ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಣವಾಗುತ್ತಿರುವ ಬುದ್ಧಿಜೀವಿಗಳು

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವದ ದರ್ಪವನ್ನು ಲೇಖಕರು ಸದಾ ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದರೆ, ಇವತ್ತು ಸರ್ಕಾರದ ಮುಖ್ಯ ಇಲಾಖೆಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ, ಉನ್ನತ ಕುರ್ಚಿಗಳಲ್ಲಿ ಬುದ್ಧಿಜೀವಿಗಳು ಮತ್ತು ಲೇಖಕರು ಕಾಣಿಸುವುದೇ ಅಪೂರ್ವವಾಗಿದೆ. ಬುದ್ಧಿಜೀವಿಗಳೇ ಎಲ್ಲಿದ್ದೀರಿ? ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದೆ ಈ ಬರಹ

***

2014ರ ರಾಜಕೀಯ ಬದಲಾವಣೆಯ ಆನಂತರ ಭಾರತದಲ್ಲಿ ಬುದ್ಧಿಜೀವಿಗಳ ಮತ್ತು ಲೇಖಕರ ಮೇಲೆ ಆಕ್ರಮಣಗಳು ಹೆಚ್ಚಾದವು. ಸ್ವತಃ ಪ್ರಧಾನಿ ಮೋದಿ ಸಂಸತ್ತಿನಲ್ಲಿಯೇ ಬುದ್ಧಿಜೀವಿಗಳನ್ನು ‘ಆಂದೋಲನ ಜೀವಿಗಳು’ ಎಂದು ವ್ಯಂಗ್ಯವಾಡಿದರು. ಮೋದಿ ಅವರನ್ನು ಅನುಸರಿಸುವವರು ಹಾದಿಬೀದಿಯಲ್ಲೆಲ್ಲಾ ಅದನ್ನು ಪ್ರಚಾರ ಮಾಡಿದರು. ಇದರ ಪರಿಣಾಮವೋ ಎಂಬಂತೆ ಇವತ್ತು ಸರ್ಕಾರದ ಮುಖ್ಯ ಇಲಾಖೆಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ, ಉನ್ನತ ಕುರ್ಚಿಗಳಲ್ಲಿ ಬುದ್ಧಿಜೀವಿಗಳು ಮತ್ತು ಲೇಖಕರು ಕಾಣಿಸುವುದೇ ಅಪೂರ್ವವಾಗಿದೆ.

ಅಲ್ಲಿ ಇಲ್ಲಿ ಕೆಲವರು ಕಂಡರೂ ಅವರ ತುಟಿಗಳು ಹೊಲಿದಂತಿರುತ್ತವೆ. ಪ್ರಭುತ್ವದ ಜೊತೆಗೆ ನಕಲಿ ಬುದ್ಧಿಜೀವಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಲೇಖಕರು ಅವರವರ ಕುಟುಂಬದವರಿಂದಲೇ ಇವತ್ತು ಅಪಹಾಸ್ಯಕ್ಕೆ ಒಳಪಡುತ್ತಿದ್ದಾರೆ. ಕನ್ನಡದ ಪ್ರಖ್ಯಾತ ಲೇಖಕರೊಬ್ಬರು ನನ್ನಲ್ಲಿ ಖಾಸಗಿಯಾಗಿ ಹೇಳಿದ್ದು: ‘ನಾನೀಗ ಕುಟುಂಬದವರ ಯಾವ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲೂ ಇಲ್ಲ, ಅವರ ಮದುವೆಗಳಿಗೂ ನಾನು ಹೋಗುವುದಿಲ್ಲ.’

ಈ ಬೆಳವಣಿಗೆಯು ಉನ್ನತ ಶಿಕ್ಷಣ ಕ್ಷೇತ್ರವನ್ನು ಬರಡುಗೊಳಿಸಿದೆ. ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳು ಕಳೆಗುಂದಿ, ಯಾಂತ್ರಿಕವಾಗಿವೆ. ದೇಶದ ಮುಖ್ಯ ಚಿಂತಕರನ್ನೂ ಲೇಖಕರನ್ನೂ ಅನಧಿಕೃತವಾಗಿ, ಆದರೆ ವ್ಯವಸ್ಥಿತವಾಗಿ ಹೊರಗಿಟ್ಟು ಹಲ್ಲು ಗಿಂಜುವವರನ್ನು ಜೊತೆಗಿರಿಸಿಕೊಳ್ಳಲಾಗಿದೆ. ಇದರಿಂದಾಗಿ ಅಕಾಡೆಮಿ, ಪ್ರಾಧಿಕಾರ ಮತ್ತು ಟ್ರಸ್ಟ್‌ಗಳಿಗೆ ತೀರಿಕೊಂಡವರನ್ನೂ ನೇಮಕ ಮಾಡಿಕೊಳ್ಳುವ ದಯನೀಯ ಪರಿಸ್ಥಿತಿಗೆ ಸರ್ಕಾರ ಇಳಿದುಬಿಟ್ಟಿದೆ. ಲೇಖಕರನ್ನು ದೂರವಾಣಿಯಲ್ಲಿ ಸಂಪರ್ಕ ಮಾಡಿ ಒಪ್ಪಿಗೆ ಪಡೆಯಬೇಕೆಂಬ ಕನಿಷ್ಠ ಸೌಜನ್ಯವೂ ಇವತ್ತು ಕಾಣೆಯಾಗಿದೆ. ‘ಕೇಳುವುದೇನು, ನಾವು ಮಾಡಿದ್ದೇವೆ, ಅದು ನಿಮ್ಮ ಭಾಗ್ಯ ಅಂತ ಭಾವಿಸಿಕೊಂಡು ಕೆಲಸಮಾಡಿ’ ಎಂಬ ದುರಹಂಕಾರ ಅಲ್ಲಿ ವಿಜೃಂಭಿಸಿದೆ. ಅಂಥದ್ದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವವರು ಇರುವವರೆಗೂ ಪ್ರಭುತ್ವ ಈ ಬಗೆಯ ದರ್ಪವನ್ನು ತೋರಿಸುತ್ತಲೇ ಇರುತ್ತದೆ.

ಬುದ್ಧಿಜೀವಿ ಲೇಖಕರನ್ನು ದೂರ ಇಡುವುದರಿಂದ ಪ್ರಜಾಸತ್ತಾತ್ಮಕ ವಾಗ್ವಾದಗಳಿಗೆ ಹಾನಿ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗದಷ್ಟೂ ಸರ್ಕಾರಗಳು ಜಡವಾಗಿವೆ. ಮಾನ್ಯ ಪ್ರಧಾನಿಯವರೇ ಅಂಬೇಡ್ಕರ್‌ ಮತ್ತು ಸಾವರ್ಕರ್‌ ಅವರನ್ನು ಒಂದೇ ಉಸಿರಿನಲ್ಲಿ ಒಟ್ಟಿಗೆ ತರುತ್ತಾರೆ. ಕರ್ನಾಟಕ ಸರ್ಕಾರವು ದೇಶದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ, ಲೇಖಕ ನೆಹರೂ ಅವರನ್ನೇ ಜಾಹೀರಾತಿನಿಂದ ಕೈಬಿಡುತ್ತದೆ. ಈ ಮಟ್ಟಿನ ಬೌದ್ಧಿಕ ದಾರಿದ್ರ್ಯವು ಸಂವಿಧಾನವನ್ನು ಕೂಡಾ ಒರೆಸಿ ಹಾಕಿದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ನಿಜ ತಿಳಿದಿರುವ ನಮ್ಮ ಲೇಖಕರು ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಕೆಲವು ಲೇಖಕರ ಜಾಣ ನಡೆಗಳನ್ನು ಸಂಶಯಿಸಲಾಗುತ್ತಿದೆ. ಲೇಖಕರು ಬರೆದ ಪುಸ್ತಕಗಳ 300 ಪ್ರತಿಗಳು ಮಾರಾಟವಾಗದಿದ್ದರೂ ಜನ, ಲೇಖಕರ ಕಡೆ ನೋಡುತ್ತಿದ್ದಾರೆ. ಇದು ಸಮಾಜವೊಂದು ಲೇಖಕರ ಬಗ್ಗೆ ಇರಿಸಿದ ಗೌರವವೆಂದು ಭಾವಿಸಲಡ್ಡಿಯಿಲ್ಲ.

ಹಾಗೆ ನೋಡಿದರೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವದ ದರ್ಪವನ್ನು ಲೇಖಕರು ಸದಾ ಪ್ರಶ್ನಿಸುತ್ತಲೇ ಬಂದಿದ್ದಾರೆ. ಕನ್ನಡದ ಆದಿಕವಿ ಪಂಪನು ಸ್ವತಃ ಅರಿಕೇಸರಿಯ ಆಸ್ಥಾನದಲ್ಲಿದ್ದರೂ ‘ನಿಜದಿಂ ಭೂಪರೆಂಬುವರ್‌ ಅವಿವೇಕಿಗಳ್‌’ ಎಂದದ್ದಲ್ಲದೆ, ಈ ಅರಸರು ‘ಕಲಿಯನ್ನು ಹಂದಿಗಳನ್ನಾಗಿ ಮಾಡುತ್ತಾರೆ ಮತ್ತು ಹಂದಿಯನ್ನು ಕಲಿಯನ್ನಾಗಿ ಮಾಡುತ್ತಾರೆ’ ಎಂದು ಧೈರ್ಯದಿಂದ ಘೋಷಿಸಿದ.

ವಚನಕಾರರು ಪ್ರಭುತ್ವವನ್ನೇ ಧಿಕ್ಕರಿಸಿ ಅನುಭವ ಮಂಟಪ ಕಟ್ಟಿದರು. ಕುಮಾರವ್ಯಾಸನಂತೂ ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಉರಿ ಉರಿವುತಿದೆ ದೇಶ, ನಾವಿನ್ನಿರಲುಬಾರದು’ ಎಂದು ಬರೆದ. ಕೃಷ್ಣದೇವರಾಯನ ಮೂಗಿನ ಕೆಳಗೇ ಓಡಾಡುತ್ತಿದ್ದ ಪುರಂದರದಾಸ ‘ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ ಕುದುರೆ ಒಂಟೆ ಲೊಳಲೊಟ್ಟೆ, ಬಹುಸೇನೆ ಭಂಡಾರವು ಲೊಳಲೊಟ್ಟೆ, ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ’ಎಂದು ಹಾಡುತ್ತಾ, ಚಿನ್ನಾಭರಣಗಳನ್ನು ಮಾರುತ್ತಿದ್ದ ಹಂಪಿಯ ಬೀದಿಗಳಲ್ಲಿ ಲಂಗೋಟಿ ತೊಟ್ಟುಕೊಂಡು ಸುತ್ತಿದ. 20ನೇ ಶತಮಾನದ ಬಹುತೇಕ ಸಾಹಿತಿಗಳು ಸಮಕಾಲೀನ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯಿತ್ತು. ಮೊದಲನೆಯದು, ಕುವೆಂಪು ಮಾಡಿದ ಹಾಗೆ, ಸಾರ್ವಜನಿಕವಾಗಿ ಹೆಚ್ಚು ಮಾತಾಡದೆ, ಗಂಭೀರವಾದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಪ್ರಭುತ್ವವನ್ನು ಆಳವಾಗಿ ಪ್ರಶ್ನಿಸುವುದು. ಎರಡನೆಯದು, ಶಿವರಾಮ ಕಾರಂತರ ರೀತಿ. ಗಂಭೀರವಾಗಿ ಬರೆಯುವುದರ ಜೊತೆಗೆ ಗಟ್ಟಿಯಾಗಿ ಜನರೊಡನೆ ಮಾತಾಡುವುದು. ಅವರು ಸುಮಾರು 427 ಪುಸ್ತಕಗಳನ್ನು ಬರೆದರು, ಯಕ್ಷಗಾನಕ್ಕೆ ಕಾಯಕಲ್ಪ ನೀಡಿದರು, ವೇಶ್ಯಾ ವಿವಾಹ ಮಾಡಿಸಿದರು.

ಪುತ್ತೂರಿನಲ್ಲಿ ಬಾಲವನ ಎಂಬ ಅಸಾಂಪ್ರದಾಯಿಕ ಶಿಕ್ಷಣ ಕೇಂದ್ರ ತೆರೆದರು. ಪರಿಸರಕ್ಕೆ ಹಾನಿಯಾಗುತ್ತದೆ ಎಂದನ್ನಿಸಿದಾಗ ಅದರ ರಕ್ಷಣೆಗೆ ಕಟಿಬದ್ಧರಾದರು. ಕೈಗಾ ಅಣು ವಿದ್ಯುತ್‌ ಸ್ಥಾವರದ ವಿರುದ್ಧದ ಹೋರಾಟಕ್ಕೆ ನಾಯಕತ್ವ ನೀಡಿದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದರು.

ಪ್ರಗತಿಶೀಲ ಸಾಹಿತಿಗಳಾಗಿದ್ದ ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ ಮೊದಲಾದವರು ಸಾಹಿತ್ಯದ ಮಡಿವಂತಿಕೆಯನ್ನೇ ಪ್ರಶ್ನಿಸಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನವ್ಯ ಸಾಹಿತಿಗಳು ನೆಹರೂ ಯುಗದ ಭ್ರಮೆಗಳನ್ನು ಒಡೆದರು. ಅಡಿಗರಂತೂ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಕವಿತೆಯನ್ನೇ ಬರೆದರು. ಲಂಕೇಶ್‌ ಉತ್ಕೃಷ್ಟವಾದ ಕತೆ, ಕಾದಂಬರಿ, ನಾಟಕಗಳನ್ನು ಬರೆಯುತ್ತಲೇ ಪ್ರಭುತ್ವಕ್ಕೆ ಸಿಂಹಸ್ವಪ್ನರಾಗಿದ್ದರು. ಅನಂತಮೂರ್ತಿಯವರು ಸರ್ವಾಧಿಕಾರಿ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದರು.

1975ರಲ್ಲಿ ಆರಂಭವಾದ ದಲಿತ ಬಂಡಾಯ ಸಾಹಿತ್ಯ ಚಳವಳಿಯ ಲೇಖಕರಂತೂ ದಟ್ಟವಾದ ಸಾಮಾಜಿಕ ಪ್ರಜ್ಞೆಯುಳ್ಳವರಾಗಿಯೇ ಬರೆದರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕುಂವೀ, ಬರಗೂರು, ಸಾರಾ, ಬೊಳುವಾರು, ಚಂಪಾ ಮೊದಲಾದವರು ಅನೇಕ ಬಗೆಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಲೇ ಕನ್ನಡ ನಾಡಿನ ಚೈತನ್ಯವನ್ನು ಹೆಚ್ಚಿಸಿದರು. ಸಿದ್ದಲಿಂಗಯ್ಯನವರ ಕವಿತೆಗಳು ಜನರ ಹೃದಯದ ಹಾಡುಗಳಾದುವು. ಅವುಗಳನ್ನು ಕಾಲೇಜುಗಳಲ್ಲಿ, ಬೀದಿಗಳಲ್ಲಿ ಧೈರ್ಯವಾಗಿ ಹಾಡಲಾಯಿತು. ಗೋಡೆಗಳು ಕೂಡಾ ಆಗ ಮಾತಾಡತೊಡಗಿದುವು. ಕನ್ನಡ ಕಾವ್ಯಕ್ಕೆ ತಮಟೆಯ ದನಿ ಸೇರಿಸುವಲ್ಲಿ ದಲಿತ ಲೇಖಕರು ಯಶಸ್ವಿಯಾದರು.

ಇಂಥ ಇತಿಹಾಸವಿರುವ ಕನ್ನಡದ ಬರೆಹಗಾರರು 1990ರ ದಶಕದ ಆನಂತರ ಬಹುಮಟ್ಟಿಗೆ ಮೌನವಾಗುತ್ತಲೇ ಹೋದರು. ಲಾಲ್‌ಕೃಷ್ಣ ಅಡ್ವಾಣಿಯವರು 1990ರಲ್ಲಿ ಆರಂಭಿಸಿದ ರಾಮ ರಥಯಾತ್ರೆಯು ಉಗ್ರ ಹಿಂದುತ್ವವನ್ನು ಮುನ್ನೆಲೆಗೆ ತಂದಿತು. ಇದರಿಂದ ದೇಶದಾದ್ಯಂತ ಕೋಮು ಗಲಭೆಗಳೂ ಹುಟ್ಟಿಕೊಂಡವು. ಇದರ ರಾಜಕೀಯ ಲಾಭ ಪಡೆದು ಅಧಿಕಾರವನ್ನು ಹೆಚ್ಚಿಸಿಕೊಂಡಿದ್ದ ಬಿಜೆಪಿಯು ಮುಂದೆ ಇದೇ ತಂತ್ರವನ್ನು ಅನುಸರಿಸಿತು. ಬಾಬ್ರಿ ಮಸೀದಿ ಧ್ವಂಸಗೊಂಡು 28 ವರ್ಷಗಳ ಬಳಿಕ ವಿಶೇಷ ನ್ಯಾಯಾಲಯವು ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನೂ ಖುಲಾಸೆಗೊಳಿಸಿತು. ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲವೆಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ಹೇಳಿತು.

2022ರಲ್ಲಿ ಗುಜರಾತ್‌ನಲ್ಲಿ ಗೋಧ್ರಾ ಹತ್ಯಾ ಪ್ರಕರಣ ನಡೆಯಿತು. ಗರ್ಭಿಣಿಯಾಗಿದ್ದ ಬಿಲ್ಕಿಸ್‌ಬಾನು ಮೇಲೆ ಹಿಂಸಾಚಾರದ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಕೊಲ್ಲಲಾಯಿತು. ಪ್ರಕರಣದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತಾದರೂ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆರೋಪಿಗಳನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು. ಇಂಥ ಕೆಲವು ಘಟನೆಗಳು ಪರೋಕ್ಷವಾಗಿ ಭಾರತೀಯ ಸಮಾಜವನ್ನು ಆಕ್ರಮಣಕಾರಿಯಾಗಿ ಬೆಳೆಸಲು ಅನುವು ಮಾಡಿಕೊಟ್ಟವು. ಜನರೂ ಇದ್ದಕ್ಕಿದ್ದಂತೆ ಯುದ್ಧೋನ್ಮತ್ತೆಯನ್ನು ಬೆಳೆಸಿಕೊಂಡರು. ಈ ಹಂತದಲ್ಲಿ ಬುದ್ಧಿಜೀವಿಗಳೂ ಲೇಖಕರೂ ಹತಾಶೆಯಿಂದ ಹಿಂದೆ ಸರಿದರು. ಎದೆಯೊಡ್ಡಿ ನಿಂತ ಕೆಲವರನ್ನು ವ್ಯವಸ್ಥೆಯೇ ಬೇಟೆಯಾಡಿತು. ಈ ಬೆಳವಣಿಗೆಗಳನ್ನು ಸೃಜನಾತ್ಮಕವಾಗಿ ಹಿಡಿಯುವಲ್ಲಿ ಕನ್ನಡದ ಲೇಖಕರು ಇದುವರೆಗೆ ಯಶಸ್ವಿಯಾಗಿಲ್ಲ. ಪ್ರಭುತ್ವದ ಬಗೆಗಿನ ಭಯವೇ ಇದಕ್ಕೆ ಮುಖ್ಯ ಕಾರಣ.

-ನಿರಂಜನ, ಲಂಕೇಶ್, ಅನಂತಮೂರ್ತಿ, ಸಿದ್ದಲಿಂಗಯ್ಯ
-ನಿರಂಜನ, ಲಂಕೇಶ್, ಅನಂತಮೂರ್ತಿ, ಸಿದ್ದಲಿಂಗಯ್ಯ

1990ರ ದಶಕದಲ್ಲಿ ನಡೆದ ಇನ್ನೊಂದು ಮುಖ್ಯ ಘಟನೆಯೆಂದರೆ ಜಾಗತೀಕರಣ ಪ್ರಕ್ರಿಯೆ. ಇದು ಭಾರತವನ್ನು ಜಗತ್ತಿನ ಇತರ ಭಾಗಗಳಿಗೆ ಜೋಡಿಸಿತು. ಮಾರುಕಟ್ಟೆ ಆಧಾರಿತವಾದ ಜಾಗತೀಕರಣವು ಮುಂದೆ ಆರ್ಥಿಕ ಪ್ರಕ್ರಿಯೆಯಾಗಿಯಷ್ಟೇ ಉಳಿಯದೆ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳೊಂದಿಗೂ ಸೇರಿಕೊಂಡು ಸಂವಹನ ಮತ್ತು ಮಾನವ ಸಂಬಂಧಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿತು. ಸ್ಥಳೀಯ ಭಾಷೆ, ಸಂಸ್ಕೃತಿಗಳು ಜಾಗತಿಕ ಮತ್ತು ಬೃಹತ್ ಪ್ರಮಾಣದ ಸಂಸ್ಕೃತಿಗಳೊಡನೆ ಮುಖಾಮುಖಿಯಾಗುವ ಪರಿಸ್ಥಿತಿ ನಿರ್ಮಾಣವಾಯಿತು.

ಇದರಿಂದಾಗಿ, 1990ರ ದಶಕದಿಂದ ಈಚೆಗೆ ಜನಿಸಿದವರು ಒಂದು ರಾಜ್ಯದ ಅಥವಾ ದೇಶದ ಗಡಿಗೆ ಸೀಮಿತವಾಗಿ ಉಳಿಯದೆ, ಸೀಮಾತೀತವಾಗುತ್ತಲೇ ಹೋದರು. ಈ ಹಂತದಲ್ಲಿ ರಾಷ್ಟ್ರೀಯತೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಸರ್ಕಾರಗಳು ಬಳಸಿದರೂ ಅದರಿಂದ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ, ಆಗುವುದೂ ಇಲ್ಲ. ಇಂಥ ಪರಿವರ್ತನೆಗಳನ್ನು ಗ್ರಹಿಸಿ ಮಂಡಿಸಲು ಲೇಖಕರಿಗೆ ಹೊಸ ಭಾಷೆ, ತಂತ್ರ ಮತ್ತು ತಿಳಿವಳಿಕೆ ಬೇಕಾಗುತ್ತದೆ. ಈ ವಿಷಯದಲ್ಲೂ ನಾವು ಹಿಂದೆ ಬಿದ್ದಿದ್ದೇವೆ.

1990ರ ಆನಂತರ ಕಾಣಿಸಿಕೊಂಡ ಉಗ್ರ ಹಿಂದುತ್ವ ಮತ್ತು ಜಾಗತೀಕರಣದ ಶಕ್ತಿಗಳು ದಿನ ಸಾಗಿದಂತೆ ಒಂದರೊಳಗೊಂದು ಸೇರಿಕೊಂಡು ಕಾರ್ಯ ನಿರ್ವಹಿಸಲು ಅರಂಭಿಸಿದುವು. ಇವತ್ತು ಜಾಗತೀಕರಣದ ಭಾಗವಾದ ಖಾಸಗೀಕರಣ ಮತ್ತು ನವಬಂಡವಾಳಶಾಹಿ ಶಕ್ತಿಗಳು ಹಿಂದುತ್ವದ ಜೊತೆ ಕೈಜೋಡಿಸಿವೆ. ಇವು ಯಾವುದೇ ಜನಪರ ಚಳವಳಿಗಳು ತಲೆ ಎತ್ತದಂತೆ ಮಾಡಿವೆ. ಬಂಡವಾಳಶಾಹಿಗಳಿಗೆ ಲಾಭ ತಂದುಕೊಡುವ ಯಾವುದೇ ಯೋಜನೆಗಳು, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆಯ ಅಗಾಧ ಹೆಚ್ಚಳ, ಭ್ರಷ್ಟಾಚಾರ, ಲಿಂಗ ತಾರತಮ್ಯ, ದೇಸೀ ಭಾಷೆಗಳ ಕುಸಿತ, ಸ್ಥಳೀಯ ಸಂಸ್ಕೃತಿಗಳ ನಾಶ ಇತ್ಯಾದಿಗಳನ್ನು ಹಿಂದುತ್ವದ ಪರವಾಗಿರುವವರು ವಿರೋಧಿಸುವುದೇ ಇಲ್ಲ. ಬದಲು ದೇಶದ ಹೆಸರಿನಲ್ಲಿ ಅವನ್ನು ಸಮರ್ಥಿಸಲು ಮುಂದಾಗುತ್ತಾರೆ.

ಬಂಡವಾಳಶಾಹಿಗಳಿಗೆ ಅಡಿಯಾಳಾಗಿರುವ ಟಿವಿ ಚಾನೆಲ್‌ಗಳು ಮತ್ತು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳುಗಳು, ದ್ವೇಷಪೂರಿತ ಭಾಷಣಗಳು, ರಾಜಕಾರಣಿಗಳು ಬಳಸುವ ಸೌಜನ್ಯರಹಿತ ನುಡಿಗಟ್ಟು ಮೊದಲಾದುವು ನಮ್ಮ ನೆಲದ ಗುಣಗಳನ್ನು ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನು ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನ ಬದಲಾಗಿದ್ದಾರೆ.

ಹೀಗೆ ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ಲೇಖಕರು ಸುಮ್ಮನೆ ಕುಳಿತಿರುವುದು ಅಪೇಕ್ಷಣೀಯವಲ್ಲ. 2015ರಲ್ಲಿ ತಮಿಳು ಲೇಖಕ ಪೆರುಮಾಳ್‌ ಮುರುಗನ್‌ ಕೋಮುವಾದಿ ಶಕ್ತಿಗಳ ಉಪಟಳ ತಾಳಲಾರದೆ ‘ನಾನು ಸತ್ತಿದ್ದೇನೆ’ ಎಂದು ಘೋಷಿಸಿಕೊಂಡರು. ಇಂಥ ಘೋಷಣೆ ಇನ್ನೊಮ್ಮೆ ಮೊಳಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT