು ಎಲ್ಲಾ ಅವಕಾಶಗಳಿವೆ.

ರಾಜ್ಯದ ಪ್ರಮುಖ ದಿನಪತ್ರಿಕೆಗಳು ಮತ್ತು ಅವುಗಳು ಹೊರತರುವ ನಿಯತಕಾಲಿಕೆಗಳು ಇ-ಪತ್ರಿಕೆಗಳ ಮೂಲಕ ಜನರನ್ನು ಯಶಸ್ವಿಯಾಗಿ ತಲುಪುತ್ತಿವೆ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯೂ ಮುಂದಿದೆ. ಇದೇ ಪತ್ರಿಕೆಯ ‘ಭಾನುವಾರದ ಪುರವಣಿ’ಯಲ್ಲಿ ಬರುವ ಕಥೆಯನ್ನು ಮನೆಯಲ್ಲಿ ನಾವೆಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮೊಬೈಲ್‍ನಲ್ಲಿ ಓದುತ್ತೇವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕವನ್ನೂ ಓದುತ್ತೇವೆ.

ಕರ್ನಾಟಕದಲ್ಲಿನ ಅನೇಕ ಕನ್ನಡೇತರರು ತಮ್ಮ ಹೊಟ್ಟೆ ಹೊರೆಯಲು ಎಷ್ಟು ಬೇಕೊ ಅಷ್ಟು ಕನ್ನಡ ಭಾಷೆಯನ್ನು ಬಳಸಿ ಬದುಕುತ್ತಾರೋ ಅಂತೆಯೇ ಕನ್ನಡಿಗರಾದ ನಾವು ಇಂಗ್ಲಿಷ್‍ ಅನ್ನು ಒಂದು ವ್ಯಾವಹಾರಿಕ ಭಾಷೆಯಾಗಿ ಬಳಸಿ ಬದುಕಬೇಕಷ್ಟೆ. ಶತಮಾನಗಳಿಂದ ಕನ್ನಡ ಅಡ್ಡಿ ಆತಂಕ ಎದುರಾಗುತ್ತಲೇ ಬಂದಿದೆ. ಅವುಗಳನ್ನು ಜೀರ್ಣಿಸಿಕೊಳ್ಳುವ ಮೂಲಕ ಭಾಷೆಯು ಉಳಿದು ಬಂದಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರಕಾರಗಳನ್ನು ಬಳಸಿ ಉಳಿಸಿಕೊಳ್ಳಲು ತಂತ್ರಜ್ಞಾನದ ನವ್ಯ ಮಾರ್ಗಗಳ ಸಾಧನಗಳಿಂದ ಹಾಗೂ ಮಾಧ್ಯಮಗಳಿಂದ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT